ಹವಾಮಾನ, ವಾಯುಗುಣ ಮತು ವಾಯುಗುಣಕ್ಕೆ ಪ್ರಾಣಿಗಳ ಹೊಂದಾಣಿಕೆ – ಅಧ್ಯಾಯ-7

ಒಂದು ಗಿರಿಧಾಮಕ್ಕೆ ಹೋಗಿದ್ದಾಗ ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದ ವಸ್ತುಗಳು ಯಾವುವು ಎಂಬುದು ನಿಮಗೆ ನೆನಪಿದೆಯೇ? ಆಗಸದಲ್ಲಿ ಮೋಡ ಕವಿದಿರುವಾಗ ನೀವು ಛತ್ರಿಯನ್ನು ತೆಗೆದುಕೊಂಡು ಹೋಗಬೇಕೆಂದು ನಿಮ್ಮ ಪೋಷಕರು ಒತ್ತಾಯಿಸುತ್ತಾರೆ. ಕೌಟುಂಬಿಕ ಸಮಾರಂಭದ ತಯಾರಿಗೂ ಮುನ್ನ ನಿಮ್ಮ ಹಿರಿಯರು ಹವಾಮಾನದ ಬಗ್ಗೆ ಚರ್ಚಿಸುವುದನ್ನು ನೀವು ಕೇಳಿದ್ದೀರ? ಯಾವುದೇ ಕ್ರೀಡೆಯ ಆರಂಭದ ಮೊದಲು ಪರಿಣಿತರು ಹವಾಮಾನದ ಬಗ್ಗೆ ಚರ್ಚಿಸುವುದನ್ನು ನೀವು ಕೇಳಿರಬಹುದು. ಇದು ಏಕಿರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರ? ಹವಾಮಾನವು ಆ ಕ್ರೀಡೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹವಾಮಾನವು ನಮ್ಮ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆಯಾ ದಿನದ ಹವಾಮಾನ ಮುನ್ಸೂಚನೆಗೆ ಅನುಗುಣವಾಗಿ ಆ ದಿನದ ನಮ್ಮ ದೈನಂದಿನ ಚಟುವಟಿಕೆಗಳು ಯೋಜಿತವಾಗಿರುತ್ತವೆ. ದಿನಪತ್ರಿಕೆ, ರೇಡಿಯೋ ಮತ್ತು ದೂರದರ್ಶನಗಳಲ್ಲಿ ದೈನಂದಿನ ಹವಾಮಾನದ ವರದಿಯಾಗಿರುತ್ತದೆ. ಹವಾಮಾನ ಎಂದರೇನು ಎಂಬುದು ನಿಮಗೆ ಗೊತ್ತಿದೆಯೆ?

ಈ ಅಧ್ಯಾಯದಲ್ಲಿ ಹವಾಮಾನ (weather) ಮತ್ತು ವಾಯುಗುಣದ (climate) ಬಗ್ಗೆ ನಾವು ಅಧ್ಯಯನ ಮಾಡೋಣ. ತಮ್ಮ ಆವಾಸದ ವಾಯುಗುಣಕ್ಕೆ ವಿಭಿನ್ನ ಜೀವಿಗಳು ಹೇಗೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ ಎಂಬುದನ್ನೂ ನೋಡೋಣ.

7.1 ಹವಾಮಾನ

ಚಿತ್ರ 7.1ರಲ್ಲಿ ಒಂದು ದಿನಪತ್ರಿಕೆಯ ಹವಾಮಾನ ವರದಿಯ ಮಾದರಿಯನ್ನು ನೀಡಲಾಗಿದೆ.

ವಾತಾವರಣದ ಉಷ್ಣತೆ, ತೇವಾಂಶ ಮತ್ತು ಕಳೆದ 24 ಗಂಟೆಗಳಲ್ಲಿನ ಮಳೆಯ ಪ್ರಮಾಣದ ಬಗ್ಗೆ ಮಾಹಿತಿಗಳನ್ನು ದೈನಂದಿನ ಹವಾಮಾನ ವರದಿಯು ಒಳಗೊಂಡಿರುವುದನ್ನು ನಾವು ಕಾಣುತ್ತೇವೆ. ಆಯಾ ದಿನದ ಹವಾಮಾನ ಮುನ್ಸೂಚನೆಯನ್ನೂ ಅದು ನೀಡುತ್ತದೆ. ನಿಮಗೆ ತಿಳಿದಿರುವಂತೆ, ವಾತಾವರಣದಲ್ಲಿರುವ ತೇವಾಂಶದ ಪ್ರಮಾಣಕ್ಕೆ ಆದ್ರ್ರತೆ (humidity) ಎನ್ನುವರು.

ಸರ್ಕಾರಿ ಹವಾಮಾನ ಇಲಾಖೆ (meteorological department) ಯು ಹವಾಮಾನ ವರದಿಗಳನ್ನು ತಯಾರಿಸುತ್ತದೆ. ಈ ಇಲಾಖೆಯು ತಾಪ, ಮಾರುತ ಇತ್ಯಾದಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಹವಾಮಾನದ ಮುನ್ಸೂಚನೆಯನ್ನು ನೀಡುತ್ತದೆ.

ಚಟುವಟಿಕೆ 7.1
ಯಾವುದಾದರೂ ದಿನಪತ್ರಿಕೆಯಿಂದ ಕಳೆದ ವಾರದ ಹವಾಮಾನದ ವರದಿಗಳನ್ನು ಕತ್ತರಿಸಿ. ನಿಮ್ಮ ಮನೆಯಲ್ಲಿ ಇಲ್ಲದಿದ್ದರೆ ನಿಮ್ಮ ಗೆಳೆಯರು ಅಥವಾ ನೆರೆಹೊರೆಯವರಿಂದ ದಿನಪತ್ರಿಕೆ ಎರವಲು ಪಡೆದುಕೊಂಡು ನಿಮ್ಮ ನೋಟ್‍ಪುಸ್ತಕದಲ್ಲಿ ಅವುಗಳನ್ನು ಬರೆದಿಟ್ಟುಕೊಳ್ಳಿ. ಗ್ರಂಥಾಲಯದಿಂದಲೂ ಹವಾಮಾನ ವರದಿಗಳನ್ನು ಸಂಗ್ರಹಿಸಿ, ಒಂದು ಬಿಳಿಹಾಳೆ ಅಥವಾ ಚಾರ್ಟ್‍ನ ಮೇಲೆ ಅವುಗಳನ್ನು ಅಂಟಿಸಿ.

ನೀವು ಸಂಗ್ರಹಿಸಿದ ಹವಾಮಾನ ವರದಿಗಳ ಮಾಹಿತಿಯನ್ನು ಕೋಷ್ಟಕ 7.1ರಲ್ಲಿ ದಾಖಲಿಸಿ. ಮೊದಲ ಸಾಲು ಕೇವಲ ಒಂದು ಮಾದರಿ ಮಾತ್ರ. ನೀವು ತಯಾರಿಸಿದ ಚಾರ್ಟ್‍ನ ದತ್ತಾಂಶದ ಸಹಾಯದಿಂದ ಕೋಷ್ಟಕದ ಉಳಿದೆಲ್ಲ ಸಾಲುಗಳನ್ನು ಭರ್ತಿ ಮಾಡಿ.

ಮಳೆಮಾಪಕ (rain gauge) ಎಂಬ ಉಪಕರಣದಿಂದ ಮಳೆಯ ಪ್ರಮಾಣವನ್ನು ಅಳೆಯಲಾಗುತ್ತದೆ. ಮಳೆನೀರು ಸಂಗ್ರಹಿಸಲು ಮೇಲ್ಭಾಗದಲ್ಲಿ ಆಲಿಕೆಯನ್ನು ಹೊಂದಿರುವ ಇದು ಕೊಳವೆಯಾಕಾರದ ಮಾಪಕವಾಗಿದೆ.

ಒಂದೇ ರೀತಿಯ ಗರಿಷ್ಠ ಮತ್ತು ಕನಿಷ್ಠ ತಾಪ, ಆದ್ರ್ರತೆ ಮತ್ತು ಮಳೆಪ್ರಮಾಣವನ್ನು ವಾರದ ಎಲ್ಲಾ ಏಳುದಿನಗಳು ಹೊಂದಿರುತ್ತವೆಯೆ? ದಾಖಲಿಸಲ್ಪಟ್ಟ ಗರಿಷ್ಠ, ಕನಿಷ್ಠ ತಾಪವು ಕೆಲವು ದಿನಗಳು ಒಂದೇ ತೆರನಾಗಿ ಇರಬಹುದು. ಆದರೆ ಯಾವುದೇ ಎರಡು ದಿನಗಳಲ್ಲಿ ಎಲ್ಲಾ ಮಾನದಂಡಗಳು (parameters) ಒಂದೇ ತೆರನಾಗಿ ಇರುವುದಿಲ್ಲ. ಒಂದು ವಾರದ ಅವಧಿಯಲ್ಲಿ ಏನಾದರು ಗಮನಾರ್ಹ ಬದಲಾವಣೆ ಕಂಡು ಬರಲೂಬಹುದು. ತಾಪ, ಆದ್ರ್ರತೆ, ಮಳೆ, ಗಾಳಿಯ ಜವ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಒಂದು ಪ್ರದೇಶದ ವಾತಾವರಣದ ದೈನಂದಿನ ಸ್ಥಿತಿಯನ್ನು ಆ ಪ್ರದೇಶದ ಹವಾಮಾನ ಎನ್ನುವರು. ತಾಪ, ಆದ್ರ್ರತೆ ಮತ್ತು ಇನ್ನಿತರ ಅಂಶಗಳನ್ನು ಹವಾಮಾನದ ಘಟಕಗಳು ಎನ್ನುವರು. ಒಂದು ಪ್ರದೇಶದ ಹವಾಮಾನವು ದಿನದಿಂದ ದಿನಕ್ಕೆ ಹಾಗೂ ವಾರದಿಂದ ವಾರಕ್ಕೆ ಬದಲಾಗುತ್ತದೆ. ಅದಕ್ಕಾಗಿಯೇ “ಇಂದು ಬಹಳ ಚಳಿ ಇದೆ” ಅಥವಾ “ಕಳೆದ ವಾರ ಬಹಳ ಸೆಖೆ ಇತ್ತು” ಎಂದು ನಾವು ಆಗಾಗ್ಗೆ ಹೇಳುತ್ತೇವೆ.

ಹವಾಮಾನವು ಬಹು ಅಲ್ಪಾವಧಿಯ ಕಾಲದಲ್ಲಿ ಬದಲಾಗಬಹುದಾದಂತಹ ಸಂಕೀರ್ಣ ಪ್ರಕ್ರಿಯೆಯಾಗಿದೆ. ಒಮ್ಮೊಮ್ಮೆ ಬೆಳಿಗ್ಗೆ ಬಿಸಿಲಿದ್ದು, ಇದ್ದಕ್ಕಿದ್ದಂತೆ ಮೋಡ ಕವಿದು ಧಾರಾಕಾರ ಮಳೆ ಸುರಿಯಬಹುದು ಅಥವಾ ಭಾರಿ ಮಳೆಯು ನಿಮಿಷಗಳಲ್ಲಿ ಮರೆಯಾಗಿ, ಬಿರು ಬಿಸಿಲಾಗಬಹುದು. ನೀವೂ ಇಂತಹ ಸಂದರ್ಭಗಳನ್ನು ಅನುಭವಿಸಿರಬಹುದು. ಅಂತಹ ಅನುಭವವೇನಾದರೂ ಇದ್ದರೆ ನೆನಪಿಸಿಕೊಂಡು ಗೆಳೆಯರೊಂದಿಗೆ ಹಂಚಿಕೊಳ್ಳಿ. ಹವಾಮಾನವು ಸಂಕೀರ್ಣ ಪ್ರಕ್ರಿಯೆಯಾಗಿ ಇರುವುದರಿಂದಲೇ ಅದರ ಮುನ್ಸೂಚನೆ ನೀಡುವುದು ಕಷ್ಟ.

ಆಗಸ್ಟ್ 3, 2006 ರಿಂದ ಆಗಸ್ಟ್ 9, 2006 ರ ಅವಧಿಯಲ್ಲಿ ಮೇಘಾಲಯದ ಶಿಲ್ಲಾಂಗ್‍ನಲ್ಲಿ ದಾಖಲಾದ ಗರಿಷ್ಠ ತಾಪವನ್ನು ತೋರಿಸುವ ರೇಖಾನಕ್ಷೆ (graph) ಯನ್ನು ಈ ಕೆಳಗೆ ನೀಡಲಾಗಿದೆ ಗಮನಿಸಿ (ಚಿತ್ರ 7.2).

ಗರಿಷ್ಠ ಮತ್ತು ಕನಿಷ್ಠ ತಾಪವು ಪ್ರತಿದಿನ ದಾಖಲಾಗುತ್ತದೆ ಎಂಬುದು ಎಲ್ಲಾ ಹವಾಮಾನ ವರದಿಗಳಿಂದ ಸ್ಪಷ್ಟವಾಗುತ್ತದೆ. ತಾಪವು ದಾಖಲಾಗುವುದು ಹೇಗೆ ಎಂಬುದು ನಿಮಗೆ ಗೊತ್ತೆ? ಇದಕ್ಕೆಂದೇ ಗರಿಷ್ಠ-ಕನಿಷ್ಠ ತಾಪಮಾಪಕಗಳೆಂಬ ವಿಶೇಷ ತಾಪಮಾಪಕಗಳು ಇವೆ ಎಂಬುದನ್ನು 4ನೇ ಅಧ್ಯಾಯದಲ್ಲಿ ನೀವು ಕಲಿತಿರುವಿರಿ. ಗರಿಷ್ಠ ಹಾಗೂ ಕನಿಷ್ಠ ತಾಪವು ದಿನದ ಯಾವ ಸಮಯದಲ್ಲಿ ಇರುತ್ತದೆ ಎಂಬುದನ್ನು ಊಹಿಸಲು ನಿಮಗೆ ಸಾಧ್ಯವೆ?

ಸಾಧಾರಣವಾಗಿ ಮುಂಜಾನೆ ಕನಿಷ್ಠ ತಾಪ ಹಾಗೂ ಮಧ್ಯಾಹ್ನ ಗರಿಷ್ಠ ತಾಪವಿರುತ್ತದೆ. ತ್ರಾಸದಾಯಕ ಎಂದು ಅನಿಸುವ ಬೇಸಿಗೆಯ ಮಧ್ಯಾಹ್ನಗಳಿಗೆ ಹೋಲಿಸಿದರೆ, ಮುಂಜಾನೆಯು ಹಿತಕರವಾಗಿರುವುದು ಏಕೆಂದು ನೀವೀಗ ಅರ್ಥ ಮಾಡಿಕೊಳ್ಳಬಹುದಲ್ಲವೆ?

ಹವಾಮಾನದ ಎಲ್ಲ ಬದಲಾವಣೆಗಳು ಸೂರ್ಯನಿಂದಾಗಿ ಉಂಟಾಗುತ್ತವೆ. ಸೂರ್ಯ ಅತಿ ಹೆಚ್ಚು ಉಷ್ಣತೆಯಲ್ಲಿರುವ ಬಿಸಿ ಅನಿಲಗಳ ಒಂದು ದೊಡ್ಡ ಗೋಲವಾಗಿದೆ. ಸೂರ್ಯ ನಮ್ಮಿಂದ ಬಹಳ ದೂರದಲ್ಲಿದೆ. ಆದರೂ ಸೂರ್ಯನಿಂದ ಹೊರಸೂಸುವ ಶಕ್ತಿಯ ಪ್ರಮಾಣ ಎಷ್ಟಿದೆಯೆಂದರೆ, ಅದು ಭೂಮಿಯ ಎಲ್ಲ ಉಷ್ಣತೆ ಮತ್ತು ಬೆಳಕಿಗೆ ಮೂಲವಾಗಿದೆ. ಆದ್ದರಿಂದ ಹವಾಮಾನದಲ್ಲಿ ಬದಲಾವಣೆ ಉಂಟು ಮಾಡುವಂತಹ ಶಕ್ತಿಯ ಮೂಲ ಸೂರ್ಯ. ಭೂಮಿಯ ಮೇಲ್ಮೈ, ಸಾಗರ ಹಾಗೂ ವಾತಾವರಣದಲ್ಲಿ ಹೀರಲ್ಪಟ್ಟ ಮತ್ತು ಪ್ರತಿಫಲಿಸಲ್ಪಟ್ಟ ಶಕ್ತಿಯು ಯಾವುದೇ ಪ್ರದೇಶದ ಹವಾಮಾನವನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಒಂದು ವೇಳೆ ನೀವು ತೀರಪ್ರದೇಶದ ವಾಸಿಯಾಗಿದ್ದರೆ ಬೆಟ್ಟ ಪ್ರದೇಶಕ್ಕೆ ಹತ್ತಿರದ ಅಥವಾ ಮರುಭೂಮಿಯಲ್ಲಿರುವ ಒಂದು ಜಾಗದ ಹವೆಗಿಂತ ನೀವು ವಾಸಿಸುವ ಜಾಗದ ಹವಾಮಾನವು ವಿಭಿನ್ನವಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುತ್ತೀರಿ.

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಎಂತಹ ಸ್ಥಿತಿಯಿರುತ್ತದೆ? ಚಳಿಗಾಲದಲ್ಲಿ ಬೇಗ ಕತ್ತಲಾಗುವುದರಿಂದ ನಿಮಗೆ ಆಟವಾಡಲು ಕಡಿಮೆ ಸಮಯ ಸಿಗುತ್ತದೆ ಎಂಬುದು ನಿಮಗೆ ಗೊತ್ತಿದೆ. ಹಾಗಾದರೆ ಬೇಸಿಗೆಗಿಂತ ಚಳಿಗಾಲದ ದಿನಗಳು ಅಲ್ಪಾವಧಿಯವೆ? ಅಧ್ಯಾಯದ ಕೊನೆಯಲ್ಲಿ ಕೊಟ್ಟ ಯೋಜನೆಯನ್ನು ಪೂರ್ತಿ ಮಾಡುವ ಮೂಲಕ ಈ ಪ್ರಶ್ನೆಗೆ ನೀವೆ ಉತ್ತರವನ್ನು ಕಂಡುಕೊಳ್ಳಿ.

7.2 ವಾಯುಗುಣ

ಹವಾಮಾನ ತಜ್ಞರು (meteorologists) ಪ್ರತಿದಿನ ಹವಾಮಾನವನ್ನು ದಾಖಲಿಸುತ್ತಾರೆ. ಕಳೆದ ಹಲವಾರು ದಶಕಗಳಿಂದ ಹವಾಮಾನದ ವರದಿಗಳನ್ನು ಸಂರಕ್ಷಿಸಿಡಲಾಗಿದೆ. ಒಂದು ಪ್ರದೇಶದ ಹವಾಮಾನದ ಮಾದರಿಯನ್ನು ನಿರ್ಧರಿಸಲು ಈ ವರದಿಗಳು ನಮಗೆ ಸಹಾಯ ಮಾಡುತ್ತವೆ. ಅಂದಾಜು 25 ವರ್ಷಗಳಷ್ಟು ದೀರ್ಘಾವಧಿಯ ಸರಾಸರಿ ಹವಾಮಾನದ ಮಾದರಿಯನ್ನು ಆ ಪ್ರದೇಶದ ವಾಯುಗುಣ ಎನ್ನುವರು. ಒಂದು ವೇಳೆ ಹೆಚ್ಚು ದಿನಗಳಲ್ಲಿ ಒಂದು ಪ್ರದೇಶದ ತಾಪವು ಜಾಸ್ತಿ ಇದ್ದಲ್ಲಿ, ಆ ಪ್ರದೇಶವು ಉಷ್ಣ ವಾಯುಗುಣವನ್ನು ಹೊಂದಿದೆ ಎಂದು ಹೇಳುತ್ತೇವೆ. ಅದೇ ಪ್ರದೇಶದಲ್ಲಿ ಹೆಚ್ಚಿನ ದಿನಗಳಲ್ಲಿ ಅಧಿಕ ಮಳೆಯೂ ಬರುತ್ತಿದ್ದರೆ, ಆಗ ಆ ಪ್ರದೇಶವು ಉಷ್ಣ ಮತ್ತು ತೇವ (hot and wet) ವಾಯುಗುಣವನ್ನು ಹೊಂದಿದೆ ಎಂದು ಹೇಳಬಹುದು.

7.2 ಮತ್ತು 7.3ರ ಕೋಷ್ಟಕಗಳಲ್ಲಿ ಭಾರತದ ಎರಡು ಪ್ರದೇಶಗಳ ವಾಯುಗುಣ ಪರಿಸ್ಥಿತಿಯನ್ನು ನೀಡಿದ್ದೇವೆ. ಕೊಟ್ಟಿರುವ ಯಾವುದೇ ಒಂದು ತಿಂಗಳಿನ ಸರಾಸರಿ ತಾಪವನ್ನು ಎರಡು ಹಂತಗಳಲ್ಲಿ ಕಂಡುಹಿಡಿಯಬಹುದು. ಮೊದಲಿಗೆ, ಒಂದು ತಿಂಗಳಿನಲ್ಲಿ ದಾಖಲಾಗಿರುವ ತಾಪದ ಸರಾಸರಿಯನ್ನು ಕಂಡುಹಿಡಿಯುತ್ತೇವೆ. ಎರಡನೆಯದಾಗಿ, ಬಹಳ ವರ್ಷಗಳ ಅವಧಿಯಲ್ಲಿನ ತಾಪದ ಸರಾಸರಿಗಳ ಸರಾಸರಿಯನ್ನು ಲೆಕ್ಕ ಹಾಕುತ್ತೇವೆ. ಇದು ಸಾಮಾನ್ಯ ಸರಾಸರಿ ತಾಪವನ್ನು ಸೂಚಿಸುತ್ತದೆ. ಇಲ್ಲಿ ಹೇಳಲಾದ ಎರಡು ಪ್ರದೇಶಗಳೆಂದರೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಕೇರಳದ ತಿರುವನಂತಪುರಂ.

7.2 ಮತ್ತು 7.3 ರ ಕೋಷ್ಟಕಗಳನ್ನು ನೋಡಿದಾಗ ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದ ವಾಯುಗುಣದ ಮಧ್ಯೆ ಇರುವ ವ್ಯತ್ಯಾಸವನ್ನು ನಾವು ಸುಲಭವಾಗಿ ಗುರ್ತಿಸಬಹುದು. ವರ್ಷದ ಒಂದು ಭಾಗದಲ್ಲಿ ಮಧ್ಯಮ ಉಷ್ಣಾದ್ರ್ರ ವಾಯುಗುಣವನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಲಿಸಿದರೆ, ಕೇರಳವು ಹೆಚ್ಚು ಉಷ್ಣತೆ ಮತ್ತು ಆದ್ರ್ರತೆಯನ್ನು ಹೊಂದಿರುವ ಪ್ರದೇಶವಾಗಿದೆ.

ಭಾರತದ ಪಶ್ಚಿಮ ಪ್ರದೇಶದ ಅಂತಹದ್ದೇ ದತ್ತಾಂಶವನ್ನು ಗಮನಿಸಿ. ಉದಾಹರಣೆಗೆ, ರಾಜಸ್ಥಾನ. ಅಲ್ಲಿ ವರ್ಷದ ಹೆಚ್ಚಿನ ಭಾಗ ಅಧಿಕ ತಾಪ ಇರುವುದು ಕಂಡುಬರುತ್ತದೆ. ಆದರೆ ಕೆಲವೇ ತಿಂಗಳುಗಳವರೆಗೆ ಇರುವ ಚಳಿಗಾಲದಲ್ಲಿ ತಾಪವು ಬಹಳ ಕಡಿಮೆ ಇರುತ್ತದೆ. ಈ ಪ್ರದೇಶದಲ್ಲಿ ಮಳೆಯ ಪ್ರಮಾಣವು ತೀರಾ ಕಡಿಮೆ ಇದ್ದು, ಇದು ಒಂದು ಅಪ್ಪಟ ಮರುಭೂಮಿಯ ವಾಯುಗುಣವಾಗಿರುತ್ತದೆ. ಇದು ಉಷ್ಣ ಮತ್ತು ಶುಷ್ಕ (hot and dry) ವಾಯುಗುಣವನ್ನು ಹೊಂದಿರುತ್ತದೆ. ಈಶಾನ್ಯ ಭಾರತದಲ್ಲಿ ವರ್ಷದ ಹೆಚ್ಚಿನ ಭಾಗ ಮಳೆ ಸುರಿಯುತ್ತದೆ. ಹಾಗಾಗಿ ಈಶಾನ್ಯ ಭಾರತವು ತೇವಭರಿತ ವಾಯುಗುಣವನ್ನು ಹೊಂದಿದೆ ಎಂದು ಹೇಳಬಹುದು.

7.3 ವಾಯುಗುಣ ಮತ್ತು ಹೊಂದಾಣಿಕೆ

ಎಲ್ಲಾ ಜೀವಿಗಳ ಮೇಲೆ ವಾಯುಗುಣವು ಆಳವಾದ ಪ್ರಭಾವವನ್ನು ಬೀರುತ್ತದೆ.
ತಾವು ವಾಸಿಸುವ ಪ್ರದೇಶಗಳಲ್ಲಿ ಬದುಕುವ ಸಲುವಾಗಿ ಪ್ರಾಣಿಗಳು ಸುತ್ತಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ವಿಪರೀತ ಶೀತ ಅಥವಾ ಉಷ್ಣತೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚಿನ ಶೀತ ಅಥವಾ ಉಷ್ಣ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು ವಿಶೇಷ ಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. 6ನೇ ತರಗತಿಯ ವಿಜ್ಞಾನ ಪುಸ್ತಕದ ಅಧ್ಯಾಯ 9ರಲ್ಲಿ ನೀಡಿರುವ ಹೊಂದಾಣಿಕೆ ಪದದ ನಿರೂಪಣೆಯನ್ನು ಸ್ಮರಿಸಿಕೊಳ್ಳಿ. ತಮ್ಮ ಸುತ್ತಲಿನ ಪರಿಸ್ಥಿತಿಗಳಿಗೆ ಹೊಂದಾಣಿಕೆಯಾಗಲು ಪ್ರಾಣಿಗಳಿಗೆ ಸಹಾಯ ಮಾಡುವಂಥ ಲಕ್ಷಣಗಳು, ವೈಶಿಷ್ಟ್ಯಗಳು ಮತ್ತು ಅಭ್ಯಾಸಗಳು ಜೀವ ವಿಕಾಸ ಪ್ರಕ್ರಿಯೆಯ ಪರಿಣಾಮವಾಗಿದೆ.

ಮಣ್ಣಿನ ಮೇಲೆ ಹವಾಮಾನ ಮತ್ತು ವಾಯುಗುಣದ ಪರಿಣಾಮವನ್ನು ಅಧ್ಯಾಯ 9ರಲ್ಲಿ ಕಲಿಯುವಿರಿ. ಈ ಅಧ್ಯಾಯದಲ್ಲಿ ಕೇವಲ ಪ್ರಾಣಿಗಳ ಮೇಲೆ ವಾಯುಗುಣದ ಪರಿಣಾಮವನ್ನು ಕಲಿಯುತ್ತೇವೆ. ಕೆಲವು ಆವಾಸಗಳಿಗೆ ಪ್ರಾಣಿಗಳ ಹೊಂದಾಣಿಕೆಗಳನ್ನು 6ನೇ ತರಗತಿಯಲ್ಲಿ ಈಗಾಗಲೇ ನೀವು ಓದಿರುವಿರಿ. ವಾಯುಗುಣದ ಪರಿಸ್ಥಿತಿಗೆ ಅನುಗುಣವಾಗಿ ಪ್ರಾಣಿಗಳ ಹೊಂದಾಣಿಕೆಗೆ ಉದಾಹರಣೆಯಾಗಿ ಧ್ರುವ ಪ್ರದೇಶ ಮತ್ತು ಉಷ್ಣವಲಯದ ಮಳೆಕಾಡುಗಳಲ್ಲಿ ವಾಸಿಸುವ ಪ್ರಾಣಿಗಳನ್ನು ಪರಿಗಣಿಸೋಣ.

ಹೆಸರೇ ಸೂಚಿಸುವಂತೆ ಧ್ರುವ ಪ್ರದೇಶಗಳು ಉತ್ತರ ಮತ್ತು ದಕ್ಷಿಣ ಧ್ರುವದ ಹತ್ತಿರ ಇರುತ್ತವೆ.
ಕೆನಡಾ, ಗ್ರೀನ್‍ಲ್ಯಾಂಡ್, ಐಸ್‍ಲ್ಯಾಂಡ್, ನಾರ್ವೆ, ಸ್ವೀಡನ್, ಫಿನ್‍ಲ್ಯಾಂಡ್, ಉತ್ತರ ಅಮೆರಿಕಾದ ಅಲಾಸ್ಕ ಮತ್ತು ರಷ್ಯಾದ ಸೈಬೀರಿಯಾ ಪ್ರದೇಶ ಧ್ರುವ ಪ್ರದೇಶಗಳಲ್ಲಿ ಇರುವ ಕೆಲವು ಪರಿಚಿತ ದೇಶಗಳಾಗಿವೆ.

ಭಾರತ, ಮಲೇಷಿಯಾ, ಇಂಡೋನೇಷಿಯಾ, ಬ್ರೆಝಿಲ್, ಕಾಂಗೊ ರಿಪಬ್ಲಿಕ್, ಕೀನ್ಯಾ, ಉಗಾಂಡ ಮತ್ತು ನೈಜೀರಿಯಾ ಉಷ್ಣವಲಯದ ಮಳೆಕಾಡುಗಳನ್ನು ಹೊಂದಿರುವ ಕೆಲವು ದೇಶಗಳಾಗಿವೆ.

ಚಟುವಟಿಕೆ 7.2
ಪ್ರಪಂಚದ ಭೂಪಟವೊಂದನ್ನು ತೆಗೆದುಕೊಳ್ಳಿ. ಧ್ರುವ ಪ್ರದೇಶಗಳನ್ನು ನೀಲಿ ಬಣ್ಣದಲ್ಲಿ ಗುರ್ತಿಸಿ. ಉಷ್ಣವಲಯಗಳನ್ನು ಕೆಂಪು ಬಣ್ಣದಲ್ಲಿ ಗುರ್ತಿಸಿ.

(i) ಧ್ರುವ ಪ್ರದೇಶ

ಧ್ರುವ ಪ್ರದೇಶಗಳು (polar regions) ವಾಯುಗುಣದ ವೈಪರೀತ್ಯವನ್ನು ಪ್ರಸ್ತುತಪಡಿಸುತ್ತವೆ. ವರ್ಷದ ಬಹುತೇಕ ಸಮಯದಲ್ಲಿ ವಿಪರೀತ ಚಳಿ ಇದ್ದು, ಈ ಪ್ರದೇಶಗಳು ಮಂಜಿನಿಂದ ಆವೃತವಾಗಿವೆ. ಇಲ್ಲಿ ಆರು ತಿಂಗಳುಗಳ ಕಾಲ ಸೂರ್ಯ ಮುಳುಗುವುದಿಲ್ಲ ಮತ್ತು ಉಳಿದ ಆರು ತಿಂಗಳುಗಳು ಸೂರ್ಯ ಮೂಡುವುದೇ ಇಲ್ಲ. ಚಳಿಗಾಲದಲ್ಲಿ -37o C ಯಷ್ಟು ಕಡಿಮೆ ಉಷ್ಣತೆ ಕಂಡುಬರಬಹುದು. ಇಂತಹ ವಿಷಮ ಪರಿಸ್ಥಿತಿಗಳಿಗೆ ಅಲ್ಲಿನ ಪ್ರಾಣಿಗಳು ಹೊಂದಿಕೊಂಡಿವೆ. ಅದು ಹೇಗೆಂದು ಹಿಮಕರಡಿ ಮತ್ತು ಪೆಂಗ್ವಿನ್‍ಗಳ ಉದಾಹರಣೆಗಳ ಮೂಲಕ ನೋಡೋಣ.

ಶ್ವೇತ ಹಿಮದ ಹಿನ್ನೆಲೆಯಲ್ಲಿ ಸುಲಭವಾಗಿ ಕಾಣದಂತಿರಲು ಹಿಮಕರಡಿಗಳು ಶ್ವೇತ (ಬಿಳಿ) ತುಪ್ಪಳವನ್ನು ಹೊಂದಿರುತ್ತವೆ. ಇದು ಪರಭಕ್ಷಕ ಪ್ರಾಣಿಗಳಿಂದ ಅವುಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೆ ತಮ್ಮ ಬೇಟೆಗಳನ್ನು ಹಿಡಿಯಲೂ ಸಹಾಯ ಮಾಡುತ್ತದೆ. ಎರಡು ಪದರಗಳಲ್ಲಿ ತುಪ್ಪಳವಿದ್ದು ಇದು ವಿಪರೀತ ಚಳಿಯಿಂದ ರಕ್ಷಣೆ ಕೊಡುತ್ತದೆ. ಚರ್ಮದ ಅಡಿಯಲ್ಲಿ ಕೊಬ್ಬಿನ ಪದರವನ್ನು ಹಿಮಕರಡಿಗಳು ಹೊಂದಿರುತ್ತವೆ. ತುಪ್ಪಳ ಹಾಗೂ ಕೊಬ್ಬಿನ ಪದರಗಳು ಉತ್ತಮ ಉಷ್ಣ ಅವಾಹಕವಾಗಿ ಕೆಲಸ ಮಾಡುತ್ತವೆ. ಆದ್ದರಿಂದ ಪ್ರಾಣಿಗಳು ನಿಧಾನವಾಗಿ ಚಲಿಸಿ ಅಥವಾ ಆಗಾಗ್ಗೆ ವಿಶ್ರಾಂತಿ ತೆಗೆದುಕೊಂಡು ದೇಹವು ಅತಿಯಾಗಿ ಬಿಸಿಯಾಗುವುದನ್ನು ನಿಯಂತ್ರಿಸುತ್ತವೆ.

ಬೇಸಿಗೆಯ ದಿನಗಳಲ್ಲಿ ದೈಹಿಕ ಚಟುವಟಿಕೆಗಳು ಹೆಚ್ಚುವ ಕಾರಣ ದೇಹವನ್ನು ತಂಪಾಗಿಡಬೇಕಾಗುತ್ತದೆ. ಆದ್ದರಿಂದ ಹಿಮಕರಡಿಯು ಈಜಾಡುತ್ತದೆ. ಅದು ಉತ್ತಮ ಈಜುಗಾರ ಪ್ರಾಣಿಯಾಗಿದೆ. ಹಿಮದ ಮೇಲೆ ಸುಲಭವಾಗಿ ನಡೆಯಲು ಮತ್ತು ಈಜಾಡಲು ಸಹಾಯವಾಗುವಂತೆ ಅದರ ಪಂಜಗಳು (paws) ಅಗಲವಾಗಿ, ದೊಡ್ಡದಾಗಿವೆ. ನೀರಿನಲ್ಲಿ ಈಜುವಾಗ, ಅದು ತನ್ನ ಮೂಗಿನ ಹೊಳ್ಳೆ (ನಾಸಿಕ ರಂಧ್ರ) ಗಳನ್ನು ಮುಚ್ಚಿಕೊಂಡು ನೀರಿನಡಿ ಬಹಳ ಸಮಯದವರೆಗೆ ಇರಬಲ್ಲದು. ಹಿಮಕರಡಿಯ ಘ್ರಾಣಶಕ್ತಿ (sense of smell) ತೀಕ್ಷ್ಣವಾಗಿದ್ದು, ಆಹಾರಕ್ಕಾಗಿ ಬೇಟೆಯನ್ನು ಸುಲಭವಾಗಿ ಹಿಡಿಯಬಲ್ಲದು. ಕೆಳಗೆ ಕೊಟ್ಟಿರುವ ಚಿತ್ರ 7.3ರ ನಕ್ಷಾ ನಿರೂಪಣೆಯ ಸಹಾಯದಿಂದ ಹಿಮಕರಡಿಗಳ ಹೊಂದಾಣಿಕೆಗಳನ್ನು ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ಧ್ರುವ ಪ್ರದೇಶಗಳಲ್ಲಿ ವಾಸಿಸುವ ಮತ್ತೊಂದು ಪರಿಚಿತ ಪ್ರಾಣಿ ಪೆಂಗ್ವಿನ್ (ಚಿತ್ರ 7.4). ಅದು ಕೂಡಾ ಬೆಳ್ಳಗಿದ್ದು ಶ್ವೇತಹಿಮದ ಹಿನ್ನೆಲೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಚಳಿಯಿಂದ ರಕ್ಷಣೆ ಪಡೆಯಲು ಪೆಂಗ್ವಿನ್ ಕೂಡಾ ದಪ್ಪ ಚರ್ಮವನ್ನೂ, ಅಧಿಕ ಕೊಬ್ಬನ್ನೂ ಒಳಗೊಂಡಿದೆ. ಪೆಂಗ್ವಿನ್‍ಗಳು ಯಾವಾಗಲೂ ಒಂದಕ್ಕೊಂದು ಅಂಟಿಕೊಂಡಂತೆ ಇರುವುದನ್ನು ಚಿತ್ರಗಳಲ್ಲಿ ನೀವು ನೋಡಿರಬಹುದು. ಈ ಪ್ರವೃತ್ತಿಯಿಂದ ಅವು ತಮ್ಮನ್ನು ತಾವು ಬೆಚ್ಚಗಿಟ್ಟುಕೊಳ್ಳುತ್ತವೆ. ತುಂಬಾ ಜನರು ಸೇರಿರುವ ಸಭಾಂಗಣದಲ್ಲಿ ನಿಮಗೆ ತುಂಬಾ ಸೆಖೆಯ ಅನುಭವ ಆಗಿದ್ದನ್ನು ಸ್ಮರಿಸಿಕೊಳ್ಳಿ.

ಪೆಂಗ್ವಿನ್‍ಗಳು ಕೂಡ ಹಿಮಕರಡಿಗಳಂತೆ ಉತ್ತಮ ಈಜುಗಾರ ಪ್ರಾಣಿಗಳಾಗಿವೆ. ಧಾರಾರೇಖಾಕಾರ (streamlined) ದ ದೇಹ ಮತ್ತು ಕಾಲುಗಳಲ್ಲಿರುವ ಜಾಲಪಾದಗಳು ಅವುಗಳನ್ನು ಉತ್ತಮ ಈಜುಗಾರರನ್ನಾಗಿಸಿವೆ (ಚಿತ್ರ 7.5).

ಹಲವು ವಿಧದ ಮೀನುಗಳು, ಕಸ್ತೂರಿ ವೃಷಭ (musk oxen), ಹಿಮಸಾರಂಗ, ತೋಳ, ಸೀಲ್, ತಿಮಿಂಗಿಲ ಮತ್ತು ಹಲವು ಪಕ್ಷಿಗಳು ಧ್ರುವ ಪ್ರದೇಶಗಳಲ್ಲಿ ವಾಸಿಸುವ ಇನ್ನಿತರ ಪ್ರಾಣಿಗಳಾಗಿವೆ. ಇಲ್ಲಿ ಪಕ್ಷಿಗಳು ಬದುಕಬೇಕಾದರೆ ಬೆಚ್ಚಗೆ ಇರಬೇಕಾಗಿರುವಾಗ, ಮೀನುಗಳು ತಂಪು ನೀರಿನಡಿ ಬಹಳ ಸಮಯದವರೆಗೆ ಇರಬಲ್ಲವು ಎಂಬುದು ಗಮನಾರ್ಹ. ಚಳಿಗಾಲ ಆರಂಭವಾಗುವಾಗ ಪಕ್ಷಿಗಳು ಉಷ್ಣ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಚಳಿಗಾಲ ಮುಗಿದ ಮೇಲೆ ಹಿಂತಿರುಗುತ್ತವೆ. ಭಾರತವು ಇಂತಹ ಹಲವು ವಲಸೆ ಪಕ್ಷಿಗಳಿಗೆ ಗಮ್ಯಸ್ಥಾನವಾಗಿದೆ. ರಾಜಸ್ಥಾನದ ಭರತಪುರಕ್ಕೆ, ಹರಿಯಾಣದ ಸುಲ್ತಾನಪುರಕ್ಕೆ ಹಾಗೂ ಈಶಾನ್ಯ ಭಾರತದ ಜೌಗು ಪ್ರದೇಶಗಳು (wet land) ಮತ್ತು ಇನ್ನಿತರ ಪ್ರದೇಶಗಳಿಗೆ ಸೈಬೀರಿಯಾದಿಂದ ಬರುವ ಸೈಬೀರಿಯಾದ ಕೊಕ್ಕರೆ ಬಗ್ಗೆ ನೀವು ಕೇಳಿರಬಹುದು ಅಥವಾ ನೋಡಿರಬಹುದು (ಚಿತ್ರ 7.6).

ನಿಮಗಿದು ಗೊತ್ತೆ?

ತಮ್ಮ ಆವಾಸಸ್ಥಾನದ ವೈಪರೀತ್ಯ ಪರಿಸ್ಥಿತಿಗಳಿಂದ ಪಾರಾಗಲು ವಲಸೆ ಹೋಗುವ ಕೆಲವು ಪಕ್ಷಿಗಳು 15,000km ದೂರದವರೆಗೆ ಪ್ರಯಾಣ ಮಾಡುತ್ತವೆ. ಅವು ಬಹು ಎತ್ತರದಲ್ಲಿ ಹಾರುತ್ತವೆ. ಅಲ್ಲಿ ಉತ್ತಮ ವಾಯು ಪ್ರವಾಹ ಇರುವ ಕಾರಣ ಹಾರಾಟಕ್ಕೆ ಅನುಕೂಲ. ಹಾರಾಟದ ಸ್ನಾಯುಗಳಿಂದ ಉಂಟಾಗುವ ಬಿಸಿಯನ್ನು ಚದುರಿಸಲು ಅಲ್ಲಿನ ಚಳಿ ವಾತಾವರಣ ಸಹಾಯ ಮಾಡುತ್ತದೆ. ಆದರೆ ಪ್ರತಿ ವರ್ಷ ಅದೇ ನಿರ್ದಿಷ್ಟ ಜಾಗಕ್ಕೆ ಅವು ಅಷ್ಟು ನಿಖರವಾಗಿ ಹೇಗೆ ಪ್ರಯಾಣಿಸುತ್ತವೆ ಎಂಬುದೇ ಒಂದು ಸೋಜಿಗ. ದಿಕ್ಕುಗಳ ಪರಿಜ್ಞಾನ ಮತ್ತು ಯಾವ ದಿಕ್ಕಿಗೆ ಹಾರಬೇಕು ಎಂಬುದರ ಸುಪ್ತ ತಿಳುವಳಿಕೆಯನ್ನು ಈ ಪಕ್ಷಿಗಳು ಹುಟ್ಟಿನಿಂದಲೆ ಪಡೆದುಕೊಂಡಿರಬಹುದು. ಹಲವು ಪಕ್ಷಿಗಳು ಹಗಲಲ್ಲಿ ಸೂರ್ಯನಿಂದ, ರಾತ್ರಿಯಲ್ಲಿ ನಕ್ಷತ್ರಗಳಿಂದ ಮಾರ್ಗದರ್ಶನ ಪಡೆಯಬಹುದು. ಪಕ್ಷಿಗಳು ದಿಕ್ಕನ್ನು ಕಂಡುಹಿಡಿಯಲು ಭೂಮಿಯ ಕಾಂತೀಯ ಕ್ಷೇತ್ರದ ಉಪಯೋಗ ಮಾಡಿಕೊಳ್ಳುತ್ತವೆ ಎಂಬುದಕ್ಕೆ ಕೆಲವು ಸಾಕ್ಷಿ ಇದೆ. ಕೇವಲ ಪಕ್ಷಿಗಳು ಮಾತ್ರವಲ್ಲ, ಸ್ತನಿಗಳು, ಹಲವು ಜಾತಿಯ ಮೀನುಗಳು ಮತ್ತು ಕೀಟಗಳು ಕೂಡಾ ಅನುಕೂಲಕರ ವಾಯುಗುಣವನ್ನು ಹುಡುಕಿಕೊಂಡು ವಲಸೆ ಹೋಗುವುದು ತಿಳಿದು ಬಂದಿದೆ.

(ii) ಉಷ್ಣ ವಲಯದ ಮಳೆಕಾಡುಗಳು

ಮಳೆಕಾಡು ಪ್ರದೇಶವು ಭೂಮಧ್ಯರೇಖೆಯ ಸುತ್ತ ಇರುವ ಕಾರಣ, ಸಾಮಾನ್ಯವಾಗಿ ಬಿಸಿಯಾಗಿಯೇ ಇರುತ್ತದೆ. ಅತಿ ತಂಪಾದ ತಿಂಗಳಿನಲ್ಲಿ ಕೂಡಾ ಉಷ್ಣತೆಯು ಸಾಮಾನ್ಯವಾಗಿ ಸುಮಾರು 15o C ಇರುತ್ತದೆ. ಬಿರು ಬೇಸಿಗೆಯಲ್ಲಿ ತಾಪಮಾನ 40o C ದಾಟಬಹುದು. ವರ್ಷ ಪೂರ್ತಿ ಹಗಲು ರಾತ್ರಿಗಳ ಅವಧಿಯು ಒಂದೇ ಸಮನಾಗಿ ಇರುತ್ತದೆ. ಈ ಪ್ರದೇಶಗಳಲ್ಲಿ ಹೇರಳವಾಗಿ ಮಳೆ ಸುರಿಯುತ್ತದೆ. ಉಷ್ಣ ವಲಯದ ಮಳೆಕಾಡುಗಳು ಉಷ್ಣ ವಲಯದ ಮುಖ್ಯ ವೈಶಿಷ್ಟ್ಯವಾಗಿವೆ. ಭಾರತದ ಅಸ್ಸಾಂ ಮತ್ತು ಪಶ್ಚಿಮ ಘಟ್ಟಗಳಲ್ಲಿ, ಆಗ್ನೇಯ ಏಷ್ಯಾ, ಮಧ್ಯ ಅಮೆರಿಕಾ ಮತ್ತು ಮಧ್ಯಆಫ್ರಿಕಾಗಳಲ್ಲಿ ಮಳೆಕಾಡುಗಳು ಕಂಡು ಬರುತ್ತವೆ. ನಿರಂತರವಾದ ಮಳೆ ಮತ್ತು ಬೆಚ್ಚನೆಯ ವಾತಾವರಣದಿಂದಾಗಿ ಈ ಪ್ರದೇಶವು ಹಲವಾರು ಜಾತಿಯ ಗಿಡಮರಗಳನ್ನು ಹಾಗೂ ಪ್ರಾಣಿಗಳನ್ನು ಪೋಷಿಸುತ್ತದೆ. ಮಂಗ, ವಾನರ, ಗೊರಿಲ್ಲಾ, ಹುಲಿ, ಆನೆ, ಚಿರತೆ, ಹಲ್ಲಿ, ಹಾವು, ಪಕ್ಷಿ ಮತ್ತು ಕೀಟಗಳು ಮಳೆಕಾಡುಗಳಲ್ಲಿ ವಾಸಿಸುವ ಪ್ರಮುಖ ಜಾತಿಯ ಪ್ರಾಣಿಗಳಾಗಿವೆ.

ಉಷ್ಣ ಮತ್ತು ತೇವಭರಿತ ವಾಯುಗುಣಕ್ಕೆ ಪ್ರಾಣಿಗಳು ಮಾಡಿಕೊಂಡಿರುವ ಹೊಂದಾಣಿಕೆಗಳ ಬಗ್ಗೆ ತಿಳಿದುಕೊಳ್ಳೋಣ.

ಮಳೆಕಾಡುಗಳ ಪರಿಸ್ಥಿತಿಗಳು ವಿವಿಧ ಜಾತಿಯ ಬಹಳಷ್ಟು ಸಂಖ್ಯೆಯ ಪ್ರಾಣಿಗಳ ಇರುವಿಕೆಗೆ ಬಹಳ ಅನುಕೂಲಕರವಾಗಿವೆ.

ಪ್ರಾಣಿಗಳ ಅಗಾಧ ಸಂಖ್ಯೆಯಿಂದಾಗಿ ಆಹಾರ ಹಾಗೂ ವಾಸಸ್ಥಾನಗಳಿಗೆ ತೀವ್ರ ಪೈಪೋಟಿ ಇರುತ್ತದೆ. ಮರದ ಮೇಲೆ ವಾಸಿಸಲು ಹಲವು ಪ್ರಾಣಿಗಳು ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಕೆಂಪು ಕಣ್ಣಿನ ಕಪ್ಪೆಗಳು (ಚಿತ್ರ 7.7) ತಾವು ವಾಸಿಸುವ ಮರದ ಮೇಲೆ ಹತ್ತಲು ಅನುಕೂಲವಾಗುವಂತೆ ಪಾದಗಳಲ್ಲಿ ಅಂಟುಸಿಂಬೆಯನ್ನು ಹೊಂದಿವೆ. ಮಂಗಗಳು (ಚಿತ್ರ 7.8) ಕೊಂಬೆಗಳನ್ನು ಹಿಡಿಯಲು ಉದ್ದನೆ ಬಾಲವನ್ನು ಹೊಂದಿರುತ್ತವೆ. ಕೊಂಬೆಗಳನ್ನು ಸುಲಭವಾಗಿ ಹಿಡಿಯಲು ಅನುಕೂಲವಾಗುವಂತೆ ಅವುಗಳ ಕೈ ಮತ್ತು ಪಾದಗಳು ರೂಪುಗೊಂಡಿವೆ.

ಆಹಾರಕ್ಕಾಗಿ ಪೈಪೋಟಿ ಇರುವ ಕಾರಣ ಕೆಲವು ಪ್ರಾಣಿಗಳು ಸುಲಭವಾಗಿ ಎಟುಕದ ಆಹಾರವನ್ನು ದೊರಕಿಸಿಕೊಳ್ಳುವ ಸಲುವಾಗಿ ಹೊಂದಾಣಿಕೆಗಳನ್ನು ಮಾಡಿಕೊಂಡಿರುತ್ತವೆ. ಇದಕ್ಕೆ ಟೌಕಾನ್ ಪಕ್ಷಿಯು (ಚಿತ್ರ 7.9) ಒಂದು ಉತ್ತಮ ಉದಾಹರಣೆ. ಇದರ ಕೊಕ್ಕು ಉದ್ದ ಹಾಗೂ ದೊಡ್ಡದಾಗಿದ್ದು, ತನ್ನ ಭಾರ ತಡೆಯದ ತೆಳ್ಳಗಿನ ಎತ್ತರವಾದ ಕೊಂಬೆಗಳಿಂದ ಸಹ ಟೌಕಾನ್ ಪಕ್ಷಿ ಹಣ್ಣು ಹಂಪಲುಗಳನ್ನು ಕೀಳಬಲ್ಲದು.

ಉಷ್ಣವಲಯದ ಹೆಚ್ಚಿನ ಪ್ರಾಣಿಗಳು ಸೂಕ್ಷ್ಮ ಶ್ರವಣಶಕ್ತಿ, ತೀಕ್ಷ್ಣದೃಷ್ಟಿ, ದಪ್ಪಚರ್ಮ ಮತ್ತು ಸುತ್ತಮುತ್ತಲಿನ ಹಿನ್ನೆಲೆಯೊಂದಿಗೆ ಬೆರೆತುಹೋಗುವಂತೆ ಬದಲಾಗುವ ಚರ್ಮದ ಬಣ್ಣವನ್ನು (ಕಪಟ ರೂಪ) ಹೊಂದಿರುತ್ತವೆ. ಇದು ಪರಭಕ್ಷಕ ಪ್ರಾಣಿಗಳಿಂದ ಅವುಗಳಿಗೆ ರಕ್ಷಣೆ ಒದಗಿಸುತ್ತದೆ. ಸಿಂಹ ಹಾಗೂ ಹುಲಿಗಳಂತಹ ಬೃಹತ್ ಬೆಕ್ಕಿನ ಜಾತಿಯ ಪ್ರಾಣಿಗಳು ದಪ್ಪ ಚರ್ಮ ಮತ್ತು ಸೂಕ್ಷ್ಮ ಶ್ರವಣ ಶಕ್ತಿಯನ್ನು ಹೊಂದಿವೆ.

ಗಡ್ಡಧಾರಿ ಮಂಗ ಎಂದೂ ಕರೆಯಿಸಿಕೊಳ್ಳುವ ಸಿಂಹ ಬಾಲದ ಮಕಾಕ್ ಪಶ್ಚಿಮ ಘಟ್ಟಗಳ ಮಳೆಕಾಡುಗಳಲ್ಲಿ ವಾಸಿಸುತ್ತದೆ (ಚಿತ್ರ 7.10). ತಲೆಯ ಸುತ್ತಲೂ ಕೆನ್ನೆಯಿಂದ ಗದ್ದದವರೆಗೆ ಆವರಿಸಿರುವ ಬೆಳ್ಳಿ ಬಿಳುಪಿನ ಗಡ್ಡ / ಕೇಸರವು ಇದರ ವೈಶಿಷ್ಟ್ಯವಾಗಿದೆ. ಉತ್ತಮವಾಗಿ ಮರ ಹತ್ತುವ ಚಾಕಚಕ್ಯತೆ ಹೊಂದಿರುವ ಈ ಪ್ರಾಣಿ ಮರದಲ್ಲೇ ತನ್ನ ಜೀವನದ ಬಹುಪಾಲನ್ನು ಕಳೆಯುತ್ತದೆ. ಬೀಜ, ಎಳೆಎಲೆ, ಕಾಂಡ, ಹೂ ಮತ್ತು ಮೊಗ್ಗುಗಳನ್ನು ಈ ಪ್ರಾಣಿ ತಿನ್ನುತ್ತದೆ. ಆದರೆ ಹಣ್ಣುಗಳು ಇದರ ಮುಖ್ಯ ಆಹಾರ. ತೊಗಟೆಯಡಿ ಇರುವ ಕೀಟಗಳನ್ನು ಹುಡುಕಿ ತಿನ್ನುತ್ತದೆ. ಸಾಕಷ್ಟು ಆಹಾರವು ಮರದ ಮೇಲೆ ದೊರಕುವ ಕಾರಣ ಈ ಗಡ್ಡಧಾರಿ ಮಂಗವು ಮರದಿಂದ ಹೆಚ್ಚಾಗಿ ಕೆಳಗಿಳಿಯುವುದಿಲ್ಲ.

ಮಳೆಕಾಡುಗಳಲ್ಲಿ ವಾಸಿಸುವ ಮತ್ತೊಂದು ಪರಿಚಿತ ಪ್ರಾಣಿ ಆನೆ (ಚಿತ್ರ 7.11). ಅಲ್ಲಿನ ಪರಿಸ್ಥಿತಿಗಳಿಗೆ ಗಮನಾರ್ಹವಾಗಿ ಹೊಂದಾಣಿಕೆ ಮಾಡಿಕೊಂಡಿದೆ. ಅದರ ಸೊಂಡಿಲನ್ನು ನೋಡಿ. ತೀವ್ರ ಘ್ರಾಣಶಕ್ತಿ ಉಳ್ಳ ಸೊಂಡಿಲನ್ನು ಅದು ನಾಸಿಕದಂತೆ ಉಪಯೋಗಿಸುತ್ತದೆ. ಅದು ಆಹಾರವನ್ನು ಎತ್ತಿಕೊಳ್ಳಲೂ ಸೊಂಡಿಲನ್ನು ಉಪಯೋಗಿಸುತ್ತದೆ. ಅದರ ದಂತಗಳು ರೂಪಾಂತರಗೊಂಡ ಹಲ್ಲುಗಳಾಗಿದ್ದು, ತಾನು ತಿನ್ನ ಬಯಸುವ ಮರದ ತೊಗಟೆಯನ್ನು ಸೀಳಲು ನೆರವಾಗುತ್ತವೆ. ಆನೆಯು ಆಹಾರದ ಪೈಪೋಟಿಯನ್ನು ಎದುರಿಸಲು ಸಮರ್ಥವಾಗಿದೆ. ಅದರ ದೊಡ್ಡ ಕಿವಿಗಳು ಅತಿ ಸೂಕ್ಷ್ಮ ಸಪ್ಪಳವನ್ನೂ ಕೇಳಲು ಸಹಕಾರಿಯಾಗಿವೆ. ಅಲ್ಲದೆ ಉಷ್ಣ-ತೇವಭರಿತ ಮಳೆಕಾಡಿನ ವಾಯುಗುಣದಲ್ಲಿ ಆನೆಯನ್ನು ತಂಪಾಗಿರಿಸಲು ಕೂಡ ಸಹಾಯ ಮಾಡುತ್ತವೆ.

ಪ್ರಮುಖ ಪದಗಳು

ಹೊಂದಾಣಿಕೆ
ಗರಿಷ್ಠ ತಾಪ
ಉಷ್ಣವಲಯದ ಮಳೆಕಾಡು
ವಾಯುಗುಣ
ವಲಸೆ
ಉಷ್ಣವಲಯ
ಹವಾಮಾನದ ಅಂಶಗಳು
ಕನಿಷ್ಠ ತಾಪ
ಹವಾಮಾನ
ಆದ್ರ್ರತೆ
ಧ್ರುವಪ್ರದೇಶ

ಸಂವೇದ ವಿಡಿಯೋ ಪಾಠಗಳು

7th Class | Science Part-1
7th Class | Science Part-2
7th Class | Science Part-3
7th Class | Science Part-4

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನೀವು ಕಲಿತಿರುವುದು

* ತಾಪ, ಆದ್ರ್ರತೆ, ಮಳೆ, ಗಾಳಿಯ ಜವ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಒಂದು ಪ್ರದೇಶದ ವಾತಾವರಣದ ದೈನಂದಿನ ಸ್ಥಿತಿಯನ್ನು ಆ ಪ್ರದೇಶದ ಹವಾಮಾನ ಎನ್ನುವರು.
* ಯಾವುದೇ ಎರಡು ದಿನಗಳು ಅಥವಾ ವಾರ-ವಾರಕ್ಕೂ ಹವಾಮಾನವು ಒಂದೇ ಸಮನಾಗಿ ಇರುವುದಿಲ್ಲ.
* ಸಾಧಾರಣವಾಗಿ ಮಧ್ಯಾಹ್ನ ಗರಿಷ್ಠ ತಾಪ ಮತ್ತು ಮುಂಜಾನೆ ಕನಿಷ್ಠ ತಾಪ ಇರುತ್ತದೆ.
* ಒಂದು ವರ್ಷದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ಬದಲಾಗುತ್ತದೆ.
* ಹವಾಮಾನದ ಎಲ್ಲಾ ಬದಲಾವಣೆಗಳೂ ಸೂರ್ಯನಿಂದ ಉಂಟಾಗುತ್ತವೆ.
* ಅಂದಾಜು 25 ವರ್ಷಗಳಷ್ಟು ದೀರ್ಘಾವಧಿಯ ಸರಾಸರಿ ಹವಾಮಾನದ ಮಾದರಿಯನ್ನು ಆ ಪ್ರದೇಶದ ವಾಯುಗುಣ ಎನ್ನುವರು.
* ಉಷ್ಣವಲಯ ಮತ್ತು ಧ್ರುವ ಪ್ರದೇಶಗಳು ಹವಾಮಾನ ವೈಪರೀತ್ಯ ಹೊಂದಿರುವ ಭೂಮಿಯ ಎರಡು ಪ್ರದೇಶಗಳಾಗಿವೆ.
* ತಾವು ವಾಸಿಸುವ ಪರಿಸ್ಥಿತಿಗಳಿಗೆ ಪ್ರಾಣಿಗಳು ಹೊಂದಾಣಿಕೆ ಮಾಡಿಕೊಂಡಿರುತ್ತವೆ.
* ಧ್ರುವ ಪ್ರದೇಶದಲ್ಲಿ ವರ್ಷವಿಡೀ ವಿಪರೀತ ಚಳಿಯಿರುತ್ತದೆ. ವರ್ಷದ ಆರು ತಿಂಗಳುಗಳ ಕಾಲ ಸೂರ್ಯ ಮುಳುಗುವುದಿಲ್ಲ ಹಾಗೂ ಉಳಿದ ಆರು ತಿಂಗಳು ಸೂರ್ಯೋದಯವಾಗುವುದಿಲ್ಲ.
* ಧ್ರುವ ಪ್ರದೇಶದ ಪ್ರಾಣಿಗಳು ಅಲ್ಲಿನ ವಿಪರೀತ ಚಳಿಯ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಶ್ವೇತ ತುಪ್ಪಳ, ತೀಕ್ಷ್ಣ ಘ್ರಾಣಶಕ್ತಿ, ಚರ್ಮದ ಅಡಿ ಕೊಬ್ಬಿನ ಪದರ, ನಡೆಯಲು ಮತ್ತು ಈಜಲು ಅಗಲವಾದ ದೊಡ್ಡ ಪಂಜಗಳು – ಈ ಪ್ರಾಣಿಗಳ ಕೆಲವು ವೈಶಿಷ್ಟ್ಯಗಳು.
* ವಿಪರೀತ ಚಳಿಯ ವಿಷಮ ಸ್ಥಿತಿಯಿಂದ ಪಾರಾಗಲು ವಲಸೆ ಹೋಗುವುದು ಒಂದು ಉಪಾಯವಾಗಿದೆ.
* ಅನುಕೂಲಕರ ವಾಯುಗುಣದ ಪರಿಸ್ಥಿತಿಯಿಂದಾಗಿ ಉಷ್ಣವಲಯದ ಮಳೆಕಾಡುಗಳಲ್ಲಿ ಬಹಳಷ್ಟು ಸಂಖ್ಯೆಯ ಪ್ರಾಣಿ ಹಾಗೂ ಸಸ್ಯಗಳನ್ನು ಕಾಣಬಹುದಾಗಿದೆ.
* ಆಹಾರ ಮತ್ತು ಆವಾಸಕ್ಕಾಗಿ ಪೋಟಿಯನ್ನು ಎದುರಿಸಲು ಉಷ್ಣವಲಯದ ಮಳೆಕಾಡುಗಳಲ್ಲಿ ವಾಸಿಸುವ ಪ್ರಾಣಿಗಳು ವಿವಿಧ ಬಗೆಯ ಆಹಾರ ತಿನ್ನುವ ಮೂಲಕ ಹೊಂದಾಣಿಕೆ ಮಾಡಿಕೊಂಡಿರುತ್ತವೆ.
* ಉಷ್ಣವಲಯದ ಮಳೆಕಾಡುಗಳಲ್ಲಿ ವಾಸಿಸುವ ಪ್ರಾಣಿಗಳ ಕೆಲವು ಹೊಂದಾಣಿಕೆಗಳೆಂದರೆಮರದ ಮೇಲೆ ವಾಸಿಸುವುದು, ಉದ್ದನೆಯ ಶಕ್ತಿಯುತವಾದ ಬಾಲ, ಉದ್ದ ಹಾಗೂ ದೊಡ್ಡದಾದ ಕೊಕ್ಕು, ಗಾಢವರ್ಣ, ನಿಖರ ಆಕೃತಿಗಳು, ದೊಡ್ಡ ಸ್ವರ, ಹಣ್ಣಿನ ಆಹಾರ, ಸೂಕ್ಷ್ಮ ಶ್ರವಣಶಕ್ತಿ, ತೀಕ್ಷ್ಣದೃಷ್ಟಿ, ದಪ್ಪಚರ್ಮ, ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಕಪಟ ರೂಪ ಧರಿಸುವುದು ಇತ್ಯಾದಿಗಳು.

ನಿಮಗಿದು ಗೊತ್ತೆ?

ಭೂಮಿಯ ಮೇಲ್ಮೈನ ಸುಮಾರು 6% ರಷ್ಟು ಭಾಗವನ್ನು ಮಳೆಕಾಡುಗಳು ಆವರಿಸಿವೆ. ಭೂಗ್ರಹದ ಒಟ್ಟು ಪ್ರಾಣಿ ವೈವಿಧ್ಯದ 1/2 ಕ್ಕಿಂತ ಹೆಚ್ಚು ಮತ್ತು ಸುಮಾರು 2/3 ರಷ್ಟು ಸಸ್ಯಗಳನ್ನು ಅವು ಒಳಗೊಂಡಿವೆ. ಈ ಅಗಾಧ ಜೀವರಾಶಿಯ ಬಹುಪಾಲು ನಮಗಿನ್ನೂ ಅಪರಿಚಿತವಾಗಿಯೆ ಉಳಿದಿದೆ.