ವಾಯು – ಪಾಠ – 6

ನೈಸರ್ಗಿಕ ಸಂಪನ್ಮೂಲಗಳಲ್ಲಿ ವಾಯುವೂ ಒಂದು. ಇದು ಭೂಗೋಳದ ಸುತ್ತಲು ಒಂದು ಕವಚವಾಗಿ ಹರಡಿದೆ. ಇದನ್ನು ವಾಯುಗೋಳ ಎಂದೂ ಕರೆಯುತ್ತಾರೆ. ಅನೇಕ ಅನಿಲಗಳ ಮಿಶ್ರಣವಾಗಿರುವ ವಾಯುವು ಸಸ್ಯ ಮತ್ತು ಪ್ರಾಣಿಗಳ ಉಳಿವಿಗೆ ತುಂಬಾ ಅವಶ್ಯವಾಗಿವೆ.

ವಾಯು ಕಣ್ಣಿಗೆ ಕಾಣುವುದಿಲ್ಲ. ಆದರೆ ಇದರ ಇರುವಿಕೆಯ ಅನುಭವ ಆಗುತ್ತದೆ. ನಮ್ಮ ಸುತ್ತಲೂ ವಾಯು ಇದೆ ಎಂದು ನಿನಗೆ ಹೇಗೆ ತಿಳಿಯಿತು? ಈ ಬಗ್ಗೆ 3 ಅನುಭವಗಳನ್ನು ಬರೆ.

ಓದಿ-ತಿಳಿ :
ನಾವು ಉಸಿರಾಡಲು ವಾಯುವಿನಲ್ಲಿರುವ ಆಕ್ಸಿಜನ್ ಅನಿಲವನ್ನು ಬಳಸುತ್ತೇವೆ. ಉಸಿರಾಡದೆ ನಾವು ಬದುಕಲು ಸಾಧ್ಯವಿಲ್ಲ. ನಮ್ಮಂತೆಯೇ ಪ್ರಾಣಿಗಳು ಮತ್ತು ಸಸ್ಯಗಳ ಉಸಿರಾಟಕ್ಕೂ ಆಕ್ಸಿಜನ್ ಬೇಕು. ಇಂಧನ ದ್ರವ್ಯಗಳನ್ನು ಉರಿಸಲು ಆಕ್ಸಿಜನ್ ಅತ್ಯವಶ್ಯ. ಇದಲ್ಲದೆ ವಾಯುವಿನಿಂದ ನಮಗೆ ಅನೇಕ ಉಪಯೋಗಗಳಿವೆ. ಈ ಬಗ್ಗೆ ಮುಂದಿನ ತರಗತಿಯಲ್ಲಿ ಕಲಿಯುವೆ.

ವಾಯುವು ನೈಟ್ರೊಜನ್(78%), ಆಕ್ಸಿಜನ್ (21%), ಕಾರ್ಬನ್ ಡೈ ಆಕ್ಸೈಡ್ (0.04%), ನೀರಾವಿ, ಜಡ ಅನಿಲಗಳು ಮತ್ತು ಧೂಳಿನ (0.96%) ಮಿಶ್ರಣದಿಂದಾಗಿದೆ.

ಈ ಚಿತ್ರದಲ್ಲಿ ತೋರಿಸಿರುವ ವಾಯುವಿನ ಸಂಯೋಜನೆಯನ್ನು ನೋಡಿ, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು.

ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ ಯಾವುದು?

ವಾಯುವಿನಲ್ಲಿ ನಮ್ಮ ಉಸಿರಾಟಕ್ಕೆ ಅಗತ್ಯವಾದ ಅನಿಲ ಎಷ್ಟು ಪ್ರಮಾಣದಲ್ಲಿದೆ?

ಸಾಮಾನ್ಯವಾಗಿ ವಾಯುವಿನಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಎಷ್ಟಿರುತ್ತದೆ?

ವಾಯುವಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಘಟಕ ಯಾವುದು?

ಮಾಡಿ ನೋಡು :
ಒಂದು ಗಾಜಿನ ಲೋಟದ ತಳಕ್ಕೆ ಒಣಗಿದ ಪೇಪರ್ ತುಂಡೊಂದನ್ನು ಒತ್ತಿರಿ. ಲೋಟವನ್ನು ತಲೆ ಕೆಳಗೆ ಮಾಡಿ, ಇದನ್ನು ನೀರು ತುಂಬಿರುವ ಗಾಜಿನ ತೊಟ್ಟಿಗೆ ಅದುಮಿರಿ. ಲೋಟವನ್ನು ನೀರಿನಲ್ಲಿ ಅದುಮುವಾಗ ಎಚ್ಚರವಹಿಸಿ.

ಏನಾಗುವುದು ಗಮನಿಸಿ. ನೀರು ಲೋಟದೊಳಕ್ಕೆ ಹೋಗಿದೆಯೆ? ಲೋಟದೊಳಗಿನ ಪೇಪರ್ ನೀರಿನಿಂದ ತೇವಗೊಂಡಿದೆಯೆ? ಇಲ್ಲ. ಏಕೆ ಹೀಗೆ?

ಈಗ ಲೋಟವನ್ನು ಸ್ವಲ್ಪ ಓರೆಯಾಗಿಸಿ. ನೀವು ಏನನ್ನು ಗಮನಿಸುವಿರಿ? ವಾಯುವಿನ ಗುಳ್ಳೆಗಳು ಲೋಟದಿಂದ ಹೊರಬರುತ್ತವೆ ಮತ್ತು ನೀರು ಲೋಟದೊಳಗೆ ಹೋಗುತ್ತದೆ. ಇದು ಹೇಗಾಯಿತು?

ಖಾಲಿ ಲೋಟವು ನಿಜವಾಗಿಯೂ ಖಾಲಿಯಿರುವುದಿಲ್ಲ. ಲೋಟವು ವಾಯುವಿನಿಂದ ತುಂಬಿರುತ್ತದೆ. ನೀರಿನ ತೊಟ್ಟಿಗೆ ಗಾಜಿನ ಲೋಟವನ್ನು ಮುಳುಗಿಸಲು ಒತ್ತಿದಾಗ ಲೋಟದೊಳಗಿನ ವಾಯು ಹೊರಬಂದು ನೀರು ಒಳಸೇರುತ್ತದೆ. ಈ ಚಟುವಟಿಕೆಯಿಂದ ನಿನಗೆ ಏನು ತಿಳಿಯುತ್ತದೆ?

ಆಲೋಚಿಸು :

ವಾಹನದ ಟೈರ್ ಪಂಕ್ಚರ್ ಆದಾಗ ಏನಾಗುತ್ತದೆ?

ಇಲ್ಲಿ ಒಲೆಯು ಉರಿಯಲು ಏನು ಮಾಡುತ್ತಿದ್ದಾರೆ? ಇದರಿಂದ ನೀನೇನು ತಿಳಿದೆ?

ವಾಯು ಶಕ್ತಿಯ ಉಪಯೋಗಗಳ ಬಗ್ಗೆ ಹೆಚ್ಚಿನ ವಿವರವನ್ನು ವಿಸ್ಮಯ ಶಕ್ತಿ ಪಾಠದಲ್ಲಿ ತಿಳಿಯುವೆ.

ವಾಯು ಚಲಿಸಲು ಪ್ರಾರಂಭವಾದಾಗ ಅದನ್ನು ಗಾಳಿ ಎಂದು ಕರೆಯುತ್ತೇವೆ. ಚಲಿಸುವ ಗಾಳಿಗೆ ಅಪಾರವಾದ ಶಕ್ತಿಯಿದೆ

ಈ ಘಟನೆಗಳಿಂದ ನೀನೇನು ತಿಳಿದೆ.
* ಜೋರಾಗಿ ಬೀಸಿದ ಗಾಳಿಯಿಂದ ಮನೆಯ ಛಾವಣಿಗಳು ಹಾರಿ ಹೋಗಿವೆ.
* ರಸ್ತೆಯಲ್ಲಿ ನಾವು ನಡೆಯುವಾಗ ಗಾಳಿ ಜೋರಾಗಿ ಬೀಸಿದಾಗ ಹಿಂದಕ್ಕೆ ತಳ್ಳಿದಂತೆ ಅನುಭವವಾಗುತ್ತದೆ.
* ಒಣಗಲು ಹಾಕಿದ ಬಟ್ಟೆಗಳು ಗಾಳಿ ಬೀಸುವಾಗ ಹಿಂದಕ್ಕೆ ಮುಂದಕ್ಕೆ ಹಾರುತ್ತವೆ.
* ಚಕ್ರದೊಳಗಿನ ಟ್ಯೂಬ್‍ನಲ್ಲಿರುವ ಗಾಳಿ ಹೊರಗೆ ಹೋದರೆ ವಾಹನ ಮುಂದಕ್ಕೆ ಚಲಿಸುವುದಿಲ್ಲ.
* ಗಾಳಿಯ ರಭಸಕ್ಕೆ ತೆಂಗಿನ ಮರಗಳು ತೂಗುತ್ತವೆ.
* ಗಾಳಿಪಟ ಮೇಲಕ್ಕೆ ಹಾರುತ್ತದೆ.

ಕೈಗಾರಿಕೆಗಳ ಹೊಗೆ, ವಾಹನಗಳ ಹೊಗೆ, ವಸ್ತುಗಳನ್ನು ಮತ್ತು ಪಟಾಕಿಗಳನ್ನು ಸುಡುವುದರಿಂದ ವಾಯುವು ಮಾಲಿನ್ಯಗೊಳ್ಳುತ್ತದೆ.

ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಉಂಟು ಮಾಡುವ ರಾಸಾಯನಿಕಗಳು, ಧೂಳು, ಸೂಕ್ಷ್ಮ ಜೀವಿಗಳು ವಾಯುವನ್ನು ಸೇರುವುದೇ ವಾಯು ಮಾಲಿನ್ಯ. ಕಾರ್ಖಾನೆಗಳ ಹೊಗೆ, ವಾಹನಗಳ ಹೊಗೆ ಇತ್ಯಾದಿಗಳಿಂದ ರಾಸಾಯನಿಕಗಳು ಹಾಗೂ ಅತೀ ಸೂಕ್ಷ್ಮ ಕಣಗಳು ವಾಯುವನ್ನು ಸೇರುವುದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಇದರಿಂದ ಹೃದ್ರೋಗ (ಹೃದಯ ಸಂಬಂಧಿ ರೋಗ), ಕ್ಯಾನ್ಸರ್, ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಸ್ಯಗಳ ಬೆಳವಣಿಗೆ ಮತ್ತು ಸಸ್ಯಗಳಿಂದ ದೊರೆಯುವ ಉತ್ಪನ್ನಗಳ (ಇಳುವರಿ) ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇದರಿಂದ ಕೆಲವು ಪ್ರಾಣಿಗಳ ಸಂತತಿಯೇ ಕಣ್ಮರೆಯಾಗಬಹುದು. ವಾಯು ಸಂಪನ್ಮೂಲವು ಎಲ್ಲಾ ಜೀವಿಗಳಿಗೆ ಬಹಳ ಅಗತ್ಯವಾಗಿದ್ದು, ಇದು ಮಾಲಿನ್ಯವಾಗದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ನಾವು ವಾಯುಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು.

ವಾಯು ಮಾಲಿನ್ಯವನ್ನು ತಡೆಗಟ್ಟಲು ಅನುಸರಿಸಬಹುದಾದ ಎರಡು ಕ್ರಮಗಳನ್ನು ಬರೆ. (ಶಿಕ್ಷಕರು / ಹಿರಿಯರ ಸಹಾಯವನ್ನು ಪಡೆ)

ಓದಿ-ತಿಳಿ :
ವಾಯು ಮಾಲಿನ್ಯವನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಕ್ರಮಗಳು ಹೀಗಿವೆ.
* ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಅನುಪಯುಕ್ತ ತ್ಯಾಜ್ಯಗಳು ವಾಯುವನ್ನು ಸೇರದಂತೆ ತಡೆಯುವುದು.
* ಹೊಗೆಯನ್ನು ವಾತಾವರಣದಿಂದ ಎತ್ತರಕ್ಕೆ ಕೊಂಡೊಯ್ದು ಬಿಡುಗಡೆ ಮಾಡುವಂತೆ ಎತ್ತರವಾದ ಹೊಗೆ ಕೊಳವೆಗಳನ್ನು ಕಟ್ಟುವುದು.
* ಕಲ್ಲಿದ್ದಲು, ಡೀಸೆಲ್, ಪೆಟ್ರೋಲ್ ಇಂಧನಕ್ಕೆ ಬದಲಾಗಿ ಅನಿಲ (ಗ್ಯಾಸ್) ಇಂಧನವನ್ನು ಬಳಸುವುದು.
* ಹೊಗೆ ನಿಯಂತ್ರಣ ವ್ಯವಸ್ಥೆ ಇರುವಂತೆ ವಿನ್ಯಾಸಗೊಳಿಸುವುದು.
* ಸಾರ್ವಜನಿಕ ವಾಹನಗಳನ್ನು ಬಳಸುವುದು.
* ಬದಲಿ ಇಂಧನ ಮೂಲಗಳಾದ ಸೌರಶಕ್ತಿ, ಜಲವಿದ್ಯುತ್ ಶಕ್ತಿ ಮತ್ತು ಪವನಶಕ್ತಿಯನ್ನು ಉಪಯೋಗಿಸುವುದು.
* ಜನವಸತಿ ಪ್ರದೇಶಗಳಲ್ಲಿ ವಸ್ತುಗಳನ್ನು ಸುಡದಿರುವುದು.

ಸಂವೇದ ವಿಡಿಯೋ ಪಾಠಗಳು

Samveda – 5th – EVS – Air

ಪೂರಕ ವಿಡಿಯೋಗಳು

ವಾಯು | ಪರಿಸರ ಅಧ್ಯಯನ | 5ನೇ ತರಗತಿ |ಪಾಠ 6| Vayu| Vayu 5th Std EVS Part 1
ವಾಯು | ಪರಿಸರ ಅಧ್ಯಯನ | 5ನೇ ತರಗತಿ |ಪಾಠ 6| Vayu| Vayu 5th Std EVS Part 2

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.