ಲೇಖನ, ಚಿತ್ರಗಳು, ವಿಡಿಯೋ ಸಂದರ್ಶನ : ದರ್ಶನ ಹರಿಕಾಂತ

“ಡುಂಸಾಲ್ಗೋ”, “ದಪ್ಪಡ್ ದುಪ್ಪಡ್ ದೀಪಾಳ್ಗ್ಯೋ” – ಈ ಪದ ಮೆಲೆನಾಡಿನ ಸಿದ್ದಾಪುರದ ಜನರಿಗೆ ಚಿರಪರಿಚಿತ ಧ್ವನಿ. ಜಾನಪದ ಕಲೆಯ ಭಾಗವಾಗಿರುವ ‘ಬಿಂಗಿಪದ’ವನ್ನು ಹಿರಿಯರ ಮಾರ್ಗದರ್ಶನದಲ್ಲಿ ಮನೆ-ಮನೆಗೆ ತೆರಳಿ ಹಾಡಿ ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತಾರೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ದೀಪಾವಳಿಯ ಕೊನೆಯ ದಿನ ರಾತ್ರಿ ಊರಲ್ಲಿ ಕೇಳಿಬರುವ ಸಾಮಾನ್ಯ ಹಾಡು. ಅನಾದಿಕಾಲದಿಂದಲೂ ರೂಢಿಗತವಾಗಿ ಬಂದಿರುವ ಶುಭ ಸೂಚಕವಾದ ಈ ‘ಬಿಂಗಿಪದ’ವನ್ನು ದೀಪಾವಳಿಯ ಕೊನೆಯ ಎರಡು ದಿನ ರಾತ್ರಿ ಹಾಡುತ್ತಾರೆ. ಅಳಿವಿನಂಚಿನಲ್ಲಿರುವ ಈ ಕಲೆಯು ಬೇರೆಲ್ಲೂ ಕಾಣಸಿಗದೇ ಕೇವಲ ಈ ಭಾಗದಲ್ಲಿ ಮಾತ್ರ ಕಾಣಸಿಗುವುದು ವಿಶೇಷ.

ಬಲೀಂದ್ರನ (ಬಲಿಚಕ್ರವರ್ತಿ)  ಕುರಿತು ಜಾಗರಣೆಗಾಗಿ ‘ಬಿಂಗಿಪದ’

ವಿಷ್ಣು ದೇವರು ವಾಮನ ರೂಪ ತಾಳಿ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿ, ‘ನೀನು ಭೂಗರ್ಭದಲ್ಲಿ ಹೂತು ಹೋದರೂ ಚಿರಂಜೀವಿಗಳ ಸಾಲಿನಲ್ಲಿ ಅಮರನಾಗಿರು. ಮತ್ತೆ ನಿನ್ನ ನಾಮ ಮುಂದೆ ಬಲಿ ಪಾಢ್ಯ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ’ ಎಂಬ ವರವನ್ನು ದಯಪಾಲಿಸುತ್ತಾನೆ. ಇದರ ಸಾಂಕೇತಿಕವಾಗಿ ದೀಪಾವಳಿಯಲ್ಲಿ ಬಲೀಂದ್ರನ ಜಾಗರಣೆಗಾಗಿ ಬಿಂಗಿತಂಡ ಕಟ್ಟಿಕೊಂಡು ಮನೆ-ಮನೆಗೆ ಹಾಡಲು ಹೋಗುತ್ತಿರುವುದಾಗಿ ಹಿರಿಯರು ನುಡಿಯುತ್ತಾರೆ.

ಬಲ್ಲಾಳ ಬಲಿವಿಂದ್ರನ ರಾಜಾಕೋ ಇಂದೆಲ್ಲರ ಸಲಗಂತ್ರವನ

ಬಲ್ಲಾಳ ಬಂದಾನೆ ಬಾಗಿಲಲಿ ನಿಂದಾನೆ

ಕಲ್ಲಂತ ಮಳೆಯೇ ಕರೆದೊಯ್ಯೆ || ಬಲ್ಲಾಳ ಬಲಿವಿಂದ್ರನ ||

ಸ್ವಾತಿ ಮಳೆಮೆಟ್ಟಿ ನಕ್ಷತ್ರ ಕಾರಣ ಹುಲ್ಲು ಜಡ್ಡೆಲ್ಲಾ ಚಿಗುರ್ಯಾವೋ

ಹುಲ್ಲು ಜಡ್ಡೆಲ್ಲಾ ಚಿಗುರ್ಯಾವೋ ನಮ್ಮೊಡೆಯ ಬತ್ತು ಬರಡೆಲ್ಲಾ ಹಯನಾದೋ

ಬತ್ತು ಬರಡೆಲ್ಲಾ ಹಯನಾದೋ ನಮ್ಮೊಡೆಯ

ನೀ ಬಂದೇ ರಾಜ್ಯ ಶುಭನಾದೋ || ಬಲ್ಲಾಳ ಬಲಿವಿಂದ್ರನ ||

ಹೀಗೆ ಬಲಿ ಚಕ್ರವರ್ತಿಯ ಕಾಲದಲ್ಲಿ ಭೂಲೋಕ ಹಾಗೂ ಭೂಲೋಕಕ್ಕೆ ಬರುವಂತ ಸಂದರ್ಭದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆ ಬಿಂಗಿಪದದಲ್ಲಿ ಮೂಡಿಬರುತ್ತದೆ. ಅಷ್ಟಕ್ಕೂ ದೀಪಾವಳಿಯ ಸಂದರ್ಭದಲ್ಲಿ ಮನೆಯಲ್ಲಿರುವ ಮುತ್ತೈದೆಯರೆಲ್ಲ ಸೇರಿ ಬಲೀಂದ್ರನನ್ನು ಪ್ರತಿಷ್ಠಾಪಿಸಿ, ಶೃದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ‘ಇಂದುಳಿಯೋ ನಮ್ಮ ಪುರದಲ್ಲಿ ಬಲಿವಿಂದ್ರ ನಾರಿಯರೈದಾರೆ ಮನೆಯಲ್ಲಿ’ ಎಂದು ನಿನಗೆ ಕಜ್ಜಾಯ, ಹೋಳಿಗೆ ಹೀಗೆ ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸಲು ಮನೆಯಲ್ಲಿ ನಾರಿಯರಿದ್ದಾರೆ ಎಂದು ಬಿಂಗಿ ಹಾಡಿನ ಮೂಲಕ ಅಭಿವ್ಯಕ್ತಿಸುತ್ತಾರೆ ಎಂದು ಕಿಲವಳ್ಳಿ ಸಮೀಪದ ಹೇರೂರಿನ ಗಣಪತಿ ಜಟ್ಟು ಗೌಡ ಇವರು ವಿವರಿಸುತ್ತಾರೆ.

ದೊಣ್ಣೆ ಹಿಡಿದು ಬರುತ್ತಿದ್ದರು :

ಈ ಮೊದಲೆಲ್ಲ ಬಿಂಗಿ ಹಾಡು ಹೇಳುವವರು ಬಿಳಿ ಪಂಚೆ, ಬಿಳಿ ಅಂಗಿ ಹಾಗೂ ಕೋಟು ಧರಿಸಿ ಕೈಯಲ್ಲಿ ಒಂದು ಊರುಗೋಲಾಗಿ ದೊಣ್ಣೆ ಹಿಡಿಯುತ್ತಿದ್ದರು. ಇದು ಬಿಂಗಿಯರ ಪೋಷಾಕು ಎಂದು 72 ವರ್ಷದ ಬಿಂಗಿಹಾಡಿನಲ್ಲಿ ಪರಿಣಿತಿ ಹೊಂದಿದ ಕಿಲವಳ್ಳಿ ಸಮೀಪದ ಪದ್ಮನಗದ್ದೆಯ ತಮ್ಮಣ್ಣ ದ್ಯಾವಾ ಗೌಡ (ಹಾಲಪ್ಪ ಗೌಡ) ಇವರು ನುಡಿಯುತ್ತಾರೆ. ಬಿಂಗಿ ತಂಡ ಮನೆ-ಮನೆಗೆ ಬಿಂಗಿದೀಪ ಹಾಡಲು ಹೊರಟಾಗ ದಾರಿಯಲ್ಲಿ ಸಿಗುವ ಭೂತಪ್ಪ ಹಾಗೂ ಚೌಡೇಶ್ವರಿ ದೇವರು ತಮಗೆ ಯಾವ ತೊಂದರೆಯನ್ನೂ ನೀಡದಿರಲಿ ಎಂದು ಬೇಡಿಕೊಳ್ಳುತ್ತಾ ಬಿಂಗಿಪದದ ಮೂಲಕ ದೇವರುಗಳಿಗೆ ಸಮಾಧಾನ ಮಾಡುತ್ತಾರೆ. ಅದು ಈ ರೀತಿಯಾಗಿರುತ್ತದೆ – “ಈ ಊರಿನ ಭೂತಪ್ಪನಿಗೆ ಏನೇನೋ ಪೂಜೆಗಳೋ, ಹೆಡಗೆಯೊಳು ಹಣ್ಣು, ಹೇರಿನ ಕಾಯಿ, ಹೆಡಗೆ ತುಂಬಾ ಹೂವು, ಇದೆಲ್ಲ ಭೂತಪ್ಪನಿಗೆ ಪೂಜ್ಗಳು. ಈ ಊರಿನ ಚೌಡಮ್ಮನಿಗೆ ಏನೇನೋ ಪೂಜೆಗಳೋ, ಹೆಡಗೆಯೊಳು ಹಣ್ಣು, ಹೇರಿನ ಕಾಯಿ, ಹೆಡಗೆ ತುಂಬಾ ಹೂವು, ಇದೆಲ್ಲ ಭೂತಪ್ಪನಿಗೆ ಪೂಜ್ಗಳು” ಎಂದು ಹೇಳಿದಾಗ ಹಿಂಬದಿಯಲ್ಲಿ ಹಾಡಿಗೆ ಧ್ವನಿಗೂಡಿಸುವವರು “ಡುಂಸಾಲ್ಗೋ” ಎಂದು ಒಂದೇ ಧ್ವನಿಯಲ್ಲಿ ಕೂಗುತ್ತಾರೆ. ಮನೆ ಬಂದ ಕೂಡಲೇ “ದಪ್ಪಡ್ ದುಪ್ಪಡ್ ದೀಪಾಳ್ಗ್ಯೋ” – ಎಂದು ಕೂಗಿ ಮನೆಯವರನ್ನು ಎಚ್ಚರಗೊಳಿಸುತ್ತಾರೆ. ಪ್ರತಿ ಊರಿನಲ್ಲಿ ಸೂತಕದ ಮನೆಯನ್ನು ಹೊರತುಪಡಿಸಿ ಉಳಿದೆಲ್ಲ ಮನೆಗೆಳಿಗೆ ಕಡ್ಡಾಯವಾಗಿ ಬಿಂಗಿಪದವನ್ನು ಹಾಡಿಬರುವುದು ಪದ್ಧತಿ. ಇದು ಹೀಗೆ ಬೆಳಗಾಗುವ ತನಕ ಮುಂದುವರೆಯುತ್ತದೆ.

ತರಹೇವಾರಿ ಹಾಡುಗಳು :

ಬಿಂಗಿಪದದಲ್ಲಿ ಬಲೀಂದ್ರನು ಭೂಮಿಗೆ ಬರುವಾಗ ಭೂತಾಯಿಯ ಸಿರಿಸಂಪತ್ತಿನ ವರ್ಣನೆ, ಗೋವಿನ ಹಾಡು, ಉತ್ತರದೇವಿ ಹಾಡು, ಶ್ರೀಕವಲೆ ಪದ್ಯ ಮುಂತಾದ ಪೌರಾಣಿಕ ಹಾಡುಗಳ ಜೊತೆಗೆ ಎತ್ತಿಗೆ ಸಿಂಗಾರ ಮಾಡಲು ಬಳಸುವ ನಾರನ್ನು ಕಡಿಯಲು ಹೋಗುವುದು ಹಾಗೂ ಹಗ್ಗ ಮಾಡುವ ಪ್ರಕ್ರಿಯೆಯ ಕುರಿತು ಹಾಡು, ಕೆಂಚೆ ಪದ, ಲೇಗಿಣಿ ಪದ ಹಾಡಲಾಗುತ್ತದೆ. ಬಿಂಗಿ ಹಾಡಿಗೆ ಪ್ರತಿಯಾಗಿ ಮನೆಯವರು ಯಥಾನುಶಕ್ತಿಯಿಂದ ನೀಡಿದ ಹಣವನ್ನು ಕೆಲವು ತಂಡ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಅರ್ಪಿಸಿ ಉಳಿದ ಹಣವನ್ನು ತಮ್ಮೂರಿನ ಸಮಾರಾಧನೆಗಾಗಿ, ದೇವಸ್ಥಾನದ ಅಭಿವೃದ್ಧಿಗಾಗಿ ಬಳಸುತ್ತಾರೆ.

ಬಿಂಗಿ ದೀಪ :

ಬಿಂಗಿಪದ ಹಾಡುವಲ್ಲಿ ಬಿಂಗಿದೀಪಕ್ಕೆ ವಿಶೇಷವಾದ ಸ್ಥಾನವಿದೆ. ಒಂದೊಂದು ಸಮುದಾಯದವರು ಒಂದೊಂದು ರೀತಿಯಲ್ಲಿ ವ್ಯವಸ್ಥೆಯೊಂದಿಗೆ ಹಾಡಲು ತೆರಳುತ್ತಾರೆ. ಲಾಟೀನು, ಹಗಿರು ದಬ್ಬೆಯ ದುಂದಿ (ಸೂಡಿ) ಹಿಡಿದು ಹೋಗುತ್ತಾರೆ. ಅದರಲ್ಲಿ ಸಾಮಾನ್ಯವಾಗಿ ತಾಮ್ರದ ಅಥವಾ ಹಿತ್ತಾಳೆ ತಂಬಿಗೆಯನ್ನು ಹುರಿ ಹಗ್ಗದಲ್ಲಿ ಕಟ್ಟಿ, ಆ ಹಗ್ಗ, ದೀಪದ ಶಾಖಕ್ಕೆ ತೊಂದರೆಯಾಗದ ರೀತಿಯಲ್ಲಿ ಬಾಳೆದಿಂಡು, ಪಪ್ಪಾಯಿ ಎಲೆಯ ಕಾಂಡ ಅಥವಾ ವಾಟೆ ಗಿಡದ ಕಾಂಡದಿಂದ ರಕ್ಷಿಸುತ್ತಾರೆ. ಈ ತಂಬಿಗೆಯ ಮೇಲೆ ಹಣತೆಯ ದೀಪವನ್ನು ಇಡಲಾಗುತ್ತದೆ. ಬಿಂಗಿ ತಂಡ ಮನೆ-ಮನೆಗೆ ಹೊರಡುವುದಕ್ಕು ಮೊದಲು ಈ ದೀಪವನ್ನು ಮನೆಯ ತುಳಸಿ ಕಟ್ಟೆಯ ಮೇಲಿಟ್ಟು ದೀಪ ಬೆಳಗಿಸಿ, ದೇವರ ಬಿಂಗಿಪದವನ್ನು ಹಾಡಲಾಗುತ್ತದೆ. ನಂತರ ಊರ ದೇವಸ್ಥಾನದ ಮುಂದೆ ಹಾಡು ಹೇಳಿ ಮನೆ-ಮನೆಗೆ ತೆರಳಲಾಗುತ್ತದೆ. ಈ ದೀಪವನ್ನು ಒಬ್ಬ ವ್ಯಕ್ತಿ ಆ ದಿನದ ಬಿಂಗಿ ಹಾಡು ಸಂಪನ್ನಗೊಳ್ಳುವವರೆಗೂ ಹಿಡಿದಿರಬೇಕು. ಪ್ರತಿ ಮನೆಗೆ ಹಾಡಲು ಹೋದಾಗ ಮನೆಯವರು ಬಿಂಗಿದೀಪವನ್ನು ನೆಲದ ಮೇಲಿಡದೇ ಅದನ್ನು ಮಣೆಯ ಮೇಲಿಟ್ಟು ನಮಸ್ಕರಿಸುತ್ತಾರೆ. ಹಾಗೇ ಈ ದೀಪಕ್ಕೆ ಎಣ್ಣೆಯನ್ನು ಹಾಕಿ ಅದರಿಂದ ತಮ್ಮ ಮನೆಯ ದೀಪವನ್ನು ಬೆಳಗಿಸಿ ದೇವರ ಮುಂದೆ ಇಡುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಬಿಂಗಿ ತಂಡ ಊರೂರ ಸುತ್ತಿ ಬಂದು ಬಿಂಗಿದೀಪ ಎಲ್ಲಿಂದ ಹೊರಟಿತ್ತೋ ಪುನಃ ಅದೇ ಸ್ಥಳದಲ್ಲಿ ಇಡುತ್ತಾರೆ. ಮಾರನೇ ದಿನ ಇಲ್ಲಿಂದಲೇ ದೀಪ ಬೆಳಗಿಸಿ ತೆಗೆದುಕೊಂಡು ಹೋಗುವುದು ಪದ್ಧತಿ.

ಈ ರೀತಿಯಾಗಿ ಸಾಹಿತ್ಯಾಧಾರವಿಲ್ಲದ ‘ಬಿಂಗಿಪದ’ ಎನ್ನುವ ಜಾನಪದ ಕಲೆಯು ಈ ಭಾಗದಲ್ಲಿ ದೀಪಾವಳಿ ಹಬ್ಬದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

‘ಬಿಂಗಿಪದ’ದ ಕುರಿತು ಹೆಚ್ಚಿನ ಮಾಹಿತಿ ಹಾಗೂ ‘ಬಿಂಗಿಪದ’ಗಳಿಗಾಗಿ ಮೇಲಿನ ಪರದೆಯ ಮೇಲೆ ಕ್ಲಿಕ್ ಮಾಡಿ.