ಪಂಜರ ಶಾಲೆ – ಪಾಠ – 5

ಬಿ. ವಿ. ಕಾರಂತ

ಪ್ರವೇಶ : “ಪಂಜರದೊಳಗಿಟ್ಟು ನಯ, ವಿನಯ ಕಲಿಸಿ” ಎಂಬ ರಾಜಾಜ್ಞೆ, ಸ್ವತಂತ್ರ, ಸ್ವಚ್ಛಂದವಾಗಿ ಬದುಕಿದ ಹಾಡುಹಕ್ಕಿಯ ತೊಳಲಾಟ ಈ ನಾಟಕದಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಸಿಕ್ಕ ಗಿಳಿಯನ್ನು ರಾಜನು ಬಂಧಿಸಿ ಪಂಜರದೊಳಗಿಟ್ಟು ಬಲವಂತದ ಶಿಕ್ಷಣ, ಸಂಸ್ಕೃತಿ ಕಲಿಸುವ ಆದೇಶ ಮಾಡುತ್ತಾನೆ. ಯಾರನ್ನೇ ಆಗಲಿ ಪಂಜರದೊಳಗಿಟ್ಟು ಒತ್ತಡದಿಂದ ಏನನ್ನು ಕಲಿಸಲು ಸಾಧ್ಯವಿಲ್ಲ ಎಂಬುದು ಈ ನಾಟಕದ ಆಶಯವಾಗಿದೆ.

(ವಸಂತದ ವೈಭವ; ರಾಜೋದ್ಯಾನ, ಹಿನ್ನೆಲೆಯಲ್ಲಿ ಆಲಾಪ, ಅನಂತರ-ಗಿಳಿವಿಂಡು ವಿಹರಿಸಿ ಹೊರಡಲು ಸಿದ್ಧವಾಗುತ್ತಿರುವಷ್ಟರಲ್ಲಿ ಒಂದು ಗಿಳಿಮರಿ ಹಣ್ಣು ತೂಗಿ ಬಾಗಿದ ಗಿಡವೊಂದನ್ನು ಕಂಡು ಸಂತೋಷದಿಂದ ಹುಚ್ಚೆದ್ದು ಕೂಗುವುದು.)

ಗಿಳಿಮರಿ : ಬನ್ನಿ ಬನ್ನಿ, ಮಧುಫಲ ತಿನ್ನಿ. ಬೇಗ, ಹಾರಿ ಬನ್ನಿ.
[ಅಲ್ಲಿವರೆಗೆ ನಿದ್ರೆಮಾಡುತ್ತಿದ್ದ ಉದ್ಯಾನ ರಕ್ಷಕರು ಕೂಗಿಗೆ ಎಚ್ಚೆತ್ತು ಓಡಿ ಬರುವರು.]
ರಕ್ಷಕರು : ಹಿಡಿಯಿರಿ, ಬಡಿಯಿರಿ, ಹಣ್ಣುಗಳ್ಳರನ್ನು ಬಡಿದೋಡಿಸಿರಿ.
[ಗಿಳಿವಿಂಡು ಹೆದರಿ ಚೆಲ್ಲಾಪಿಲ್ಲಿ ಓಡತೊಡಗುವುವು. ರಕ್ಷಕರು ಕೋಲಿನಿಂದ ನೆಲಬಡಿಯುತ್ತ ಅಟ್ಟಿಸುವರು.]
ರಕ್ಷಕ 1 : ಹಾಂ, ಸದೆಬಡಿಯಿರಿ, ಬಿಡಬೇಡಿ. ಒಂದು ಪಿಳ್ಳೆಯೂ ಹಾರಿ ಹೋಗದಿರಲಿ.
[ರಕ್ಷಕರ ಕೈಗಾಗಲೀ ಬಲೆಗಾಗಲೀ ಸಿಕ್ಕದೆ ಗಿಳಿಗಳು ತಪ್ಪಿಸಿಕೊಂಡು ಹಾರಿ ಹೋಗುವುವು. ರಕ್ಷಕರು ಮೇಲುಸಿರು ಬಿಡುತ್ತ ಕೂತುಕೊಳ್ಳುವರು. ಮರಿಗಿಳಿಯೊಂದು ಮಾತ್ರ ಪರಿವೆಯೇ ಇಲ್ಲದೆ ಹಣ್ಣು ತಿನ್ನುವುದರಲ್ಲಿ ಮಗ್ನವಾಗಿದೆ.]
ಗಿಳಿಮರಿ : ಅಣ್ಣ, ಅಮ್ಮ, ಬನ್ನಿ ಬನ್ನಿ. ಟೇಂ ಟೇಂ. ಚಿಕ್ಕಪ್ಪ ದೊಡ್ಡಪ್ಪ, ಹಣ್ಣು ತಿನ್ನಿ. ಟೇಂ ಟೇಂ. ಎಲ್ಲಾ ಹಣ್ಣೂ ನಮ್ದೇ ನಮ್ದೇ ಎಲ್ಲಾ ಹಣ್ಣು…….. ಟೇಂ ಟೇಂ.
[ದಣಿದು ಕೂತ ರಕ್ಷಕರ ಕಿವಿ ನೆಟ್ಟಗಾಗುವುದು, ಹುಡುಕಲು ಪ್ರಾರಂಭಿಸುವರು.]
ರಕ್ಷಕ 1 : ಹಣ್ಣುಗಳ್ಳ ಇಲ್ಲೇ ಎಲ್ಲೋ ಇದ್ದಾನೆ, ಹುಡುಕೋ ಹುಡುಕೋ. [ಹುಡುಕುವರು]
ಗಿಳಿಮರಿ : ಟೇಂ ಟೇಂ… ಬನ್ನಿ ಬನ್ನಿ.
ರಕ್ಷಕ 2 : ಅಕೋ! ತೋಟಗಳ್ಳ ಕೊನೆಗೂ ಸಿಕ್ಕ! ಹಿಡಿಯೋ ಬಡಿಯೋ!
[ರಕ್ಷಕರು ಗಿಳಿಯನ್ನು ಸುತ್ತುಗಟ್ಟುವರು.]
ರಕ್ಷಕ 1 : ರಾಜನ ತೋಟ ಹಾಳುಮಾಡ್ತೀ?
ರಕ್ಷಕ 2 : ದೊರೇ ತೋಟದ ಹಣ್ಣು ತಿನ್ತೀ?
ರಕ್ಷಕ 1 : ಇವತ್ತು ನಿನಗೆ ಕೋಲುಪೂಜೆ!
ರಕ್ಷಕ 2 : ಕಿತ್ತುಬಿಡೋನ ರೆಕ್ಕೆ ಪುಕ್ಕ!
ರಕ್ಷಕ 1 : ಮೂರ್ಖರ ಮೂರ್ಖ ಗಿಳಿಯಪ್ಪ!
ರಕ್ಷಕ 2 : ಹೆಡ್ಡರ ಹೆಡ್ಡ ತುಡುಗಪ್ಪ!
ರಕ್ಷಕ 1 : ಮುಗೀತು ಇವತ್ತು ನಿನ್ನ ಕಥೆ!
ರಕ್ಷಕ 2 : ತಿನ್ನೋದು ನಿಲ್ಸೋ ಗಿಳಿಪಿಳ್ಳೆ !
ರಕ್ಷಕ 1 : ಗೊತ್ತೇ ನಿನಗೆ ತೋಟ ಯಾರದು?
ರಕ್ಷಕ 2 : ನಿಮ್ಮ ತಾತಂದೇ?
ರಕ್ಷಕ 1 : ನಿಮ್ಮಪ್ಪಂದೇ?
ರಕ್ಷಕ 2 : ನಮ್ಮ ರಾಜಂದು !
ರಕ್ಷಕ 1 : ಈ ಮರ ಈ ಗಿಡ, ಹೂವು ಹಣ್ಣು …
ರಕ್ಷಕ 2 : ಎಲ್ಲಾ ನಮ್ಮ ರಾಜಂದು !
ರಕ್ಷಕ 1 : ಎಂಥಾ ರಾಜ ಗೊತ್ತೇ ನಿಂಗೆ ? ರಾಜಾಧಿರಾಜ
ರಕ್ಷಕ 2 : ಸಾವಿರ ಸಾವಿರ ಸೇನೆಯ ರಾಜ!
ಗಿಳಿಮರಿ : ಬನ್ರೋ, ಬನ್ರೊ ನಮ್ಮದು ಹಣ್ಣು, ಹಣ್ಣು ತಿನ್ನೋವನದೇ ಹಣ್ಣಿನ ತೋಟ!
ರಕ್ಷಕ 1 : ಏ ಮರಿಪಿಳ್ಳೆ, ರಾಜನ ಭಯ ಇಲ್ವೇನೋ ನಿಂಗೆ.
ರಕ್ಷಕ 2 : ರಾಜಂದು ಹೋಗ್ಲಿ, ನಮ್ಮ ಭಯಾನೂ ಇಲ್ಲೇನೋ.
ರಕ್ಷಕ 1 : ಹೋಗ್ಲಿ. ಈ ಕೋಲಿನ ಭಯ ?
ರಕ್ಷಕ 2 : ಹಿಡಿಯೋ, ಬಲೆ ಹಾಕೋ,
[ಬಲೆ ಬೀಸುವರು, ಗಿಳಿಮರಿ ಬಲೆಯೊಳಗೆ ಸಿಕ್ಕಿ ಬೀಳುವುದು]
[ನೇಪಥ್ಯದಲ್ಲಿ ವಂದಿಮಾಗಧರ ಧ್ವನಿ, ಕ್ರಮೇಣ ಅವರು ರಂಗವನ್ನು ಪ್ರವೇಶಿಸುವರು.]

ವಂದಿಗಳು : ಸಾವಧಾನ, ಸಾವಧಾನ…. ಮಹಾಕರುಣಾಳು ಖಗಮೃಗ ಕೃಪಾಳು ಗಿಡಮರದಯಾಳು ವಿದ್ಯಾವಂತ ಪ್ರಜ್ಞಾವಧಾನಿ ಕಣಕಣಕೂ ವಿದ್ಯಾದಾನಿ ವಾಚಾಳಪುರವರಾಧೀಶ್ವರ ರಾಜಾಧಿರಾಜ ರಾಜಮಾರ್ತಾಂಡರು ದಯಮಾಡಿಸುತ್ತಿದ್ದಾರೆ, ಭೋ ಪರಾಕ್….
[ಗಿಳಿಮರಿ ಬಿಡಿಸಿಕೊಳ್ಳಲು ಒದ್ದಾಡುತ್ತಿದೆ. ಟೇಂ ಟೇಂ ಎಂದು ಕಿರಿಚುತ್ತದೆ. ಅಷ್ಟರಲ್ಲಿ ರಾಜ, ಮಂತ್ರಿ, ರಾಜನ ಅಳಿಯ ಪ್ರವೇಶಿಸುವರು.]
ಗಿಳಿಮರಿ : ಟೇಂ…ಟೇಂ…
ರಾಜ : (ಆಶ್ಚರ್ಯದಿಂದ) ಇದೇನು ಒದರುತ್ತಿದೆ?
ಗಿಳಿಮರಿ : ಟೇಂ…..ಟೇಂ…..
ರಾಜ : ಯಾವ ಭಾಷೆ ಮಾತಾಡ್ತಾ ಇದೆ? ಪ್ರಾಕೃತ ಭಾಷೆ? ಪಿಶಾಚ ಭಾಷೆ?
ಗಿಳಿಮರಿ : ಟೇಂ…
ರಾಜ : (ರೇಗಿ, ಮಂತ್ರಿಯ ಕಡೆ) ಏನಿದರ ಅರ್ಥ?
ವಂದಿಗಳು : ಟೇಂ… (ಮಂತ್ರಿ ಸನ್ನೆ ಮಾಡಲು ಗಪ್ಪನೆ ಬಾಯಿಮುಚ್ಚುವರು.)
ಮಂತ್ರಿ : ರಾಜಾಧಿರಾಜ, ಇದೊಂದು ಗಿಳಿಮರಿ. ಕಾಡುಜಾತಿ, ಅನಾಗರಿಕ, ವಸಂತಕಾಲಕ್ಕೆ ಮದ ಹತ್ತಿ ರಾಜತೋಟಕ್ಕೆ ನುಗ್ಗಿ ಹಣ್ಣುಹಂಪಲುಗಳನ್ನು ನಾಶಪಡಿಸಿದೆ.
ರಾಜ : ಇದಕ್ಕೆ ಮಾತು ಬರುತ್ತದೆಯೆ?
ಮಂತ್ರಿ : ಇಲ್ಲ.
ರಾಜ : ಹಾಡು ಬರುತ್ತದೆಯೆ?
ಮಂತ್ರಿ : ಇಲ್ಲ.
ರಾಜ : ಓದು ಬರುತ್ತದೆಯೆ?
ಮಂತ್ರಿ : ಇಲ್ಲ.
ರಾಜ : ನೃತ್ಯ ಬರುತ್ತದೆಯೆ?
ಮಂತ್ರಿ : ಇಲ್ಲ.
ರಾಜ : ತರ್ಕ, ಶಾಸ್ತ್ರ, ಪುರಾಣ, ವ್ಯಾಕರಣ?
ಮಂತ್ರಿ : ಯಾವುದೂ ಬರೋದಿಲ್ಲ.
ರಾಜ : ಮತ್ತೇನು ಬರುತ್ತದೆ? ಜೀವನವೆಲ್ಲ ಏನು ಮಾಡುತ್ತದೆ?
ಗಿಳಿಮರಿ : ಟೇಂ…ಟೇಂ…

ಮಂತ್ರಿ : ಮಹಾಪ್ರಭು, ಈ ಗಿಳಿ ಅರಣ್ಯವಾಸಿ, ನಿರಕ್ಷರಕುಕ್ಷಿ; ತೀರಾ ಅಸಂಸ್ಕೃತ. ಸಂಗೀತವಿಲ್ಲ, ನೃತ್ಯವಿಲ್ಲ, ಗದ್ಯಪದ್ಯದ ಭೇದ ಗೊತ್ತಿಲ್ಲ, ಒಂದು ಎರಡರ ಮಗ್ಗಿ ಕೂಡಾ ಬರೋದಿಲ್ಲ, ಇದಕ್ಕೆ ಬರೋದು ಒಂದೇ- ಗಿಡಮರ ಹತ್ತಿ ಕೊಂಬೆ ಮುರಿದು ಹಣ್ಣು ತಿನ್ನೋದು, ಉದುರಿಸೋದು, ಆಮೇಲೆ….
ಗಿಳಿಮರಿ : ಟೇಂ…ಟೇಂ…
ಮಂತ್ರಿ : ಹಾಗನ್ನೋದು.
ರಾಜ : ಪಾಪ ಪಾಪ!
[ರಕ್ಷಕರು, ವಂದಿಗಳು ‘ಅಯ್ಯೋ ಪಾಪ’ ಎಂದು ದನಿಗೂಡಿಸುವರು.]
ಗಿಳಿಮರಿ : ಟೇಂ…ಟೇಂ…
ರಾಜ : ಛೀ ಛೀ ಛೀ! ಬರೇ ಹಣ್ಣು ತಿನ್ನೋದೊಂದೇ ಗೊತ್ತೆ ? ಮಹಾವಾಚಾಳ ನಗರೋದ್ಯಾನದಲ್ಲಿ ಬಂದು ಹಣ್ಣು ತಿನ್ನೋದು ಮಾತ್ರ ಗೊತ್ತೆ? ವಂದಿಮಾಗಧರೆ-
ವಂದಿಗಳು : ಮಹಾಕರುಣಾಳು ಖಗಮೃಗಕೃಪಾಳು ಗಿಡಮರದಯಾಳು ವಿದ್ಯಾವತಂಸ ಪ್ರಜ್ಞಾವಧಾನಿ ಕಣಕಣಕೂ ವಿದ್ಯಾದಾನಿ ಮಹಾವಾಚಾಳಪುರ
ರಾಜ : ಈ ಸಭ್ಯ ಸುಶಿಕ್ಷಿತ ನಾಗರಿಕ ರಾಜ್ಯದಲ್ಲಿ ಈ ಅನಾಗರಿಕ ಪಕ್ಷಿ! ರಾಜ ತೋಟದಲ್ಲಿ ನಿರಕ್ಷರ ಕುಕ್ಷಿ ! ಮತ್ತೆ ಇದಕ್ಕೆ ನೀವೇ ಸಾಕ್ಷಿ !… ಮಂತ್ರಿ, ಈ ಅಸಭ್ಯ ಪಕ್ಷಿಯನ್ನು ರಾಜಶಾಲೆಗೆ ಸೇರಿಸತಕ್ಕದ್ದು. ರಾಜಾಧ್ಯಾಪಕರಿಂದ ಇದಕ್ಕೆ ಶಿಕ್ಷಣ ಕೊಡಿಸು. ಈ ಅನಾಗರಿಕ ಶುಕಪಕ್ಷಿಯ ಆದಿಮ ಪ್ರವೃತ್ತಿಗಳನ್ನು ಸುಧಾರಿಸಿ ಆಧುನಿಕ ಮಾಡತಕ್ಕದ್ದು.
ಮಂತ್ರಿ : ಅಪ್ಪಣೆ ಪ್ರಭು.
ರಾಜ : ಇದು ಸಭ್ಯತೆ ಕಲಿಯಲಿ, ಕಾಡುತನ ಮರೆಯಲಿ. ಶಾಸ್ತ್ರ ವ್ಯಾಕರಣ ಕಲಿತು ಸುಶಿಕ್ಷಿತವಾಗಲಿ. ತಾನು ಸುಸಂಸ್ಕೃತವಾಗಲಿ. ತಾನು ಸುಸಂಸ್ಕೃತನಾಗಿ ಕಾಡಿನ ಉಳಿದ ಶುಕಪಕ್ಷಿಗಳನ್ನು ಸಭ್ಯ ಮಾಡಲಿ.
ಮಂತ್ರಿ : ಅಪ್ಪಣೆ ಪ್ರಭು.

ಅಳಿಯ : ಮಹಾರಾಜ, ರಾಜಮಾವ, ನನ್ನದೊಂದು ನಮ್ರ ನಿವೇದನೆ; ಇದನ್ನು ರಾಜಶಾಲೆಗೆ ಸೇರಿಸುವ ಮೊದಲು ಒಂದು ಮುಖ್ಯ ತಥ್ಯವನ್ನು ಕಂಡುಹಿಡಿಯಬೇಕು. ಇದರ ಅಸಭ್ಯತೆಗೆ ಮತ್ತು ಅವಿದ್ಯೆಗೆ ಮೂಲಕಾರಣವನ್ನು ಕಂಡುಹಿಡಿಯಬೇಕು. ಈ ಗಿಳಿಮರಿ ತಿನ್ನೋದೇನು, ಕುಡಿಯೋದೇನು, ಇದರ ಆವರಣ ಎಂಥದು, ಇದು ಇರೋದೆಲ್ಲಿ, ಹಾರೋದೆಲ್ಲಿ, ಇದರ ರೆಕ್ಕೆ ಪುಕ್ಕ ಕೊಕ್ಕುಗಳ ಉದ್ದಗಲವೆಷ್ಟು, ಭಾರವೆಷ್ಟು-ಈ ಅಂಶಗಳ ಬಗ್ಗೆ ದೀರ್ಘಸಂಶೋಧನೆ ನಡೆಯಬೇಕು.


ಮಂತ್ರಿ : ಪ್ರಭು, ಯುವರಾಜ ಅಳಿಯದೇವರು ಮಹಾ ಪ್ರತಿಭಾಶಾಲಿಗಳು, ದೇಶಕೋಶ ಸುತ್ತಿ ಬಂದವರು. ವಿದೇಶಗಳಿಂದ ಪದವಿಗಳನ್ನು ಹೊತ್ತು ತಂದವರು. ಕಾಂಭೋಜದೇಶದಲ್ಲಿ ಪ್ರಾಣಿಶಾಸ್ತ್ರ, ಪಕ್ಷಿಶಾಸ್ತ್ರ ಪಾರಂಗತರಾದವರು. (ದನಿ ತಗ್ಗಿಸಿ) ಸದ್ಯ ನಿರುದ್ಯೋಗಿಗಳು. ಅದಕ್ಕೇ ಒಂದು ವಿನಂತಿ-ಅಳಿಯರಾಜರಿಗೇ ಶುಕಶಿಕ್ಷಣದ ಭಾರವನ್ನು ವಹಿಸಿಬಿಡಬಹುದು.
ರಾಜ : ವಿನಂತಿಯನ್ನು ಸ್ವೀಕರಿಸಿದ್ದೇವೆ. ಅಳಿಯರಾಜ, ಇಂದಿನಿಂದ ನೀನು ಶುಕಶಿಕ್ಷಣದ ಮಂತ್ರಿ.
ಅಳಿಯ : ಮಹಾರಾಜ, ರಾಜಮಾವ, ಇನ್ನೊಂದು ವಸಂತ ಬರುವುದರೊಳಗಾಗಿ ಈ ಕಾಡುಗಿಳಿ ತನ್ನ ವನ್ಯವ್ಯವಹಾರಗಳನ್ನು ಮರೆತಿರಬೇಕು, ಸಭ್ಯ ಸುಶಿಕ್ಷಿತ ಸುಸಂಸ್ಕೃತವಾಗಿರಬೇಕು. ಇದಕ್ಕಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ಒಂದು ಶುಕ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಬೇಕು.
ರಾಜ : ನಿನ್ನ ಕಾರ್ಯದಲ್ಲಿ ಜಯವಾಗಲಿ. ಮಂತ್ರಿ, ಡಂಗುರ ಹೊಡೆಯಿಸು. ರಾಜ್ಯದ ಮೂಲೆ ಮೂಲೆಯ ಪ್ರತಿಯೊಬ್ಬ ಪ್ರಜೆಗೂ ಗೊತ್ತಾಗಲಿ-ಅಲ್ಪವಾದ ಒಂದು ಪಕ್ಷಿಯ ಶಿಕ್ಷಣದಲ್ಲೂ ರಾಜರ ಆಸಕ್ತಿ ಎಷ್ಟಿದೆ ಎನ್ನುವುದು. ನಮ್ಮ ಪುತ್ರಿಯೂ ಸಂತುಷ್ಟಳಾಗಲಿ, ಅಳಿಯರಾಜ ಶುಕಶಿಕ್ಷಣ ಮಂತ್ರಿಯಾದನೆಂದು.
[ರಾಜ ವಂದಿಗಳ ಕಡೆ ನೋಡುತ್ತಾನೆ. ಅವರು ಪುನಃ ಪರಾಕು ಹೇಳುತ್ತ ನಿರ್ಗಮಿಸುತ್ತಾರೆ.]

ಕೃತಿಕಾರರ ಪರಿಚಯ

ಬಿ. ವಿ. ಕಾರಂತ : ಬಾಬುಕೋಡಿ ವೆಂಕಟರಮಣ ಕಾರಂತ ಅವರು ಕ್ರಿ. ಶ. 1928 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದಲ್ಲಿ ಜನಿಸಿದರು. ತಂದೆ ಬಾಬುಕೋಡಿ ನಾರಾಯಣಪ್ಪಯ್ಯ, ತಾಯಿ ಲಕ್ಷ್ಮಮ್ಮ. ಬಾಲ್ಯದಲ್ಲಿ ನಾಟಕದ ಬಗೆಗೆ ಬಹಳ ಆಸಕ್ತಿಯುಂಟಾಗಿ ಗುಬ್ಬಿ ನಾಟಕ ಕಂಪನಿಗೆ ಸೇರಿದರು. ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಈಡಿಪಸ್, ಪಂಜರಶಾಲೆ, ಗೋಕುಲ ನಿರ್ಗಮನ, ಸತ್ತವರ ನೆರಳು, ಜೋಕುಮಾರಸ್ವಾಮಿ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವ ರಿಗೆ ಪದ್ಮಶ್ರೀ ಪ್ರಶಸ್ತಿ. ಕಾಳಿದಾಸ ಸಮ್ಮಾನ್, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ರವಿಂದ್ರನಾಥ ಟಾಗೋರ್ ಅವರ ಈ ಬಂಗಾಳಿ ನಾಟಕವನ್ನು ‘ಪಂಜರಶಾಲೆ’ ಎಂದು ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ್ದಾರೆ.

ಪದಗಳ ಅರ್ಥ

ಖಗ – ಪಕ್ಷಿ
ತರ್ಕ – ಆರು ದರ್ಶನಗಳಲ್ಲಿ ಒಂದು
ಪುರಾಣ – ಹಿಂದಿನ ಕಾಲದಲ್ಲಿ ನಡೆದುಹೋದ ಕಥೆ
ಪ್ರಜ್ಞಾವಧಾನಿ – ತಿಳಿವಳಿಕೆ ಹಾಗೂ ಸ್ಮರಣೆ ಶಕ್ತಿಯುಳ್ಳವನು
ಮಧುಫಲ – ಸಿಹಿಯಾದ ಹಣ್ಣು
ಮೃಗ – ಪ್ರಾಣಿ
ರಕ್ಷಕರು – ಕಾಪಾಡುವವರು
ವಿದ್ಯಾವತಂಸ – ವಿದ್ಯಾವಂತ
ವಂದಿಮಾಗಧರು – ಸ್ತುತಿ ಪಾಠಕರು, ಹೊಗಳುಭಟ್ಟರು.
ಶುಕ – ಗಿಳಿ

ಸಂವೇದ ವಿಡಿಯೋ ಪಾಠಗಳು

Samveda – 5th – Kannada – Panjara Shaale (Part 1 of 2)

Samveda – 5th – Kannada – Panjara Shaale (Part 2 of 2)

ಪೂರಕ ವಿಡಿಯೋಗಳು

KANNADA: Panjara Shale

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ – ವಿಭಕ್ತಿ ಪ್ರತ್ಯಯ

ಅ. ಪ್ರತ್ಯಯಗಳ ಪರಿಚಯ ಪ್ರತ್ಯಯಗಳು ನಾಮಪ್ರಕೃತಿಗೆ (ಮೂಲ ಪದಕ್ಕೆ) ನಿರ್ದಿಷ್ಟ ಅರ್ಥ ಬರುವಂತೆ ಮಾಡುತ್ತವೆ. ಪ್ರತ್ಯಯಗಳನ್ನು ಸ್ವತಂತ್ರವಾಗಿ ಬಳಸಲು ಬರುವುದಿಲ್ಲ. ಹಾಗೆ ಬಳಸಿದರೆ ಅರ್ಥವೂ ಬರುವುದಿಲ್ಲ. ವಾಕ್ಯ ರಚನೆಯ ಸಂದರ್ಭದಲ್ಲಿ ನಾಮಪ್ರಕೃತಿಗಳು ಪಡೆಯಬೇಕಾದ ಅರ್ಥ ವಿಶೇಷಗಳನ್ನು ತಂದುಕೊಡಲು ಸಹಾಯ ಮಾಡುವ ಕಾರಕಗಳೇ ಪ್ರತ್ಯಯಗಳು. ಇವುಗಳನ್ನು ವಿಭಕ್ತಿ ಪ್ರತ್ಯಯವೆಂದೂ ಕರೆಯುತ್ತಾರೆ.
‘ಮನೆ’ ಎಂಬುದು ನಾಮಪದದ ಮೂಲರೂಪ. ಇದನ್ನು ನಾಮಪ್ರಕೃತಿ ಎನ್ನುವರು. ಈ ನಾಮಪ್ರಕೃತಿಗೆ ಪ್ರತ್ಯಯಗಳು ಸೇರಿದಾಗ ‘ಪದ’ ಆಗುತ್ತದೆ.
ಉದಾ : ಮನೆ + ಉ = ಮನೆಯು, ಮನೆ + ಅಲ್ಲಿ = ಮನೆಯಲ್ಲಿ

ಆ. ವಿಭಕ್ತಿ ಪ್ರತ್ಯಯ

ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಏನಾಗುವುದು ಎಂಬುದನ್ನು ಗಮನಿಸೋಣ.

Vibhakthi pratyayagalu ವಿಭಕ್ತಿ ಪ್ರತ್ಯಯಗಳು

KGC-3 | Kannada Vibhakti Pratyayagalu | ವಿಭಕ್ತಿ ಪ್ರತ್ಯಯಗಳು | Short lesson

ಓದಿಗೆ ಮನ್ನಣೆ

‘ಪಂಜರ ಶಾಲೆ’ ಪಾಠವನ್ನು ಧ್ವನಿಯ ಏರಿಳಿತದೊಂದಿಗೆ ಓದಿರಿ.

PANJARA SHAALE (ಪಂಜರ ಶಾಲೆ), 5TH STANDARD, KANNADA

ಪಂಚತಂತ್ರದ ಕಥೆಗಳನ್ನು ಓದಿರಿ.

Panchatantra Story in Kannada | The Four Friends Deer, Crow, Tortoise and Rat | ನಾಲ್ಕು ಸ್ನೇಹಿತರು

ಚಂದ್ರನ ಕಳ್ಳತನ | Kannada Stories | Kannada Moral Stories | Kannada Kathe | Magic Land

ಶುಭನುಡಿ

ಕಲಿಯಲು ಸ್ವತಂತ್ರ ಇರಬೇಕು. ಒತ್ತಡ ಇರಬಾರದು.
ಆಡಿ ಕಲಿ, ಹಾಡಿ ಕಲಿ, ನೋಡಿ ಕಲಿ, ಮಾಡಿ ಕಲಿ.