ನಮ್ಮ ಹೆಮ್ಮೆಯ ರಾಜ್ಯ – ಕರ್ನಾಟಕ – ಅಧ್ಯಾಯ-2
ಪಾಠದ ಪರಿಚಯ
ನಮ್ಮ ನುಡಿ ಕನ್ನಡ. ನಮ್ಮ ನಾಡು ಕರ್ನಾಟಕ. ನಮ್ಮ ನಾಡಿನ ಚರಿತ್ರೆಯ ಬಗ್ಗೆ, ನಮ್ಮ ನಾಡಿನ ಪ್ರಾಕೃತಿಕ ಸಂಪನ್ಮೂಲಗಳ ಬಗ್ಗೆ, ನಮ್ಮ ಕೃಷಿ, ಉದ್ದಿಮೆ, ವ್ಯಾಪಾರ ಮುಂತಾದ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅದಕ್ಕಾಗಿ ಈ ಅಧ್ಯಾಯದಲ್ಲಿ ನಮ್ಮ ನಾಡಾದ ಕರ್ನಾಟಕದ ನಾಲ್ಕು ಕಂದಾಯ ವಿಭಾಗಗಳ ಬಗ್ಗೆ ಪರಿಚಯ ಮಾಡಿಕೊಡಲಾಗುವುದು. ಕರ್ನಾಟಕ ಏಕೀಕರಣದ ಬಗ್ಗೆ, ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ನೀವು ಈಗಾಗಲೇ ಹಿಂದಿನ ಅಧ್ಯಾಯಗಳಲ್ಲಿ ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೀರಿ. ನಮ್ಮ ನಾಡಿನ ನದಿಗಳು, ನಾವು ಬೆಳೆಯುವ ಬೆಳೆಗಳು, ನಾವು ಉತ್ಪಾದಿಸುವ ಸರಕುಗಳು, ನಮ್ಮ ಬ್ಯಾಂಕುಗಳು, ನಮ್ಮ ನೀರಾವರಿ ಯೋಜನೆಗಳು, ನಮ್ಮ ಅರಣ್ಯಗಳು, ನಮ್ಮ ವನ್ಯಪ್ರಾಣಿಗಳು ಮುಂತಾದ ಸಂಗತಿಗಳ ಬಗ್ಗೆ ಇಲ್ಲಿ ವಿವರಿಸಲಾಗುವುದು. ಆಡಳಿತದ ಅನುಕೂಲಕ್ಕೆ ನಮ್ಮ ರಾಜ್ಯವನ್ನು ನಾಲ್ಕು ಕಂದಾಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ವಿಭಾಗಗಳ ಬಗ್ಗೆ ಇಲ್ಲಿ ವಿವರಿಸಲಾಗುವುದು.
ಕರ್ನಾಟಕದಲ್ಲಿ ಆಡಳಿತ ವಿಭಾಗಗಳು
ನಮ್ಮ ನಾಡು ಕರ್ನಾಟಕ. ನಮ್ಮ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಚರಿತ್ರೆಯಿದೆ. ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ಪ್ರಾಚೀನ ಶಿಲಾಯುಗದ ಕೇಂದ್ರಗಳಿವೆ. ಚರಿತ್ರೆಕಾರರು ಅಂತಹ ಸ್ಥಳಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಗುರುತಿಸಿದ್ದಾರೆ. ಈ ಅಧ್ಯಾಯದಲ್ಲಿ ನಮ್ಮ ರಾಜ್ಯದ ನಾಲ್ಕು ವಿಭಾಗಗಳ ಬಗ್ಗೆ ಮತ್ತು ಅವುಗಳ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.
ಬ್ರಿಟಿಷರ ಆಡಳಿತ ಕಾಲದಲ್ಲಿ ವಿವಿಧ ಜಿಲ್ಲೆಗಳನ್ನು ರೂಪಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕವಾಗಿವೆ ಮತ್ತು ಕೆಲವು ವಿಸ್ತರಣೆಗೊಂಡಿವೆ.
ಉದಾಹರಣೆಗೆ ಇಂದು ಯಾವುದನ್ನು ವಿಜಯಪುರ ಎಂದು ಕರೆಯುತ್ತಿದ್ದೇವೆಯೋ ಅದರ ಜಿಲ್ಲಾ ಕೇಂದ್ರ ಕಲಾದಗಿಯಾಗಿತ್ತು. ಮತ್ತೆ ಅದನ್ನು ವಿಜಯಪುರಕ್ಕೆ ಬದಲಾಯಿಸಲಾಯಿತು. ಸ್ವಾತಂತ್ರ್ಯಾ ನಂತರ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಆಡಳಿತದ ಅನುಕೂಲಕ್ಕೆ ನಾಲ್ಕು ಕಂದಾಯ ವಿಭಾಗಗಳನ್ನು ರೂಪಿಸಲಾಗಿದೆ. ಅವುಗಳು ಹೀಗಿವೆ: ಬೆಂಗಳೂರು ವಿಭಾಗ (ಒಂಬತ್ತು ಜಿಲ್ಲೆಗಳು), ಮೈಸೂರು ವಿಭಾಗ (ಎಂಟು ಜಿಲ್ಲೆಗಳು), ಬೆಳಗಾವಿ ವಿಭಾಗ (ಏಳು ಜಿಲ್ಲೆಗಳು) ಮತ್ತು ಕಲಬುರಗಿ ವಿಭಾಗ (ಏಳು ಜಿಲ್ಲೆಗಳು). ಒಟ್ಟು ಮೂವತ್ತೊಂದು ಜಿಲ್ಲೆಗಳು. ಪ್ರತಿ ಜಿಲ್ಲೆಗೆ ಒಬ್ಬರು ಜಿಲ್ಲಾಧಿಕಾರಿಗಳಿರುತ್ತಾರೆ (ಡೆಪ್ಯೂಟಿ ಕಮೀಷನರ್). ಅದೇ ರೀತಿಯಲ್ಲಿ ವಿಭಾಗಕ್ಕೆ ವಿಭಾಗೀಯ ಅಧಿಕಾರಿಯಿರುತ್ತಾರೆ (ಡಿವಿಜನಲ್ ಕಮೀಷನರ್). ಈ ಭಾಗದಲ್ಲಿ ನಾಲ್ಕು ವಿಭಾಗಗಳಲ್ಲಿರುವ ಜಿಲ್ಲೆಗಳು, ಅವುಗಳ ವಿಶಿಷ್ಟತೆಗಳು, ಪ್ರಾಕೃತಿಕ ಸಂಪನ್ಮೂಲ, ಕೃಷಿ, ಉದ್ದಿಮೆ, ನದಿಗಳು, ಬೆಳೆಗಳು, ಅರಣ್ಯಗಳು, ವಾಯುಗುಣ, ಕಲೆ, ಸಾಹಿತ್ಯ, ಜಾನಪದ, ಕ್ರೀಡೆ, ಉತ್ಸವಗಳು ಮುಂತಾದ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.
1.1 ಬೆಂಗಳೂರು ವಿಭಾಗ
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ 9 ಜಿಲ್ಲೆಗಳಿವೆ. ಅವುಗಳ ಹೆಸರುಗಳು ಹೀಗಿವೆ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ (ಭೂಪಟ ನೋಡಿ). ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇದು ನೆಲೆಗೊಂಡಿದೆ.
1.1.1 ಚಾರಿತ್ರಿಕ ಹಿನ್ನೆಲೆ
ಕರ್ನಾಟಕದಲ್ಲಿ ಪ್ರಾಚೀನ ಚಾರಿತ್ರಿಕ ಹಿನ್ನೆಲೆ ಬೆಂಗಳೂರು ವಿಭಾಗಕ್ಕಿದೆ. ಈ ಭಾಗವನ್ನು ಮೊದಲು ಆಳಿದ ಅರಸರೆಂದರೆ ಕುವಲಾಲಪುರವನ್ನು (ಈಗಿನ ಕೋಲಾರ) ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಗಂಗರ ಮನೆತನದ ಅರಸರು. ಅವರ ಆಳ್ವಿಕೆ ಅಳಿದ ಮೇಲೆ ಈ ಪ್ರದೇಶವು ಚೋಳರ, ಹೊಯ್ಸಳರ, ವಿಜಯನಗರ, ಮರಾಠರ, ಮೈಸೂರು ಒಡೆಯರ ಮತ್ತು ವಿಜಯಪುರದ ಆದಿಲ್‍ಶಾಹಿ ಮನೆತನದ ಅರಸರ ಆಳ್ವಿಕೆಗೆ ಒಳಗಾಯಿತು. ವಿಜಯನಗರ ಅರಸರ ಆಳ್ವಿಕೆಯಲ್ಲಿ ಅನೇಕ ಪಾಳೆಗಾರರು ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಅವರು ಆಳುತ್ತಿದ್ದ ಪ್ರದೇಶವನ್ನು ಪಾಳೆಪಟ್ಟು ಎಂದು ಕರೆಯಲಾಗುತ್ತಿತ್ತು. ಈ ಪಾಳೆಗಾರರಿಗೆ ನಾಯಕರೆಂಬ ಹೆಸರಿತ್ತು. ಈ ಪಾಳೆಗಾರರು ವಿಜಯನಗರ ಅರಸರಿಗೆ ವಿಧೇಯರಾಗಿದ್ದರು. ಅವರಿಗೆ ಪಾಳೆಗಾರರು ಕಪ್ಪ ಮತ್ತು ಕಾಣಿಕೆ ನೀಡುತ್ತಿದ್ದರು. ಪ್ರಮುಖ ಪಾಳೆಪಟ್ಟುಗಳೆಂದರೆ ಕೆಳದಿ, ಚಿತ್ರದುರ್ಗ, ಯಲಹಂಕ, ಚಿಕ್ಕಬಳ್ಳಾಪುರ ಮುಂತಾದವು.
1.1.2 ಪ್ರಾಕೃತಿಕ ಸಂಪನ್ಮೂಲ
ಪ್ರಕೃತಿಯಿಂದ ದತ್ತವಾದ ಸಂಗತಿಗಳನ್ನು ಪ್ರಾಕೃತಿಕ ಸಂಪನ್ಮೂಲ ಎಂದು ಕರೆಯುತ್ತೇವೆ. ನದಿ, ಕಾಡು, ಕಣಿವೆ, ಜಲಪಾತಗಳು, ಖನಿಜ ಗಣಿಗಳು, ವನ್ಯಮೃಗಗಳು, ಮಣ್ಣು ಮುಂತಾದವೆಲ್ಲ ಪ್ರಕೃತಿಯು ನಮಗೆ ನೀಡಿರುವ ಸಂಪತ್ತು. ಈ ವಿಭಾಗವು ಉಷ್ಣ ವಲಯದ ಮಾನ್ಸೂನ್ ವಾಯುಗುಣವನ್ನು ಹೊಂದಿದೆ. ಆದರೆ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಏಕರೂಪದ ಹವಾಮಾನವಿಲ್ಲ. ಕೋಲಾರ ಜಿಲ್ಲೆ ಅತಿ ಉಷ್ಣವಲಯಕ್ಕೆ ಸೇರಿದ್ದರೆ ಶಿವಮೊಗ್ಗ ಅತಿಯಾದ ಮಳೆ ಬೀಳುವ ಪ್ರದೇಶವಾಗಿದೆ. ಆದರೆ ಚಿತ್ರದುರ್ಗ ಅತಿ ಕಡಿಮೆ ಮಳೆ ಬೀಳುವ ಜಿಲ್ಲೆಯಾಗಿದೆ. ಉಳಿದ ಜಿಲ್ಲೆಗಳಾದ ತುಮಕೂರು, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ ಮುಂತಾದವು ಸಾಧಾರಣ ಮಳೆ ಬೀಳುವ ಜಿಲ್ಲೆಗಳಾಗಿವೆ.
ಈ ವಲಯದ ಅನೇಕ ಮುಖ್ಯ ನದಿಗಳು ಪಶ್ಚಿಮಘಟ್ಟದಲ್ಲಿ ಹುಟ್ಟುತ್ತವೆ. ಈ ವಿಭಾಗದ ಪ್ರಮುಖ ನದಿಗಳೆಂದರೆ ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ವೇದಾವತಿ, ಶಿಂಷಾ, ತುಂಗಭದ್ರಾ, ಶರಾವತಿ, ವರದಾ ಮುಂತಾದವು. ಶರಾವತಿಯು ಪಶ್ಚಿಮ ದಿಕ್ಕಿಗೆ ಹರಿಯುವ ನದಿ. ಇದರಿಂದ ನಿರ್ಮಾಣವಾದ ವಿಶ್ವವಿಖ್ಯಾತ ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯಲ್ಲಿದೆ. ಮುತ್ಯಾಲಮಡು ಎಂಬ ಜಲಾಶಯ ಬೆಂಗಳೂರು ನಗರ ಜಿಲ್ಲೆಯಲ್ಲಿದೆ. ಗಾಜನೂರು ಅಣೆಕಟ್ಟೆ ಮತ್ತು ತುಂಗಾ ಅಣೆಕಟ್ಟೆ ಶಿವಮೊಗ್ಗ ಜಿಲ್ಲೆಯಲ್ಲಿವೆ. ಈ ವಿಭಾಗದಲ್ಲಿ ನೂರಾರು ಪ್ರಸಿದ್ಧ ಕೆರೆಗಳಿವೆ. ಮೈಸೂರು ಅರಸರು ಅನೇಕ ಅಣೆಕಟ್ಟೆಗಳನ್ನು ಕಟ್ಟಿಸಿದ್ದರು. ವಾಣಿವಿಲಾಸ ಅಣೆಕಟ್ಟೆ ಅಂತಹ ಒಂದು ನೀರಾವರಿ ಯೋಜನೆಯಾಗಿದೆ. ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿದೆ. ಅದೇ ರೀತಿಯಲ್ಲಿ ಮಾರ್ಕೋನಹಳ್ಳಿ ಜಲಾಶಯ ತುಮಕೂರು ಜಿಲ್ಲೆಯಲ್ಲಿದೆ.
ಪರಿಸರ ಮಾಲಿನ್ಯ, ಅರಣ್ಯ ನಾಶ, ಅತಿಯಾದ ನಗರೀಕರಣ ಮುಂತಾದ ಕಾರಣಗಳಿಂದ ನಮ್ಮ ಅನೇಕ ನದಿಗಳು ಬತ್ತಿ ಹೋಗುತ್ತಿವೆ. ಬೆಂಗಳೂರು ನಗರ ಜಿಲ್ಲೆಯ ಅನೇಕ ನದಿಗಳು ನಾಶದ ಅಂಚನ್ನು ತಲುಪಿವೆ. ಅನೇಕ ಕೆರೆಗಳು ಭೂ ಆಕ್ರಮಣದಿಂದ ನಾಶವಾಗುತ್ತಿವೆ. ಇದರಿಂದಾಗಿ ನೀರಿನ ತೀವ್ರ ಅಭಾವ ಉಂಟಾಗುತ್ತಿದೆ. ಕೆರೆಗಳ, ಜಲಮೂಲಗಳ ಮತ್ತು ಅಂತರ್ಜಲದ ರಕ್ಷಣೆಗೆ ನಾವೆಲ್ಲರೂ ಗಮನ ನೀಡುವ ಅಗತ್ಯವಿದೆ.
ಈ ವಿಭಾಗದಲ್ಲಿ ಅನೇಕ ಖನಿಜ ನಿಕ್ಷೇಪಗಳಿವೆ. ಇಡೀ ದೇಶದಲ್ಲಿ ಸಮೃದ್ಧವಾದ ಚಿನ್ನದ ಗಣಿಗಳು ಕರ್ನಾಟಕ ರಾಜ್ಯದಲ್ಲಿದ್ದು, ಕೋಲಾರ ಚಿನ್ನದ ಗಣಿ ಪ್ರಸಿದ್ಧವಾಗಿತ್ತು. ಆದರೆ ಅಲ್ಲಿನ ಚಿನ್ನದ ಅದಿರು ಮುಗಿದು ಹೋಗಿದೆ. ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ನಿಕ್ಷೇಪಗಳಿವೆ ಮತ್ತು ಚಿತ್ರದುರ್ಗದಲ್ಲಿ ತಾಮ್ರದ ಗಣಿಗಳಿವೆ. ಪರಮಾಣು ಶಕ್ತಿ ಉತ್ಪಾದನೆಗೆ ಅಗತ್ಯವಾದ ಖನಿಜವು ಚಿತ್ರದುರ್ಗದಲ್ಲಿ ದೊರೆಯುತ್ತದೆ ಎಂದು ಹೇಳಲಾಗಿದೆ.
1.1.3 ಅರಣ್ಯಗಳು, ವನ್ಯಪ್ರಾಣಿಗಳು, ರಾಷ್ಟ್ರೀಯ ಉದ್ಯಾನಗಳು
ಬೆಂಗಳೂರು ವಿಭಾಗದ ಶಿವಮೊಗ್ಗ ಜಿಲ್ಲೆಯಲ್ಲಿ ದಟ್ಟ ಅರಣ್ಯವಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆ. ಈ ವಿಭಾಗದ ಜಿಲ್ಲೆಗಳಲ್ಲಿ ನಿತ್ಯ ಹರಿದ್ವರ್ಣ ಅರಣ್ಯದಿಂದ ಎಲೆ ಉದುರುವ ಅರಣ್ಯದವರೆಗೆ ವಿವಿಧ ಬಗೆಯ ಅರಣ್ಯಗಳಿವೆ. ಸಹ್ಯಾದ್ರಿ ಪರ್ವತ ಶ್ರೇಣಿಯು ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿ ಹಾದು ಹೋಗುತ್ತದೆ. ಬಿದಿರು, ಆಲದ ಮರಗಳು, ಹುಣಿಸೆ ಮರಗಳು, ಶ್ರೀಗಂಧ, ದಿಂಡಿಗ, ತೇಗ, ಜಾಲಿ, ಮಾವಿನಮರಗಳು, ಬೇವಿನಮರಗಳು ಮುಂತಾದವು ಇಲ್ಲಿನ ಅರಣ್ಯಗಳಲ್ಲಿ ಬೆಳೆಯುತ್ತವೆ. ಕಿರು ಅರಣ್ಯ ಉತ್ಪನ್ನಗಳು ಅನೇಕರಿಗೆ ವರಮಾನದ ಮೂಲಗಳಾಗಿವೆ. ಈ ವಿಭಾಗದಲ್ಲಿರುವ ಅತಿ ಎತ್ತರದ ಬೆಟ್ಟವೆಂದರೆ ಚಿತ್ರದುರ್ಗ ಜಿಲ್ಲೆಯಲ್ಲಿರುವ ಹಾಲುರಾಮೇಶ್ವರ ಗುಡ್ಡ. ಇತರೆ ಪ್ರಸಿದ್ಧ ಗುಡ್ಡಗಳೆಂದರೆ ಕವಲೆದುರ್ಗ, ಚಂದ್ರಗುತ್ತಿ, ಕೊಡಚಾದ್ರಿ, ನಂದಿದುರ್ಗ ಇತ್ಯಾದಿ.
ಈ ವಿಭಾಗದಲ್ಲಿ ಅನೇಕ ವಿಧದ ವನ್ಯಪ್ರಾಣಿಗಳಿವೆ. ಕಾಡುಬೆಕ್ಕು, ಹುಲಿ, ಚಿರತೆ, ಕಾಡೆಮ್ಮೆ. ಕಾಡಹಂದಿ, ಜಿಂಕೆಗಳು, ಕರಡಿ, ತೋಳ ಮುಂತಾದವು. ಅರಣ್ಯ ರಕ್ಷಣೆಗಾಗಿ ಮತ್ತು ವನ್ಯಪ್ರಾಣಿಗಳ ಪೋಷಣೆಗಾಗಿ ಅನೇಕ ಅರಣ್ಯಧಾಮಗಳನ್ನು, ವನ್ಯಪ್ರಾಣಿ ಧಾಮಗಳನ್ನು, ರಾಷ್ಟ್ರೀಯ ಉದ್ಯಾನಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿರುವ ಪ್ರಮುಖ ಧಾಮಗಳು ಹೀಗಿವೆ:
ಜೋಗಿಮಟ್ಟಿ ಅರಣ್ಯಧಾಮ, ಚಿತ್ರದುರ್ಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬೆಂಗಳೂರು, ಭದ್ರಾ ವನ್ಯಮೃಗ ಧಾಮ- ಶಿವಮೊಗ್ಗ, ಶರಾವತಿ ವನ್ಯಮೃಗ ಧಾಮ- ಶಿವಮೊಗ್ಗ, ಶೆಟ್ಟಿಹಳ್ಳಿ ವನ್ಯಮೃಗಧಾಮ- ಶಿವಮೊಗ್ಗ, ಗುಡವಿ ಪಕ್ಷಿಧಾಮ- ಶಿವಮೊಗ್ಗ ಜಿಲ್ಲೆ, ಮಂಡಗದ್ದೆ ಪಕ್ಷಿಧಾಮ- ಶಿವಮೊಗ್ಗ ಜಿಲ್ಲೆ, ಕಗ್ಗಲಡು ಪಕ್ಷಿ ಧಾಮ- ತುಮಕೂರು ಜಿಲ್ಲೆ, ರಾಮದೇವರಬೆಟ್ಟ ರಣಹದ್ದು ಪಕ್ಷಿಧಾಮ- ರಾಮನಗರ, ಜಯಮಂಗಲಿ ಕೃಷ್ಣಮೃಗ ವನ್ಯಧಾಮ, ತುಮಕೂರು.
ಮಕ್ಕಳೆ, ನೀವು ವನ್ಯಮೃಗಗಳಾದ ಹುಲಿ, ಕರಡಿ, ಚಿರತೆ, ಆನೆ, ಜಿಂಕೆ ಮುಂತಾದವುಗಳನ್ನು ಅರಣ್ಯ ಪ್ರದೇಶದಲ್ಲಿ ನೋಡಲು ಬಯಸುವಿರಾ? ಹಾಗಾದರೆ ನಿಮ್ಮ ವಿಭಾಗದಲ್ಲಿರುವ ವನ್ಯಮೃಗಧಾಮಗಳಿಗೆ, ಪಕ್ಷಿಧಾಮಗಳಿಗೆ ಭೇಟಿ ನೀಡಿ. ಅರಣ್ಯದಲ್ಲಿರುವ ಪ್ರಾಣಿಗಳನ್ನು ನೋಡಿ ಸಂತೋಷಪಡಿ.
1.1.4 ಕೃಷಿ ಮತ್ತು ಉದ್ದಿಮೆಗಳ ಬೆಳವಣಿಗೆ
ಕೃಷಿಯು ಬೆಂಗಳೂರು ವಿಭಾಗದ ಜನರ ಪ್ರಧಾನ ಕಸುಬಾಗಿದೆ. ಈ ವಿಭಾಗದಲ್ಲಿ ಹೆಚ್ಚು ಒಣ ಭೂಮಿ ಬೇಸಾಯವಿದೆ. ಮಳೆಯನ್ನು ನಂಬಿಕೊಂಡೇ ಇಲ್ಲಿ ವ್ಯವಸಾಯ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನೀರಾವರಿಯಿದೆ. ಈ ವಿಭಾಗದಲ್ಲಿ ಮರಳು ಮಿಶ್ರಿತ ಕೆಂಪು ಮಣ್ಣು ಹೆಚ್ಚಾಗಿದೆ. ಎರೆ ಮಣ್ಣು ಕೆಲವು ಭಾಗದಲ್ಲಿದೆ. ಈ ವಿಭಾಗದ ಪ್ರಮುಖ ಬೆಳೆಗಳೆಂದರೆ ರಾಗಿ, ಮೆಕ್ಕೆ ಜೋಳ, ಭತ್ತ, ಕಡಲೆಕಾಯಿ, ಬೇಳೆಕಾಳು ಮುಂತಾದವು. ಪ್ರಮುಖ ವಾಣಿಜ್ಯ ಬೆಳೆಗಳೆಂದರೆ ತೆಂಗಿನಕಾಯಿ, ಅಡಕೆ, ಹತ್ತಿ, ಕಬ್ಬು ಮುಂತಾದವು.ರೇಷ್ಮೆ ಉದ್ಯಮಕ್ಕೆ ಮೂಲವಾದ ಹಿಪ್ಪುನೇರಳೆಯನ್ನು ಬೆಂಗಳೂರು ಜಿಲ್ಲೆ, ರಾಮನಗರ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಸಪೋಟ, ಪಪ್ಪಾಯ, ಹಲಸಿನಹಣ್ಣು, ಕಿತ್ತಲೆಹಣ್ಣು, ಬಾಳೆಹಣ್ಣು ಮುಂತಾದ ಹಣ್ಣುಗಳನ್ನು ಬೆಳೆಯಲಾಗುತ್ತದೆ.
ಈ ವಿಭಾಗದಲ್ಲಿನ ಜನರು ಹೆಚ್ಚಾಗಿ ರಾಗಿ ಮುದ್ದೆ, ಮತ್ತು ಅಕ್ಕಿ ಬಳಸುತ್ತಾರೆ. ರಾಗಿ ಮತ್ತು ಅಕ್ಕಿ ರೊಟ್ಟಿಯನ್ನು ತಿನ್ನುತ್ತಾರೆ. ಇತ್ತೀಚಿಗೆ ಗೋಧಿ ಚಪಾತಿಯನ್ನು ಬಳಸುವುದನ್ನು ರೂಢಿಸಿಕೊಂಡಿದ್ದಾರೆ. ಹಬ್ಬಗಳಲ್ಲಿ ಪಾಯಸ, ಹೋಳಿಗೆ, ಸಿಹಿಕಿಚ್ಚಡಿ, ಶಾವಿಗೆ ಮುಂತಾದ ಸಿಹಿ ತಿನುಸುಗಳನ್ನು ಸೇವಿಸುತ್ತಾರೆ.
ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಸರ್ಕಾರ ಸ್ಥಾಪಿಸಿದೆ. ಅಲ್ಲಿ ರೈತರು ತಮ್ಮ ಸರಕುಗಳನ್ನು ಮಾರಾಟ ಮಾಡಬಹುದು. ಸರ್ಕಾರವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಉಗ್ರಾಣಗಳನ್ನು ನಿರ್ಮಿಸಿದೆ. ಅಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ದಾಸ್ತಾನಿಡಬಹುದು.
ಉದ್ದಿಮೆಗಳು
ನಮ್ಮ ರಾಜ್ಯದ ಕೈಗಾರಿಕಾ ವಲಯದ ನಿರ್ಮಾತೃ ಸರ್. ಎಂ. ವಿಶ್ವೇಶ್ವರಯ್ಯ. ಇವರು ನಾಲ್ವಡಿ ಕೃಷ್ಣರಾಜ ಒಡೆಯರ ಮುಂದಾಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಿದರು. ಇಂದು ಕೈಗಾರಿಕೆಗಳನ್ನು ಸ್ಥಾಪಿಸದೆ ಅಭಿವೃದ್ಧಿಯನ್ನು ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ. ಬೆಂಗಳೂರು, ಭದ್ರಾವತಿ, ತುಮಕೂರು, ಶಿವಮೊಗ್ಗ ಮುಂತಾದ ಸ್ಥಳಗಳಲ್ಲಿ ದೊಡ್ಡ ಕಾರ್ಖಾನೆಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು ರಾಷ್ಟ್ರದಲ್ಲಿಯೇ ಪ್ರಮುಖ ಕೈಗಾರಿಕಾ ಕೇಂದ್ರವಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಿದೆ. ಇದನ್ನು 1923ರಲ್ಲಿ ಸ್ಥಾಪಿಸಲಾಗಿದೆ. ಅದನ್ನು ಇಂದು ವಿಶ್ವೇಶ್ವ್ವರಯ್ಯ ಕಬ್ಬಿಣ ಮತ್ತು ಉಕ್ಕು ನಿಯಮಿತ ಕಾರ್ಖಾನೆ ಎಂದು ಕರೆಯಲಾಗುತ್ತಿದೆ. ಅಲ್ಲಿ ಕಾಗದದ ಕಾರ್ಖಾನೆಯೂ ಇದೆ. ಇದನ್ನು 1936ರಲ್ಲಿ ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು ಭದ್ರಾವತಿಯಲ್ಲಿ ಸ್ಥಾಪನೆಗೊಂಡಿತು. ತುಮಕೂರು ಜಿಲ್ಲೆಯ ಅಮ್ಮಸಂದ್ರದಲ್ಲಿ ಬಿರ್ಲಾ ಕಂಪನಿಯ ಸಿಮೆಂಟ್ ಕಾರ್ಖಾನೆಯಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಉದ್ದಿಮೆಗಳಿಗೆ ಪ್ರಸಿದ್ಧಿಯಾಗಿದೆ. ಕೈಗಾರಿಕೆಗಳು ಉದ್ಯೋಗದ ಮೂಲಗಳಾಗಿವೆ.
ಬಟ್ಟೆ ರಫ್ತು ವ್ಯಾಪಾರದಲ್ಲಿ ದೇಶದಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ನಮ್ಮ ವಿಭಾಗದ ದೊಡ್ಡಬಳ್ಳಾಪುರ, ಆನೇಕಲ್ ಮುಂತಾದ ನಗರಗಳಲ್ಲಿ ಸರ್ಕಾರ ಸಿದ್ಧ ಉಡುಪಿನ ಪಾರ್ಕುಗಳನ್ನು ಸ್ಥಾಪಿಸಿದೆ. ಬೆಂಗಳೂರಿನಲ್ಲಿ ವಿಮಾನ ಕಾರ್ಖಾನೆ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಉದ್ದಿಮೆಗಳು ಕಾರ್ಯ ನಿರತವಾಗಿವೆ. ಕೆಲವು ಉದ್ದಿಮೆಗಳು ಸಾರ್ವಜನಿಕ ವಲಯದಲ್ಲಿದ್ದರೆ ಉಳಿದವು ಖಾಸಗಿ ಮಾಲೀಕತ್ವದಲ್ಲಿವೆ.
1.1.5 ಕಲೆ, ಸಾಹಿತ್ಯ, ಜಾನಪದ, ನಾಟಕ, ನೃತ್ಯ
ಪ್ರಾಚೀನ ಕಾಲದಿಂದಲೂ ಈ ವಿಭಾಗವು ಕಲೆ, ಸಾಹಿತ್ಯಕ್ಕೆ ಹೆಸರುವಾಸಿಯಾಗಿದೆ. ಹನ್ನೆರಡನೆಯ ಶತಮಾನದ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಗೆ ಸೇರಿದವರು. ಅದೇ ರೀತಿಯಲ್ಲಿ ದಾಸ ಪರಂಪರೆಗೆ ಸೇರಿದ ಶ್ರೀಪಾದರಾಯರು ಮುಂತಾದವರು ಬೆಂಗಳೂರು ವಿಭಾಗಕ್ಕೆ ಸೇರಿದವರು.
ಆಧುನಿಕ ಕಾಲಕ್ಕೆ ಬಂದರೆ ರಾಷ್ಟ್ರಕವಿ ಹಾಗೂ ಜ್ಞಾನಪೀಠ ಪುರಸ್ಕೃತ ಸಾಹಿತಿ ಕುವೆಂಪು ಈ ವಿಭಾಗಕ್ಕೆ ಸೇರಿದವರು. ಈ ವಿಭಾಗದ ಇನ್ನಿಬ್ಬರು ಜ್ಞಾನಪೀಠ ಪುರಸ್ಕೃತ ಸಾಹಿತಿಗಳು: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಯು. ಆರ್. ಅನಂತಮೂರ್ತಿ. ಡಿ. ವಿ. ಗುಂಡಪ್ಪ, ನಿಸಾರ್ ಅಹಮದ್, ಟಿ. ಪಿ. ಕೈಲಾಸಂ, ಎಂ. ಕೆ. ಇಂದಿರಾ, ತ.ರಾ.ಸು, ಡಾ. ಅನುಪಮಾ ನಿರಂಜನ, ಹಾ. ಮಾ. ನಾಯಕ, ವಿ. ಸೀತಾರಾಮಯ್ಯ, ಬಿ. ಜಿ. ಎಲ್. ಸ್ವಾಮಿ, ಎಂ. ವಿ. ಸೀತಾರಾಮಯ್ಯ, ಕೆ. ವಿ. ಸುಬ್ಬಣ್ಣ, ಜಿ. ವೆಂಕಟಸುಬ್ಬಯ್ಯ, ಜಿ. ಎಸ್. ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಡಾ. ಡಿ. ಆರ್. ನಾಗರಾಜ್, ಡಾ. ಸಿದ್ದಲಿಂಗಯ್ಯ, ನಾ. ಡಿಸೋಜ, ದೊಡ್ಡರಂಗೇಗೌಡ , ಪ್ರತಿಭಾನಂದ ಕುಮಾರ ಮುಂತಾದವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಹಿತಿಗಳು.
ಸಾಹಿತ್ಯದಷ್ಟೇ ನಾಟಕ ಕ್ಷೇತ್ರದಲ್ಲಿಯೂ ವಿಭಾಗದ ಸಾಧನೆ ಮಹತ್ವದ್ದಾಗಿದೆ. ಗುಬ್ಬಿವೀರಣ್ಣ ಅವರ ಹೆಸರು ಕನ್ನಡ ನಾಟಕ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ನಾಟಕರತ್ನ, ನಾಟಕ ಸಾರ್ವಭೌಮ ಎಂಬ ಬಿರುದುಗಳು ಅವರಿಗಿದ್ದವು. ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಗಮನಿಸಬೇಕಾದ ಇನ್ನೊಂದು ಹೆಸರು – ಸುಬ್ಬಯ್ಯ ನಾಯ್ಡು ಅವರದು. ಇವರು ಕನ್ನಡದ ಮೊದಲನೇ ವಾಕ್ಚಿತ್ರ ‘ಸತಿ ಸುಲೋಚನ’ದ ನಾಯಕ ನಟರು. ಕಲ್ಚರ್ಡ್ ಕಮೆಡಿಯನ್ ಎಂದು ಹೆಸರು ಮಾಡಿದ ಕೆ. ಹಿರಣ್ಣಯ್ಯ ಮತ್ತು ಅವರ ಪುತ್ರ ಮಾಸ್ಟರ್ ಹಿರಣ್ಣಯ್ಯ ಅವರ ರಂಗಭೂಮಿ ಕೊಡುಗೆ ಪ್ರಶಂಸನೀಯ. ನೃತ್ಯ ಲೋಕಕ್ಕೆ ಅಪಾರ ಕಾಣಿಕೆ ನೀಡಿರುವ ಶ್ರೀಮತಿ ಮಾಯಾರಾವ್ ಬೆಂಗಳೂರಿನವರು. ಬೆಂಗಳೂರು ಈಗ ಚಲನಚಿತ್ರೋದ್ಯಮದ ಪ್ರಮುಖ ಕೇಂದ್ರವಾಗಿದೆ. ನಟರಾದ ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್, ಶಂಕರನಾಗ್, ಅಂಬರೀಷ್ ಮುಂತಾದವರು ಈ ರಂಗದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಜನಪದ ಸಾಹಿತ್ಯ ಮತ್ತು ಕಲೆಗೆ ಈ ವಿಭಾಗ ಪ್ರಸಿದ್ಧಿಯಾಗಿದೆ. ಪ್ರಸಿದ್ಧ ಜನಪದ ತಜ್ಞರಾದ ಸಾಹಿತಿ ಎಚ್.ಎಲ್. ನಾಗೇಗೌಡ ಅವರು ಸ್ಥಾಪಿಸಿರುವ ‘ಜಾನಪದ ಲೋಕ’ ರಾಮನಗರ ಜಿಲ್ಲೆಯಲ್ಲಿದೆ.
ಬೆಂಗಳೂರು ವಿಭಾಗದ ಪ್ರಸಿದ್ಧ ಜನಪದ ಕಲೆಗಳು:
ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಕರಗ ಉತ್ಸವ ಒಂದು ಜನಪದ ಪ್ರಕಾರವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಪ್ರಸಿದ್ಧವಾದ ಸೋಮನ ಕುಣಿತ ಮತ್ತೊಂದು ಜಾನಪದ ಪ್ರದರ್ಶನ ಕಲೆಯಾಗಿದೆ. ಈ ವಿಭಾಗಕ್ಕೆ ವಿಶೇಷವಾದ ಜಾನಪದ ನಾಟಕವೆಂದರೆ ಮೂಡಲಪಾಯ ಯಕ್ಷಗಾನ. ಗಾರುಡಿ ಕುಣಿತ, ಡೊಳ್ಳು ಕುಣಿತ, ಕಂಸಾಲೆ ಕುಣಿತ ಮುಂತಾದವು ಜಾನಪದ ಕಲೆಗಳಾಗಿವೆ. ಚಿತ್ರಕಲೆಗೆ ಆರ್.ಎಸ್. ನಾಯ್ಡು, ರುಮಾಲೆ ಚನ್ನಬಸವಯ್ಯ, ವೆಂಕಟಪ್ಪ ಮುಂತಾದವರ ಕೊಡುಗೆ ಅನನ್ಯ.
1.1.6 ಶಿಕ್ಷಣ ಮತ್ತು ಆರೋಗ್ಯ
ಬೆಂಗಳೂರು ವಿಭಾಗ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉನ್ನತ ಸಾಧನೆ ಮಾಡಿದೆ. ಭಾರತ ರತ್ನ ಪ್ರಶಸ್ತಿ ಪಡೆದ ಇಬ್ಬರು ಈ ವಿಭಾಗದ ಕೋಲಾರ ಜಿಲ್ಲೆಗೆ ಸೇರಿದ್ದಾರೆ. ಅವರಲ್ಲಿ ಒಬ್ಬರು ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಮತ್ತೊಬ್ಬರು ವಿಜ್ಞಾನಿ ಸಿ. ಎನ್. ಆರ್. ರಾವ್. ನೊಬೆಲ್ ಪ್ರಶಸ್ತಿ ಪಡೆದ ಸರ್. ಸಿ. ವಿ. ರಾಮನ್ ಅವರು ಬೆಂಗಳೂರಿನಲ್ಲಿ ಸಂಶೋಧನೆ ನಡೆಸಿದ್ದರು.
ಬೆಂಗಳೂರು ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿದೆ. ಬೆಂಗಳೂರು ವಿಭಾಗದಲ್ಲಿ ಅನೇಕ ಪ್ರಸಿದ್ಧ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿವೆ. ಇದಲ್ಲದೆ ಇಲ್ಲಿ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಗಳು ಮತ್ತು ವೈಜ್ಞಾನಿಕ ಪ್ರಯೋಗಾಲಯಗಳಿವೆ. ಬೆಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆಗಳಲ್ಲಿ ವಿಶ್ವವಿದ್ಯಾಲಯಗಳಿವೆ. ಬೆಂಗಳೂರಿನಲ್ಲಿ ಕೃಷಿ ವಿಶ್ವವಿದ್ಯಾಲಯವಿದೆ. ಸ್ವಾತಂತ್ರ್ಯಪೂರ್ವದಿಂದಲೂ ಸರ್ಕಾರವು ಪ್ರಾಥಮಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅನೇಕ ಧಾರ್ಮಿಕ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಸಿದ್ಧಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠ, ಮುರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆಯು ಗಮನಾರ್ಹ.
ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಈ ವಿಭಾಗವು ಮಹತ್ವದ ಸಾಧನೆ ಮಾಡಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲಾಗಿದೆ. ಶಿಶುಮರಣ ಪ್ರಮಾಣ ಕಡಿಮೆಯಾಗಿದೆ. ಪೋಲಿಯೋ, ಸಿಡುಬು ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಅಪೌಷ್ಠಿಕತೆಯನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಉಪಕೇಂದ್ರಗಳು ಜನರಿಗೆ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತವಾದ ಜಿಲ್ಲಾ ಆಸ್ಪತ್ರೆಗಳಿವೆ. ದೊಡ್ಡ ದೊಡ್ಡ ಗ್ರಾಮಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ತಾಲ್ಲೂಕು ಆಸ್ಪತ್ರೆಗಳು ತಾಲ್ಲೂಕು ಕೇಂದ್ರಗಳಲ್ಲಿವೆ. ಸಂತಾನೋತ್ಪತ್ತಿ ಆರೋಗ್ಯವನ್ನು ಉತ್ತಮ ಪಡಿಸುವುದಕ್ಕಾಗಿ ಸರ್ಕಾರವು ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24/7 (ದಿನದ ಎಲ್ಲಾ ಹೊತ್ತೂ ತೆರೆದಿರುವ) ಕೇಂದ್ರಗಳೆಂದು ಘೋಷಿಸಿದೆ. ಗ್ರಾಮೀಣ ಪ್ರದೇಶದಲ್ಲಿನ ಗರ್ಭಿಣಿಯರಿಗೆ ಸೇವೆ ಒದಗಿಸುವುದಕ್ಕಾಗಿ ಸಂಚಾರಿ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ.
1.1.7 ಸಾಂಸ್ಕೃತಿಕ ಸಂಪತ್ತು
ಬೆಂಗಳೂರು ವಿಭಾಗವು ಸಾಂಸ್ಕøತಿಕವಾಗಿ ಶ್ರೀಮಂತವಾಗಿದೆ. ಇಲ್ಲಿ ಅರಣ್ಯ ಮತ್ತು ಪ್ರಾಣಿ ಸಂಪತ್ತಿದೆ. ನದಿಗಳು, ಕಣಿವೆಗಳು, ಗಿರಿಧಾಮಗಳು, ಧಾರ್ಮಿಕ ಸ್ಥಳಗಳು, ಪ್ರವಾಸಿ ಕೇಂದ್ರಗಳು, ಸಾಂಸ್ಕೃತಿಕ ಉತ್ಸವಗಳು, ಜಾತ್ರೆ, ಹಬ್ಬಗಳು ಮುಂತಾದ ಸಂಗತಿಗಳಿಂದ ಕೂಡಿ ಇದು ಸಮೃದ್ಧವಾದ ವಿಭಾಗವಾಗಿದೆ. ರಾಜಕೀಯ ಮುತ್ಸದ್ದಿಗಳು ರಾಜ್ಯ ನಿರ್ಮಾಣಕ್ಕೆ ಅಪಾರ ಕಾಣಿಕೆ ನೀಡಿದ್ದಾರೆ. ಕರ್ನಾಟಕ ಏಕೀಕರಣ ರೂವಾರಿ ಕೆಂಗಲ್ ಹನುಮಂತಯ್ಯ ಅವರು ಈ ವಿಭಾಗಕ್ಕೆ ಸೇರಿದ್ದಾರೆ. ಅವರು ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ವಿಧಾನಸೌಧ ಕಟ್ಟಡ ನಿರ್ಮಾಣವಾಯಿತು. ಮತ್ತೊಬ್ಬ ಏಕೀಕರಣ ಹೋರಾಟಗಾರ ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿ ರಾಜ್ಯ ನಿರ್ಮಾಣ ಕಾರ್ಯಗಳನ್ನು ಕೈಗೊಂಡರು. ನಮ್ಮ ರಾಜ್ಯದಲ್ಲಿ ಸಮಾಜವಾದಿ ಚಳವಳಿಗೆ ಅಡಿಪಾಯ ಹಾಕಿದವರು ಶಾಂತವೇರಿ ಗೋಪಾಲಗೌಡರು ಶಿವಮೊಗ್ಗ ಜಿಲ್ಲೆಯವರು. ಪರಿಸರ ಪೋಷಣೆಗೆ ಮತ್ತೊಂದು ಹೆಸರು ಸಾಲುಮರದ ತಿಮ್ಮಕ್ಕ. ನಮ್ಮ ದೇಶದ ಕ್ರಿಕೆಟ್‍ಗೆ ನಮ್ಮ ಕೊಡುಗೆ ಅನಿಲ್ ಕುಂಬ್ಳೆ. ಯೋಗ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಬಿ.ಕೆ.ಎಸ್. ಅಯ್ಯಂಗಾರ್ ಮತ್ತು ಮಲ್ಲಾಡಿಹಳ್ಳಿ ಶ್ರೀರಾಘವೇಂದ್ರ ಸ್ವಾಮೀಜಿ ಈ ವಿಭಾಗದವರು. ಈ ವಿಭಾಗದಲ್ಲಿ ಅನೇಕ ಪ್ರೇಕ್ಷಣಿಯ ಸ್ಥಳಗಳಿವೆ.
1.1.8 ಸ್ವಾತಂತ್ರ್ಯ ಹೋರಾಟಗಾರರು
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈ ವಿಭಾಗದ ಅನೇಕ ಮುತ್ಸದ್ದಿಗಳು ಭಾಗವಹಿಸಿದ್ದರು. ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ. ಸಿ. ರೆಡ್ಡಿ ಅವರು, ಎರಡನೆಯ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ತಿ.ತಾ. ಶರ್ಮ, ಭಾಗೀರಥಮ್ಮ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಕೆಂಗಲ್ ಹನುಮಂತಯ್ಯ ಮತ್ತು ಎಸ್. ನಿಜಲಿಂಗಪ್ಪ ಅವರು ಕರ್ನಾಟಕ ಏಕೀಕರಣದ ರೂವಾರಿಗಳೂ ಹೌದು.
1.2 ಮೈಸೂರು ವಿಭಾಗ
ನಮ್ಮ ನಾಡಿನ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ರಾಜ್ಯದ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿ ಎಂಟು ಜಿಲ್ಲೆಗಳಿವೆ. ಅವು ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಚಾಮರಾಜನಗರ ಮತ್ತು ಕೊಡಗು. ಈ ವಿಭಾಗದ ಆಡಳಿತ ಕೇಂದ್ರ ಮೈಸೂರು. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ವನ್ಯಮೃಗಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ.
1.2.1 ಚಾರಿತ್ರಿಕ ಹಿನ್ನೆಲೆ
ಮೈಸೂರಿನ ರಾಜೇತಿಹಾಸ, ಸ್ಪಷ್ಟವಾಗಿ ಆರಂಭವಾಗುವುದು ಗಂಗರ ಕಾಲದಿಂದ. ತಲಕಾಡು ಗಂಗರ ರಾಜಧಾನಿಯಾಗಿತ್ತು. ಅನಂತರ ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರು ಮೈಸೂರು ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು.
ಮೈಸೂರು ಅನೇಕ ಶತಮಾನಗಳ ಕಾಲ ಒಡೆಯರ್ ಅವರ ಮನೆತನದ ಆಳ್ವಿಕೆಯಲ್ಲಿತ್ತು. ಕೆಲವು ವರ್ಷಗಳ ಕಾಲ ಅದು ಹೈದರಾಲಿ ಮತ್ತು ಅವರ ಮಗ ಟಿಪ್ಪೂಸುಲ್ತ್ತಾನ್ ಅವರುಗಳ ಆಡಳಿತದ ವಶದಲ್ಲಿತ್ತು. ಚಾರಿತ್ರಿಕವಾಗಿ ಮತ್ತು ಪೌರಾಣಿಕವಾಗಿ ಮೈಸೂರನ್ನು ಮಹಿಷನಾಡು ಎಂದು ಕರೆಯಲಾಗುತ್ತದೆ. ಪುರಾಣ ಕಥೆಯ ಪ್ರಕಾರ ದೇವಿ ಪಾರ್ವತಿಯು ಚಾಮುಂಡೇಶ್ವರಿ ರೂಪ ಧರಿಸಿ, ರಾಕ್ಷಸನಾಗಿದ್ದ ಮಹಿಷಾಸುರನನ್ನು ಸಂಹರಿಸಿದಳು. ಮಹಿಷಾಸುರನನ್ನು ಸಂಹರಿಸಿದ ಸ್ಥಳವೇ ಮೈಸೂರಾಯಿತು. ಯದುರಾಯ ಅನ್ನುವವರು ಒಡೆಯರ್ ಮನೆತನದ ಮೊದಲ ಅರಸು. ಚಿಕ್ಕದೇವರಾಜ ಒಡೆಯರ್ ಅವರು ಪ್ರಸಿದ್ಧ ದೊರೆಯಾಗಿದ್ದರು. ಅವರ ನಂತರ ಸಿಂಹಾಸನಕ್ಕೆ ಬಂದ ಅರಸರು ದುರ್ಬಲರಾಗಿದ್ದರು. ಆ ಸಮಯದಲ್ಲಿ ಸೇನಾಧಿಪತಿಯಾಗಿದ್ದ ಹೈದರಾಲಿಯು ಆಳ್ವಿಕೆಯನ್ನು ಅಕ್ರಮವಾಗಿ ವಶಪಡಿಸಿಕೊಂಡ. ಅವನು ಮತ್ತು ಅವನ ಮಗ ಟಿಪ್ಪೂಸುಲ್ತ್ತಾನ್ 1761 ರಿಂದ 1799 ರವರೆಗೆ ಆಡಳಿತ ನಡೆಸಿದರು.
ಟಿಪ್ಪೂಸುಲ್ತಾನನ ಮರಣದ ನಂತರ ಮೈಸೂರಿನ ಆಡಳಿತವು ಮತ್ತೆ ಒಡೆಯರ ಕೈಗೆ ಬಂತು. ಬ್ರಿಟಿಷರು 1831ರಲ್ಲಿ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ 1881ರಲ್ಲಿ ಮತ್ತೆ ಆಳ್ವಿಕೆಯನ್ನು ಒಡೆಯರ ವಶಕ್ಕೆ ನೀಡಿದರು. ಕಳೆದ 20ನೆಯ ಶತಮಾನದ ಆದಿ ಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಅನೇಕ ಜನಪರ ಕಾರ್ಯಗಳಾದವು ವಿಶೇಷವಾಗಿ ಶಿಕ್ಷಣ, ಸಂಸ್ಕøತಿ, ನೀರಾವರಿಗೆ ಇವರು ಆದ್ಯತೆ ನೀಡಿದರು. ಸರ್. ಎಮ್. ವಿಶ್ವೇಶ್ವರಯ್ಯ ಮತ್ತು ಸರ್. ಮಿರ್ಜಾ ಇಸ್ಮಾಯಿಲ್ ಅವರ ದಿವಾನಗಿರಿಯಲ್ಲಿ ಮೈಸೂರು ಅಪೂರ್ವ ಯಶಸ್ಸನ್ನು ಪಡೆಯಿತು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೈಸೂರು ಸಂಸ್ಥಾನವು ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿತು.
ಈ ವಿಭಾಗದ ಬೇರೆ ಬೇರೆ ಜಿಲ್ಲೆಗಳಲ್ಲಿ ವಿವಿಧ ರಾಜ ಮನೆತನಗಳು ಆಳ್ವಿಕೆ ನಡೆಸಿದ ಚರಿತ್ರೆಯಿದೆ. ಕೊಡಗು ಪ್ರದೇಶದಲ್ಲಿ ಅನೇಕ ರಾಜ ಮನೆತನಗಳು ಆಡಳಿತ ನಡೆಸಿದವು. ಹಾಲೇರಿ ಮನೆತನವು 17ನೆಯ ಶತಮಾನದಲ್ಲಿ ತನ್ನ ಆಳ್ವಿಕೆಯನ್ನು ಸ್ಥಾಪಿಸಿತು. ಬಿದನೂರು ಇವರ ರಾಜಧಾನಿಯಾಗಿತ್ತು. ಹಾಲೇರಿ ಅರಸರಲ್ಲಿ ದೊಡ್ಡವೀರಪ್ಪ ಪ್ರಸಿದ್ಧ ದೊರೆ. ಚಿಕ್ಕವೀರರಾಜ ಕೊನೆಯ ಅರಸ. ಇವನು ದುರ್ಬಲನಾಗಿದ್ದ. ಇದನ್ನು ಬಳಸಿಕೊಂಡು ಬ್ರಿಟಿಷರು ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಸ್ವಾತಂತ್ರ್ಯಾನಂತರ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಆದರೆ 1956ರಲ್ಲಿ ಅದು ಕರ್ನಾಟಕದಲ್ಲಿ ವಿಲೀನಗೊಂಡಿತು. ಕೆಳದಿ ಸಂಸ್ಥಾನ ಮತ್ತೊಂದು ರಾಜಮನೆತನವಾಗಿದೆ.
ಕರ್ನಾಟಕದ ಕರಾವಳಿ ಪ್ರದೇಶವನ್ನು ತುಳುನಾಡು ಎಂದು ಕರೆಯುತ್ತಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ತುಳುನಾಡಲ್ಲಿ 7ನೆಯ ಶತಮಾನದಿಂದ 14ನೆಯ ಶತಮಾನದವರೆಗೆ ಅಳುಪ ಮನೆತನದ ಅರಸರು ಆಳ್ವಿಕೆ ನಡೆಸಿದರು. ಬೇರೆ ಬೇರೆ ಕಾಲಘಟ್ಟಗಳಲ್ಲಿ ಉದ್ಯಾವರ, ಮಂಗಲಪುರ, ಹುಂಚ ಮತ್ತು ಬನವಾಸಿಗಳು ಅಳುಪರ ರಾಜಧಾನಿಗಳಾಗಿದ್ದವು. ತುಳುನಾಡಿನಲ್ಲಿ ಅನೇಕ ಪಾಳೆಗಾರರು ಆಡಳಿತ ನಡೆಸಿದರು. ಅವರಲ್ಲಿ ಪ್ರಸಿದ್ಧರಾದವರೆಂದರೆ ಪುತ್ತಿಗೆಯ ಚೌಟರು, ಬಂಗವಾಡಿಯ ಬಂಗರು, ಕಾರ್ಕಳದ ಬೈರವರಸರು, ಕಾಸರಗೋಡಿನ ಕುಂಬಳೆ ಅರಸರು ಮುಂತಾದವರು.
ಕರಾವಳಿ ಪ್ರದೇಶವನ್ನು ಬ್ರಿಟಿಷರು ಕೆನರ ಎಂದು ಕರೆದರು. ಈ ಪ್ರದೇಶವನ್ನು ಅವರು 1801ರಲ್ಲಿ ವಶಪಡಿಸಿಕೊಂಡರು. ಬ್ರಿಟಿಷರು ಕರಾವಳಿಯನ್ನು 1860ರಲ್ಲಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಎಂದು ವಿಭಜಿಸಿದರು. ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ಉಡುಪಿ ಜಿಲ್ಲೆಯನ್ನು ರಚಿಸಲಾಯಿತು.
1.2.2 ಪ್ರಾಕೃತಿಕ ಸಂಪನ್ಮೂಲ
ಈ ವಿಭಾಗವು ವಿವಿಧ ಹವಾಮಾನಗಳಿಂದ ಕೂಡಿದ ಪ್ರದೇಶವಾಗಿದೆ. ಈ ವಿಭಾಗಕ್ಕೆ ಸೇರಿದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ವಿಶಾಲವಾದ ಕರಾವಳಿ ಪ್ರದೇಶವನ್ನು ಹೊಂದಿದೆ. ಪರ್ವತ ಶ್ರೇಣಿ, ದಟ್ಟ ಕಾಡುಗಳು ಮತ್ತು ಕರಾವಳಿ ಪ್ರದೇಶಗಳು ಒಟ್ಟಿಗೆ ಇಲ್ಲಿರುವುದರಿಂದ ಇಲ್ಲಿನ ವಾಯುಗುಣವನ್ನು ಉಷ್ಣ ವಲಯದ ಮಳೆಮಾರುತ ವಾತಾವರಣ ಎಂದು ಕರೆಯಲಾಗುತ್ತದೆ.
ಈ ವಿಭಾಗದಲ್ಲಿನ ಹವಾಮಾನವು ತೀವ್ರ ಚಳಿ ಮತ್ತು ಸರಾಸರಿ ಉಷ್ಣ ವಲಯದಿಂದ ಕೂಡಿದೆ. ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಒಣ ಹವಾಮಾನದಿಂದ ಕೂಡಿವೆ. ಈ ವಿಭಾಗದಲ್ಲಿ ಉಡುಪಿಯು ಅತಿ ಹೆಚ್ಚು ಮಳೆಯನ್ನು ಪಡೆದರೆ ಮಂಡ್ಯ ಜಿಲ್ಲೆಯು ಅತಿ ಕಡಿಮೆ ಮಳೆಯನ್ನು ಪಡೆಯುತ್ತದೆ. ವಿವಿಧ ಹವಾಮಾನ, ವಿವಿಧ ಪ್ರಮಾಣದ ಮಳೆ, ಪರ್ವತಗಳು, ಅರಣ್ಯ ಮುಂತಾದ ವಿಭಿನ್ನತೆಯಿಂದಾಗಿ ಇಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಮುಖ್ಯ ಕೃಷಿ ಬೆಳೆಗಳೆಂದರೆ ರಾಗಿ, ಭತ್ತ, ಉದ್ದು, ಹೆಸರು, ಹುರುಳಿಕಾಳು, ಜೋಳ ಮುಂತಾದವು. ಇಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳೆಂದರೆ ಕಾಫಿ, ಕಬ್ಬು, ತಂಬಾಕು, ಅಡಕೆ, ಏಲಕ್ಕಿ, ಕಿತ್ತಳೆಹಣ್ಣು, ಪೈನಾಪಲ್, ಗೋಡಂಬಿ ಮುಂತಾದವು. ಭಾರತದಲ್ಲಿ ಕಾಫಿಯನ್ನು ಮೊದಲು ಚಿಕ್ಕಮಗಳೂರಿನಲ್ಲಿ ಬೆಳೆಯಲಾಯಿತು. ಈ ವಿಭಾಗದ ಅನೇಕ ಪ್ರದೇಶಗಳಲ್ಲಿ ವೀಳೆದೆಲೆಗಳನ್ನು ಬೆಳೆಯಲಾಗುತ್ತದೆ.
ಪ್ರಾಕೃತಿಕ ಸಂಪನ್ಮೂಲದ ದೃಷ್ಟಿಯಿಂದ ಇದು ಸಮೃದ್ಧ ವಿಭಾಗವಾಗಿದೆ. ಕೊಡಗು, ದಕ್ಷಿಣ ಕನ್ನಡ, ಮೈಸೂರು, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ವಿವಿಧ ಬಗೆಯ ಅರಣ್ಯಗಳಿವೆ. ತೇಗ, ಶ್ರೀಗಂಧ, ಹೊಂಗೆ, ನಂದಿ, ಮತ್ತಿ, ಮುಂತಾದವು ಇಲ್ಲಿ ಬೆಳೆಯುವ ಮರಗಳು. ಈ ಅರಣ್ಯಗಳು ಅನೇಕ ಬಗೆಯ ಉತ್ಪನ್ನಗಳಿಗೆ ಹೆಸರುವಾಸಿಯಾಗಿವೆ. ಗೋಂದು, ಜೇನುತುಪ್ಪ ಮತ್ತು ಮೇಣ, ಕಾಡುಹಣ್ಣು ಮುಂತಾದವು ಕಿರು ಅರಣ್ಯ ಉತ್ಪನ್ನಗಳು.
ಈ ವಿಭಾಗವು ಅನೇಕ ದೊಡ್ಡ ಮತ್ತು ಸಣ್ಣ ಪರ್ವತಗಳನ್ನು ಹೊಂದಿವೆ. ಅವುಗಳಲ್ಲಿ ಮುಖ್ಯವಾದವು ಸುಬ್ರಹ್ಮಣ್ಯ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಮಲೈಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಚಾಮುಂಡಿ ಬೆಟ್ಟ, ಶ್ರವಣಬೆಳಗೊಳದ ಚಂದ್ರಗಿರಿ, ಇಂದ್ರಗಿರಿ ಮುಂತಾದವು ಪ್ರಸಿದ್ಧ ಬೆಟ್ಟಗಳು.
ದಟ್ಟವಾದ ಅರಣ್ಯಗಳಿಗೆ ಹೆಸರುವಾಸಿಯಾದ ಮೈಸೂರು ವಿಭಾಗವು ಜೀವವೈವಿಧ್ಯಕ್ಕೂ ಹೆಸರುವಾಸಿಯಾಗಿದೆ. ಹುಲಿ, ಚಿರತೆ, ಕಾಡುನಾಯಿ, ಜಿಂಕೆ, ನರಿ, ಕಾಡೆಮ್ಮೆ ವಿವಿಧ ಬಗೆಯ ಹಾವುಗಳು ಮುಂತಾದ ವನ್ಯಮೃಗಗಳು ಇಲ್ಲಿನ ಅರಣ್ಯಗಳಲ್ಲಿ ವಾಸವಾಗಿವೆ. ಮಂಡ್ಯ ಜಿಲ್ಲೆಯ ಬನ್ನೂರು ಉತ್ತಮ ತಳಿ ಟಗರುಗಳಿಗೆ ಹೆಸರುವಾಸಿಯಾಗಿದೆ.
ಈ ವಿಭಾಗದ ಪ್ರಸಿದ್ಧ ನದಿಗಳು: ಕಾವೇರಿ, ಹೇಮಾವತಿ, ಹಾರಂಗಿ, ನೇತ್ರಾವತಿ, ಕುಮಾರಧಾರ, ವೇದಾವತಿ, ಕಪಿಲ, ಯಗಚಿ, ಗಂಗೊಳ್ಳಿ ಮುಂತಾದವು. ಇಲ್ಲಿ ಅನೇಕ ಪ್ರಸಿದ್ಧ ಜಲಪಾತಗಳಿವೆ. ಅವು: ಗಗನಚುಕ್ಕಿ ಭರಚುಕ್ಕಿ, ಅಬ್ಬೆ ಜಲಪಾತ, ಇರ್ಪು ಜಲಪಾತ, ಹೆಬ್ಬೆ ಜಲಪಾತ ಮುಂತಾದವು.
ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ದೊರೆಯುವ ಮುಖ್ಯ ಖನಿಜಗಳೆಂದರೆ ಬಾಕ್ಸೈಟ್, ಫೆಲ್‍ಸೈಟ್, ಕ್ರೋಮೈಟ್, ಸುಣ್ಣಕಲ್ಲು, ಗ್ರಾನೈಟ್, ಮ್ಯಾಂಗನೀಸ್ ಮುಂತಾದವು. ನಮ್ಮ ದೇಶದಲ್ಲಿ ಫೆಲ್‍ಸೈಟ್ ಅದಿರು ಮೈಸೂರು ಜಿಲ್ಲೆಯಲ್ಲಿ ಮಾತ್ರ ದೊರೆಯುತ್ತದೆ. ಈ ವಿಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಕರಾವಳಿ ಜಿಲ್ಲೆಗಳಾಗಿವೆ. ಇಲ್ಲಿ ಬಂದರುಗಳಿವೆ. ಈ ಜಿಲ್ಲೆಗಳು ಸಮುದ್ರ ಮೀನುಗಾರಿಕೆಗೆ ಹೆಸರುವಾಸಿಯಾಗಿವೆ. ಇಲ್ಲಿ ಸಂಸ್ಕರಿಸಿದ ಮೀನನ್ನು ರಫ್ತು ಮಾಡಲಾಗುತ್ತದೆ. ಸಾವಿರಾರು ಮೀನುಗಾರರಿಗೆ ಇದು ವರಮಾನದ ಮೂಲವಾಗಿದೆ. ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳು ಮರಗಳ ದಿಮ್ಮಿಗಳ ಮಾರಾಟದ ಕೇಂದ್ರಗಳಾಗಿವೆ.
1.2.3 ಅರಣ್ಯಗಳು, ವನ್ಯಮೃಗಗಳು, ರಾಷ್ಟ್ರೀಯ ಉದ್ಯಾನಗಳು
ಮೈಸೂರು ಅರಣ್ಯಗಳ ನಾಡು. ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ ಮುಂತಾದ ಜಿಲ್ಲೆಗಳು ವೈವಿಧ್ಯಮಯವಾದ ದಟ್ಟ ಅರಣ್ಯ ಪ್ರದೇಶದಿಂದ ಕೂಡಿವೆ. ಬಂಡೀಪುರ, ನಾಗರಹೊಳೆ, ಮಲೈಮಹದೇಶ್ವರ ಬೆಟ್ಟ, ಪುಷ್ಪಗಿರಿ, ಮುಂತಾದವು ಪ್ರಸಿದ್ಧ ಅರಣ್ಯ ಪ್ರದೇಶಗಳಾಗಿವೆ. ಇಲ್ಲಿ ಹತ್ತಾರು ಬಗೆಯ ಕಿರು ಅರಣ್ಯ ಉತ್ಪನ್ನಗಳು ದೊರೆಯುತ್ತವೆ. ಸಾವಿರಾರು ಬುಡಕಟ್ಟು ಜನರಿಗೆ ಕಿರು ಅರಣ್ಯ ಉತ್ಪನ್ನಗಳು ವರಮಾನದ, ಆಹಾರದ ಮೂಲಗಳಾಗಿವೆ. ಮೈಸೂರು ವಿಭಾಗದ ಜಿಲ್ಲೆಗಳು ಅನೇಕ ಬುಡಕಟ್ಟು ಸಮುದಾಯಗಳಿಗೆ ನೆಲೆಯಾಗಿವೆ. ಜೇನುಕುರುಬರು ಅತಿ ಹೆಚ್ಚು ಜನಸಂಖ್ಯೆಯ ಬುಡಕಟ್ಟು ಸಮುದಾಯವಾಗಿದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊರಗ ಬುಡಕಟ್ಟು ಸಮುದಾಯವಿದೆ. ಅತ್ಯಂತ ಹಿಂದುಳಿದ ಸಮುದಾಯ ಇದಾಗಿದೆ. ಕೊಡಗು ಜಿಲ್ಲೆಯಲ್ಲಿ ಕಂಡು ಬರುವ ಬುಡಕಟ್ಟು ಸಮುದಾಯವೆಂದರೆ ಮಲೆಕುಡಿಯರು. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಂಡು ಬರುತ್ತಾರೆ. ಚಾಮರಾಜನಗರ ಜಿಲ್ಲೆಯಲ್ಲಿ ವಾಸಿಸುವ ಸೋಲಿಗರು ಮತ್ತೊಂದು ಬುಡಕಟ್ಟು ಸಮುದಾಯ. ಇವರಲ್ಲದೆ ಯರವರು, ಹಕ್ಕಿಪಿಕ್ಕಿಗಳು, ಹಲಸರು, ಮೇದಾರರು ಮುಂತಾದ ಬುಡಕಟ್ಟು ಸಮುದಾಯಗಳಿವೆ.
ಹುಲಿ ನಮ್ಮ ರಾಷ್ಟ್ರ ಪ್ರಾಣಿ. ಹುಲಿಸಂರಕ್ಷಣಾ ಯೋಜನೆಯು ರಾಜ್ಯದಲ್ಲಿ ಜಾರಿಯಲ್ಲಿದೆ. ರಾಜ್ಯದಲ್ಲಿರುವ ಐದು ಹುಲಿ ಸಂರಕ್ಷಣಾ ವನ್ಯಮೃಗ ಧಾಮಗಳಲ್ಲಿ ಮೂರು ಮೈಸೂರು ವಿಭಾಗದಲ್ಲಿವೆ. ಬಂಡೀಪುರ, ನಾಗರಹೊಳೆ, ಭದ್ರಾ ಹುಲಿ ಸಂರಕ್ಷಣಾ ಮೀಸಲು ಪ್ರದೇಶಗಳಾಗಿವೆ. ಇದೇ ರೀತಿಯಲ್ಲಿ ಆನೆಗಳ ಸಂರಕ್ಷಣಾ ಯೋಜನೆಯು ಇಲ್ಲಿ ಅನುಷ್ಠಾನದಲ್ಲಿದೆ. ಆನೆಗಳ ದಂತಕ್ಕಾಗಿ, ಹುಲಿ ಚರ್ಮಕ್ಕಾಗಿ ಅವುಗಳನ್ನು ಅಕ್ರಮವಾಗಿ ಕೊಲ್ಲಲಾಗುತ್ತಿದೆ. ಅದನ್ನು ತಡೆದು ಅವುಗಳ ಸಂತತಿಯನ್ನು ರಕ್ಷಿಸುವ ಉದ್ದೇಶದಿಂದ ಹುಲಿ ಸಂರಕ್ಷಣಾ ಯೋಜನೆ ಮತ್ತು ಆನೆ ಸಂರಕ್ಷಣಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ದೇಶದಲ್ಲಿ ಹುಲಿಗಳ ಸಂಖ್ಯೆಯು ಅತಿ ಹೆಚ್ಚಿರುವ ರಾಜ್ಯ ಕರ್ನಾಟಕ.
ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ವನ್ಯಮೃಗ ಧಾಮಗಳು, ಪಕ್ಷಿ ಸಂರಕ್ಷಣಾ ಧಾಮಗಳು ಮೈಸೂರು ವಿಭಾಗದಲ್ಲಿವೆ. ರಂಗನತಿಟ್ಟು ಪಕ್ಷಿಧಾಮ, ಗುಡವಿ ಪಕ್ಷಿಧಾಮ, ಕೊಕ್ಕರೆಬೆಳ್ಳೂರು ಮುಖ್ಯ ಪಕ್ಷಿಧಾಮಗಳಾದರೆ, ಮೇಲುಕೋಟೆ ವನ್ಯಮೃಗಧಾಮ, ಕಾವೇರಿ ವನ್ಯಮೃಗಧಾಮ, ಮಲೈಮಹದೇಶ್ವರ ವನ್ಯಮೃಗಧಾಮ, ಪುಷ್ಪಗಿರಿ ವನ್ಯಮೃಗಧಾಮ ಮುಂತಾದವು ಮೈಸೂರು ವಿಭಾಗದಲ್ಲಿರುವ ಪ್ರಸಿದ್ಧ ವನ್ಯಮೃಗಧಾಮಗಳು. ಮೈಸೂರು ಜಿಲ್ಲೆಯಲ್ಲಿ ರಾಜೀವಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವಿದ್ದರೆ ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವಿದೆ. ಖೆಡ್ಡ ಎಂಬ ಕಾರ್ಯಾಚರಣೆ ಮೂಲಕ ಕಾಡಾನೆಗಳನ್ನು ಅಲ್ಲಿ ಪಳಗಿಸಲಾಗುತ್ತದೆ.
1.2.4 ಕೃಷಿ ಮತ್ತು ಉದ್ದಿಮೆಗಳು
ಕೃಷಿಯು ನಮ್ಮ ಜನರ ಜೀವದ್ರವ್ಯ. ಇದಕ್ಕೆ ಮೈಸೂರು ವಿಭಾಗದ ಜಿಲ್ಲೆಗಳು ಅಪವಾದವಲ್ಲ. ಮೈಸೂರು ಜಿಲ್ಲೆಯು ರೇಷ್ಮೆ ಬೆಳೆಗೆ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಕಾಫಿ ತೋಟಗಳಿಗೆ, ಮಂಡ್ಯ ಜಿಲ್ಲೆಯು ಕಬ್ಬು ಬೆಳೆಗೆ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳು ಗೋಡಂಬಿ, ಮೆಣಸು, ಏಲಕ್ಕಿ, ರಬ್ಬರ್ ಬೆಳೆಗಳಿಗೆ ಪ್ರಸಿದ್ಧವಾಗಿವೆ. ದೇಶದಲ್ಲಿ ಅತಿ ಹೆಚ್ಚು ಕಾಫಿಯನ್ನು ಚಿಕ್ಕಮಗಳೂರಿನಲ್ಲಿ ಬೆಳೆಯುತ್ತಾರೆ. ಕೃಷಿ ಚಟುವಟಿಕೆಗಳು ಕೇವಲ ಆಹಾರ ಪದಾರ್ಥಗಳನ್ನು ಬೆಳೆಯುವುದಕ್ಕೆ ಮೀಸಲಾಗಿಲ್ಲ. ಈ ವಿಭಾಗದ ಜಿಲ್ಲೆಗಳಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮತ್ತು ತೋಟಗಾರಿಕೆಗಳ ಸಂಯುಕ್ತ ಚಟುವಟಿಕೆಗಳಿವೆ. ಈ ವಿಭಾಗದಲ್ಲಿ ಬೆಳೆಯುವ ಮುಖ್ಯ ಬೆಳೆಗಳೆಂದರೆ ಭತ್ತ, ರಾಗಿ, ಜೋಳ, ಅವರೆ, ಹೆಸರು, ಉದ್ದು ಮುಂತಾದವು. ಇಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳೆಂದರೆ ತಂಬಾಕು, ಕಾಫಿ, ಗೋಡಂಬಿ, ಅಡಕೆ, ಆಲೂಗಡ್ಡೆ, ಕಬ್ಬು, ಹತ್ತಿ, ಕಿತ್ತಳೆ, ತೆಂಗು ಮುಂತಾದವು.
ಈ ವಿಭಾಗದಲ್ಲಿನ ಕೃಷಿಗೆ ನಾಲ್ಕು ಯೋಜನೆಗಳಿಂದ ನೀರಾವರಿ ದೊರೆಯುತ್ತಿದೆ. ಅವುಗಳಾವುವೆಂದರೆ ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ ಮತ್ತು ಕಬಿನಿ ನೀರಾವರಿ ಯೋಜನೆಗಳು. ಈ ವಿಭಾಗದಲ್ಲಿ ಕೃಷಿಯ ಬೆಳವಣಿಗೆಗೆ ಅನುಕೂಲವಾಗಲು ಅನೇಕ ಕೃಷಿ ಫಾರಂಗಳನ್ನು, ಕೃಷಿ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
ಈ ವಿಭಾಗದ ಮೈಸೂರು, ಮಂಗಳೂರು, ಹಾಸನ, ಚಿಕ್ಕಮಗಳೂರು, ಮಂಡ್ಯ, ಮಡಿಕೇರಿ ಮುಂತಾದವು ಕೈಗಾರಿಕಾ ಕೇಂದ್ರಗಳಾಗಿವೆ. ಔಷಧಿ ಕಾರ್ಖಾನೆಗಳು, ಕಾಫಿ ಕ್ಯೂರಿಂಗ್ ಉದ್ದಿಮೆಗಳು, ಆಹಾರ ಸಂಸ್ಕರಣಾ ಘಟಕಗಳು, ರಸಗೊಬ್ಬರ ಕಾರ್ಖಾನೆಗಳು, ಪೆಟ್ರೋಲಿಯಮ್ ಸಂಸ್ಕರಣಾ ಕಾರ್ಖಾನೆ, ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಸಿಮೆಂಟ್ ಉದ್ಯಮ ಮುಂತಾದವು ಮೈಸೂರು ವಿಭಾಗದ ಜಿಲ್ಲೆಗಳಲ್ಲಿರುವ ಉದ್ದಿಮೆಗಳು. ಈ ವಿಭಾಗದಲ್ಲಿರುವ ಬೃಹತ್ ಉದ್ದಿಮೆಗಳ ಸಂಖ್ಯೆ ಕಡಿಮೆ. ಆದರೆ ಸಾವಿರಾರು ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆಗಳು ಇಲ್ಲಿವೆ.
1.2.5 ಕಲೆ, ಸಾಹಿತ್ಯ, ಸಂಗೀತ, ಜಾನಪದ, ನಾಟಕ, ನೃತ್ಯ
ಈ ವಿಭಾಗವು ಕಲೆ, ಸಾಹಿತ್ಯ, ನಾಟಕ, ನೃತ್ಯ ಮುಂತಾದ ಕಲೆಗಳಿಂದ ಶ್ರೀಮಂತವಾಗಿದೆ. ಮೈಸೂರು ನಗರವನ್ನು ಕಲೆಯ ತವರೂರು ಎಂದು ಹೇಳುತ್ತಾರೆ. ಕರಾವಳಿ ಜಿಲ್ಲೆಗಳು ಯಕ್ಷಗಾನ ಬಯಲಾಟಕ್ಕೆ ಹೆಸರುವಾಸಿಯಾಗಿವೆ. ಯಕ್ಷಗಾನವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಂಡಿದೆ. ಕಂಸಾಳೆ ಕುಣಿತ, ಚೌಡಿಕೆ ಕಲೆ, ವೀರಗಾಸೆ ಕುಣಿತ, ಪಟ ಕುಣಿತ, ನಂದಿಕೋಲು ಮುಂತಾದವು ಜನಪ್ರಿಯ ಜನಪದ ಕಲೆಗಳಾಗಿವೆ. ಕೊಡವರ ಪುತ್ತರಿ ಹಬ್ಬ, ಕರಾವಳಿ ಜಿಲ್ಲೆಗಳಲ್ಲಿನ ಭೂತಾರಾಧನೆ, ಕಂಬಳ ಮುಂತಾದವು ವಿಶಿಷ್ಟವಾದ ಜನಪ್ರಿಯ ಆಚರಣೆಗಳಾಗಿವೆ.
ಮೈಸೂರು ಅರಮನೆಯು ಕಲೆ, ನೃತ್ಯ, ಸಂಗೀತ ಮುಂತಾದವುಗಳಿಗೆ ಪ್ರೋತ್ಸಾಹ ನೀಡುತ್ತಿತ್ತು. ಇದರಿಂದ ಮೈಸೂರು ಸಂಪ್ರದಾಯದ ವಿಶಿಷ್ಟತೆಯ ನೃತ್ಯ, ಸಂಗೀತ, ವರ್ಣಕಲೆ ಮುಂತಾದವು ರೂಪುಗೊಂಡವು. ಭರತನಾಟ್ಯ, ನಾಟಕ, ಸಂಗೀತ, ನಾಟಕಗಳಿಗೆ ಅರಮನೆಯು ಪ್ರೋತ್ಸಾಹ ನೀಡುತ್ತಿತ್ತು. ಮೈಸೂರು ನಗರದಲ್ಲಿ ಸರ್ಕಾರಿ ಅನುದಾನಿತ ನಾಟಕ ತಂಡ (ರೆಪರ್ಟರಿ) ರಂಗಾಯಣ ಸ್ಥಾಪನೆಯಾಗಿದೆ. ಅದು ವರ್ಷಪೂರ್ತಿ ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶಿಸುತ್ತದೆ. ಈಗ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರಂಗಾಯಣ ಕೇಂದ್ರಗಳು ಅರಂಭಗೊಂಡಿವೆ. ಮೈಸೂರಿನಲ್ಲಿ ಬೃಹತ್ ಕಲಾಮಂದಿರವನ್ನು ಕಟ್ಟಲಾಗಿದೆ.
ಮೈಸೂರು ವಿಭಾಗದ ಜಿಲ್ಲೆಗಳು ಅನೇಕ ಪ್ರಸಿದ್ಧ ಸಾಹಿತಿಗಳ ತಾಣಗಳಾಗಿವೆ. ಹಾಸನದ ರಾಜಾರಾವ್ ಇಂಗ್ಲೀಷಿನಲ್ಲಿ ಪ್ರಸಿದ್ಧ ಕಾದಂಬರಿಗಾರರು. ಆರ್. ಕೆ. ನಾರಾಯಣ್ ಅವರು ಮತ್ತೊಬ್ಬ ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿಜೇತ ಶಿವರಾಮ ಕಾರಂತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಕನ್ನಡದ ಭಾವಗೀತೆಗಳಿಗೆ ಜೀವ ತುಂಬಿದ ಕೆ. ಎಸ್. ನರಸಿಂಹಸ್ವಾಮಿ ಮೈಸೂರು ನಗರಕ್ಕೆ ಸೇರಿದವರು. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಾ. ಎಸ್. ಎಲ್. ಭೈರಪ್ಪ, ಎಂ. ಗೋಪಾಲಕೃಷ್ಣ ಅಡಿಗ, ಬಿ.ಎಂ.ಶ್ರೀಕಂಠಯ್ಯ, ಎ. ಎನ್. ಮೂರ್ತಿರಾವ್, ದೇವನೂರ ಮಹಾದೇವ, ಅಕಬರ್ ಅಲಿ, ಸಾರಾ ಅಬೂಬಕರ್, ಆಲನಹಳ್ಳಿ ಕೃಷ್ಣ, ಪೂರ್ಣಚಂದ್ರತೇಜಸ್ವಿ, ಕೊಡಗಿನ ಗೌರಮ್ಮ, ತಿರುಮಲಾಂಬ, ತ್ರಿವೇಣಿ, ನಿರಂಜನ ಮುಂತಾದವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಈ ವಿಭಾಗಮೂಲದ ಮಹನೀಯರು. ಆರ್. ಕೆ. ಶ್ರೀಕಂಠನ್, ವೀಣೆ ಶೇಷಣ್ಣ, ಪಿಟೀಲ್ ಚೌಡಯ್ಯ, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಕದ್ರಿ ಗೋಪಾಲನಾಥ್ ಮುಂತಾದವರು ಸಂಗೀತ ಕ್ಷೇತ್ರದ ದಿಗ್ಗಜರು. ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್, ರಂಗಭೂಮಿಯ ಮಹಮದ್ ಪೀರ್, ಚಿತ್ರಕಲೆಯ ಕೆ. ಕೆ. ಹೆಬ್ಬಾರ್, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ಬಿ. ವಿ. ಕಾರಂತ, ಆಧುನಿಕ ಪೂರ್ವ ಸಾಹಿತ್ಯದ ಸಂಚಿಹೊನ್ನಮ್ಮ, ರತ್ನಾಕರವರ್ಣಿ, ಸಿಂಗಾರಾರ್ಯ ಮುಂತಾದವರು ಮೈಸೂರು ವಿಭಾಗಕ್ಕೆ ಸೇರಿದ ಸಾಂಸ್ಕೃತಿಕ ಸಾಧಕರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ. ಎಸ್. ತಿಮ್ಮಯ್ಯ ಅವರು ರಾಷ್ಟ್ರಕ್ಕೆ ಕೀರ್ತಿತಂದ ಸೈನಿಕ ದಂಡಾಧಿಪತಿಗಳು. ವಿಜ್ಞಾನಿಗಳಾದ ರಾಜಾರಾಮಣ್ಣ, ಯು. ಆರ್. ರಾವ್ ಅವರ ಸಾಧನೆ ಉಲ್ಲೇಖನೀಯ. ಸಾಮಾಜಿಕ ನ್ಯಾಯದ ಹರಿಕಾರರಾದ ದೇವರಾಜ್‍ಅರಸ್‍ರವರು ಈ ವಿಭಾಗಕ್ಕೆ ಸೇರಿದವರಾಗಿದ್ದಾರೆ.
1.2.6 ಶಿಕ್ಷಣ ಮತ್ತು ಆರೋಗ್ಯ
ಮೈಸೂರು ಒಂದು ಶಿಕ್ಷಣಕೇಂದ್ರವಾಗಿದೆ. ಈ ವಿಭಾಗದಲ್ಲಿ ಸಾಕ್ಷರತೆಯ ಮಟ್ಟ ಉತ್ತಮವಾಗಿದೆ. ಮೈಸೂರು ಒಡೆಯರ ಆಳ್ವಿಕೆಯಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ದೊರಕಿತು. ಶತಮಾನೋತ್ಸವ ಕಂಡಿರುವ ಮೈಸೂರು ವಿಶ್ವವಿದ್ಯಾಲಯವು 1915ರಲ್ಲಿ ಆರಂಭವಾಯಿತು. ಈ ವಿಭಾಗದ ಅನೇಕ ಜಿಲ್ಲೆಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿವೆ. ಈ ವಿಭಾಗದ ಪ್ರಮುಖ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವಿದೆ. ಈ ವಿಭಾಗದಲ್ಲಿ ಅನೇಕ ಖಾಸಗಿ ವಿಶ್ವವಿದ್ಯಾಲಯಗಳಿವೆ. ಮೈಸೂರು ನಗರದಲ್ಲಿ ಆಹಾರ ಸಂಶೋಧನಾ ಸಂಸ್ಥೆ ಸಿಎಫ್‍ಟಿಆರ್‍ಐ (ಸೆಂಟ್ರಲ್ ಫುಡ್ ಟೆಕ್ನಾಲಜಿ ರೀಸರ್ಚ್ ಇನ್ಸಿಟ್ಯೂಟ್) ಇದೆ. ಶಿಕ್ಷಣ ಕ್ಷೇತ್ರಕ್ಕೆ ಸುತ್ತೂರು ಮಠದ ಕೊಡುಗೆ ಅಪಾರ. ಈ ವಿಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಧರ್ಮಸ್ಥಳ ಮತ್ತು ಮಣಿಪಾಲ ಸಂಸ್ಥೆಗಳ ಕೊಡುಗೆ ಗಮನೀಯವಾದುದು.
ಈ ವಿಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಜಿಲ್ಲಾ ಆಸ್ಪತ್ರೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ಆರೋಗ್ಯ ಉಪಕೇಂದ್ರಗಳಿವೆ. ಇಲ್ಲಿ ಮಕ್ಕಳಿಗೆ ರೋಗನಿರೋಧಕ ಚುಚ್ಚು ಮದ್ದು ನೀಡಲಾಗುತ್ತದೆ. ಗರ್ಭಿಣಿ ಮತ್ತು ಬಾಣಂತಿಯ ಆರೋಗ್ಯ ನಿರ್ವಹಿಸಲು ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು ಇದ್ದಾರೆ. ಈ ವಿಭಾಗದಲ್ಲಿ ಶಿಶು ಮರಣ ಪ್ರಮಾಣ ಕೆಳಮಟ್ಟದಲ್ಲಿದೆ. ಜನರ ಜೀವನಾಯುಷ್ಯ ಉತ್ತಮವಾಗಿದೆ. ತಾಯಂದಿರ ಮರಣ ಪ್ರಮಾಣವೂ ಕೆಳಮಟ್ಟದಲ್ಲಿದೆ. ಇವೆಲ್ಲ ಜನರ ಆರೋಗ್ಯಸೂಚಿಗಳಾಗಿವೆ.
1.2.7 ವಿಭಾಗದ ಸಾಂಸ್ಕೃತಿಕ ಸಂಪತ್ತು
ಸಾಂಸ್ಕೃತಿಕಕವಾಗಿ ಶ್ರೀಮಂತ ವಿಭಾಗ ಮೈಸೂರು ವಿಭಾಗ. ಈ ಜಿಲ್ಲೆಗಳಲ್ಲಿ ಪ್ರಕೃತಿ ಸಂಪತ್ತು ತುಂಬಿ ತುಳುಕುತ್ತಿದೆ. ಸಮೃದ್ಧ ನದಿಗಳು, ದಟ್ಟವಾದ ಅರಣ್ಯಗಳು, ವೈವಿಧ್ಯಮಯವಾದ ವನ್ಯಪ್ರಾಣಿಗಳು, ಮೈನವಿರೇಳಿಸುವ ಜಲಪಾತಗಳು, ಕಲೆ-ವಾಸ್ತು ವೈಭವ, ಸಾಹಿತ್ಯ, ಕಲೆಗಳ ತವರೂರು ಮೈಸೂರು ವಿಭಾಗದ ಜಿಲ್ಲೆಗಳು. ಮಂಡ್ಯ ಜಿಲ್ಲೆಯು ಸಕ್ಕರೆಗೆ ಪ್ರಸಿದ್ಧಿಯಾಗಿದ್ದರೆ ಹಾಸನ, ಚಿಕ್ಕಮಗಳೂರು ಜಿಲ್ಲೆಗಳು ಕಾಫಿಗೆ ಪ್ರಸಿದ್ಧವಾಗಿವೆ. ಯಕ್ಷಗಾನ ಕಲೆಗೆ ಕರಾವಳಿ ಜಿಲ್ಲೆಗಳು ಪ್ರಸಿದ್ಧವಾಗಿದ್ದರೆ ಕಂಸಾಳೆ ಕುಣಿತಕ್ಕೆ ಚಾಮರಾಜನಗರ ಪ್ರಸಿದ್ಧವಾಗಿದೆ. ಸೋಮನಾಥಪುರ, ಬೇಲೂರು ಚನ್ನಕೇಶವ ದೇವಾಲಯದ ಮದನಿಕೆ ವಿಗ್ರಹಗಳು, ಶ್ರವಣಬೆಳಗೊಳದ ಗೊಮ್ಮಟೇಶ್ವರನ ಏಕಶಿಲಾ ವಿಗ್ರಹ, ಹಳೇಬಿಡು, ಮೂಡುಬಿದ್ರೆ ಮುಂತಾದವು ವಿಶ್ವವಿಖ್ಯಾತ ಕಲಾಕುಸರಿ ಮೆರೆದಿರುವ ದೇವಾಲಯಗಳಿಗೆ ಹೆಸರುವಾಸಿಯಾಗಿವೆ. ಮೈಸೂರು ವಿಭಾಗದ ಜಿಲ್ಲೆಗಳೆಲ್ಲವೂ ಪ್ರವಾಸೋದ್ಯಮಕ್ಕೆ ಫಲವತ್ತಾದ ಕ್ಷೇತ್ರಗಳಾಗಿವೆ. ಕಾವೇರಿ ನದಿಯು ನಮ್ಮ ರಾಜ್ಯದ ಜೀವಧಾರೆಯಾಗಿದೆ. ಇದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟುತ್ತದೆ. ನೂರಾರು ಕಿಲೋಮೀಟರ್ ಉದ್ದದ ಕರಾವಳಿ ತೀರ ಇಲ್ಲಿದೆ. ಮೀನುಗಾರಿಕೆ, ಬಂದರು, ಸಮುದ್ರದ ಮೇಲಿನ ಸಾಹಸ ಕ್ರೀಡೆಗಳು, ಶೈಕ್ಷಣಿಕ ಕೇಂದ್ರಗಳು ಮುಂತಾದವು ಇಲ್ಲಿವೆ. ಸಾಂಸ್ಕೃತಿಕವಾಗಿ ಸಮೃದ್ಧವಾದ ವಿಭಾಗ ಮೈಸೂರು ವಿಭಾಗ.
1.2.8 ವಿಭಾಗದ ಸ್ವಾತಂತ್ರ್ಯ ಹೋರಾಟಗಾರರು
ಈ ವಿಭಾಗದ ಜಿಲ್ಲೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವು. ಗಾಂಧೀಜಿಗೆ ಪ್ರಿಯವಾಗಿದ್ದ ಖಾದಿ ಕೇಂದ್ರಗಳು, ಗೃಹ ಕೈಗಾರಿಕೆಗಳು ಕೂಡ ಇಲ್ಲಿ ವ್ಯಾಪಕವಾಗಿ ಚಾಲನೆಯಲ್ಲಿದ್ದವು. ಮಂಗಳೂರಿನ ಕುದ್ಮಲ್ ರಂಗರಾವ್ ಅವರು ಅಸ್ಪ್ರಶ್ಯತೆ ನಿವಾರಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ತಗಡೂರು ರಾಮಚಂದ್ರರಾವ್ ಅವರು ಗಾಂಧೀಜಿ ಅನುಯಾಯಿಗಳು. ಇವರೂ ಅಸ್ಪ್ರಶ್ಯತೆಯ ನಿವಾರಣೆಗಾಗಿ ಹೋರಾಟ ಮಾಡಿದರು. ಎಚ್. ಸಿ. ದಾಸಪ್ಪ, ಯಶೋಧರಮ್ಮ ದಾಸಪ್ಪ, ಕಾರ್ನಾಡ್ ಸದಾಶಿವರಾವ್, ಎಚ್. ಕೆ. ವೀರಣ್ಣಗೌಡ, ಕೆ. ಟಿ. ಭಾಷ್ಯಂ, ಕಮಲಾದೇವಿ ಚಟ್ಟೋಪಾಧ್ಯಾಯ, ಕೆ. ವಿ. ಶಂಕರೇಗೌಡ, ಕೆ. ರಾಮಕೃಷ್ಣ ಕಾರಂತ, ಸಿ. ಎಮ್. ಪೂಣಚ್ಚ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಅನೇಕರು ಕರ್ನಾಟಕ ಏಕೀಕರಣದಲ್ಲಿಯೂ ಭಾಗವಹಿಸಿದ್ದರು. ಹೀಗೆ ಮೈಸೂರು ವಿಭಾಗದ ಜಿಲ್ಲೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ್ದವು. ಮೈಸೂರಿನ ದಸರಾ ಉತ್ಸವವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾದ ಉತ್ಸವವಾಗಿದೆ.
1.3 ಕಲಬುರಗಿ ವಿಭಾಗ (ಕಲಬುರ್ಗಿ)
ಕಲಬುರಗಿ ವಿಭಾಗದಲ್ಲಿ ಏಳು ಜಿಲ್ಲೆಗಳಿವೆ. ಅವು ಯಾವುವೆಂದರೆ ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ. ಆರಂಭದಲ್ಲಿ ನಾಲ್ಕು ಜಿಲ್ಲೆಗಳಿದ್ದವು. ಆದರೆ 1997ರಲ್ಲಿ ರಾಯಚೂರು ಜಿಲ್ಲೆಯನ್ನು ವಿಭಜಿಸಿ ಕೊಪ್ಪಳ ಜಿಲ್ಲೆಯನ್ನು ರಚಿಸಲಾಯಿತು ಮತ್ತು ಕಲಬುರಗಿ ಜಿಲ್ಲೆಯನ್ನು ವಿಭಜಿಸಿ ಯಾದಗೀರ್ (ಯಾದಗಿರಿ) ಜಿಲ್ಲೆಯನ್ನು ಏಪ್ರಿಲ್ 10, 2010ರಂದು ರಚಿಸಲಾಯಿತು. 2021ರ ಅಕ್ಟೋಬರ್ 2ರಂದು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ಹುಟ್ಟುಹಾಕಲಾಯಿತು.
1.3.1 ಚಾರಿತ್ರಿಕ ಹಿನ್ನೆಲೆ
ಈ ವಿಭಾಗದ ಜಿಲ್ಲೆಗಳಿಗೆ ಅತ್ಯಂತ ಶ್ರೀಮಂತವಾದ ಪ್ರಾಚೀನ ಚರಿತ್ರೆಯಿದೆ. ಇತಿಹಾಸಪೂರ್ವ ಪಳೆಯುಳಿಕೆಗಳನ್ನು ಇಲ್ಲಿ ಕಾಣಬಹುದು. ಚರಿತ್ರೆಯ ಆರಂಭದಲ್ಲಿ ಈ ಪ್ರದೇಶವು ಮೌರ್ಯರ ಆಡಳಿತಕ್ಕೆ ಸೇರಿತ್ತು. ನಂತರ ಇದು ಶಾತವಾಹನರ ಆಳ್ವಿಕೆಗೆ ಒಳಪಟ್ಟಿತ್ತು. ಅಶೋಕನ ಅನೇಕ ಶಿಲಾಶಾಸನಗಳು ಇಲ್ಲಿ ದೊರೆತಿವೆ. ಸಾಮಾನ್ಯ ಶಕೆ 8ನೆಯ ಶತಮಾನದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ಆಳ್ವಿಕೆ ನಡೆಸಿತು. ಅವರ ರಾಜಧಾನಿಯಾಗಿದ್ದ ಮಾನ್ಯಖೇಟ (ಇಂದಿನ ಮಳಖೇಡ) ಕಲಬುರಗಿ ಜಿಲ್ಲೆಯಲ್ಲಿದೆ. ಕಲ್ಯಾಣ ಚಾಲುಕ್ಯರು ನಂತರ ಆಳ್ವಿಕೆ ನಡೆಸಿದರು. ಬಸವಕಲ್ಯಾಣವು ಇವರ ರಾಜಧಾನಿಯಾಗಿತ್ತು. ವಿಜಯನಗರ ಜಿಲ್ಲೆಯ ಹಂಪಿಯು ವಿಜಯನಗರ ಅರಸರ ರಾಜಧಾನಿಯಾಗಿತ್ತು. ಪ್ರಸಿದ್ಧ ವಚನಕಾರ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯ ಕೇಂದ್ರವಾದ ಕಲ್ಯಾಣವು ಕಲಬುರಗಿ ವಿಭಾಗಕ್ಕೆ ಸೇರಿದೆ. ಮುಂದೆ ಮಧ್ಯಯುಗದಲ್ಲಿ ಬಹಮನಿ ಅರಸರು ಅಧಿಕಾರಕ್ಕೆ ಬಂದರು. ಅವರ ರಾಜಧಾನಿ ಕಲಬುರಗಿಯಾಗಿತ್ತು. ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಗಳ ಪತನದ ನಂತರ ಕಲಬುರಗಿ ಪ್ರದೇಶವು ಹೈದರಾಬಾದ್ ನಿಜಾಮ ಆಳ್ಚಿಕೆಗೆ ಒಳಪಟ್ಟಿತ್ತು. ಮುಂದೆ 1948ರಲ್ಲಿ ನಿಜಾಮ್ ಸಂಸ್ಥಾನ ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿತು. ರಾಜ್ಯ ಪುನರ್ ವಿಂಗಡಣೆ ಯೋಜನೆ ಪ್ರಕಾರ 1956ರಲ್ಲಿ ನಿಜಾಮ್ ಸಂಸ್ಥಾನದ ವಶದಲ್ಲಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡವು. ಕಲಬುರಗಿಯು ವಿಭಾಗೀಯ ಕೇಂದ್ರವಾಗಿದೆ. ಮದರಾಸು ಪ್ರಾಂತಕ್ಕೆ ಸೇರಿದ್ದ ಅವಿಭಜಿತ ಬಳ್ಳಾರಿ ಜಿಲ್ಲೆಯು ಕರ್ನಾಟಕದಲ್ಲಿ ವಿಲೀನಗೊಂಡಿತು.
ಬಹಮನಿ ಮತ್ತು ವಿಜಯನಗರ ಆಳ್ವಿಕೆಯ ನಂತರ ಅನೇಕ ಪಾಳೇಗಾರರು ಈ ಪ್ರದೇಶದಲ್ಲಿ ಸ್ವತಂತ್ರರಾದರು. ಅವರಲ್ಲಿ ಹರಪನಹಳ್ಳಿ, ಜರಿಮಲೆ, ಸಂಡೂರು ಮತ್ತು ಸುರಪುರ ಪಾಳೆಗಾರರು ಪ್ರಸಿದ್ಧರಾಗಿದ್ದಾರೆ. ಸುರಪುರ ನಾಯಕ ಕೃಷ್ಣಪ್ಪನಾಯಕರು ಕಾಲವಶರಾದ ಮೇಲೆ ಅವರ ಮಗ ವೆಂಕಟಪ್ಪ ನಾಯಕ ಅಧಿಕಾರಕ್ಕೆ ಬಂದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಿಳಿದುಕೊಂಡಿದ್ದ ವೆಂಕಟಪ್ಪ ನಾಯಕರು ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದರು. ಆದರೆ ವೆಂಕಟಪ್ಪ ನಾಯಕರನ್ನು ಸೆರೆ ಹಿಡಿದ ಬ್ರಿಟಿಷರು ಅವರನ್ನು ಸೆರೆಮನೆಗಟ್ಟಿದರು. ಬ್ರಿಟಿಷರು ಸುರಪುರವನ್ನು ಹೈದರಾಬಾದ್ ನಿಜಾಮನಿಗೆ ಕೊಡುಗೆಯಾಗಿ ನೀಡಿದರು. ಹೀಗೆ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ನಿಜಾಮ್ ಸಂಸ್ಥಾನದ ಭಾಗವಾದವು. ಈ ಜಿಲ್ಲೆಗಳು 1956ರಲ್ಲಿ ಕರ್ನಾಟಕದಲ್ಲಿ ವಿಲೀನಗೊಂಡವು.
ಹೈದರಾಬಾದ್ ಕರ್ನಾಟಕ ಪ್ರದೇಶ ವಿಮೋಚನಾ ಹೋರಾಟ
ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ನಿಜಾಮನು ಭಾರತ ಗಣರಾಜ್ಯದಲ್ಲಿ ತನ್ನ ಸಂಸ್ಥಾನವನ್ನು ವಿಲೀನಗೊಳಿಸಲು ಸಿದ್ಧನಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಜನರು ನಿಜಾಮಶಾಹಿ ವಿರುದ್ಧ ಹೋರಾಟವನ್ನು ನಡೆಸಿದರು. ಈ ಭಾಗದ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ಸ್ವಾಮಿ ರಮಾನಂದತೀರ್ಥರು ವಹಿಸಿದ್ದರು. ನಿಜಾಮ್‍ನ ವಶದಲ್ಲಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ವಿಮೋಚನಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮುಖಂಡರೆಂದರೆ ಸರದಾರ್ ಶರಣಗೌಡ ಇನಾಂದಾರ್, ಶಿವಮೂರ್ತಿ ಅಳವಂಡಿ, ಶಿರೂರು ವೀರಭದ್ರಪ್ಪ, ಪ್ರಭುರಾಜ ಪಾಟೀಲ ಸಂಗನಾಳ, ಪುಂಡಲೀಕಪ್ಪ ಮುಂತಾದವರು. ಇವರು ನಿಜಾಮಶಾಹಿ ವಿರುದ್ಧ ಸತ್ಯಾಗ್ರಹವನ್ನು ಸಂಘಟಿಸಿದರು. ನಿಜಾಮ ಸರ್ಕಾರವು ನಾಗರಿಕರಿಗೆ ಹಿಂಸೆಯನ್ನು ಕೊಡ ತೊಡಗಿತು. ರಜಾಕಾರರೆಂಬ ನಿಜಾಮ್ ಖಾಸಗಿ ಸೈನ್ಯದ ವಿರುದ್ಧ ಜನರು ತೀವ್ರ ಹೋರಾಟ ನಡೆಸಿದರು. ಕೇಂದ್ರ ಸರ್ಕಾರವು ನೇರ ಕ್ರಮವನ್ನು ತೆಗೆದುಕೊಂಡು ನಿಜಾಮ ಸಂಸ್ಥಾನವನ್ನು ಭಾರತ ಗಣರಾಜ್ಯದಲ್ಲಿ ಸೆಪ್ಟೆಂಬರ್ 17, 1948ರಲ್ಲಿ ವಿಲೀನಗೊಳಿಸಿತು. ಈ ಕಾರ್ಯಾಚರಣೆಯ ಮುಖ್ಯ ರೂವಾರಿ ಆಗ ಕೇಂದ್ರ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಬಾಯ್ ಪಟೇಲರು.
1.3.2 ಪ್ರಾಕೃತಿಕ ಸಂಪನ್ಮೂಲ
ಈ ವಿಭಾಗದ ಪ್ರಮುಖ ನದಿಗಳೆಂದರೆ ಭೀಮ, ತುಂಗಭದ್ರ, ಕೃಷ್ಣ, ಮುಲ್ಲಾಮಾರಿ, ಬೆಣ್ಣೆತೊರ ಮುಂತಾದವು. ಕಾರಂಜಾ ಅಣೆಕಟ್ಟೆಯು ಬೀದರ್ ಜಿಲ್ಲೆಯ ವರದಾನವಾಗಿದೆ. ಕೆಂಪು, ಕಪ್ಪು ಮತ್ತು ಮೆಕ್ಕೆ ಮಣ್ಣು ವಿಭಾಗದಲ್ಲಿದೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭತ್ತವನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಕಬ್ಬು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹತ್ತಿ, ನವಣೆ, ಕುಸುಬೆ, ಜೋಳ, ಹುರುಳಿ, ತೊಗರಿ ಮುಂತಾದವು ವಿಭಾಗದ ಪ್ರಮುಖ ಬೆಳೆಗಳು. ಈ ವಿಭಾಗದ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ವಿರಳವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ದಟ್ಟವಾದ ಅರಣ್ಯ ಪ್ರದೇಶವಿದೆ. ಬೀದರ್ ಜಿಲ್ಲೆಯಲ್ಲಿ ತೆಳುವಾದ ಅರಣ್ಯ ಪ್ರದೇಶವಿದೆ. ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಕನಿಷ್ಠತಮವಾಗಿದೆ.
ಈ ವಿಭಾಗದ ಜಿಲ್ಲೆಗಳಲ್ಲಿ ದೊರೆಯುವ ಪ್ರಮುಖ ಖನಿಜಗಳೆಂದರೆ ಬೆಳ್ಳಿ, ಸಿಲಿಕ, ಚಿನ್ನ (ರಾಯಚೂರು ಜಿಲ್ಲೆ), ಕಬ್ಬಿಣದ ಅದಿರು, ಸುಣ್ಣಕಲ್ಲು, ಮ್ಯಾಂಗನೀಸ್ ಅದಿರು (ಬಳ್ಳಾರಿ, ವಿಜಯನಗರ). ಗ್ರಾನೈಟ್ ಶಿಲೆಯು ವಿಭಾಗದ ಎಲ್ಲ ಜಿಲ್ಲೆಗಳಲ್ಲೂ ದೊರೆಯುತ್ತದೆ. ಪ್ರಾಕೃತಿಕ ಸಂಪನ್ಮೂಲ ದೃಷ್ಟಿಯಿಂದ ಇದು ಸಮೃದ್ಧ ವಿಭಾಗವಲ್ಲ.
ತುಂಗಭದ್ರಾ ಅಣೆಕಟ್ಟೆಯು ವಿಭಾಗದ ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ನೀರಾವರಿ ಒದಗಿಸುತ್ತದೆ. ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಸವಸಾಗರ ಅಣೆಕಟ್ಟೆಯು ರಾಯಚೂರು ಮತ್ತು ಕಲಬುರಗಿ ಜಿಲ್ಲೆಯ ಕೃಷಿಗೆ ನೀರಾವರಿ ಒದಗಿಸುತ್ತದೆ. ಕಾರಂಜಾ ಯೋಜನೆಯು ಬೀದರ್ ಜಿಲ್ಲೆಯ ಕೃಷಿಗೆ ನೀರಾವರಿ ಒದಗಿಸುತ್ತದೆ.
1.3.3 ಅರಣ್ಯಗಳು, ವನ್ಯಮೃಗಧಾಮಗಳು
ಈ ವಿಭಾಗವು ಅರಣ್ಯ ಕೊರತೆಯ ವಿಭಾಗವಾಗಿದೆ. ದೊಡ್ಡ ವನ್ಯಮೃಗಗಳು ಇಲ್ಲಿಲ್ಲ. ಲಂಗೂರ್, ಜಿಂಕೆ, ನರಿ, ಮಂಗಗಳು, ಕರಡಿ, ತೋಳ, ಕಾಡುನಾಯಿ ಮುಂತಾದ ಪ್ರಮುಖ ವನ್ಯಮೃಗಗಳು ಇಲ್ಲಿ ಕಂಡು ಬರುತ್ತವೆ. ಬಳ್ಳಾರಿ ಜಿಲ್ಲೆಯಲ್ಲಿ ದರೋಜಿ ಕರಡಿ ಧಾಮವಿದೆ. ರಾಯಚೂರು ಜಿಲ್ಲೆಯಲ್ಲಿ ಜಿಂಕೆಗಳು ಕಂಡು ಬರುತ್ತವೆ.
1.3.4 ಕೃಷಿ ಹಾಗೂ ಕೈಗಾರಿಕೆಗಳು
ಈ ವಿಭಾಗದಲ್ಲಿ ಜನರ ಮುಖ್ಯ ಉದ್ಯೋಗ ಒಕ್ಕಲುತನ. ಇಲ್ಲಿ ಮಳೆಯ ಪ್ರಮಾಣ ಕಡಿಮೆ. ಮಳೆಯನ್ನು ಅವಲಂಬಿಸಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಇಲ್ಲಿ ಮೇಲಿಂದ ಮೇಲೆ ಬರಗಾಲವು ಜನರನ್ನು ಕಾಡುತ್ತದೆ. ಈ ವಿಭಾಗದ ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳು ಎಂದು ಕರೆಯಲಾಗುತ್ತದೆ. ಈ ವಿಭಾಗದಲ್ಲಿನ ಪ್ರಮುಖ ಉದ್ದಿಮೆಗಳೆಂದರೆ ಕಬ್ಬಿಣ ಮತ್ತು ಉಕ್ಕು, ಸಕ್ಕರೆ, ಸೀಮೆಂಟು, ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮುಂತಾದವು. ಈ ಉದ್ದಿಮೆಗಳು ಪುರುಷರು ಮತ್ತು ಮಹಿಳೆಯರಿಗೆ ಉದ್ಯೋಗದ ಅವಕಾಶಗಳನ್ನು ನೀಡಿವೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬೃಹತ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳಿವೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬೃಹತ್ ಸಿಮೆಂಟ್ ಕಾರ್ಖಾನೆಗಳಿವೆ. ಬೀದರ್ ಜಿಲ್ಲೆಯ ಬಿದರಿ ಕಲೆಯು ಹೆಸರುವಾಸಿಯಾಗಿದೆ. ಈ ವಿಭಾಗದಲ್ಲಿ ಪ್ರವಾಸೋದ್ಯಮವು ಬೆಳೆಯುತ್ತಿದೆ. ಈ ವಿಭಾಗದಲ್ಲಿರುವ ಪ್ರಮುಖ ಪ್ರವಾಸಿ ಕೇಂದ್ರಗಳೆಂದರೆ ವಿಜಯನಗರ ಜಿಲ್ಲೆಯ ಹಂಪಿ, ತುಂಗಭದ್ರ ಅಣೆಕಟ್ಟೆ, ಕಲಬುರಗಿ ಜಿಲ್ಲೆಯ ಸನ್ನತಿ, ಖ್ವಾಜಾ ಬಂದೇ ನವಾಜ್ ದರ್ಗಾ, ಬೀದರ್ ಜಿಲ್ಲೆಯಲ್ಲಿನ ಕೋಟೆ, ಬಸವಕಲ್ಯಾಣ, ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಮುಂತಾದವು. ಇಡೀ ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡುವ ಗಣಿ ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿದೆ.
1.3.5 ಕಲೆ, ಸಾಹಿತ್ಯ, ಸಂಗೀತ, ಜಾನಪದ, ನಾಟಕ, ನೃತ್ಯ
ಕಲಬುರಗಿ ವಿಭಾಗದ ಜಿಲ್ಲೆಗಳು ಆರ್ಥಿಕವಾಗಿ ಹಿಂದುಳಿದಿರಬಹುದು. ಆದರೆ ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಮುಂತಾದ ವಿಷಯಗಳಲ್ಲಿ ಅದು ಶ್ರೀಮಂತವಾಗಿದೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗಕ್ಕೆ ಪ್ರಾಚೀನ ಚರಿತ್ರೆಯಿದೆ. ಕನ್ನಡದ ಶಾಸ್ತ್ರಕೃತಿ ‘ಕವಿರಾಜಮಾರ್ಗ’ ರಚನೆಯಾದುದು ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ. ಆದಿಕವಿ ಪಂಪನು ಅರಸ ಅರಿಕೇಸರಿ ನೀಡಿದ ರಾಜಾಶ್ರಯದಲ್ಲಿ ತನ್ನ ಮಹತ್ವವಾದ ಕಾವ್ಯ ‘ವಿಕ್ರಮಾರ್ಜುನವಿಜಯ’ವನ್ನು ರಚಿಸಿದ. ಕನ್ನಡದಲ್ಲಿ ಮೂರು ರತ್ನತ್ರಯರನ್ನು ಗುರುತಿಸಲಾಗುತ್ತದೆ. ಅವರು ಪಂಪ, ಪೊನ್ನ ಮತ್ತು ರನ್ನ. ಇವರು ಮೂವರು ಕಲಬುರಗಿ ವಿಭಾಗಕ್ಕೆ ಸೇರಿದವರು. ಕನ್ನಡದ ಪ್ರಥಮ ವ್ಯಾಕರಣ ಗ್ರಂಥ ‘ಶಬ್ದಮಣಿದರ್ಪಣ’ವನ್ನು ರಚಿಸಿದ ಕೇಶೀರಾಜ ಕಲಬುರಗಿ ಜಿಲ್ಲೆಗೆ ಸೇರಿದವನು.
ವಚನ ಚಳವಳಿ :
ಕರ್ನಾಟಕದಲ್ಲಿ 12ನೆಯ ಶತಮಾನದಲ್ಲಿ ಜರುಗಿದ ಮಹತ್ವದ ಸಮಾಜ ಸುಧಾರಣಾ ಚಳವಳಿ ಎಂದೇ ಹೆಸರಾಗಿರುವ ವಚನ ಸಾಹಿತ್ಯ ಪರಂಪರೆಯು ಕಲಬುರಗಿ ವಿಭಾಗದ ಕಲ್ಯಾಣ ನಗರದಲ್ಲಿ ಬೆಳೆಯಿತು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಜೇಡರದಾಸಿಮಯ್ಯ, ಸಿದ್ಧರಾಮ ಮುಂತಾದ ಶಿವಶರಣರು ಸಿದ್ಧಿ ಸಾಧನೆ ಮಾಡಿದ ಕಾರ್ಯಕ್ಷೇತ್ರ ಕಲಬುರಗಿ ವಿಭಾಗ. ಈ ಚಳವಳಿಯ ಭಾಗವಾಗಿ ಸಮಾಜದ ಎಲ್ಲ ಸ್ತರದ ಪುರುಷರು ಮತ್ತು ಮಹಿಳೆಯರು ವಚನಗಳನ್ನು ಬರೆದರು.
ದಾಸ ಸಾಹಿತ್ಯ :
ಕಲಬುರಗಿ ವಿಭಾಗದ ರಾಯಚೂರು ಜಿಲ್ಲೆಯು ದಾಸ ಸಾಹಿತ್ಯದ ತವರೂರು. ಶ್ರೀವ್ಯಾಸರಾಯರ ನೇತೃತ್ವದಲ್ಲಿ ದಾಸಕೂಟವನ್ನು ರೂಪಿಸಲಾಯಿತು. ಪುರಂದರದಾಸರು, ಕನಕದಾಸರು, ರಾಘವೇಂದ್ರತೀರ್ಥರು ಮುಂತಾದವರು ಕೀರ್ತನೆಗಳನ್ನು ರಚಿಸಿದರು. ದಾಸಸಾಹಿತ್ಯವು ಮುಂದೆ ಕರ್ನಾಟಕ ಸಂಗೀತ ಪರಂಪರೆಗೆ ದೊಡ್ಡ ಕೊಡುಗೆಯನ್ನೇ ಕೊಟ್ಟಿತು. ನೂರಾರು ದಾಸರ ಕೃತಿ, ಕೀರ್ತನೆ, ಸುಳಾದಿ, ಗೀತ, ಪ್ರಬಂಧ, ನಾಮಾವಳಿ ಮುಂತಾದ ಸಂಗೀತರಚನೆಗಳಿಂದ ಕನ್ನಡ ಸಾಹಿತ್ಯ ಶ್ರೀಮಂತವಾಯಿತು.
ತತ್ವ ಪದಕಾರರು
ವಚನ ಸಾಹಿತ್ಯ, ದಾಸ ಸಾಹಿತ್ಯ, ಪ್ರಾಚೀನ ಕಾವ್ಯಗಳು ಮುಂತಾದ ವಿಚಾರಗಳಿಂದ ಪ್ರಭಾವಿತರಾದ ಜನರು ತತ್ತ್ವಪದಗಳನ್ನು ಕಟ್ಟಿದರು. ಜನಪದ ಕಲಾವಿದರು, ಸಾಧು-ಸಂತರು, ಫಕೀರರು ಕಟ್ಟಿದ ಹಾಡುಗಳನ್ನು ತತ್ತ್ವಪದಗಳು ಎಂದು ಕರೆಯಬಹುದು. 18 ಮತ್ತು 19ನೆಯ ಶತಮಾನದಲ್ಲಿ ಅನೇಕ ತತ್ತ್ವಪದಕಾರರು ಲಿಂಗ ಅಸಮಾನತೆಯ ವಿರುದ್ಧ, ಅಸ್ಪ್ರಶ್ಯತೆ ವಿರುದ್ಧ, ಸುಳ್ಳು ಹೇಳುವುದರ ವಿರುದ್ಧ, ಹಣ ಸಂಪಾದನೆ ವಿರುದ್ಧ ತಮ್ಮ ಪದಗಳಲ್ಲಿ ವ್ಯಂಗ್ಯವಾಡಿದ್ದಾರೆ. ಚೆನ್ನೂರ ಜಲಾಲ್ ಸಾಬ್, ಹನುಮಂತವ್ವ ಮುಂತಾದವರು ತತ್ತ್ವಪದಗಳನ್ನು ರಚಿಸಿದ್ದಾರೆ. ಅನೇಕ ಅನಕ್ಷರಸ್ಥರು ತತ್ತ್ವಪದಗಳನ್ನು ಕಟ್ಟಿ ಹಾಡಿದ್ದಾರೆ.
ಆಧುನಿಕ ಕಾಲಕ್ಕೆ ಬಂದರೆ ಕಲಬುರಗಿ ವಿಭಾಗದಲ್ಲಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರೆಂದರೆ ಸಿದ್ದಯ್ಯ ಪುರಾಣಿಕ, ಜಯತೀರ್ಥ ರಾಜಪುರೋಹಿತ, ಶಾಂತರಸ, ಪಂಡಿತ ತಾರಾನಾಥ, ಬೀಚಿ, ಮುದೇನೂರ ಸಂಗಣ್ಣ, ಸಿಂಪಿಲಿಂಗಣ್ಣ, ಶ್ರೀಮತಿ ಶೈಲಜ ಚಡಚಣ, ಜಯದೇವಿ ತಾಯಿ ಲಿಗಾಡೆ, ಚೆನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ ಮುಂತಾದವರು. ಸಂಗೀತ ಕ್ಷೇತ್ರಕ್ಕೂ ಕಲಬುರಗಿ ವಿಭಾಗ ಅಪಾರ ಕಾಣಿಕೆ ನೀಡಿದೆ. ಸಿದ್ಧರಾಮ ಜಂಬಲದಿನ್ನಿ, ಪಂ. ತಾರಾನಾಥ, ಗಜಲ್ ಗುಂಡಮ್ಮ, ಸುಭದ್ರಮ್ಮ ಮನ್ಸೂರ್ ಮುಂತಾದವರು ಸಂಗೀತ ಕ್ಷೇತ್ರಕ್ಕೆ ಕಾಣಿಕೆ ನೀಡಿದ್ದಾರೆ. ಚಿತ್ರಕಲೆಯಲ್ಲಿ ಪ್ರಸಿದ್ಧರಾದ ಎಸ್. ಎಂ. ಪಂಡಿತ್ ಅವರ ಹೆಸರು ಮುಂಚೂಣಿಯಲ್ಲಿದೆ. ಜನಪದ ನಾಟಕಕ್ಕೆ ಬಂದರೆ ಕಲಬುರಗಿ ವಿಭಾಗದಲ್ಲಿ ದೊಡ್ಡಾಟ, ಸಣ್ಣಾಟ, ತೊಗಲು ಗೊಂಬೆ ಪ್ರದರ್ಶನ ಮುಂತಾದವು ಪ್ರಚಲಿತದಲ್ಲಿವೆ. ತೊಗಲು ಬೊಂಬೆಯಾಟದಲ್ಲಿ ಬೆಳಗಲ್ ವೀರಣ್ಣ ಪ್ರಸಿದ್ಧರು.
ನಂದಿ ಕುಣಿತ, ಅಲಾವಿ ಕುಣಿತ, ಚೌಡಮ್ಮನ ಕುಣಿತ, ಲಂಬಾಣಿ ಕುಣಿತ, ಕೋಲಾಟ, ವೀರಗಾಸೆ, ದುರಗ-ಮುರಗಿ ಮುಂತಾದವು ಜನಪದ ಕಲಾ ಪ್ರಕಾರಗಳಾಗಿವೆ. ಕರಡಿ ಮಜಲು, ಶಿಳ್ಳೆಕ್ಯಾತರ ಆಟ, ಮೊಹರಂ ಕುಣಿತ, ಹಗಲು ವೇಷಗಾರರು ಮುಂತಾದವು ಜನಪದ ಪ್ರಕಾರಗಳಾಗಿವೆ. ಬೀದರ್ ಜಿಲ್ಲೆಯ ಬಿದರಿ ಕಲೆ, ಕಿನ್ನಾಳದ ಗೊಂಬೆಗಳು, ಕೊಪ್ಪಳ ಜಿಲ್ಲೆಯ ಕೌದಿಗಳು ಮುಂತಾದವು ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆಗಳಾಗಿವೆ.
1.3.6 ಶಿಕ್ಷಣ – ಆರೋಗ್ಯ
ನಮ್ಮ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಾದ ಯಾದಗೀರ್, ರಾಯಚೂರು ಜಿಲ್ಲೆಗಳು ಕಲಬುರಗಿ ವಿಭಾಗದಲ್ಲಿವೆ. ಶೈಕ್ಷಣಿಕ ಪ್ರಗತಿಯ ಸೂಚಿಯಾದ ಸಾಕ್ಷರತೆಯ ಪ್ರಮಾಣ ಇಲ್ಲಿ ಕೆಳಮಟ್ಟದಲ್ಲಿದೆ. ಇತ್ತೀಚೆಗೆ ಸಾಕ್ಷರತೆಯ ಮಟ್ಟ ಉತ್ತಮವಾಗುತ್ತಿದೆ. ಈ ವಿಭಾಗದ ಕಲಬುರಗಿ ನಗರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವಿದೆ ಹಾಗೂ ಇಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವಿದೆ. ರಾಯಚೂರು ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಮತ್ತು ಬಳ್ಳಾರಿಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವಿದೆ ಹಾಗೂ ವಿಜಯನಗರ ಜಿಲ್ಲೆಯ ಹಂಪಿ ಪ್ರದೇಶದಲ್ಲಿ ಕನ್ನಡ ವಿಶ್ವವಿದ್ಯಾಲಯ ಇದೆ. ಬೀದರಿನಲ್ಲಿ ಪಶು ಸಂಗೋಪನಾ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯವಿದೆ. ಕಲಬುರಗಿಯಲ್ಲಿ ಪ್ರಸಿದ್ಧ ಬುದ್ಧ ವಿಹಾರವಿದೆ.
ಬಳ್ಳಾರಿ, ಕಲಬುರಗಿ, ರಾಯಚೂರು, ಬೀದರ್‍ನಲ್ಲಿ ವೈದ್ಯಕೀಯ ಕಾಲೇಜುಗಳಿವೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆರೋಗ್ಯ ಒದಗಿಸುವ ಆರೋಗ್ಯ ಉಪಕೇಂದ್ರಗಳಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ತೀವ್ರಗತಿಯಲ್ಲಿ ನಡೆಯುತ್ತಿದೆ. ಇಲ್ಲಿ ದೊಡ್ಡದಾದ ಇ.ಎಸ್.ಐ ಆಸ್ಪತ್ರೆಯು ಇದೆ.
1.3.7 ಸಾಂಸ್ಕೃತಿಕ ಸಂಪತ್ತು
ಸಂಗೀತ, ಸಾಹಿತ್ಯ, ಚಿತ್ರಕಲೆ, ಜಾನಪದ, ನಾಟಕ, ನೃತ್ಯ, ಮುಂತಾದ ಕ್ಷೇತ್ರಗಳಲ್ಲಿ ಕಲಬುರಗಿ ವಿಭಾಗದ ಜಿಲ್ಲೆಗಳು ನಾಡಿಗೆ ಅಪಾರ ಕಾಣಿಕೆ ನೀಡಿವೆ. ಕರ್ನಾಟಕದ ಪ್ರಾಚೀನ ನಾಲ್ಕು ಮಹತ್ವದ ರಾಜ ಮನೆತನಗಳಿಗೆ ಇದು ಆಶ್ರಯ ನೀಡಿದೆ. ಅವು ಯಾವುವೆಂದರೆ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಗಳು. ಈ ರಾಜ ಮನೆತನಗಳ ಆಳ್ವಿಕೆಯಲ್ಲಿ ಸಾಹಿತ್ಯ, ಕಲೆ, ಸಂಗೀತಗಳಿಗೆ ಪ್ರೋತ್ಸಾಹ ದೊರೆತಿದೆ. ವೃತ್ತಿ ರಂಗಭೂಮಿಗೂ ಈ ವಿಭಾಗ ಹೆಸರುವಾಸಿಯಾಗಿದೆ.
ಬೀದರ್‍ನ ಬಿದರಿ ಕಲೆ, ಕಿನ್ನಾಳದ ಆಟಿಕೆಗಳು, ಕೌದಿ ಮುಂತಾದ ಗೃಹ ಕೈಗಾರಿಕೆಗಳು ಇಲ್ಲಿವೆ. ಪ್ರಾಚೀನ ವಾಸ್ತುಶಿಲ್ಪ ಕಲೆಗೆ ಇದು ಹೆಸರುವಾಸಿಯಾಗಿದೆ. ಬೀದರ್‍ನ ಕೋಟೆ, ಹಂಪಿಯ ಸ್ಮಾರಕಗಳು, ಬಸವ ಕಲ್ಯಾಣದ ಬಸವ ಸ್ಮಾರಕಗಳು, ಕಲಬುರಗಿಯ ಖ್ವಾಜಾ ಬಂದೇ ನವಾಜ ದರ್ಗಾ, ಸನ್ನತಿಯ ಸ್ಮಾರಕಗಳು ಇತ್ಯಾದಿ ಇಲ್ಲಿನ ವಾಸ್ತುಶಿಲ್ಪದ ಅದ್ಭುತಗಳಾಗಿವೆ.
1.3.8 ಸ್ವಾತಂತ್ರ್ಯ ಹೋರಾಟಗಾರರು
ಕರ್ನಾಟಕದ ಇತರೆ ಭಾಗಗಳಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದರೆ ಕಲಬುರಗಿ ವಿಭಾಗದಲ್ಲಿ ಜನರು ಸ್ವಾತಂತ್ರ್ಯ ಹೋರಾಟ, ನಿಜಾಮ್ ಸಂಸ್ಥಾನದ ವಿಮೋಚನಾ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಭಾಗವಹಿಸಬೇಕಾಯಿತು. ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದಂತೆ ಕಲಬುರಗಿ ವಿಭಾಗದಲ್ಲಿ ನಡೆದ ಎರಡು ಬೆಳವಣಿಗೆಗಳನ್ನು ಉಲ್ಲೇಖಿಸಬೇಕು. ಮೊದಲನೆಯದು ಜನರಲ್ಲಿ ರಾಷ್ಟ್ರೀಯ ಚಳವಳಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಲಾದ ವಾಚನಾಲಯ ಚಳವಳಿ ಮತ್ತು ಎರಡನೆಯದು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ತರಬೇತಿ ನೀಡಲು ರಾಷ್ಟ್ರೀಯ ಶಾಲೆಗಳ ಸ್ಥಾಪನೆ. ನಾಲ್ಕು ರಾಷ್ಟ್ರೀಯ ಶಾಲೆಗಳು ಸ್ಥಾಪಿಸಲ್ಪಟ್ಟವು. ಅವುಗಳೆಂದರೆ,
- ನೂತನ ವಿದ್ಯಾಲಯ, ಕಲಬುರಗಿ (1907)
- ಉಸ್ಮಾನಿಯ ರಾಷ್ಟ್ರೀಯ ಶಾಲೆ, ಚಿಂಚೋಳಿ
- ವಿದ್ಯಾನಂದ ಗುರುಕುಲ, ಕುಕನೂರು (1922)
- ಹಮ್‍ದರ್ದ್ ರಾಷ್ಟ್ರೀಯ ಶಾಲೆ, ರಾಯಚೂರು (1922).
ಈ ವಿಭಾಗದಲ್ಲಿ ಸ್ವಾತಂತ್ರ್ಯ ಚಳವಳಿಗೆ ಪ್ರೇರಣೆ ಆರ್ಯ ಸಮಾಜದಿಂದ ಮತ್ತು ವಂದೇಮಾತರಂ ಚಳವಳಿಗಳಿಂದ ಬಂದಿತು. ಮಹಾಗಾಂವ್‍ನ ಕಲ್ಯಾಣಶೆಟ್ಟಿ ಅವರು ಸ್ವಾತಂತ್ರ್ಯ ಹೋರಾಟ ನಡೆಸಲು ತರುಣ ಸಂಘವನ್ನು ಕಟ್ಟಿದರು. ಮಹಾಗಾಂವ್‍ನ ಚಂದ್ರಶೇಖರ ಪಾಟೀಲರು ಅದರ ಅಧ್ಯಕ್ಷರಾಗಿ ಅದನ್ನು ಮುನ್ನಡೆಸಿದರು. ಶ್ರೀ ರಮಾನಂದ ತೀರ್ಥ ಅವರು ಈ ವಿಭಾಗದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಇವರಲ್ಲದೆ ನೂರಾರು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು.
ನಿಜಾಮ್‍ಶಾಹಿ ವಿಮೋಚನಾ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಸರದಾರರು ಶರಣಗೌಡ ಇನಾಂದಾರ್ ಪ್ರಮುಖರು. ನಿಜಾಮನ ಖಾಸಗಿ ಸೈನ್ಯ ರಜಾಕಾರರು ಕಲಬುರಗಿ ವಿಭಾಗದಲ್ಲಿ ನಾಗರಿಕರ ಮೇಲೆ ಅಪಾರ ಹಿಂಸೆ ನಡೆಸಿದರು. ಅವರ ವಿರುದ್ಧ ಜನರು ತೀವ್ರ ವಿರೋಧ ವ್ಯಕ್ತಪಡಿಸಿದರು. ಭಾರತಕ್ಕೆ ಆಗಸ್ಟ್ 15, 1947ರಲ್ಲಿ ಸ್ವಾತಂತ್ರ್ಯ ಬಂದಿತು. ಸೆಪ್ಟೆಂಬರ್ 17, 1948ರಂದು ನಿಜಾಮ್ ಸಂಸ್ಥಾನ ಭಾರತ ಗಣರಾಜ್ಯದಲ್ಲಿ ವಿಲೀನಗೊಂಡಿತು.
1.4 ಬೆಳಗಾವಿ ವಿಭಾಗ
ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಮುಂಬೈ ಪ್ರಾಂತದಲ್ಲಿದ್ದವು. ರಾಜ್ಯ ಪುನರ್ವಿಂಗಡಣೆಯಲ್ಲಿ ಕರ್ನಾಟಕದಲ್ಲಿ ವಿಲೀನಗೊಂಡವು. ಈ ವಿಭಾಗದ ಧಾರವಾಡ ಜಿಲ್ಲೆಯನ್ನು 1997ರಲ್ಲಿ ವಿಭಜಿಸಿ ಹಾವೇರಿ ಮತ್ತು ಗದಗ ಜಿಲ್ಲೆಗಳನ್ನು ರಚಿಸಲಾಯಿತು ಮತ್ತು ವಿಜಾಪುರ (ವಿಜಯಪುರ) ಜಿಲ್ಲೆಯನ್ನು ವಿಭಜಿಸಿ ಬಾಗಲಕೋಟೆ ಜಿಲ್ಲೆಯನ್ನು ರಚಿಸಲಾಯಿತು. ಈ ವಿಭಾಗದಲ್ಲಿ ಇಂದು ಏಳು ಜಿಲ್ಲೆಗಳಿವೆ. ಅವು ಯಾವುವೆಂದರೆ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆ.
1.4.1 ಚಾರಿತ್ರಿಕ ಹಿನ್ನೆಲೆ
ಈ ಪ್ರದೇಶದಲ್ಲಿ ಶಾತವಾಹನರು ಮತ್ತು ಮೌರ್ಯರು ಆಳ್ವಿಕೆ ನಡೆಸಿದರು. ಈ ವಿಭಾಗದ ಬನವಾಸಿಯು ಕದಂಬರ ರಾಜಧಾನಿಯಾಗಿತ್ತು. ಚಾಲುಕ್ಯರ ರಾಜಧಾನಿ ಬಾದಾಮಿ ಇಲ್ಲಿದೆ. ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆಗಳಲ್ಲಿ ವಿಶ್ವ ಪ್ರಸಿದ್ಧ ದೇವಾಲಯಗಳಿವೆ. ಬಾದಾಮಿಯ ಗವಿಗಳಲ್ಲಿ ಶಿಲ್ಪಕಲಾ ವೈಭವವನ್ನು ಕಾಣಬಹುದು. ಈ ವಿಭಾಗದ ಬಸವನಬಾಗೇವಾಡಿ, ಕೂಡಲಸಂಗಮ ಮುಂತಾದವು ವಚನ ಚಳವಳಿಗೆ ಕೇಂದ್ರಗಳಾಗಿವೆ. ಸಾಮಾಜಿಕ ಬದಲಾವಣೆಯ ಹರಿಕಾರ ಶ್ರೀ ಬಸವೇಶ್ವರರು ಐಕ್ಯರಾದ ಐಕ್ಯಸ್ಥಳ ಕೂಡಲಸಂಗಮದಲ್ಲಿದೆ. ಬೆಳಗಾವಿ ವಿಭಾಗದಲ್ಲಿ ರಾಷ್ಟ್ರಕೂಟರು, ತದನಂತರ ಬಹಮನಿ ಅರಸರು ಆಳ್ವಿಕೆ ನಡೆಸಿದರು.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಬೆಳಗಾವಿ ವಿಭಾಗದ ಜಿಲ್ಲೆಗಳು ಅದ್ಭುತ ಪಾತ್ರ ನಿರ್ವಹಿಸಿವೆ. ಕಿತ್ತೂರು ರಾಣಿ ಚೆನ್ನಮ್ಮ 1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದಳು. ಕಿತ್ತೂರು ಚೆನ್ನಮ್ಮ ನಡೆಸಿದ ಬ್ರಿಟಿಷ್ ವಿರೋಧಿ ಸಂಘರ್ಷ ಚಾರಿತ್ರಿಕವಾದುದು. ಆನಂತರ ಸಂಗೊಳ್ಳಿ ರಾಯಣ್ಣ ನಡೆಸಿದ ಹೋರಾಟ ಸ್ಮರಣೀಯ. ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನ ನಡೆಯಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ ನಿರಾಕರಣೆ ಸತ್ಯಾಗ್ರಹ ನಡೆಯಿತು.
ಈ ವಿಭಾಗದ ಜಿಲ್ಲೆಗಳು ಮುಂಬೈ ಪ್ರಾಂತದ ಭಾಗದಲ್ಲಿದ್ದವು. ಕರ್ನಾಟಕ ಏಕೀಕರಣವಾದಾಗ (1956)ರಲ್ಲಿ ಅವು ಕರ್ನಾಟಕದಲ್ಲಿ ವಿಲೀನಗೊಂಡವು. ಆರಂಭದಲ್ಲಿ ಈ ವಿಭಾಗದಲ್ಲಿ ಬೆಳಗಾವಿ, ಉತ್ತರ ಕನ್ನಡ, ಬಿಜಾಪುರ (ವಿಜಯಪುರ) ಮತ್ತು ಧಾರವಾಡ ಎಂಬ ನಾಲ್ಕು ಜಿಲ್ಲೆಗಳಿದ್ದವು. ಆರಂಭದಲ್ಲಿ ತಿಳಿಸಿದಂತೆ ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳನ್ನು ವಿಭಜಿಸಿದ್ದರಿಂದ ಇಂದು ಈ ವಿಭಾಗದಲ್ಲಿ ಏಳು ಜಿಲ್ಲೆಗಳಿವೆ. ಈ ವಿಭಾಗದ ವಿಜಯಪುರ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳು ಗಡಿ ಜಿಲ್ಲೆಗಳಾಗಿವೆ.
1.4.2 ಪ್ರಾಕೃತಿಕ ಸಂಪತ್ತು
ಈ ವಿಭಾಗವು ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಸಮೃದ್ಧವಾಗಿದೆ. ತುಂಬಿ ಹರಿಯುವ ನದಿಗಳಿವೆ. ದಟ್ಟವಾದ ಅರಣ್ಯಗಳಿವೆ. ಅನೇಕ ಖನಿಜ ನಿಕ್ಷೇಪಗಳಿವೆ. ಫಲವತ್ತಾದ ಮಣ್ಣಿದೆ. ವಿದ್ಯುತ್ ಸ್ಥಾವರಗಳಿವೆ. ಈ ವಿಭಾಗದಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ಕೃಷ್ಣ, ಮಲಪ್ರಭಾ, ಘಟಪ್ರಭಾ, ಭೀಮಾ, ಕಾಳಿ, ತುಂಗಭದ್ರಾ ಮುಂತಾದವು. ಈ ನದಿಗಳು ಹರಿಯುವ ಪ್ರದೇಶಗಳಲ್ಲಿ ಅನೇಕ ಸುಂದರ ಜಲಪಾತಗಳಿವೆ. ಗೋಕಾಕ್ ಜಲಪಾತ ಆಕರ್ಷಣೀಯವಾಗಿದೆ. ದಾಂಡೇಲಿ ಹತ್ತಿರದ ಮಾಗೋಡು ಜಲಪಾತ, ಕಾರವಾರ ಹತ್ತಿರದ ದೇವಮಾಲಾ ಜಲಪಾತ, ಮುರುಡೇಶ್ವರದ ಹತ್ತಿರವಿರುವ ಅಪ್ಸರಕೊಂಡ ಜಲಪಾತ ಮುಂತಾದವು ಪ್ರಾಕೃತಿಕ ಸೌಂದರ್ಯದ ತಾಣಗಳಾಗಿವೆ. ಪ್ರವಾಸೋದ್ಯಮಕ್ಕೆ ಉತ್ತಮವಾದ ವಾತಾವರಣ ಇಲ್ಲಿದೆ. ಅಂಶಿ ರಾಷ್ಟ್ರೀಯ ಉದ್ಯಾನವನ ಕಾಳಿ ನದಿಯ ದಡದಲ್ಲಿದೆ. ಇಲ್ಲಿರುವ ಮತ್ತೊಂದು ವನ್ಯಮೃಗಧಾಮ ದಾಂಡೇಲಿ ವನ್ಯಮೃಗಧಾಮ. ಅಟ್ಟಿವೇರಿ ಪಕ್ಷಿಧಾಮ ಮತ್ತೊಂದು ಪ್ರಕೃತಿಯ ಸುಂದರ ತಾಣವಾಗಿದೆ. ಈ ವಿಭಾಗದ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ. ಮತ್ತೊಂದು ಇಲ್ಲಿ ದೊರೆಯುವ ಕಚ್ಚಾ ವಸ್ತುವೆಂದರೆ ಸುಣ್ಣಕಲ್ಲು. ಈ ವಿಭಾಗದ ಜಿಲ್ಲೆಗಳಲ್ಲಿ ಬೆಣಚುಕಲ್ಲು ಅಪಾರವಾಗಿ ದೊರೆಯುತ್ತದೆ. ಇಳಕಲ್ಲು ಭಾಗದಲ್ಲಿ ಗ್ರಾನೈಟಿನ ಅಪಾರ ನಿಕ್ಷೇಪವಿದೆ. ಇಲ್ಲಿಂದ ಗ್ರಾನೈಟ್ ಕಲ್ಲುಗಳನ್ನು ರಫ್ತು ಮಾಡಲಾಗುತ್ತದೆ.
1.4.3 ಅರಣ್ಯಗಳು, ವನ್ಯಮೃಗಧಾಮಗಳು
ಈ ವಿಭಾಗದ ಬೆಳಗಾವಿ ಜಿಲ್ಲೆ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ದಟ್ಟವಾದ ಅರಣ್ಯವಿದೆ. ನಿತ್ಯಹರಿದ್ವರ್ಣ ಕಾಡುಗಳು ಇಲ್ಲಿವೆ. ಉಷ್ಣ ವಲಯದ ದಟ್ಟವಾದ ಬಹುಹಂತದ ಕಾಡುಗಳನ್ನು ಮತ್ತು ವರ್ಷ ಪೂರ್ತಿ ಹಸಿರಾಗಿರುವ ಕಾಡುಗಳನ್ನು ನಿತ್ಯಹರಿದ್ವರ್ಣ ಕಾಡುಗಳೆಂದು ಕರೆಯುತ್ತಾರೆ. ಇಲ್ಲಿ ಅನಾವೃಷ್ಟಿ ಅನ್ನುವುದೇ ಇರುವುದಿಲ್ಲ. ಇಲ್ಲಿ ಮೀಸಲು ಅರಣ್ಯ ಪ್ರದೇಶವಿದೆ, ಸಂರಕ್ಷಿತ ಅರಣ್ಯ ಪ್ರದೇಶವಿದೆ ಮತ್ತು ಮುಕ್ತ ಅರಣ್ಯ ಪ್ರದೇಶವಿದೆ. ಉತ್ತರ ಕನ್ನಡ ಜಿಲ್ಲೆಯ ಒಟ್ಟು ವಿಸ್ತೀರ್ಣದಲ್ಲಿ ಶೇ.80ರಷ್ಟು ಅರಣ್ಯ ಪ್ರದೇಶವಿದೆ. ಆನೆ, ಕಾಡೆಮ್ಮೆ, ಜಿಂಕೆ, ಹುಲಿ, ಚಿರತೆ, ಕರಡಿ, ನವಿಲು, ಕಾಡು ಬೆಕ್ಕು ಮುಂತಾದ ವನ್ಯ ಪ್ರಾಣಿಗಳಿವೆ.
ಬೀಟೆಮರ, ಗಂಧದ ಮರ, ಮತ್ತಿ, ನಂದಿ, ತೇಗ ಮುಂತಾದ ಬೆಲೆ ಬಾಳುವ ಮರಗಳು ಇಲ್ಲಿನ ಅರಣ್ಯಗಳಲ್ಲಿ ಬೆಳೆಯುತ್ತವೆ. ಕಿರು ಅರಣ್ಯ ಉತ್ಪನ್ನಗಳು ಅರಣ್ಯವಾಸಿ ಬುಡಕಟ್ಟು ಸಮುದಾಯಗಳಿಗೆ ವರಮಾನದ ಮೂಲವಾಗಿವೆ.
1.4.4 ಕೃಷಿ, ಉದ್ದಿಮೆ
ಈ ವಿಭಾಗದಲ್ಲಿ ವ್ಯಾಪಕವಾಗಿ ಕಪ್ಪು ಮತ್ತು ಕೆಂಪು ಮಣ್ಣು ಇದೆ. ಭತ್ತ, ಹತ್ತಿ, ಮೆಕ್ಕೆಜೋಳ, ಬೇಳೆಕಾಳು, ಗೋಧಿ, ಶೇಂಗಾ, ಸಜ್ಜೆ, ಮೆಣಸಿನಕಾಯಿ ಮುಖ್ಯ ಬೆಳೆಗಳು. ಮಹಾಲಿಂಗಪುರದ ಬೆಲ್ಲ, ಬ್ಯಾಡಗಿಯ ಒಣ ಮೆಣಸಿನಕಾಯಿ, ಗೋಡಂಬಿ ಮುಂತಾದವು ಇಲ್ಲಿನ ಪ್ರಮುಖ ಉತ್ಪಾದನೆಗಳು. ಮಲಪ್ರಭಾ ನೀರಾವರಿ ಯೋಜನೆ (ನವಿಲತೀರ್ಥ) ಕೃಷ್ಣ ಮೇಲ್ದಂಡೆ ಯೋಜನೆ (ಆಲಮಟ್ಟಿ) ಮುಖ್ಯ ನೀರಾವರಿ ಯೋಜನೆಗಳಾಗಿವೆ. ಕಾಳಿ, ವರದಾ, ಶರಾವತಿ, ಡೋಣಿ, ಭೀಮಾ ಮುಂತಾದವು ಇಲ್ಲಿನ ಪ್ರಮುಖ ನದಿಗಳು.
ಮೀನುಗಾರಿಕೆಯು ಉತ್ತರ ಕನ್ನಡ ಜಿಲ್ಲೆಯಲ್ಲಿನ ಮುಖ್ಯ ಉದ್ಯೋಗವಾಗಿದೆ. ಅಲ್ಲಿ ಅನೇಕ ಮೀನು ಸಂಸ್ಕರಣಾ ಘಟಕಗಳಿವೆ. ಗೋಡಂಬಿ ಮತ್ತೊಂದು ಕೃಷಿ ಉತ್ಪನ್ನವಾಗಿದೆ. ಗೋಡಂಬಿ ಸಂಸ್ಕರಣಾ ಘಟಕಗಳು ಇಲ್ಲಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕದ್ರಾ, ಸೂಪಾ, ಕೊಡಸಳ್ಳಿ, ನಾಗಝರಿ ಮತ್ತು ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ. ಅಡಿಕೆ, ಕಬ್ಬು, ಹತ್ತಿ, ಸಾಂಬಾರು ಪದಾರ್ಥಗಳು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಗಳು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧವಾಗಿವೆ. ಅಲ್ಲಿನ ಹವಾಮಾನ ಮತ್ತು ಮಣ್ಣಿನ ಗುಣ, ಹಣ್ಣಿನ ಬೆಳೆಗಳಿಗೆ ಸೂಕ್ತವಾಗಿದೆ. ಈ ಜಿಲ್ಲೆಗಳಲ್ಲಿ ದ್ರಾಕ್ಷಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ. ದ್ರಾಕ್ಷಿ ಸಂಸ್ಕರಣಾ ಘಟಕಗಳು ಇಲ್ಲಿ ತಲೆಯೆತ್ತುತ್ತಿವೆ. ದಾಳಿಂಬೆ, ಲಿಂಬೆ, ಸಪೋಟ, ಮೂಸಂಬಿ ಮುಂತಾದ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಾರೆ. ಹಾವೇರಿ ಜಿಲ್ಲೆಯು ಸುಧಾರಿತ ಬೀಜವನ್ನು ಉತ್ಪಾದಿಸುವ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಅನೇಕ ರಾಷ್ಟ್ರೀಯ ಬೀಜ ಉತ್ಪಾದನಾ ಕೇಂದ್ರಗಳಿವೆ. ಗುಳೇದಗುಡ್ಡವು ರವಿಕೆ ಖಣದ ಉತ್ಪಾದನೆಗೆ ಹೆಸರುವಾಸಿಯಾಗಿದೆ.
ಕೈಗಾರಿಕೆಯಲ್ಲಿ ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಪ್ರಮುಖ ಕೇಂದ್ರಗಳಾಗಿ ಬೆಳೆಯುತ್ತಿವೆ. ಇಳಕಲ್ಲಿನಲ್ಲಿ ಅನೇಕ ಗ್ರಾನೈಟ್ ಕಲ್ಲು ಸಂಸ್ಕರಣಾ ಘಟಕಗಳು ಕೆಲಸ ಮಾಡುತ್ತಿವೆ.
1.4.5 ಕಲೆ, ಸಾಹಿತ್ಯ, ಸಂಗೀತ, ಜಾನಪದ, ನಾಟಕ
ಈ ವಿಭಾಗದ ಜಿಲ್ಲೆಗಳು ವಿವಿಧ ಬಗೆಯ ಲಲಿತ ಕಲೆಗಳಿಗೆ ಪ್ರಸಿದ್ಧವಾಗಿವೆ. ಧಾರವಾಡವು ರಾಷ್ಟ್ರೀಯ – ಅಂತಾರಾಷ್ಟ್ರೀಯ ಹಿಂದೂಸ್ಥಾನಿ ಸಂಗೀತಗಾರರ ತವರೂರಾಗಿದೆ. ಭಾರತರತ್ನ ಪಂ. ಭೀಮಸೇನ್ ಜೋಶಿ, ಪಂ. ಮಲ್ಲಿಕಾರ್ಜುನ ಮನ್ಸೂರ್, ಬಾಲೇಖಾನ್ (ಸಿತಾರ್), ವಿದುಷಿ ಗಂಗೂಬಾಯಿ ಹಾನಗಲ್, ಪಂ. ವೆಂಕಟೇಶ್ ಕುಮಾರ್, ಪಂ. ಬಸವರಾಜ ರಾಜಗುರು ಮುಂತಾದ ಸಂಗೀತಗಾರರು ಧಾರವಾಡದವರು.
ಮಧ್ಯಯುಗದಲ್ಲಿ ಅನೇಕ ಪ್ರಮುಖ ಕನ್ನಡ ಕಾವ್ಯಗಳನ್ನು ರಚಿಸಿದ ರನ್ನ, ನಾಗಚಂದ್ರ, ನಯಸೇನ, ಕುಮಾರವ್ಯಾಸ, ಚಾಮರಸ, ಬಸವಣ್ಣ, ಕನಕದಾಸ, ಶಿಶುನಾಳ ಶರೀಫ್ ಮುಂತಾದವರು ಬೆಳಗಾವಿ ವಿಭಾಗದ ವಿವಿಧ ಪ್ರದೇಶಕ್ಕೆ ಸೇರಿದವರು. ವಚನ ಪಿತಾಮಹ ಫ. ಗು. ಹಳಕಟ್ಟಿ, ರೆವರೆಂಡ್ ಕಿಟ್ಟೆಲ್, ಭೂಸನೂರಮಠ್, ದಿನಕರ ದೇಸಾಯಿ, ಬಸವರಾಜ ಕಟ್ಟೀಮನಿ, ಎಂ.ಎಂ. ಕಲಬುರ್ಗಿ, ಆದ್ಯರಂಗಾಚಾರ್ಯ (ಶ್ರೀರಂಗ), ಜ್ಞಾನಪೀಠ ಪ್ರಶಸ್ತಿಪುರಸ್ಕೃತರಾದ ದ. ರಾ. ಬೇಂದ್ರೆ, ವಿ.ಕೃ.ಗೋಕಾಕ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ – ಮುಂತಾದವರು ಈ ವಿಭಾಗದವರಾಗಿದ್ದು ಆಧುನಿಕ ಯುಗದಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಜಾನಪದ ಗಾರುಡಿಗ ಹುಕ್ಕೇರಿ ಬಾಳಪ್ಪ, ನಾಡೋಜ ಸುಕ್ರಿ ಬೊಮ್ಮಗೌಡ ಮುಂತಾದವರು ಜಾನಪದ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಶ್ರೀಕೃಷ್ಣ ಪಾರಿಜಾತ, ಬಡಗುತಿಟ್ಟು ಯಕ್ಷಗಾನ, ಸಣ್ಣಾಟ, ದೊಡ್ಡಾಟ ಮುಂತಾದ ನಾಟಕ ಪ್ರಕಾರಗಳು ಇಲ್ಲಿ ಬೆಳೆದವು. ಅಪ್ಪಾಲಾಲ ಜಮಖಂಡಿ, ಕೌಜಲಗಿ ನಿಂಗಮ್ಮ, ಲೋಕಾಪುರ ದೇಶಪಾಂಡೆ ಮುಂತಾದವರು ನಟನಾ ಕಲೆಯನ್ನು ಮೆರೆದವರು.
1.4.6 ಶಿಕ್ಷಣ, ಆರೋಗ್ಯ.
ಧಾರವಾಡ, ಬೆಳಗಾವಿ, ವಿಜಯಪುರ ಪ್ರಮುಖ ಶೈಕ್ಷಣಿಕ ಕೇಂದ್ರಗಳಾಗಿವೆ. ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವಿದೆ, ಹುಬ್ಬಳ್ಳಿಯಲ್ಲಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯವಿದೆ. ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವಿದ್ದರೆ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವಿದೆ. ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವಿದೆ.
ಈ ವಿಭಾಗದ ಜಿಲ್ಲೆಗಳು ಸಾಕ್ಷರತೆಯಲ್ಲಿ ಉತ್ತಮ ಸ್ಥಾನದಲ್ಲಿವೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆಗಳಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳಿವೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಡೆಪ್ಯುಟಿ ಚನ್ನಬಸಪ್ಪನವರ ನೇತೃತ್ವದಲ್ಲಿ ಕನ್ನಡ ಶಾಲೆಗಳು ಈ ಭಾಗದಲ್ಲಿ ಆರಂಭಗೊಂಡವು. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿವೆ. ಕ್ರಿಶ್ಚಿಯನ್ ಸಂಸ್ಥೆಗಳು ಶಿಕ್ಷಣ ಪ್ರಸಾರದಲ್ಲಿ ಅಪಾರ ಕಾಣಿಕೆ ನೀಡಿವೆ.
ಆರೋಗ್ಯ ಕ್ಷೇತ್ರದಲ್ಲಿಯೂ ಬೆಳಗಾವಿ ವಿಭಾಗದ ಜಿಲ್ಲೆಗಳು ತೀವ್ರ ಪ್ರಗತಿ ಸಾಧಿಸಿವೆ. ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ಕೆಳಮಟ್ಟದಲ್ಲಿದೆ. ಆದರೆ ಶಿಶು ಮರಣ ಪ್ರಮಾಣ, ತಾಯಂದಿರ ಮರಣ ಪ್ರಮಾಣ ಅಧಿಕಮಟ್ಟದಲ್ಲಿದೆ. ಮಹಿಳೆಯರು ಮತ್ತು ಮಕ್ಕಳು ಅನೀಮಿಯ (ರಕ್ತಹೀನತೆ) ಎದುರಿಸುತ್ತಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಹಳ್ಳಿಗಳಲ್ಲಿ ಆರೋಗ್ಯ ಉಪಕೇಂದ್ರಗಳಿವೆ. ವೈದ್ಯಕೀಯ ಕಾಲೇಜುಗಳು ತಮ್ಮದೇ ಆಸ್ಪತ್ರೆಗಳನ್ನು ನಡೆಸುತ್ತಿವೆ.
1.4.7 ಸಾಂಸ್ಕೃತಿಕ ಸಂಪತ್ತು
ಸಾಂಸ್ಕೃತಿಕ ಸಂಪತ್ತಿನಿಂದ ಸಮೃದ್ಧವಾದ ವಿಭಾಗ ಇದು. ಕಲೆ, ಸಂಗೀತ, ನಾಟಕ, ಸಾಹಿತ್ಯ ಈ ವಿಭಾಗದ ಜಿಲ್ಲೆಗಳ ಕೊಡುಗೆ ಅಪಾರ. ಇಲ್ಲಿನ ಸಂಗೀತಗಾರರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಸಿದ್ಧ ಪಡೆದಿದ್ದಾರೆ. ಗಾನಯೋಗಿ ಪಂಚಾಕ್ಷರಿ ಗವಾಯಿಯವರು ಅಂಧ ಮಕ್ಕಳಿಗೆ ಆಶ್ರಯನೀಡಿ ಸಂಗೀತ ಕಲಿಕೆಗೆ ಪ್ರೋತ್ಸಾಹ ನೀಡಿರುತ್ತಾರೆ. ಹುಬ್ಬಳ್ಳಿಯನ್ನು ಕರ್ನಾಟಕದ ವಾಣಿಜ್ಯ ಕೇಂದ್ರ ಎಂದು ಕರೆಯಲಾಗಿದೆ. ಬ್ಯಾಡಗಿ, ಮಹಾಲಿಂಗಪುರ, ವಿಜಯಪುರ ಕ್ರಮವಾಗಿ ಮೆಣಸಿನಕಾಯಿ, ಬೆಲ್ಲ ಮತ್ತು ದ್ರಾಕ್ಷಿ ವ್ಯಾಪಾರ ಕೇಂದ್ರಗಳಾಗಿವೆ. ಬೆಳಗಾವಿ ವಿಭಾಗವು ವೃತ್ತಿ ರಂಗಭೂಮಿಯ ಸಮೃದ್ಧ ಸ್ಥಾನವಾಗಿದೆ.
ಈ ವಿಭಾಗದ ಚಾರಿತ್ರಿಕ ಸ್ಮಾರಕಗಳು ವಿಶ್ವವಿಖ್ಯಾತವಾಗಿವೆ. ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆಗಳಲ್ಲಿನ ಚಾರಿತ್ರಿಕ ಸ್ಮಾರಕಗಳು ಕರ್ನಾಟಕ ಸಾಂಸ್ಕೃತಿಯ ಸೂಚಿಗಳಾಗಿವೆ. ಪ್ರವಾಸೋದ್ಯಮವು ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರವು ರಕ್ಷಣಾ ಕ್ಷೇತ್ರದ ಪ್ರಮುಖ ನೌಕಾನೆಲೆಯಾಗಿ ಬೆಳೆಯುತ್ತಿದೆ. ಈ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶವು ಅನೇಕ ವನ್ಯಮೃಗಗಳಿಗೆ ವಾಸಸ್ಥಾನವಾಗಿದೆ. ಇದು ಅನೇಕ ನದಿಗಳಿಗೆ ಉಗಮಸ್ಥಾನವಾಗಿದೆ. ಈ ವಿಭಾಗದಲ್ಲಿನ ಅನೇಕ ಜಲಪಾತಗಳು ಆಕರ್ಷಣೀಯವಾಗಿ ಪ್ರವಾಸಿಗರನ್ನು ಅಪಾರ ಸಂಖ್ಯೆಯಲ್ಲಿ ಸೆಳೆಯುತ್ತಿವೆ. ಸಮುದ್ರ ದಂಡೆಯಲ್ಲಿನ ಬೀಚುಗಳು ಮತ್ತೊಂದು ಪ್ರವಾಸಿ ತಾಣಗಳಾಗಿವೆ.
1.4.8 ಸ್ವಾತಂತ್ರ್ಯ ಹೋರಾಟಗಾರರು
ಬೆಳಗಾವಿ ವಿಭಾಗದ ಕಿತ್ತೂರಿನಲ್ಲಿ 19ನೆಯ ಶತಮಾನದಲ್ಲಿಯೇ ಬ್ರಿಟಿಷರ ವಿರುದ್ಧದ ಸಂಗ್ರಾಮ ಆರಂಭವಾಯಿತು. ಸ್ವಾತಂತ್ರ್ಯಕ್ಕಾಗಿ ಮೈಲಾರ ಮಹದೇವಪ್ಪ ತಮ್ಮ ಪ್ರಾಣವನ್ನು ಬಲಿ ನೀಡಿದರು. ನಮ್ಮ ರಾಜ್ಯದಲ್ಲಿ ಮೊಟ್ಟಮೊದಲು ಸ್ವಾತಂತ್ರ್ಯ ಹೋರಾಟ ಆರಂಭವಾದುದು ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ. ಈ ವಿಭಾಗದ ಸಾವಿರಾರು ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆ ಅನುಭವಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರಲ್ಲಿ ಪ್ರಮುಖರು ಸಿದ್ದಪ್ಪ ಕಂಬಳಿ, ಆಲೂರು ವೆಂಕಟರಾವ್, ನಾ. ಸು. ಹರ್ಡಿಕರ್, ಹರ್ಡೇಕರ್ ಮಂಜಪ್ಪ, ಗಂಗಾಧರ ರಾವ್ ದೇಶಪಾಂಡೆ, ಆರ್. ಆರ್. ದಿವಾಕರ್, ನಾಡೋಜ ಪಾಟೀಲ್ ಪುಟ್ಟಪ್ಪ ಮುಂತಾದವರು. ಇವರೆಲ್ಲರೂ ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿ ಕರ್ನಾಟಕ ಏಕೀಕರಣಕ್ಕೂ ಹೋರಾಟ ನಡೆಸಿದರು. ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಜೊತೆಯಲ್ಲಿ ಅನೇಕರು ಸಮಾಜ ಸುಧಾರಣೆಯಲ್ಲಿ ತೊಡಗಿದ್ದರು. ರಾ.ಹ. ದೇಶಪಾಂಡೆಯವರು ಸಮಸ್ತ ಕನ್ನಡಿಗರ ಆತ್ಮಾಭಿಮಾನವನ್ನು ಬಡಿದೆಬ್ಬಿಸುವ ಸಪ್ತಾಕ್ಷರಿ ಮಂತ್ರವಾದ “ಸಿರಿಗನ್ನಡಂ ಗೆಲ್ಗೆ” ಯನ್ನು ಕೊಟ್ಟರು. ವಚನ ಪಿತಾಮಹ ಎಂಬ ಬಿರುದಿಗೆ ಪಾತ್ರರಾಗಿದ್ದ ಡಾ. ಫ. ಗು. ಹಳಕಟ್ಟಿ ಅವರು ಪತ್ರಿಕೋದ್ಯಮದಲ್ಲಿಯೂ ಕೆಲಸ ಮಾಡಿದರು. ಮೊಹರೆ ಹಣಮಂತರಾಯರು, ಪಾಟೀಲ್ ಪುಟ್ಟಪ್ಪ ಮುಂತಾದವರು ಸ್ವಾತಂತ್ರ್ಯ ಹೋರಾಟಕ್ಕೆ ಪತ್ರಿಕೆಗಳ ಮೂಲಕ ಜನರಿಗೆ ಪ್ರೇರಣೆ ನೀಡಿದರು.
ಸಂವೇದ ವಿಡಿಯೋ ಪಾಠಗಳು
**************
Reading your article has greatly helped me, and I agree with you. But I still have some questions. Can you help me? I will pay attention to your answer. thank you.
yes