ನದಿಯ ಅಳಲು : ಗದ್ಯಭಾಗ – 2

ಪ್ರವೇಶ : ನಾವು ಇಂದು ನೀರಿನ ಮೂಲಗಳಾದ ಕೆರೆ, ಬಾವಿ, ನದಿ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ರಕ್ಷಿಸದೆ ಅವುಗಳನ್ನು ಕಲುಷಿತಗೊಳಿಸುತ್ತಿದ್ದೇವೆ. ಇದರಿಂದಾಗಿ ನಮ್ಮ ಬದುಕಿಗೆ ಸಂಚಕಾರ ಎದುರಾಗುತ್ತಿದೆ. ನಮ್ಮ ಸುತ್ತಲಿನ ನೀರಿನ ಮೂಲಗಳನ್ನು ಶುದ್ಧವಾಗಿಡುವುದು ಅತ್ಯಗತ್ಯ.

[ಶಾಲಾ ಮಕ್ಕಳು ಗುಂಪುಗುಂಪಾಗಿ ಸೇರಿದ್ದಾರೆ. ಎಲ್ಲರ ಮುಖದಲ್ಲೂ ಆತಂಕ. ಆಸ್ಪತ್ರೆಯಲ್ಲಿ ದಾಖಲಾಗಿರುವ ಸಹಪಾಠಿಗಳ ಆರೋಗ್ಯವನ್ನು ತಿಳಿಯುವ ತವಕ. ಮಕ್ಕಳು ತಮ್ಮ ತಮ್ಮಲ್ಲಿಯೇ ಸಂಭಾಷಿಸುತ್ತಿದ್ದಾರೆ.]

ಕಲಾವತಿ : ಎಂಥ ಅನಾಹುತ ನಡೆದುಹೋಯಿತು! ನಮ್ಮ ಗೆಳೆಯ ಗೆಳತಿಯರಿಗೆ ಹೀಗೆ ಆಗಬಾರದಿತ್ತು.
ಸ್ನೇಹ : ಅವರಿಗೆ ಏನಾಯಿತು?
ಮನು : ಅಯ್ಯೋ! ನಿನಗೆ ತಿಳಿದಿಲ್ಲವೆ? ಈಜಲು ಹೋದ ಅವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಂತಲೆ : ಆಸ್ಪತ್ರೆಗೆ ದಾಖಲಾಗಲು ಅವರಿಗೆ ಏನಾಗಿತ್ತು?
ಸಲೀಮುಲ್ಲಾ : ನಿನ್ನೆ ಭಾನುವಾರ ಶಾಲೆಗೆ ರಜೆ ಇತ್ತಲ್ಲವೇ? ಅವರೆಲ್ಲರೂ ಬೆಳಗ್ಗೆ ಆಟವಾಡಲು ಹೋಗಿದ್ದರು. ಮಧ್ಯಾಹ್ನದವರೆಗೂ ಆಟವಾಡಿ ಅನಂತರ ಸೆಕೆಯನ್ನು ತಾಳಲಾರದೆ ಊರಿನ ಪಕ್ಕದ ನದಿಯಲ್ಲಿ ಸ್ನಾನ ಮಾಡಿದರು. ಪರಿಣಾಮವಾಗಿ ಅವರ ಮೈಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು ವಿಪರೀತ ತುರಿಕೆ ಪ್ರಾರಂಭವಾಯಿತು. ನೋವು ತಾಳಲಾರದೆ ದಂಡೆಯಲ್ಲಿ ಬಿದ್ದು ಹೊರಳಾಡಿದರು. ಯಾರೋ ದಾರಿಹೋಕರು ನರಳಾಟ ಕಂಡು ಅವರನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು. ಅವರ ಆರೋಗ್ಯ ತೀರ ಹದಗೆಟ್ಟಿತ್ತು.

(ಮಕ್ಕಳು ಆಸ್ಪತ್ರೆಗೆ ಬರುತ್ತಾರೆ. ವೈದ್ಯರು ಪರೀಕ್ಷಾ ಕೊಠಡಿಯಿಂದ ಹೊರಬರುತ್ತಾರೆ.)

ದಿಲೀಪ್ : ನಮ್ಮ ಗೆಳೆಯರ ಸ್ಥಿತಿ ಹೇಗಿದೆ ಡಾಕ್ಟರ್?
ವೈದ್ಯರು : ಇನ್ನೂ ಏನನ್ನು ಹೇಳುವಂತಿಲ್ಲ ಮಕ್ಕಳೆ! ಆದರೆ ಚಿಂತೆಗೆ ಕಾರಣವಿಲ್ಲ ಅಂತ ತೋರುತ್ತದೆ.
ರಮ್ಯ : ಅವರಿಗೆ ಏನಾಗಿತ್ತು ಡಾಕ್ಟರ್?
ವೈದ್ಯರು : ಅವರಿಗೆ ನದಿಯ ನೀರಿನ ಮಾಲಿನ್ಯದ ಸೋಂಕು ತಗುಲಿದೆ. ಪರಿಣಾಮವಾಗಿ ಇಡೀ ದೇಹದಲ್ಲಿ ಗುಳ್ಳೆಗಳೆದ್ದಿವೆ. ತುರಿಕೆ ತಡೆಯಲಾರದೆ ಮೂರ್ಛೆ ಹೋಗಿದ್ದಾರೆ.
ದೀಪಕ್ : ಅವರ ಜೀವಕ್ಕೆ ಏನೂ ಅಪಾಯವಿಲ್ಲ ತಾನೆ?
ವೈದ್ಯರು : ಚಿಂತಿಸಬೇಡಿ ಮಕ್ಕಳೆ, ಸಕಾಲದಲ್ಲಿ ಆಸ್ಪತ್ರೆಗೆ ಬಂದ ಕಾರಣ ಸೂಕ್ತ ಚಿಕಿತ್ಸೆ ನೀಡಿದ್ದೇನೆ.
ರೀಟಾ : ನಾವು ಅವರನ್ನು ನೋಡಬಹುದೇ?
ವೈದ್ಯರು : ಈಗ ಬೇಡ ಮಕ್ಕಳೆ, ಸಂಜೆ ಬನ್ನಿ

(ವೈದ್ಯರು ಹೇಳಿದ ಮಾತುಗಳನ್ನು ಕೇಳಿದ ಮಕ್ಕಳು ನದಿಯ ದಂಡೆಗೆ ಬರುತ್ತಾರೆ.)

ಭವಾನಿ : ಈ ನದಿಯ ನೀರು ಎಷ್ಟೊಂದು ಕೊಳಕಾಗಿದೆ?
ಮಮತ : ಅಬ್ಬಾ! ಈ ಕೆಟ್ಟ ನೀರಿಗೆ ಅವರೇಕೆ ಇಳಿದರು?
ಸುಜಾತ : ಸೆಕೆ ತಡೆಯಲು ಆಗಲಿಲ್ಲವೋ ಏನೊ!
ಅಮಿತ್ : ಇದು ಮಲಿನಗೊಂಡ ನದಿ. ಇಂತಹ ನದಿಗಳು ಜೀವಸಂಕುಲಕ್ಕೆ ಅಪಾಯಕಾರಿ.

(ಮಕ್ಕಳೆಲ್ಲರು ನದಿಯ ಬಗ್ಗೆ ತಾತ್ಸಾರವಾಗಿ ಮಾತನಾಡುತ್ತ ಹೀಯಾಳಿಸತೊಡಗುತ್ತಾರೆ. ಇದ್ದಕ್ಕಿದ್ದಂತೆ ಕೊಳೆ, ಕೆಸರಿನಿಂದ ಕೂಡಿದ ಜಲದೇವತೆ ನೀರಿನ ಮಧ್ಯದಿಂದ ಧುತ್ತನೆ ಪ್ರತ್ಯಕ್ಷಳಾಗುತ್ತಾಳೆ. ಮಕ್ಕಳೆಲ್ಲ ಭಯಪಡುತ್ತಾರೆ.)

ಮಕ್ಕಳು : ಯಾರಿವಳು? ಎಷ್ಟು ಅಸಹ್ಯವಾಗಿದ್ದಾಳೆ?
ಜಲದೇವತೆ : ನಾನು ಜಲದೇವತೆ ಮಕ್ಕಳೆ.
ಮಕ್ಕಳು : ಛೀ! ಛೀ! ಜಲದೇವತೆ ಹೀಗಿರುತ್ತಾಳೆಯೆ? ನಿನ್ನನ್ನು ನೋಡಿದರೆ ನಮಗೆ ಅಸಹ್ಯವಾಗುತ್ತದೆ.
ಜಲದೇವತೆ : ಏಕೆ? ನಾನು ನಿಮಗೇನು ಮಾಡಿರುವೆ? ನೀವೇಕೆ ಅಸಹ್ಯ ಪಟ್ಟುಕೊಳ್ಳುತ್ತಿದ್ದೀರಿ? ನನ್ನಿಂದ ನೀವು ಹಲವು ಪ್ರಯೋಜನ ಪಡೆದಿಲ್ಲವೆ?

ರೆಹಮಾನ್ : ಎಲ್ಲಾ ಸರಿ. ಆದರೆ ಈಗ ನೀನು ಕಲುಷಿತಗೊಂಡಿರುವೆ. ನಿನ್ನ ನೀರನ್ನು ಕುಡಿಯಬಾರದಂತೆ, ನಿನ್ನಲ್ಲಿ ಸ್ನಾನ ಮಾಡಬಾರದಂತೆ. ವೈದ್ಯರೇ ನಮಗೆ ಈ ವಿಚಾರ ತಿಳಿಸಿದ್ದಾರೆ. ಅಲ್ಲದೆ ನಮ್ಮ ಗೆಳೆಯ, ಗೆಳತಿಯರು ನಿನ್ನಲ್ಲಿ ಸ್ನಾನ ಮಾಡಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ.

ಜಲದೇವತೆ : ಮಕ್ಕಳೇ, ಇದಕ್ಕೆಲ್ಲ ಕಾರಣ ನಾನಲ್ಲ ನೀವೆ!
ರಘು : ನಾವೆ?
ಜಲದೇವತೆ : ನೀವು ಅಂದ್ರೆ-ನಿಮ್ಮವರು.
ಮನೋಹರ : ನಮ್ಮವರೇನು ಶುದ್ಧಳಾಗಿ ಹರಿಯಬಾರದೆಂದು ತಾಕೀತು ಮಾಡಿದ್ದಾರೆಯೇ? ನಿನ್ನ ನೀರಿನಿಂದ ನಮಗೀಗ ಉಳಿಗಾಲವಿಲ್ಲ.
ಜಲದೇವತೆ : ಇಲ್ಲ ಮಕ್ಕಳೇ, ನೀವು ನನ್ನ ಬಗ್ಗೆ ತಪ್ಪು ತಿಳಿದಿದ್ದೀರಿ. ನನ್ನ ಮಾತುಗಳನ್ನು ಕೇಳಿ. ಪರಿಶುದ್ಧಳಾಗಿ ಹರಿಯುವ ನನ್ನನ್ನು ಕಲುಷಿತಗೊಳಿಸಿದವರು ಮನುಷ್ಯರೇ. ಬಹಳ ಹಿಂದಿನಿಂದ ಇತ್ತೀಚಿನವರೆಗೂ ಮಾಲಿನ್ಯರಹಿತಳಾಗಿ ಹರಿಯುತ್ತಿದ್ದೆ. ಆಗ ಈ ಮನುಷ್ಯರು ನನ್ನ ನೀರನ್ನು ಕುಡಿಯುತ್ತಿದ್ದರು. ಆಹಾರ ತಯಾರಿಕೆಗೆ ಬಳಸುತ್ತಿದ್ದರು, ಬೇಸಾಯಕ್ಕೆ ಉಪಯೋಗಿಸುತ್ತಿದ್ದರು. ನನ್ನಲ್ಲಿ ಲೆಕ್ಕವಿಲ್ಲದಷ್ಟು ಜಲಚರ ಜೀವಿಗಳಿದ್ದು ಎಲ್ಲವೂ ಸಂತೋಷದಿಂದ ಇದ್ದವು. ಆದರೆ ಈಗ ನಾನು ಪರಿಶುದ್ಧಳಾಗಿಲ್ಲ. ನನ್ನನ್ನು ಮನುಷ್ಯರು ಮನಬಂದಂತೆ ಬಳಸುತ್ತಿದ್ದಾರೆ. ಅನೇಕ ಕಾರ್ಖಾನೆಗಳನ್ನು ನನ್ನ ದಂಡೆಯಲ್ಲಿ ಸ್ಥಾಪಿಸಿ ಅದರಿಂದ ಹೊರಬರುವ ರಾಸಾಯನಿಕ ಪದಾರ್ಥಗಳನ್ನು ಮತ್ತು ಕಸದ ರಾಶಿಗಳನ್ನು ನನ್ನೊಳಕ್ಕೆ ಎಸೆಯುತ್ತಿದ್ದಾರೆ. ಊರಿನ ಸಮಗ್ರ ಕೊಳಚೆ ನೀರನ್ನು ನನ್ನೊಳಕ್ಕೆ ಹರಿಯಬಿಟ್ಟಿದ್ದಾರೆ. ಇಷ್ಟೆಲ್ಲಾ ಶೋಷಣೆಗೆ ಬಲಿಯಾದ ನಾನು ಹೇಗೆ ಪರಿಶುದ್ಧಳಾಗಿ ಹರಿಯಲು ಸಾಧ್ಯ? ನೀವೇ ಯೋಚಿಸಿ ಮಕ್ಕಳೇ.
ಮಕ್ಕಳು : ನೀನು ಹೇಳುತ್ತಿರುವುದಾದರೂ ಏನು?
ಜಲದೇವತೆ : ನಾನು ಹೇಳುವುದಿಷ್ಟೇ: ಮನುಷ್ಯರು ಹೀಗೆಯೇ ಮಾಲಿನ್ಯ ಮಾಡುವುದನ್ನು ಮುಂದುವರಿಸಿದ್ದಾದರೆ ನಾನು ‘ವಿಷಕನ್ಯೆ’ ಎಂಬ ಪಟ್ಟ ಧರಿಸುವ ಕಾಲ ದೂರವಿಲ್ಲ. ನಾನು ಯಾರ ಬಳಿ ನನ್ನ ನೋವನ್ನು ಹೇಳಿಕೊಳ್ಳಲಿ?
ಮಕ್ಕಳು : (ಚಿಂತಾಕ್ರಾಂತರಾಗಿ) ದೇವತೆಯೇ, ನೀನು ಮತ್ತೆ ಮೊದಲಿನಂತಾಗಲು ಸಾಧ್ಯವಿಲ್ಲವೇ?
ಜಲದೇವತೆ : ಇದೆ ಮಕ್ಕಳೆ, ನನ್ನ ಮೇಲಾಗುತ್ತಿರುವ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು. ಎಲ್ಲರೂ ನನ್ನನ್ನು ಶುದ್ಧಗೊಳಿಸಲು ಶ್ರಮಿಸಬೇಕು. ನನ್ನಲ್ಲಿ ಯಾವುದೇ ಬಗೆಯ ಮಲಿನ ವಸ್ತು ಸೇರದಂತೆ ನೋಡಿಕೊಂಡರೆ ಮೊದಲಿನಂತೆಯೇ ಪರಿಶುದ್ಧಳಾಗಿ ಹರಿಯಬಲ್ಲೆ. ಹಾಗಾದರೆ ಈಗ ಹೇಳಿ ಮಕ್ಕಳೇ, ನನಗಾಗಿ ನೀವೇನು ಮಾಡಬಲ್ಲಿರಿ?
ಮಕ್ಕಳೆಲ್ಲ : ತಾಯಿ ನಾವೆಲ್ಲರೂ ನಿನ್ನ ಮಾಲಿನ್ಯ ತಡೆಯಲು ಶ್ರಮಿಸುತ್ತೇವೆ. ಇಂದಿನಿಂದಲೇ ಪಣತೊಟ್ಟು ನಿನ್ನನ್ನು ಪರಿಶುದ್ಧವಾಗಿಡಲು ಪ್ರಯತ್ನಿಸುತ್ತೇವೆ.
ಜಲದೇವತೆ : ಧನ್ಯ ಮಕ್ಕಳೆ, ಧನ್ಯ. (ಅಂತರ್ಧಾನಳಾಗುವಳು.)

(ಮಕ್ಕಳು ತಮ್ಮ ಹೆತ್ತವರ ಹಾಗೂ ಊರವರ ಸಹಕಾರದೊಂದಿಗೆ ನದಿಯನ್ನು ಶುಚಿಯಾಗಿಡುವ ಜವಾಬ್ದಾರಿಯನ್ನು ವಹಿಸಿಕೊಂಡರು.)

ಪದಗಳ ಅರ್ಥ

ಅಂತರ್ಧಾನ – ಕಣ್ಮರೆಯಾಗು, ಮಾಯವಾಗು.
ಅನಾಹುತ – ತೊಂದರೆ, ಅಪಾಯ.
ಆತಂಕ – ಭಯ, ತಳಮಳ.
ಕೊಳಕು – ಮಲಿನ, ಗಲೀಜು.
ಗುಳ್ಳೆ – ಬೊಬ್ಬೆ, ಬೊಕ್ಕೆ.
ಚಿಕಿತ್ಸೆ – ಆರೈಕೆ, ಶುಶ್ರೂಷೆ.
ಚಿಂತೆ – ಯೋಚನೆ, ದುಃಖ.
ಜಲಚರ – ನೀರಿನಲ್ಲಿ ವಾಸಿಸುವ ಜೀವಿಗಳು.
ತವಕ – ಆತುರ, ತರಾತುರಿ.
ತಾಕೀತು – ಕಟ್ಟಪ್ಪಣೆ, ಎಚ್ಚರಿಕೆ.
ತುರಿಕೆ – ನವೆ, ಕೆರೆತ.
ದೌರ್ಜನ್ಯ – ದಬ್ಬಾಳಿಕೆ, ಹಿಂಸೆ.
ಧುತ್ತನೆ – ಏಕಾಏಕಿ, ಇದ್ದಕ್ಕಿದ್ದಂತೆ.
ಪಣತೊಡು – ದೃಢನಿರ್ಧಾರ ಕೈಗೊಳ್ಳು, ಪ್ರತಿಜ್ಞೆ ಮಾಡು.
ಮಾಲಿನ್ಯ ರಹಿತ – ಮಲಿನತೆಯಿಲ್ಲದ, ಕೊಳೆಯಿಲ್ಲದ.
ಮೂರ್ಛೆ – ಪ್ರಜ್ಞೆತಪ್ಪು, ಎಚ್ಚರತಪ್ಪು.
ವಿಷಕನ್ಯೆ – ಇಡೀ ದೇಹ ವಿಷದಿಂದ ಕೂಡಿದವಳು.
ಸಂಕುಲ – ಸಮೂಹ, ಗುಂಪು.
ಸೋಂಕು – ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗ.
ಶೋಷಣೆ – ತುಳಿತ, ಹಿಂಸೆ.

ವಿಡಿಯೋ ಪಾಠಗಳು

SAMVEDA 5th KannadaFL NadiyaAlalu | Part 1 of 2 | ಭಾಗ – 1
SAMVEDA 5th KannadaFL NadiyaAlalu | Part 1 of 2 | ಭಾಗ – 2
NADIYA ALALU | 5th STANDARED KANNADA LESSION | ನದಿಯ ಅಳಲು

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
5th standard standard | Lesson 2 | nadiya alalu | ನದಿಯ ಅಳಲು | NADIYA ALALU | Kannada notes | Q&A 5

ವ್ಯಾಕರಣ ಮಾಹಿತಿ

kannada grammar | ಕನ್ನಡ ವ್ಯಾಕರಣ – ಸಂಯುಕ್ತಾಕ್ಷರಗಳು | kannada Vyakarana

ಯೋಜನೆ

* ನದಿಗಳ ಮಾಲಿನ್ಯವನ್ನು ತಡೆಗಟ್ಟುವ ಅಂಶಗಳನ್ನು ಪಟ್ಟಿಮಾಡಿ ಬರೆಯಿರಿ.

ಜಲ ಮಾಲಿನ್ಯ ತಡೆಗಟ್ಟುವ ಅಂಶಗಳು

  1. ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ದಿಂದ ಮಾಡಿದ ವಸ್ತುಗಳನ್ನು ಕಡಿಮೆ ಬಳಸಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಉತ್ಪಾದಿಸಿದ ನಂತರ ಇದನ್ನು ವಿಘಟನೆ ಉಳಿಸುವುದು ಬಹಳ ಕಷ್ಟಕಾರಿ. ನಾವು ಬಳಸುವ ಬಹಳಷ್ಟು ಪ್ಲಾಸ್ಟಿಕ್ ವಸ್ತುಗಳು ಕೊನೆಗೆ ನೀರಿನ ಮೂಲಗಳಿಗೆ ಸೇರುವುದರಿಂದ ಇವುಗಳನ್ನು ಹೊರತೆಗೆಯುವುದು ಕಷ್ಟಕರ ಕೆಲಸ
  2. ವಸ್ತುಗಳನ್ನು ಮರುಬಳಕೆ ಮಾಡಬೇಕು.
  3. ಕೆರೆ ನದಿ ಅಥವ ಸರೋವರಗಳಿಗೆ ಭೇಟಿ ನೀಡಿದಾಗ ನೀವು ಬಳಸಿದ ವಸ್ತುಗಳನ್ನು ಅಥವಾ ಪ್ಲಾಸ್ಟಿಕ್ ಚೀಲಗಳನ್ನು ಕಸದ ಬುಟ್ಟಿಯಲ್ಲಿ ಹಾಕುವುದು.
  4. ಸಮುದ್ರ ತೀರಗಳು, ನದಿಗಳು ಅಥವಾ ಪ್ರಾದೇಶಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಸ್ವಯಂಸೇವಕರೊಡನೆ ಅಥವಾ ಸ್ವಯಂಸೇವಕರಾಗಿ ಭಾಗಿಯಾಗಿ.
  5. ಬಟ್ಟೆ ಅಥವಾ ಪಾತ್ರೆಗಳನ್ನು ತೊಳೆಯುವಾಗ ಆದಷ್ಟು ಕಡಿಮೆ ಸಾಬೂನುಗಳನ್ನು/ಮಾರ್ಜಕಗಳು) ಬಳಸಿ.
  6. ಫಾಸ್ಪೆಟ್ ಮುಕ್ತ ಸಾಬೂನು/ ಮಾರ್ಜಕಗಳನ್ನು ಮಾತ್ರ ಬಳಸಿ.
  7. ಕೀಟ ನಾಶಕಗಳು, ಕಳೆ ನಾಶಕಗಳು, ಮತ್ತು ರಸಗೊಬ್ಬರಗಳನ್ನು ಬಳಸುವದನ್ನು ಕಡಿಮೆ ಮಾಡಬೇಕು ಅಥವಾ ಪರ್ಯಾಯಗಳನ್ನು ನೋಡಿಕೊಂಡರೆ ಒಳ್ಳೆಯದು.
  8. ವಾಹನಗಳ ತೈಲ ಅಥವಾ Automotive Fluids, Grease, ಹಾಗೂ ಇನ್ನೀತರ ರಾಸಾಯನಿಕಗಳನ್ನು ಚರಂಡಿಯಲ್ಲಿ ವಿಲೇವಾರಿ ಮಾಡಬಾರದು.
  9. ಏಕೆಂದರೆ, ಕೊನೆಗೆ ನದಿಗಳಂತಹ ನೀರಿನ ಮೂಲಗಳಿಗೆ ಸೇರುತ್ತವೆ.
  10. ಮಾತ್ರೆಗಳು, ಮತ್ತು ಇನ್ನೀತರ ಔಷಧಿಗಳನ್ನು ಶೌಚಾಲಯದಲ್ಲಿ ಹಾಕಿ Flush ಮಾಡಬೇಡಿ.
  11. ಒಳಚರಂಡಿ ತಾಜ್ಯವನ್ನು ಜಲಮೂಲಗಳಿಗೆ ಬಿಡುಗಡೆ ಮಾಡುವ ಬದಲು ಅವುಗಳನ್ನು ಸಂಸ್ಕರಿಸುವುದು ಉತ್ತಮ.
  12. ಬಹಳ ವಿಶೇಷವಾದ ಸಸ್ಯ ವಾಟರ್ ಹಯಸಿಂತ್ (Water Hyacinth),  ಕ್ಯಾಡ್ಮಿಯಂ ಗಳಂತಹ ವಿಷಕಾರಿ ರಾಸಾಯನಿಕಗಳನ್ನು ಹೀರಿಕೊಳ್ಳುತ್ತದೆ. ಇಂತಹ ಮಾಲಿನ್ಯ ಕಾರಕಗಳಿಗೆ ಗುರಿಯಾಗುವ ಪ್ರದೇಶಗಳಲ್ಲಿ ಈ ಸಸ್ಯಗಳನ್ನು ಬೆಳೆಸುವುದರಿಂದ ಜಲ ಮಾಲಿನ್ಯವು ಬಹಳಷ್ಟು ಕಡಿಮೆಯಾಗುತ್ತದೆ.
  13. ಕೆಲವು ರಾಸಾಯನಿಕ ವಿಧಾನಗಳಿಂದಲೂ ಜಲಮಾಲಿನ್ಯವನ್ನು ನಿಯಂತ್ರಿಸಬಹುದು.

ಓದಿಗೆ ಮನ್ನಣೆ

1) ನದಿಗಳ ಮಾಲಿನ್ಯ ಯಾವ ಕಾರಣಗಳಿಂದಾಗುತ್ತದೆ ಎಂಬುದನ್ನು ಓದಿ ತಿಳಿಯಿರಿ ಹಾಗೂ ಹಿರಿಯರಿಂದ ಕೇಳಿ ತಿಳಿಯಿರಿ.

ಜಲ ಮಾಲಿನ್ಯ ಹೇಗೆ ಉಂಟಾಗುತ್ತದೆ?

ನೀರಿನಲ್ಲಿ ಹಲವಾರು ರಾಸಾಯನಿಕಗಳು, ಸೂಕ್ಷ್ಮಾಣು ಜೀವಿಗಳು (ಕೊಳೆತ ಪದಾರ್ಥಗಳಿಂದ ಹುಟ್ಟಿದ), ಕಾರ್ಖಾನೆ-ಕೈಗಾರಿಕೆಗಳಿಂದ ಮತ್ತು ನಗರಗಳಿಂದ ಹೊರಬರುವ ತಾಜ್ಯವು ನೀರಿನಲ್ಲಿ ಬೆರೆತಾಗ ಜಲಮಾಲಿನ್ಯ ಉಂಟಾಗುತ್ತದೆ.

ಈ ತಾಜ್ಯಗಳು, ಹಳ್ಳ, ಕೆರೆ, ನದಿ, ಸರೋವರ ಹಾಗೂ ಸಾಗರಗಳಂತಹ ನೀರಿನ ಮೂಲಗಳಿಗೆ (ಆಕರಗಳು) ಬೆರೆತುಕೊಳ್ಳುತ್ತವೆ. ಅಲ್ಲಿ ಕೆಲವು ವಸ್ತುಗಳು ಅಥವಾ ತಾಜ್ಯ ಪದಾರ್ಥಗಳು ವಿಘಟನೆಗೊಳ್ಳುತ್ತವೆ.

ಇದು ಸಾವಿರಾರು ಸೂಕ್ಷ್ಮಾಣು ಜೀವಿಗಳು ಹುಟ್ಟಿವಿಕೆಗೆ ಕಾರಣವಾಗಿ, ಬಳಕೆಗೆ ಅನುಪಯುಕ್ತ ನೀರಾಗಿ ರೂಪಗೊಳ್ಳುತ್ತದೆ.

ಈ ನೀರಿನಲ್ಲಿ ಬೆರೆತ ಪದಾರ್ಥಗಳು ಮಾಲಿನ್ಯಕಾರಕಗಳಾಗಿ ಮಾರ್ಪಾಡುಗೊಳ್ಳುತ್ತವೆ.

ಈ ರೀತಿ ಉಂಟಾಗುವ ಜಲಮಾಲಿನ್ಯಕ್ಕೆ ವಿಧಗಳು ಇರಬಹುದಲ್ವಾ?

ಜಲಮಾಲಿನ್ಯಕ್ಕೆ ಮುಖ್ಯ ಕಾರಣಗಳು

  1. ನಗರೀಕರಣ
  2. ಅರಣ್ಯ ನಾಶ
  3. ಕೈಗಾರಿಕ ತಾಜ್ಯಗಳು
  4. ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು
  5. ರಸಗೊಬ್ಬರಗಳ ಮತ್ತು ಮಾರ್ಜಕಗಳ ಬಳಕೆ
  6. ಕೃಷಿಗೆ ಬಳಸಿದ ಕೀಟನಾಶಕಗಳ ಹರಿಯುವಿಕೆ
  7. ಅಪಘಾತಗಳು( ತೈಲ ಸೋರಿಕೆ, ಪರಮಾಣು ವಿಕಿರಣಗಳು)

2) ದಿನಪತ್ರಿಕೆಯಲ್ಲಿ ಬರುವ ನದಿಗಳ ಮಾಲಿನ್ಯ ಕುರಿತಾದ ಲೇಖನಗಳನ್ನು ಓದಿ ತಿಳಿಯಿರಿ ಹಾಗೂ ನಿಮ್ಮ ಸಹಪಾಠಿಗಳೊಂದಿಗೆ ಚರ್ಚಿಸಿರಿ.

ಶುಭನುಡಿ

  1. ಮಾಲಿನ್ಯರಹಿತ ನದಿ ಮನುಕುಲದ ಭದ್ರತೆಗೆ ಬುನಾದಿ.
  2. ಅಶುದ್ಧ ನೀರು ಅನಾರೋಗ್ಯಕ್ಕೆ ಆಹ್ವಾನ.
  3. ನೀರಿನಿಂದ ಉಸಿರು ನೀರಿನಿಂದ ಹಸಿರು.