ಜೀವ ಪ್ರಪಂಚ

ಮಕ್ಕಳೇ,
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆಯನ್ನು ನೀನು ಕೇಳಿರಬಹುದು. ಪರಿಸರ ಎಂಬ ಪದವು ನಮಗೆ ಚಿರಪರಿಚಿತವಾಗಿದೆ. ಪರಿಸರ ಎಂದರೆ ನಮ್ಮ ಸುತ್ತಲೂ ಕಂಡು ಬರುವ ಅಂಶಗಳು. ಪರಿಸರವನ್ನು ನಾವು ನೋಡಿಯೇ ಆನಂದಿಸಬೇಕು. ಗುಡ್ಡ, ಕಾಡು, ನದಿ, ಝರಿ, ತೊರೆ, ಜೇನುಹುಳು, ಕೀಟಗಳು, ಹದ್ದು, ಹಾವು, ಮಣ್ಣು, ಬೆಳಕು, ಪಕ್ಷಿಗಳು ಹೀಗೆ ನೋಡಿದಷ್ಟು ವಿಸ್ಮಯ ಎನಿಸುವ, ಬೆರಗುಗೊಳಿಸುವ ಹಲವು ಅಂಶಗಳು ನಮಗೆ ಕಾಣುತ್ತವೆ. ಇದು ನಮ್ಮ ಪರಿಸರ. ನಮ್ಮ ಪರಿಸರ ವಿವಿಧತೆಯ ಬೀಡು. ಇದರ ವಿವಿಧತೆಯ ವಿಶೇಷತೆಯನ್ನು ತಿಳಿಯುವ ಕುತೂಹಲ ನಿನಗಿದೆ ಅಲ್ಲವೆ? ಹಾಗಾದರೆ ಈ ಘಟಕವನ್ನು ಅರ್ಥೈಸಿಕೊ.

ಈ ಕಥೆ ಓದು – ಸೋಮಾರಿ ಸೋಮಣ್ಣ ಸೋಮಣ್ಣ ಒಬ್ಬ ಸೋಮಾರಿ. ತನ್ನದೇ ಸ್ವಲ್ಪ ಹೊಲವಿದ್ದರೂ ಒಂದು ದಿನವೂ ಹೊಲದ ಕೆಲಸ ಮಾಡಿದವನಲ್ಲ. ಅವರಿವರು ಕೊಟ್ಟದ್ದನ್ನಷ್ಟೆ ಪಡೆದು ಬದುಕುತ್ತಿದ್ದ. ಅವನಿಗೆ ಶೇಂಗಾ ಎಂದರೆ ಪಂಚಪ್ರಾಣ. ಹುರಿದ ಶೇಂಗಾ ಎಂದರಂತು ಅತಿ ಪ್ರೀತಿ. ಒಮ್ಮೆ ಹೀಗೆಯೇ ಹುರಿದ ಶೇಂಗಾ ಬೀಜ ತಿನ್ನುವಾಗ ಅವನಿಗೊಂದು ಆಲೋಚನೆ ಹೊಳೆಯಿತು. ತನ್ನ ಹೊಲದಲ್ಲಿ ಶೇಂಗಾ ಬೀಜ ಬಿತ್ತಿದರೆ ಸಾಕಷ್ಟು ಶೇಂಗಾ ಬೀಜ ದೊರೆಯುತ್ತದೆ. ಯಾರನ್ನೂ ಕೇಳುವ ಅವಶ್ಯಕತೆ ಇರುವುದಿಲ್ಲ ಎಂದುಕೊಂಡ. ಅದರೊಟ್ಟಿಗೆ ಶೇಂಗಾ ಬೀಜಕ್ಕಿಂತ ಹುರಿದ ಶೇಂಗಾ ಬಿತ್ತಿದರೆ, ಹುರಿದ ಶೇಂಗಾ ಬೀಜಗಳೆ ಸಿಗುತ್ತದೆಯಲ್ಲ. ಹುರಿಯಬೇಕಾದ ಕೆಲಸವೇ ಇರುವುದಿಲ್ಲ ಎಂಬ ಆಲೋಚನೆಯೂ ಬಂದಿತು. ಎಂತಹ ಬೀಜಗಳನ್ನು ಬಿತ್ತಬೇಕು ಎಂದು ತಿಳಿಯದ ಸೋಮಣ್ಣ ಮರು ದಿನದಿಂದಲೇ ಹುರಿದ ಶೇಂಗಾ ಬಿತ್ತುವ ಕಾರ್ಯ ಆರಂಭಿಸಿದ. ಸೋಮಣ್ಣ ಹೊಲದಲ್ಲಿ ಕೆಲಸ ಮಾಡುವುದನ್ನು ಕಂಡ ಅಕ್ಕ-ಪಕ್ಕದ ಹೊಲಗಳ ರೈತರು ಹರುಷಗೊಂಡರು. ಕೊನೆಗೂ ಸೋಮಣ್ಣ ಸೋಮಾರಿತನ ಬಿಟ್ಟನಲ್ಲ ಎಂದು ಖುಷಿಪಟ್ಟರು. ದಿನಗಳು ಕಳೆದವು. ಎಲ್ಲರ ಹೊಲಗಳಲ್ಲಿ ಹಸಿರು ಮೂಡಿ ಸಸಿಗಳು ಬೆಳೆದವು. ಆದರೆ ಸೋಮಣ್ಣನ ಹೊಲದಲ್ಲಿ ಒಂದು ಸಸಿಯೂ ಮೂಡಲಿಲ್ಲ.

ಹುರಿಯದ ಶೇಂಗಾದಲ್ಲಿ ಸಸಿಯಾಗಲು ಬೇಕಾದ ಲಕ್ಷಣಗಳಿರುತ್ತವೆ. ಅದನ್ನು ಜೈವಿಕ ಅಂಶ ಎನ್ನಲಾಗುತ್ತದೆ. ಹುರಿದ ಶೇಂಗಾದಲ್ಲಿ ಸಸಿಯಾಗಲು ಬೇಕಾದ ಜೈವಿಕ ಅಂಶ ನಾಶವಾಗುತ್ತದೆ. ಅದನ್ನು ಅಜೈವಿಕ ಸ್ಥಿತಿ ಎನ್ನುತ್ತಾರೆ. ಪರಿಸರದಲ್ಲಿ ಜೈವಿಕ ಲಕ್ಷಣ ಹೊಂದಿರುವ ಜೀವಿಗಳು ಮತ್ತು ಜೈವಿಕ ಲಕ್ಷಣ ಇಲ್ಲದ ನಿರ್ಜೀವಿಗಳು ಕಂಡುಬರುತ್ತವೆ.

ಜೈವಿಕ ಅಂಶ ಹಾಗೂ ಅಜೈವಿಕ ಸ್ಥಿತಿ

ಜೀವಿಗಳ ಲಕ್ಷಣಗಳ

 1. ಜೀವಿಗಳು ಜೀವಕೋಶಗಳಿಂದಾಗಿವೆ :-
  ಈ ಚಿತ್ರಗಳನ್ನು ಗಮನಿಸು. ಇವು ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳು. ಮನೆ ಕಟ್ಟುವುದನ್ನು ನೀನು ಗಮನಿಸಿರುವೆ. ಇಟ್ಟಿಗೆ, ಸಿಮೆಂಟ್, ನೀರು, ಕಬ್ಬಿಣ, ಕಟ್ಟಿಗೆ ಹೀಗೆ ಹಲವು ವಸ್ತುಗಳನ್ನು ಸರಿಯಾಗಿ ಜೋಡಿಸಿದಾಗ ಮನೆ ತಯಾರಾಗುತ್ತದೆ. ಹಾಗೆಯೇ ಜೀವಕೋಶಗಳಿಂದ ಜೀವಿಗಳ ದೇಹವು ರಚನೆಯಾಗಿದೆ.
ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳು
 1. ಜೀವಿಗಳು ಉಸಿರಾಡುತ್ತವೆ :-
  ಜೀವಿಗಳು ಉಸಿರಾಡುತ್ತವೆ ಎಂಬುದನ್ನು ನೀನು ಹಿಂದಿನ ತರಗತಿಗಳಲ್ಲಿ ತಿಳಿದಿರುವೆ. ಜೀವಿಗಳು ಉಸಿರಾಡುವಾಗ ವಾಯುವಿನಲ್ಲಿನ ಆಕ್ಸಿಜನ್ ಅನಿಲವನ್ನು ತೆಗೆದುಕೊಂಡು ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹೊರಬಿಡುತ್ತವೆ.

ಸಸ್ಯಗಳೂ ಕೂಡ ಉಸಿರಾಟಕ್ಕಾಗಿ ಆಕ್ಸಿಜನ್ ಅನಿಲವನ್ನು ಅವಲಂಬಿಸಿವೆ. ಸಾಮಾನ್ಯವಾಗಿ ಸಸ್ಯಗಳು ಎಲೆಗಳ ತಳಭಾಗದಲ್ಲಿರುವ ಪತ್ರರಂಧ್ರಗಳ (ಸ್ಟೊಮ್ಯಾಟಾ) ಮೂಲಕ ಉಸಿರಾಡುತ್ತವೆ.

ಸಾಮಾನ್ಯವಾಗಿ ಸಸ್ಯಗಳು ಎಲೆಗಳ ತಳಭಾಗದಲ್ಲಿರುವ ಪತ್ರರಂಧ್ರಗಳ (ಸ್ಟೊಮ್ಯಾಟಾ) ಮೂಲಕ ಉಸಿರಾಡುತ್ತವೆ.

ಆಕ್ಸಿಜನ್ ಅನಿಲದ ಸಹಾಯದಿಂದ ಆಹಾರದಲ್ಲಿರುವ ಶಕ್ತಿಯು ಜೀವಿಗಳ ದೇಹಕ್ಕೆ ದೊರೆಯುತ್ತದೆ.

 1. ಜೀವಿಗಳು ಆಹಾರ ಸೇವಿಸುತ್ತವೆ :-
  ಕಟ್ಟಿಗೆ ಕಡಿಯುವುದು, ಭಾರವಾದ ಚೀಲಹೊರುವುದು, ಬೇಟೆಯಾಡುವುದು, ಹೀಗೆ ಜೀವಿಗಳು ನಿತ್ಯವೂ ಅನೇಕ ಚಟುವಟಿಕೆಗಳನ್ನು ಮಾಡುತ್ತವೆ.

ಈ ಎಲ್ಲಾ ಕೆಲಸಗಳನ್ನು ಮಾಡಲು ಜೀವಿಗಳಿಗೆ ಶಕ್ತಿ ಬೇಕು. ಜೀವಿಗಳು ತಮಗೆ ಬೇಕಾದ ಶಕ್ತಿಯನ್ನು ಆಹಾರದ ಮೂಲಕ ಪಡೆಯುತ್ತವೆ.

ಸಸ್ಯಗಳ ಆಹಾರ :-

ಸಸ್ಯದ ಪ್ರತಿಯೊಂದು ಭಾಗವೂ ಒಂದಲ್ಲ ಒಂದು ಚಟುವಟಿಕೆ ಮಾಡುತ್ತಿರುತ್ತದೆ. ಅದಕ್ಕೂ ಆಹಾರ ಬೇಕಲ್ಲವೆ? ಸಸ್ಯಕ್ಕೆ ಆಹಾರ ಹೇಗೆ ದೊರೆಯುತ್ತದೆ? ಯೋಚಿಸು! ಹೌದು, ಹಸಿರು ಸಸ್ಯಗಳು ತಮಗೆ ಬೇಕಾದ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಹಾಗಾಗಿ ಹಸಿರು ಸಸ್ಯಗಳನ್ನು ಸ್ವಪೋಷಕಗಳು ಎನ್ನುವರು.

ಸಸ್ಯದ ಆಹಾರ ತಯಾರಿಕೆ :

ಸಸ್ಯಗಳು ಸೂರ್ಯನ ಬೆಳಕಿನ ಶಕ್ತಿ, ವಾಯುವಿನಲ್ಲಿನ ಕಾರ್ಬನ್ ಡೈಆಕ್ಸೈಡ್, ಮಣ್ಣಿನಲ್ಲಿರುವ ನೀರು, ಖನಿಜ-ಲವಣಾಂಶಗಳನ್ನು ಬೇರುಗಳ ಮೂಲಕ ಹೀರಿ ಎಲೆಯಲ್ಲಿನ ಪತ್ರಹರಿತ್ತಿನ ಸಹಾಯದಿಂದ ಆಹಾರ ತಯಾರಿಸುತ್ತವೆ. ಇದನ್ನು ದ್ಯುತಿ ಸಂಶ್ಲೇಷಣೆ ಎನ್ನುವರು.

ದ್ಯುತಿ ಸಂಶ್ಲೇಷಣೆ

ಸಸ್ಯದ ಆಹಾರ ತಯಾರಿಕೆಯಲ್ಲಿ ಗ್ಲೂಕೋಸ್ ತಯಾರಾಗುತ್ತದೆ ಹಾಗೂ ಆಕ್ಸಿಜನ್ ಬಿಡುಗಡೆಯಾಗುತ್ತದೆ.

ದ್ಯುತಿ ಸಂಶ್ಲೇಷಣೆ

ಡ್ರಾಸಿರಾ, ನೆಪೆಂಥಿಸ್, ಯುಟ್ರಿಕ್ಯುಲೇರಿಯಾ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಂಡರು ಕೂಡ ನೈಟ್ರೊಜನ್‍ಗಾಗಿ ಕೀಟಗಳನ್ನು ಅವಲಂಬಿಸಿವೆ. ಇವುಗಳನ್ನು ಕೀಟಾಹಾರಿ ಸಸ್ಯಗಳು ಎನ್ನುವರು.

ಡ್ರಾಸಿರಾ
ನೆಪೆಂಥಿಸ್
ಯುಟ್ರಿಕ್ಯುಲೇರಿಯಾ

ಪ್ರಾಣಿಗಳ ಆಹಾರ :-

ಪ್ರಾಣಿಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದಿಲ್ಲ. ಅವು ಆಹಾರಕ್ಕಾಗಿ ಸಸ್ಯ ಹಾಗೂ ಇತರ ಪ್ರಾಣಿಗಳನ್ನು ಅವಲಂಬಿಸಿವೆ. ಹಾಗಾಗಿ ಪ್ರಾಣಿಗಳನ್ನು ಪರಪೋಷಕಗಳು ಎನ್ನುವರು.

ಎಲ್ಲ ಪ್ರಾಣಿಗಳು ಒಂದೇ ರೀತಿಯ ಆಹಾರ ಸೇವನೆ ಮಾಡುವುದಿಲ್ಲ. ಅವುಗಳು ಸೇವಿಸುವ ಆಹಾರದ ಆಧಾರದಲ್ಲಿ ಪ್ರಾಣಿಗಳನ್ನು ಕೆಳಗಿನಂತೆ ವಿಂಗಡಿಸಿದೆ.

ಸಸ್ಯಾಹಾರಿ – ಸಸ್ಯ ಹಾಗೂ ಅದರ ಉತ್ಪನ್ನಗಳನ್ನು ಮಾತ್ರ ಆಹಾರವನ್ನಾಗಿ ಸೇವಿಸುವ ಪ್ರಾಣಿಗಳು.

ಮಾಂಸಾಹಾರಿ – ತಮ್ಮ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ತಿಂದು ಬದುಕುವ ಪ್ರಾಣಿಗಳು.

ಮಿಶ್ರಾಹಾರಿ – ಸಸ್ಯ ಹಾಗೂ ಪ್ರಾಣಿಗಳೆರಡನ್ನೂ ಆಹಾರವಾಗಿ ಸೇವಿಸುವ ಪ್ರಾಣಿಗಳು.

ಮಿಶ್ರಾಹಾರಿ ಪ್ರಾಣಿಗಳು.
 1. ಜೀವಿಗಳು ಬೆಳೆಯುತ್ತವೆ :-
  ಈ ಚಿತ್ರಗಳು ಆಯಾ ಜೀವಿಗಳ ಬೆಳವಣಿಗೆಯನ್ನು ತೋರಿಸುತ್ತವೆ. ಪ್ರತಿ ಚಿತ್ರದಲ್ಲೂ ಜೀವಿಗಳ ಎತ್ತರ ಮತ್ತು ಗಾತ್ರದಲ್ಲಿ ಹೆಚ್ಚಳವಾಗಿದೆ. ಇದನ್ನು ಬೆಳವಣಿಗೆ ಎನ್ನುವರು.
 1. ಜೀವಿಗಳು ಚಲಿಸುತ್ತವೆ :-
  ಈ ಚಿತ್ರಗಳನ್ನು ಗಮನಿಸು. ಇವು ಜೀವಿಯ ಯಾವ ಲಕ್ಷಣವನ್ನು ಸೂಚಿಸುತ್ತವೆ?
  ಇವೆಲ್ಲವು ಚಲನೆಗೆ ಸಂಬಂಧಿಸಿವೆ. ಚಲನೆಯು ಜೀವಿಗಳ ಅದರಲ್ಲೂ ಪ್ರಾಣಿಗಳ ವಿಶೇಷ ಲಕ್ಷಣವಾಗಿದೆ.

ಪ್ರಾಣಿಗಳ ಚಲನ :-

ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತವೆ. ಅದಕ್ಕಾಗಿ ವಿಶೇಷ ಅಂಗಗಳು ಪ್ರಾಣಿಗಳಿಗೆ ಇವೆ.

ಪ್ರಾಣಿಗಳಿಗೆ ಚಲನಾಂಗಗಳಿದ್ದಂತೆ ಸಸ್ಯಗಳಿಗೆ ಇಲ್ಲ. ಸಸ್ಯಗಳ ಬೇರನ್ನು ಮಣ್ಣು ಹಿಡಿದಿಟ್ಟಿರುವುದರಿಂದ ಅವುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ಸಾಧ್ಯವಾಗುವುದಿಲ್ಲ. ಆದರೂ ಸಸ್ಯಗಳಲ್ಲಿ ಕೆಳಗಿನ ಚಲನೆಗಳನ್ನು ಗಮನಿಸಬಹುದು.

 • ಬೇರು ಭೂಮಿಯಲ್ಲಿ ನೀರಿರುವ ಕಡೆಗೆ ಬೆಳೆಯುವುದು.
 • ಸೂರ್ಯಕಾಂತಿ ಸಸ್ಯವು ಸೂರ್ಯನ ಕಡೆಗೆ ಮುಖ ಮಾಡುವುದು.
 1. ಜೀವಿಗಳು ವಿಸರ್ಜನೆ ಮಾಡುತ್ತವೆ :-
  ಜೀವಿಗಳ ದೇಹದಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತವೆ. ಇದರಿಂದಾಗಿ ದೇಹಕ್ಕೆ ಬೇಡವಾದ ವಸ್ತುಗಳು ಸಹ ಉತ್ಪತ್ತಿಯಾಗುತ್ತವೆ. ಇವುಗಳನ್ನು ದೇಹದಿಂದ ಹೊರಹಾಕಲೇಬೇಕು. ಇಲ್ಲದಿದ್ದರೆ ದೇಹಕ್ಕೆ ತೊಂದರೆಯಾಗುತ್ತದೆ.

ಕಾರ್ಬನ್ ಡೈಆಕ್ಸೈಡ್, ಬೆವರು, ಮಲ, ಮೂತ್ರದ ರೂಪದಲ್ಲಿ ಪ್ರಾಣಿಗಳು ಬೇಡವಾದ ವಸ್ತುಗಳನ್ನು ಹೊರಹಾಕುತ್ತವೆ. ಅದಕ್ಕಾಗಿ ವಿಶೇಷ ಅಂಗಗಳಿವೆ.

ಸಸ್ಯಗಳು ಕೂಡ ಉಸಿರಾಟ ಕ್ರಿಯೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹೊರ ಹಾಕುತ್ತವೆ. ಒಣಗಿದ ಎಲೆ, ಕಾಂಡ, ಕೊಳೆತ ಭಾಗಗಳು ಸಸ್ಯಗಳಿಂದ ಕಳಚಿಕೊಳ್ಳುತ್ತವೆ. ಹೆಚ್ಚಾದ ನೀರನ್ನು ಸಸ್ಯಗಳು ಎಲೆಗಳ ಮೂಲಕ ಹೊರಹಾಕುತ್ತವೆ.

 1. ಜೀವಿಗಳು ಸಂತಾನೋತ್ಪತ್ತಿ ಮಾಡುತ್ತವೆ :-
  ಚಿತ್ರಗಳಲ್ಲಿ ಪ್ರತಿಯೊಂದು ಜೀವಿ ಹಾಗೂ ಅದರ ಮರಿ ಇರುವುದನ್ನು ಗಮನಿಸು. ಪ್ರತಿಯೊಂದು ಜೀವಿಯ ಮರಿಗಳು ಜನ್ಮ ನೀಡಿದ ಆ ಜೀವಿಗಳನ್ನು ಹೋಲುತ್ತವೆ. ಹೀಗೆ ಜೀವಿಯೊಂದು ತನ್ನನ್ನೇ ಹೋಲುವ ಮರಿ ಜೀವಿಗಳಿಗೆ ಜನ್ಮ ನೀಡುವುದನ್ನು ಸಂತಾನೋತ್ಪತ್ತಿ ಎನ್ನುವರು.
 • ಕೆಲವು ಪ್ರಾಣಿಗಳು ಮೊಟ್ಟೆಯ ಮೂಲಕ, ಇನ್ನೂ ಕೆಲವು ನೇರವಾಗಿ ಮರಿಗಳಿಗೆ ಜನ್ಮ ನೀಡುವುದರ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ.
 • ಸಸ್ಯಗಳು ಬೀಜ ಮತ್ತು ಕಾಂಡಗಳ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ.

ಸಸ್ಯದ ಜೀವನ ಚಕ್ರ :-
ಬೀಜವು ಸಸ್ಯದ ಸಂತಾನೋತ್ಪತ್ತಿಯ ಪ್ರಮುಖ ಭಾಗ, ಬೀಜದಿಂದ ಬೀಜಗಳು ಉತ್ಪತ್ತಿಯಾಗುವಿಕೆ ಪರಿಸರದ ಅಚ್ಚರಿಗಳಲ್ಲೊಂದು. ಬೀಜಗಳಲ್ಲದೆ ಕೆಲವು ಸಸ್ಯಗಳು ತಮ್ಮ ಕಾಂಡದ ಗಿಣ್ಣುಗಳ ಮೂಲಕ ಹೊಸ ಸಸ್ಯವನ್ನು ಚಿಗುರಿಸುತ್ತವೆ.

 1. ಜೀವಿಗಳು ಪ್ರಚೋದನೆಗೆ ಪ್ರತಿಕ್ರಿಯಿಸುತ್ತವೆ :-
  ಕಾಲಿಗೆ ಮುಳ್ಳು ಚುಚ್ಚಿದಾಕ್ಷಣ ನಮಗೆ ನೋವಿನ ಅನುಭವ ಆಗುತ್ತದೆ. ಚಳಿಗಾಲದಲ್ಲಿ ಮೈ ನಡುಗುವುದು, ಹಾವು ತನ್ನ ರಕ್ಷಣೆಗಾಗಿ ಬುಸ್ ಎನ್ನುವುದು, ಬಿಸಿಲಿನ ತಾಪ ನೀಗಿಸಿಕೊಳ್ಳಲು ಎಮ್ಮೆಗಳು ನೀರಿಗೆ ಇಳಿಯುವುದನ್ನು ನಾವು ನೋಡಿದ್ದೇವೆ. ಕೆಲವು ಕೀಟಗಳನ್ನು ಮುಟ್ಟಿದಾಗ ಅವು ನಮ್ಮನ್ನು ಕಚ್ಚುತ್ತವೆ. ಪ್ರಾಣಿಗಳು ಕಿರುಚುತ್ತವೆ. ಹೀಗೆ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ. ಇವೆಲ್ಲ ಸುತ್ತಲಿನ ಪ್ರಚೋದನೆಗಳಿಗೆ ಜೀವಿಗಳು ನೀಡುವ ಪ್ರತಿಕ್ರಿಯೆಗಳಾಗಿವೆ. ಜೀವಿಗಳು ತಮ್ಮ ಸುತ್ತಲಿನ ಪರಿಸರದಲ್ಲಿ ಆಗುವ ಬದಲಾವಣೆಗಳಿಗೆ ಸ್ಪಂದಿಸುತ್ತವೆ. ಸಾಮಾನ್ಯವಾಗಿ ಸ್ಪರ್ಶ, ಬಿಸಿ, ತಂಪು, ಶಬ್ದ, ವಾಸನೆಗಳಿಗೆ ಜೀವಿಗಳು ಪ್ರತಿಕ್ರಿಯೆ ನೀಡುತ್ತವೆ. ಇದಕ್ಕಾಗಿ ಜೀವಿಗಳಲ್ಲಿ ವಿಶೇಷ ಅಂಗಗಳಿವೆ.

ಈ ಚಿತ್ರಗಳನ್ನು ಗಮನಿಸು. ಮುಟ್ಟಿದರೆ ಮುನಿ ಸಸ್ಯದ ಎಲೆಗಳನ್ನು ಮುಟ್ಟಿದಾಗ ಎಲೆಗಳ ಮುದುಡಿಕೊಳ್ಳುವಿಕೆ, ಚೇಳಿಗೆ ಹೊರಗಿನ ವಸ್ತುವೊಂದು ಸ್ಪರ್ಶಿಸಿದಾಗ ತನ್ನ ಕೊಂಡಿಯನ್ನೆತ್ತಿ ಕುಟುಕುವಿಕೆ, ಸೂರ್ಯಕಾಂತಿ ಹೂ ಸೂರ್ಯನೆಡೆಗೆ ಮುಖ ಮಾಡುವುದು – ಹೀಗೆ ಜೀವಿಗಳು ಪ್ರಚೋದನೆಗಳಿಗೆ ಪ್ರತಿಕ್ರಿಯಿಸುತ್ತವೆ.

 1. ಜೀವಿಗಳು ಜೀವಿತಾವಧಿಯನ್ನು ಹೊಂದಿವೆ :-
  ಜೀವಿಗಳು ಜನಿಸಿ ನಂತರ, ಪ್ರೌಢ ಜೀವಿಗಳಾಗಿ ಬೆಳೆದು, ಸಂತಾನೋತ್ಪತ್ತಿ ಮಾಡಿ, ಮುಪ್ಪಾಗಿ ಕೊನೆಗೆ ಸಾಯುತ್ತವೆ. ಹೀಗೆ ಒಂದು ಜೀವಿಯ ಜನನ ಮತ್ತು ಮರಣಗಳ ನಡುವಿನ ಅವಧಿಗೆ ಜೀವಿತಾವಧಿ ಎನ್ನುವರು.

ಪ್ರಾಣಿಗಳು ಸರಾಸರಿ ಜೀವಿತಾವಧಿ (ವರ್ಷಗಳಲ್ಲಿ)

ಸಸ್ಯಗಳನ್ನು ಜೀವಿತಾವಧಿಯ ಆಧಾರದ ಮೇಲೆ ಏಕವಾರ್ಷಿಕ ಸಸ್ಯಗಳು, ದ್ವೈವಾರ್ಷಿಕ ಸಸ್ಯಗಳು ಮತ್ತು ಬಹುವಾರ್ಷಿಕ ಸಸ್ಯಗಳು ಎಂದು ವಿಂಗಡಿಸಲಾಗಿದೆ.

ಏಕವಾರ್ಷಿಕ ಸಸ್ಯಗಳು
ಒಂದು ವರ್ಷ ಅಥವಾ ಒಂದು ಋತುವಿನ ಅವಧಿಯಲ್ಲಿ ಹೂ ಬಿಟ್ಟು, ಕಾಯಿಯಾಗಿ ಹಣ್ಣಾದ ಮೇಲೆ ನಾಶವಾಗುವ ಸಸ್ಯಗಳು

ದ್ವೈವಾರ್ಷಿಕ ಸಸ್ಯಗಳು
ಎರಡು ವರ್ಷ ಅಥವಾ ಎರಡು ಋತುಗಳವರೆಗೆ ಜೀವಿಸಿ ಹೂವು, ಹಣ್ಣು, ಬೀಜಗಳನ್ನು ಉತ್ಪತ್ತಿ ಮಾಡಿ ನಾಶವಾಗುವ ಸಸ್ಯಗಳು

ಬಹುವಾರ್ಷಿಕ ಸಸ್ಯಗಳು
ಹಲವಾರು ವರ್ಷಗಳವರೆಗೆ ಬದುಕಿ, ಹೂವು ಹಣ್ಣು, ಬೀಜಗಳನ್ನು ಉತ್ಪತ್ತಿ ಮಾಡುವ ಸಸ್ಯಗಳು.

ಜೀವಿತಾವಧಿಯ ಆಧಾರವಲ್ಲದೆ ಸಸ್ಯಗಳ ಬೀಜದಳಗಳ ಆಧಾರದಲ್ಲಿ ಸಸ್ಯಗಳನ್ನು ಏಕದಳ ಧಾನ್ಯ ಹಾಗೂ ದ್ವಿದಳ ಧಾನ್ಯ ಸಸ್ಯಗಳೆಂದು ವಿಂಗಡಿಸಲಾಗಿದೆ.
ಏಕದಳ ಧಾನ್ಯ ಸಸ್ಯಗಳ ಬೀಜವು ಒಂದು ಬೀಜ ದಳವನ್ನು ಹೊಂದಿರುತ್ತದೆ.
ಉದಾಹರಣೆ : ಜೋಳ, ರಾಗಿ, ಗೋಧಿ, ಭತ್ತ, ಸಿರಿಧಾನ್ಯಗಳು.

ಜೋಳ (ಏಕದಳ ಧಾನ್ಯ)
ರಾಗಿ (ಏಕದಳ ಧಾನ್ಯ)
ಗೋಧಿ (ಏಕದಳ ಧಾನ್ಯ)
ಭತ್ತ (ಏಕದಳ ಧಾನ್ಯ)
ಸಿರಿ ಧಾನ್ಯಗಳು (ಏಕದಳ ಧಾನ್ಯ)

ದ್ವಿದಳ ಧಾನ್ಯ ಸಸ್ಯಗಳ ಬೀಜವು ಎರಡು ಬೀಜ ದಳಗಳನ್ನು ಹೊಂದಿರುತ್ತದೆ.
ಉದಾಹರಣೆ : ಹುರುಳಿ, ಶೇಂಗಾ. ತೊಗರಿ, ಕಡಲೆ, ಉದ್ದು.

ಹುರುಳಿ ಕಾಳು (ದ್ವಿದಳ ಧಾನ್ಯ)
ಶೇಂಗಾ (ದ್ವಿದಳ ಧಾನ್ಯ)
ತೊಗರಿ (ದ್ವಿದಳ ಧಾನ್ಯ)
ಕಡಲೆ (ದ್ವಿದಳ ಧಾನ್ಯ)
ಉದ್ದು (ದ್ವಿದಳ ಧಾನ್ಯ)

ಜೀವಿಗಳ ಲಕ್ಷಣಗಳ ಬಗ್ಗೆ ತಿಳಿದೆಯಲ್ಲವೆ? ಸಸ್ಯಗಳು ಮತ್ತು ಪ್ರಾಣಿಗಳು ಪರಿಸರದ ಎರಡು ಪ್ರಮುಖ ಅಂಶಗಳು, ಆದರೆ ಇತ್ತೀಚೆಗೆ ಮನುಷ್ಯರ ದುರಾಸೆಯಿಂದ ಪರಿಸರದಲ್ಲಿ ಗಿಡಮರಗಳ ಮತ್ತು ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಸ್ಯಗಳು ಮತ್ತು ಪ್ರಾಣಿಗಳ ಸಂರಕ್ಷಣೆ ಇಂದಿನ ಅಗತ್ಯತೆಯಾಗಿದೆ.

ಸಸ್ಯಗಳನ್ನು ನಾವೇಕೆ ಸಂರಕ್ಷಿಸಬೇಕು? – ಮಳೆಗಾಗಿ – ಆಹಾರಕ್ಕಾಗಿ – ಮುಂದಿನ ಪೀಳಿಗೆಗಾಗಿ

ಪ್ರಾಣಿ ಸಂರಕ್ಷಣೆಯ ಮಹತ್ವ :-

ಕೆಳಗಿನ ಘಟನೆಯನ್ನು ಓದು
ಬೋರ್ನಿಯೊದಲ್ಲಿ ಒಮ್ಮೆ ನೊಣಗಳ ಕಾಟ ಅತಿಯಾಯಿತು. ಇವನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಬಳಸಲಾಯಿತು. ನೊಣಗಳೆಲ್ಲ ಸತ್ತು ಬಿದ್ದವು. ಸತ್ತ ನೊಣಗಳನ್ನು ಅಲ್ಲಿದ್ದ ಹಲ್ಲಿಗಳು ತಿನ್ನಲಾರಂಭಿಸಿದವು. ಇದರಿಂದ ನೊಣಗಳ ಮೇಲಿದ್ದ ಕೀಟನಾಶಕಗಳು ಹಲ್ಲಿಗಳ ದೇಹವನ್ನು ಸೇರಿದವು. ಇವುಗಳ ಪ್ರಭಾವದಿಂದ ಹಲ್ಲಿಗಳ ಓಡಾಟ ನಿಧಾನವಾಯಿತು. ಆಗ ಅವುಗಳನ್ನು ಬೆಕ್ಕುಗಳು ಸುಲಭವಾಗಿ ಬೇಟೆಯಾಡಿ ತಿನ್ನಲಾರಂಭಿಸಿದವು. ಹಲ್ಲಿಗಳ ಮೂಲಕ ಬೆಕ್ಕುಗಳ ದೇಹವನ್ನು ಸೇರಿದ ಕೀಟನಾಶಕಗಳು ಬೆಕ್ಕುಗಳಿಗೆ ವಿಷವಾಗಿ ಪರಿಣಮಿಸಿ, ಅನೇಕ ಬೆಕ್ಕುಗಳು ಸತ್ತವು. ಬೆಕ್ಕುಗಳ ಸಂಖ್ಯೆ ಕುಸಿಯುತ್ತಿದ್ದಂತೆ ಇಲಿಗಳ ಸಂಖ್ಯೆ ಅಪಾರವಾಗಿ ಬೆಳೆಯಲಾರಂಭಿಸಿತು. ಇದರಿಂದ ಪ್ಲೇಗ್ ರೋಗ ತಲೆದೋರಿ ಅನೇಕ ಜನರನ್ನು ಬಲಿ ತೆಗೆದುಕೊಂಡಿತು. ಇಲಿಗಳನ್ನು ನಿಯಂತ್ರಿಸಲು ಸರ್ಕಾರವು ಇತರ ದೇಶಗಳಿಂದ ಬೆಕ್ಕುಗಳನ್ನು ಆಮದು ಮಾಡಿಕೊಳ್ಳಬೇಕಾಯಿತು. ಈ ಘಟನೆಯು ಪರಿಸರದಲ್ಲಿ ಪ್ರಾಣಿ ಸಂರಕ್ಷಣೆಯ ಹಾಗೂ ಜೀವಿಗಳಲ್ಲಿ ಸಮತೋಲನದ ಮಹತ್ವವನ್ನು ತಿಳಿಸುತ್ತದೆ.

ಪ್ರಾಣಿ ಸಂರಕ್ಷಣೆಯ ಮಹತ್ವದ ಬಗ್ಗೆ ಇನ್ನೂ ಹಲವು ಅಂಶಗಳನ್ನು ಕೆಳಗೆ ನೀಡಿದೆ ಓದು.

 • ಪ್ರಾಣಿಗಳು ಪರಿಸರದ ಸಮತೋಲನವನ್ನು ಉಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
 • ಪ್ರಾಣಿಗಳ ನಾಶದಿಂದ ಪರಿಸರದಲ್ಲಿ ಆಹಾರದ ಅಭಾವ ಉಂಟಾಗಿ ಇತರ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ.
 • ಇತ್ತೀಚೆಗೆ ಸರ್ಕಾರಗಳು ರಾಷ್ಟ್ರೀಯ ಅರಣ್ಯ, ವನ್ಯಜೀವಿಧಾಮ, ಪಕ್ಷಿಧಾಮ, ಅಭಯಾರಣ್ಯಗಳ ಮೂಲಕ ಪ್ರಾಣಿ ಸಂತತಿಯನ್ನು ರಕ್ಷಣೆ ಮಾಡುವ ಕ್ರಮ ಕೈಗೊಂಡಿದೆ. ಪ್ರಾಣಿಗಳ ಬೇಟೆಯನ್ನು ನಿಷೇಧಿಸಿದೆ.

ನಮ್ಮ ಸುತ್ತಲಿನ ಜೀವ ಪ್ರಪಂಚ ವಿಸ್ಮಯವಾಗಿದೆ. ಪರಿಸರದಲ್ಲಿ ಸಸ್ಯ, ಪ್ರಾಣಿಗಳ ಬಗ್ಗೆ ತಿಳಿದು ಅದನ್ನು ಪರಿಸರದಲ್ಲಿ ರಕ್ಷಿಸುವ ಕೆಲಸ ಮಾಡಿದರೆ ನಾವು ಇಂದು ಕಾಣುತ್ತಿರುವ ಪರಿಸರ ಮುಂದಿನ ಪೀಳಿಗೆಗೆ ಕಾಣಸಿಗುತ್ತದೆ. ಪರಿಸರವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂಬ ಮಾತು ನಿನಗೆ ಸದಾ ನೆನಪಿರಲಿ.

ವಿಡಿಯೋ ಪಾಠಗಳು

Samveda – 5th – EVS – Jeeva Prapancha (Part 1 of 2)
Samveda – Class 5 – KM – EVS -ಜೀವ ಪ್ರಪಂಚ | (Part 2 of 2)
ಜೀವ ಪ್ರಪಂಚ..ತರಗತಿ 5.. ಪರಿಸರ ಅಧ್ಯಯನ..ಘಟಕ 1.. ಭಾಗ 1..Jeeva prapancha

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.