ಜೀವಿಗಳಲ್ಲಿ ಉಸಿರಾಟ – ಪಾಠ-10

ಒಂದು ವರ್ಷದ ನಂತರ ಪಟ್ಟಣಕ್ಕೆ ಬರುತ್ತಿರುವ ತನ್ನ ಅಜ್ಜ – ಅಜ್ಜಿಯನ್ನು ಭೇಟಿಯಾಗಲು ಬೂಝೊ ಒಂದು ದಿನ ಉತ್ಸಾಹದಿಂದ ಕಾಯುತ್ತಿದ್ದ. ಅವರನ್ನು ಬಸ್ ನಿಲ್ದಾಣದಲ್ಲಿ ಎದುರುಗೊಳ್ಳಲು ಬಯಸಿದ್ದರಿಂದ ಅವನು ಸಹಜವಾಗಿ ಅವಸರದಲ್ಲಿದ್ದ. ಅವನು ವೇಗವಾಗಿ ಓಡಿದ ಮತ್ತು ಕೆಲವೇ ನಿಮಿಷಗಳಲ್ಲಿ ಬಸ್ ನಿಲ್ದಾಣ ತಲುಪಿದ. ಅವನು ತೀವ್ರಗತಿಯಲ್ಲಿ ಉಸಿರಾಡುತ್ತಿದ್ದ. ಅವನು ಅಷ್ಟು ವೇಗವಾಗಿ ಉಸಿರಾಡುತ್ತಿರುವುದೇಕೆ ಎಂದು ಅವನ ಅಜ್ಜಿ ಅವನನ್ನು ಕೇಳಿದರು. ದಾರಿಯುದ್ದಕ್ಕೂ ಓಡಿ ಬಂದಿರುವುದಾಗಿ ಬೂಝೊ ಅವರಿಗೆ ಹೇಳಿದ. ಆದರೆ ಆ ಪ್ರಶ್ನೆ ಅವನ ಮನಸ್ಸಿನಲ್ಲಿ ನಿಂತುಬಿಟ್ಟಿತು. ಓಟವು ವ್ಯಕ್ತಿಯ ಶ್ವಾಸೋಚ್ಛ್ವಾಸ ಕ್ರಿಯೆಯ ವೇಗವನ್ನು ಏಕೆ ಹೆಚ್ಚಿಸುತ್ತದೆ? ಎಂದು ಅವನು ಆಶ್ಚರ್ಯಪಟ್ಟ. ನಾವೇಕೆ ಶ್ವಾಸಕ್ರಿಯೆ ನಡೆಸುತ್ತೇವೆ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಬೂಝೊನ ಪ್ರಶ್ನೆಗೆ ಉತ್ತರ ಅಡಗಿದೆ. ಶ್ವಾಸಕ್ರಿಯೆಯು ಉಸಿರಾಟದ ಒಂದು ಭಾಗ. ಉಸಿರಾಟದ ಬಗ್ಗೆ ನಾವು ತಿಳಿದುಕೊಳ್ಳೋಣ.

10.1 ನಾವು ಏಕೆ ಉಸಿರಾಡುತ್ತೇವೆ?

ಎಲ್ಲಾ ಜೀವಿಗಳೂ ಜೀವಕೋಶಗಳೆಂಬ ಸೂಕ್ಷ್ಮ ಘಟಕಗಳಿಂದ ಮಾಡಲ್ಪಟ್ಟಿವೆ ಎಂಬುದನ್ನು ನೀವು 2ನೇ ಅಧ್ಯಾಯದಲ್ಲಿ ಕಲಿತಿರುವಿರಿ. ಜೀವಿಗಳ ದೇಹದ ಅತಿ ಸಣ್ಣ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕವೆ ಜೀವಕೋಶ (cell). ಪೋಷಣೆ, ಸಾಗಾಣಿಕೆ, ವಿಸರ್ಜನೆ ಮತ್ತು ವಂಶಾಭಿವೃದ್ಧಿಗಳಂತಹ ನಿರ್ದಿಷ್ಟ ಕಾರ್ಯಗಳನ್ನು ಜೀವಿಯ ಪ್ರತಿ ಜೀವಕೋಶವೂ ನಿರ್ವಹಿಸುತ್ತದೆ. ಈ ಕಾರ್ಯಗಳನ್ನು ನಿರ್ವಹಿಸಲು ಜೀವಕೋಶಕ್ಕೆ ಶಕ್ತಿಯ ಅಗತ್ಯವಿದೆ. ನಾವು ಆಹಾರವನ್ನು ಸೇವಿಸುವಾಗ, ನಿದ್ರಿಸುವಾಗ ಅಥವಾ ಓದುವಾಗ ಕೂಡಾ ಶಕ್ತಿಯ ಅವಶ್ಯಕತೆ ಇದೆ. ಆದರೆ ಈ ಶಕ್ತಿ ಎಲ್ಲಿಂದ ಬರುತ್ತದೆ? ನೀವು ನಿಯಮಿತವಾಗಿ ಆಹಾರ ತಿನ್ನುವಂತೆ ನಿಮ್ಮ ಪೋಷಕರು ಒತ್ತಾಯಿಸುವುದು ಏಕೆಂದು ನೀವು ಹೇಳಬಲ್ಲಿರ? ಉಸಿರಾಟ ಕ್ರಿಯೆಯಲ್ಲಿ ಬಿಡುಗಡೆಯಾಗುವ ಸಂಗ್ರಹಿತ ಶಕ್ತಿ ಆಹಾರದಲ್ಲಿದೆ. ಆಹಾರದಿಂದ ಶಕ್ತಿಯನ್ನು ಪಡೆಯಲು ಎಲ್ಲ ಜೀವಿಗಳೂ ಉಸಿರಾಡುತ್ತವೆ. ಶ್ವಾಸಕ್ರಿಯೆಯಲ್ಲಿ ನಾವು ಗಾಳಿಯನ್ನು ಒಳಗೆ ಎಳೆದುಕೊಳ್ಳುತ್ತೇವೆ. ಗಾಳಿಯಲ್ಲಿ ಆಕ್ಸಿಜನ್ ಇದೆ ಎಂಬುದು ನಿಮಗೆ ತಿಳಿದಿದೆ. ನಾವು ಹೊರಬಿಡುವ ಗಾಳಿಯಲ್ಲಿ ಕಾರ್ಬನ್ ಡೈಆಕ್ಸೈಡ್‍ನ ಪ್ರಮಾಣ ಅಧಿಕವಾಗಿರುತ್ತದೆ. ನಾವು ಒಳಗೆಳೆದುಕೊಂಡ ಗಾಳಿಯು ನಮ್ಮ ದೇಹದ ಎಲ್ಲಾ ಭಾಗಗಳಿಗೆ ಮತ್ತು ಅಂತಿಮವಾಗಿ ಪ್ರತಿಯೊಂದು ಜೀವಕೋಶಕ್ಕೆ ಸಾಗಿಸಲ್ಪಡುತ್ತದೆ. ಗಾಳಿಯಲ್ಲಿರುವ ಆಕ್ಸಿಜನ್ ಜೀವಕೋಶಗಳಲ್ಲಿ ಆಹಾರವನ್ನು ವಿಭಜಿಸಲು ಸಹಾಯ ಮಾಡುತ್ತದೆ. ಜೀವಕೋಶಗಳಲ್ಲಿ ಆಹಾರವನ್ನು ವಿಭಜಿಸಿ ಶಕ್ತಿ ಬಿಡುಗಡೆ ಮಾಡುವ ಕ್ರಿಯೆಗೆ ಕೋಶೀಯ ಉಸಿರಾಟ (cellular respiration) ಎನ್ನುವರು. ಎಲ್ಲಾ ಜೀವಿಗಳ ಜೀವಕೋಶಗಳಲ್ಲಿಯೂ ಕೋಶೀಯ ಉಸಿರಾಟ ನಡೆಯುತ್ತದೆ.

ಆಹಾರವು (ಗ್ಲೂಕೋಸ್) ಆಕ್ಸಿಜನ್‍ಅನ್ನು ಬಳಸಿಕೊಂಡು ಜೀವಕೋಶದಲ್ಲಿ, ಕಾರ್ಬನ್ ಡೈಆಕ್ಸೈಡ್ ಮತ್ತು ನೀರಾಗಿ ವಿಭಜಿಸಲ್ಪಡುತ್ತದೆ. ಆಕ್ಸಿಜನ್‍ನ ಬಳಕೆಯಿಂದ ಗ್ಲೂಕೋಸ್ ವಿಭಜನೆ ನಡೆದಾಗ ಅದನ್ನು ಆಕ್ಸಿಜನ್‍ಸಹಿತ ಉಸಿರಾಟ/ವಾಯುವಿಕ ಉಸಿರಾಟ, (aerobic respiration) ಎನ್ನುವರು. ಆಕ್ಸಿಜನ್ ಬಳಕೆ ಇಲ್ಲದೇ ಕೂಡ ಆಹಾರವು ವಿಭಜನೆಗೆ ಒಳಪಡಬಹುದು. ಇದನ್ನು ಆಕ್ಸಿಜನ್‍ರಹಿತ ಉಸಿರಾಟ / ಅವಾಯುವಿಕ ಉಸಿರಾಟ, (anaerobic respiration) ಎನ್ನುವರು. ಆಹಾರದ ವಿಭಜನೆಯು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.

ಯೀಸ್ಟ್ (yeast) ನಂತಹ ಕೆಲವು ಜೀವಿಗಳು ಗಾಳಿಯ ಅನುಪಸ್ಥಿತಿಯಲ್ಲಿಯೂ ಬದುಕಬಲ್ಲವು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಅವುಗಳಿಗೆ ಅವಾಯುವಿಕ ಜೀವಿಗಳು (anaerobes) ಎನ್ನುವರು. ಅವು ಆಕ್ಸಿಜನ್‍ರಹಿತ ಉಸಿರಾಟದ ಮೂಲಕ ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಆಕ್ಸಿಜನ್‍ನ ಬಳಕೆ ಇಲ್ಲದೆ ಗ್ಲೂಕೋಸ್ ಈ ಕೆಳಗೆ ಕೊಟ್ಟಿರುವಂತೆ ಆಲ್ಕೋಹಾಲ್ ಮತ್ತು ಕಾರ್ಬನ್ ಡೈಆಕ್ಸೈಡ್‍ಗಳಾಗಿ ವಿಭಜಿಸಲ್ಪಡುತ್ತದೆ.

ಯೀಸ್ಟ್‍ಗಳು ಏಕಕೋಶ ಜೀವಿಗಳು. ಅವು ಆಕ್ಸಿಜನ್‍ರಹಿತವಾಗಿ ಉಸಿರಾಡುತ್ತವೆ ಮತ್ತು ಈ ಪ್ರಕ್ರಿಯೆಯಲ್ಲಿ ಆಲ್ಕೋಹಾಲ್‍ಅನ್ನು ಉತ್ಪತ್ತಿ ಮಾಡುತ್ತವೆ. ಆದ್ದರಿಂದ ಅವು ವೈನ್ ಮತ್ತು ಬಿಯರ್ ತಯಾರಿಕೆಯಲ್ಲಿ ಬಳಕೆಯಾಗುತ್ತವೆ.

ನಮ್ಮ ಸ್ನಾಯುಕೋಶಗಳು ಕೂಡ ಆಕ್ಸಿಜನ್‍ರಹಿತವಾಗಿ ಉಸಿರಾಡಬಲ್ಲವು, ಆದರೆ ಆಕ್ಸಿಜನ್‍ನ ತಾತ್ಕಾಲಿಕ ಕೊರತೆಯುಂಟಾದಾಗ ಸ್ವಲ್ಪ ಸಮಯದವರೆಗೆ ಮಾತ್ರ ಇದು ಸಾಧ್ಯ. ಕಠಿಣವಾದ ವ್ಯಾಯಾಮ ಮಾಡುವಾಗ, ವೇಗವಾಗಿ ಓಡುವಾಗ (ಚಿತ್ರ 10.1), ಸೈಕಲ್ ತುಳಿಯುವಾಗ, ಗಂಟೆಗಟ್ಟಲೆ ನಡೆಯುವಾಗ ಅಥವಾ ಭಾರವಾದ ತೂಕ ಎತ್ತುವಾಗ ಶಕ್ತಿಯ ಬೇಡಿಕೆ ಹೆಚ್ಚು. ಆದರೆ ಶಕ್ತಿಯ ಬಿಡುಗಡೆಗೆ ಬೇಕಾದ ಆಕ್ಸಿಜನ್‍ನ ಪೂರೈಕೆ ಪರಿಮಿತವಾಗಿರುತ್ತದೆ. ಆಗ ಶಕ್ತಿಯ ಬೇಡಿಕೆಯನ್ನು ಪೂರೈಸಲು ಸ್ನಾಯುಕೋಶಗಳಲ್ಲಿ ಆಕ್ಸಿಜನ್‍ರಹಿತ ಉಸಿರಾಟ ನಡೆಯುತ್ತದೆ.

ಕಠಿಣವಾದ ವ್ಯಾಯಾಮದ ನಂತರ ಸ್ನಾಯು ಸೆಳೆತ ಏಕೆ ಉಂಟಾಗುತ್ತದೆ? ಎಂದು ನೀವು ಎಂದಾದರೂ ಆಶ್ಚರ್ಯಪಟ್ಟಿದ್ದೀರ? ಸ್ನಾಯುಕೋಶಗಳು ಆಕ್ಸಿಜನ್‍ರಹಿತವಾಗಿ ಉಸಿರಾಡಿದಾಗ ಸೆಳೆತ ಉಂಟಾಗುತ್ತದೆ. ಗ್ಲೂಕೋಸ್‍ನ ಭಾಗಶಃ ವಿಭಜನೆ ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಲ್ಯಾಕ್ಟಿಕ್ ಆಮ್ಲದ ಸಂಚಯನವು ಸ್ನಾಯುಸೆಳೆತವನ್ನು ಉಂಟುಮಾಡುತ್ತದೆ. ಬಿಸಿನೀರಿನ ಸ್ನಾನ ಅಥವಾ ಮಸಾಜ್‍ನಿಂದ ನಾವು ಸ್ನಾಯುಸೆಳೆತದಿಂದ ಉಪಶಮನ ಪಡೆÀಯುತ್ತೇವೆ. ಹೀಗೇಕೆ ಎಂದು ನೀವು ಊಹಿಸಬಲ್ಲಿರ? ಬಿಸಿನೀರಿನ ಸ್ನಾನ ಅಥವಾ ಮಸಾಜ್ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಸ್ನಾಯುಕೋಶಗಳಿಗೆ ಆಕ್ಸಿಜನ್ ಪೂರೈಕೆ ಹೆಚ್ಚುತ್ತದೆ. ಹೆಚ್ಚಿದ ಆಕ್ಸಿಜನ್ ಪೂರೈಕೆಯ ಫಲಿತಾಂಶವಾಗಿ ಲ್ಯಾಕ್ಟಿಕ್ ಆಮ್ಲವು ಕಾರ್ಬನ್ ಡೈಆಕ್ಸೈಡ್ ಮತ್ತು ನೀರಾಗಿ ಸಂಪೂರ್ಣವಾಗಿ ವಿಭಜಿಸಲ್ಪಡುತ್ತದೆ.

10.2 ಶ್ವಾಸಕ್ರಿಯೆ

ಚಟುವಟಿಕೆ 10.1

ಎಚ್ಚರಿಕೆ

ಈ ಚಟುವಟಿಕೆಯನ್ನು ನಿಮ್ಮ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಮಾಡಿ.

ನಿಮ್ಮ ನಾಸಿಕ ರಂಧ್ರಗಳು (nostrils) ಮತ್ತು ಬಾಯಿಯನ್ನು ಭದ್ರವಾಗಿ ಮುಚ್ಚಿಕೊಳ್ಳಿ ಮತ್ತು ಕೈಗಡಿಯಾರವನ್ನು ನೋಡಿ. ಸ್ವಲ್ಪ ಸಮಯದ ನಂತರ ನಿಮ್ಮ ಅನುಭವ ಏನು? ಎಷ್ಟು ಸಮಯದವರೆಗೆ ನೀವು ಅವುಗಳನ್ನು ಮುಚ್ಚಿಕೊಳ್ಳಬಲ್ಲಿರಿ? ನಿಮ್ಮ ಉಸಿರನ್ನು ನೀವು ಹಿಡಿದುಕೊಳ್ಳಬಹುದಾದ ಸಮಯವನ್ನು ಬರೆದುಕೊಳ್ಳಿ (ಚಿತ್ರ 10.2).

ಶ್ವಾಸಕ್ರಿಯೆ ಇಲ್ಲದೆ ಬಹಳ ಸಮಯ ಉಳಿಯಲು ಸಾಧ್ಯವಿಲ್ಲ ಎಂದು ನೀವೀಗ ತಿಳಿದುಕೊಂಡಿರಿ.

ಉಸಿರಾಟದ ಅಂಗಗಳ (respiratory organs) ಸಹಾಯದಿಂದ ಆಕ್ಸಿಜನ್ ಹೇರಳವಾಗಿರುವ ಗಾಳಿಯನ್ನು ಒಳಗೆಳೆದುಕೊಂಡು, ಕಾರ್ಬನ್ ಡೈಆಕ್ಸೈಡ್ ಹೇರಳವಾಗಿರುವ ಗಾಳಿಯನ್ನು ಹೊರಬಿಡುವ ಕ್ರಿಯೆಗೆ ಶ್ವಾಸಕ್ರಿಯೆ (breathing) ಎನ್ನುವರು. ಆಕ್ಸಿಜನ್ ಹೇರಳವಾಗಿರುವ ಗಾಳಿಯನ್ನು ದೇಹದ ಒಳಗೆಳೆದುಕೊಳ್ಳುವುದಕ್ಕೆ ಉಚ್ಛ್ವಾಸ (inhalation) ಎನ್ನುವರು ಮತ್ತು ಕಾರ್ಬನ್ ಡೈಆಕ್ಸೈಡ್ ಹೇರಳವಾಗಿರುವ ಗಾಳಿಯನ್ನು ಹೊರಬಿಡುವುದಕ್ಕೆ ನಿಶ್ವಾಸ (exhalation) ಎನ್ನುವರು. ಇದು ಜೀವಿಯ ಜೀವನದುದ್ದಕ್ಕೂ ಮತ್ತು ಎಲ್ಲಾ ಸಮಯದಲ್ಲಿಯು ನಡೆಯುವ ಒಂದು ನಿರಂತರ ಪ್ರಕ್ರಿಯೆ.

ಒಂದು ನಿಮಿಷದಲ್ಲಿ ವ್ಯಕ್ತಿಯೊಬ್ಬನ ಉಸಿರಾಟದ ಸಂಖ್ಯೆಯನ್ನು ಶ್ವಾಸಕ್ರಿಯೆಯ ದರ (breathingrate) ಎನ್ನುವರು. ಶ್ವಾಸಕ್ರಿಯೆಯಲ್ಲಿ ಉಚ್ಛ್ವಾಸ ಮತ್ತು ನಿಶ್ವಾಸಗಳು ಪರ್ಯಾಯವಾಗಿ ನಡೆಯುತ್ತವೆ. ಒಂದು ಶ್ವಾಸಕ್ರಿಯೆ ಎಂದರೆ ಒಂದು ಉಚ್ಛ್ವಾಸ ಮತ್ತು ಒಂದು ನಿಶ್ವಾಸ.

ನಿಮ್ಮ ಶ್ವಾಸಕ್ರಿಯೆಯ ದರವನ್ನು ಕಂಡುಹಿಡಿಯಲು ನೀವು ಬಯಸುವಿರ? ಅದು ಸ್ಥಿರವಾಗಿರುವುದೋ ಅಥವಾ ದೇಹಕ್ಕೆ ಆಕ್ಸಿಜನ್‍ನ ಅಗತ್ಯಕ್ಕನುಗುಣವಾಗಿ ಬದಲಾಗುವುದೋ ಎಂದು ನೀವು ತಿಳಿಯಬಯಸುವಿರ? ಈ ಕೆಳಗಿನ ಚಟುವಟಿಕೆ ಮಾಡುವುದರ ಮೂಲಕ ಅದನ್ನು ಕಂಡುಹಿಡಿಯೋಣ.

ಚಟುವಟಿಕೆ 10.2

ನಾವು ಶ್ವಾಸಕ್ರಿಯೆ ನಡೆಸುತ್ತಿದ್ದೇವೆ ಎಂಬ ಅರಿವು ನಮಗೆ ಸಾಮಾನ್ಯವಾಗಿ ಇರುವುದಿಲ್ಲ. ಆದರೂ ನೀವು ಪ್ರಯತ್ನಿಸಿದರೆ ನಿಮ್ಮ ಶ್ವಾಸಕ್ರಿಯೆಯ ದರವನ್ನು ಲೆಕ್ಕ ಹಾಕಬಹುದು. ಉಸಿರನ್ನು ಸಹಜವಾಗಿ ಒಳಗೆ ತೆಗೆದುಕೊಳ್ಳಿ ಮತ್ತು ಹೊರಗೆ ಬಿಡಿ. ಒಂದು ನಿಮಿಷಕ್ಕೆ ಎಷ್ಟು ಬಾರಿ ಉಸಿರನ್ನು ಒಳಗೆ ಎಳೆದುಕೊಂಡಿರಿ ಮತ್ತು ಹೊರಬಿಟ್ಟಿರಿ ಎಂಬುದನ್ನು ಕಂಡುಹಿಡಿಯಿರಿ. ಉಸಿರನ್ನು ಹೊರಬಿಟ್ಟ ಸಂಖ್ಯೆಗೆ ಸರಿಯಾಗಿ ನೀವು ಉಸಿರನ್ನು ಒಳಗೆ ಎಳೆದುಕೊಂಡಿರ? ಈಗ ಚುರುಕಾದ ನಡಿಗೆಯ ಮತ್ತು ಓಟದ ನಂತರ ನಿಮ್ಮ ಶ್ವಾಸಕ್ರಿಯೆಯ ದರವನ್ನು (ಶ್ವಾಸಕ್ರಿಯೆಗಳ ಸಂಖ್ಯೆ/ನಿಮಿಷ) ಲೆಕ್ಕ ಹಾಕಿ. ಪ್ರತಿ ಚಟುವಟಿಕೆ ಮುಗಿಸಿದ ನಂತರ ಮತ್ತು ಸಂಪೂರ್ಣ ವಿಶ್ರಾಂತಿಯ ನಂತರ ಕೂಡ ನಿಮ್ಮ ಶ್ವಾಸಕ್ರಿಯೆಯ ದರವನ್ನು ದಾಖಲಿಸಿ. ನಿಮ್ಮ ನಿರ್ಣಯಗಳನ್ನು ಕೋಷ್ಟಕದಲ್ಲಿ ದಾಖಲಿಸಿ ಮತ್ತು ವಿವಿಧ ಸಂದರ್ಭಗಳಲ್ಲಿ ನಿಮ್ಮ ಶ್ವಾಸಕ್ರಿಯೆಯ ದರಗಳನ್ನು ನಿಮ್ಮ ಸಹಪಾಠಿಗಳ ದಾಖಲೆಗಳೊಂದಿಗೆ ಹೋಲಿಸಿ.

ವ್ಯಕ್ತಿಗೆ ಹೆಚ್ಚಿನ ಶಕ್ತಿಯ ಅಗತ್ಯವಿದ್ದಾಗ ಅವನು/ಅವಳು ವೇಗವಾಗಿ ಶ್ವಾಸಕ್ರಿಯೆ ನಡೆಸುತ್ತಾನೆ/ಳೆ, ಎಂಬುದನ್ನು ಈ ಮೇಲಿನ ಚಟುವಟಿಕೆಯಿಂದ ನೀವು ತಿಳಿದುಕೊಂಡಿರಬೇಕು. ಇದರ ಫಲಿತಾಂಶವಾಗಿ ನಮ್ಮ ಜೀವಕೋಶಗಳಿಗೆ ಹೆಚ್ಚಿನ ಆಕ್ಸಿಜನ್ ಪೂರೈಕೆಯಾಗುತ್ತದೆ. ಇದು ಆಹಾರದ ವಿಭಜನೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಶಕ್ತಿ ಬಿಡುಗಡೆಯಾಗುತ್ತದೆ. ದೈಹಿಕ ಚಟುವಟಿಕೆಯ ನಂತರ ನಮಗೆ ಏಕೆ ಹಸಿವಿನ ಅನುಭವ ಆಗುತ್ತದೆ ಎಂಬುದನ್ನು ಇದು ವಿವರಿಸುತ್ತದೆಯೆ?

ವಿಶ್ರಾಂತಿಯಲ್ಲಿರುವ ಒಬ್ಬ ವಯಸ್ಕ ವ್ಯಕ್ತಿಯು ಒಂದು ನಿಮಿಷಕ್ಕೆ ಸರಾಸರಿ 15-18 ಬಾರಿ ಉಸಿರನ್ನು ಒಳಗೆಳೆದುಕೊಂಡು ಹೊರಬಿಡುತ್ತಾನೆ. ಕಠಿಣ ವ್ಯಾಯಾಮದ ಸಮಯದಲ್ಲಿ ಉಸಿರಾಟದ ದರ ಪ್ರತಿ ನಿಮಿಷಕ್ಕೆ 25 ಬಾರಿಯವರೆಗೆ ಹೆಚ್ಚಬಹುದು. ನಾವು ವ್ಯಾಯಾಮ ಮಾಡುವಾಗ ವೇಗವಾಗಿ ಉಸಿರಾಡುವುದು ಮಾತ್ರವಲ್ಲದೇ ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಿರುತ್ತೇವೆ ಮತ್ತು ಹೆಚ್ಚು ಆಕ್ಸಿಜನ್‍ಅನ್ನು ಒಳಗೆ ಎಳೆದುಕೊಳ್ಳುತ್ತೇವೆ.

ನೀವು ತೂಕಡಿಸುತ್ತಿರುವಾಗ ನಿಮ್ಮ ಶ್ವಾಸಕ್ರಿಯೆಯ ದರ ಕಡಿಮೆಯಾಗುತ್ತದೆಯೆ? ನಿಮ್ಮ ದೇಹ ಸಾಕಷ್ಟು ಆಕ್ಸಿಜನ್ ಪಡೆದುಕೊಳ್ಳುತ್ತಿದೆಯೆ?

ಚಟುವಟಿಕೆ 10.3

ಸಾಮಾನ್ಯವಾಗಿ ಒಂದು ದಿನದಲ್ಲಿ ವ್ಯಕ್ತಿಯೊಬ್ಬನು ನಡೆಸುವ ವಿವಿಧ ಚಟುವಟಿಕೆಗಳನ್ನು ಚಿತ್ರ 10.3 ತೋರಿಸುತ್ತದೆ. ಯಾವ ಚಟುವಟಿಕೆಯಲ್ಲಿ ಶ್ವಾಸಕ್ರಿಯೆಯ ದರ ಅತಿ ನಿಧಾನವಾಗಿರುತ್ತದೆ ಮತ್ತು ಯಾವುದರಲ್ಲಿ ಅತಿ ವೇಗವಾಗಿರುತ್ತದೆ ಎಂದು ನೀವು ಹೇಳಬಲ್ಲಿರ? ನಿಮ್ಮ ಅನುಭವದ ಪ್ರಕಾರ ಶ್ವಾಸಕ್ರಿಯೆಯ ದರದ ಏರಿಕೆಯ ಕ್ರಮದಲ್ಲಿ ಚಿತ್ರಗಳಿಗೆ ಅಂಕೆಗಳನ್ನು ನೀಡಿ.

10.3 ನಾವು ಹೇಗೆ ಶ್ವಾಸಕ್ರಿಯೆ ನಡೆಸುತ್ತೇವೆ?

ಶ್ವಾಸಕ್ರಿಯೆಯ ಕಾರ್ಯವಿಧಾನದ ಬಗ್ಗೆ ಈಗ ಕಲಿತುಕೊಳ್ಳೋಣ. ನಾವು ಸಾಮಾನ್ಯವಾಗಿ ನಾಸಿಕ ರಂಧ್ರಗಳ ಮೂಲಕ ಗಾಳಿಯನ್ನು ಒಳಗೆ ಎಳೆದುಕೊಳ್ಳುತ್ತೇವೆ. ನಾವು ಗಾಳಿಯನ್ನು ಒಳಗೆ ತೆಗೆದುಕೊಂಡಾಗ ಅದು ನಾಸಿಕ ರಂಧ್ರಗಳ ಮೂಲಕ ನಾಸಿಕ ಕುಹರ (nasal cavity) ಕ್ಕೆ ಸಾಗಿಸಲ್ಪಡುತ್ತದೆ. ನಾಸಿಕ ಕುಹರದಿಂದ ಗಾಳಿಯು ಶ್ವಾಸನಾಳದ ಮೂಲಕ ಶ್ವಾಸಕೋಶಗಳನ್ನು (lungs) ತಲುಪುತ್ತದೆ. ಶ್ವಾಸಕೋಶಗಳು ಎದೆಯ ಕುಹರ (chest cavity) ದಲ್ಲಿರುತ್ತವೆ (ಚಿತ್ರ 10.4). ಈ ಕುಹರವು ಬದಿಗಳಲ್ಲಿ ಪಕ್ಕೆಲುಬುಗಳಿಂದ ಆವರಿಸಲ್ಪಟ್ಟಿರುತ್ತದೆ. ಎದೆಯ ಕುಹರದ ತಳದಲ್ಲಿ ವಪೆ (diaphragm) ಎಂದು ಕರೆಯಲಾಗುವ ದೊಡ್ಡದಾದ ಸ್ನಾಯುವಿನ ಹಾಳೆಯಿದೆ (ಚಿತ್ರ 10.4). ಶ್ವಾಸಕ್ರಿಯೆಯು ವಪೆ ಮತ್ತು ಪಕ್ಕೆಲುಬುಗಳ (ribcage) ಚಲನೆಯನ್ನು ಒಳಗೊಂಡಿರುತ್ತದೆ.

ಉಚ್ಛ್ವಾಸದ ಸಮಯದಲ್ಲಿ ಪಕ್ಕೆಲುಬುಗಳು ಮೇಲೆ ಮತ್ತು ಹೊರಕ್ಕೆ ಮತ್ತು ವಪೆಯು ಕೆಳಕ್ಕೆ ಚಲಿಸುತ್ತದೆ. ಈ ಚಲನೆಯು ನಮ್ಮ ಎದೆಯ ಕುಹರದಲ್ಲಿನ ಅವಕಾಶವನ್ನು ಹೆಚ್ಚಿಸುತ್ತದೆ ಮತ್ತು ಗಾಳಿಯು ಶ್ವಾಸಕೋಶದೊಳಗೆ ನುಗ್ಗುತ್ತದೆ. ಶ್ವಾಸಕೋಶಗಳು ಗಾಳಿಯಿಂದ ತುಂಬಿಕೊಳ್ಳುತ್ತವೆ. ನಿಶ್ವಾಸದಲ್ಲಿ ವಪೆಯು ಅದರ ಮೊದಲಿನ ಸ್ಥಾನಕ್ಕೆ ಚಲಿಸುವುದರೊಂದಿಗೆ ಪಕ್ಕೆಲುಬುಗಳು ಕೆಳಕ್ಕೆ ಮತ್ತು ಒಳಕ್ಕೆ ಚಲಿಸುತ್ತವೆ. ಇದು ಎದೆಕುಹರದ ಗಾತ್ರವನ್ನು ಕಡಿಮೆ ಮಾಡುತ್ತದೆ ಮತ್ತು ಗಾಳಿಯು ಶ್ವಾಸಕೋಶಗಳಿಂದ ಹೊರಗೆ ಹೋಗುತ್ತದೆ (ಚಿತ್ರ 10.5). ನಮ್ಮ ದೇಹದಲ್ಲಿ ಈ ಚಲನೆಗಳು ಸುಲಭವಾಗಿ ಅನುಭವಕ್ಕೆ ಬರುತ್ತವೆ. ಒಮ್ಮೆ ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಳ್ಳಿ ನಂತರ ಹೊರಗೆ ಬಿಡಿ. ನಿಮ್ಮ ಹಸ್ತವನ್ನು ಉದರದ ಮೇಲಿಡಿ. ಉದರದ ಚಲನೆಯನ್ನು ಅನುಭವಿಸಿ. ನೀವು ಏನನ್ನು ಕಂಡುಕೊಂಡಿರಿ?

ಧೂಮಪಾನವು ಶ್ವಾಸಕೋಶಗಳನ್ನು ಹಾಳುಮಾಡುತ್ತದೆ.
ಧೂಮಪಾನವು ಕ್ಯಾನ್ಸರ್‍ಗು ಕೂಡ ಸಂಬಂಧಿಸಿದೆ. ಅದನ್ನು ತಡೆಗಟ್ಟಬೇಕು.

ಶ್ವಾಸಕ್ರಿಯೆ ನಡೆಸುವಾಗ ಎದೆಯ ಕುಹರದ ಗಾತ್ರದಲ್ಲಿ ಬದಲಾವಣೆಗಳಾಗುತ್ತವೆ ಎಂದು ಕಲಿತ ನಂತರ ವಿದ್ಯಾರ್ಥಿಗಳು ಎದೆಯನ್ನು ಹಿಗ್ಗಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದರು. ತಾನು ಹೆಚ್ಚು ಹಿಗ್ಗಿಸುವೆನೆಂದು ಪ್ರತಿಯೊಬ್ಬರೂ ಜಂಭಕೊಚ್ಚಿಕೊಳ್ಳುತ್ತಿದ್ದರು. ತರಗತಿಯಲ್ಲಿ ನಿಮ್ಮ ಸಹಪಾಠಿಗಳ ಜೊತೆ ಈ ಚಟುವಟಿಕೆಯನ್ನು ಮಾಡುವುದು ಹೇಗೆನಿಸುತ್ತದೆ?

ನಮ್ಮ ಸುತ್ತಲಿರುವ ಗಾಳಿಯಲ್ಲಿ ಹೊಗೆ, ಧೂಳು, ಪರಾಗರೇಣುಗಳು ಇತ್ಯಾದಿ ವಿವಿಧ ರೀತಿಯ ಅನಪೇಕ್ಷಿತ ಕಣಗಳಿರುತ್ತವೆ. ನಾವು ಗಾಳಿಯನ್ನು ಒಳಗೆಳೆದುಕೊಳ್ಳುವಾಗ ಈ ಕಣಗಳು ನಾಸಿಕ ಕುಹರದಲ್ಲಿರುವ ಕೂದಲುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಆದರೂ ಕೆಲವೊಮ್ಮೆ ಈ ಕಣಗಳು ನಾಸಿಕ ಕುಹರದ ಕೂದಲನ್ನು ದಾಟಿ ಮುಂದೆ ಹೋಗುತ್ತವೆ. ಅವು ಕುಹರದ ಗೋಡೆಗೆ ಕಿರಿ ಕಿರಿ ಉಂಟುಮಾಡಬಹುದು, ಅದರ ಫಲಿತಾಂಶವಾಗಿ ನಾವು ಸೀನುತ್ತೇವೆ. ಒಳತೆಗೆದುಕೊಂಡ ಗಾಳಿಯಿಂದ ಈ ಅನವಶ್ಯಕ ಕಣಗಳನ್ನು ಸೀನುವಿಕೆ ಹೊರಹಾಕುತ್ತದೆ. ಧೂಳುರಹಿತವಾದ ಸ್ವಚ್ಛ ಗಾಳಿಯು ನಮ್ಮ ದೇಹವನ್ನು ಪ್ರವೇಶಿಸುತ್ತದೆ.

ಎಚ್ಚರವಹಿಸಿ : ನೀವು ಸೀನುವಾಗ ನಿಮ್ಮ ಮೂಗಿನಿಂದ ಹೊರಬೀಳುವ ಅನ್ಯ ಕಣಗಳನ್ನು ಬೇರೆಯವರು ಒಳತೆಗೆದುಕೊಳ್ಳದಂತೆ ನಿಮ್ಮ ಮೂಗನ್ನು ಮುಚ್ಚಿಕೊಳ್ಳಬೇಕು.

ಚಟುವಟಿಕೆ 10.4

ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಅಳತೆಪಟ್ಟಿಯಿಂದ ನಿಮ್ಮ ಎದೆಯ ಸುತ್ತಳತೆಯನ್ನು ತೆಗೆದುಕೊಳ್ಳಿ (ಚಿತ್ರ 10.6) ಮತ್ತು ನಿಮ್ಮ ವೀಕ್ಷಣೆಗಳನ್ನು ಕೋಷ್ಟಕ 10.2 ರಲ್ಲಿ ದಾಖಲಿಸಿ. ಹಿಗ್ಗಿಸಲ್ಪಟ್ಟಾಗ ಎದೆಯ ಸುತ್ತಳತೆಯನ್ನು ಮತ್ತೊಮ್ಮೆ ಅಳತೆ ಮಾಡಿ. ನಿಮ್ಮ ಯಾವ ಸಹಪಾಠಿಯು ಗರಿಷ್ಠ ಹಿಗ್ಗುವಿಕೆಯನ್ನು ತೋರಿಸುತ್ತಾನೆ/ಳೆ ಎಂಬುದನ್ನು ಸೂಚಿಸಿ.

ಒಂದು ಸರಳವಾದ ಮಾದರಿಯ ಮೂಲಕ ಶ್ವಾಸಕ್ರಿಯೆಯ ಕಾರ್ಯವಿಧಾನವನ್ನು ನಾವು ತಿಳಿದುಕೊಳ್ಳಬಹುದು.

ಚಟುವಟಿಕೆ 10.5

ಅಗಲವಾದ ಪ್ಲಾಸ್ಟಿಕ್ ಬಾಟಲಿಯೊಂದನ್ನು ತೆಗೆದುಕೊಳ್ಳಿ. ತಳ ಭಾಗವನ್ನು ಕತ್ತರಿಸಿ ತೆಗೆಯಿರಿ. Y-ಆಕಾರದ ಗಾಜಿನ ಅಥವಾ ಪ್ಲಾಸ್ಟಿಕ್ ಕೊಳವೆಯನ್ನು ತೆಗೆದುಕೊಳ್ಳಿ. ಮುಚ್ಚಳದ ಮೂಲಕ ಕೊಳವೆಯು ಹಾದು ಹೋಗುವಂತೆ ಮುಚ್ಚಳದ ಮೇಲೆ ಒಂದು ರಂಧ್ರವನ್ನು ಮಾಡಿ. ಗಾಳಿ ತೆಗೆದ ಎರಡು ಬಲೂನುಗಳನ್ನು ಕೊಳವೆಯ ಕವಲೊಡೆದ ತುದಿಗಳಿಗೆ ಸಿಕ್ಕಿಸಿ. ಚಿತ್ರ 10.7 ರಲ್ಲಿ ತೋರಿಸಿರುವಂತೆ ಕೊಳವೆಯನ್ನು ಬಾಟಲಿಯೊಳಗೆ ಇಡಿ. ಈಗ ಬಾಟಲಿಗೆ ಮುಚ್ಚಳ ಹಾಕಿ. ಗಾಳಿಯು ಒಳಪ್ರವೇಶಿಸದಂತೆ ಭದ್ರವಾಗಿ ಸೀಲ್‍ಮಾಡಿ.

ತೆಳುವಾದ ರಬ್ಬರ್ ಅಥವಾ ಪ್ಲಾಸ್ಟಿಕ್ ಹಾಳೆಯನ್ನು ಬಾಟಲಿಯ ತೆರೆದ ತಳಭಾಗಕ್ಕೆ ದೊಡ್ಡ ರಬ್ಬರ್ ಬ್ಯಾಂಡಿನ ಸಹಾಯದಿಂದ ಕಟ್ಟಿ.

ಶ್ವಾಸಕೋಶಗಳ ಹಿಗ್ಗುವಿಕೆಯನ್ನು ಅರ್ಥಮಾಡಿಕೊಳ್ಳಲು ತಳದಲ್ಲಿರುವ ರಬ್ಬರ್ ಹಾಳೆಯನ್ನು ಕೆಳಮುಖವಾಗಿ ಎಳೆಯಿರಿ ಮತ್ತು ಬಲೂನುಗಳನ್ನು ಗಮನಿಸಿ. ಅನಂತರ ರಬ್ಬರ್/ಪ್ಲಾಸ್ಟಿಕ್ ಹಾಳೆಯನ್ನು ಮೇಲ್ಮುಖವಾಗಿ ಒತ್ತಿ ಮತ್ತು ಬಲೂನುಗಳನ್ನು ಗಮನಿಸಿ. ಬಲೂನುಗಳಲ್ಲಿ ಏನಾದರೂ ಬದಲಾವಣೆಗಳನ್ನು ನೀವು ಗಮನಿಸಿದಿರ?

ಈ ಮಾದರಿಯಲ್ಲಿ ಬಲೂನುಗಳು ಏನನ್ನು ಪ್ರತಿನಿಧಿಸುತ್ತವೆ? ರಬ್ಬರ್ ಹಾಳೆಯು ಏನನ್ನು ಪ್ರತಿನಿಧಿಸುತ್ತದೆ?

ಶ್ವಾಸಕ್ರಿಯೆಯ ಕಾರ್ಯವಿಧಾನವನ್ನು ವಿವರಿಸಲು ನೀವು ಈಗ ಸಮರ್ಥರಾಗಿರುವಿರಿ.

10.4 ಶ್ವಾಸಕ್ರಿಯೆಯಲ್ಲಿ ನಾವು ಏನನ್ನು ಹೊರಬಿಡುತ್ತೇವೆ?

ಚಟುವಟಿಕೆ 10.6

ಸಪೂರವಾದ (ತೆಳುವಾದ) ಮತ್ತು ಸ್ವಚ್ಛವಾದ ಒಂದು ಪ್ರನಾಳ ಅಥವಾ ಗಾಜಿನ/ಪ್ಲಾಸ್ಟಿಕ್ ಬಾಟಲಿಯನ್ನು ತೆಗೆದುಕೊಳ್ಳಿ. ಮುಚ್ಚಳಕ್ಕೆ ರಂಧ್ರವೊಂದನ್ನು ಮಾಡಿ, ಬಾಟಲಿಗೆ ಹಾಕಿ ಭದ್ರಪಡಿಸಿ. ಆಗ ತಾನೇ ತಯಾರಿಸಿದ ಸುಣ್ಣದ ತಿಳಿಯನ್ನು ಅದಕ್ಕೆ ಸುರಿಯಿರಿ. ಸುಣ್ಣದ ತಿಳಿಯಲ್ಲಿ ಮುಳುಗುವಂತೆ ಒಂದು ಪ್ಲಾಸ್ಟಿಕ್ ನಳಿಕೆ (straw) ಯನ್ನು ಮುಚ್ಚಳದ ರಂಧ್ರದ ಮೂಲಕ ತೂರಿಸಿ. ಈಗ ನಳಿಕೆಯ ಮೂಲಕ ನಿಧಾನವಾಗಿ ಕೆಲವು ಬಾರಿ ಗಾಳಿಯನ್ನು ಊದಿ (ಚಿತ್ರ 10.8). ಸುಣ್ಣದ ತಿಳಿಯ ಲಕ್ಷಣಗಳಲ್ಲಿ ಏನಾದರೂ ಬದಲಾವಣೆಯಾಯಿತೆ? ಅಧ್ಯಾಯ 6 ರಲ್ಲಿ ನೀವು ಕಲಿತಿರುವ ಅಂಶಗಳ ಆಧಾರದ ಮೇಲೆ ಈ ಬದಲಾವಣೆಯನ್ನು ನೀವು ವಿವರಿಸಬಲ್ಲಿರ?

ನಾವು ಒಳತೆಗೆದುಕೊಳ್ಳುವ ಅಥವಾ ಹೊರ ಬಿಡುವ ಗಾಳಿಯು ಅನಿಲಗಳ ಮಿಶ್ರಣ ಎಂಬುದನ್ನು ನೀವು ಅರಿತಿರುವಿರಿ. ನಾವು ನಿಶ್ವಾಸದ ಮೂಲಕ ಏನನ್ನು ಹೊರಬಿಡುತ್ತೇವೆ? ಬರೀ ಕಾರ್ಬನ್ ಡೈಆಕ್ಸೈಡ್ ಅಥವಾ ಅದರ ಜೊತೆಗೆ ಅನಿಲಗಳ ಮಿಶ್ರಣವನ್ನು ನಿಶ್ವಾಸದಲ್ಲಿ ಹೊರಬಿಡುತ್ತಿದ್ದೇವೆಯೆ? ಕನ್ನಡಿಯ ಮುಂದೆ ನಿಂತು ಉಸಿರನ್ನು ಬಿಟ್ಟಾಗ ಅದರ ಮೇಲ್ಮೈ ಮೇಲೆ ತೇವಭರಿತ ತೆಳು ಪದರವೊಂದು ಮೂಡುವುದನ್ನು ನೀವು ಗಮನಿಸಿರಬೇಕು. ಈ ಸೂಕ್ಷ್ಮ ಹನಿಗಳು ಎಲ್ಲಿಂದ ಬಂದವು?

ಉತ್ತಮ ಜೀವನಕ್ಕಾಗಿ ಶ್ವಾಸಕ್ರಿಯೆ

ನಿಯಮಿತ ಸಾಂಪ್ರದಾಯಿಕ ಶ್ವಾಸೋಚ್ಛ್ವಾಸಕ್ರಿಯೆ (ಪ್ರಾಣಾಯಾಮ) ಯನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡುವುದರಿಂದ ಹೆಚ್ಚಿನ ಗಾಳಿಯನ್ನು ಒಳ ತೆಗೆದುಕೊಳ್ಳಲು ಶ್ವಾಸಕೋಶದ ಸಾಮಥ್ರ್ಯ ಹೆಚ್ಚಬಲ್ಲದು. ಜೀವಕೋಶಗಳಿಗೆ ಹೆಚ್ಚಿನ ಆಕ್ಸಿಜನ್ ಪೂರೈಕೆಯಾಗುವುದರೊಂದಿಗೆ ಹೆಚ್ಚು ಶಕ್ತಿ ಬಿಡುಗಡೆಯಾಗುತ್ತದೆ.

10.5 ಇತರ ಪ್ರಾಣಿಗಳಲ್ಲಿ ಶ್ವಾಸಕ್ರಿಯೆ

ಆನೆ, ಸಿಂಹ, ದನ, ಆಡು, ಹಲ್ಲಿ, ಕಪ್ಪೆ, ಹಾವು, ಪಕ್ಷಿಗಳಂತಹ ಪ್ರಾಣಿಗಳು ಮಾನವರಂತೆ ತಮ್ಮ ಎದೆಯ ಕುಹರಗಳಲ್ಲಿ ಶ್ವಾಸಕೋಶಗಳನ್ನು ಹೊಂದಿವೆ.

ಇತರ ಪ್ರಾಣಿಗಳು ಹೇಗೆ ಶ್ವಾಸಕ್ರಿಯೆ ನಡೆಸುತ್ತವೆ? ಅವುಗಳಿಗೂ ಕೂಡ ಮಾನವರಂತೆ ಶ್ವಾಸಕೋಶಗಳಿವೆಯೆ? ಅದನ್ನು ಈಗ ತಿಳಿದುಕೊಳ್ಳೋಣ.

ಜಿರಳೆ : ಜಿರಳೆಯು ತನ್ನ ದೇಹದ ಪಾಶ್ರ್ವದಲ್ಲಿ ಸಣ್ಣ ರಂಧ್ರಗಳನ್ನು ಹೊಂದಿರುತ್ತದೆ. ಇತರ ಕೀಟಗಳಲ್ಲಿಯೂ ಕೂಡ ಅದೇ ರೀತಿಯ ರಂಧ್ರಗಳಿರುತ್ತವೆ. ಈ ರಂಧ್ರಗಳಿಗೆ ಸ್ಪೈರಕಲ್‍ಗಳು (spiracles) ಎನ್ನುವರು (ಚಿತ್ರ 10.9). ಅನಿಲಗಳ ವಿನಿಮಯಕ್ಕಾಗಿ ಕೀಟಗಳು ಶ್ವಾಸನಾಳ (tracheae) ಗಳೆಂಬ ಗಾಳಿ ಸಾಗಿಸುವ ಕೊಳವೆಗಳ ಜಾಲವನ್ನು ಹೊಂದಿವೆ. ಆಕ್ಸಿಜನ್‍ಯುಕ್ತ ಗಾಳಿಯು ಶ್ವಾಸನಾಳಗಳಿಗೆ ಸ್ಪೈರಕಲ್‍ಗಳ ಮೂಲಕ ನುಗ್ಗಿ ದೇಹದ ಅಂಗಾಂಶಗಳಲ್ಲಿ ವಿಸರಣೆಗೊಳ್ಳುತ್ತದೆ ಮತ್ತು ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ಅದೇ ರೀತಿ ಜೀವಕೋಶಗಳಲ್ಲಿರುವ ಕಾರ್ಬನ್ ಡೈಆಕ್ಸೈಡ್ ಶ್ವಾಸನಾಳಗಳ ಒಳಗೆ ಪ್ರವೇಶಿಸುತ್ತದೆ ಮತ್ತು ಸ್ಪೈರಕಲ್‍ಗಳ ಮೂಲಕ ಹೊರ ಹೋಗುತ್ತದೆ. ಈ ಗಾಳಿ ಕೊಳವೆಗಳು ಅಥವಾ ಶ್ವಾಸನಾಳಗಳು ಕೀಟಗಳಲ್ಲಿ ಮಾತ್ರ ಕಂಡುಬರುತ್ತವೆ ಮತ್ತು ಬೇರೆ ಯಾವುದೇ ಪ್ರಾಣಿ ಗುಂಪುಗಳಲ್ಲಿ ಇರುವುದಿಲ್ಲ.

ಎರೆಹುಳು : ಎರೆಹುಳುಗಳು ತಮ್ಮ ಚರ್ಮದ ಮೂಲಕ ಉಸಿರಾಡುತ್ತವೆ ಎಂಬುದನ್ನು 6ನೇ ತರಗತಿಯ 9ನೇ ಅಧ್ಯಾಯದಿಂದ ಸ್ಮರಿಸಿಕೊಳ್ಳಿ. ಎರೆಹುಳುವಿನ ಚರ್ಮವನ್ನು ಮುಟ್ಟಿದಾಗ ತೇವವಾದ ಮತ್ತು ಜಾರುವ ಅನುಭವವಾಗುತ್ತದೆ. ಅವುಗಳ ಮೂಲಕ ಅನಿಲಗಳು ಸುಲಭವಾಗಿ ಹಾದು ಹೋಗಬಲ್ಲವು. ಮಾನವರಂತೆ ಕಪ್ಪೆಗಳಿಗೂ ಒಂದು ಜೊತೆ ಶ್ವಾಸಕೋಶಗಳಿದ್ದರೂ, ಅವು ತೇವವಾದ ಮತ್ತು ಜಾರುವ ಚರ್ಮದ ಮೂಲಕ ಉಸಿರಾಡಬಲ್ಲವು.

10.6 ನೀರಿನೊಳಗೆ ಶ್ವಾಸಕ್ರಿಯೆ

ನೀರಿನೊಳಗೆ ನಾವು ಶ್ವಾಸಕ್ರಿಯೆ ನಡೆಸಲು ಮತ್ತು ಬದುಕಲು ಸಾಧ್ಯವೆ? ನೀರಿನಲ್ಲಿ ವಾಸಿಸುವ ಅನೇಕ ಜೀವಿಗಳಿವೆ. ಅವುಗಳು ನೀರಿನೊಳಗೆ ಹೇಗೆ ಶ್ವಾಸಕ್ರಿಯೆ ನಡೆಸುತ್ತವೆ? ಮೀನುಗಳಲ್ಲಿರುವ ಕಿವಿರುಗಳು (gills) ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಉಪಯೋಗಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದು ನೀವು 6ನೇ ತರಗತಿಯಲ್ಲಿ ಕಲಿತಿರುವಿರಿ. ಕಿವಿರುಗಳು ಚರ್ಮದಿಂದ ಮುಂಚಾಚಿಕೊಂಡಿರುವ ಭಾಗಗಳು. ಕಿವಿರುಗಳು ಉಸಿರಾಟಕ್ಕೆ ಹೇಗೆ ಸಹಾಯ ಮಾಡುತ್ತವೆ ಎಂದು ನೀವು ಆಶ್ಚರ್ಯ ಪಡಬಹುದು. ಕಿವಿರುಗಳು ಅನಿಲಗಳ ವಿನಿಮಯಕ್ಕೆ ಬೇಕಾದ ರಕ್ತನಾಳಗಳ ಪೂರೈಕೆ ಹೊಂದಿರುತ್ತವೆ (ಚಿತ್ರ 10.10).

10.7 ಸಸ್ಯಗಳು ಕೂಡ ಉಸಿರಾಡುತ್ತವೆಯೆ?

ನೀವು 6ನೇ ತರಗತಿಯಲ್ಲಿ ಕಲಿತಿರುವಂತೆ ಸಸ್ಯಗಳು ಕೂಡ ಇತರ ಜೀವಿಗಳಂತೆ ಬದುಕುವುದಕ್ಕಾಗಿ ಉಸಿರಾಡುತ್ತವೆ. ಅವು ಕೂಡ ಗಾಳಿಯಿಂದ ಆಕ್ಸಿಜನ್‍ಅನ್ನು ಒಳತೆಗೆದುಕೊಂಡು ಕಾರ್ಬನ್ ಡೈಆಕ್ಸೈಡ್‍ನ್ನು ಹೊರಬಿಡುತ್ತವೆ. ಇತರ ಜೀವಿಗಳಂತೆ ಜೀವಕೋಶಗಳಲ್ಲಿ ಗ್ಲೂಕೋಸ್‍ಅನ್ನು ಕಾರ್ಬನ್ ಡೈಆಕ್ಸೈಡ್ ಮತ್ತು ನೀರಾಗಿ ವಿಭಜಿಸಲು ಆಕ್ಸಿಜನ್ ಉಪಯೋಗಿಸಲ್ಪಡುತ್ತದೆ. ಸಸ್ಯಗಳಲ್ಲಿರುವ ಪ್ರತಿಯೊಂದು ಭಾಗವೂ ಸ್ವತಂತ್ರವಾಗಿ ಗಾಳಿಯಲ್ಲಿರುವ ಆಕ್ಸಿಜನ್‍ಅನ್ನು ಒಳತೆಗೆದುಕೊಂಡು ಕಾರ್ಬನ್ ಡೈಆಕ್ಸೈಡ್‍ಅನ್ನು ಹೊರಬಿಡಬಲ್ಲದು. ಸಸ್ಯಗಳ ಎಲೆಗಳು ಆಕ್ಸಿಜನ್ ಮತ್ತು ಕಾರ್ಬನ್ ಡೈಆಕ್ಸೈಡ್‍ಗಳ ವಿನಿಮಯಕ್ಕಾಗಿ ಪತ್ರರಂಧ್ರ (stomata)ಗಳೆಂಬ ಅತಿಚಿಕ್ಕ ರಂಧ್ರಗಳನ್ನು ಹೊಂದಿರುತ್ತವೆ ಎಂದು ನೀವು ಈಗಾಗಲೇ ಅಧ್ಯಾಯ 1 ರಲ್ಲಿ ಕಲಿತಿರುವಿರಿ.

ಸಸ್ಯಗಳ ಇತರ ಜೀವಕೋಶಗಳಂತೆ ಬೇರಿನ ಕೋಶಗಳಿಗು ಕೂಡ ಶಕ್ತಿಯ ಉತ್ಪತ್ತಿಗೆ ಆಕ್ಸಿಜನ್ ಅಗತ್ಯವಿದೆ. ಮಣ್ಣಿನ ಕಣಗಳ ನಡುವಿನ ಗಾಳಿ ತುಂಬಿದ ಅವಕಾಶಗಳಿಂದ ಬೇರುಗಳು ಗಾಳಿಯನ್ನು ಹೀರಿಕೊಳ್ಳುತ್ತವೆ (ಚಿತ್ರ 10.11).

ಕುಂಡದಲ್ಲಿರುವ ಸಸ್ಯಕ್ಕೆ ಅತಿಯಾಗಿ ನೀರುಣಿಸಿದರೆ ಏನಾಗಬಹುದೆಂದು ನೀವು ಊಹಿಸಬಲ್ಲಿರ?

ಉಸಿರಾಟವು ಒಂದು ಅತಿ ಮುಖ್ಯ ಜೈವಿಕ ಕ್ರಿಯೆ ಎಂದು ನೀವು ಈ ಅಧ್ಯಾಯದಲ್ಲಿ ಕಲಿತುಕೊಂಡಿರಿ. ಬದುಕಲು ಬೇಕಾದ ಶಕ್ತಿಗಾಗಿ ಎಲ್ಲ ಜೀವಿಗಳೂ ಉಸಿರಾಡಬೇಕಾದ ಅಗತ್ಯವಿದೆ.

ಪ್ರಮುಖ ಪದಗಳು

ಆಮ್ಲಜನಕ ಸಹಿತ ಉಸಿರಾಟ

ವಪೆ

ಉಚ್ಛ್ವಾಸ

ಆಮ್ಲಜನಕ ರಹಿತ ಉಸಿರಾಟ

ನಿಶ್ವಾಸ

ಸ್ಪೈರಕಲ್‍ಗಳು

ಉಸಿರಾಟದ ದರ

ಕಿವಿರುಗಳು

ಶ್ವಾಸನಾಳಗಳು

ಕೋಶೀಯ ಉಸಿರಾಟ

ಶ್ವಾಸಕೋಶಗಳು

ಪಕ್ಕೆಲುಬುಗಳು

ನೀವು ಕಲಿತಿರುವುದು

• ಜೀವಿಗಳು ಬದುಕಲು ಉಸಿರಾಟ ಅವಶ್ಯಕ. ಇದು ಆಹಾರದಿಂದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.

• ನಾವು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡ ಆಕ್ಸಿಜನ್, ಗ್ಲೂಕೋಸ್‍ಅನ್ನು ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನಾಗಿ ವಿಭಜಿಸಲು ಉಪಯೋಗಿಸಲ್ಪಡುತ್ತದೆ. ಈ ಕ್ರಿಯೆಯಲ್ಲಿ ಶಕ್ತಿ ಬಿಡುಗಡೆಯಾಗುತ್ತದೆ.

• ಜೀವಿಗಳ ದೇಹದ ಜೀವಕೋಶಗಳಲ್ಲಿ ಗ್ಲೂಕೋಸ್‍ನ ವಿಭಜನೆ ನಡೆಯುತ್ತದೆ (ಕೋಶೀಯ ಉಸಿರಾಟ).

• ಆಕ್ಸಿಜನ್‍ಅನ್ನು ಉಪಯೋಗಿಸಿಕೊಂಡು ಆಹಾರ ವಿಭಜಿಸಲ್ಪಟ್ಟರೆ ಅದನ್ನು ಆಕ್ಸಿಜನ್‍ಸಹಿತ ಉಸಿರಾಟ ಎನ್ನುವರು. ವಿಭಜನೆಯು ಆಕ್ಸಿಜನ್‍ನ ಬಳಕೆ ಇಲ್ಲದೇ ಆದರೆ ಆ ಉಸಿರಾಟವನ್ನು ಆಕ್ಸಿಜನ್‍ರಹಿತ ಉಸಿರಾಟ ಎನ್ನುವರು.

• ತೀವ್ರ ವ್ಯಾಯಾಮದ ಸಂದರ್ಭದಲ್ಲಿ ನಮ್ಮ ಸ್ನಾಯುಕೋಶಗಳಿಗೆ ಆಕ್ಸಿಜನ್ ಪೂರೈಕೆಯ ಕೊರತೆಯುಂಟಾದಾಗ ಆಕ್ಸಿಜನ್‍ರಹಿತ ಉಸಿರಾಟದಿಂದ ಆಹಾರವು ವಿಭಜಿಸಲ್ಪಡುತ್ತದೆ.

• ಜೀವಿಯೊಂದು ಆಕ್ಸಿಜನ್‍ಯುಕ್ತ ಗಾಳಿಯನ್ನು ಒಳತೆಗೆದುಕೊಂಡು ಕಾರ್ಬನ್ ಡೈಆಕ್ಸೈಡ್‍ಯುಕ್ತ ಗಾಳಿಯನ್ನು ಹೊರಬಿಡುವ ಶ್ವಾಸಕ್ರಿಯೆಯು ಉಸಿರಾಟದ ಒಂದು ಭಾಗ. ಅನಿಲಗಳ ವಿನಿಮಯ ನಡೆಸುವ ಉಸಿರಾಟದ ಅಂಗಗಳು ವಿವಿಧ ಜೀವಿಗಳಲ್ಲಿ ಬೇರೆ ಬೇರೆಯಾಗಿರುತ್ತವೆ.

• ಉಚ್ಛ್ವಾಸದಲ್ಲಿ ನಮ್ಮ ಶ್ವಾಸಕೋಶಗಳು ಹಿಗ್ಗುತ್ತವೆ ಮತ್ತು ನಿಶ್ವಾಸದಲ್ಲಿ ಗಾಳಿಯು ಹೊರ ಹೋದಂತೆ ಮೂಲಸ್ಥಿತಿಗೆ ಹಿಂತಿರುಗುತ್ತವೆ.

• ದೈಹಿಕ ಚಟುವಟಿಕೆ ಹೆಚ್ಚಾದರೆ ಶ್ವಾಸಕ್ರಿಯೆಯ ದರವು ಹೆಚ್ಚಾಗುತ್ತದೆ.

• ಹಸು, ಎಮ್ಮೆ, ನಾಯಿ ಮತ್ತು ಬೆಕ್ಕುಗಳಂತಹ ಪ್ರಾಣಿಗಳಲ್ಲಿ ಉಸಿರಾಟದ ಅಂಗಗಳು ಮತ್ತು ಶ್ವಾಸಕ್ರಿಯೆಯು ಮಾನವನಲ್ಲಿ ಇರುವಂತೆಯೇ ಇರುತ್ತದೆ.

• ಎರೆಹುಳುವಿನಲ್ಲಿ ಅನಿಲಗಳ ವಿನಿಮಯವು ಒದ್ದೆಚರ್ಮದ ಮೂಲಕ ನಡೆಯುತ್ತದೆ. ಮೀನುಗಳಲ್ಲಿ ಕಿವಿರುಗಳ ಮೂಲಕ ಮತ್ತು ಕೀಟಗಳಲ್ಲಿ ಶ್ವಾಸನಾಳಗಳ ಮೂಲಕ ನಡೆಯುತ್ತದೆ.

• ಸಸ್ಯದ ಬೇರುಗಳು ಮಣ್ಣಿನಲ್ಲಿರುವ ಗಾಳಿಯನ್ನು ಪಡೆದುಕೊಳ್ಳುತ್ತವೆ. ಎಲೆಗಳಲ್ಲಿರುವ ಪತ್ರರಂಧ್ರಗಳೆಂಬ ಸೂಕ್ಷ್ಮ ರಂಧ್ರಗಳ ಮೂಲಕ ಅನಿಲಗಳ ವಿನಿಮಯ ನಡೆಯುತ್ತದೆ. ಸಸ್ಯ ಜೀವಕೋಶಗಳಲ್ಲಿ ಗ್ಲೂಕೋಸ್ ವಿಭಜನೆ ಇತರ ಜೀವಿಗಳಂತೆಯೇ ನಡೆಯುತ್ತದೆ.

ನಿಮಗಿದು ಗೊತ್ತೆ?

ಆಕ್ಸಿಜನ್ ನಮಗೆ ಅವಶ್ಯಕ, ಆದರೆ ಅದನ್ನು ಉಪಯೋಗಿಸದ ಜೀವಿಗಳಿಗೆ ಆಕ್ಸಿಜನ್ ವಿಷ. ವಾಸ್ತವವಾಗಿ, ತುಂಬ ಸಮಯದವರೆಗೆ ಶುದ್ಧ ಆಕ್ಸಿಜನ್‍ನ ಶ್ವಾಸಕ್ರಿಯೆಯು ಮಾನವರು ಮತ್ತು ಇತರ ಜೀವಿಗಳಿಗೆ ಅಪಾಯಕರ.

ಸಂವೇದ ವಿಡಿಯೋ ಪಾಠಗಳು

Samveda – 7th – Science – Jeevigalalli Usiraata (Part 1 of 2)

Samveda – 7th – Science – Jeevigalalli Usiraata (Part 2 of 2)

ವಿಸ್ತರಿತ ಕಲಿಕೆ – ಚಟುವಟಿಕೆಗಳು ಮತ್ತು ಯೋಜನೆಗಳು

1. ಅಕ್ವೇರಿಯಮ್ (ಮತ್ಸ್ಯಾಗಾರ) ನಲ್ಲಿರುವ ಮೀನುಗಳನ್ನು ಗಮನಿಸಿ. ಅವುಗಳ ತಲೆಗಳ ಎರಡೂ ಬದಿಗಳಲ್ಲಿ ಮುಚ್ಚಳಗಳಂತಹ ರಚನೆಗಳನ್ನು ನೀವು ಕಾಣುತ್ತೀರಿ. ಇವು ಕಿವಿರುಗಳನ್ನು ಮುಚ್ಚುವ ಮುಚ್ಚಳಗಳು. ಈ ಮುಚ್ಚಳಗಳು ಪರ್ಯಾಯವಾಗಿ ತೆರೆಯುತ್ತವೆ ಮತ್ತು ಮುಚ್ಚುತ್ತವೆ. ಈ ವೀಕ್ಷಣೆಗಳ ಆಧಾರದ ಮೇಲೆ ಮೀನುಗಳಲ್ಲಿ ಉಸಿರಾಟ ಪ್ರಕ್ರಿಯೆಯನ್ನು ವಿವರಿಸಿ.

How do fish gills extract oxygen from water? / Science behind the Universe

2. ಸ್ಥಳೀಯ ವೈದ್ಯರನ್ನು ಭೇಟಿಮಾಡಿ, ಧೂಮಪಾನದ ಕೆಟ್ಟ ಪರಿಣಾಮಗಳನ್ನು ತಿಳಿದುಕೊಳ್ಳಿ. ಬೇರೆ ಮೂಲಗಳಿಂದ ಕೂಡಾ ನೀವು ಈ ವಿಷಯದ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಬಹುದು. ನಿಮ್ಮ ಶಿಕ್ಷಕರು ಅಥವಾ ಪೋಷಕರ ಸಹಾಯವನ್ನು ನೀವು ಪಡೆಯಬಹುದು. ನೀವಿರುವ ಪ್ರದೇಶದಲ್ಲಿ ಧೂಮಪಾನ ಮಾಡುವ ಜನರ ಶೇಕಡಾವಾರು ಪ್ರಮಾಣವನ್ನು ಕಂಡುಹಿಡಿಯಿರಿ. ನಿಮ್ಮ ಕುಂಟುಂಬದಲ್ಲಿ ಧೂಮಪಾನಿಗಳಿದ್ದರೆ ನೀವು ಸಂಗ್ರಹಿಸಿದ ಮಾಹಿತಿಗಳೊಂದಿಗೆ ಅವರನ್ನು ವಿರೋಧಿಸಿ.

After smoking 200 cigarettes, what will happen to your lungs?

ಅಭ್ಯಾಸಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.