ಜಗತ್ತಿನ ಪ್ರಮುಖ ಘಟನೆಗಳು – ಅಧ್ಯಾಯ 1

ಪಾಠದ ಪರಿಚಯ
ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ಏಕೆ ಪರಿಗಣಿಸಲಾಗಿದೆ ಎಂಬ ವಿಚಾರ ನಿಮಗೆ ತಿಳಿದಿದೆಯೆ? ಇಲ್ಲಿ ಅನೇಕ ಮತಾವಲಂಬಿಗಳು ಸೌಹಾರ್ದದಿಂದ ಜೀವಿಸುತ್ತಾರೆ. ಕೆಲವು ರಿಲಿಜನ್‍ಗಳ ಬಗ್ಗೆ ಈಗ ತಿಳಿಯೋಣ.
ಮಧ್ಯಯುಗದಲ್ಲಿ ಯುರೋಪ್ ಮತ್ತು ಏಷ್ಯದಲ್ಲಾದ ಭಾರಿ ಸ್ಥಿತ್ಯಂತರಗಳು ಭಾರತದ ಮೇಲೆ ಪ್ರಭಾವ ಬೀರದಿರಲಿಲ್ಲ. ಮುಖ್ಯವಾಗಿ ಕ್ರೈಸ್ತ ಮತ್ತು ಇಸ್ಲಾಂ ರಿಲಿಜನ್‍ಗಳ ಉದಯ, ಬೆಳವಣಿಗೆ ಹಾಗೂ ಅವು ಬೀರಿರುವ ಪ್ರಭಾವಗಳನ್ನು ಭಾರತದ ಇತಿಹಾಸದ ಸಂದರ್ಭದಲ್ಲಿ ನಾವು ಗುರುತಿಸತಕ್ಕದ್ದು. ಈ ಪಾಠದಲ್ಲಿ ಯೇಸುಕ್ರಿಸ್ತ ಮತ್ತು ಪ್ರವಾದಿ ಮಹಮ್ಮದರ ಜೀವನ ಹಾಗೂ ಬೋಧನೆಗಳನ್ನು ವಿವರಿಸಲಾಗಿದೆ. ಜೊತೆಗೆ ರೋಮನ್ ಕ್ಯಾಥೊಲಿಕ್ ಚರ್ಚ್ ಒಂದು ಪ್ರಬಲ ಸಂಘಟನೆಯಾಗಿ ಮೂಡಿಬಂದ ಹಿನ್ನೆಲೆ, ಇಸ್ಲಾಮಿಕ್ ಸಾಮ್ರಾಜ್ಯದ ಸ್ಥಾಪನೆ, ಅರಬ್ಬರ ಕೊಡುಗೆ ಮತ್ತು ಜಾಗತಿಕ ಇತಿಹಾಸದ ಮೇಲೆ ಮಂಗೋಲರು ಮತ್ತು ಅಟೋಮನ್ ಟರ್ಕರ ಪ್ರಭಾವವನ್ನು ನಿರೂಪಿಸಲಾಗಿದೆ.

ಇತಿಹಾಸ ಎಂದರೇನು?
ಇತಿಹಾಸವು ಗತಕಾಲದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುತ್ತದೆ. ಅದು ಮಾನವನ ಸಾಧನೆಗಳನ್ನು ತಿಳಿಸುತ್ತದೆ. ಆಗಿಹೋದ ಘಟನೆಯನ್ನು ಹೇಳುವಾಗ ಮೂರು ಅಂಶಗಳು ಅಲ್ಲಿ ಇದ್ದೇ ಇರುತ್ತವೆ. ಅವೆಂದರೆ – ಯಾವಾಗ ನಡೆಯಿತು? ಎಲ್ಲಿ ನಡೆಯಿತು? ಸಂಬಂಧಪಟ್ಟವರು ಯಾರು? ಈ ಪ್ರಶ್ನೆಗಳಿಗೆ ಉತ್ತರವಾಗಿ ಇತಿಹಾಸದಲ್ಲಿ ಇಸವಿಗಳು, ಸ್ಥಳಗಳು ಹಾಗೂ ವ್ಯಕ್ತಿಗಳ ಹೆಸರುಗಳು ಬರುತ್ತವೆ.

ಈ ಕೆಳಗಿನ ಘಟನೆಯಲ್ಲಿ ಬಂದಿರುವ ಇಸವಿ, ಸ್ಥಳ ಮತ್ತು ವ್ಯಕ್ತಿಯನ್ನು ಗಮನಿಸಿ: “ಸಾಮಾನ್ಯ ಶಕ 1674ರಲ್ಲಿ ಶಿವಾಜಿಯ ಪಟ್ಟಾಭಿಷೇಕ ರಾಯಗಢದಲ್ಲಾಯಿತು.”

ಕ್ರೈಸ್ತ ರಿಲಿಜನ್

ಇಂದು ಜಗತ್ತಿನಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿರುವ ಮತಗಳಲ್ಲಿ ಕ್ರೈಸ್ತ ಮತ್ತು ಇಸ್ಲಾಂ ರಿಲಿಜನ್‍ಗಳನ್ನು ಹೆಸರಿಸಬಹುದು. ಅವುಗಳ ಉದಯ, ವಿಕಾಸ ಹಾಗೂ ಅವು ಬೀರಿರುವ ಪ್ರಭಾವಗಳನ್ನು ನಾವೀಗ ತಿಳಿಯೋಣ. ಕ್ರೈಸ್ತರಿಲಿಜನ್ ಎರಡು ಸಾವಿರ ವರ್ಷಗಳಷ್ಟು ಹಿಂದಿನದು. ಅದರ ಸ್ಥಾಪಕ ಯೇಸುಕ್ರಿಸ್ತ (ಜೀಸಸ್ ಕ್ರೈಸ್ಟ್). `ಬೈಬಲ್’ ಕ್ರೈಸ್ತರ ಪವಿತ್ರ ಗ್ರಂಥ. ಬೈಬಲ್‍ನಲ್ಲಿ ಯೇಸುಕ್ರಿಸ್ತರ ಜೀವನದ ವಿವರಗಳು ಹಾಗೂ ಉಪದೇಶಗಳಿವೆ.

ಜೀಸಸ್’ ಕನ್ನಡದಲ್ಲಿಯೇಸು’, ಕ್ರೈಸ್ಟ್’ ಪದದ ಅರ್ಥರಕ್ಷಕ’.

ಯೇಸುಕ್ರಿಸ್ತನ ಜೀವನ:

ಯೇಸು ಬೆತ್ಲಹೆಂ (ಇಸ್ರೇಲ್) ಎಂಬಲ್ಲಿ ಮೇರಿ ಎಂಬಾಕೆಯ ಮಗನಾಗಿ ಜನಿಸಿದರು. ಅವರಿಗೆ ಸುಮಾರು ಮೂವತ್ತು ವರ್ಷವಾದಾಗ ಮನೆಯಿಂದ ಹೊರಟು ಬಡವರು ಮತ್ತು ದೀನರ ಸೇವೆ ಮಾಡತೊಡಗಿದರು. ಕರುಣೆಯೇ ಧರ್ಮದ ಮೂಲವೆಂದು, ಕತೆಗಳ ಮೂಲಕ ಉದಾಹರಣೆ ನೀಡಿ ಉಪದೇಶ ಮಾಡುತ್ತಿದ್ದರು.

ಬೆತ್ಲಹೆಂ (ಇಸ್ರೇಲ್)

ಯೇಸುವಿನ ಅನುಯಾಯಿಗಳು ಹೆಚ್ಚಿದಂತೆ ಅವರ ವಿರೋಧಿಗಳ ಸಂಖ್ಯೆಯೂ ಹೆಚ್ಚಿತು. ಧಾರ್ಮಿಕ ಮುಂದಾಳುಗಳು ಯೇಸುವನ್ನು ವಿರೋಧಿಸಿದರು. ಯೇಸು ರಾಜದ್ರೋಹಿಯೆಂಬ ತಪ್ಪು ಹೊರಿಸಿ, ಅವರನ್ನು ಶಿಲುಬೆಗೆ ಏರಿಸಿದರು. (ಅಪರಾಧಿಗಳಿಗೆ ಆ ಕಾಲದಲ್ಲಿ ನೀಡುತ್ತಿದ್ದ ಮರಣ ದಂಡನೆಯೆಂದರೆ ಶಿಲುಬೆಗೇರಿಸುವುದು).

ಯೇಸು

ಬೋಧನೆಗಳು:

• ನಾವೆಲ್ಲ ದೇವರ ಮಕ್ಕಳು; ನಾವೆಲ್ಲ ಸಹೋದರರು ಎಂದು ಯೇಸು ಸಾರಿ ಹೇಳಿದರು.
• ಪಾಪಗಳನ್ನು ಮಾಡದೆ ಶುದ್ಧ ಜೀವನ ನಡೆಸಬೇಕೆಂದು ಬೋಧಿಸಿದರು. “ನಿಮ್ಮ ನೆರೆಯವನನ್ನು ನಿಮ್ಮಂತೆ ಪ್ರೀತಿಸಿ”, “ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸಿ”.
• ಮಾನವ ಸೇವೆಯೇ ದೇವರ ಸೇವೆ ಎಂದರು.

ಯೇಸು ಕಾಲವಾದ ಅನಂತರ ಅವರ ಬೋಧನೆಗಳನ್ನು ಅವರ ಹನ್ನೆರಡು ಮಂದಿ ಪರಮ ಶಿಷ್ಯರು ಉತ್ಸಾಹದಿಂದ ಪ್ರಚಾರ ಮಾಡಿದರು. ಪರಿಣಾಮವಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರೈಸ್ತ ಸಮುದಾಯಗಳು ಅಲ್ಲಲ್ಲಿ ನೆಲೆಗೊಂಡವು. ಇದೇ ವೇಳೆ ಕ್ರೈಸ್ತರು ನಾನಾ ರೀತಿಯಲ್ಲಿ ಹಿಂಸೆಗೆ ಒಳಗಾದರು. ಕಾಲಗತಿಯಲ್ಲಿ ರೋಮನ್ ಸಾಮ್ರಾಜ್ಯವು ಕ್ರೈಸ್ತ ರಿಲಿಜನ್‍ಗೆ ಮಾನ್ಯತೆ ನೀಡಿತು.

ರೋಮನ್ ಸಾಮ್ರಾಜ್ಯ

ನಂತರ ಇಟಲಿಯ ರೋಮ್ ನಗರವು ಕ್ರೈಸ್ತರ ಮುಖ್ಯ ಕೇಂದ್ರವಾಗಿ ಬೆಳೆಯಿತು. ಅಲ್ಲಿನ ಪೋಪ್ ಕ್ರೈಸ್ತರ ಪರಮಗುರುಗಳಾದರು. ಯುರೋಪ್ ಮತ್ತು ಜಗತ್ತಿನ ಇತರ ಭಾಗಗಳಿಗೆ ಕ್ರೈಸ್ತ ಪ್ರಚಾರಕರು ತೆರಳಿ ಅಲ್ಲಿ ಕ್ರೈಸ್ತ ರಿಲಿಜನ್ ಅನ್ನು ಹರಡಿದರು. ಕಾಲಕ್ರಮೇಣ ರೋಮನ್ ಕ್ಯಾಥೊಲಿಕ್ ಚರ್ಚ್ ಒಂದು ಪ್ರಬಲ ಸಂಘಟನೆಯಾಗಿ ಬೆಳೆಯಿತು. ಅದರೊಂದಿಗೆ ಪೋಪ್‍ಗುರುಗಳ ಆರ್ಥಿಕ ಮತ್ತು ರಾಜಕೀಯ ಪ್ರಭಾವ ಹೆಚ್ಚಾಗತೊಡಗಿತು.

ಇಟಲಿ

ಯುರೋಪ್

ಪೋಪ್‍ಗುರು

ರೋಮನ್ ಕ್ಯಾಥೊಲಿಕ್ ಚರ್ಚ್

ಇಸ್ಲಾಂ ರಿಲಿಜನ್

ಮಹಮ್ಮದ್ ಪೈಗಂಬರರು ಇಸ್ಲಾಂ ರಿಲಿಜನ್‍ನ ಸ್ಥಾಪಕರು. ಅವರು ಅರಬ್ ದೇಶದ ಮೆಕ್ಕ ನಗರದಲ್ಲಿ ಜನಿಸಿದರು.

ಅರಬ್ ದೇಶದ ಮೆಕ್ಕ

ಅರಬ್ ದೇಶ

ಪೈಗಂಬರ ಎಂದರೆ ದೇವರ ಸಂದೇಶವನ್ನು ಸಾರುವವರು; ಪ್ರವಾದಿ.

ಇಸ್ಲಾಂಪೂರ್ವದ ಅರಬ್‍ದೇಶದಲ್ಲಿ ಅನೇಕ ಚಿಕ್ಕಪುಟ್ಟ ಪಂಗಡಗಳಿದ್ದವು. ಅವುಗಳಲ್ಲಿ ಒಗ್ಗಟ್ಟಿರಲಿಲ್ಲ. ಮೆಕ್ಕದಲ್ಲಿದ್ದ ಕಾಬಾ ಮಂದಿರವು ದೊಡ್ಡ ಯಾತ್ರಾಕ್ಷೇತ್ರವಾಗಿತ್ತು. ಅಲ್ಲಿ ವಿಗ್ರಹಾರಾಧನೆ ರೂಢಿಯಲ್ಲಿತ್ತು.

ಪ್ರವಾದಿ ಮಹಮ್ಮದರ ಜೀವನ:

ಮಹಮ್ಮದರ ತಂದೆ ಅಬ್ದುಲ್ಲಾ, ತಾಯಿ ಅಮೀನಾ. ಅವರು ಹುಟ್ಟುವುದಕ್ಕೆ ಮುನ್ನವೇ ತಂದೆಯನ್ನು ಕಳೆದುಕೊಂಡಿದ್ದರು. ಪ್ರಾರಂಭದಲ್ಲಿ ಅವರು ಚಿಕ್ಕಪ್ಪನಿಗೆ ವ್ಯಾಪಾರದಲ್ಲಿ ನೆರವಾಗತೊಡಗಿದರು. ಮುಂದೆ, ಖದೀಜಾ ಎಂಬ ಧನಿಕ ವಿಧವೆಯೊಬ್ಬಳು ಇವರನ್ನು ತನ್ನ ವ್ಯಾಪಾರದ ಪ್ರತಿನಿಧಿಯಾಗಿ ನೇಮಿಸಿಕೊಂಡಳು. ಮುಂದೆ ಮಹಮ್ಮದರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡು ಅವರನ್ನು ಮದುವೆಯಾದಳು.

ತಮ್ಮ 40ನೆಯ ವಯಸ್ಸಿನಿಂದ ಮಹಮ್ಮದರು ಪ್ರಾರ್ಥನೆ ಮತ್ತು ಧ್ಯಾನಗಳಲ್ಲಿ ಮಗ್ನರಾಗಿರುತ್ತಿದ್ದರು. ಕಾಲಸರಿದಂತೆ ದೇವರ ಸಂದೇಶಗಳನ್ನು ಸಾರಲು ಆರಂಭಿಸಿದರು. ಅಂತಹ ಸಂದೇಶಗಳನ್ನು ಒಳಗೊಂಡ ಗ್ರಂಥವೇ ಇಸ್ಲಾಮಿನ ಮೂಲಗ್ರಂಥ – ಕುರಾನ್. ಇದು ಅರೇಬಿಕ್ ಭಾಷೆಯಲ್ಲಿದೆ.

ಇಸ್ಲಾಮಿನ ಮೂಲಗ್ರಂಥ – ಕುರಾನ್

ಇಸ್ಲಾಂ’ ಪದದ ಅರ್ಥಶರಣಾಗತಿ. ಮುಸ್ಲಿಮ್’ ಎಂದರೆ ಅಲ್ಲಾನಿಗೆ ಶರಣಾದವರು’

ಕಾಲಕ್ರಮೇಣ ಪ್ರವಾದಿಯವರ ಅನುಯಾಯಿಗಳ ಸಂಖ್ಯೆ ಹೆಚ್ಚಿತು. ಆ ಕಾಲದ ಧಾರ್ಮಿಕ ಆಚಾರ ವಿಚಾರಗಳನ್ನು ಅವರು ಟೀಕಿಸಿದ್ದುದರಿಂದ ಅವರ ವಿರೋಧಿಗಳ ಸಂಖ್ಯೆ ಸಹ ಬೆಳೆಯಿತು. ಹೀಗಾಗಿ ಅವರು ಮೆಕ್ಕದಿಂದ ಮದೀನಾ ನಗರಕ್ಕೆ ಹೋಗಬೇಕಾಯಿತು. ಪ್ರವಾದಿಯವರು ಮೆಕ್ಕದಿಂದ ಮದೀನಕ್ಕೆ ಹೋದ ವರ್ಷದಿಂದಲೇ ಮುಸಲ್ಮಾನರ `ಹಿಜಿರಾ’ ಶಕೆ ಆರಂಭವಾದದ್ದು.

ಮದೀನಾದಲ್ಲಿ ಜನರು ಮಹಮ್ಮದರನ್ನು ಸ್ವಾಗತಿಸಿದರು. ಮುಂದೆ ಅವರು ಮೆಕ್ಕವನ್ನು ಗೆದ್ದುಕೊಂಡರು. ಅಲ್ಲಿದ್ದ ವಿಗ್ರಹಗಳನ್ನು ತೆಗೆಯಿಸಿದರು. ಅಲ್ಪಕಾಲದಲ್ಲೇ ಇಡೀ ಅರಬ್ ದೇಶದಲ್ಲಿ ಇಸ್ಲಾಂ ರಿಲಿಜನ್ ಹರಡಿತು.

ಇಸ್ಲಾಮಿನ ಬೋಧನೆಗಳು

* ಅಲ್ಲಾನ ಹೊರತು ಬೇರೆ ದೇವರಿಲ್ಲ; ಮಹಮ್ಮದ್ ಅವರು ದೇವರ ಪ್ರವಾದಿ. ದೇವರನ್ನು ಯಾವ ಮೂರ್ತಿಯ ರೂಪದಲ್ಲೂ ಪೂಜಿಸಬಾರದು.
* ಪ್ರತಿಯೊಬ್ಬ ಮುಸಲ್ಮಾನನೂ ದೇವರ ಸೇವಕನಾಗಬೇಕು. ಪ್ರಾಮಾಣಿಕನಾಗಿರಬೇಕು.

ವ್ಯಾಪಾರಿಗಳು ಮೋಸ ಮಾಡಬಾರದು. ಬಡ್ಡಿ ವ್ಯವಹಾರ ಮಾಡಬಾರದು. ಶಿಶುಹತ್ಯೆ, ಹಂದಿ ಮಾಂಸ ತಿನ್ನುವುದು ಮತ್ತು ಮದ್ಯಪಾನ ಸಲ್ಲದು

* ಪ್ರತಿಯೊಬ್ಬ ಮುಸಲ್ಮಾನನೂ ದಿನಕ್ಕೆ ಐದು ಬಾರಿ ಕಾಬಾದ ದಿಕ್ಕಿಗೆ ಮುಖ ಮಾಡಿ ಪ್ರಾರ್ಥನೆ (ನಮಾಜ್) ಮಾಡಬೇಕು. ರಂಜಾನ್ ತಿಂಗಳಲ್ಲಿ ಹಗಲು ಉಪವಾಸ ಮಾಡಬೇಕು. ಶ್ರೀಮಂತರು ಬಡವರಿಗೆ ಕಡ್ಡಾಯವಾಗಿ ದಾನ (ಜಕಾತ್) ನೀಡಬೇಕು. ಸಾಧ್ಯವಾದಲ್ಲಿ ಜೀವಮಾನದಲ್ಲಿ ಒಂದು ಸಲವಾದರೂ `ಹಜ್’ (ಮೆಕ್ಕ) ಯಾತ್ರೆ ಮಾಡಬೇಕು.

ಪ್ರಾರ್ಥನೆ (ನಮಾಜ್)

ಇಸ್ಲಾಮಿಕ್ ಸಾಮ್ರಾಜ್ಯ:

ಮಹಮ್ಮದರ ಉತ್ತರಾಧಿಕಾರಿಗಳನ್ನು ಖಲೀಫ ಎನ್ನುವರು. ಕಾಲಕ್ರಮದಲ್ಲಿ ಖಲೀಫರು ಯುದ್ಧಗಳನ್ನು ಹೂಡಿ, ವಿಜಯಗಳಿಸುತ್ತ ವಿಶಾಲವಾದ ಇಸ್ಲಾಮಿಕ್ ಸಾಮ್ರಾಜ್ಯವನ್ನು ಕಟ್ಟಿದರು. ಸಾಮ್ರಾಜ್ಯ ವಿಸ್ತರಣೆಗೊಂಡಂತೆ ಇಸ್ಲಾಮ್ ಅನುಯಾಯಿಗಳ ಸಂಖ್ಯೆ ಹೆಚ್ಚಿತು. ಅರಬ್ಬರು ಭಾರತದ ಮೇಲೂ ಆಕ್ರಮಣ ಮಾಡಿದರು. ಅವರು ಸಿಂಧ್ ಪ್ರಾಂತ್ಯವನ್ನು ವಶಪಡಿಸಿಕೊಂಡರಲ್ಲದೆ ಅಲ್ಲಿ ಇಸ್ಲಾಂ ರಿಲಿಜನ್ ಅನ್ನು ಹರಡಿದರು.

ಮುಂದೆ ಟರ್ಕರು ಅರಬ್ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದರು. ಅವರು ಅಫ್‍ಘಾನಿಸ್ತಾನದ ಮೂಲಕ ಭಾರತವನ್ನು ಪ್ರವೇಶಿಸಿ ಹಲವಾರು ದಂಡಯಾತ್ರೆಗಳನ್ನು ನಡೆಸಿದರು. ಇವುಗಳ ಪರಿಣಾಮವಾಗಿ ಭಾರತದಲ್ಲಿ ದಿಲ್ಲಿಯ ಸುಲ್ತಾನರ ಆಳ್ವಿಕೆ ನೆಲೆಯೂರಿತ್ತಲ್ಲದೆ ಇಸ್ಲಾಂ ರಿಲಿಜನ್ ಹರಡಿತು.

ಟರ್ಕಿ

ಅಫ್‍ಘಾನಿಸ್ತಾನ

ಅರಬ್ಬರ ಕೊಡುಗೆ

* ಅರಬ್ಬರು ಗ್ರೀಕ್, ರೋಮನ್ ಮತ್ತು ಭಾರತೀಯ ಜ್ಞಾನವಿಜ್ಞಾನಗಳನ್ನು ಅರಗಿಸಿಕೊಂಡು ತಮ್ಮ ನಾಗರಿಕತೆಯನ್ನು ಶ್ರೀಮಂತಗೊಳಿಸಿದರು. ಬಾಗ್ದಾದ್ ಅವರ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು.
* ಅರಬ್ಬರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು.

ಬಾಗ್ದಾದ್

ಅರೇಬಿಯನ್ ನೈಟ್ಸ್’, ಉಮ್ಮರ್ ಖಯ್ಯಾಮನರುಬಾಯತ್’ ಮತ್ತು ಫಿರ್ದೂಸಿಯ `ಷಾನಾಮ’ ಇವು ಪರ್ಷಿಯನ್ ಭಾಷೆಯ ಶ್ರೇಷ್ಠ ಕೃತಿಗಳು.

* ಅರಬ್ಬರು ಬೀಜಗಣಿತ, ರಸಾಯನಶಾಸ್ತ್ರ ಮತ್ತು ಖಗೋಳಶಾಸ್ತ್ರಗಳಿಗೆ ಮಹತ್ವದ ಕೊಡುಗೆಯನ್ನಿತ್ತರು. ಭಾರತೀಯರಿಂದ ಶೂನ್ಯವೂ (ಝೀರೊ) ಸೇರಿದಂತೆ ಅಂಕೆಗಳ ಬಳಕೆ ಅರಿತುಕೊಂಡರು. ಅವುಗಳನ್ನು ಪಾಶ್ಚಾತ್ಯ ದೇಶಗಳಿಗೂ ಮುಟ್ಟಿಸಿದರು.
* ಅರಬ್ಬರು ಭವ್ಯವಾದ ಅರಮನೆ, ಮಸೀದಿ, ಗ್ರಂಥಾಲಯ ಮತ್ತು ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದರು. ಮೆಕ್ಕ, ಮದೀನಾ, ಬಾಗ್ದಾದ್, ಜೆರೂಸಲಮ್ ಮುಂತಾದ ಕಡೆ ಅವರ ಭವ್ಯ ಮಸೀದಿಗಳಿವೆ. `ಯುನಾನಿ’ ಎಂಬ ವೈದ್ಯಪದ್ಧತಿ ಅರಬ್ಬರ ಕೊಡುಗೆಯಾಗಿದೆ.

ರಿಲಿಜಸ್ ಯುದ್ಧಗಳು

ಯೆಹೂದಿಗಳು, ಕ್ರೈಸ್ತರು ಮತ್ತು ಮುಸಲ್ಮಾನರಿಗೆ ಪ್ಯಾಲೆಸ್ತೈನ್ ಹಾಗೂ ಅದರ ರಾಜಧಾನಿ ಜರೂಸಲಮ್ ಪವಿತ್ರ ಭೂಮಿಯಾಗಿತ್ತು. ಇದನ್ನು ವಶಪಡಿಸಿಕೊಳ್ಳುವುದಕ್ಕಾಗಿ ಕ್ರೈಸ್ತರು ಮತ್ತು ಮುಸಲ್ಮಾನರು ಒಂಬತ್ತು ಬಾರಿ ಯುದ್ಧಗೈದರು. ಈ ಯುದ್ಧಗಳನ್ನು ಇತಿಹಾಸದಲ್ಲಿ ರಿಲಿಜಸ್ ಯುದ್ಧಗಳು (ಕ್ರೂಸೇಡ್ಸ್) ಎನ್ನುತ್ತಾರೆ.

ಯುದ್ಧಗಳ ಕಾರಣ:

ಪ್ಯಾಲೆಸ್ತೈನ್ ಅಟೋಮನ್ ಟರ್ಕರ ವಶದಲ್ಲಿದ್ದರೂ ಕ್ರೈಸ್ತರು ಬಹುಕಾಲದಿಂದ ಅಲ್ಲಿಗೆ ಯಾತ್ರೆಗಾಗಿ ಹೋಗಿಬರುತ್ತಿದ್ದರು. ಟರ್ಕರು ಜೆರೂಸಲಮ್ ಯಾತ್ರಿಗಳ ಮೇಲೆ ನಿಷೇಧ ಹೇರಿದ್ದು ಈ ಯುದ್ಧಗಳಿಗೆ ಮೂಲ ಕಾರಣವಾಗಿತ್ತು.

ಪ್ಯಾಲೆಸ್ತೈನ್

ಮೊದಲನೆಯ ಯುದ್ಧದಲ್ಲಿ ಸುಮಾರು 40,000 ಕ್ರೈಸ್ತರು ಯುರೋಪಿನ ವಿವಿಧ ದೇಶಗಳಿಂದ ಕಾಲ್ನಡಿಗೆಯಲ್ಲಿಯೇ ಜರೂಸಲಂನತ್ತ ಮುನ್ನುಗ್ಗಿ ಅದನ್ನು ವಶಪಡಿಸಿಕೊಂಡರು. ಆದರೆ ಮುಂದಿನ ಯಾವ ಯುದ್ಧದಲ್ಲಿಯೂ ಕ್ರೈಸ್ತರು ಹೇಳಿಕೊಳ್ಳುವಂಥ ಜಯ ಸಾಧಿಸಲಿಲ್ಲ.

ದುರಂತಮಯವಾಗಿದ್ದ ನಾಲ್ಕನೆಯ ಕ್ರೂಸೇಡ್‍ನಲ್ಲಿ ಯುರೋಪಿನ ಸುಮಾರು 50,000 ಮಂದಿ ಭಾಗವಹಿಸಿದರು. ಆದರೆ ಕೆಲವರು ದಾರಿಯಲ್ಲಿಯೇ ಬಳಲಿಕೆಯಿಂದ ಅಸುನೀಗಿದರು. ಶತ್ರುಗಳು ಬಂಧಿತರನ್ನು ತಮ್ಮ ಗುಲಾಮರನ್ನಾಗಿ ಮಾಡಿದರು

ಯುದ್ಧದ ಪರಿಣಾಮಗಳು:

ಒಟ್ಟಿನಲ್ಲಿ ಪವಿತ್ರ ಭೂಮಿಯನ್ನು ವಶಪಡಿಸಿಕೊಳ್ಳುವುದರಲ್ಲಿ ಕ್ರೈಸ್ತರು ವಿಫಲರಾದರು. ಯುರೋಪ್ ಮತ್ತು ಏಷ್ಯದೊಳಗಿನ ಸಂಪರ್ಕ ಹಾಗೂ ವ್ಯಾಪಾರ ಸಂಬಂಧಗಳು ವೃದ್ಧಿಗೊಂಡವು.

ರಿಲಿಜಸ್ ಯುದ್ಧಗಳು (ಕ್ರೂಸೇಡ್ಸ್)

ಮಂಗೋಲರು

ಮಂಗೋಲಿಯ ಮಧ್ಯ ಏಷ್ಯದ ಸಮೃದ್ಧ ಹುಲ್ಲುಮೈದಾನಗಳ ನಾಡು. ಇಲ್ಲಿನ ಅಲೆಮಾರಿ ಜನರೇ ಮಂಗೋಲರು. ಪಶುಪಾಲನೆ ಅವರ ಮುಖ್ಯ ವೃತ್ತಿ.

ಮಂಗೋಲಿಯ

ಚಂಗಿಸ್ ಖಾನ್:

ಮಂಗೋಲರನ್ನು ಚಂಗಿಸ್ ಖಾನ್ ಒಂದುಗೂಡಿಸಿ ಏಷ್ಯದಲ್ಲಿ ವಿಶಾಲವಾದ ಸಾಮ್ರಾಜ್ಯವನ್ನು ಕಟ್ಟಿದನು. ಆದರೆ ಈತನು ಮಾಡಿರುವ ಅಮಾನುಷ ಕೃತ್ಯಗಳು ಇತಿಹಾಸವನ್ನು ಓದುವವರ ಮೈ ನಡುಗಿಸುವಂತಹವು.

ಕುಬ್ಲಾಯ್ ಖಾನ್:

ಕುಬ್ಲಾಯ್ ಖಾನ್ ಚಂಗಿಸ್ ಖಾನನ ಮೊಮ್ಮಗ. ಚೀನಾ ದೇಶದ ಚಕ್ರವರ್ತಿಯಾಗಿ ಕುಬ್ಲಾಯ್ ಖಾನ್ ಮೆರೆದನು. ಉತ್ತಮ ಆಡಳಿತಗಾರ; ದಯಾಳು ಸಾಮ್ರಾಟ. ಇವನು ಅನೇಕ ಜನಪರ ಕಾಮಗಾರಿಗಳನ್ನು ಕೈಗೊಂಡನು. ಕ್ಷಾಮಗಳು ತಲೆದೋರಿದಾಗ ಹಸಿದವರಿಗೆ ಅನ್ನದಾನ ಮಾಡಿದನು. ಕಲೆ ಮತ್ತು ವಿದ್ವಾಂಸರಿಗೆ ಪ್ರೋತ್ಸಾಹ ನೀಡಿದನು.

ಚೀನಾ ದೇಶದ ಧರ್ಮ-ಸಂಸ್ಕೃತಿಗಳು ಕುಬ್ಲಾಯ್ ಖಾನನ ಮೇಲೆ ಪ್ರಭಾವ ಬೀರಿದವು. ಈತನು ಬೌದ್ಧಮತಕ್ಕೆ ಪರಿವರ್ತನೆಗೊಂಡನು.

ಉತ್ತಮರ ಸಂಪರ್ಕದಿಂದ ಪರಿವರ್ತನೆ ಸಾಧ್ಯ ಎಂಬುದಕ್ಕೆ ಕುಬ್ಲಾಯ್ ಖಾನ್ ಒಳ್ಳೆಯ ನಿದರ್ಶನ.

ತೈಮೂರ್:

ಕಾಲಗತಿಯಲ್ಲಿ ಅವನತಿ ಕಂಡ ಕುಬ್ಲಾಯ್ ಖಾನನ ಸಾಮ್ರಾಜ್ಯವನ್ನು ತೈಮೂರ್ ಮತ್ತೊಮ್ಮೆ ಕಟ್ಟಿದನು. ತೈಮೂರ್ ಅತಿ ಕ್ರೂರಿ. ಪರ್ಷಿಯ, ಇರಾಕ್, ಸಿರಿಯ, ಅಫ್‍ಘಾನಿಸ್ತಾನ ಹಾಗೂ ರಷ್ಯದ ಅನೇಕ ಭಾಗಗಳನ್ನು ಆಕ್ರಮಣ ಮಾಡಿ, ವಿಶಾಲ ಸಾಮ್ರಾಜ್ಯವನ್ನು ಕಟ್ಟಿದ. ಭಾರತವನ್ನು ಆಕ್ರಮಣ ಮಾಡಿ ಮೊಗಲ್ (ಮಂಗೋಲ್) ರಾಜ್ಯವನ್ನು ಸ್ಥಾಪಿಸಿದ ಬಾಬರ್ ಇದೇ ಸಂತತಿಯವನು.

ಅಟೋಮನ್ ಟರ್ಕರು

ಅಲೆಮಾರಿ ಜನಾಂಗಕ್ಕೆ ಸೇರಿದ ಟರ್ಕರ ಮೂಲಸ್ಥಾನ ಮಧ್ಯ ಏಷ್ಯದ ತುರ್ಕಿಸ್ತಾನ (ಈಗಿನ ತುರ್ಕ್‍ಮೆನಿಸ್ತಾನ). ಇವರು ಇಸ್ಲಾಂ ಅನುಯಾಯಿಗಳಾದರು. ಕುಬ್ಲಾಯ್ ಖಾನನ ಸಾಮ್ರಾಜ್ಯ ಅವನತಿ ಕಂಡ ಬಳಿಕ, ಟರ್ಕರು ಸುತ್ತಮುತ್ತಲಿನ ವಿಶಾಲವಾದ ಪ್ರದೇಶಗಳನ್ನು ಆಕ್ರಮಿಸಿಕೊಂಡರು. `ಅಟೋಮನ್’ ಎಂಬ ಮಿಲಿಟರಿ ರಾಜ್ಯವನ್ನು ಕಟ್ಟಿದರು. ಭಾರತದ ಮೇಲೆ ಆಕ್ರಮಣ ನಡೆಸಿ, ಸಂಪತ್ತನ್ನು ಲೂಟಿ ಮಾಡಿ, ಸಾಕಷ್ಟು ಸಾವು ನೋವುಗಳಿಗೆ ಕಾರಣರಾದರು.

ಇತಿಹಾಸದಲ್ಲಿ ಕಾಲಗಣನೆ (ಕ್ರಿ.ಶ.)

ಕಾಲಗಣನೆಯನ್ನು ಮಹತ್ವಪೂರ್ಣವಾದ ದಿನದಿಂದ ಆರಂಭಿಸಲಾಗುತ್ತದೆ. ಅಂಥ ಕಾಲಗಣನೆಯನ್ನು ಶಕ(ಶಕೆ) ಎನ್ನುತ್ತೇವೆ. ಕ್ರಿಸ್ತಶಕವು ಯೇಸುಕ್ರಿಸ್ತರು ಬದುಕಿದ ಕಾಲಾವಧಿಯ ನಿರ್ದಿಷ್ಟ ವರ್ಷದಿಂದ ಪ್ರಾರಂಭವಾಗುತ್ತದೆ. ವಿಜಯನಗರ ಸಾಮ್ರಾಜ್ಯವು ಕ್ರಿ.ಶ. 1336ರಲ್ಲಿ ಸ್ಥಾಪನೆಯಾಯಿತು ಎಂದರೆ ಅದು ಸ್ಥಾಪನೆಯಾಗಿ ಯೇಸುವಿನ ವರ್ಷದಿಂದ 1336 ವರ್ಷಗಳು ಕಳೆದಿವೆ ಎಂದು ಅರ್ಥ. ಕ್ರಿಸ್ತಪೂರ್ವ (ಬಿ.ಸಿ.) 220 ಎಂದರೆ `ನಮ್ಮ ಪ್ರಭುವಿನ ವರ್ಷ’ಕ್ಕೆ ಮುನ್ನ 220 ವರ್ಷಗಳ ಹಿಂದೆ ಎಂದು ಅರ್ಥ.

* ಕಾಲಗಣನೆಯನ್ನು ಇನ್ನಿತರ ಶಕೆಗಳಲ್ಲಿಯೂ ಮಾಡುತ್ತಾರೆ. ಶಾಲಿವಾಹನ, ಗುಪ್ತ, ವಿಕ್ರಮ, ಹಿಜರಿ ಇನ್ನೂ ಮುಂತಾದ ಶಕೆಗಳಿವೆ. ಸಾಮಾನ್ಯವಾಗಿ ಈಗ ಇತಿಹಾಸ ನಿರೂಪಣೆಯಲ್ಲಿ ಸಾಮಾನ್ಯಶಕ ಎಂಬುದು ರೂಢಿಯಲ್ಲಿದೆ.

* ಒಂದು ಶತಮಾನವೆಂದರೆ ನೂರು ವರ್ಷಗಳು. ನಾವು ಸಾಮಾನ್ಯಶಕ 21ನೇ ಶತಮಾನದವರು (2001ರಿಂದ 2100).

* ಇಸವಿಗಳು ಮಾನವನ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಘಟನೆಗಳು ನಡೆದ ಕಾಲಕ್ರಮವನ್ನು ತಿಳಿಸುವುದೇ ಇಸವಿಗಳನ್ನು ಸೂಚಿಸುವ ಉದ್ದೇಶವಾಗಿದೆ. ಇಸವಿಗಳನ್ನು ಕಂಠಪಾಠ ಮಾಡುವುದಕ್ಕಾಗಿ ಮಾತ್ರವೇ ಹೇಳಲಾಗಿಲ್ಲ.

ಕಾಲಗಣನೆ (ಕ್ರಿ.ಶ.)

ಮತೀಯ ಯುದ್ಧಗಳು – 12-13ನೇ ಶತಮಾನ
ಮಕ್ಕಳ ಕ್ರೂಸೇಡ್ – 1212
ಪ್ರವಾದಿ ಮಹಮ್ಮದ್ – ಸುಮಾರು 569-632
ಹಿಜರಿ ಶಕ – 622ರಿಂದ ಪ್ರಾರಂಭ
ಚಂಗಿಸ್ ಖಾನ್ – 1162-1227
ಕುಬ್ಲಾಯ್ ಖಾನ್ – 1215-1294
ತೈಮೂರ್ – 1369-1405

ವಿಡಿಯೋ ಪಾಠಗಳು

ಜಗತ್ತಿನ ಪ್ರಮುಖ ಘಟನೆಗಳು| 7ನೇ ತರಗತಿ|ಸಮಾಜ ವಿಜ್ಞಾನ|ಪರಿಷ್ಕೃತ ಪಠ್ಯ 2022- 23|Karnataka New syllabus

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

The Birth of Moses Kannada Story | Bible Stories in Kannada | Miracles of Jesus Christ

Christmas Special – Part-1| Jesus Christ Story|Birth Of Jesus Christ| Animated Bible Story | Kannada

ರಿಲಿಜಸ್ ಯುದ್ಧಗಳು (ಕ್ರೂಸೇಡ್ಸ್) The Most Brutal War in History

ರಿಲಿಜಸ್ ಯುದ್ಧಗಳು (ಕ್ರೂಸೇಡ್ಸ್)

ನಿಮಗೆ ತಿಳಿದಿರಲಿ

ಬೆತ್ಲಹೆಂ – ಜೆರೂಸಲೇಂನ ಸಮೀಪದ ಒಂದು ಚಿಕ್ಕ ಪಟ್ಟಣ. ಇದು ಇಂದಿನ ಇಸ್ರೇಲ್‍ನ ಜೂಡಿಯ ಎಂಬ ಪ್ರದೇಶದಲ್ಲಿದೆ. ಯೇಸು ಯೆಹೂದಿ (ಹೀಬ್ರೂ) ಸಂತತಿಯವ.

ಚಟುವಟಿಕೆಗಳು

1. ಬೈಬಲಿನ ದೃಷ್ಟಾಂತ ಕಥೆಗಳನ್ನು ಓದಿ.

Jesus Christ Stories Collection Part – 3 | Bible Stories in Kannada | Miracles of Jesus Christ


2. ಯೇಸುಕ್ರಿಸ್ತನ ಜೀವನ ಚರಿತ್ರೆಯನ್ನು ಓದಿ.

Jesus life story in Kannada, ಯೇಸು ಕ್ರಿಸ್ತನ ಜೀವನದ ಚರಿತೆ & ಆತನು ಮಾಡಿದ ಅದ್ಭುತಗಳು. Part-1|Kannada Masters|


3. ಪ್ರವಾದಿ ಮಹಮ್ಮದರ ಜೀವನ ಚರಿತ್ರೆಯನ್ನು ಓದಿ.

Prophet Stories In English | Prophet Muhammad (SAW) | Part 1 | Stories Of The Prophets | Quran Story


4 ಭೂಪಟದಲ್ಲಿ ಕ್ರೈಸ್ತ ಮತ್ತು ಇಸ್ಲಾಂ ರಿಲಿಜನ್‍ಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಗುರುತಿಸಿ.