ಪ್ರವೇಶ : ನಮ್ಮ ಕೈಯಲ್ಲಿರುವ ಐದು ಬೆರಳುಗಳೂ ಒಂದೇ ರೀತಿಯಿಲ್ಲ. ಪ್ರತಿಯೊಂದು ಬೆರಳನ್ನು ಅದರದೇ ಆದ ಕಾರ್ಯಗಳಿಗೆ ನಾವು ಬಳಸುತ್ತೇವೆ. ಏನನ್ನಾದರೂ ಹಿಡಿಯಬೇಕಾದರೆ ಐದೂ ಬೆರಳುಗಳನ್ನು ಒಟ್ಟಾಗಿ ಬಳಸುತ್ತೇವೆ. ಬೆರಳಿನ ಆಕಾರ, ಸ್ವರೂಪ ನಮ್ಮ ಗಮನಕ್ಕೆ ಬರುವುದಿಲ್ಲ. ಒಂದು ಮರ ಕಾಯನ್ನು, ಹಣ್ಣನ್ನು, ನೆರಳನ್ನು ನೀಡಬಹುದು. ಹಾಗೆಯೇ, ಹಲವು ಹಕ್ಕಿಗಳು ಗೂಡುಕಟ್ಟಲು ಅವಕಾಶ ಮಾಡಬಲ್ಲುದು. ಮನುಷ್ಯರಾದ ನಾವೂ ಸಹಕಾರಿಯಾಗಿ ಬದುಕಿದರೆ ಎಷ್ಟು ಚಂದ ಅಲ್ಲವೆ? ಪ್ರಕೃತಿಯನ್ನು ಅನುಸರಿಸುವುದರಿಂದ ಆಗುವ ಪ್ರಯೋಜನ ಅಪಾರ.

ಗಿಡ ಮರ – ಪದ್ಯ ಭಾಗ

– ಸತ್ಯಾನಂದ ಪಾತ್ರೋಟ

ಬೊಡ್ಡೆ ಕರಿದು ಎಲೆ ಹಸಿರು
ಹೂವು ನಾನಾ ತರತರ
ಎಂಥ ಸೊಗಸು ಏನು ಕಂಪು
ಬೆಳೆದು ನಿಂತ ಗಿಡ ಮರ


ಯಾರೇ ಬಂದು ಏನೇ ಮಾಡಲಿ
ಎಲ್ಲದಕ್ಕೂ ದಿವ್ಯ ಮೌನ
ರೆಂಬೆ ಕೊಂಬೆ ಚಿಗುರುವಲ್ಲಿ
ಕಡಲುಕ್ಕುವ ಚೇತನ


ಮನುಷ್ಯನಲ್ಲಿ ಮಾತು ಉಂಟು
ಮಾತಿನಂತೆ ಇಲ್ಲ ಮನ
ಲಿಂಗ ವರ್ಣ ಜಾತಿ ಧರ್ಮ
ಹಾಳು ಕೊಂಪೆ ಇವನ ಮನ


ಜಾತಿ-ಗೀತಿ, ಲಿಂಗ-ಧರ್ಮ
ಮೀರಿ ಬೆಳೆದ ಗಿಡಮರ
ಅವನು ಇವಳು ಅದು ಇದು
ಎಣಿಸುತಿಲ್ಲ ಒಂದು ದಿನ


ಬೊಡ್ಡೆ ಕರಿದು ಎಲೆ ಹಸಿರು
ಹೂವು ನಾನಾ ತರತರ
ಬಿಸಿಲು ಮಳೆ ಚಳಿಯ ತಡೆದು
ಅರಳುತಿಹವು ಅನುದಿನ.

ಆಶಯ : ಪ್ರಕೃತಿಯಲ್ಲಿ ಹಲವು ಬಣ್ಣ, ಹಲವು ಆಕಾರ, ಹಲವು ಸ್ವರೂಪದ ಗಿಡ ಮರಗಳಿವೆ. ಮನುಷ್ಯನೂ ಪ್ರಕೃತಿಯ ಒಂದು ಭಾಗ. ಮನುಷ್ಯರಲ್ಲಿಯೂ ಹಲವು ಬಗೆಯ ಜನರಿದ್ದಾರೆ. ಬೇರೆ ಬೇರೆ ಧರ್ಮ, ಆಚಾರ ವಿಚಾರಗಳನ್ನು ಅನುಸರಿಸುವವರಿದ್ದಾರೆ. ಆದರೆ ಗಿಡಮರಗಳಲ್ಲಿಲ್ಲದ ಭೇದ-ಭಾವ ಮನುಷ್ಯರಲ್ಲಿದೆ. ಇದು ಅಗತ್ಯವಿಲ್ಲ. ಭೇದ ಭಾವವಿಲ್ಲದೆ ಗಿಡಮರಗಳಂತೆ ಪರರಿಗೆ ಉಪಕಾರಿಗಳಾಗಿ ಬೆಳೆದರೆ ಮನುಷ್ಯನ ಬದುಕು ಸಾರ್ಥಕವಾಗುತ್ತದೆ.

ಕೃತಿಕಾರರ ಪರಿಚಯ

ಡಾ. ಸತ್ಯಾನಂದ ಪಾತ್ರೋಟ ಬಾಗಲಕೋಟೆಯಲ್ಲಿ ಜನಿಸಿದರು. ಕನ್ನಡದಲ್ಲಿ ಎಂ.ಎ., ಪಿಹೆಚ್.ಡಿ. ಪದವಿ ಪಡೆದಿರುವ ಇವರು ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ಇವರು ಕರಿನೆಲದ ಕಲೆಗಳು, ಜಾಜಿ ಮಲ್ಲಿಗೆ, ಕಲ್ಲಿಗೂ ಗೊತ್ತಿರುವ ಕಥೆ, ಕರಿಯ ಕಟ್ಟಿದ ಕವನ, ನನ್ನ ಕನಸಿನ ಹುಡುಗಿ, ನದಿಗೊಂದು ಕನಸು ಮತ್ತು ಅವಳು ಎಂಬ ಕವನ ಸಂಕಲನಗಳನ್ನೂ ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ, ಮತ್ತೊಬ್ಬ ಏಕಲವ್ಯ ಎಂಬ ನಾಟಕಗಳನ್ನು ಒಂದಿಷ್ಟು ಕ್ಷಣಗಳು ಎಂಬ ಪ್ರಬಂಧ ಸಂಕಲನವನ್ನು ಪ್ರಕಟಿಸಿರುತ್ತಾರೆ. ಎದೆಯ ಮಾತು ಎಂಬುದು ಇವರ ಕಾವ್ಯದ ಧ್ವನಿಸುರುಳಿ. ಕರ್ನಾಟಕ ಸರಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇವರನ್ನು ಪುರಸ್ಕರಿಸಿದೆ. ‘ಗಿಡಮರ’ ಎಂಬ ಈ ಕವನವನ್ನು ಅವರ ಕರಿಯ ಕಟ್ಟಿದ ಕವನ ಎಂಬ ಕವನಸಂಕಲನದಿಂದ ಆರಿಸಲಾಗಿದೆ.

ಪದಗಳ ಅರ್ಥ

ಬೊಡ್ಡೆ- ಮರದ ಕಾಂಡದ ಭಾಗ
ಅನುದಿನ – ದಿನನಿತ್ಯ
ಕರಿದು – ಕಪ್ಪಾದ ಬಣ್ಣ
ತರತರ – ವಿಧವಿಧವಾದ
ಕಡಲುಕ್ಕುವ – ಸಮುದ್ರ ಉಕ್ಕಿದಂತೆ
ಮನ – ಮನಸ್ಸು
ಹಾಳುಕೊಂಪೆ – ನಾಶಹೊಂದಿದ ಊರು.

ಬೊಡ್ಡೆ- ಮರದ ಕಾಂಡದ ಭಾಗ
ಅನುದಿನ – ದಿನನಿತ್ಯ
ಕರಿದು – ಕಪ್ಪಾದ ಬಣ್ಣ
ತರತರ – ವಿಧವಿಧವಾದ
ಕಡಲುಕ್ಕುವ – ಸಮುದ್ರ ಉಕ್ಕಿದಂತೆ
ಮನ – ಮನಸ್ಸು
ಹಾಳುಕೊಂಪೆ – ನಾಶಹೊಂದಿದ ಊರು.

ವಿಡಿಯೋ ಪಾಠಗಳು

Samveda – 7 | 7th Kannada FL | Gida Mara | Poem

https://youtu.be/dA1vKgCF-ng

7th std | new syllabus 2017 | 1st lang Kannada | 1st poem | lyrical video | ಬೊಡ್ಡೆ ಕರಿದು |gida mara | ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪ್ರಶ್ನೋತ್ತರಗಳು

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಚಟುವಟಿಕೆ


ನಿಮಗೆ ಗೊತ್ತಿರುವ, ಸ್ನೇಹಿತರಿಗೆ ಗೊತ್ತಿರುವ, ಮನೆಯಲ್ಲಿನ ಹಿರಿಯರಿಗೆ ಗೊತ್ತಿರುವ, ಮರಗಳ ಹೆಸರುಗಳನ್ನು ಪುನರಾವರ್ತನೆಯಾಗದಂತೆ ಪ್ರತ್ಯೇಕವಾಗಿ ಪಟ್ಟಿಮಾಡಿ.

ಧುಮಾ

ಸಾಲಧೂಪ

ಕಾಯಿಧೂಪ

 ಎಣ್ಣೆಮರ

 ಪಾಲಿ

ಕಿರಾಲಬೋಗಿ / ಬೋಗಿ

ಸಣ್ಣ ಹೊಳೆಗೆರೆ / ಹೊಳೆಗೆರೆ

ಗುಲ್ಲ

ಬಳಗಿ

ಅಶೋಕ

ದೊಡ್ಡ ಜಾಜಿಕಾಯಿ

ಬಿಳಿದೇವದಾರಿ / ಬಿಳಿ ಸೆಡಾರ್

ದಾಡ್ಸೆಲ್‌ / ಕಾಡು ತೆಂಗಿನಕಾಯಿ

ಕರಂಜಿಲಿ

ದಕ್ಷಿಣ ಭಾರತದ ಕನಕಚಂಪಾ / ಮಲವೂರಮ್

ಬಿಲ್ಲಿ

ರಕ್ತಚಂದನ / ರೆಡ್ಸ್ಯಾಂಡರ್ಸ್

ಚೆನ್ನುಡಿ

“ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ-ಈ ಪಂಚಮಂತ್ರಗಳು ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ, ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ”.
-ಕುವೆಂಪು (ಜ್ಞಾನಪೀಠ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳಿಂದ ಪುರಸ್ಕøತರಾದ ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ)