ಪಾಠದ ಪರಿಚಯ

ಈ ಅಧ್ಯಾಯದಲ್ಲಿ ಇತಿಹಾಸದ ಅರ್ಥವನ್ನು ಪರಿಚಯಿಸಲಾಗಿದೆ. ಇತಿಹಾಸದ ಉಪಯೋಗಗಳನ್ನು ವಿವರಿಸಲಾಗಿದೆ. ಇತಿಹಾಸವನ್ನು ರಚಿಸಲು ಬಳಸಿಕೊಳ್ಳಲಾಗುವ ವಿವಿಧ ಆಧಾರಗಳನ್ನು ಪಟ್ಟಿ ಮಾಡಲಾಗಿದೆ.

ಹಾಗೂ ಇತಿಹಾಸಕಾಲ ಮತ್ತು ಪ್ರಾಗೈತಿಹಾಸ ಕಾಲಗಳ ನಡುವಿನ ವ್ಯತ್ಯಾಸವನ್ನು ತಿಳಿಸಲಾಗಿದೆ. ಹಳೆಯ ಶಿಲಾಯುಗ, ಮಧ್ಯಶಿಲಾಯುಗ ಮತ್ತು ನವಶಿಲಾಯುಗ ಹಾಗೂ ಲೋಹಗಳ ಯುಗಗಳಲ್ಲಿ ಮಾನವನ ಬದುಕಿನಲ್ಲಿ ಉಂಟಾದ ಬದಲಾವಣೆಗಳನ್ನು ಗುರುತಿಸಲಾಗಿದೆ.

ಇತಿಹಾಸ ಎಂದರೇನು? ಈ ಹಿಂದೆ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ. ಇದು ಮನುಷ್ಯರು ನಡೆದು ಬಂದ ದಾರಿಯನ್ನು ಪರಿಚಯಿಸುತ್ತದೆ. ಆ ದಾರಿಯಲ್ಲಿ ಮಾನವರ ಸಫಲತೆ ಮತ್ತು ವಿಫಲತೆಗಳನ್ನು ವಿವರಿಸುತ್ತದೆ. ಇತಿಹಾಸವು ಘಟನೆಗಳನ್ನು ವಿವರಿಸುವಾಗ ಕಾಲ, ಸ್ಥಳ ಮತ್ತು ವ್ಯಕ್ತಿಯ ಕುರಿತು ನಿರ್ಧಿಷ್ಟತೆ ಮತ್ತು ಖಚಿತತೆಯನ್ನು ಹೊಂದಿರುತ್ತದೆ. ಅಂದರೆ, ಆ ಘಟನೆಯು ಯಾವಾಗ? ಎಲ್ಲಿ? ಮತ್ತು ಯಾರಿಂದ ನಡೆಯಿತು? ಎಂಬುದರ ಸ್ಪಷ್ಟತೆ ಇರುತ್ತದೆ. ಈ ಸ್ಪಷ್ಟತೆ ಇಲ್ಲವಾದರೆ ಇತಿಹಾಸವು ಕಥೆಯಾಗಿ ಹೋಗುತ್ತದೆ.

ಇತಿಹಾಸ ಏಕೆ ಬೇಕು? ಮಕ್ಕಳೇ, ನೀವು ಒಮ್ಮೆ ಬೆಂಕಿಯ ಜ್ವಾಲೆಯನ್ನು ಮುಟ್ಟುತ್ತೀರಿ ಎಂದಿಟ್ಟುಕೊಳ್ಳಿ. ಏನಾಗುತ್ತದೆ? ಬೆಂಕಿ ಸುಡುತ್ತದೆ ಅಲ್ಲವೆ? ಇದುವೇ ಅನುಭವ. ಮತ್ತೊಮ್ಮೆ ನೀವು ಬೆಂಕಿಯ ಜ್ವಾಲೆಯನ್ನು ಮುಟ್ಟುತ್ತೀರಾ? ಇಲ್ಲ. ಏಕೆಂದರೆ ಈ ಮೊದಲು ಬೆಂಕಿಯು ಸುಟ್ಟ ಅನುಭವ ನಿಮಗಿದೆ ಅಲ್ಲವೆ? ಹೌದು. ಇದನ್ನೇ ‘ನೆನಪು’ ಅಥವಾ ‘ಜ್ಞಾಪನಶಕ್ತಿ’ ಇಲ್ಲವೇ ‘ಸ್ಮರಣಶಕ್ತಿ’ ಎಂದು ಕರೆಯುತ್ತೇವೆ. ಒಂದು ವೇಳೆ ಮನುಷ್ಯರಿಗೆ ಸ್ಮರಣಶಕ್ತಿ ಇಲ್ಲದೆ ಹೋದರೆ ಏನು ಮಾಡುತ್ತಿದ್ದರು? ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುತ್ತಿದ್ದರು ಅಲ್ಲವೆ? ಇದರಿಂದ ಮಾನವರ ಪ್ರಗತಿ ಸಾಧ್ಯವಿಲ್ಲ.

ಹಾಗಾದರೆ ಮನುಷ್ಯರ ಪ್ರಗತಿಗೆ ಸ್ಮರಣಶಕ್ತಿ ಇದ್ದಂತೆ ಒಂದು ಸಮಾಜ ಅಥವಾ ಒಂದು ದೇಶದ ಪ್ರಗತಿಗೆ ಸ್ಮರಣಶಕ್ತಿ ಇರಬೇಕಲ್ಲವೆ? ಹೌದು ಇರಬೇಕು. ಹಾಗಾದರೆ ಯಾವುದು ಸಮಾಜಕ್ಕೆ ಅಥವಾ ದೇಶಕ್ಕೆ ಇರಬಹುದಾದ ಸ್ಮರಣಶಕ್ತಿ?

ಅದೇ ಇತಿಹಾಸ! ಹೌದು, ಮನುಷ್ಯನಿಗೆ ಸ್ಮರಣಶಕ್ತಿ ಇದ್ದಂತೆ ಒಂದು ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಅಷ್ಟೇ ಏಕೆ ಈ ಜಗತ್ತಿಗೆ ಇತಿಹಾಸವೇ ಸ್ಮರಣಶಕ್ತಿಯಾಗಿದೆ. ಇತಿಹಾಸವು ನಮ್ಮ ಪೂರ್ವಿಕರು ಕೈಗೊಂಡ ಒಳ್ಳೆಯ ಮತ್ತು ತಪ್ಪು ತೀರ್ಮಾನಗಳಿಂದ ಅನುಭವಿಸಿದ ಸುಖ-ದುಃಖಗಳನ್ನು, ತೊಂದರೆಗಳನ್ನು ತಿಳಿಸುತ್ತದೆ. ಅಲ್ಲದೆ, ಮುಂದಿನ ತೀರ್ಮಾನಗಳನ್ನು ಕೈಗೊಳ್ಳುವಾಗ ಎಚ್ಚರಿಸುತ್ತದೆ. ಇತಿಹಾಸದಲ್ಲಿನ ನಮ್ಮ ಪೂರ್ವಿಕರ ತತ್ವಾದರ್ಶಗಳು, ವಿಚಾರಧಾರೆಗಳು ಮುಂದಿನ ತಲೆಮಾರುಗಳಿಗೆ ಮಾದರಿಯೂ, ದಾರಿದೀಪವೂ ಆಗುತ್ತವೆ. ಅವರ ಶೌರ್ಯ, ಪರಾಕ್ರಮ ಮತ್ತು ತ್ಯಾಗ-ಬಲಿದಾನಗಳು ನಂತರದ ಪೀಳಿಗೆಗಳಿಗೆ ಸ್ಫೂರ್ತಿಯೂ ಆಗುತ್ತವೆ. ಇಷ್ಟೇ ಅಲ್ಲದೆ ನಮ್ಮ ಸಂಸ್ಕೃತಿ, ಪರಂಪರೆಯನ್ನೂ ಪರಿಚಯಿಸುವ ಮೂಲಕ ಅಭಿಮಾನ ಮತ್ತು ಗೌರವವನ್ನು ಇತಿಹಾಸವು ಮೂಡಿಸುತ್ತದೆ.

ಇತಿಹಾಸವನ್ನು ಹೇಗೆ ರಚಿಸಬೇಕು ಎಂಬುದನ್ನು ಮೊಟ್ಟಮೊದಲು ತೋರಿಸಿಕೊಟ್ಟವರು ಗ್ರೀಕ್ ದೇಶದ ಹೆರೊಡೋಟಸ್. ಆದ್ದರಿಂದ ಅವರನ್ನು ‘ಇತಿಹಾಸದ ಪಿತಾಮಹ’ ಎಂದು ಕರೆಯಲಾಗುತ್ತದೆ.

ಆಧಾರಗಳು: ಇತಿಹಾಸ ರಚಿಸುವವರನ್ನು ಇತಿಹಾಸಕಾರರು ಎನ್ನುತ್ತಾರೆ. ಇವರು ಇತಿಹಾಸವನ್ನು ನಿರ್ದಿಷ್ಟವಾಗಿ ಮತ್ತು ಖಚಿತವಾಗಿ ಹೇಳಲು ಸಾಕ್ಷ್ಯಾಧಾರಗಳನ್ನು ಬಳಸಿಕೊಳ್ಳುತ್ತಾರೆ. ಆದ್ದರಿಂದ ‘ಆಧಾರವಿಲ್ಲದೆ ಇತಿಹಾಸವಿಲ್ಲ’ ಎಂದು ಹೇಳಲಾಗುವುದು. ಇತಿಹಾಸದ ಆಧಾರಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ.

1. ಸಾಹಿತ್ಯ ಆಧಾರಗಳು

2. ಪುರಾತತ್ವ ಆಧಾರಗಳು

ಸಾಹಿತ್ಯ ಆಧಾರಗಳು: ಇತಿಹಾಸದ ಹಿನ್ನಲೆಯಲ್ಲಿ ಸಾಹಿತ್ಯ ಎಂದರೆ ಬರವಣಿಗೆ ಅಥವಾ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಂಗತಿಗಳು. ಇವುಗಳಲ್ಲಿ ಎರಡು ವಿಧ. ಒಂದು- ಲಿಖಿತ ಸಾಹಿತ್ಯ. ಎರಡು-ಮೌಖಿಕ ಸಾಹಿತ್ಯ. ಲಿಖಿತ ಸಾಹಿತ್ಯವನ್ನು ದೇಶೀಯ ಸಾಹಿತ್ಯ ಮತ್ತು ವಿದೇಶಿಯ ಸಾಹಿತ್ಯಗಳೆಂದು ವಿಂಗಡಿಸಲಾಗುವುದು. ಮೌಖಿಕ ಸಾಹಿತ್ಯವು ಜನಪದ ಗೀತೆ, ಕಥೆ, ಲಾವಣಿ, ಐತಿಹ್ಯ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಲಿಖಿತ ಸಾಹಿತ್ಯ ರಚಿಸುವವರು ಅಕ್ಷರಸ್ಥರಾದರೆ, ಮೌಖಿಕ ಸಾಹಿತ್ಯ ರಚಿಸುವವರು ಅನಕ್ಷರಸ್ಥರಾಗಿರುತ್ತಾರೆ.

ಪುರಾತತ್ವ ಆಧಾರಗಳು: ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳೇ ಪುರಾತತ್ವ ಆಧಾರಗಳು. ಭೂಮಿಯ ಒಳಗೆ ಹುದುಗಿ ಹೋಗಿರುವ ಅವಶೇಷಗಳನ್ನು ಉತ್ಖನನದ ಮೂಲಕ ಹೊರತೆಗೆಯಲಾಗುವುದು. ಪುರಾತತ್ವ ಆಧಾರಗಳ ವ್ಯಾಪ್ತಿಗೆ ಮಡಕೆ ಚೂರುಗಳು, ನಾಣ್ಯಗಳು, ಶಾಸನಗಳು, ಸ್ಮಾರಕಗಳು ಮತ್ತಿತರ ಅವಶೇಷಗಳು ಒಳಪಡುತ್ತವೆ.

ಉತ್ಖನನ ಎಂದರೆ ಮಾನವನ ಪ್ರಾಚೀನ ಅವಶೇಷ ಅಥವಾ ಪಳೆಯುಳಿಕೆಗಳನ್ನು ಹೊರತೆಗೆಯಲು ನಡೆಸುವ ವೈಜ್ಞಾನಿಕವಾದ ಭೂ ಅಗೆತ. ಬ್ರೆಷ್, ಕರಣೆ, ಚಾಕು, ಮರದ ದಬ್ಬಳದಂತಹ ಮೊನಚಾದ ಸಾಧನಗಳನ್ನು ಬಳಸಿ ನಿಧಾನವಾಗಿ ಮಣ್ಣಿನ ಪದರಗಳನ್ನು ಸರಿಸುತ್ತಾರೆ. ಆ ಮಣ್ಣಿನಲ್ಲಿ ಸಿಗುವ ಮಡಕೆ ಚೂರು, ನಾಣ್ಯ, ಮಣಿ, ಹರಳು, ಎಲುಬು ಮುಂತಾದ ಅವಶೇಷಗಳನ್ನು ಹೊರ ತೆಗೆದು ಅಧ್ಯಯನಕ್ಕೆ ಒಳಪಡಿಸುತ್ತಾರೆ.

ಉತ್ಖನನ
ಉತ್ಖನನ
ಉತ್ಖನನ ಮಾಡುವ ವಿಧಾನ

ಇತಿಹಾಸದಲ್ಲಿ ಕಾಲಗಣನೆ (ಸಾ.ಶ.)

ಕಾಲಗಣನೆಯನ್ನು ಮಹತ್ವಪೂರ್ಣವಾದ ದಿನದಿಂದ ಆರಂಭಿಸಲಾಗುತ್ತದೆ. ಅಂಥ ಕಾಲಗಣನೆಯನ್ನು ಶಕ(ಶಕೆ) ಎನ್ನುತ್ತೇವೆ. ಸಾ.ಶ. ಯೇಸುಕ್ರಿಸ್ತರು ಬದುಕಿದ ಕಾಲಾವಧಿಯ ನಿರ್ದಿಷ್ಟ ವರ್ಷದಿಂದ ಪ್ರಾರಂಭವಾಗುತ್ತದೆ. ವಿಜಯನಗರ ಸಾಮ್ರಾಜ್ಯವು ಸಾ.ಶ. 1336ರಲ್ಲಿ ಸ್ಥಾಪನೆಯಾಯಿತು ಎಂದರೆ ಅದು ಸ್ಥಾಪನೆಯಾಗಿ ಯೇಸುವಿನ ವರ್ಷದಿಂದ 1336 ವರ್ಷಗಳು ಕಳೆದಿವೆ ಎಂದು ಅರ್ಥ.

* ಕಾಲಗಣನೆಯನ್ನು ಇನ್ನಿತರ ಶಕೆಗಳಲ್ಲಿಯೂ ಮಾಡುತ್ತಾರೆ. ಶಾಲಿವಾಹನ, ಗುಪ್ತ, ವಿಕ್ರಮ, ಹಿಜರ ಇನ್ನೂ ಮುಂತಾದ ಶಕೆಗಳಿವೆ. ಸಾಮಾನ್ಯವಾಗಿ ಈಗ ಇತಿಹಾಸ ನಿರೂಪಣೆಯಲ್ಲಿ ಸಾಮಾನ್ಯಶಕ ಎಂಬುದು ರೂಢಿಯಲ್ಲಿದೆ.

* ಒಂದು ಶತಮಾನವೆಂದರೆ ನೂರು ವರ್ಷಗಳು. ನಾವು ಸಾಮಾನ್ಯಶಕ 21ನೇ ಶತಮಾನದವರು (ಸಾ.ಶ. 2001 ರಿಂದ ಸಾ.ಶ. 2100).

* ಇಸವಿಗಳು ಮಾನವನ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಘಟನೆಗಳು ನಡೆದ ಕಾಲಕ್ರಮವನ್ನು ತಿಳಿಸುವುದೇ ಇಸವಿಗಳನ್ನು ಸೂಚಿಸುವ ಉದ್ದೇಶವಾಗಿದೆ. ಇಸವಿಗಳನ್ನು ಕಂಠಪಾಠ ಮಾಡುವುದಕ್ಕಾಗಿ ಮಾತ್ರವೇ ಹೇಳಲಾಗಿಲ್ಲ.

ಕ್ರಿಸ್ತಶಕ ಮತ್ತು ಕ್ರಿಸ್ತ ಪೂರ್ವದ ನಡುವಿನ ವ್ಯತ್ಯಾಸ | ಇತಿಹಾಸದ ತರಗತಿ | Difference between BC ,BCE and AD

ಸಾಮಾನ್ಯವಾಗಿ ಇತಿಹಾಸವನ್ನು ಮೂರು ಪ್ರಧಾನ ಕಾಲಗಳಾಗಿ ವರ್ಗೀಕರಿಸಿಕೊಳ್ಳಬಹುದು. ಅವುಗಳೆಂದರೆ:

1. ಪ್ರಾಗೈತಿಹಾಸ ಕಾಲ (Pre historic Period)

2. ಪೂರ್ವಭಾವಿ ಇತಿಹಾಸಕಾಲ (Proto historic Period) ಮತ್ತು

3. ಇತಿಹಾಸಕಾಲ (Historic Period)

ಪ್ರಾಗೈತಿಹಾಸ ಕಾಲ (Pre historic Period)
ಪೂರ್ವಭಾವಿ ಇತಿಹಾಸಕಾಲ (Proto historic Period)

ಮಾನವರ ಇತಿಹಾಸದಲ್ಲಿ ಪ್ರಾಗೈತಿಹಾಸ ಕಾಲವೇ ಶೇಕಡ 99.9 ರಷ್ಟು ಕಾಲಾವಧಿಯನ್ನು ಒಳಗೊಂಡಿದೆ. ಆದರೆ ಆ ಕಾಲದ ಕುರಿತು ಅಧ್ಯಯನ ಮಾಡಲು ಇರುವ ಆಧಾರಗಳು ಬಹಳ ಕಡಿಮೆ. ಆದ್ದರಿಂದ ಇತಿಹಾಸದಲ್ಲಿ ಪ್ರಾಗೈತಿಹಾಸಕ್ಕೆ ಕೊಟ್ಟಿರುವ ಸ್ಥಳಾವಕಾಶವೂ ಕಡಿಮೆಯೇ ಆಗಿದೆ. ಮೇಲಿನ ಮೂರು ಕಾಲಗಳನ್ನು ವರ್ಗೀಕರಿಸಲು ಬಳಸುವ ಮಾನದಂಡವೇ ಅಕ್ಷರ ಜ್ಞಾನವಾಗಿದೆ.

ಅಕ್ಷರ ಪರಿಚಯವೇ ಇಲ್ಲದ ಕಾಲಘಟ್ಟವನ್ನು `ಪ್ರಾಗೈತಿಹಾಸಿಕ ಕಾಲ’ ಎಂದು ಕರೆಯಲಾಗುವುದು (ಉದಾಹರಣೆಗೆ: ಶಿಲಾಯುಗಗಳು).

ಯಾವೊಂದು ಕಾಲದಲ್ಲಿ ಅಕ್ಷರಗಳ ತಿಳುವಳಿಕೆ ಇದ್ದು ಅವುಗಳನ್ನು ಇಂದು ಓದಲು ಸಾಧ್ಯವಾಗಿಲ್ಲದಿದ್ದರೆÉ ಆ ಕಾಲಘಟ್ಟವನ್ನು `ಪೂರ್ವಭಾವಿ ಇತಿಹಾಸಕಾಲ’ ಎಂದು ಕರೆಯಲಾಗುವುದು (ಉದಾಹರಣೆಗೆ: ಹರಪ್ಪ ನಾಗರಿಕತೆಯ ಕಾಲ).

ಯಾವ ಕಾಲಘಟ್ಟದಲ್ಲಿ ಅಕ್ಷರ ಪರಿಚಯವಿರುವುದೊ ಮತ್ತು ಆ ಅಕ್ಷರಗಳನ್ನು ಇಂದು ಓದಲಾಗುವುದೊ ಆ ಕಾಲವನ್ನು `ಇತಿಹಾಸಕಾಲ’ ಎಂದು ಕರೆಯಲಾಗುವುದು

ಜೀವ ವಿಕಾಸದ ಹಾದಿಯಲ್ಲಿ ಮೊದಲು ಏಕಕೋಶ ಜೀವಿಗಳು ನಂತರ ಮೃದ್ವಂಗಿಗಳು, ಮೀನು, ಸಸ್ಯ, ಕೀಟ, ಉಭಯವಾಸಿ, ರೆಕ್ಕೆಯುಳ್ಳ ಕೀಟ, ಸರಿಸೃಪ, ಪಕ್ಷಿಗಳು, ಸಸ್ತನಿಗಳು, ಹೂಬಿಡುವ ಸಸ್ಯ, ಹುಲ್ಲು, ವಾನರ, ದ್ವಿಪಾದಿಗಳು ವಿಕಾಸ ಹೊಂದಿದವು. ಸುಮಾರು 18 ಲಕ್ಷ ವರ್ಷಗಳ ಹಿಂದೆ ಮಾನವರ ವಿಕಾಸವಾಯಿತು. ಆಧುನಿಕ ಮಾನವರ ದೈಹಿಕ ರಚನೆಯನ್ನು ಹೊಂದಿದ್ದ ಮಾನವರು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡರು. ಇವರು ಆಫ್ರಿಕಾದಿಂದ ಪ್ರಪಂಚದ ವಿವಿಧ ಭೂಭಾಗಗಳಿಗೆ ವಲಸೆ ಹೋಗಿ ನೆಲೆಸಿದರೆಂದು ಹೇಳಲಾಗುತ್ತದೆ. ಈ ವಾದವು ಇಂದು ಸಾಕಷ್ಟು ವಿಮರ್ಶೆಗೂ ಒಳಗಾಗಿದೆ.

ಪ್ರಾಗೈತಿಹಾಸಿಕ ಕಾಲದಲ್ಲಿ ಮೂರು ಹಂತಗಳಿವೆ:

1. ಹಳೆಯ ಶಿಲಾಯುಗ

2. ಮಧ್ಯಶಿಲಾಯುಗ

3. ನವಶಿಲಾಯುಗ.

ಈ ಕಾಲವು ಮಾನವರ ಇತಿಹಾಸದ ಆರಂಭಿಕ ಪುರಾತತ್ವಿಕ (Archaeological) ಹಂತವಾಗಿದೆ. ಈ ಕಾಲದ ಮಾನವರು ಹಣ್ಣು, ಹಂಪಲು, ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದರು. ಅಲೆಮಾರಿಗಳಾಗಿದ್ದ ಇವರು ಆಹಾರವನ್ನು ಅರಸುತ್ತಾ ಗವಿಗಳಲ್ಲಿ, ಕಲ್ಲಾಸರೆಗಳಲ್ಲಿ ವಾಸಿಸುತ್ತಿದ್ದರು. ಹೆರೆಚಕ್ಕೆ, ಚಾಕು, ಕಲ್ಲುಳಿ, ಮೊನೆ ಮುಂತಾದ ದೊಡ್ಡ ದೊಡ್ಡ ಶಿಲಾ ಉಪಕರಣಗಳನ್ನು ಬೆಣಚುಕಲ್ಲುಗಳಿಂದ ತಯಾರಿಸಿಕೊಳ್ಳುತ್ತಿದ್ದರು. ಎಲೆ ಮತ್ತು ತೊಗಟೆಗಳನ್ನು ಹೊದಿಕೆಗಳಾಗಿ ಬಳಸುತ್ತಿದ್ದರು. ಎಲ್ಲಾ ಕಾಲಗಳಲ್ಲಿಯೂ ಹಣ್ಣು, ಹಂಪಲು, ಗೆಡ್ಡೆ ಗೆಣಸುಗಳು ದೊರಕುತ್ತಿರಲಿಲ್ಲ. ಹಳೆಯ ಶಿಲಾಯುಗದ ಕೊನೆಯ ಘಟ್ಟದಲ್ಲಿ ಆಹಾರಕ್ಕಾಗಿ ಬೇಟೆಯಾಡುವುದು ಮತ್ತು ಮೀನು ಹಿಡಿಯುವುದನ್ನು ಕಲಿತರು. ಮೊದಲ ಬಾರಿಗೆ ಬೆಂಕಿಯ ಪರಿಚಯವಾಯಿತು. ಹಳೆಯ ಶಿಲಾಯುಗದ ಪ್ರಮುಖ ನೆಲೆಗಳೆಂದರೆ ಮಧ್ಯಪ್ರದೇಶದ ಬೇಲಾನ್ ಕಣಿವೆ, ಕರ್ನಾಟಕದ ಹುಣಸಗಿ ಮತ್ತು ಬೈಚ್‍ಬಾಳ್ ಪ್ರದೇಶ, ಆಂಧ್ರಪ್ರದೇಶದ ಕರ್ನೂಲ್, ಅಮರಾವತಿ, ತಮಿಳುನಾಡಿನ ಅತ್ತಿರಾಮ್‍ಪಕ್ಕಂ ಮುಂತಾದವುಗಳು. ಸಾಮಾನ್ಯವಾಗಿ ಹಳೆಯ ಶಿಲಾಯುಗದ ಕಾಲವನ್ನು 5 ಲಕ್ಷ ವರ್ಷಗಳಿಂದ 12 ಸಾವಿರ ವರ್ಷಗಳವರೆಗೆ ಗುರುತಿಸಲಾಗುತ್ತದೆ.

Prehistory | Educational Video for Kids
Stone Age | Prehistoric age | Paleolithic | Mesolithic | Neolithic | Stone Age Humans

ಇದು ಹಳೆಯ ಶಿಲಾಯುಗ ಮತ್ತು ನವಶಿಲಾಯುಗದ ನಡುವಿನ ಸ್ಥಿತ್ಯಂತರ ಕಾಲವಾಗಿದೆ. ಆದ್ದರಿಂದ ಇದನ್ನು ಮಧ್ಯಶಿಲಾಯುಗ ಎಂದು ಕರೆಯಲಾಗುವುದು. ಈ ಕಾಲದ ಮಾನವರು ದೊಡ್ಡ ದೊಡ್ಡ ಶಿಲಾ ಉಪಕರಣಗಳ ಬದಲು ಕೌಶಲ್ಯಭರಿತ ಕಿರು ಶಿಲಾಯುಧಗಳನ್ನು ಬಳಸಲಾರಂಭಿಸಿದರು. ಆದ್ದರಿಂದ ಈ ಕಾಲವನ್ನು ಸೂಕ್ಷ್ಮ ಶಿಲಾಯುಗ Microlithic age) ಎಂದೂ ಕರೆಯಲಾಗುವುದು. ಈ ಕಿರು ಆಯುಧಗಳನ್ನು ಬಾಣದ ತುದಿಗೆ ಅಥವಾ ಕಟ್ಟಿಗೆಯ ತುದಿಗೆ ಸಿಕ್ಕಿಸಿ ಭರ್ಜಿಯಂತೆ ಬಳಸಿ ಬೇಟೆಯಾಡುತ್ತಿದ್ದರು. ಕಾಡು ಧಾನ್ಯಗಳನ್ನು ಆಹಾರಕ್ಕಾಗಿ ಸಂಗ್ರಹಿಸುತ್ತಿದ್ದರು. ಧಾನ್ಯಗಳಾಗಲಿ, ಬೇಟೆಗಳಾಗಲಿ ನಿರಂತರ ದೊರಕುತ್ತಿರಲಿಲ್ಲ. ಅನೇಕ ವೇಳೆ ಹಸಿವಿನಿಂದ ಕಾಲಕಳೆಯಬೇಕಾದ ಸಂದರ್ಭಗಳು ಬರುತ್ತಿದ್ದವು. ಅದಕ್ಕಾಗಿ ಇವರು ಕಂಡು ಕೊಂಡ ಮಾರ್ಗ ಎಂದರೆ, ಬೇಟೆಯ ಸಂದರ್ಭದಲ್ಲಿ ಗಾಯಗೊಂಡು ಬದುಕುಳಿದ ಪ್ರಾಣಿಗಳು ಅಥವಾ ದೊರೆತ ಮರಿಗಳನ್ನು ತಂದು ತಮ್ಮೊಟ್ಟಿಗೆ ಸಾಕುವುದು. ಒಂದು ವಿಧದಲ್ಲಿ ಈ ಪ್ರಾಣಿಗಳು ಅವರಿಗೆ ಕಾಯ್ದಿರಿಸಿದ ತುರ್ತುಕಾಲದ ಆಹಾರಗಳಾಗಿ ಬಳಕೆಯಾಗುತ್ತಿದ್ದವು. ಇದು ನಿಧಾನವಾಗಿ ಪಶುಪಾಲನೆಗೆ ಚಾಲನೆ ಕೊಟ್ಟಿತು. ಮಧ್ಯಶಿಲಾಯುಗದ ಮಾನವರು ತಮ್ಮ ಮತ್ತು ಪಶುಗಳ ಆಹಾರಕ್ಕಾಗಿ ನಿರಂತರ ಅಲೆದಾಡುತ್ತಿದ್ದರು. ಬಿಡುವಿನ ವೇಳೆಗಳಲ್ಲಿ ಬೀಡು ಬಿಟ್ಟ ಸ್ಥಳಗಳ ಕಲ್ಲಾಸರೆಗಳ ಮೇಲೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಪ್ರಾಣಿಗಳ ಚರ್ಮಗಳನ್ನು ತಮ್ಮ ಮೇಲೊದಿಕೆಗಳಾಗಿ ಬಳಸುತ್ತಿದ್ದರು. ಬೆಂಕಿಯ ಪರಿಚಯ ಚೆನ್ನಾಗಿ ಇದ್ದಿತು. ಈ ಕಾಲದ ನೆಲೆಗಳಲ್ಲಿ ಮಧ್ಯಪ್ರದೇಶದ ಭೀಮ್‍ಬೇಟ್ಕ, ಆದಮ್‍ಗರ್, ಕರ್ನಾಟಕದ ಬ್ರಹ್ಮಗಿರಿ, ಕನಗನಹಳ್ಳಿ, ರಾಜಸ್ಥಾನದ ಬಾಗೊರ್, ಗಣೇಶ್ವರ್, ಪಶ್ಚಿಮ ಬಂಗಾಳದ ಬಿರ್‍ಭಾನ್‍ಪುರ್, ಆಂಧ್ರಪ್ರದೇಶದ ವಾನ್‍ಪಸಾರಿ, ಉತ್ತರ ಪ್ರದೇಶದ ಸರಾಯ್ ನಹರ್ ರಾಯ್, ಮಹಾದಹ ಮುಂತಾದವು ಪ್ರಮುಖವಾದವು. ಮಧ್ಯಶಿಲಾಯುಗದ ಕಾಲವು ಇಂದಿಗೆ 12000 ವರ್ಷಗಳಿಂದ 9000 ವರ್ಷಗಳವರೆಗೆ ಇದ್ದಿತ್ತೆಂದು ಸಾಮಾನ್ಯವಾಗಿ ಗುರುತಿಸುವುದುಂಟು.

Early Palaeolithic Age | The Stone Age
ಆಧುನಿಕ ಟರ್ಕಿಯ ಅಸಿಕ್ಲಿ ಹೋಯುಕ್‌ನಲ್ಲಿ  ಪೂರ್ವ-ಕುಂಬಾರಿಕೆ ನವಶಿಲಾಯುಗದ B ವಸತಿಗಳ ಪುನರ್ನಿರ್ಮಾಣ

ಮಧ್ಯಶಿಲಾಯುಗದ ಮಾನವರು ಪಶುಪಾಲಕರಾದ್ದರಿಂದ ಅವರಿಗೂ ಅವರ ಪಶುಗಳಿಗೂ ಆಗಾಗ ಆಹಾರದ ಅಭಾವ ಸೃಷ್ಠಿಯಾಗುತ್ತಿತ್ತು. ಆದ್ದರಿಂದ ಆ ಜನರು ಆಹಾರಕ್ಕಾಗಿ ಅಲೆಯುವುದನ್ನು ಬಿಟ್ಟು ನವಶಿಲಾಯುಗದಲ್ಲಿ ಆಹಾರ ಉತ್ಪಾದನೆಗೆ ಮುಂದಾದರು. ನದಿತೀರಗಳಲ್ಲಿ ಫಲವತ್ತಾದ ಮೆಕ್ಕಲು ಮಣ್ಣಿನಲ್ಲಿ ಕೃಷಿಯನ್ನು ಆರಂಭಿಸಿದರು. ಕೃಷಿಯು ನವಶಿಲಾಯುಗದ ಜನರಿಗೆ ಧಾನ್ಯವನ್ನು ಮತ್ತು ಅವರ ಪಶುಗಳಿಗೆ ಮೇವನ್ನು ಪೂರೈಸಿತು. ಆದ್ದರಿಂದ ಅಲೆಮಾರಿ ಬದುಕನ್ನು ತೊರೆದು ಸೂಕ್ತ ಪ್ರದೇಶದಲ್ಲಿ ನೆಲೆಸಲಾರಂಭಿಸಿದರು. ಹೀಗೆ ಕೃಷಿಯು ಸಂಸ್ಕøತಿ ಮತ್ತು ನಾಗರಿಕತೆಗಳ ಉದಯಕ್ಕೆ ಮೊದಲ ಹೆಜ್ಜೆಯಾಯಿತು. ಭಾರತ ಉಪಖಂಡದಲ್ಲಿ ಕೃಷಿಯ ಆರಂಭಿಕ ಕುರುಹುಗಳು ಪಾಕಿಸ್ತಾನದ ಮೆಹರ್‍ಗರ್ ನೆಲೆಯಲ್ಲಿ ಕಂಡುಬಂದಿದೆ.

ಇಲ್ಲಿನ ಜನರು ವಾಸಕ್ಕೆ ಒಣ ಇಟ್ಟಿಗೆಗಳಿಂದ ಮನೆಗಳನ್ನು ನಿರ್ಮಿಸಿದರೆ, ಕಾಶ್ಮೀರದ ಬುರ್ಜ್‍ಹೋಮ್ ಪ್ರದೇಶದ ಜನರು ನೆಲದೊಳಗೆ ಗುಹೆಗಳನ್ನು ನಿರ್ಮಿಸಿಕೊಂಡಿದ್ದರು. ಕೃಷಿಯಲ್ಲಿ ಉತ್ಪಾದಿಸಿದ ಧಾನ್ಯವನ್ನು ಸಂಗ್ರಹಿಸಿಡುವ ಸಮಸ್ಯೆ ಎದುರಾದಾಗ ಕೈಯಿಂದ ಮಣ್ಣಿನ ಮಡಕೆ ಮಾಡುವ ವಿಧಾನ ಕಂಡುಕೊಂಡರು. ಅಲ್ಲದೆ ಹೆರೆಯುವ, ಕುಟ್ಟುವ, ಬೀಸುವ ಸಾಧನಗಳನ್ನು ಬಳಕೆಗೆ ತಂದರು. ಈ ಕಾಲದಲ್ಲಿಯೇ ಆರಂಭಿಕ ಹಳ್ಳಿಗಳು ಏಳಿಗೆಗೆ ಬಂದವು. ಚಕ್ರದ ಪರಿಚಯವಾದ ನಂತರ ಗುಣಾತ್ಮಕ ಮತ್ತು ವೈವಿಧ್ಯಮಯ ಮಡಕೆಗಳ ತಯಾರಿಕೆ ಸಾಧ್ಯವಾಯಿತು. ಈ ಕಾಲದಲ್ಲಿ ಕಲ್ಲಿನ ಆಯುಧಗಳನ್ನು ಚೆನ್ನಾಗಿ ಉಜ್ಜಿ ನಯಗೊಳಿಸಿ ಬಳಸುತ್ತಿದ್ದರು. ಬಳ್ಳಾರಿ ಸಮೀಪದ ಸಂಗನಕಲ್ಲು ಈ ರೀತಿಯ ಆಯುಧ ಉತ್ಪಾದನಾ ನೆಲೆಯಾಗಿತ್ತು. ವಿಶೇಷವಾಗಿ ಕೈಗೊಡಲಿ, ಮೂಳೆಗಳಿಂದ ತಯಾರಿಸಿದ ಆಯುಧಗಳನ್ನು ಬಳಸುತ್ತಿದ್ದರು. ಕರ್ನಾಟಕದ ಬನಹಳ್ಳಿ, ಬ್ರಹ್ಮಗಿರಿ, ಬೂದಿಹಾಳ, ಹಳ್ಳೂರು, ಪಿಕ್ಲಿಹಾಳ, ಟಿ.ನರಸಿಪುರ, ಉತ್ನೂರು, ಬಿಹಾರದ ಚಿರಾಂಡ್ ಮುಂತಾದ ಕಡೆಗಳಲ್ಲಿ ನವಶಿಲಾಯುಗದ ನೆಲೆಗಳು ಕಂಡು ಬಂದಿವೆ. ಸಾಮಾನ್ಯವಾಗಿ ಇದರ ಕಾಲವನ್ನು ಇಂದಿಗೆ 9000 ಇಂದ 5000 ವರ್ಷಗಳವರೆಗೆ ಗುರುತಿಸಬಹುದು.

ನವ ಶಿಲಾಯುಗ| HISTORY IN KANNADA

ನವಶಿಲಾಯುಗದ ಕೊನೆಯ ಕಾಲಕ್ಕೆ ಲೋಹಗಳ ಬಳಕೆ ಆರಂಭವಾಗಿತ್ತು. ಮೊದಲು ಮಾನವರು ಬಳಸಿದ ಲೋಹ ತಾಮ್ರ. ತಾಮ್ರಕ್ಕೆ ತವರವನ್ನು ಸೇರಿಸಿ ಕಂಚು ಉತ್ಪಾದಿಸುವುದನ್ನು ಕಲಿತರು. ಕಂಚು ತಾಮ್ರಕ್ಕಿಂತ ಗಡುಸಾದ ಒಂದು ಮಿಶ್ರಲೋಹ.

The Age of Metals – 5 Things You Should Know – History for Kids

ತಾಮ್ರ ಮತ್ತು ಕಂಚಿನ ಆಯುಧಗಳ ಪ್ರಮಾಣ ಅತ್ಯಲ್ಪವಾಗಿದ್ದರಿಂದ ಅವುಗಳ ಜೊತೆಯಲ್ಲಿಯೇ ಶಿಲಾಯುಧಗಳೂ ಮುಂದುವರೆದವು. ಆದ್ದರಿಂದ ಈ ಕಾಲವನ್ನು ತಾಮ್ರ ಮತ್ತು ಕಂಚಿನ ಶಿಲಾಯುಗ ಎಂದು ಕರೆಯಲಾಗುವುದು. ಇದು 5000 ವರ್ಷಗಳಿಂದೀಚೆಗೆ ಕಂಡುಬರುತ್ತದೆ. ಕೃಷಿ ಮತ್ತು ಪಶುಪಾಲನೆ ಪ್ರಧಾನ ಉದ್ಯೋಗವಾಗಿತ್ತು. ಚಕ್ರಗಳಿಂದ ಮಾಡಿದ ಅಲಂಕೃತ ಮಡಕೆಗಳು ಈ ಕಾಲದಲ್ಲಿ ಕಂಡು ಬರುತ್ತವೆ. ತಾಮ್ರದ ಉಪಕರಣಗಳು, ಆಭರಣಗಳೂ ದೊರಕಿವೆ. ಭೂಮಿಯನ್ನು ಆಳವಾಗಿ ಉಳಲು ಮತ್ತು ಅರಣ್ಯ ಕಡಿದು ಕೃಷಿ ಭೂಮಿಯಾಗಿ ಪರಿವರ್ತಿಸಲು ಕಂಚಿನ ಉಪಕರಣಗಳು ನೆರವಾದವು. ಇದರಿಂದಾಗಿ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಹೆಚ್ಚಳ ಕಂಡಿತು. ಹೆಚ್ಚುವರಿ ಧಾನ್ಯವನ್ನು ಅಗತ್ಯವಿರುವ ಪ್ರದೇಶಗಳಿಗೆ ಕಳುಹಿಸಿಕೊಡುವ ಮೂಲಕ ವ್ಯಾಪಾರ ವಹಿವಾಟು ಆರಂಭವಾದವು. ಪರಿಣಾಮವಾಗಿ ವಾಯುವ್ಯ ಭಾರತದಲ್ಲಿ ಸಿಂಧೂ ಮತ್ತು ಅದರ ಉಪನದಿಗಳ ಕೊಳ್ಳದಲ್ಲಿ ಹರಪ್ಪ ನಾಗರಿಕತೆಯಂತಹ ಬೃಹತ್ ಸಂಸ್ಕೃತಿಯು ತಲೆ ಎತ್ತಲು ಸಾಧ್ಯವಾಯಿತು. ಇದನ್ನು ಮೊದಲ ನಗರೀಕರಣವೆಂದು ಇತಿಹಾಸಕಾರರು ಗುರುತಿಸುತ್ತಾರೆ. ದಕ್ಷಿಣ ಭಾರತದಲ್ಲಿ ತಾಮ್ರಕ್ಕೆ ಹೋಲಿಸಿದಾಗ ಕಂಚಿನ ಬಳಕೆ ಹೆಚ್ಚಾಗಿರಲಿಲ್ಲ. ಕರ್ನಾಟಕದ ಹಳ್ಳೂರು, ಬನಹಳ್ಳಿ, ಬ್ರಹ್ಮಗಿರಿ ಮುಂತಾದ ಕಡೆಗಳಲ್ಲಿ ತಾಮ್ರ ಮತ್ತು ಕಂಚಿನ ಶಿಲಾಯುಗದ ಆಧಾರಗಳು ದೊರೆತಿವೆ.

The Bronze Age | Educational Video for Kids

ಕಬ್ಬಿಣ ಅತ್ಯಂತ ಗಡುಸಾದ ಲೋಹ. ಇದು ದಕ್ಷಿಣ ಭಾರತದಲ್ಲಿ ತಾಮ್ರಕ್ಕೂ ಮೊದಲೇ ಬಳಕೆಯಲ್ಲಿತ್ತು. ಕಬ್ಬಿಣವು 3500 ವರ್ಷಗಳ ಹಿಂದೆಯೇ ದಕ್ಷಿಣ ಭಾರತದಲ್ಲಿ ಬಳಕೆಗೆ ಬಂದಿತ್ತು. ಈ ಕಾಲವನ್ನು ಬೃಹತ್ ಶಿಲಾ ಸಂಸ್ಕøತಿಯ ಕಾಲವೆಂದೂ ಕರೆಯುತ್ತಾರೆ. ಕಬ್ಬಿಣದ ಆಯುಧ ಮತ್ತು ಸಲಕರಣೆಗಳು ಕೃಷಿ ಹಾಗೂ ಕರಕುಶಲ ಉತ್ಪಾದನೆಯಲ್ಲಿ ನೆರವಾದವು. ಉತ್ತರ ಭಾರತದಲ್ಲಿ ಕಬ್ಬಿಣದ ಬಳಕೆ ತೀವ್ರಗೊಂಡಂತೆ ಕೃಷಿ ಚಟುವಟಿಕೆಗಳು ಗರಿಗೆದರಿತು. ಇದರಿಂದ ಹೆಚ್ಚುವರಿ ಉತ್ಪಾದನೆ ಉಂಟಾಯಿತು. ಹೆಚ್ಚುವರಿ ಉತ್ಪಾದನೆಯನ್ನು ನಿಯಂತ್ರಿಸುವ ವರ್ಗ ಪ್ರಭುತ್ವವಾಗಿ 2600 ವರ್ಷಗಳ ಹಿಂದೆ ಉದಯವಾದವು. ಅವುಗಳೇ ಗಣರಾಜ್ಯಗಳು. ಆನಂತರ ನಂದ, ಮೌರ್ಯ ಸಾಮ್ರಾಜ್ಯಗಳು ಪ್ರವರ್ಧಮಾನಕ್ಕೆ ಬಂದವು. ಕಬ್ಬಿಣ ಶಿಲಾಯುಗಕ್ಕೆ ಸೇರಿದ ಕರ್ನಾಟಕದ ಪ್ರಮುಖ ನೆಲೆಗಳೆಂದರೆ ಬನಹಳ್ಳಿ, ಹಿರೆಬೆನಕಲ್ಲು, ಬ್ರಹ್ಮಗಿರಿ, ಕೊಪ್ಪ, ಹೆಗ್ಗಡೆಹಳ್ಳಿ, ಟಿ.ನರಸಿಪುರ, ಹೆಮ್ಮಿಗೆ, ಹಳ್ಳೂರು, ಜಡಿಗೇನಹಳ್ಳಿ, ಸಾವನದುರ್ಗ, ಹುತ್ರಿದುರ್ಗ, ಪಾಂಡವರದಿಣ್ಣೆ ಮೊದಲಾದವುಗಳು.

ದಿ ವಾರಿಯರ್ ಆಫ್ ಹಿರ್ಷ್‌ಲ್ಯಾಂಡೆನ್ (ಜರ್ಮನ್: ಕ್ರೀಗರ್ ವಾನ್ ಹಿರ್ಷ್‌ಲ್ಯಾಂಡೆನ್ ) ನ ನಕಲು, ಮರಳುಗಲ್ಲಿನಿಂದ ಮಾಡಿದ ನಗ್ನ ಇಥೈಫಾಲಿಕ್ ಯೋಧನ ಪ್ರತಿಮೆ , ಆಲ್ಪ್ಸ್‌ನ ಉತ್ತರದಲ್ಲಿರುವ ಅತ್ಯಂತ ಹಳೆಯ ಕಬ್ಬಿಣಯುಗದ ಜೀವನ ಗಾತ್ರದ ಮಾನವರೂಪದ ಪ್ರತಿಮೆ .
ಮಧ್ಯ ಶಿಲಾಯುಗ ಕಲ್ಲಿನ ಮೇಲೆ ಚಿತ್ರಿಸಿರುವುದು
ಮಧ್ಯ ಶಿಲಾಯುಗ – ಪಶು ಸಾಕಣೆ
ನವ ಶಿಲಾಯುಗ – ಜೀವನ ಕ್ರಮ
ಲೋಹಯುಗ – ಆಯುಧಗಳ ತಯಾರಿಕೆ
ಲೋಹಯುಗ – ತಾಮ್ರದ ಆಯುಧಗಳು
ಕಬ್ಬಿಣ ಶಿಲಾಯುದ ಆಯುಧಗಳು
ಕಬ್ಬಿಣ ಶಿಲಾಯುದ ಆಯುಧಗಳು
ಕಬ್ಬಿಣ ಶಿಲಾಯುದ ಆಯುಧಗಳು
ಬೃಹತ್ ಶಲಾ ಸಂಸ್ಕøತಿಯ ಶಿಲಾಗೋರಿಗಳು
ಬೃಹತ್ ಶಲಾ ಸಂಸ್ಕøತಿಯ ಶಿಲಾಗೋರಿಗಳು
ಬೃಹತ್ ಶಲಾ ಸಂಸ್ಕøತಿಯ ಸಮಾಧಿಗಳಲ್ಲಿ ಶವದ ಕೋಣೆಯ ಸುತ್ತಲೂ ಕಲ್ಲುವೃತ್ತಗಳನ್ನು ನಿರ್ಮಿಸಲಾಗುತ್ತಿತ್ತು.
The Iron Age | Characteristics & Importance of the Iron Age | How the Iron Age Changed the World

ವಿಡಿಯೋ ಪಾಠಗಳು

Samveda – 6th – Social Science – Aarambhika Samaja
ಇತಿಹಾಸದ ಪರಿಚಯ ಮತ್ತು ಆರಂಭಿಕ ಸಮಾಜ| ಪ್ರಶ್ನೋತ್ತರಗಳು|6ನೇ ತರಗತಿ|ಸಮಾಜ ವಿಜ್ಞಾನ| ಕರ್ನಾಟಕ ಪಠ್ಯಕ್ರಮ 2024-25

ಚಕ್ರಗಳ ಸಹಾಯದಿಂದ ಮಡಕೆ ಮಾಡುವುದನ್ನು ನೋಡಿ. ಮಡಕೆ ಮಾಡುವ ವಿಧಾನ ಕುರಿತು ಕುಂಬಾರರಿಂದ ಮಾಹಿತಿ ಪಡೆಯಿರಿ.

Pot Making With Clay: Best Talent Indian Potter In Village / Small Cottage Industries

ಜೇಡಿ ಮಣ್ಣಿನಿಂದ ಪಾತ್ರೆಗಳನ್ನು ತಯಾರಿಸಿ.

clay making and miniature kitchen set making at home / handmade kitchen set with clay

**************