ಪಾಠದ ಪರಿಚಯ: ಯಾವುದೇ ರಾಷ್ಟ್ರದ ಪ್ರಗತಿಯಲ್ಲಿ ಅದರ ವಿದೇಶಾಂಗ ನೀತಿಯು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತವು ತನ್ನ ವಿದೇಶಾಂಗ ನೀತಿಯ ಅಂಗವಾಗಿ ನೆರೆ ದೇಶಗಳೊಂದಿಗೆ ಯಾವ ಬಗೆಯ ಸಂಬಂಧವನ್ನು ರೂಪಿಸಿಕೊಂಡಿದೆ ಎಂಬುದನ್ನು ಈ ಪಾಠದಿಂದ ತಿಳಿಯಬಹುದು.

ದಕ್ಷಿಣ ಏಷ್ಯದ ಆರ್ಥಿಕ ವ್ಯವಹಾರಗಳು ಮೂಲತಃ ಭಾರತ ಕೇಂದ್ರಿತವಾಗಿವೆ. ಭಾರತವು ತನ್ನ ಬೃಹತ್ ಗಾತ್ರ, ಭೌಗೋಳಿಕ ಸನ್ನಿವೇಶ, ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಿಂದಾಗಿ ದಕ್ಷಿಣ ಏಷ್ಯದ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಭಾರತದ ಉತ್ತರದಲ್ಲಿ ಚೀನಾ, ನೇಪಾಳ ಮತ್ತು ಭೂತಾನ್ ರಾಜ್ಯಗಳಿವೆ; ಪೂರ್ವದಲ್ಲಿ ಬಾಂಗ್ಲಾದೇಶ ಮತ್ತು ಮಯನ್ಮಾರ್‍ಗಳಿದ್ದರೆ ವಾಯವ್ಯದಲ್ಲಿ ಪಾಕಿಸ್ತಾನ, ದಕ್ಷಿಣದಲ್ಲಿ ಶ್ರೀಲಂಕೆಯಿದೆ. ಇವು ನಮ್ಮ ದೇಶದ ಏಳು ನೆರೆ ದೇಶಗಳು. ಇವನ್ನು ಭೂಪಟದಲ್ಲಿ ಗಮನಿಸಿ.

ಶಾಂತಿ, ಸ್ನೇಹ ಸೌಹಾರ್ದ, ಸಹಕಾರಗಳ ಅಗಾಧ ಪರಂಪರೆಯನ್ನು ಭಾರತ ಹೊಂದಿದೆ. ಕೆಲವು ನೆರೆ ದೇಶಗಳೊಂದಿಗೆ ಭಾರತಕ್ಕೆ ಭಿನ್ನಾಭಿಪ್ರಾಯ, ವಿವಾದಗಳಿದ್ದರೂ ಮಾತುಕತೆಯ ಮೂಲಕ ಶಾಂತಿಯುತ ಪರಿಹಾರವನ್ನು ಕಾಣಲು ನಮ್ಮ ದೇಶ ಬಯಸುತ್ತದೆ. ನೆರೆ ದೇಶಗಳೊಂದಿಗೆ ಭಾರತದ ಸಂಬಂಧವನ್ನು ನಾವೀಗ ತಿಳಿಯೋಣ.

ಭಾರತದ ಭೂಭಾಗವಾಗಿದ್ದ ಪಾಕಿಸ್ತಾನವು ದೇಶ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಪ್ರತ್ಯೇಕ ರಾಷ್ಟ್ರವಾಗಿ 1947ರಲ್ಲಿ ಉದಯಿಸಿತು. ಸಂಘರ್ಷದ ಮೂಲದಲ್ಲೇ ಈ ಎರಡು ರಾಷ್ಟ್ರಗಳು ಉದಯಿಸಿದ್ದರಿಂದ ಅವೆರಡರ ನಡುವೆ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಆದುದರಿಂದ ಸಮಸ್ಯೆಗಳು ಪರಿಹಾರ ಕಾಣದೆ ಹಾಗೆಯೇ ಉಳಿದಿವೆ. ಅವುಗಳೆಂದರೆ ಮುಖ್ಯವಾಗಿ

* ಕಾಶ್ಮೀರ ವಿವಾದ

* ಮಿಲಿಟರಿ ಆಕ್ರಮಣ

* ಭಯೋತ್ಪಾದನೆ

* ಜಲ ವಿವಾದ

* ಅಲ್ಪಸಂಖ್ಯಾತರ ರಕ್ಷಣೆ

* ವ್ಯಾಪಾರ ವಾಣಿಜ್ಯ ಬೆಳವಣಿಗೆ, ಮುಂತಾದವು.

ಮೂಲಭೂತವಾಗಿ ಕಾಶ್ಮೀರ ಸಮಸ್ಯೆಯು ಸ್ವಾತಂತ್ರ್ಯೋತ್ತರ ಕಾಲದಿಂದಲೇ ಭಾರತ ಪಾಕ್ ಸಂಬಂಧವನ್ನು ಹದಗೆಡಿಸುತ್ತ ಬಂದಿದೆ. ಈವರೆಗೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಾಲ್ಕು ಬಾರಿ ಯುದ್ಧಗಳು ನಡೆದಿವೆ (1947, 1965, 1971 ಮತ್ತು 1999ರಲ್ಲಿ). 1948ರಲ್ಲಿ ಪಾಕಿಸ್ತಾನವು ಸಶಸ್ತ್ರ ಕ್ರಮದ ಮೂಲಕ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಯತ್ನಿಸಿ ಕಾಶ್ಮೀರದ ಕೆಲವು ಭಾಗಗಳನ್ನು ಆಕ್ರಮಿಸಿತು. ಆ ಭಾಗವನ್ನು `ಪಾಕ್‍ಆಕ್ರಮಿತ ಕಾಶ್ಮೀರ’ (Pak Occupied Kashmir-Pok) ಎಂಬುದಾಗಿ ಕರೆಯಲಾಗುತ್ತದೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂದು ಭಾರತವು ಪ್ರಾರಂಭದಿಂದಲೂ ಸಮರ್ಥಿಸುತ್ತಿದೆ.

1962 ಭಾರತ-ಚೀನಾ ಸಮರದ ನಂತರ ಪಾಕಿಸ್ತಾನವು ಚೀನಾದೊಂದಿಗೆ ನಿಕಟ ಸೈನಿಕ ಸಂಬಂಧವನ್ನು ಇಟ್ಟುಕೊಂಡಿತು. ಪಾಕಿಸ್ತಾನವು ಜಮ್ಮು ಕಾಶ್ಮೀರದಲ್ಲಿ ಸುಮಾರು 2,700 ಚದರ ಮೈಲಿಗಳಷ್ಟು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ನೀಡಿತು.

1965ರಲ್ಲಿ ಭಾರತ-ಪಾಕ್ ಯುದ್ಧದಲ್ಲಿ ಭಾರತವು ಸೆರೆಹಿಡಿದ ಸುಮಾರು 80,000ಕ್ಕೂ ಮೇಲ್ಪಟ್ಟ ಪಾಕಿಸ್ತಾನಿ ಸೈನಿಕರನ್ನು ಸ್ವದೇಶಕ್ಕೆ ಒಪ್ಪಿಸಿತು. ಕಾಶ್ಮೀರ ಸಮಸ್ಯೆಯನ್ನು ಕೇವಲ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಯಿಂದ ಮಾತ್ರ ಬಗೆಹರಿಸಿಕೊಳ್ಳಬೇಕೆಂದು ಒಪ್ಪಲಾಯಿತು.

ಪಾಕಿಸ್ತಾನದ ಸೈನಿಕ ಪಡೆ ಹಾಗೂ ಭಾರತ ಬೆಂಬಲಿತ ಪೂರ್ವ ಪಾಕಿಸ್ತಾನದ (ಬಾಂಗ್ಲಾದೇಶ) ನಡುವೆ ತೀವ್ರ ಘರ್ಷಣೆ ನಡೆಯಿತು. ಸಾಮಾನ್ಯವಾಗಿ ಈ ಯುದ್ಧವನ್ನು ಭಾರತ ಪಾಕಿಸ್ತಾನದ ನಡುವೆ ನಡೆದ ಮೂರನೆ ಯುದ್ಧವೆಂದೇ ಪರಿಗಣಿಸಲಾಗಿದೆ.

• 1971ರಲ್ಲಿ ಭಾರತ-ಪಾಕ್ ಯುದ್ಧ ನಡೆದು, 1972ರಲ್ಲಿ ಶಿಮ್ಲಾದಲ್ಲಿ ಶೃಂಗಸಭೆ ನಡೆಯಿತು. ಆ ಕಾಲದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಭಾರತದ ಪ್ರಧಾನಮಂತ್ರಿಯಾಗಿದ್ದರು. ಶೃಂಗಸಭೆಯಲ್ಲಿ ಕಾಶ್ಮೀರವು ಸೇರಿದಂತೆ ತಮ್ಮೊಳಗಿನ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಬೇಕೆಂದು ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದವೇ ‘ಶಿಮ್ಲಾ ಒಪ್ಪಂದ’.

• 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ನಂತರ ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಮೃತ್‍ಸರದಿಂದ ಲಾಹೋರಿಗೆ ‘ಲಾಹೋರ್ ಬಸ್‍ಯಾತ್ರೆ’ಯನ್ನು ಆರಂಭಿಸುವ ಮೂಲಕ ಎರಡು ರಾಷ್ಟ್ರಗಳ ಸಂಬಂಧವನ್ನು ಉತ್ತಮಪಡಿಸಲು ಯತ್ನಿಸಿದರು. ತದನಂತರದಲ್ಲಿ ನಡೆದ ಆಗ್ರಾ ಶೃಂಗಸಭೆಯಲ್ಲಿ ಎರಡು ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗಾಗಿ ಪ್ರಯತ್ನಿಸಿದರು. ಆದರೆ ಶೃಂಗಸಭೆ ವಿಫಲಗೊಂಡಿತು. ಪರಿಣಾಮವಾಗಿ ಪಾಕ್ ಪ್ರೇರಿತ ಭಯೋತ್ಪಾದಕರು ಡಿಸೆಂಬರ್ 13, 2001ರಂದು ಭಾರತದ ಸಂಸತ್ತಿನ ಮೇಲೆ ದಾಳಿ ಮಾಡಿದರು. ಇದು ಭಾರತ ಮತ್ತು ಪಾಕಿಸ್ತಾನದ ಸಂಬಂಧವನ್ನು ಮತ್ತಷ್ಟು ಹದಗೆಡಿಸಿತು.

ತಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಈ ಎರಡು ರಾಷ್ಟ್ರಗಳು ಸತತ ಪೈಪೋಟಿ ನಡೆಸುತ್ತಿವೆ. ಹೀಗಿದ್ದರೂ ಭಾರತ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ನೆರೆ ದೇಶವಾದ ಪಾಕಿಸ್ತಾನದೊಂದಿಗೆ ಸ್ನೇಹಹಸ್ತ ಚಾಚಿದೆ.

ಭಾರತದ ನೆರೆಯ ರಾಷ್ಟ್ರಗಳಲ್ಲಿ ಚೀನಾ ಪ್ರಮುಖವಾದದ್ದು. ಏಕೆಂದರೆ ಭಾರತ ಮತ್ತು ಚೀನಾದ ನಡುವಿನ ಗಡಿರೇಖೆ ಸುದೀರ್ಘವಾಗಿದೆ. ಭಾರತವು ಚೀನಾಕ್ಕೆ ವಿಶ್ವಸಂಸ್ಥೆಯಲ್ಲಿ ಸ್ಥಾನ ದೊರಕಿಸಿ ಕೊಡಲು ಯತ್ನಿಸಿತು. ಭಾರತವು ಆರಂಭದಿಂದಲೂ ಚೀನಾದೊಡನೆ ಶಾಂತಿಯುತ ಸಂಬಂಧವನ್ನು ಅಪೇಕ್ಷಿಸಿತು.

ಚೀನಾ ಮತ್ತು ಭಾರತದ ನಡುವಿನ ಸಂಘರ್ಷಕ್ಕೆ ಟಿಬೆಟ್ ಮತ್ತು ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ಕಾರಣವಾಗಿವೆ.

1950ರಲ್ಲಿ ಚೀನಾವು ಟಿಬೆಟಿನಲ್ಲಿ ಕೈಗೊಂಡ ಸಶಸ್ತ್ರ ಕಾರ್ಯಾಚರಣೆಯಿಂದಾಗಿ ಭಾರತ ಬಹಳ ನಿರಾಶೆಗೊಂಡಿತು. ಟಿಬೆಟಿಯನ್ನರ ಸ್ವಾಯತ್ತತೆಯನ್ನು ದಮನ ಮಾಡಲು ಚೀನಾ ಪ್ರಯತ್ನಿಸಿದಾಗ ಭಾರತವು ಟಿಬೆಟಿಯನ್ನರಿಗೆ ತನ್ನ ಬೆಂಬಲವನ್ನು ನೀಡುವ ಮೂಲಕ ಮಾನವ ಹಕ್ಕುಗಳ ಪ್ರತಿಪಾದನೆಯನ್ನು ಮಾಡಿತು. ಆದರೆ ಚೀನಾ ಈ ಸಲಹೆಯನ್ನು ತಿರಸ್ಕರಿಸುವುದರ ಜೊತೆಗೆ ತನ್ನ ಆಂತರಿಕ ವ್ಯವಹಾರದಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿತು.

1950ರಲ್ಲಿ ಚೀನಾ ಟಿಬೆಟಿನ ಮೇಲೆ ಆಕ್ರಮಣಮಾಡಿ ಮಿಲಿಟರಿ ನಿಯಂತ್ರಣವನ್ನು ಸಾಧಿಸಿತು. ಈ ಸಂದರ್ಭದಲ್ಲಿ ನೆಲೆಯನ್ನು ಕಳೆದುಕೊಂಡ ಟಿಬೆಟಿನ ಧರ್ಮಗುರು ದಲಾಯಿ ಲಾಮಾರವರಿಗೆ ಭಾರತ ಆಶ್ರಯ ಕಲ್ಪಿಸಿತು. ಇವರ ಜೊತೆ ಸಾವಿರಾರು (ಸುಮಾರು 80,000) ಮಂದಿ ಟಿಬೆಟಿಯನ್ನರು ಭಾರತಕ್ಕೆ ನಿರಾಶ್ರಿತರಾಗಿ ಬಂದರು. ಭಾರತದ ಹತ್ತು ರಾಜ್ಯಗಳಲ್ಲಿ ಇವರಿಗೆ ಪುನರ್‍ವಸತಿ ಕಲ್ಪಿಸಲಾಯಿತು. ಮುಂಡಗೋಡ (ಉತ್ತರ ಕನ್ನಡ) ಮತ್ತು ಬೈಲುಕುಪ್ಪೆ (ಮೈಸೂರು) ಇಲ್ಲಿ ಇವರ ನೆಲೆಗಳಿವೆ. ಇದರಿಂದ ತೀವ್ರ ಅಸಮಾಧಾನಗೊಂಡ ಚೀನಾ ಭಾರತದ ಪೂರ್ವ ಗಡಿ ಭಾಗದ ಅನೇಕ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸಿತು. ಇದನ್ನು ಭಾರತ ವಿರೋಧಿಸಿತು.

ಚೀನಿ ಪ್ರಧಾನಿ ಚೌಯನ್‍ಲಾಯ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಪ್ರಧಾನಿ ನೆಹರುರವರ ಜೊತೆ 1954ರಲ್ಲಿ ಪಂಚಶೀಲ ಸೂತ್ರಕ್ಕೆ ಸಹಿ ಹಾಕಲಾಯಿತು.

ಚೀನಾದ ಪಠ್ಯಪುಸ್ತಕಗಳಲ್ಲಿ ಭಾರತದ ಕೆಲವು ಭಾಗಗಳು ತನ್ನದೆಂದು ತೋರಿಸಿದ್ದ ಭೂಪಟಗಳನ್ನು ತಿದ್ದುಪಡಿ ಮಾಡಬೇಕು ಎಂಬ ಬೇಡಿಕೆಯನ್ನು ಭಾರತ ಮುಂದಿಟ್ಟಿತು. ಇದಕ್ಕೆ ಚೀನಾದ ಪ್ರಧಾನಿ ಒಪ್ಪಿಕೊಂಡರೂ ಈ ಕುರಿತಂತೆ ಯಾವುದೇ ಬದಲಾವಣೆ ಮಾಡಲಿಲ್ಲ.

ಟಿಬೆಟಿನ ಸಮಸ್ಯೆಯ ಹಿನ್ನೆಲೆಯಲ್ಲಿ ಚೀನಾವು ಭಾರತದ ಮೇಲೆ 1962ರಲ್ಲಿ ಈಶಾನ್ಯ ಗಡಿನಾಡಿನಿಂದ ಹಿಡಿದು ಲಡಾಕ್ (ಜಮ್ಮು ಮತ್ತು ಕಾಶ್ಮೀರದ ಭಾಗ) ತನಕ ಭಾರಿ ಆಕ್ರಮಣ ಮಾಡಿತು. ಆದರೆ ಅದು ಏಕಪಕ್ಷೀಯವಾಗಿ ಕದನ ವಿರಾಮವನ್ನು ಘೋಷಿಸಿತು. ಅಷ್ಟರೊಳಗೆ ಚೀನಾ ಸುಮಾರು 14,671 ಚದರ ಮೈಲಿಗಳಷ್ಟು ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಇದರಿಂದಾಗಿ ಪಂಚಶೀಲ ಸೂತ್ರಗಳಿಗೆ ಕಾರಣರಾದ ನೆಹರು ಅತೀವ ಬೇಸರಗೊಂಡರು. ಇಂದಿಗೂ ಎರಡು ದೇಶಗಳ ನಡುವಿನ ಗಡಿಯಲ್ಲಿ ಯಥಾಸ್ಥಿತಿ ವಾಸ್ತವಿಕ ನಿಯಂತ್ರಣ ರೇಖೆ (Line of Actual Control – LAC) ಮುಂದುವರಿಯುತ್ತಿದೆ.

ಚೀನಿಯರ ಪಾಕಿಸ್ತಾನ ಪರ ನೀತಿ ಹಾಗೂ ಪಾಕಿಸ್ತಾನ ಮತ್ತು ಚೀನಾ ನಡುವೆ ಹಾದು ಹೋಗುವ ಹೆದ್ದಾರಿಗಳು

ಭಾರತದ ಮೇಲೆ ಚೀನಾದ ಆಕ್ರಮಣ

* ಭಾರತ ಮತ್ತು ಚೀನಾ ನಡುವಿನ 3,440 ಕಿ.ಮೀ. ಉದ್ದದ ಅಂತರ್‍ರಾಷ್ಟ್ರೀಯ ಗಡಿರೇಖೆಯನ್ನು ಗುರುತಿಸಿದರು. ಬ್ರಿಟಿಷ್ ಇಂಡಿಯದ ವಿದೇಶಾಂಗ ಕಾರ್ಯದರ್ಶಿ ಸರ್ ಮ್ಯಾಕ್‍ಮಹೊನ್. ಆದುದರಿಂದ ಇದನ್ನು “ಮ್ಯಾಕ್‍ಮಹೊನ್ ಗಡಿರೇಖೆ’ ಎನ್ನುವರು.

* ಚೀನಾವು 1962ರಲ್ಲಿ ಪೂರ್ವ ಲಡಾಕ್‍ನ (ಅಕ್ಷೈ ಚೀನ್) ಮೇಲೆ ಆಕ್ರಮಣಮಾಡಿ ಭಾರತದ ಸುಮಾರು 14671 ಚದರ ಮೈಲು. ಭೂಪ್ರದೇಶವನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡಿದೆ. ಚೀನಾದ ಸ್ವಾಧೀನತೆ ಇಂದಿನವರೆಗೂ ಮುಂದುವರಿದಿದೆ.

* ಅಲ್ಲದೆ ಭಾರತದ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಸುಮಾರು 90,000 ಚ.ಕಿ.ಮೀ. ಭೂಪ್ರದೇಶ ತನ್ನದೆಂದು ಸಾಧಿಸಲು ಯತ್ನಿಸುತ್ತಿದೆ.

ನೇಪಾಳವು ಭಾರತದ ಉತ್ತರಕ್ಕೆ ಹಿಮಾಲಯ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ದೇಶವಾಗಿದೆ. ಮೊದಲಿನಿಂದಲೂ ಭಾರತ-ನೇಪಾಳ ಸಂಬಂಧವು ನಿಕಟವಾಗಿತ್ತು. ಎರಡೂ ದೇಶಗಳ ಗಡಿಗಳು ಮುಕ್ತವಾಗಿದ್ದು ಜನಸಂಚಾರ ಹಾಗೂ ವಸ್ತುಗಳ ಸಾಗಾಟ ಅಡೆತಡೆ ಇಲ್ಲದೆ ನಡೆಯುತ್ತಿದೆ.

ನೇಪಾಳ ಭೂಆವೃತ ಪ್ರದೇಶವಾಗಿರುವುದರಿಂದ ಅದಕ್ಕೆ ಅನಿವಾರ್ಯವಾಗಿ ಭಾರತದ ಮುಖಾಂತರವೇ ಹೊರದೇಶಗಳ ಸಂಪರ್ಕ ಸಾಧ್ಯ. ಅದಕ್ಕೆ ಹೊಂದಿಕೊಂಡಿರುವ ಇನ್ನೊಂದು ದೇಶವೆಂದರೆ ಚೀನಾ. ಆದರೆ ಅದು ಸಾಗರೋತ್ತರ ಪ್ರದೇಶವಾದುದರಿಂದ ಸಂಪರ್ಕ ಕಷ್ಟ ಸಾಧ್ಯ. ಹೀಗಾಗಿ ನೇಪಾಳವು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತದೆ. ಭಾರತನೇಪಾಳ ಸಂಬಂಧವು 1950ರ `ಸ್ನೇಹ ಮತ್ತು ಶಾಂತಿ ಒಪ್ಪಂದ’ವನ್ನು ಆಧರಿಸಿದೆ. ಸಾರಿಗೆ ಸಂಪರ್ಕ, ನೀರಾವರಿ, ವಿದ್ಯುತ್, ಅರಣ್ಯ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ನೇಪಾಳಕ್ಕೆ ಭಾರತವೇ ಅತ್ಯಂತ ಹೆಚ್ಚು ನೆರವನ್ನು ನೀಡುತ್ತಿದೆ.

ಭಾರತವು 1971ರಲ್ಲಿ ಇಂಡೋನೇಪಾಳ ಒಪ್ಪಂದಕ್ಕೆ ಸಹಿ ಹಾಕಿದ್ದು ಅದರ ಪ್ರಕಾರ ನೇಪಾಳದ ಮೂಲಕ ಸಾಮಗ್ರಿಗಳನ್ನು ಸುಂಕ ನೀಡದೆ ಮುಕ್ತವಾಗಿ ಭಾರತಕ್ಕೆ ತರಬಹುದಾಗಿದೆ.

1949ರಲ್ಲಿ ಭಾರತ ಮತ್ತು ಭೂತಾನ್ ಮಾಡಿಕೊಂಡ ಒಪ್ಪಂದದಂತೆ, ಭಾರತವು ಭೂತಾನಿನ ಆಂತರಿಕ ವ್ಯವಹಾರದಲ್ಲಿ ಕೈಹಾಕುವುದಿಲ್ಲ ಎಂಬ ಭರವಸೆ ನೀಡಿತು. ಭೂತಾನ್ ತನ್ನ ಬಾಹ್ಯ ವ್ಯವಹಾರಗಳಲ್ಲಿ ಭಾರತದ ಮಾರ್ಗದರ್ಶನ ಪಡೆಯಲು ಒಪ್ಪಿಗೆ ನೀಡಿತು.

ಭಾರತವು ನಡೆಸಿದ ಯತ್ನದ ಫಲವಾಗಿ ಭೂತಾನವು ವಿಶ್ವಸಂಸ್ಥೆಯ ಸದಸ್ಯತ್ವವನ್ನು ಪಡೆಯಿತು. 1961ರಿಂದ 1981ರವರೆಗೆ ಭಾರತವು ಭೂತಾನ್‍ನ ಆರ್ಥಿಕ ಅಭಿವೃದ್ದಿಗೆ ನೆರವು ನೀಡಿತಲ್ಲದೆ, ಅನೇಕ ಯೋಜನೆಗಳಿಗೆ ಪೂರ್ಣಪ್ರಮಾಣದಲ್ಲಿ ಹಣ ಒದಗಿಸಿತು. ಭೂತಾನ್ ‘ಸಾರ್ಕ್’ನ ಸದಸ್ಯರಾಷ್ಟ್ರವಾಗಿದೆ.

ಶ್ರೀಲಂಕಾ ಭಾರತದ ದಕ್ಷಿಣಕ್ಕೆ ಇರುವ ಒಂದು ದ್ವೀಪ ರಾಷ್ಟ್ರವಾಗಿದೆ. ಸಾಮ್ರಾಟ್ ಅಶೋಕನು ಬೌದ್ಧಮತದ ಪ್ರಚಾರಕ್ಕೆ ತನ್ನ ಪ್ರತಿನಿಧಿಗಳನ್ನು ಅಲ್ಲಿಗೆ ಕಳುಹಿಸಿದ್ದನು. ಆ ಮೂಲಕ ಭಾರತ ಮತ್ತು ಶ್ರೀಲಂಕೆಯ ನಡುವಿನ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು.

ಶ್ರೀಲಂಕೆಯಲ್ಲಿ ಎರಡು ಪ್ರಮುಖ ಜನಾಂಗೀಯ ಗುಂಪುಗಳಿದ್ದು, ಒಂದು ಸಿಂಹಳೀಯರು ಮತ್ತೊಂದು ತಮಿಳರು. ಸಿಂಹಳೀಯರು ಶ್ರೀಲಂಕೆಯ ಮೂಲನಿವಾಸಿಗಳು; ತಮಿಳರು ತಮಿಳುನಾಡಿನಿಂದ ಬಂದ ವಲಸಿಗರು. ಇವುಗಳೊಳಗೆ ನಿರಂತರವಾಗಿ ಸಂಘರ್ಷಗಳು ನಡೆಯುತ್ತಲಿವೆ. ಶ್ರೀಲಂಕೆಯಲ್ಲಿರುವ ತಮಿಳರು ತಮ್ಮ ಹಕ್ಕುಬಾಧ್ಯತೆಗಳಿಗಾಗಿ ಹಾಗೂ ಪ್ರತ್ಯೇಕ ರಾಜ್ಯ ಸ್ಥಾಪನೆಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಎರಡು ದಶಕಗಳಿಂದಲೂ ಈ ಹೋರಾಟ ಮುಂದುವರಿಯುತ್ತಾ ಬಂದಿದೆ. ಇಷ್ಟಾದರೂ ಭಾರತವು ಶ್ರೀಲಂಕೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಇಚ್ಛಿಸುತ್ತದೆ. ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುತ್ತಿದೆ.

ಪಾಕ್ ಕೊಲ್ಲಿಯ ಮಧ್ಯೆ ಇರುವ ಕಚತೀವ್ ದ್ವೀಪದ ಮೇಲಿನ ಹಕ್ಕಿಗಾಗಿ 1974-76ರಲ್ಲಿ ಭಾರತವು ಶ್ರೀಲಂಕೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಸಮುದ್ರ ವ್ಯಾಪಾರದ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಯಿತು. 1987ರಲ್ಲಿ ಶ್ರೀಲಂಕಾ ಸರಕಾರವು ದೇಶದೊಳಗಿನ ತಮಿಳರು ರಾಜಕೀಯ ಪ್ರತ್ಯೇಕತೆಗಾಗಿ ಮಾಡುತ್ತಿದ್ದ ಹೋರಾಟವನ್ನು ಶಮನಗೊಳಿಸಲು ಭಾರತದ ನೆರವನ್ನು ಕೇಳಿಕೊಂಡಿತು. ಅದಕ್ಕೆ ಸಂಬಂಧಿಸಿದಂತೆ 1988ರಲ್ಲಿ ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹಾಗೂ ಶ್ರೀಲಂಕೆಯ ಅಧ್ಯಕ್ಷ ಜಯವರ್ಧನೆ ಇವರೊಳಗಿನ ಒಪ್ಪಂದದಂತೆ ಭಾರತ ಶಾಂತಿ ಪಾಲನಾ ಪಡೆ Indian Peace Keeping Force (I.P.K.F.) ಶ್ರೀಲಂಕೆಗೆ ಕಳುಹಿಸಲಾಯಿತು.

ಶ್ರೀಲಂಕೆಯ ತಮಿಳು ಸಮುದಾಯವು ಭಾರತ ಕೈಗೊಂಡ ಕ್ರಮವನ್ನು ವಿರೋಧಿಸಿತು. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿಯವರು ಶ್ರೀಲಂಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹತ್ಯೆಯ ವಿಫಲ ಪ್ರಯತ್ನ ನಡೆಯಿತು. ಇಷ್ಟಾದರೂ ಭಾರತದ ನಿಲುವನ್ನು ಒಪ್ಪದ ಶ್ರೀಲಂಕೆಯ `ತಮಿಳು ಪ್ರತ್ಯೇಕತಾವಾದಿಗಳ / ಜನಾಂಗೀಯವಾದಿಗಳ ವಿಮೋಚನಾ ಸಂಘಟನೆ’ಯು (Liberation Of Tamil Tigers Eelam (LTTE) ರಾಜೀವ್ ಗಾಂಧಿಯವರನ್ನು 1991 ಮೇ 21ರಂದು ಹತ್ಯೆ ಮಾಡಿತು. ಹೀಗಿದ್ದರೂ ಭಾರತವು ಶ್ರೀಲಂಕೆಯೊಂದಿಗೆ ಮಿತ್ರತ್ವ ಭಾವನೆಯನ್ನು ಮುಂದುವರಿಸಿಕೊಂಡು ಬಂದಿದೆ. ಆದರೆ ಎಲ್.ಟಿ.ಟಿ.ಇ.ಯ ಪರಮೋಚ್ಚ ನಾಯಕರಾಗಿದ್ದ ವೇಲುಪಿಳ್ಳೆ ಪ್ರಭಾಕರನ್ ಹತ್ಯೆಯ ನಂತರ ಶ್ರೀಲಂಕೆಯ ತಮಿಳರ ಉಗ್ರಗಾಮಿ ಹೋರಾಟ ಸ್ಥಗಿತಗೊಂಡಿದೆ. ಶ್ರೀಲಂಕೆಯ ಸರ್ಕಾರವು ತಮ್ಮ ಸಂವಿಧಾನದ ಚೌಕಟ್ಟಿನಲ್ಲಿಯೇ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಧೃಡ ನಿಲುವನ್ನು ತಳೆದಿದೆ.

ಬಾಂಗ್ಲಾದೇಶವು ಪಾಕಿಸ್ತಾನದ ಭಾಗವಾಗಿದ್ದು, ಅದನ್ನು ಪೂರ್ವ ಪಾಕಿಸ್ತಾನವೆಂದು ಕರೆಯಲಾಗಿತ್ತು. ಪೂರ್ವ ಪಾಕಿಸ್ತಾನವು 1960ರಿಂದಲೇ ಒಂದು ಪ್ರತ್ಯೇಕ ರಾಷ್ಟ್ರವಾಗಿ ಹೊರಹೊಮ್ಮಲು ಹೋರಾಟ ನಡೆಸಿತು. ಶೇಖ್ ಮುಜೀಬುರ್ ರೆಹಮಾನ್‍ರವರ ನೇತೃತ್ವದಲ್ಲಿ ಅವರ ಸಂಘಟನೆಯಾದ ಅವಾಮಿ ಲೀಗ್ ವಿಮೋಚನಾ ಚಳವಳಿಯನ್ನು ಮಾಡಿತು. ಪೂರ್ವ ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಹಿನ್ನಲೆಯಲ್ಲಿ ಭಾರತದ ಮಿಲಿಟರಿ ಪ್ರವೇಶ ಅನಿವಾರ್ಯವಾಯಿತು. 1971ರಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಪಶ್ಚಿಮ ಪಾಕಿಸ್ತಾನವು ಸೋಲುವುದರೊಂದಿಗೆ ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶ ಎನ್ನುವ ಹೊಸ ರಾಷ್ಟ್ರವಾಗಿ ಉದಯಿಸಿತು.

1972ರಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಪ್ರಧಾನಿಗಳು ಢಾಕಾದಲ್ಲಿ ಸಭೆ ಸೇರಿ ಸ್ನೇಹ, ಸಹಕಾರ ಮತ್ತು ಶಾಂತಿಗಾಗಿ 25 ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದರು. ಇದರ ಪರಿಣಾಮವಾಗಿ ಎರಡು ರಾಷ್ಟ್ರಗಳ ನಡುವೆ ಇದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿತು.

ಚಿತ್ತಗಾಂಗ್ ಪರ್ವತ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುತ್ತಿರುವ ಚಕ್ಮಾ ನಿರಾಶ್ರಿತರ ಸಮಸ್ಯೆ, ಮಾದಕ ವಸ್ತುಗಳ ಅಕ್ರಮ ಕಳ್ಳಸಾಗಾಣಿಕೆ ಮುಂತಾದ ಸಮಸ್ಯೆಗಳು ಇನ್ನೂ ಬಗೆಹರಿಯಬೇಕಾಗಿವೆ. ಅಲ್ಲದೆ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಲಕ್ಷಾಂತರ ಅಕ್ರಮ ವಲಸಿಗರರ ಸಮಸ್ಯೆ ತೀವ್ರವಾಗಿದೆ. ಈಶಾನ್ಯ ಭಾರತದ ಅನೇಕ ಬಂಡುಕೋರ ಗುಂಪುಗಳಿಗೂ ಬಾಂಗ್ಲಾದೇಶವು ಆಶ್ರಯ ನೀಡುತ್ತಿರುವುದು ಗೊಂದಲಕ್ಕೀಡುಮಾಡಿದ ಸಂಗತಿಯಾಗಿದೆ. ಆದರೂ ಭಾರತಕ್ಕೆ ಬಾಂಗ್ಲಾದೇಶವು ಮಿತ್ರ ರಾಷ್ಟ್ರವಾಗಿಯೇ ಉಳಿದಿದೆ.

ದಕ್ಷಿಣ ಏಷ್ಯದ ರಾಷ್ಟ್ರಗಳು ತಮ್ಮ ನಡುವೆ ಸಹಕಾರವನ್ನು ಪ್ರೋತ್ಸಾಹಿಸಲು ಪೂರಕವಾಗುವಂತೆ ಪ್ರಾದೇಶಿಕ ಸಂಘಟನೆ ಒಂದನ್ನು ಸ್ಥಾಪಿಸಲು ನಿರ್ಧರಿಸಿದವು. ಇದರ ಫಲವಾಗಿ 1985ರಲ್ಲಿ ದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರ ಸಂಘ (South Asian Association for Regional Cooperation – SAARC) ಸಾರ್ಕ್ ಅಸ್ತಿತ್ವಕ್ಕೆ ಬಂದಿತು. ಮೂಲತಃ ಸಾರ್ಕ್ ಏಳು ರಾಷ್ಟ್ರಗಳನ್ನು ಒಳಗೊಂಡಿತ್ತು. ತದನಂತರ ಅಫ್‍ಘಾನಿಸ್ತಾನವನ್ನು (2007, 14ನೇ ಶೃಂಗಸಭೆ, ಹೊಸದಿಲ್ಲಿ) ಸಾರ್ಕ್‍ನ ಸದಸ್ಯರಾಷ್ಟ್ರವಾಗಿ ಸೇರಿಸಿಕೊಳ್ಳಲಾಯಿತು ಭಾರತ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಅಫ್‍ಘಾನಿಸ್ತಾನ ಇವು ಸಾರ್ಕ್‍ನ ಎಂಟು ಸದಸ್ಯರಾಷ್ಟ್ರಗಳು.

ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೆಗಾಗಿ ಭಾರತವು ಪ್ರತ್ಯೇಕ ಉಪಗ್ರಹ ಒಂದನ್ನು ಉಡಾವಣೆಗೊಳಿಸಿ ಇದರ ಬಳಕೆಯನ್ನು ಎಲ್ಲಾ ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಕೊಡುಗೆಯಾಗಿ ನೀಡಿದೆ.

* ದಕ್ಷಿಣ ಏಷ್ಯ ರಾಷ್ಟ್ರಗಳ ನಡುವೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸಗಳನ್ನು ವೃದ್ಧಿಸುವುದು.

* ದಕ್ಷಿಣ ಏಷ್ಯ ಜನತೆಯ ಕ್ಷೇಮಾಭಿವೃದ್ಧಿಯನ್ನು ಪ್ರೋತ್ಸಾಹಿಸುವುದು.

* ಆರ್ಥಿಕ, ಸಾಂಸ್ಕೃತಿಕ, ತಾಂತ್ರಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಹಾಗೂ ಸಹೋದ್ಯಮ.

* ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಡನೆ ಸಂಬಂಧವನ್ನು ಬಲಪಡಿಸುವುದು.

ಸಾರ್ಕ್ ಸದಸ್ಯರಾಷ್ಟ್ರಗಳು ಭಾರತದಿಂದ ಏಕಮುಖ ನಿರೀಕ್ಷೆ ಮಾಡುತ್ತಿರುವುದು, ಭಾರತವನ್ನು ಸಂಶಯ ಮತ್ತು ಭಯದ ದೃಷ್ಟಿಯಿಂದ ನೋಡುವುದು ಇದರ ಬೆಳವಣಿಗೆಗೆ ಅಡ್ಡಿಯಾಗಿ ಪರಿಣಮಿಸಿದೆ.

ಭಾರತ ಮತ್ತು ನೆರೆ ದೇಶಗಳು | 7ನೇ ತರಗತಿ | Bharata mattu nere desagalu question answer | 7th class |

ವಿಶ್ವದ ಭೂಪಟದಲ್ಲಿ ಭಾರತದ ನೆರೆಯ ದೇಶಗಳನ್ನು ಗುರುತಿಸಿರಿ.