ನ್ಯಾಯಾಂಗ – ಅಧ್ಯಾಯ 22
ಪಾಠದ ಪರಿಚಯ: ಈ ಪಾಠವು ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಕುರಿತಾಗಿದೆ. ಅಧ್ಯಾಯದಲ್ಲಿ ಸರ್ವೋಚ್ಚ ನ್ಯಾಯಾಧೀಶರು ಹಾಗೂ ಉಚ್ಚನ್ಯಾಯಾಧೀಶರ ಅರ್ಹತೆ ಮತ್ತು ಕಾರ್ಯಗಳು; ಮತ್ತು ಅಧೀನ ನ್ಯಾಯಾಲಯಗಳು ಹಾಗೂ ಲೋಕ ಅದಾಲತ್‍ಗಳ ಕಾರ್ಯಗಳನ್ನು ವಿವರಿಸಲಾಗಿದೆ.
ಕಾನೂನುಗಳಿಗೆ ತಕ್ಕಂತೆ ನ್ಯಾಯನಿರ್ಣಯ ನೀಡುವ ಪ್ರತ್ಯೇಕ ವ್ಯವಸ್ಥೆಯೇ ನ್ಯಾಯಾಂಗ ವ್ಯವಸ್ಥೆ. ಕಾನೂನು ಮತ್ತು ನ್ಯಾಯಾಂಗಗಳರೆಡೂ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಬಹುಮುಖ್ಯವಾದ ಪಾತ್ರವಹಿಸುತ್ತವೆ.
* ಒಂದುಗೂಡಿ ವಾಸಿಸುವ ಕಡೆ ಜನರು ಜಗಳಾಡುವುದು ಸಹಜ. ಇಬ್ಬರೊಳಗಿನ ವಿವಾದ ಪರಿಹಾರವಾಗದಿದ್ದರೆ ಮೂರನೆಯನೊಬ್ಬ ಅದನ್ನು ಆಲಿಸಿ, ನಿರ್ಣಯಿಸಬಲ್ಲ.
* ನ್ಯಾಯನಿರ್ಣಯ ಮಾಡುವ ಸಲುವಾಗಿ ಕಾನೂನುಗಳು ರಚನೆಯಾದವು. ವ್ಯಕ್ತಿಯ ಬಾಹ್ಯ ನಡವಳಿಕೆಗಳನ್ನು ನಿಯಂತ್ರಿಸುವ ನಿಯಮಗಳೇ ಕಾನೂನುಗಳಾದವು. ಕಾನೂನುಗಳು ಅಪರಾಧ ಹಾಗೂ ಅಪರಾಧಿಗಳನ್ನು ನಿಯಂತ್ರಿಸುತ್ತವೆ. ಅವು ಸಮಾಜದಲ್ಲಿ ಶಾಂತಿ, ಶಿಸ್ತು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುತ್ತವೆ; ಜೊತೆಗೆ ನಾಗರಿಕರ ಹಕ್ಕುಗಳಿಗೆ ರಕ್ಷಣೆ ನೀಡುತ್ತವೆ.
ನ್ಯಾಯಾಲಯಗಳ ಕಾರ್ಯಗಳು: ನ್ಯಾಯಾಲಯಗಳು ಶಾಸಕಾಂಗವು ರೂಪಿಸಿದ ಕಾಯಿದೆಗಳ ಅರ್ಥವಿವರಣೆ ನೀಡುತ್ತವೆ. ಅವು ವ್ಯಕ್ತಿಗಳ ನಡುವೆ, ಮತ್ತು ವ್ಯಕ್ತಿ ಹಾಗೂ ಸರ್ಕಾರಗಳ ನಡುವೆ ಉಂಟಾದ ವಿವಾದಗಳನ್ನು ಆಲಿಸಿ ತೀರ್ಪು ಕೊಡುತ್ತವೆ. ಪ್ರಜೆಗಳ ಪ್ರಾಣ, ಆಸ್ತಿ, ಗೌರವ ಮತ್ತು ಹಕ್ಕುಗಳನ್ನು ಕಾಯುವ ಬಹುಮುಖ್ಯವಾದ ಕಾರ್ಯವನ್ನು ನ್ಯಾಯಾಲಯಗಳು ಮಾಡುತ್ತವೆ. ನ್ಯಾಯಾಲಯಗಳು ಶಾಸಕಾಂಗ ಅಥವಾ ಕಾರ್ಯಾಂಗಗಳ ನಿಯಂತ್ರಣಕ್ಕೆ ಒಳಪಟ್ಟಿಲ್ಲ; ಅವು ಪಕ್ಷಪಾತವಿಲ್ಲದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ.
ಸರ್ವೋಚ್ಚ ನ್ಯಾಯಾಲಯ
ನಮ್ಮ ಸಂವಿಧಾನವು ದೇಶದ ಏಕತೆಯನ್ನು ಕಾಪಾಡುವ ದೃಷ್ಟಿಯಿಂದ, ಇಡಿ ದೇಶಕ್ಕೆ ಅನ್ವಯವಾಗುವ ನ್ಯಾಯಾಂಗ ಪದ್ಧತಿಯನ್ನು ಅಳವಡಿಸಿದೆ. ದೇಶದ ಅತ್ಯುನ್ನತ ನ್ಯಾಯಾಲಯವೇ ಸರ್ವೋಚ್ಚ ನ್ಯಾಯಾಲಯ (ಸುಪ್ರೀಮ್ ಕೋರ್ಟ್). ಇದರಲ್ಲಿ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡು 34 ನ್ಯಾಯಾಧೀಶರು ಇರುವರು. ಇವರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಸರ್ವೋಚ್ಚ ನ್ಯಾಯಾಲಯವು ಹೊಸದೆಹಲಿಯಲ್ಲಿದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು:
* ಯಾವುದಾದರೂ ಉಚ್ಚನ್ಯಾಯಾಲಯದಲ್ಲಿ ಕನಿಷ್ಠ ಪಕ್ಷ ಐದು ವರ್ಷಗಳ ಕಾಲ ನ್ಯಾಯಾಧೀಶರಾಗಿರಬೇಕು; ಅಥವಾ
* ಕನಿಷ್ಠ ಹತ್ತು ವರ್ಷಗಳ ಕಾಲ ಉಚ್ಚನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿರಬೇಕು; ಅಥವಾ
* ರಾಷ್ಟಾಪತಿಯವರ ಅಭಿಪ್ರಾಯದಲ್ಲಿ ಪ್ರಸಿದ್ಧ ನ್ಯಾಯಶಾಸ್ತ್ರಜ್ಞ ಆಗಿರಬೇಕು. ನ್ಯಾಯಾಧೀಶರ ನಿವೃತ್ತಿಯ ವಯೋಮಿತಿ 65 ವರ್ಷ.
ಸರ್ವೋಚ್ಚ ನ್ಯಾಯಾಲಯದ ಕಾರ್ಯಗಳು:
* ಕೇಂದ್ರ ಮತ್ತು ರಾಜ್ಯ ಹಾಗೂ ರಾಜ್ಯಗಳ ನಡುವಿನ ವಿವಾದಗಳನ್ನು ಬಗೆಹರಿಸುವುದು.
* ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ವಿವಿಧ ರಿಟ್ ಆಜ್ಞೆಗಳನ್ನು ಹೊರಡಿಸುವುದು.
* ಸಂವಿಧಾನವನ್ನು ಅರ್ಥೈಸುವುದು.
* ರಾಷ್ಟ್ರಪತಿಯವರು ಸರ್ವೋಚ್ಚ ನ್ಯಾಯಾಲಯದ ಸಲಹೆ, ಅಭಿಪ್ರಾಯಗಳನ್ನು ಕೇಳಿದಾಗ ಅವುಗಳನ್ನು ನೀಡುವುದು.
* ಅಗತ್ಯವಾದ ನಿಯಮಾವಳಿಗಳನ್ನು ರಚಿಸುವುದು.
ಉಚ್ಚ ನ್ಯಾಯಾಲಯಗಳು
ರಾಜ್ಯಮಟ್ಟದ ಅತ್ಯುನ್ನತ ನ್ಯಾಯಾಲಯವೇ ಉಚ್ಚ ನ್ಯಾಯಾಲಯವಾಗಿದೆ. ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯವು (ಹೈಕೋರ್ಟ್) ಬೆಂಗಳೂರು ಮಹಾನಗರದಲ್ಲಿದೆ. ಉಚ್ಚ ನ್ಯಾಯಾಲಯವು ಮುಖ್ಯ ನ್ಯಾಯಾಧೀಶರು ಮತ್ತು ಇತರ ನ್ಯಾಯಾಧೀಶರನ್ನು ಒಳಗೊಂಡಿರುವುದು. ದೇಶದಲ್ಲಿ ಒಟ್ಟು 25 ಉಚ್ಚ ನ್ಯಾಯಾಲಯಗಳಿವೆ.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು:
1. ಭಾರತದ ಪ್ರಜೆಯಾಗಿರಬೇಕು.
2. ಕನಿಷ್ಠ ಹತ್ತು ವರ್ಷಗಳ ಕಾಲ ಭಾರತದ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿರಬೇಕು; ಅಥವಾ ಹತ್ತು ವರ್ಷಗಳ ಕಾಲ ಉಚ್ಚನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು.
ರಾಷ್ಟ್ರಪತಿಯವರು ಒಂದು ರಾಜ್ಯದ ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡುವಾಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ರಾಜ್ಯಪಾಲರೊಡನೆ ಸಮಾಲೋಚಿಸಿ ನೇಮಕ ಮಾಡುವರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿಯ ವಯೋಮಿತಿ 62 ವರ್ಷ. ಉಚ್ಚ ನ್ಯಾಯಾಲಯದಲ್ಲಿ ಇಂಗ್ಲಿಷ್ ಅಥವಾ ಸ್ಥಳೀಯ ಭಾಷೆಗಳನ್ನು ಬಳಸಬಹುದು.
ಉಚ್ಚ ನ್ಯಾಯಾಲಯದ ಕಾರ್ಯಗಳು:
* ಪೌರರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ವಿವಿಧ ರಿಟ್ ಆಜ್ಞೆಗಳನ್ನು ಹೊರಡಿಸುವುದು.
* ಅಧೀನ ನ್ಯಾಯಾಲಯಗಳ ಕಾರ್ಯದ ಮೇಲ್ವಿಚಾರಣೆ ಮಾಡುವುದು ಮತ್ತು ಅವುಗಳ ಕಾರ್ಯನಿರ್ವಹಣೆ.
ವಿವಿಧ ಮಟ್ಟದಲ್ಲಿರುವ ನ್ಯಾಯಾಲಯಗಳು
ಸರ್ವೋಚ್ಚ ನ್ಯಾಯಾಲಯ ….. ರಾಷ್ಟ್ರಮಟ್ಟದಲ್ಲಿ (ಹೊಸದಿಲ್ಲಿ)
ಉಚ್ಚ ನ್ಯಾಯಾಲಯಗಳು ….. ರಾಜ್ಯ ಮಟ್ಟದಲ್ಲಿ
ಅಧೀನ ನ್ಯಾಯಾಲಯಗಳು ….. ಜಿಲ್ಲಾ ನ್ಯಾಯಾಲಯ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕಿರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಲೋಕ ಅದಾಲತ್‍ಗಳು
ಅಧೀನ ನ್ಯಾಯಾಲಯಗಳು
ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲದೆ, ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಅಧೀನ ನ್ಯಾಯಾಲಯಗಳಿವೆ. ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ಉಚ್ಚ ನ್ಯಾಯಾಲಯಗಳಿವೆ. ಅದೇ ರೀತಿ ಉಚ್ಚ ನ್ಯಾಯಾಲಯದ ಅಧೀನದಲ್ಲಿ ಜಿಲ್ಲಾ, ತಾಲೂಕು ಮತ್ತು ನಗರ ನ್ಯಾಯಾಲಯಗಳಿವೆ.
ಅಧೀನ ನ್ಯಾಯಾಲಯಗಳು ಎರಡು ವಿಧ – ನಾಗರಿಕ ವ್ಯವಹಾರ ನ್ಯಾಯಾಲಯ (ಸಿವಿಲ್) ಮತ್ತು ದಂಡ ನ್ಯಾಯಾಲಯ (ಕ್ರಿಮಿನಲ್). ಸಿವಿಲ್ ನ್ಯಾಯಾಲಯವು ಹಣ, ಆಸ್ತಿ, ವ್ಯವಹಾರ ಮತ್ತು ಒಪ್ಪಂದಗಳಿಗೆ ಸಂಬಂಧಿಸಿದ ವಿವಾದಗಳ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ. ಕ್ರಿಮಿನಲ್ ನ್ಯಾಯಾಲಯವು ಕೊಲೆ, ಕಳ್ಳತನ, ದರೋಡೆ ಮೊದಲಾದ ವಿವಾದಗಳ ಬಗ್ಗೆ ವಿಚಾರಣೆ ನಡೆಸಿ ತೀರ್ಪುನೀಡುತ್ತದೆ.
ಕೆಲವು ಸಂದರ್ಭಗಳಲ್ಲಿ ಅಧೀನ ನ್ಯಾಯಾಲಯಗಳು ನೀಡಿದ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಅಪೀಲು (ಮೇಲ್ಮನವಿ) ಸಲ್ಲಿಸಬಹುದು; ಹಾಗೆಯೇ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸುವ ಅವಕಾಶವಿದೆ.
ಲೋಕ ಅದಾಲತ್ (ಜನತಾ ನ್ಯಾಯಾಲಯ): ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಮತ್ತು ಹೊಂದಾಣಿಕೆ ಮುಖಾಂತರ ವ್ಯಾಜ್ಯಗಳನ್ನು ತೀರ್ಮಾನ ಮಾಡುವುದಕ್ಕೆ ಸರ್ಕಾರ ಬೇರೆ ಬೇರೆ ವ್ಯವಸ್ಥೆಗಳನ್ನು ರೂಪಿಸಿದೆ. ಇಂತಹ ಒಂದು ವ್ಯವಸ್ಥೆಯೇ ಲೋಕ ಅದಾಲತ್ (ಜನತಾ ನ್ಯಾಯಾಲಯ).
ಲೋಕ ಅದಾಲತ್‍ಗಳನ್ನು ರಾಜ್ಯ ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳು ಅನುಕೂಲಕರವಾದ ಸ್ಥಳಗಳಲ್ಲಿ ಆಗಾಗ ವ್ಯವಸ್ಥೆ ಮಾಡುತ್ತಾರೆ. ಎರಡೂ ಪಕ್ಷದವರು ಪರಸ್ಪರ ಒಪ್ಪಿಗೆಯಿಂದ ರಾಜಿ ಮಾಡಿಕೊಳ್ಳಲು ಇಚ್ಚಿಸಿದರೆ ಅಂತಹ ಮೊಕದ್ದಮೆಯನ್ನು ಲೋಕ ಅದಾಲತ್ ಎತ್ತಿಕೊಳ್ಳುತ್ತದೆ. ಅದರ ತೀರ್ಪು ನ್ಯಾಯಾಲಯದ ತೀರ್ಪಿಗೆ ಸಮಾನ ಎಂದೇ ಪರಿಗಣಿಸಿ ಜಾರಿಗೊಳಿಸಬಹುದಾಗಿದೆ. ಲೋಕ ಅದಾಲತ್ತಿನ ತೀರ್ಪು ಅಂತಿಮವಾಗಿದ್ದು, ಇದಕ್ಕೆ ಎರಡೂ ಪಕ್ಷದವರು ಬದ್ಧರಾಗಿರುತ್ತಾರೆ. ಹೀಗಾಗಿ ಮುಂದಿನ ಖರ್ಚು, ನಷ್ಟ ಹಾಗೂ ವಿಳಂಬ ತಪ್ಪುತ್ತದೆ. ತೀರ್ಪಿನ ವಿರುದ್ಧ ಯಾವ ನ್ಯಾಯಾಲಯಕ್ಕೂ ಮೇಲ್ಮನವಿ ಮಾಡುವಂತಿಲ್ಲ. ಒಂದು ವೇಳೆ ಜೀವ ಬೆದರಿಕೆ ಹಾಕಿ ಒತ್ತಾಯದಿಂದ ರಾಜಿ ಮಾಡಿಸಿದ್ದರೆ ತಕ್ಷಣವೇ ಪೊಲೀಸರಿಗೆ ದೂರು ಸಲ್ಲಿಸಿ ಮೊಕದ್ದಮೆಯನ್ನು ಹಾಕಬಹುದು.
ಇದುವರೆಗೆ ಲೋಕ ಅದಾಲತ್ತುಗಳು ಅನೇಕ ಪ್ರಕರಣಗಳನ್ನು ಇತ್ಯರ್ಥ ಮಾಡಿವೆ. ಸದ್ಬಳಕೆಯಾದರೆ ಲೋಕ ಅದಾಲತ್ತುಗಳು ತುಂಬಾ ಉಪಯುಕ್ತ ನ್ಯಾಯಾಲಯಗಳಾಗಲು ಸಾಧ್ಯವಿದೆ.
ಹೊಸ ಪದಗಳು:– ವ್ಯಾಜ್ಯ – ಜಗಳ, ಕಲಹ. ನೋಂದಾಯಿಸಿದ – ದಾಖಲುಮಾಡಿದ.
ನಿಮಗೆ ತಿಳಿದಿರಲಿ
* ರಾಷ್ಟ್ರಪತಿಯವರ ಅಧಿಕಾರಾವಧಿಯಲ್ಲಿ ಅವರನ್ನು ದಸ್ತಗಿರಿ ಮಾಡುವಂತಿಲ್ಲ.
* ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ.
* ತಮ್ಮ ಅಧಿಕಾರವನ್ನು ಬಳಸಿ ನಿರ್ವಹಿಸಿದ ಯಾವುದೇ ಕಾರ್ಯವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು: ಸರಕಾರದ ಇಲಾಖೆಯೋ ಸಾರ್ವಜನಿಕ ಪ್ರಾಧಿಕಾರವೋ ಕಾನೂನನ್ನು ಅತಿಕ್ರಮಿಸಿದರೆ ಇಲ್ಲವೆ ದಬ್ಬಾಳಿಕೆ, ಅನ್ಯಾಯ ಮತ್ತು ಶೋಷಣೆಯಂತಹ ಕೃತ್ಯಗಳಲ್ಲಿ ತೊಡಗಿದರೆ, ಇದರಿಂದ ನೊಂದ ಯಾರೇ ಆಗಲಿ ನ್ಯಾಯಾಲಯಕ್ಕೆ ನೇರವಾಗಿ ದೂರುಪತ್ರವನ್ನು ಬರೆಯಬಹುದು. ಆ ಪತ್ರವನ್ನೇ ರಿಟ್ ಅರ್ಜಿಯೆಂದು ಪರಿಗಣಿಸಿ, ನ್ಯಾಯಾಲಯದ ಶುಲ್ಕವಿಲ್ಲದೆ, ನ್ಯಾಯಾಲಯವು ದೂರನ್ನು ವಿಚಾರಣೆ ಮಾಡುತ್ತದೆ.
