ಕರ್ನಾಟಕದ ಏಕೀಕರಣ ಮತ್ತು ಗಡಿ ವಿವಾದಗಳು – ಅಧ್ಯಾಯ 18
ಪಾಠದ ಪರಿಚಯ – ಕನ್ನಡ ನಾಡಿಗೆ ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಚರಿತ್ರೆಯಿದೆ. ಕನ್ನಡಿಗರು ಚಾರಿತ್ರಿಕವಾಗಿ ಬೇರೆ ಬೇರೆ ರಾಜಕೀಯ ವ್ಯವಸ್ಥೆಗಳಲ್ಲಿ ಬದುಕಿದವರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕನ್ನಡ ಭಾಷಿಕರ ಪ್ರದೇಶಗಳು ಮರಾಠಾ ಪೇಶ್ವೆಗಳು, ಪಾಳೇಗಾರರು, ಇಂಗ್ಲಿಷರು, ಸುಲ್ತಾನರು, ನವಾಬರು ಮುಂತಾದವರ ಆಳ್ವಿಕೆಯಲ್ಲಿ ಇಪ್ಪತ್ತು ಆಡಳಿತ ಘಟಕಗಳಲ್ಲಿ ಹಂಚಿಹೋದವು. ಇದರಿಂದ ಕನ್ನಡಿಗರು ಕನ್ನಡ ನೆಲದಲ್ಲಿಯೇ ಪರಕೀಯತೆಯ ಭಾವನೆಯನ್ನು ಅನುಭವಿಸುತ್ತಿದ್ದರು. ಬ್ರಿಟಿಷರು ಕಂದಾಯ ವಸೂಲಿಯ ಅನುಕೂಲಕ್ಕೆ ಮಾತ್ರ ಪ್ರದೇಶಗಳನ್ನು ವಿಭಜಿಸಿದರೇ ಹೊರತು, ಭಾಷೆ ಮತ್ತು ಸಂಸ್ಕೃತಿಯನ್ನು ಪರಿಗಣಿಸಲಿಲ್ಲ. ಈ ಅಧ್ಯಾಯದಲ್ಲಿ ಕರ್ನಾಟಕ ಏಕೀಕರಣ ಚಳವಳಿಯ ಹಂತಗಳನ್ನು ಪರಿಚಯಿಸಲಾಗಿದೆ. ಏಕೀಕರಣ ಸೃಷ್ಟಿಸಿದ ಗಡಿ ವಿವಾದಗಳನ್ನು ಕೂಡ ನಿರೂಪಿಸಲಾಗಿದೆ.
ಏಕೀಕರಣ ಚಳವಳಿಯ ಚಾರಿತ್ರಿಕ ಹಿನ್ನೆಲೆ
`ಕವಿರಾಜಮಾರ್ಗ’ ಕೃತಿಯಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಇತ್ತು ಎಂದು ವರ್ಣಿಸಲಾಗಿದೆ. ಅನೇಕ ಕನ್ನಡ ಅರಸುಮನೆತನಗಳು ಈ ಭಾಗವನ್ನು ಆಳಿದವು. ಆದರೆ ವಿಜಯನಗರ ಸಾಮ್ರಾಜ್ಯದ ಪತನಾನಂತರ ಕನ್ನಡ ಪ್ರದೇಶಗಳು ರಾಜಕೀಯ ಸ್ಥಿತ್ಯಂತರಗಳಿಗೆ ಒಳಗಾದವು. ರಾಜಕೀಯವಾಗಿ ಮೇಲ್ಗೈ ಸಾಧಿಸಿದ ಶಕ್ತಿಗಳು ಕನ್ನಡ ಮತ್ತು ಕನ್ನಡಿಗರನ್ನು ಗೌಣವಾಗಿಸಿದವು. ಟಿಪ್ಪುವಿನ ಮರಣದ ನಂತರ ಬ್ರಿಟಿಷರು ಕನ್ನಡ ಭಾಷೆಯನ್ನಾಡುವ ಪ್ರದೇಶಗಳನ್ನು ಬೇರೆ ಬೇರೆ ಭಾಷಿಕ ಹಿನ್ನೆಲೆಯ ರಾಜಕೀಯ ಶಕ್ತಿಗಳ ಅಧೀನಕ್ಕೆ ವರ್ಗಾಯಿಸಿದರು. ಕನ್ನಡಿಗರು ಮರಾಠ, ನಿಜಾಮ ಮುಂತಾದವರ ಅಧೀನದಲ್ಲಿ ಪರಕೀಯ ಭಾವನೆಯಿಂದ ಬದುಕುವ ಅನಿವಾರ್ಯತೆಯನ್ನು ಎದುರಿಸಿದರು. ಇಂತಹ ಪ್ರತಿಕೂಲ ಸನ್ನಿವೇಶಗಳಿಂದ ಹೊರಬಂದು ಕನ್ನಡಿಗರು ಒಂದು ರಾಜ್ಯವನ್ನು ಕಟ್ಟಿಕೊಂಡು, ಒಂದು ಆಡಳಿತದಲ್ಲಿರಲು ಹೋರಾಟಗಳನ್ನು ನಡೆಸಿದರು. ಇದನ್ನೇ ಏಕೀಕರಣ ಚಳವಳಿಯೆಂದು ಕರೆಯಲಾಗಿದೆ.
ಏಕೀಕರಣದ ಆರಂಭಿಕ ಹೆಜ್ಜೆಯನ್ನು ಇಟ್ಟವರು ಮುಂಬೈಕರ್ನಾಟಕ ಭಾಗದ ಜನರು. ರಾ.ಹಾ. ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ 1890ರಲ್ಲಿ ಆರಂಭವಾದ `ಕರ್ನಾಟಕ ವಿದ್ಯಾವರ್ಧಕ ಸಂಘ’ ಏಕೀಕರಣ ಕಲ್ಪನೆಗೆ ಸಾಂಸ್ಥಿಕ ರೂಪವನ್ನು ನೀಡಿತು. ವೆಂಕಟ ರಂಗೋ ಕಟ್ಟಿಯಂತಹ ಮಹನೀಯರು ಏಕೀಕರಣದ ಆರಂಭಿಕ ಹಂತದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
ಸಾ.ಶ. 1915ರಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಕರ್ನಾಟಕ ಸಭಾ (ಸಾ.ಶ. 1916) ಈ ಚಳವಳಿಯನ್ನು ಮುಂದುವರೆಸಿದವು.
ಸಾ.ಶ. 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣ ರಾವ್ ಅವರು `ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಸ್ವಾಗತಗೀತೆಯನ್ನು ಹಾಡುವ ಮೂಲಕ ಏಕೀಕರಣ ಚಳವಳಿಗೆ ವಿದ್ಯುತ್ ಸಂಚಲನವನ್ನು ತಂದುಕೊಟ್ಟರು. ಈ ಸಮ್ಮೇಳನದ ಅಧ್ಯಕ್ಷರಾಗಿದ್ದ ಗಾಂಧೀಜಿಯವರು ಏಕೀಕರಣಕ್ಕೆ ತಮ್ಮ ಬೆಂಬಲವನ್ನು ನೀಡಿದರು. ಏಕೀಕರಣ ಚಳವಳಿಯು ಸ್ವಾತಂತ್ರ್ಯ ಚಳವಳಿಗೆ ಪೂರಕವಾಗಿಯೆ ಬೆಳೆಯಿತು.
ಕರ್ನಾಟಕದ ಇಪ್ಪತ್ತು ಆಡಳಿತ ಪ್ರದೇಶಗಳು

ಏಕೀಕರಣ ಚಳವಳಿಯಲ್ಲಿ ಪತ್ರಿಕೋದ್ಯಮ ಮತ್ತು ಸಾಹಿತ್ಯದ ಪಾತ್ರ
ದಿನಪತ್ರಿಕೆ ಹಾಗೂ ವಾರಪತ್ರಿಕೆಗಳು ಮತ್ತು ಸಾಹಿತ್ಯ ಕೃತಿಗಳು ಇವು ಏಕೀಕರಣ ಚಳವಳಿಗೆ ಪ್ರೇರಣೆ ನೀಡಿದವು. ಮುಂಬೈಕರ್ನಾಟಕ, ಮೈಸೂರು ಸಂಸ್ಥಾನ ಮತ್ತು ಕರಾವಳಿ ಕರ್ನಾಟಕದಲ್ಲಿ ಅನೇಕ ಪತ್ರಿಕೆಗಳು ಪ್ರಕಟಗೊಳ್ಳುತ್ತಿದ್ದವು.
ಪ್ರಮುಖ ವೃತ್ತ ಪತ್ರಿಕೆಗಳು : ಮುಂಬೈಕರ್ನಾಟಕ `ವಿಜಯ’, `ರಾಜಹಂಸ’, `ಕರ್ನಾಟಕ ವೃತ್ತ’, `ಕನ್ನಡ ಕೇಸರಿ’, `ಕರ್ನಾಟಕ ವೈಭವ’, ಮೈಸೂರು ಸಂಸ್ಥಾನ `ಸೂರ್ಯೋದಯ ಪ್ರಕಾಶಿಕಾ’, `ಹಿತಬೋಧಿನಿ’, `ವೃತ್ತಾಂತ ಚಿಂತಾಮಣಿ’, `ಮೈಸೂರು ಹೆರಾಲ್ಡ್’.
ಕರ್ನಾಟಕದ ನಾಡುನುಡಿ ಸಂಸ್ಕೃತಿಗಳ ಸಂವರ್ಧನೆಗಾಗಿ ಶ್ರಮಿಸಿದ ಹಿರಿಯರೆಂದರೆ ಆಲೂರು ವೆಂಕಟರಾಯರು. ಕರ್ನಾಟಕದ ಅಂದಿನ ದುಃಸ್ಥಿತಿಯನ್ನು ಕಂಡು ಅವರು ಹೀಗೆಂದು ಉದ್ಗರಿಸಿದ್ದರು: “ಛೇ, ಕರ್ನಾಟಕವೆಲ್ಲಿದೆ?… ನಾಲ್ಕಾರು ಕಡೆ ಹರಿದು ಹಂಚಿಹೋದ ಕರ್ನಾಟಕವನ್ನು ಹೊಲಿದು ಅಖಂಡವಾಗಿ ಮಾಡುವವರಾರು? ಅಷ್ಟೊಂದು ಅಭಿಮಾನ ಉಂಟೇನು?”

ಕನ್ನಡನಾಡು ನುಡಿಗಳ ವೈಭವವನ್ನು ಕನ್ನಡಿಗರಿಗೆ ತಿಳಿಸುವುದೇ ವೆಂಕಟರಾಯರ ಉದ್ದೇಶವಾಗಿತ್ತು. ಅದಕ್ಕಾಗಿ ‘ಕರ್ನಾಟಕದ ಗತವೈಭವ’ ಎಂಬ ಪುಸ್ತಕ ಬರೆದು ತಮ್ಮ ಖರ್ಚಿನಿಂದ ಪ್ರಕಟಿಸಿದರು. ಇದು ಅತ್ಯಂತ ಸ್ಫೂರ್ತಿದಾಯಕ ಪುಸ್ತಕವಾಗಿತ್ತು. ಹೈದರಾಬಾದಿನ ಕನ್ನಡಿಗರು ಅವರಿಗೆ ಸನ್ಮಾನ ಮಾಡಿ (ಸಾ.ಶ. 1941) `ಕರ್ನಾಟಕ ಕುಲಪುರೋಹಿತ’ ಎಂಬ ಬಿರುದನ್ನು ಅರ್ಪಿಸಿದರು. ಮುಂಬೈಕರ್ನಾಟಕದಲ್ಲಿ ಕನ್ನಡಿಗರಲ್ಲಿ ಜಾಗೃತಿ ಮೂಡಿಬರಲು ಶಾಂತಕವಿಗಳ ಪಾತ್ರ ದೊಡ್ಡದು. ಸಾಹಿತ್ಯ ಸಮ್ಮೇಳನದ ಖರ್ಚಿಗಾಗಿ, “ಬೇಡಲು ಕನ್ನಡದಾಸಯ್ಯ ಬಂದಿಹ, ನೀಡಿರಮ್ಮಾ ತಡಮಾಡದಲೇ” ಎಂದು ದಾಸಯ್ಯನಾಗಿ ಹಾಡಿ ಹಣ ಸಂಗ್ರಹಿಸಿದರು. ಕುವೆಂಪು ಅವರ `ಜಯಹೇ ಕರ್ನಾಟಕ ಮಾತೆ’, `ನೀ ಮೆಟ್ಟುವ ನೆಲ ಅದೇ ಕರ್ನಾಟಕ’ ಮುಂತಾದವು ಲಕ್ಷೋಪಲಕ್ಷ ಕನ್ನಡಿಗರ ಹೃದಯ ತಟ್ಟಿತು. ಹುಯಿಲಗೋಳ ನಾರಾಯಣರಾವ್ ಅವರ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ನಾಡಗೀತೆಯು ಅತ್ಯಂತ ಜನಪ್ರಿಯವಾಯಿತು. ಕನ್ನಡದ ಮೊದಲ `ರಾಷ್ಟ್ರಕವಿ’ ಮಂಜೇಶ್ವರ ಗೋವಿಂದ ಪೈ ಅವರು ಕರ್ನಾಟಕದಲ್ಲಿ ಕಾಸರಗೋಡು ವಿಲೀನಗೊಳ್ಳಬೇಕೆಂದು ಕೊನೆಯವರೆಗೂ ಹೋರಾಡಿದರು. ಇನ್ನೂ ಅನೇಕ ಕವಿಗಳು, ಲೇಖಕರು ಕನ್ನಡಿಗರಲ್ಲಿ ತೀವ್ರ ಅಭಿಮಾನ ಮೂಡಿಸಿದರು.
ಸ್ವಾತಂತ್ರ್ಯೋತ್ತರ ಏಕೀಕರಣ ಚಳವಳಿ
ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲಾವಧಿಯ ಏಕೀಕರಣದ ಕನಸು ನನಸಾದುದು ದೇಶ ಸ್ವಾತಂತ್ರ್ಯಗಳಿಸಿದ ಅನಂತರವೇ, ಅದೂ ಮೂರು ಹಂತಗಳಲ್ಲಿ.
ಮೊದಲನೆಯ ಹಂತ (ಸಾ.ಶ. 1947-48)
1947ರ ಮೊದಲು ನಮ್ಮ ದೇಶದಲ್ಲಿ ಎರಡು ಬಗೆಯ ರಾಜ್ಯಗಳಿದ್ದುವು: ಬ್ರಿಟಿಷ್ ಭಾರತದ ಪ್ರಾಂತ್ಯಗಳು ಮತ್ತು ಅರಸೊತ್ತಿಗೆಯ (ಸಂಸ್ಥಾನಿಕ) 562 ರಾಜ್ಯಗಳು. ಸಂವಿಧಾನ ಸಭೆಯು ಭಾರತವನ್ನು ಭಾಷಾವಾರು ಪ್ರಾಂತ್ಯಗಳಾಗಿ ರೂಪಿಸದೆ, ಭಾರತವನ್ನು ನಾಲ್ಕು ಬಗೆಯ ಆಡಳಿತ ಘಟಕಗಳನ್ನಾಗಿ ವಿಂಗಡಿಸಿತು. ಅವೇ ಎ, ಬಿ, ಸಿ ಮತ್ತು ಡಿ ಘಟಕಗಳು. ಅದರಂತೆ ಕರ್ನಾಟಕದ ಇಪ್ಪತ್ತು ಆಡಳಿತ ಘಟಕಗಳನ್ನು ಐದು ಘಟಕಗಳಾಗಿ ಪುನರ್‍ವಿಂಗಡಿಸಲಾಯಿತು. ಈ ಐದು ಘಟಕಗಳೆಂದರೆ ಮುಂಬೈ, ಮದ್ರಾಸ್, ಮೈಸೂರು, ಹೈದರಾಬಾದ್ ಮತ್ತು ಕೊಡಗು ಕರ್ನಾಟಕಗಳು. ಇದು ಕರ್ನಾಟಕ ಏಕೀಕರಣದ ನಿಟ್ಟಿನಲ್ಲಿ ಮೊದಲನೆಯ ಹಂತವಾಯಿತು.
ಎರಡನೆಯ ಹಂತ (ಸಾ.ಶ. 1953)
ಸಾ.ಶ. 1951-52ರಲ್ಲಿ ಲೋಕಸಭೆಗೆ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆಯಿತು. ಚುನಾವಣೆಯ ನಂತರ ಉಗ್ರ ಚಳುವಳಿಯ ಮನೋಭಾವದ `ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್’ ಎಂಬ ಪಕ್ಷ ಉದಯಿಸಿತು (ಸಾ.ಶ. 1952). ಈ ಪಕ್ಷ ಏಕೀಕರಣಕ್ಕಾಗಿ ಸತ್ಯಾಗ್ರಹ ನಡೆಸಿ ಸುಮಾರು 5000 ಮಂದಿ ಬಂಧಿತರಾಗಿ ಸೆರೆಮನೆ ಸೇರಿದರು. ಅಂದಿನ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು ಏಕೀಕರಣಕ್ಕೆ ಬೆಂಬಲವನ್ನು ನೀಡಿದರು. ಇವರು ಏಕೀಕರಣದ ಪರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡರು.
ಸಾ.ಶ. 1952ರಲ್ಲಿ ಪೊಟ್ಟಿ ಶ್ರೀರಾಮುಲು ಎಂಬ ಆಂಧ್ರದ ಮುಖಂಡರು ಆಂಧ್ರ ಪ್ರಾಂತ್ಯವನ್ನು ರಚಿಸಲು ಒತ್ತಾಯಿಸಿ ಉಪವಾಸ ಕೈಗೊಂಡು 58 ದಿನಗಳ ನಂತರ ನಿಧನ ಹೊಂದಿದರು. ಆಂಧ್ರದಲ್ಲಿ ತೀವ್ರವಾದ ಗಲಭೆಗಳುಂಟಾದವು. ಶ್ರೀರಾಮುಲು ನಿಧನದ ಬಳಿಕ ಪ್ರಧಾನಿ ನೆಹರು ಆಂಧ್ರ ರಾಜ್ಯವನ್ನು ರಚಿಸಲು ಸರ್ಕಾರ ನಿರ್ಧರಿಸಿದೆಯೆಂದು ಘೋಷಿಸಿದರು. ಅದರಂತೆ ಆಂಧ್ರ ಪ್ರದೇಶ ರಚನೆಯಾಯಿತು (ಸಾ.ಶ. 1953).
ಆಂಧ್ರ ಪ್ರದೇಶ ರಚನೆಯಾದಾಗ ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳನ್ನು ಮೈಸೂರು ಪ್ರಾಂತ್ಯಕ್ಕೆ ಸೇರಿಸಲಾಯಿತು. ಇದು ಏಕೀಕರಣದ ಎರಡನೆಯ ಹಂತ.
ಕೊನೆಯ ಹಂತ (ಸಾ.ಶ. 1956)
ಆಂಧ್ರ ಪ್ರದೇಶ ರಚನೆಯಾದ ನಂತರ ಭಾಷೆಯ ಆಧಾರದಲ್ಲಿ ಭಾರತದ ಪುನರ್ ವಿಂಗಡನೆಯ ಬೇಡಿಕೆ ತೀವ್ರಗೊಂಡಿತು. ಕೇಂದ್ರ ಸರ್ಕಾರವು ರಾಜ್ಯಗಳ ಪುನರ್ ವಿಂಗಡನೆಯನ್ನು ಕುರಿತು ವರದಿ ನೀಡಲು `ರಾಜ್ಯ ಪುನರ್ ವಿಂಗಡಣಾ ಆಯೋಗ’ವನ್ನು (ಎಸ್.ಆರ್.ಸಿ.) ನೇಮಿಸಿತು. ಅದರ ಅಧ್ಯಕ್ಷರು ಎಸ್. ಫಜಲ್ ಅಲಿ (ಆದ್ದರಿಂದ `ಫಜಲ್ ಅಲಿ ಆಯೋಗ’ ಎನ್ನುವರು). ಅದರ ಇತರ ಸದಸ್ಯರು ಎಚ್.ಎನ್ ಕುಂಜ್ರು ಮತ್ತು ಕೆ.ಎಂ.ಪಣಿಕ್ಕರ್. ಆಯೋಗವು ಸಾ.ಶ. 1955ರಲ್ಲಿ ವರದಿಯನ್ನು ಸಲ್ಲಿಸಿತು. ಅದರಂತೆ ಭಾರತದ ರಾಜ್ಯಗಳ ಪುನರ್‍ವಿಂಗಡನೆಯು ಭಾಷೆ ಮತ್ತು ಆಡಳಿತದ ಅನುಕೂಲದ ನೆಲೆಗಳಲ್ಲಿ ನಡೆಯಿತು. ನಾಡಿನ ಎಲ್ಲ ಪಕ್ಷಗಳು ಆಯೋಗದ ವರದಿಯನ್ನು ಮಾನ್ಯ ಮಾಡಿದವು. ಆದರೆ ಕಾಸರಗೋಡನ್ನು ಕೇರಳ ರಾಜ್ಯಕ್ಕೆ ಸೇರಿಸಿದ್ದನ್ನೂ ಬಳ್ಳಾರಿ ಜಿಲ್ಲೆಯ ಕುರಿತು ಮಾಡಿದ ಸಲಹೆಗಳನ್ನೂ ಕನ್ನಡಿಗರು ಏಕಕಂಠದಿಂದ ಪ್ರತಿಭಟಿಸಿದರು. ಮೈಸೂರು ವಿಧಾನಸಭೆಯು ಬಳ್ಳಾರಿಯನ್ನು ಮೈಸೂರಿನಿಂದ ಪ್ರತ್ಯೇಕಗೊಳಿಸಬಾರದೆಂದೂ ನೂತನ ರಾಜ್ಯಕ್ಕೆ `ಮೈಸೂರು ರಾಜ್ಯ’ವೆಂದು ಹೆಸರಿಸಬೇಕೆಂದೂ ತೀರ್ಮಾನಕ್ಕೆ ಬಂತು. (ಫಜಲ್ ಆಲಿ ಆಯೋಗವು ಬಳ್ಳಾರಿ ಜಿಲ್ಲೆಯ ಬಹುಭಾಗವನ್ನು ಆಂಧ್ರ ಪ್ರದೇಶಕ್ಕೆ ಮರಳಿಸಲು ಶಿಫಾರಸು ಮಾಡಿತ್ತು). ಕೇಂದ್ರ ಸರ್ಕಾರವು ರಾಜ್ಯ ಪುನರವಿಂಗಡಣಾ ಆಯೋಗದ ವರದಿಯನ್ನು ಒಪ್ಪಿದ್ದರಿಂದ ಸಾ.ಶ. 1956ರ ನವೆಂಬರ್ 1 ರಂದು `ವಿಶಾಲ ಮೈಸೂರು ರಾಜ್ಯ’ ಎಂಬ ಹೆಸರಿನೊಂದಿಗೆ ಅಸ್ತಿತ್ವಕ್ಕೆ ಬಂತು.
ಏಕೀಕೃತಗೊಂಡ ಮೈಸೂರು ರಾಜ್ಯವು ಈ ಕೆಳಕಂಡ ಜಿಲ್ಲೆಗಳನ್ನು ಒಳಗೊಂಡಿತ್ತು.


ಕರ್ನಾಟಕ ಏಕೀಕರಣ (ಸಾ.ಶ. 1956)
ಮೈಸೂರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯನವರು ರಾಜ್ಯದ ಜನತೆಯನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಮಾಡಿದರು. ತರುವಾಯ 1956ರಲ್ಲಿ ಉದಯಿಸಿದ ಮೈಸೂರು ರಾಜ್ಯಕ್ಕೆ ಎಸ್. ನಿಜಲಿಂಗಪ್ಪನವರು ಪ್ರಥಮ ಮುಖ್ಯಮಂತ್ರಿಗಳಾದರು. ಸಾ.ಶ. 1973 ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸ್ ಅವರು ವಿಶಾಲ ಮೈಸೂರು ರಾಜ್ಯಕ್ಕೆ `ಕರ್ನಾಟಕ’ ಎಂದು ನಾಮಕರಣ ಮಾಡಿದರು.

ಗಡಿ ವಿವಾದಗಳು
ರಾಷ್ಟ್ರೀಯ ದೃಷ್ಟಿಕೋನದಲ್ಲೇ ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ಪರಿಗಣಿಸಿದ್ದರಿಂದ ಗಡಿಭಾಗದ ಕೆಲವು ಪ್ರದೇಶಗಳ ಕನ್ನಡಿಗರು ಅನ್ಯಾಯಕ್ಕೆ ಒಳಗಾದರು. ಭಾಷಿಕವಾಗಿ ಬಹು ಸಂಖ್ಯಾತರಾದರೂ ಬೇರೆ ಭಾಷಿಕ ಪ್ರಾಂತ್ಯಕ್ಕೆ ಸೇರ್ಪಡೆಯಾದ್ದರಿಂದ ಅಲ್ಲಿನ ಪರಿಸ್ಥಿತಿಯಲ್ಲಿ ಅವರು ಅಲ್ಪಸಂಖ್ಯಾತರಾದರು. ಹೀಗಾಗಿ ಇಂದಿಗೂ ಕರ್ನಾಟಕ ಸರ್ಕಾರ ಹಾಗೂ ಕನ್ನಡ ಹೋರಾಟಗಾರರು ಈ ಪ್ರದೇಶಗಳನ್ನು ಕರ್ನಾಟಕಕ್ಕೆ ಮರಳಿ ಪಡೆಯುವ ಆಶಾಭಾವನೆಯಿಂದ ಹೋರಾಟಗಳನ್ನು ನಡೆಸುತ್ತಿದ್ದಾರೆ. ಪ್ರಮುಖವಾಗಿ ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಜೊತೆ ನಿರಂತರ ಸಂಘರ್ಷ ನಡೆಯುತ್ತಿದೆ. ಆದರೆ ಈ ವಿಷಯವನ್ನು ಇತ್ಯರ್ಥಪಡಿಸುವ ಅಧಿಕಾರ ಕೇಂದ್ರ ಸರಕಾರದ ಬಳಿಯಿದೆ.
1. ಕರ್ನಾಟಕ ಮಹಾರಾಷ್ಟ್ರ ನಡುವಣ ವಿವಾದ: ಬಹುಸಂಖ್ಯಾತ ಕನ್ನಡಿಗರಿರುವ ಕೆಲವು ಪ್ರದೇಶಗಳು ಇಂದಿಗೂ ಮಹಾರಾಷ್ಟ್ರದಲ್ಲಿವೆ. ಅವುಗಳಲ್ಲಿ ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಮತ್ತು ಜತ್ ತಾಲ್ಲೂಕುಗಳು ಮುಖ್ಯವಾದವು. ಆದರೆ ಪ್ರಮುಖ ಸಂಘರ್ಷ ನಡೆದಿರುವುದು ಬೆಳಗಾವಿ ನಗರಕ್ಕಾಗಿ. ಮಹಾರಾಷ್ಟ್ರ ಸರಕಾರವು ಬೆಳಗಾವಿ ತನಗೆ ಸೇರಬೇಕೆಂದು ನಿರಂತರವಾಗಿ ಒತ್ತಡವನ್ನು ಹೇರುತ್ತಿದೆ.
ಕರ್ನಾಟಕ ಸರಕಾರ ಮತ್ತು ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರದ ಬೇಡಿಕೆಯನ್ನು ಸಮರ್ಥವಾಗಿ ಅಲ್ಲಗಳೆಯುತ್ತಲೇ ಬಂದಿವೆ. ಮಹಾರಾಷ್ಟ್ರ ಏಕೀಕರಣ ಸಮಿತಿಯು ಬೆಳಗಾವಿ ಮತ್ತು ಇತರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಪ್ರತಿಪಾದಿಸುತ್ತಲೇ ಇದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ಭಾಗಗಳನ್ನು ಕುರಿತು ಅಧ್ಯಯನ ಮಾಡಿ ಶಿಫಾರಸು ಮಾಡಲು ಸಾ.ಶ. 1966ರಲ್ಲಿ ಏಕಸದಸ್ಯ ಸಮಿತಿಯನ್ನು ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ನೇಮಕ ಮಾಡಿತು. ಮಹಾಜನ್ ವರದಿಯು ಬೆಳಗಾವಿ ಕರ್ನಾಟಕದ ಭಾಗವೆಂದೇ ಶಿಫಾರಸು ಮಾಡಿತು. ಕರ್ನಾಟಕದ ಪಾಲಿಗೆ ಮಹಾಜನ್ ವರದಿಯ ಶಿಫಾರಸ್ಸೇ ಅಂತಿಮ. ಕರ್ನಾಟಕ ಸರಕಾರವು ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ಕಟ್ಟಿಸಿ ಶಾಸನಸಭೆಗಳ ಕಲಾಪಗಳನ್ನು ವರ್ಷದಲ್ಲಿ ಒಂದು ಬಾರಿ ನಡೆಸುತ್ತ ಬರುತ್ತಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ.
2. ಕರ್ನಾಟಕ ಕೇರಳ ನಡುವಣ ವಿವಾದ: ಇಲ್ಲಿ ಪ್ರಮುಖ ವಿವಾದವಿರುವುದು ಕಾಸರಗೋಡು ಪ್ರದೇಶಕ್ಕೆ ಸಂಬಂಧಿಸಿದ್ದು. ಐತಿಹಾಸಿಕವಾಗಿ ಕಾಸರಗೋಡು ಪ್ರದೇಶ ಕನ್ನಡ ರಾಜವಂಶಗಳ ಆಳ್ವಿಕೆಗೆ ಸೇರಿತ್ತು. ಕೆಳದಿ ಸಂಸ್ಥಾನದ ಶಿವಪ್ಪ ನಾಯಕ ಮುಂತಾದವರು ಈ ಪ್ರದೇಶದ ಮೇಲೆ ತಮ್ಮ ಹಿಡಿತವನ್ನು ಸಾಧಿಸಿದ್ದರು. ಬೇಕಲ್ ಕೋಟೆಯನ್ನು ಇಕ್ಕೇರಿ ಸಂಸ್ಥಾನದವರು ಕಟ್ಟಿಸಿದ್ದರೆಂದು ದಾಖಲೆಗಳು ಹೇಳುತ್ತವೆ. ಹೀಗೆ ಸಾಂಸ್ಕೃತಿಕವಾಗಿ ಕನ್ನಡ ನಾಡಿನೊಂದಿಗೆ ಸಂಬಂಧವಿರುವ ಕಾಸರಗೋಡು ಇಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ರಾಜ್ಯ ಪುನರ್ ವಿಂಗಡಣಾ ಆಯೋಗವು ತನ್ನ ವರದಿಯಲ್ಲಿ (ಸಾ.ಶ. 1955) ಕಾಸರಗೋಡನ್ನು ಕೇರಳಕ್ಕೆ ವಿಲೀನಗೊಳಿಸಬೇಕೆಂದು ಶಿಫಾರಸು ಮಾಡಿದ್ದು. ಇದನ್ನು ವಿರೋಧಿಸಿ ಕರ್ನಾಟಕ ಸಮಿತಿ ಮುಂತಾದ ಹೋರಾಟ ಸಂಘಟನೆಗಳು ಹುಟ್ಟಿಕೊಂಡವು. ವಿದ್ಯಾರ್ಥಿಗಳು, ಮಹಿಳೆಯರು, ಸರಕಾರಿ ನೌಕರರು ಮುಂತಾದ ವಿವಿಧ ವರ್ಗದವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟ ಮಾಡಿದರು. ಇಂದಿಗೂ ಕಾಸರಗೋಡಿನ ಪರವಾದ ಹೋರಾಟದ ಪಂಜು ಉರಿಯುತ್ತಲೇ ಇದೆ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಅವರ ಸಹವರ್ತಿಗಳು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಹೋರಾಟಕ್ಕೆ ತಾತ್ವಿಕ ಮತ್ತು ಸಾತ್ವಿಕ ಬೆಂಬಲ ನೀಡುತ್ತಾ ಈ ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ.
