ಅಂಟಾರ್ಟಿಕ – ಅಧ್ಯಾಯ 27
ಪಾಠದ ಪರಿಚಯ: ಅಂಟಾರ್ಟಿಕ ಈ ಅಧ್ಯಾಯದಲ್ಲಿ ಅಂಟಾರ್ಟಿಕ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ, ಮೇಲ್ಮೈ ಲಕ್ಷಣ, ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿ ಸಂಪತ್ತು, ಅನ್ವೇಷಣೆ, ಅಂಟಾರ್ಟಿಕ ಒಪ್ಪಂದ ಮತ್ತು ಪ್ರಮುಖ ಸಂಶೋಧನಾ ಕೇಂದ್ರಗಳನ್ನು ಕುರಿತು ಪರಿಚಯಿಸಲಾಗಿದೆ.

ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ
ಸ್ಥಾನ: ದಕ್ಷಿಣ ಧ್ರುವದ ಸುತ್ತ ವ್ಯಾಪಿಸಿರುವ ಭೂಖಂಡ. ಅಂಟಾರ್ಟಿಕ ವೃತ್ತ ಅಥವಾ 660301 ದಕ್ಷಿಣ ಅಕ್ಷಾಂಶದೊಳಗೆ ಹರಡಿರುವ ಖಂಡ. ಉತ್ತರ ಧ್ರುವದಲ್ಲಿರುವ ಆರ್ಕ್‍ಟಿಕ್ ಸಾಗರಕ್ಕೆ ವಿರುದ್ಧವಾಗಿರುವುದು ಈ ಭೂಖಂಡದ ವೈಶಿಷ್ಟ್ಯ.
ವಿಸ್ತೀರ್ಣ: ಅಂಟಾರ್ಟಿಕವು ಪ್ರಪಂಚದ ಐದನೆಯ ದೊಡ್ಡ ಭೂಖಂಡ. ಇದರ ಒಟ್ಟು ವಿಸ್ತೀರ್ಣ 14.2 ಮಿಲಿಯನ್ ಚ.ಕಿ.ಮೀ.ಗಳು. ಇದು ಭಾರತ ಮತ್ತು ಚೀನಾ ದೇಶಗಳ ವಿಸ್ತೀರ್ಣಕ್ಕಿಂತ ದೊಡ್ಡದು. ಅಮೇರಿಕ ಸಂಯುಕ್ತ ಸಂಸ್ಥಾನದ ವಿಸ್ತೀರ್ಣದ ಒಂದೂವರೆಯಷ್ಟು ಇದೆ.
ಭೌಗೋಳಿಕ ಸನ್ನಿವೇಶ: ಅಂಟಾರ್ಟಿಕ ಖಂಡವನ್ನು ಸುತ್ತಲೂ ಜಲರಾಶಿಗಳು ಆವರಿಸಿವೆ. ಈ ಜಲರಾಶಿಯನ್ನು ದಕ್ಷಿಣ ಸಾಗರವೆಂದೇ ಕರೆಯಲಾಗಿದೆ. ಆದರೆ ಇದು ಪ್ರತ್ಯೇಕ ಜಲರಾಶಿಯಲ್ಲ, ಬದಲಾಗಿ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರಗಳು ಒಂದುಗೂಡಿರುವ ಭಾಗ. ಲ್ಯಾಟಿನ್ ಅಮೇರಿಕದ ದಕ್ಷಿಣದ ತುತ್ತತುದಿಯ ಕೇಪ್‍ಹಾರ್ನ್ ಈ ಖಂಡದ ಸಮೀಪಕ್ಕಿರುವ ಭೂಭಾಗ. ಇದು 990 ಕಿ.ಮೀ. ದೂರದಲ್ಲಿದೆ. ಈ ಖಂಡದ ಪೂರ್ವಕ್ಕೆ ಹಿಂದೂ ಮಹಾಸಾಗರ, ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರ ಹಾಗೂ ವಾಯುವ್ಯಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ.


ಮೇಲ್ಮೈ ಲಕ್ಷಣಗಳು
ಅಂಟಾರ್ಟಿಕ ಖಂಡದ ಶೇ.98 ಭಾಗ ಹಿಮಾವೃತವಾಗಿದೆ. ಇದರ ಭೂಮೇಲ್ಮೈ ಲಕ್ಷಣಗಳು ಬಹುವಾಗಿ ಮಂಜುಗಡ್ಡೆ ಹಾಳೆಯಿಂದ ಮುಚ್ಚಿ ಹೋಗಿವೆ. ಎತ್ತರವಾದ ಪರ್ವತ ಶಿಖರ ಮತ್ತು ಪ್ರಸ್ಥಭೂಮಿಗಳು ಗೋಚರಿಸುತ್ತವೆ. ಮಂಜುಗಡ್ಡೆಯ ಪದರವು ಸುಮಾರು 2,200 ಮೀಟರ್‍ಗಳಿಗಿಂತ ಹೆಚ್ಚು ಮಂದವಾಗಿದ್ದು, ಎಲ್ಲೆಡೆಯೂ ಶ್ವೇತವರ್ಣಮಯ. ಹೀಗಾಗಿ ಈ ಖಂಡವನ್ನು `ಶ್ವೇತ ಖಂಡ’, `ಹಿಮದ ಮರುಭೂಮಿ’ ಎಂತಲೂ ಹಾಗೂ ಅತ್ಯಂತ ಶೀತವಾಗಿರುವುದರಿಂದ `ಶೀತಲ ಖಂಡ’ ಎಂದೂ ಕರೆಯಲಾಗಿದೆ.
ಅಂಟಾರ್ಟಿಕ ಖಂಡದಲ್ಲಿ ಪರ್ವತ, ಪ್ರಸ್ಥಭೂಮಿ, ಕಣಿವೆ, ಕಂದರಗಳಂತಹ ಭೂಸ್ವರೂಪಗಳಿವೆ. ಸಮುದ್ರ ಮಟ್ಟಕ್ಕೆ ಸರಾಸರಿ 2,300 ಮೀಟರ್ ಎತ್ತರವುಳ್ಳ ಅಂಟಾರ್ಟಿಕವು ಭೂಗೋಳದ ಎತ್ತರವಾದ ಭೂಖಂಡವಾಗಿದೆ. ಟ್ರಾನ್ಸ್ ಅಂಟಾರ್ಟಿಕ ಪರ್ವತ ಸರಣಿಯು ಈ ಖಂಡವನ್ನು ಎರಡು ಪ್ರಮುಖ ಭೌಗೋಳಿಕ ವಿಭಾಗಗಳಾಗಿ ವಿಭಜಿಸುತ್ತದೆ:



1. ಪೂರ್ವ ಅಂಟಾರ್ಟಿಕ
2. ಪಶ್ಚಿಮ ಅಂಟಾರ್ಟಿಕ

1. ಪೂರ್ವ ಅಂಟಾರ್ಟಿಕವು ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಕಡೆಗೆ ಮುಖವಾಗಿದೆ. ಅವು ಈ ಖಂಡದ ಅರ್ಧಕ್ಕೂ ಹೆಚ್ಚಿನ ಭಾಗವನ್ನಾವರಿಸಿವೆ. ಆದ್ದರಿಂದ ಇದನ್ನು `ಗ್ರೇಟರ್ ಅಂಟಾರ್ಟಿಕ’ ಎನ್ನುವರು. ಇದರ ಕರಾವಳಿಯಲ್ಲಿ ಪರ್ವತ, ಕಣಿವೆ ಮತ್ತು ಹಿಮನದಿಗಳಿವೆ. ಈ ವಿಭಾಗದ ಮಧ್ಯಭಾಗ ಪ್ರಸ್ಥಭೂಮಿಯಾಗಿದೆ. ಅಲ್ಲಿ ದಕ್ಷಿಣ ಧ್ರುವವು ನೆಲೆಗೊಂಡಿದೆ.
2. ಪಶ್ಚಿಮ ಅಂಟಾರ್ಟಿಕವು ಪೆಸಿಫಿಕ್ ಸಾಗರದ ಕಡೆಗಿದೆ. ಇದರ ಬಹಳಷ್ಟು ಭಾಗವು ಸಮುದ್ರ ಮಟ್ಟದಿಂದ ಕೆಳಗಿದೆ. ಈ ಭೌಗೋಳಿಕ ವಿಭಾಗದ ಅಂಟಾರ್ಟಿಕ ಪರ್ಯಾಯ ಭಾಗವು ಪರ್ವತಗಳಿಂದ ಕೂಡಿದ್ದು, ಅದರ `S’ಆಕಾರದ ತುದಿಯು ದಕ್ಷಿಣ ಅಮೇರಿಕದ ಕಡೆಗೆ ಮೊನಚಾಗಿದೆ. ಇದರ ಸಮೀಪದಲ್ಲಿ ಹಲವು ದ್ವೀಪಗಳಿವೆ. ಜೊತೆಗೆ ಪರ್ವತ ಶಿಖರ ಮತ್ತು ಜ್ವಾಲಾಮುಖಿಗಳಿವೆ. ಈ ಭಾಗದ ಎಲ್ಸ್‍ವರ್ತ್ ಪರ್ವತ ಸರಣಿಯಲ್ಲಿರುವ ವಿನ್ಸನ್ ಮ್ಯಾಸಿಫ್ (5140 ಮೀ.) ಶಿಖರವು ಅಂಟಾರ್ಟಿಕ್ ಖಂಡದಲ್ಲೇ ಎತ್ತರವಾದುದು. ರಾಸ್ ದ್ವೀಪದಲ್ಲಿರುವ ಮೌಂಟ್ ಎರೆಬಸ್ ಎಂಬುದು ಅಂಟಾರ್ಟಿಕ ಖಂಡದ ಅತಿ ಪ್ರಮುಖ ಜಾಗೃತ ಜ್ವಾಲಾಮುಖಿಯಾಗಿದೆ. ಇದು ರಾಸ್ ಐಲ್ಯಾಂಡ್‍ನಲ್ಲಿದೆ. ಪ್ರಿನ್ಸ್ ಚಾಲ್ಸ್ ಎಂಬುದು ಮತ್ತೊಂದು ಪರ್ವತ.





ಟ್ರಾನ್ಸ್ ಅಂಟಾರ್ಟಿಕ ಪರ್ವತ ಸರಣಿಗಳ ವಿರುದ್ಧ ಅಂಚಿನಲ್ಲಿ ಎರಡು ದೊಡ್ಡ ಖಾರಿಗಳಿವೆ: ರಾಸ್ ಸಮುದ್ರ ಮತ್ತು ವೆಡೆಲ್ ಸಮುದ್ರ.


ಸಸ್ಯ ಮತ್ತು ಪ್ರಾಣಿಸಂಪತ್ತು
ಈ ಮೊದಲು ತಿಳಿಸಿದಂತೆ ಅಂಟಾರ್ಟಿಕ ಖಂಡವು ಹಿಮಾವೃತವಾಗಿದ್ದು ಪ್ರತಿಕೂಲವಾದ ಶೀತ ಹವಾಮಾನದಿಂದ ಕೂಡಿದೆ. ವರ್ಷದಲ್ಲಿ ಆರು ತಿಂಗಳು ಕತ್ತಲು ಮತ್ತು ಆರು ತಿಂಗಳು ಬೆಳಕಿನಿಂದ ಕೂಡಿದೆ. ಇಲ್ಲಿ ಜೀವಿಗಳ ಪೋಷಣೆ ಕಷ್ಟ. ಪಾಚಿ, ಶಿಲಾವಲ್ಕ ಮತ್ತು ಹಾವಸೆಗಳೇ ಇಲ್ಲಿನ ಪ್ರಮುಖ ಸಸ್ಯಗಳು. ಅವು ತೆರೆದ ಭಾಗದಲ್ಲಿರುವ ಬಂಡೆಗಳ ಮೇಲೆ ಕಂಡುಬರುತ್ತವೆ.
ಇಲ್ಲಿನ ಪ್ರತಿಕೂಲ ವಾಯುಗುಣವನ್ನು ನಿಭಾಯಿಸಬಲ್ಲ ಕೆಲವು ಪ್ರಾಣಿಗಳು ಜೀವಿಸುತ್ತವೆ. ಆದರೆ ಸುತ್ತಲಿನ ಜಲಭಾಗಗಳಲ್ಲಿ ವಿವಿಧ ಪ್ರಾಣಿಗಳನ್ನು ಕಾಣಬಹುದು. ಉದಾ: ಪೆಂಗ್ವಿನ್, ತಿಮಿಂಗಿಲ, ಸೀಲ್, ಕ್ರಿಲ್ ಮೀನು ಮತ್ತು ಬಗೆಬಗೆಯ ಪಕ್ಷಿಗಳು. ಸೀಗಡಿ ಮೀನು ಮತ್ತು ಇಂಚಾಕಗಳನ್ನು ಹೋಲುವ ಕ್ರಿಲ್‍ಗಳ ಸಂಖ್ಯೆ ಅಪಾರ. ಅವು ಗುಂಪುಗುಂಪಾಗಿ ಈಜುತ್ತಾ ಬದುಕುತ್ತವೆ. ಇಂಥ ಸೂಕ್ಷ್ಮ ಜೀವಿಗಳು ಸಮುದ್ರದ ದೊಡ್ಡ ಪ್ರಾಣಿ ಮತ್ತು ಮೀನುಗಳಿಗೆ ಮುಖ್ಯ ಆಹಾರವಾಗುತ್ತವೆ.
ಸಮುದ್ರ ತೀರಗಳಲ್ಲಿ ಅಸಂಖ್ಯಾತ ಪೆಂಗ್ವಿನ್‍ಗಳು ವಾಸಿಸುತ್ತವೆ. ಇವು ಹಾರಾಟ ಮಾಡದ ಪಕ್ಷಿಗಳು. ಅದಿಲೆ, ಎಂಪರರ್ ಪೆಂಗ್ವಿನ್ ಮತ್ತು ಚಿನ್‍ಸ್ಟ್ರಾಪ್ ಇವು ಇಲ್ಲಿನ ಪ್ರಮುಖ ಪೆಂಗ್ವಿನ್ ಪ್ರಭೇದಗಳು. ಹಿಮಾವೃತವಾದ ಈ ಖಂಡಕ್ಕೆ ಆಗಮಿಸುವ ಹಡಗುಗಳಿಗೆ ಮೊದಲು ಸ್ವಾಗತ ನೀಡುವವೇ ಅದಿಲೆ ಪೆಂಗ್ವಿನ್‍ಗಳು. ಈ ಖಂಡದ ಸಮೀಪದ ದ್ವೀಪಗಳು ಮತ್ತು ಸಮುದ್ರ ತೀರಗಳಲ್ಲಿ ಸೀಲ್ ಸಂತತಿ ಹೆಚ್ಚು. ಆರು ಬಗೆಯ ಸೀಲ್‍ಗಳನ್ನು ಗುರುತಿಸಲಾಗಿದೆ. ನಿರಂತರ ಬೇಟೆಯಿಂದ ಸೀಲ್ ಅಳಿವಿನಂಚಿನಲ್ಲವೆ.


* ಪೆಂಗ್ವಿನ್‍ಗಳು ತಮ್ಮ ಸಂತಾನಾಭಿವೃದ್ಧಿಗಾಗಿ ಕಲ್ಲು ಪೊಟರೆಗಳಲ್ಲಿ ನಿರ್ಮಿಸಿಕೊಂಡ ಗೂಡುಗಳಿಗೆ `ರೂಕರಿ’ ಎನ್ನುವರು.

* ದಕ್ಷಿಣ ಧ್ರುವಕ್ಕೆ ಸಮೀಪದಲ್ಲಿರುವ ಈ ಖಂಡದ `ವೋಸ್ಟಾಕ್’ ಪ್ರಪಂಚದಲ್ಲೇ ಅತ್ಯಂತ ಕಡಿಮೆ ಉಷ್ಣಾಂಶವನ್ನು ದಾಖಲಿಸುವ ಸ್ಥಳ (-890Iಸೆ).


ಅಂಟಾರ್ಟಿಕ ಯಾನ – ಅಂಟಾರ್ಟಿಕ ಒಪ್ಪಂದ
ಹದಿನೆಂಟನೆಯ ಶತಮಾನದ ಅಂತ್ಯಾವಧಿಯಿಂದಲೂ ಅಂಟಾರ್ಟಿಕ ಖಂಡ ಕುರಿತ ಸಂಶೋಧನೆ ನಡೆಯುತ್ತಿದೆ. ಹಲವು ಸಾಗರಯಾನಿಗಳು ಈ ಖಂಡದ ಶೋಧನೆಗೆ ಸಾಹಸಯಾನ ಮಾಡಿರುವರು. ಯು.ಎಸ್.ಎ ನೌಕಾಪಡೆಯ ಮುಖ್ಯಸ್ಥ ಚಾಲ್ರ್ಸ್ ವಿಲ್ಸ್ ಈ ಖಂಡವನ್ನು ಶೋಧಿಸಿದನು. ಅಂತಹವರಲ್ಲಿ ಬ್ರಿಟನ್ನಿನ ಪರಿಶೋಧಕ ಜೇಮ್ಸ್ ಕ್ಲಾರ್ಕ್‍ರಾಸ್ ಸಾ.ಶ. 1841ರಲ್ಲಿ (ಈತನ ಹೆಸರಿನಿಂದ ಕರೆಯುವ) ಈ ಖಂಡದ ರಾಸ್ ಸಮುದ್ರವನ್ನು ಪತ್ತೆಹಚ್ಚಿದ. ಇಂಗ್ಲೆಂಡಿನ ರಾಬರ್ಟ್ ಫಾಲ್ಕನ್ ಸ್ಕಾಟ್ ಈ ಸಮುದ್ರ ದಾಟುವುದರಲ್ಲಿ ಯಶಸ್ವಿಯಾದನು. ಪರಿಶೋಧಕರು ಬೇಸಿಗೆಯ ಅಂತಿಮಾವಧಿಯಲ್ಲಿ ಸಮುದ್ರದ ಮೂಲಕ ಈ ಖಂಡವನ್ನು ಪ್ರವೇಶಿಸುವರು. ಅನಂತರ ತಮ್ಮ ಚಳಿಗಾಲದ ಶಿಬಿರಕ್ಕೆ ನೆಲೆ ಮಾಡಿಕೊಳ್ಳುವರು.

ಅಂಟಾರ್ಟಿಕ ಖಂಡದ ಸಮಗ್ರ ಪರಿಶೋಧನೆ 20ನೆಯ ಶತಮಾನದ ಆರಂಭದಲ್ಲಿ ಪ್ರಾರಂಭಗೊಂಡಿತು. ಸಾ.ಶ. 1909ರಲ್ಲಿ ಇಂಗ್ಲೆಂಡಿನ ಷಾಕಲ್ಪನ್ ದಕ್ಷಿಣದ ಕಾಂತ ಧ್ರುವ ಕಂಡುಹಿಡಿದನು. ನಾರ್ವೆಯ ರೋಲ್ಡ್ ಅಮುಂಡ್‍ಸನ್ ಸಾ.ಶ. 1911ರಲ್ಲಿ ದಕ್ಷಿಣ ಧ್ರುವ ತಲುಪಿದನು. ಸಾ.ಶ. 1912ರಲ್ಲಿ ರಾಬರ್ಟ್ ಫಾಲ್ಕನ್ ಸ್ಕಾಟ್‍ನು ಸಹ ಅದೇ ಧ್ರುವವನ್ನು ತಲುಪಿ ಹಿಂತಿರುಗುವಾಗ ಕಾಲವಶನಾದನು. ಅವನ ದಿನಚರಿಯಲ್ಲಿ ದೊರೆತ ಮಾಹಿತಿಗಳು ಮುಂದಿನ ವೈಜ್ಞಾನಿಕ ಅನ್ವೇಷಣೆಗೆ ಹೆಚ್ಚು ನೆರವಾದವು. ಅಮೇರಿಕದ ನೌಕೌಪಡೆಯ ಅಡ್ಮಿರಲ್ ರಿಚರ್ಡ್ ಬೈರ್ಡ್ ಈ ಖಂಡದ ಪರಿಶೋಧನೆಗಾಗಿ ವಿಮಾನದ ಮೂಲಕ ಮೊದಲಿಗೆ (1929) ತಲುಪಿದನು. ತರುವಾಯ ಈ ಖಂಡದ ಅಧ್ಯಯನಕ್ಕೆ ಅನೇಕ ದೇಶಗಳು ಮುಂದಾದವು.
ಅಂಟಾರ್ಟಿಕ ಒಪ್ಪಂದ: ಇದು ಅಂಟಾರ್ಕ್ಟಿಕಾವನ್ನು ಕೇವಲ ವೈಜ್ಞಾನಿಕ ಸಂಶೋಧನೆಗಾಗಿ ಒಂದು ಸ್ಥಳವಾಗಿ ಇರಿಸಿಕೊಳ್ಳಲು ದೇಶಗಳ ನಡುವಿನ ಒಪ್ಪಂದವಾಗಿದೆ. ಆದ್ದರಿಂದ, ಇದನ್ನು ನಂತರ “ವಿಜ್ಞಾನದ ಖಂಡ” ಎಂದು ಕರೆಯಲಾಯಿತು. ಒಪ್ಪಂದವನ್ನು ವಾಷಿಂಗ್ಟನ್ DC ಯಲ್ಲಿ 1 ಡಿಸೆಂಬರ್ 1959 ರಂದು 12 ರಾಷ್ಟ್ರಗಳು ಸಹಿ ಹಾಕಿದವು ಮತ್ತು ಇದನ್ನು 23 ಜೂನ್ 1961 ರಂದು ಜಾರಿಗೊಳಿಸಲಾಯಿತು. ಈ ಒಪ್ಪಂದವು 600 ಅಕ್ಷಾಂಶದ ದಕ್ಷಿಣ ಪ್ರದೇಶಕ್ಕೆ ಅನ್ವಯಿಸುತ್ತದೆ. ಸದಸ್ಯ ರಾಷ್ಟ್ರಗಳು: ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಚಿಲಿ, ಫ್ರಾನ್ಸ್, ಜಪಾನ್, ನ್ಯೂಜಿಲೆಂಡ್, ನಾರ್ವೆ, ದಕ್ಷಿಣ ಆಫ್ರಿಕಾ, ರಷ್ಯಾ, ಇಂಗ್ಲೆಂಡ್ ಮತ್ತು ಅಮೇರಿಕಾ ಸದಸ್ಯ ರಾಷ್ಟ್ರಗಳಾಗಿವೆ.

ಒಪ್ಪಂದದ ಉದ್ದೇಶಗಳು: ಈ ಒಪ್ಪಂದದ ಪ್ರಕಾರ ಈ ಖಂಡವು ವೈಜ್ಞಾನಿಕ ಸಂಶೋಧನೆಗಷ್ಟೇ ಮೀಸಲು. ಅಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವಂತಿಲ್ಲ. ಯಾವ ದೇಶವೂ ನೆಲ, ಜಲದ ಮೇಲೆ ಸ್ವಾಮ್ಯ ಹೊಂದುವಂತಿಲ್ಲ. ಇಲ್ಲಿನ ಪರಿಸರವನ್ನು ಮಾಲಿನ್ಯಗೊಳಿಸುವಂತಿಲ್ಲ. ಈ ಖಂಡದ ಸಂಶೋಧನೆಗೆ ಬರುವವರು ಯಾವುದೇ ಹೊರ ಜೀವಿ ಪ್ರಭೇದವನ್ನು ತರುವಂತಿಲ್ಲ. ಅಲ್ಲದೆ ತಿಮಿಂಗಿಲಗಳ ಬೇಟೆಗೆ ನಿಷೇಧವಿದೆ. ವೈಜ್ಞಾನಿಕ ಮಾಹಿತಿಗಳ ಮುಕ್ತ ವಿನಿಮಯಕ್ಕೆ ಅವಕಾಶವಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಬೇಕು. ಒಟ್ಟಾರೆ ಈ ಖಂಡವು ಶಾಂತಿಯ ಉದ್ದೇಶಗಳಿಗೆ ಮಾತ್ರ ಮೀಸಲು.

ಪ್ರಪಂಚದ ಶೇ.90 ಭಾಗದ ಸಿಹಿನೀರು ಅಂಟಾರ್ಟಿಕ ಖಂಡದಲ್ಲಿ ಮಂಜುಗಡ್ಡೆಯ ರೂಪದಲ್ಲಿದೆ.
ಪ್ರಮುಖ ಸಂಶೋಧನಾ ಕೇಂದ್ರಗಳು
ಹಲವು ದೃಷ್ಟಿಯಿಂದ ಅಂಟಾರ್ಟಿಕ ಖಂಡವು ಜಾಗತಿಕ ಸಂಶೋಧನೆಗಾಗಿ ಮೀಸಲಾಗಿದ್ದು ವೈಜ್ಞಾನಿಕವಾದ ಆಸಕ್ತಿಯನ್ನು ಹುಟ್ಟಿಸುತ್ತದೆ. ಈ ಖಂಡದ ಉಗಮ ಮತ್ತು ಭೂರಚನೆ, ವಾಯುಗುಣದ ಪರಿಸ್ಥಿತಿ, ಜೀವಿಪರಿಸರ ವ್ಯವಸ್ಥೆ, ಜೈವಿಕ ವೈವಿಧ್ಯತೆ ಮತ್ತು ಸಂರಕ್ಷಣೆ, ಅಲ್ಲಿನ ಪರಿಸರ ಮಾಲಿನ್ಯ ಮತ್ತು ಪರಿಹಾರ, ತ್ಯಾಜ್ಯ ಪದಾರ್ಥಗಳ ವಿಲೇವಾರಿ ಮತ್ತು ನಿರ್ವಹಣೆ, ತೈಲ ಸೋರಿಕೆಯಿಂದಾಗುವ ಅವಘಡ ಮತ್ತು ಆ ಬಗ್ಗೆ ತೆಗೆದುಕೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮ ಮೊದಲಾದವುಗಳು ಸಂಶೋಧನಾ ವಿಷಯಗಳಾಗಿವೆ. ಈ ಬಗ್ಗೆ ಸಂಶೋಧನೆ ಮಾಡಲು ಪ್ರಪಂಚದ 30ಕ್ಕಿಂತ ಹೆಚ್ಚಿನ ರಾಷ್ಟ್ರಗಳು ತಮ್ಮ ಸಂಶೋಧನಾ ಕೇಂದ್ರಗಳನ್ನು ಇಲ್ಲಿ ಸ್ಥಾಪಿಸಿವೆ.
ಭಾರತವು ಸಹ ತನ್ನ ಸಂಶೋಧನಾ ಕೇಂದ್ರವನ್ನು ಈ ಖಂಡದಲ್ಲಿ ಸ್ಥಾಪಿಸಿದೆ. ಮೊಟ್ಟಮೊದಲಿಗೆ ಸಾ.ಶ. 1981ರ ಡಿಸೆಂಬರ 6ರಂದು ಎಸ್.ಜೆಡ್.ಕಾಸಿಂರ ನೇತೃತ್ವದಲ್ಲಿ ವಿಜ್ಞಾನಿಗಳ ತಂಡವು ಗೋವಾದಿಂದ ಪ್ರಯಾಣ ಆರಂಭಿಸಿತು. ಈ ತಂಡವನ್ನು ಒಯ್ದ ಪೋಲಾರ್ ಸರ್ಕಲ್ ನೌಕೆಯು ಸಾ.ಶ. 1982 ಜನವರಿ 9ರಂದು ಅಂಟಾರ್ಟಿಕ ಖಂಡವನ್ನು ತಲಪಿತು. ಭಾರತೀಯ ತಂಡ ಸ್ಥಾಪಿಸಿದ ಮೊದಲ ಸಂಶೋಧನಾ ಕೇಂದ್ರದ ಹೆಸರು “ದಕ್ಷಿಣ ಗಂಗೋತ್ರಿ”.ಇದು ನಿರ್ಮಾಣಗೊಂಡದ್ದು ಸಾ.ಶ. 1983ರಲ್ಲಿ ಮತ್ತು ಈ ಹೆಸರನ್ನು ಕೊಟ್ಟದ್ದು 1989ರಲ್ಲಿ. ಈಗ ಇದು ಮಾನವರಹಿತವಾಗಿದ್ದು ದಾಸ್ತಾನಿಗಷ್ಟೇ ಬಳಕೆಯಾಗುತ್ತಿದೆ.


ದಕ್ಷಿಣ ಗಂಗೋತ್ರಿ: ಮೊದಲ ಯಾನದ ಯಶಸ್ಸಿನ ನಂತರ ಈವರೆಗೆ ಸುಮಾರು 50 ಬಾರಿ ಭಾರತದ ಸಂಶೋಧನಾ ತಂಡಗಳು ಅಂಟಾರ್ಟಿಕ ಖಂಡಕ್ಕೆ ಹೋಗಿ ಬಂದಿವೆ. “ಮೈತ್ರಿ” ಎರಡನೆಯ ಸಂಶೋಧನಾ ಕೇಂದ್ರ. ಇದು ಶಿರ್ಮಾಚರ್ ಓಯಸಿಸ್ ಮೇಲೆ ನಿರ್ಮಾಣ ಗೊಂಡಿದೆ (ಸಾ.ಶ. 1988-89). ಇದು ಸರ್ವಋತು ಕೇಂದ್ರ ಮತ್ತು 26 ಮಂದಿ ಒಟ್ಟಿಗೆ ಇರಲು ಅನುಕೂಲವಿದೆ. ಇಲ್ಲಿಂದ 255 ಮೀ. ದೂರದಲ್ಲಿ ಸಿಹಿನೀರಿನ ಪೂರೈಕೆಗಾಗಿ “ಪ್ರಿಯದರ್ಶಿನಿ” ಎಂಬ ಸರೋವರವನ್ನು ಭಾರತ ನಿರ್ಮಿಸಿದೆ. ಮೈತ್ರಿ ಕೇಂದ್ರದಲ್ಲಿ ಭೂವಿಜ್ಞಾನ, ಭೂಗೋಳಶಾಸ್ತ್ರ ಮತ್ತು ಔಷಧಿಗಳ ಬಗ್ಗೆ ಸಂಶೋಧನೆ ನಡೆಯುತ್ತದೆ.
“ಭಾರತಿ” ಎಂಬ ಮತ್ತೊಂದು ಸಂಶೋಧನಾ ಕೇಂದ್ರವನ್ನು ಅಂಟಾರ್ಟಿಕದಲ್ಲಿ ಸ್ಥಾಪಿಸಲು ಭಾರತವು ಯೋಚಿಸಿದೆ. ಇದು ವಿಶೇಷವಾಗಿ ಸಾಗರಾಧ್ಯಯನ ಶೋಧನೆ ಉದ್ದೇಶವುಳ್ಳದ್ದು. ಅಗತ್ಯವಾದ ಸರ್ವೇಕಾರ್ಯವು ಈಗಾಗಲೇ ಮುಗಿದಿದೆ.
ಹೊಸ ಪದಗಳು: ಶ್ವೇತಖಂಡ, ಶೀತಲ ಖಂಡ, ವಿನ್ಸನ್ ಮ್ಯಾಸಿಫ್, ಎರೆಬಸ್, ಹಾವಸೆ, ಪೆಂಗ್ವಿನ್, ತಿಮಿಂಗಿಲ, ಸೀಲ್, ಸೀಗಡಿ, ಅದಿಲೆ, ಚಿನ್‍ಸ್ಕ್ರಾಪ್, ಕ್ರಿಲ್, ದಕ್ಷಿಣ ಗಂಗೋತ್ರಿ, ಮೈತ್ರಿ, ಭಾರತಿ.
