ಹೊಸ ಬಾಳು – ಪದ್ಯ – 5
ಬಿ.ಎಸ್. ಕುರ್ಕಾಲ
ಪ್ರವೇಶ : ಇಂದಿನ ಯಂತ್ರ ಯುಗದ ದಿನಗಳಲ್ಲಿ ಪಕ್ಷಿ ಸಂಕುಲ ವಿನಾಶದತ್ತ ಸರಿಯುತ್ತಿದೆ. ಅದರಲ್ಲೂ ನಿರುಪದ್ರವಿ ಜೀವಿ ಗುಬ್ಬಚ್ಚಿಗಳು ನಗರ ಸಂಸ್ಕೃತಿಯ ಅಬ್ಬರದಲ್ಲಿ ಕೊಚ್ಚಿ ಹೋಗುತ್ತಿವೆ. ಪಕ್ಷಿಗಳು ದುರಂತದೆಡೆಗೆ ಸಾಗುವುದು ನಿಜಕ್ಕೂ ನೋವುಂಟು ಮಾಡುವ ಸಂಗತಿ. ಎಲ್ಲೋ ಮರೆಯಾದ ಗುಬ್ಬಚ್ಚಿಗಳನ್ನು ನಮ್ಮ ಮನೆಗಳಿಗೆ ಮರಳಿ ಕರೆತರೋಣ. ನಿಸರ್ಗದ ಮುಗ್ಧ ಜೀವಿ ಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ.
ಮನೆಯ ಅಂಗಳದಲ್ಲಿ
ಗುಬ್ಬಿ, ದೇವರ ಹಕ್ಕಿ
ಚೀಂವ್ ಚೀಂವ್ ಎನ್ನುತ್ತ ಹಾಡುತಿತ್ತು
ಚಾವಡಿಯ ಗೋಡೆಯಲಿ
ಗಾಂಧಿ ತಾತನ ಚಿತ್ರ
ಗುಬ್ಬಚ್ಚಿಯನು ನಗುತ ನೋಡುತಿತ್ತು

ಪುಟ್ಟ ಹಕ್ಕಿಯು ತನ್ನ
ಕಾದಲನ ಕರೆಯುತ್ತ
ಬಿದ್ದಿರುವ ಕಾಳುಗಳ ಹುಡುಕುತಿತ್ತು
ಕಳ್ಳ ಹೆಜ್ಜೆಯ ಬೆಕ್ಕು
ಹೊಂಚು ಹಾಕುತ ಬರಲು
ಬುರ್ರನೆ ಹಾರಿ ತಾ ಪಾರಾಗುತಿತ್ತು
ಕರುಣೆ ತುಂಬಿದ ಕಣ್ಣು
ನವಿರಾದ ಹೂ ನಗೆಯು
ಮನೆ ಮಂದಿಗಳನೆಲ್ಲ ಸೆಳೆವ ನೋಟ
ಸರ್ವರೊಳು ಸವಿನುಡಿಯ
ಸಲ್ಲಾಪವಾಡುತಿಹ
ಹಕ್ಕಿ ಜೋಡಿಯು ಮನಕೆ ಮೋಜಿನಾಟ

ಗುಬ್ಬಚ್ಚಿ ಬಲು ಚುರುಕು
ಪಾದರಸದಾ ಸೆಳಕು
ತನ್ನ ಇನಿಯನ ಕೂಡಿ ಆಡುತಿತ್ತು
ಜೊತೆಯಾಗಿ ಹಾರಾಡಿ
ಜೊತೆಯಲ್ಲೆ ವಿಹರಿಸುತ
ಅಂಗಳಕೆ ಶೋಭೆಯನು ನೀಡುತಿತ್ತು

ಅಚ್ಚು ಮೆಚ್ಚಿನ ಜೋಡಿ
ಅನುಕೂಲ ದಾಂಪತ್ಯ
ಬೆರಗುಗೊಳಿಸುವ ಪ್ರತಿಭೆ ಗುಬ್ಬಿಗಳಿಗೆ
ಉಭಯ ಪಕ್ಷಿಗಳಲ್ಲಿ
ಮಿಗಿಲು ಯಾವುದು ಎಂದು
ಹೇಳಲಾಗದು ಬುದ್ಧಿ ಜೀವಿಗಳಿಗೆ
ಅರಳೆ ಹುಲುಕಡ್ಡಿಗಳ
ಹುಡುಕಿ ಸಂಗ್ರಹಿಸುತ್ತ
ಹಕ್ಕಿಗಳು ಕಟ್ಟಿದವು ಮನೆಯೊಂದನು
ಗಾಂಧಿ ಚಿತ್ರದ ಹಿಂದೆ
ಸಜ್ಜಾದ ಗೂಡಿನಲಿ
ಹೂಡಬೇಕೆಂಬಾಸೆ ಹೊಸ ಬಾಳನು
ಪದ್ಯದ ಮಾದರಿ ಗಾಯನ
6th Standard II ಹೊಸ ಬಾಳು ಪದ್ಯದ ಸುಮಧುರ ಗಾಯನ- Hosa Balu Poem
ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಕವಿ ಕೃತಿ ಪರಿಚಯ: 
ಹೊರನಾಡಾದ ಮುಂಬಯಿಯಲ್ಲಿ ನೆಲೆಗೊಂಡಿರುವ ಬಿ.ಎಸ್. ಕುರ್ಕಾಲರ ನಿಜನಾಮಧೇಯ ಭುಜಂಗಶೆಟ್ಟಿ. ಜನನ: 1932 ಜುಲೈ 17. ಇವರ ತಂದೆ ಕುರ್ಕಾಲು ಗಣಪಯ್ಯಶೆಟ್ಟಿ, ತಾಯಿ ಲಕ್ಷ್ಮಿಶೆಡ್ತಿ. ಹುಟ್ಟೂರಾದ ಉಡುಪಿಯ ಪಾಜಕದಿಂದ 1966ರಲ್ಲಿ ಮುಂಬಯಿಗೆ ಹೋದವರು ಅಲ್ಲಿ ಶಿಕ್ಷಕ ವೃತ್ತಿ ಕೈಗೊಂಡರು. ನಟ, ನಾಟಕಕಾರ, ನಿರ್ದೇಶಕ, ಕವಿ, ಪತ್ರಿಕಾ ಸಂಪಾದಕ, ಅಂಕಣಕಾರ, ಯಕ್ಷಗಾನ ಅರ್ಥಧಾರಿ- ಹೀಗೆ ವಿವಿಧ ವಲಯಗಳಲ್ಲಿ ಅವರ ಸೇವೆ ಸಂದಿದೆ. ನನ್ನ ನಿನ್ನ ಅಂತರಂಗ, ಶ್ರಾವಣ ಲಹರಿ, ಬರೆಯುವೆನು ನಿನಗಾಗಿ, ರಾಗ ರಶ್ಮಿ ಮುಂತಾದ ಕವನ ಸಂಕಲನಗಳೂ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು, ಮುಂಬಯಿ ಕರ್ನಾಟಕ ಸಂಘ ಮುಂತಾದ ಅನೇಕ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿವೆ. ಪ್ರಸ್ತುತ ಪದ್ಯವನ್ನು ಕುರ್ಕಾಲ ಅವರ ‘ಬರೆಯುವೆನು ನಿನಗಾಗಿ’ ಕವನಸಂಕಲನದಿಂದ ಆರಿಸಲಾಗಿದೆ.
ಪದಗಳ ಅರ್ಥ
ಚಾವಡಿ – ಜಗಲಿ, ಹಳ್ಳಿಯಲ್ಲಿ ಪಂಚಾಯತಿ ನಡೆಯುವ ಸ್ಥಳ.
ಕಾದಲ – ಇನಿಯ, ಪ್ರೀತಿಸುವಾತ.
ಹೊಂಚು – ಉಪಾಯ ಮಾಡು, ರಹಸ್ಯ ಕಾರ್ಯ ನಡೆಸು.
ಸರ್ವರೊಳು – ಎಲ್ಲರೊಳು.
ಕರುಣೆ – ಕನಿಕರ, ದಯೆ.
ಮೋಜು – ವಿನೋದ, ತಮಾಷೆಯಾಟ.
ಸಜ್ಜು – ಸಿದ್ಧತೆ, ತಯಾರಿ.
ಸೆಳಕು – ಚುರುಕು, ಚಟುವಟಿಕೆ.
ಬೆರಗು – ಆಶ್ಚರ್ಯ, ವಿಸ್ಮಯ, ಸೋಜಿಗ.
ಶೋಭೆ – ಸೊಗಸು, ಸೊಬಗು.
ಮಿಗಿಲು – ಶ್ರೇಷ್ಠವಾದುದು.
ಸಂಗ್ರಹಿಸು – ಒಟ್ಟುಮಾಡು, ಕೂಡಿಸು.
ಉಭಯ – ಎರಡು, ಜೋಡಿ.
ಅರಳೆ – ಹತ್ತಿ.
ಹುಲು – ಹುಲ್ಲು, ಲಘುವಾದ.
ವಿವರ ತಿಳಿಯಿರಿ:
ಸಲ್ಲಾಪವಾಡು – ಹಿತವಾದ ಮಾತುಗಳನ್ನು ವಿನಿಮಯ ಮಾಡುವುದು.
ಅನುಕೂಲ ದಾಂಪತ್ಯ – ಗಂಡ ಹೆಂಡತಿಯರು ಪರಸ್ಪರ ಅರಿತುಕೊಂಡು ಬಾಳುವೆ ನಡೆಸುವುದು.
ಸಂವೇದ ವಿಡಿಯೋ ಪಾಠಗಳು
SAMVEDA 6th KannadaFL HosaBalu 1of1 6 FLK
ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ
ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ವ್ಯಾಕರಣ ಮಾಹಿತಿ – ಸಮಾಸ
ಕೆಳಗಿನ ಪದಗಳನ್ನು ಗಮನಿಸಿರಿ.
ಅರಸನ + ಮನೆ = ಅರಮನೆ.
ಹಿರಿದು + ಮರ = ಹೆಮ್ಮರ.
ಗಿಡವೂ + ಮರವೂ + ಬಳ್ಳಿಯೂ = ಗಿಡಮರಬಳ್ಳಿಗಳು.
ಕೈಯನ್ನು + ಮುಗಿ = ಕೈಮುಗಿ.
ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಲೋಪಬಾರದ ರೀತಿಯಲ್ಲಿ ಸಮಾಸ ಪದಗಳಾಗುತ್ತವೆ. ಇವುಗಳಿಗೆ ‘ಸಮಸ್ತಪದಗಳು’ ಎಂದೂ ಕರೆಯುತ್ತಾರೆ. ಸಮಾಸಪದವನ್ನು ಬಿಡಿಸಿ ಬರೆಯುವುದಕ್ಕೆ ‘ವಿಗ್ರಹ ವಾಕ್ಯ’ ಎನ್ನುವರು.
ಉದಾ: ತಲೆಯಲ್ಲಿ + ನೋವು = ತಲೆನೋವು
ಇಲ್ಲಿ ‘ತಲೆನೋವು’ ಎಂಬ ಪದವನ್ನು ‘ವಿಗ್ರಹವಾಕ್ಯ’ ಮಾಡಿ ಬರೆಯಲಾಗಿದೆ.
ಮೊದಲನೆಯ ಪದವನ್ನು ‘ಪೂರ್ವಪದ’ವೆಂದೂ ಎರಡನೆಯ ಪದವನ್ನು ‘ಉತ್ತರಪದ’ವೆಂದೂ ಕರೆಯುವರು.
ಸಮಾಸಗಳಲ್ಲಿ ಎಂಟು ವಿಧ.
ತತ್ಪುರುಷಸಮಾಸ
ಅಂಶಿಸಮಾಸ
ಕರ್ಮಧಾರೆಯಸಮಾಸ
ಬಹುವ್ರೀಹಿಸಮಾಸ
ದ್ವಿಗುಸಮಾಸ
ಕ್ರಿಯಾಸಮಾಸ
ದ್ವಂದ್ವಸಮಾಸ
ಗಮಕಸಮಾಸ
ವ್ಯಾಕರಣ ವಿಡಿಯೋಗಳು
Kannada grammar | ಕನ್ನಡ ವ್ಯಾಕರಣ | ಸಮಾಸಗಳು | Samasagalu | ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಾಸಗಳು (samasa in kannada) | ಲಿಂಕ್ ಮೇಲೆ ಕ್ಲಿಕ್ ಮಾಡಿ
ಯೋಜನೆ
ನಿಮಗೆ ಗೊತ್ತಿರುವ ಪಕ್ಷಿಗಳ ಚಿತ್ರಗಳನ್ನು ಸಂಗ್ರಹಿಸಿ ಚಿತ್ರಸಂಪುಟ ತಯಾರಿಸಿರಿ.
ಪರಿಸರ ಸಂರಕ್ಷಣೆಗೆ ನೀವು ಕೈಗೊಂಡ ಕಾರ್ಯಗಳನ್ನು ಪಟ್ಟಿ ಮಾಡಿರಿ.
ಪರಿಸರ ಸಂರಕ್ಷಣೆಗೆ 10 ಸೂತ್ರಗಳು | ಲಿಂಕ್ ಮೇಲೆ ಕ್ಲಿಕ್ ಮಾಡಿ
ಶುಭ ನುಡಿ
ನುಡಿಯಲು ಒಳ್ಳೆಯ ಮಾತುಗಳು ಇರುವಾಗ ಕೆಟ್ಟ ಮಾತುಗಳನ್ನು ಆಡುವುದೇಕೆ?
ಆತ್ಮಶಕ್ತಿ ಇರುವವರನ್ನು ಯಾವ ದುಷ್ಟಶಕ್ತಿಯೂ ನಾಶಗೊಳಿಸಲಾರದು.
ಗೌರವಕೊಟ್ಟು ಗೌರವ ಪಡೆಯೋಣ.
