ಸದಾ ತರಗತಿ ಕೋಣೆಯಲ್ಲಿ ಬಿಡುವಿಲ್ಲದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳನ್ನು ಶೈಕ್ಷಣಿಕ ವರ್ಷದಲ್ಲಿ ಒಂದು ದಿನ ನಿಸರ್ಗದ ಮಡಿಲಿಗೆ ಕರೆದೊಯ್ದು ಪರಿಸರದ ಸ್ವ-ಅನುಭವ ನೀಡಿದರೆ ಹೇಗೆ ? ಯಾವ ವಿದ್ಯಾರ್ಥಿ ಇದನ್ನು ಇಷ್ಟಪಡುವುದಿಲ್ಲ ? ಅಂತೆಯೇ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯ ವಿದ್ಯಾರ್ಥಿಗಳನ್ನು ಕಳೆದ ಐದು ವರ್ಷಗಳಿಂದ ಶಾಲೆಯಿಂದ 3 ಕಿ.ಮೀ. ದೂರದಲ್ಲಿರುವ ತೆಪ್ಪಸಾಲು(ಕಾರಗದ್ದೆ) ಪಕ್ಕದಲ್ಲಿ ಹರಿಯುವ ಅಘನಾಶಿನಿ ನದಿಯ ತೀರದಲ್ಲಿ ಹೊರಸಂಚಾರವನ್ನು ಆಯೋಜಿಸುತ್ತಿದ್ದೇವೆ.
ಸಾಮಾನ್ಯವಾಗಿ ಮಳೆಗಾಲ ಕಳೆದು ಬೇಸಿಗೆಗಾಲ ಸಮೀಪಿಸುತ್ತಿದ್ದಂತೆ ಜನ ಪ್ರವಾಸಕ್ಕೆಂದು ಗಿರಿಧಾಮಗಳಿಗೋ, ಹೊಳೆಯ ತೀರಕ್ಕೋ ಅಥವಾ ಕಡಲಿನ ತೀರಕ್ಕೋ ಭೇಟಿ ನೀಡುವುದು ಸಹಜ. ಕುಟುಂಬದೊಂದಿಗೆ, ಸಂಬಂಧಿಕರೊಂದಿಗೆ ಅಥವಾ ಗೆಳೆಯರೊಂದಿಗೆ ಹೊರಸಂಚಾರ ಕೈಗೊಂಡು ನಿಸರ್ಗದ ಮಡಿಲಲ್ಲಿ ಒಂದು ದಿನ ಕಳೆದರೆ ಮೈಮನಸ್ಸು ನವಚೈತನ್ಯ ಪಡೆಯುತ್ತದೆ. ಇವೆಲ್ಲ ನಮಗೆ ತಿಳಿದಿರುವ ವಿಚಾರ. ಈ ಲೇಖನದಲ್ಲಿ ಹೀಗೊಂದು ಹೊರಸಂಚಾರ ಕೈಗೊಳ್ಳಬಹುದಾದ ಸ್ಥಳದ ಕುರಿತು ಇರುವ ವಿಶೇಷತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಈ ಸ್ಥಳದ ಹೆಸರು ‘ತೆಪ್ಪಸಾಲು’ ಎಂದು. ಇದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಿಂದ 30 ಕಿ.ಮೀ. ದೂರದ ಹಾವಿನಬೀಳು ಗ್ರಾಮದಲ್ಲಿ ಇದೆ. ಅಘನಾಶಿನಿ ನದಿ ದಡದಲ್ಲಿರುವ ಈ ಪ್ರದೇಶ ಸಮುದ್ರದ ಮರಳಿನ ತೀರದಂತೆ ವಿಶಾಲವಾಗಿಯೂ, ಮನೋಹರವಾಗಿಯೂ ಇದೆ. ಪ್ರಕೃತಿ ಮಡಿಲಲ್ಲಿ ಹಾದು ಹೋಗುವ ನದಿಯು ತನ್ನ ಸೌಂದರ್ಯದಿಂದ ನೋಡುಗರ ಕಣ್ಣುಗಳಿಗೆ ಅದರಲ್ಲೂ ನಿಸರ್ಗ ಪ್ರೇಮಿಗಳಿಗಂತೂ ಹಬ್ಬದ ವಾತಾವರಣವನ್ನು ಸೃಷ್ಠಿಸುತ್ತದೆ ಎಂದರೆ ತಪ್ಪಾಗಲಾರದು. ಸಿದ್ದಾಪುರ ತಾಲ್ಲೂಕಿನಲ್ಲಿ ಬೇರೆಲ್ಲೂ ಕೂಡ ಈ ರೀತಿಯಾಗಿರುವ ನದಿತೀರ ಕಾಣಸಿಗುವುದು ಬಲು ಅಪರೂಪ. ಚಿಕ್ಕ ಮಕ್ಕಳಿಗೆ ನೀರಿನಾಟ ಹಾಗೂ ಮರಳಿನಾಟ ಆಡಲು ಸೂಕ್ತವಾದ ಸ್ಥಳ. ಅಷ್ಟೇ ಅಲ್ಲದೇ ರಾತ್ರಿ ಫೈರ್ ಕ್ಯಾಂಪ್ ಮಾಡಲೂ ಸಹ ಅತ್ಯಂತ ಯೋಗ್ಯವಾದ ಸ್ಥಳವಾಗಿದೆ.
ಈ ಸ್ಥಳಕ್ಕೆ ‘ಗೇಜ್‍ಕಟ್’ ಎಂದೂ ಕರೆಯುತ್ತಾರೆ. ಕಾರಣ ಕರ್ನಾಟಕ ಸರ್ಕಾರದ ವಿದ್ಯುತ್ ಉತ್ಪಾದನೆ ಮಾಡುವ ಇಲಾಖೆಯು ಈ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸುವ ಉದ್ದೇಶದಿಂದ ಈ ಸ್ಥಳವನ್ನು ಗುರುತಿಸಿ ಅಂದಾಜು 9 ವರ್ಷಗಳವರೆಗೆ ಮಳೆಗಾಲ ಹಾಗೂ ಬೇಸಿಗೆಗಾಲದಲ್ಲಿ ನೀರಿನ ಹರಿಯುವಿಕೆಯ ವೇಗವನ್ನು ಪರೀಕ್ಷಿಸಿದ್ದರು. ಅಲ್ಲದೇ ನದಿಯ ಮಧ್ಯೆ ಭಾಗದಲ್ಲಿರುವ ಬಂಡೆಗಲ್ಲುಗಳನ್ನು ಸಿಡಿಮದ್ದುಗಳಿಂದ ಸ್ಪೋಟಿಸಿ, ಸಮತಟ್ಟು ಮಾಡಿ ಕಾಂಕ್ರಿಟ್‍ನ ಅಡಿಪಾಯ ಹಾಕಿ ನೀರು ಒಂದೇ ಅಳತೆಯಲ್ಲಿ ಹರಿಯುವಂತೆ ಮಾಡಿದ್ದಾರೆ. ಈ ಕಾಂಕ್ರಿಟ್ ಅಡಿಪಾಯವು ಈಗಲೂ ಇದೆ. ಮಣ್ಣಿನ ಪರೀಕ್ಷೆಗಾಗಿ ನದಿಯ ಎರಡೂ ದಂಡೆಯ ಮೇಲೆ ನಿರ್ಮಿಸಿದ ಬಾವಿಯಾಕಾರದ ಹೊಂಡಗಳು ಈಗಲೂ ಕಾಣಬಹುದಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಅಣೆಕಟ್ಟು ನಿರ್ಮಿಸುವುದು ಅಸಾಧ್ಯವಾದ್ದರಿಂದ ಅಂದಾಜು 1979ರಲ್ಲಿ ಕೆಲಸ ಸ್ಥಗಿತಗೊಳಿಸಿದರೆಂದು ಸ್ಥಳೀಯರು ನುಡಿಯುತ್ತಾರೆ. ನೀರನ್ನು ಅಳತೆ ಮಾಡಲು ನಿರ್ಮಿಸಿದ ಕಟ್ಟನ್ನು ಇಲ್ಲಿಯ ಸ್ಥಳೀಯರು “ಗೇಜ್‍ಕಟ್” ಎಂದು ಕರೆಯುತ್ತಾರೆ. ಇದೂ ಕೂಡ ನೋಡಬಹುದಾದ ಉತ್ತಮ ಸ್ಥಳವಾಗಿದೆ. ಈ ಸ್ಥಳವನ್ನು ಗೂಗಲ್ ಮ್ಯಾಪ್‍ನಲ್ಲಿ ಗುರುತಿಸಬಹುದಾಗಿದೆ.
ಈ ಸುಂದರ ಸ್ಥಳದ ವೀಕ್ಷಣೆಗಾಗಿ ಸಕಲ ಸಿದ್ಧತೆಯೊಂದಿಗೆ ತೆರಳಿ, ಮಕ್ಕಳಿಗೆ ನದಿ ದಂಡೆಯ ಮೇಲಿರುವ ಮಾವಿನ ಮರ, ಹಲಸಿನ ಮರ, ಹೆಬ್ಬಲಸು, ಪೇರಲ, ಹೊನ್ನೆ ಹೀಗೆ ಹಲವಾರು ಮರಗಳನ್ನು, ಪಕ್ಷಿಗಳ ಗೂಡು, ಜೇನುಗೂಡು, ಗೆದ್ದಲು ಗೂಡು, ಹಕ್ಕಿಗಳ ಚಿಲಿಪಿಲಿ ಇವುಗಳ ಪರಿಚಯ ಮಾಡಿಕೊಡಲಾಯಿತು.
ಮಧ್ಯಾಹ್ನದ ಭೋಜನದಲ್ಲಿ ಮಕ್ಕಳು ಅನ್ನ-ಸಾಂಬಾರ್, ತಂಬುಳಿ, ಸಲಾಡ್, ಪಾಯಸ, ಕಾಂದಾಭಜೆ ಹಾಗೂ ಹೋಳಿಗೆಯನ್ನು ಸವಿದರು. ಈ ರೀತಿಯಾಗಿ ಪ್ರಕೃತಿದತ್ತ ಸುಂದರ ಪ್ರದೇಶದಲ್ಲಿ ಪ್ರತಿ ವರ್ಷ ಹೊರ ಸಂಚಾರವನ್ನು ಆಯೋಜಿಸಿ ಮಕ್ಕಳಿಗೆ ಪರಿಸರದ ಸ್ವ-ಅನುಭವವನ್ನು ನೀಡುತ್ತ ಬರುತ್ತಿದ್ದೇವೆ.
ಈ ಸ್ಥಳಕ್ಕೆ ಭೇಟಿ ನೀಡುವವರು ಸಿದ್ದಾಪುರದಿಂದ ಬಿಳಗಿ ಮಾರ್ಗವಾಗಿ ಸೋವಿನಕೊಪ್ಪದಿಂದ ಬರಬಹುದಾಗಿದೆ. ಅಥವಾ ಸಿದ್ದಾಪುರದಿಂದ ಹಾರ್ಸಿಕಟ್ಟಾ ಮಾರ್ಗವಾಗಿ ಚಿಟ್ಟಟ್ಟೆಮನೆ ಮಾರ್ಗವಾಗಿಯೂ ಸಹ ಬರಬಹುದಾಗಿದೆ. ಹುಲ್ಕುತ್ರಿ ಶಾಲೆಯಿಂದ ಅಂದಾಜು 2.5 ಕಿ.ಮೀ. ಕಿರಿದಾದ ರಸ್ತೆಯ ಮೂಲಕ ಸಾಗಬೇಕು.