ಕೃಷಿ ತಜ್ಞರಿಂದ ಮಾಹಿತಿ ವಿನಿಮಯ :
ಬರಡು ಭೂಮಿಯಲ್ಲೂ ಫಸಲು ತೆಗೆಯುವ ರೈತರಿಗೆ ಶಾಲಾ ಮಕ್ಕಳಿಂದ ಸನ್ಮಾನ
ಕೃಷಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದ ರೈತ ರವಿಲೋಚನ ಇವರು ಬರಡು ಭೂಮಿಯಲ್ಲೂ ಫಸಲು ತೆಗೆಯುವ ಕೃಷಿ ಡಾಕ್ಟರ್ ಇದ್ದಂತೆ. ಎಷ್ಟೋ ರೈತರ ಸೊರಗಿದ ಹೊಲ, ತೋಟಗಳನ್ನು ತಮ್ಮದೇ ತಂತ್ರದಿಂದ ನಳ ನಳಿಸುವಂತೆ ಮಾಡಿದ್ದಾರೆ. ಇವರ ತೋಟವನ್ನು ವೀಕ್ಷಿಸಲು ದಿನಾಂಕ 01-03-2021ರಂದು ಸಿದ್ದಾಪುರ ತಾಲೂಕಿನ ಹುಲ್ಕುತ್ರಿ ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ, ‘ಸಮಗ್ರ ಕೃಷಿ ಪದ್ಧತಿ’ ಅಳವಡಿಕೆಯಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಹಾಗೂ ಉತ್ಪಾದನಾ ಮಟ್ಟ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ನಾವಿನ್ಯಯುತ ತಾಂತ್ರಿಕತೆಗಳನ್ನು ಶ್ರೀ ರವಿಲೋಚನ ಮಡಗಾವಂಕರರಿಂದ ಪಡೆದುಕೊಂಡರು.
ಶಾಲಾ ಮಕ್ಕಳು ಇವರ 5 ಎಕರೆ ಕೃಷಿ ಭೂಮಿಯಲ್ಲಿ ಬೆಳೆದ ವಿವಿಧ ಬಗೆಯ ಗಿಡಗಳನ್ನು ವೀಕ್ಷಿಸಿದರು. ಪ್ರಮುಖ ಬೆಳೆಯಾಗಿ ಅಡಿಕೆ ಬೆಳೆಯುವುದರೊಂದಿಗೆ ಸಮಗ್ರ ಕೃಷಿ ಪದ್ಧತಿ ಹಾಗೂ ಸಾವಯವ ಕೃಷಿಗೆ ಯಾವ ರೀತಿಯಲ್ಲಿ ಒತ್ತು ನೀಡಿದ್ದಾರೆ ಎಂಬುದನ್ನು ತಿಳಿದುಕೊಂಡರು. ಅವರ ತೋಟದಲ್ಲಿರುವ ವಿವಿಧ ಜಾತಿಯ ಕಾಳು ಮೆಣಸಿನ ಕಾಳುಗಳು, ಮಾವು, ಗೇರು, ತೆಂಗಿನ ತಳಿಗಳನ್ನು ಪರಿಚಯಿಸಿಕೊಂಡರು. ಅಲ್ಲದೇ ಬುಶ್ ಪೆಪ್ಪರ್, ಕೊಕೊ, ಹಲಸು, ಅಗಾರವುಡ್, ಸಿಲ್ವರ್ ಓಕ್, ಮಹಾಗನಿ, ಏಲಕ್ಕಿ, ಜಂಬೆ, ಅರಶಿಣ ಗಿಡಗಳು, ಜಾಯಿಕಾಯಿ, ಲವಂಗ, ದಾಲ್ಚಿನಿ, ಬಾಳೆಗಿಡ, ವಿವಿಧ ಜಾತಿಯ ಮೇವಿನ ಹುಲ್ಲುಗಳು, ತಿನ್ನುವ ಎಲೆ, ಪಪ್ಪಾಯಿ ಇನ್ನಿತರ ಬೆಳೆಗಳ ಕುರಿತು ಮಾಹಿತಿ ಪಡೆದರು.
ವಿಶೇಷವಾಗಿ ಮಣ್ಣಿನ ಸಾರ ಸಂರಕ್ಷಿಸುವ ಸಲುವಾಗಿ ಜಮೀನಿನ ಬೆಳೆಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಅಳವಡಿಕೆಯ ವಿಧಾನ. ಅಡಿಕೆ ತೋಟದ ಮಧ್ಯೆ ಇರುವ ಕಾಲುವೆಗಳಲ್ಲಿ ಜೌಗು ತಡೆಗಟ್ಟಲು ಒಳಚರಂಡಿ ಮಾದರಿಯಲ್ಲಿ ಪೈಪ್‍ಗಳನ್ನು ಅಳವಡಿಸಿ ಮೇಲೆ ಬಿದ್ದ ನೀರು ಸಂಸ್ಕರಿಸಿ ಮುಖ್ಯ ಕಾಲುವೆ ಮುಖಾಂತರ ಹರಿದು ಹೋಗಲು ಇರುವ ವ್ಯವಸ್ಥೆ ಕುರಿತು. ಸಾವಯವ ಕೃಷಿಗಾಗಿ ಬಯೋಡೈಜಸ್ಟರ್ ಮೂಲಕ ಗೊಬ್ಬರ ಉತ್ಪಾದನೆ ಹಾಗೂ ಅಲ್ಲಿನ ದ್ರವ ಪದಾರ್ಥವನ್ನು ಸಂಸ್ಕರಿಸಿ ಹನಿ ನೀರಾವರಿ ಪದ್ಧತಿಯಿಂದ ಗಿಡಗಳ ಬುಡಕ್ಕೆ ಸಾಗಣೆ. ಕೃಷಿ ಯಂತ್ರೋಪಕರಣಗಳಾದ ಪವರ್ ಟಿಲ್ಲರ್, ಸೀಡ್ ಡ್ರಮ್, ವೀಡ್ ಕಟರ್, ಸೋಲಾರ್ ಡ್ರೆಯರ್, ಮೋಟೋಕಾರ್ಡ್, ಎಲೆಕ್ಟ್ರಿಕ್ ಸ್ಪ್ರೆಯರ್ ಬಗ್ಗೆ ಮಾಹಿತಿ ಪಡೆದರು.
ಈ ಎಲ್ಲಾ ಸಂಗತಿಗಳನ್ನು ರವಿಲೋಚನ ಮಡಗಾವಂಕರರಿಂದ ಮಾಹಿತಿ ಪಡೆದರೆ ಈ ದಿನ ತೋಟಕ್ಕೆ ಭೇಟಿ ನೀಡಿದ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ತಜ್ಞರಾದ ಶ್ರೀ ಶಿವಶಂಕರ ಮೂರ್ತಿಯವರು ಮಣ್ಣಿನಿಂದ ಬರುವ ರೋಗಗಳು, ಹೊಸ ಮಾದರಿಯ ಟ್ರೈಕೊಡರ್ಮ್ ಕ್ಯಾಪ್ಸೂಲ್ ಹಾಗೂ ಮಣ್ಣಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಕ್ಯಾಪ್ಸೂಲ್ ಬಳಕೆಯ ಕುರಿತು ಪ್ರಾತ್ಯಕ್ಷತೆ ನೀಡಿದರು. ವಿವಿಧ ಬಗೆಯ ಜೀವಾಣು ಗೊಬ್ಬರಗಳ ಕುರಿತು ಮಾಹಿತಿ ನೀಡಿದರು. ಮಣ್ಣು ಪರೀಕ್ಷೆಗೆ ಮಾದರಿ ಮಣ್ಣನ್ನು ಹೇಗೆ ಸಂಗ್ರಹಿಸುವುದರ ಕುರಿತು ಪ್ರಾತ್ಯಕ್ಷತೆ ನೀಡಿದರು.
ಕೊನೆಯಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರೈತರಾದ ರವಿಲೋಚನ ಮಡಗಾವಂಕರ ಅವರಿಗೆ ಸನ್ಮಾನಿಸುವುದರ ಮೂಲಕ ಗೌರವಿಸಿದರು. ಸ್ಥಳದಲ್ಲಿ ಬಿಳಗಿ ಗ್ರಾಮದ ರೈತರು ಹಾಗೂ ಮಾಜಿ ತಾಲೂಕ ಪಂಚಾಯತ ಉಪಾಧ್ಯಕ್ಷರಾದ ಶ್ರೀ ಪ್ರಸನ್ನ ಹೆಗಡೆ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








