ಹದಿನೆಂಟನೆಯ ಶತಮಾನದ ಭಾರತ (1707-1757) – 7ನೇ ತರಗತಿ ಸಮಾಜ ವಿಜ್ಞಾನ

ಪಾಠದ ಪರಿಚಯ

ಭಾರತದ ಚರಿತ್ರೆಯಲ್ಲಿ 18ನೆಯ ಶತಮಾನವು ಒಂದು ಸಂಕ್ರಮಣ ಕಾಲವಾಗಿತ್ತು. ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಭಾರತವು ಮಹತ್ವದ ಬದಲಾವಣೆಗಳಿಗೆ ಒಳಗಾಯಿತು. ರಾಜಕೀಯವಾಗಿ ಮೊಗಲರು ಪ್ರಾಬಲ್ಯಹೀನರಾಗುವುದರೊಂದಿಗೆ ಭಾರತದ ಸ್ಥಳೀಯ ರಾಜಕೀಯ ಶಕ್ತಿಗಳು ತಮ್ಮ ಪ್ರಾಬಲ್ಯವನ್ನು ಮರುಸ್ಥಾಪಿಸುವ, ವಿಸ್ತರಿಸುವ ಕಾರ್ಯಕ್ಕೆ ಮುಂದಾದರು. ಮರಾಠರು, ಹೈದರ್, ಟಿಪ್ಪು, ಸಿಖ್ ಮುಂತಾದವರು ತಮ್ಮ ರಾಜಕೀಯ ಪ್ರಾಬಲ್ಯವನ್ನು ಮೆರೆಯಲು ಮುಂದಾದರು. ಆದರೆ ಬ್ರಿಟಿಷರು ಎಲ್ಲ ದೇಶೀಯ ಶಕ್ತಿಗಳನ್ನು ಅವರೊಳಗಿದ್ದ ಸ್ವಾರ್ಥ ಲಾಲಸೆಯನ್ನು ಬಳಸಿಕೊಂಡೇ ಬಗ್ಗುಬಡಿದರು. ಆರ್ಥಿಕವಾಗಿ ಬ್ರಿಟಿಷರು ಖಾಯಂ ಜಮೀನ್ದಾರಿ, ಮಹಲ್‍ವಾರಿ, ರೈತವಾರಿ ಮುಂತಾದ ದೂರಗಾಮಿ, ನೇತ್ಯಾತ್ಮಕ ಪರಿಣಾಮಗಳನ್ನು ಬೀರಿದ ಯೋಜನೆಗಳನ್ನು ಜಾರಿಗೊಳಿಸಿ ಭಾರತವನ್ನು ಶೋಷಣೆ ಮಾಡಲು ತೊಡಗಿದರು. ಒಟ್ಟಾರೆಯಾಗಿ ಭಾರತವು ವಿವಿಧ ಸಂಘರ್ಷಗಳಿಗೆ ಒಳಗಾದ ಕಾಲ ಇದಾಗಿತ್ತು.

ಮಕ್ಕಳೇ, ಭಾರತದ ಇತಿಹಾಸದಲ್ಲಿ 18ನೆಯ ಶತಮಾನವು ಮಹತ್ವದ ಬದಲಾವಣೆಗಳ ಕಾಲವಾಗಿತ್ತು. ಔರಂಗಜೇಬನ ತರುವಾಯ (1707) ಮೊಗಲ್ ಸಾಮ್ರಾಜ್ಯವು ತೀವ್ರಗತಿಯಲ್ಲಿ ಅವನತಿ ಹೊಂದಿತು. ಮೊಗಲರ ಅವನತಿಗೆ ಕಾರಣಗಳು ಈ ರೀತಿ ಇವೆ: ಔರಂಗಜೇಬನ ನಂತರ ಬಂದ ರಾಜರು ದುರ್ಬಲರಾಗಿದ್ದು ವಿಲಾಸೀ ಜೀವನ ನಡೆಸುತ್ತಿದ್ದರು. ಪರ್ಷಿಯದ ರಾಜ ನಾದಿರ್‍ಷಾ ಮೊಗಲರ ರಾಜ್ಯದ ಮೇಲೆ ಭಾರಿ ದಾಳಿ ಮಾಡಿ ಮೊಗಲರ ಅಳಿದುಳಿದ ಸಂಪತ್ತನ್ನು ಹೊತ್ತುಕೊಂಡು ತನ್ನ ದೇಶಕ್ಕೆ ತೆರಳಿದನು (1739). ಇದರಲ್ಲಿ ಪ್ರಖ್ಯಾತ ಮಯೂರ ಸಿಂಹಾಸನ ಮತ್ತು ಅತ್ಯಂತ ಬೆಲೆಬಾಳುವ ಕೊಹಿನೂರ್ ವಜ್ರವೂ ಸೇರಿದ್ದವು. ಅದೇ ರೀತಿ ಅಹ್ಮದ್‍ಷಾ ಅಬ್ದಾಲಿಯ ದಾಳಿಯು ಕೂಡ ಭಾರಿ ಹೊಡೆತಕೊಟ್ಟಿತು. ಈ ಎಲ್ಲಾ ಘಟನೆಗಳಿಂದಾಗಿ ಮೊಗಲ್ ರಾಜ್ಯವು ಮತ್ತೆ ಚೇತರಿಸಿಕೊಳ್ಳಲಿಲ್ಲ.

ಔರಂಗಜೇಬ

ಪರ್ಷಿಯದ ರಾಜ ನಾದಿರ್ ಷಾ

ಕೊಹಿನೂರ್ ವಜ್ರ

ಅಹ್ಮದ್‍ಷಾ ಅಬ್ದಾಲಿ

ಮರಾಠರ ಪ್ರಾಬಲ್ಯ

ಮರಾಠ ರಾಜ್ಯದ ಸ್ಥಾಪಕ ಶಿವಾಜಿ. ಮೊಗಲ್ ಸಾಮ್ರಾಜ್ಯ ಹಾಗೂ ಬಹಮನಿ ರಾಜ್ಯಗಳು ರಾಜಕೀಯವಾಗಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅವುಗಳಿಗೆ ಪರ್ಯಾಯವಾದ ಸ್ವತಂತ್ರ ರಾಜ್ಯ ಕಟ್ಟಲು ಶಿವಾಜಿ ಯಶಸ್ವಿಯಾದನು. ಅವನ ಯಶಸ್ವಿ ಆಡಳಿತ ನಿರ್ವಹಣೆಗೆ ನೆರವಾದವರು ‘ಅಷ್ಟ ಪ್ರಧಾನ’ರೆಂಬ ಎಂಟು ಜನ ಮಂತ್ರಿಗಳು. ಇವರಲ್ಲಿ ಪೇಶ್ವೆ ಪ್ರಮುಖನಾದವನು.

ಶಿವಾಜಿ

ಮರಾಠ ರಾಜ್ಯ

ಇತಿಹಾಸಕಾರರು 18ನೇ ಶತಮಾನವನ್ನು `ಮರಾಠರ ಪರಮಾಧಿಕಾರದ ಕಾಲ’ ಎಂದು ಕರೆಯುತ್ತಾರೆ. ಈ ಕಾಲದಲ್ಲಿ ಮರಾಠರು ಪೇಶ್ವೆಯರ ನೇತೃತ್ವದಲ್ಲಿ ಭಾರತದ ಒಂದು ಬೃಹತ್ ರಾಜಕೀಯ ಹಾಗೂ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿದರು.

ಪೇಶ್ವೆಯೆಂದರೆ ಮರಾಠಾ ರಾಜನ ಪ್ರಧಾನಮಂತ್ರಿ. ರಾಜರು ದುರ್ಬಲರಾದುದರಿಂದ ಪೇಶ್ವೆಗಳೇ ಆಳ್ವಿಕೆ ನಡೆಸುತ್ತಿದ್ದರು. ಸುಮಾರು ನೂರು ವರ್ಷಗಳ ಕಾಲ (1713-1818) ಏಳು ಮಂದಿ ಪೇಶ್ವೆಯರು ದಖನ್ ಮತ್ತು ಉತ್ತರ ಭಾರತದ ಕೆಲವು ಪ್ರದೇಶಗಳನ್ನಾಳಿದರು.

ಮರಾಠ ಪೇಶ್ವೆಗಳಲ್ಲಿ ಮೂವರು ಪ್ರಮುಖರು. ಅವರೆಂದರೆ –

• ಬಾಲಾಜಿ ವಿಶ್ವನಾಥ (1713-20): ಈತನು ಮೊಗಲ ಚಕ್ರವರ್ತಿಯೊಡನೆ ದಿಲ್ಲಿ ಒಪ್ಪಂದವನ್ನು ಮಾಡಿಕೊಂಡನು. ಇದರ ಪರಿಣಾಮವಾಗಿ ದಖನ್ನಿನ ಆರು ಸುಬಾಗಳಿಂದ ತೆರಿಗೆಗಳನ್ನು ವಸೂಲಿ ಮಾಡುವ ಹಕ್ಕನ್ನು ಪಡೆದನು.

ಬಾಲಾಜಿ ವಿಶ್ವನಾಥ (1713-20)

• ಒಂದನೆಯ ಬಾಜೀರಾವ್ (1720-40): ಬಾಜೀರಾವ್ ಅಧಿಕಾರಕ್ಕೆ ಬಂದಾಗ ಇಪ್ಪತ್ತರ ತರುಣ. ಈತನು ಬಲಿಷ್ಠನೂ ರಾಜತಂತ್ರ ನಿಪುಣನೂ ಆಗಿದ್ದನು. ಮೊಗಲ ಸಾಮ್ರಾಜ್ಯದ ರಾಜಕೀಯ ದುಸ್ಥಿತಿಯನ್ನು ಬಳಸಿಕೊಂಡು, ಭಾರತದಲ್ಲಿ ಬೃಹತ್ ಸಾಮ್ರಾಜ್ಯವನ್ನು ಕಟ್ಟುವ ಯೋಜನೆಯನ್ನು ಹಾಕಿಕೊಂಡನು. ಈತನು ಪ್ರಾರಂಭದಲ್ಲಿ ಹೈದರಾಬಾದ್, ಆಮೇಲೆ ಮಾಳ್ವ, ಗುಜರಾತ್ ಮತ್ತು ಬುಂದೇಲಖಂಡಗಳನ್ನು ವಶಪಡಿಸಿಕೊಂಡನು.

ಒಂದನೆಯ ಬಾಜೀರಾವ್ (1720-40)

ಬಾಜೀರಾವ್‍ನ ಪ್ರಮುಖ ಸಾಧನೆಯೆಂದರೆ ಸೇನಾ ಸಮೇತನಾಗಿ ಉತ್ತರ ಭಾರತಕ್ಕೆ ಮುನ್ನಡೆದು ದಿಲ್ಲಿಯ ಮೇಲೆರಗಿದ್ದು. ಈತನು `ಎರಡನೆಯ ಶಿವಾಜಿ’ ಎಂಬ ಕೀರ್ತಿಗೆ ಪಾತ್ರನಾದ. `ಹಿಂದೂ ಪಾದಪದಷಾಹಿ’ ಹಿಂದುಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅವರ ಆಡಳಿತವಿರಬೇಕೆಂಬ ವಾದ ತನ್ನ ಧ್ಯೇಯವೆಂದು ಈತನು ಹೇಳಿಕೊಂಡನು.

• ಬಾಲಾಜಿ ಬಾಜೀರಾವ್ (1740-61) : ಈತನು ದಕ್ಷಿಣ ಬಾಲಾಜಿ ಬಾಜೀರಾವ್ ಭಾರತದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲಿಯೂ ಮರಾಠ ರಾಜ್ಯವನ್ನು ವಿಸ್ತರಿಸಲು ಪ್ರಯತ್ನಿಸಿದನು. ಮರಾಠರ ಸೈನ್ಯವು ವಾಯವ್ಯದಲ್ಲಿ ಪಂಜಾಬಿನ ವರೆಗೂ ಯಶಸ್ವಿಯಾಗಿ ಮುನ್ನುಗ್ಗಿತು. ಪೂರ್ವದಲ್ಲಿ ಒಡಿಶಾ, ದಕ್ಷಿಣದಲ್ಲಿ ತಮಿಳುನಾಡಿನ ಕೆಲ ಭಾಗಗಳನ್ನು ಇವನು ಗೆದ್ದುಕೊಂಡನು. ಹೀಗೆ ಮರಾಠರು ಭಾರತದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಮೆರೆದರು.

ಉತ್ತರ ಭಾರತದಲ್ಲಿ ರಾಜ್ಯ ವಿಸ್ತರಣೆಯಲ್ಲಿ ತೊಡಗಿದ್ದ ಮರಾಠರು, ಅಫ್ಘನ್ ದಾಳಿಕೋರ ಅಹಮದ್ ಷಾ ಅಬ್ದಾಲಿಯನ್ನು ಮುಖಾಮುಖಿಯಾದರು. 1761ರಲ್ಲಿ (ಜನವರಿ 14ರಂದು) ಅವರೊಳಗೆ ನಿರ್ಣಾಯಕ ಕದನ ನಡೆಯಿತು. ಇದೇ ಮೂರನೇ ಪಾಣಿಪತ್ ಕದನ. ಮರಾಠರು ಯುದ್ಧದಲ್ಲಿ ಸೋತುಹೋದರು. ಇದರ ಪರಿಣಾಮವಾಗಿ ಮರಾಠರ ಸೈನಿಕ ಶಕ್ತಿ ಕುಂದಿತು. ಮರಾಠರ ಅವನತಿಯು ಬ್ರಿಟಿಷ್ ವ್ಯಾಪಾರಿಗಳಿಗೆ ಭಾರತದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಸಂದರ್ಭವನ್ನು ಸೃಷ್ಟಿಸಿತು.

ಕರ್ನಾಟಿಕ್ ಯುದ್ಧಗಳು (1746-63)

ಮೊಗಲ್ ಸಾಮ್ರಾಜ್ಯದ ಒಂದು ಪ್ರಾಂತ್ಯವೇ `ಕರ್ನಾಟಿಕ್’. ಕೋರಮಂಡಲ ತೀರ (ಈಗಿನ ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ತೀರ ಪ್ರದೇಶ) ಮತ್ತು ಅದರ ಹಿನ್ನಾಡನ್ನು ಯುರೋಪಿಯನ್ನರು `ಕರ್ನಾಟಿಕ್’ (Carnatic) ಎಂದು ಕರೆಯುತ್ತಿದ್ದರು.

`ಕರ್ನಾಟಿಕ್’

ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ದಕ್ಷಿಣ ಭಾರತದ  ವ್ಯಾಪಾರದ ಮೇಲಿನ ನಿಯಂತ್ರಣಕ್ಕಾಗಿ  ಪೈಪೋಟಿ ನಡೆದು ಅಲ್ಪಕಾಲದಲ್ಲೇ ಅದು ಕದನದ ಹಾದಿಯನ್ನು ಹಿಡಿಯುವಂತೆ ಮಾಡಿತು. ಈ ಹಿನ್ನೆಲೆಯಲ್ಲಿ ನಡೆದ ಮೂರು ಕದನಗಳಿಗೆ ಕರ್ನಾಟಿಕ್ ಪ್ರದೇಶ ಮುಖ್ಯ ಭೂಮಿಕೆಯಾಯಿತು. ಆದ್ದರಿಂದ ಈ ಕದನಗಳನ್ನು “ಕರ್ನಾಟಿಕ್ ಕದನ”ಗಳೆಂದು ಚರಿತ್ರೆಯಲ್ಲಿ ಗುರುತಿಸುತ್ತಾರೆ.

ಯುದ್ಧಗಳ ಕಾರಣಗಳು: ಆರ್ಕಾಟ್ (ತಮಿಳುನಾಡು) ಕರ್ನಾಟಿಕದ ರಾಜಧಾನಿಯಾಗಿತ್ತು. ಆರ್ಕಾಟಿನ ನವಾಬನು ಮರಣ ಹೊಂದಿದ ಬಳಿಕ ಆರ್ಕಾಟ್ ನವಾಬಗಿರಿಯ ಉತ್ತರಾಧಿಕಾರಕ್ಕಾಗಿ ಚಂದಾಸಾಹೇಬ್ ಮತ್ತು ಮಹಮ್ಮದ್ ಆಲಿ ಇವರ ನಡುವೆ ಕಲಹ ಉಂಟಾಯಿತು. ಚಂದಾಸಾಹೇಬ್ ಫ್ರೆಂಚರ ಸಹಾಯವನ್ನೂ ಮಹಮ್ಮದ್ ಆಲಿಯು ಇಂಗ್ಲಿಷರ ಸಹಾಯವನ್ನು ಯಾಚಿಸಿದರು. ಇಂಗ್ಲಿಷರು ಮತ್ತು ಫ್ರೆಂಚರು ಕಲಹದಲ್ಲಿ ಮಧ್ಯಪ್ರವೇಶಿಸಿದರು. ಅವರ ದೂರಗಾಮಿ ರಾಜಕೀಯ ಹಿತಾಸಕ್ತಿಗಳೇ ಮಧ್ಯಪ್ರವೇಶಕ್ಕೆ ಕಾರಣವಾಗಿದ್ದವು.

ಚತುರನಾದ ರಾಬರ್ಟ್ ಕ್ಲೈವ್ ಇಂಗ್ಲೀಷ್ ಸೇನೆಯ ನಾಯಕನಾಗಿದ್ದನು. ಮಹತ್ವಾಕಾಂಕ್ಷೆಯ ಗವರ್ನರ್ ಡೂಪ್ಲೆ ಫ್ರೆಂಚ್ ಸೇನಾನಾಯಕ. ಅಂತಿಮವಾಗಿ ಮೂರನೇ ಕರ್ನಾಟಿಕ್ ಯುದ್ಧದಲ್ಲಿ ಇಂಗ್ಲಿಷರು ಜಯಶಾಲಿಗಳಾದರು. ಪರಿಣಾಮವಾಗಿ ಭಾರತದಲ್ಲಿ ಫ್ರೆಂಚರು ಮೂಲೆ ಗುಂಪಾದರು.

ರಾಬರ್ಟ್ ಕ್ಲೈವ್

ಮೊದಲ ಕರ್ನಾಟಿಕ್ ಯುದ್ಧದಲ್ಲಿ ಫ್ರೆಂಚರು ಮೇಲುಗೈ ಸಾಧಿಸಿದರು. ಇದು `ಎಕ್ಸ್- ಲಾ-ಚಾಪೆಲಿ’ ಒಪ್ಪಂದದೊಂದಿಗೆ ಅಂತ್ಯಗೊಂಡಿತು.

ಎರಡನೇ ಕರ್ನಾಟಿಕ್ ಯುದ್ಧದ ಕೊನೆಯ ಹೊತ್ತಿಗೆ ಇಂಗ್ಲಿಷರು ಆರ್ಕಾಟಿನಲ್ಲಿಯೂ ಫ್ರೆಂಚರು ಹೈದರಾಬಾದಿನಲ್ಲಿಯೂ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡರು.

ಫ್ರೆಂಚರ ಸೋಲಿಗೆ ಕಾರಣಗಳು

* ಫ್ರೆಂಚರು ವ್ಯಾಪಾರವನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಡ್ಯೂಪ್ಲೆ ಹೆಚ್ಚಿನ ಆಸಕ್ತಿ ತೋರಿದರು. ಆದರೆ ಇಂಗ್ಲೀಷರು ವ್ಯಾಪಾರದ ಮೇಲೆ ಹೆಚ್ಚು ಗಮನ ಹರಿಸಿ ವ್ಯಾಪಾರದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ರಾಜಕೀಯ ಪ್ರವೇಶಿಸಿದರು.

* ಇಂಗ್ಲೀಷ್ ನೌಕಾಪಡೆ ಫ್ರೆಂಚ್ ನೌಕಾಪಡೆಗಿಂತ ಪ್ರಬಲವಾಗಿತ್ತು.

* ಇಂಗ್ಲೀಷ್ ಅಧಿಕಾರಿಗಳು ಪರಸ್ಪರ ಸಹಕರಿಸಿ ಕಂಪನಿಯ ಹಿತಾಸಕ್ತಿ ಬಗ್ಗೆ ಹೆಚ್ಚು ಗಮನ ಹರಿಸಿದರು. ಫ್ರೆಂಚ್ ಅಧಿಕಾರಿಗಳು ಪರಸ್ಪರ ಸಹಕಾರ ನೀಡದೆ ತಮ್ಮೊಳಗೆ ಜಗಳವಾಡುತ್ತಿದ್ದರು.

* ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ ಖಾಸಗಿಯದಾಗಿದ್ದರೆ, ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸರ್ಕಾರಿ ಸ್ವಾಮ್ಯದ್ದಾಗಿತ್ತು.

ಬಂಗಾಳದಲ್ಲಿ ಇಂಗ್ಲಿಷರ ಆಡಳಿತದ ಆರಂಭ

ಕರ್ನಾಟಿಕ್ ಯುದ್ದಗಳ ಮೂಲಕ ದಕ್ಷಿಣ ಭಾರತದಲ್ಲಿ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಿದ ಇಂಗ್ಲಿಷರು ಬಂಗಾಳದಲ್ಲೂ ತಮ್ಮ ಆಡಳಿತ ಸ್ಥಾಪನೆ ಮಾಡಿದರು. ಬಂಗಾಳವು ಮೊಗಲ್ ಸಾಮ್ರಾಜ್ಯದ ಸಂಪತ್ಭರಿತ ಪ್ರಾಂತ್ಯವಾಗಿತ್ತು. ಅದರ ಪ್ರಾಂತ್ಯಾಧಿಕಾರಿಯಾಗಿದ್ದ ಅಲಿವರ್ದಿ ಖಾನ್, ಮೊಗಲ್ ಸಾಮ್ರಾಜ್ಯ ಅವನತಿಯ ಹಾದಿಯಲ್ಲಿದ್ದಾಗ ಸ್ವತಂತ್ರನಾದನು. ಆತನ ನಂತರ ಸಿರಾಜ್ ಉದ್ದೌಲ ಬಂಗಾಳದ ನವಾಬನಾದನು.

ಅಲಿವರ್ದಿ ಖಾನ್

ಸಿರಾಜ್ ಉದ್ದೌಲ

ನವಾಬ ಸಿರಾಜನು ಯುವಕನಾದ್ದರಿಂದ ಇಂಗ್ಲಿಷರು ಅವನನ್ನು ಕಡೆಗಣಿಸಿ ಅವನ ಅನುಮತಿ ಪಡೆಯದೆ ಕಲ್ಕತ್ತದಲ್ಲಿ ಪೋರ್ಟ ವಿಲಿಯಂ ಕೋಟೆಯನ್ನು ಬಲಪಡಿಸಿದರು. ಅಲ್ಲದೆ ವ್ಯಾಪಾರದ ರಿಯಾಯಿತಿಗಳನ್ನು ದುರುಪಯೋಗ ಮಾಡುತ್ತಿದ್ದರು. ಇಂಗ್ಲಿಷರು ತನ್ನ ಆದೇಶಗಳನ್ನು ಪಾಲಿಸದೆ, ತನ್ನ ವೈರಿಗಳೊಡನೆ ಸೇರಿ ಕುತಂತ್ರ ಮಾಡುತ್ತಿದ್ದಾರೆಂದು ನವಾಬನು ಭಾವಿಸಿದನು. ಅದರಿಂದ ಕೋಪಗೊಂಡು ಇಂಗ್ಲಿಷ್ ಕೋಠಿಗಳನ್ನು ಸ್ವಾಧೀನ ಪಡಿಸಿಕೊಂಡನು. ಇದೇ ಮುಂದೆ ಪ್ಲಾಸಿ ಕದನಕ್ಕೆ ಕಾರಣವಾಯಿತು.

ಪೋರ್ಟ ವಿಲಿಯಂ ಕೋಟೆ

ಪ್ಲಾಸಿ ಕದನ (1757): ನವಾಬ ಸಿರಾಜ್ ಉದ್ದೌಲನ ದಾಳಿಯ ವಾರ್ತೆ ಕೇಳಿದ ಮದ್ರಾಸಿನ ಕಂಪೆನಿಯ ಅಧಿಕಾರಿಗಳು ರಾಬರ್ಟ ನೇತೃತ್ವದಲ್ಲಿ ಕಲ್ಕತ್ತಕ್ಕೆ ಸೈನ್ಯ ರವಾನಿಸಿದರು. ಬಂಗಾಳದ ಪರಿಸ್ಥಿತಿಯನ್ನರಿತ ಕ್ಲೈವ್, ನವಾಬನ ವಿರುದ್ದ ಒಳಸಂಚು ನಡೆಸಿದನು. ಸಿರಾಜನ ಸೇನಾನಿ ಮೀರ್ ಜಾಫರನಿಗೆ ನವಾಬಗಿರಿಯ ಆಸೆಯನ್ನು ತೋರಿಸಿ ರಹಸ್ಯ ಒಪ್ಪಂದ ಮಾಡಿಕೊಂಡನು.

ನವಾಬನ ಸೇನಾನಿ ಮೀರ್ ಜಾಫರ್ ನವಾಬನಾಗುವ ಆಸೆಯಿಂದ ಇಂಗ್ಲಿಷರೊಡನೆ ಒಪ್ಪಂದ ಮಾಡಿಕೊಂಡನು. ಅದರಂತೆ ನವಾಬನಾದ ಕೂಡಲೇ ಇಂಗ್ಲಿಷರಿಗೆ 175 ಲಕ್ಷ ರೂಪಾಯಿ ಕೊಡಬೇಕಾಗಿತ್ತು. ಈ ಕಪ್ಪ ವ್ಯವಹಾರದಲ್ಲಿ ಅವಿೂನಚಂದ್ ಎಂಬ ವರ್ತಕ ಮಧ್ಯಸ್ಥಿಕೆ ವಹಿಸಿದನು.

ಅವಿೂನಚಂದ್

ಬ್ರಿಟಿಷರು ಮತ್ತು ಸಿರಾಜ್ ಉದ್ದೌಲನ ಸೈನ್ಯದ ನಡುವೆ ಪ್ಲಾಸಿ ಎಂಬಲ್ಲಿ 1757ರಲ್ಲಿ ಯುದ್ಧವಾಯಿತು. ಯುದ್ಧದಲ್ಲಿ ಮೀರ್ ಜಾಫರನು ಬ್ರಿಟಿಷರಿಗೆ ನೆರವಾದನು. ಅಂತಿಮವಾಗಿ ಸಿರಾಜ್ ಉದ್ದೌಲ ಸೋತು ಕೊಲ್ಲಲ್ಪಟ್ಟನು. ಮೀರ್ ಜಾಫರನು ಮಾಡಿದ ದ್ರೋಹದಿಂದ ಬ್ರಿಟಿಷರಿಗೆ ಜಯ ಲಭಿಸಿತು.

ಪರಿಣಾಮಗಳು: ಬ್ರಿಟಿಷರ ಕೃಪೆಯಿಂದ ಮೀರ್ ಜಾಫರ್ ಬಂಗಾಳದ ನವಾಬನಾದನು. ಆದರೆ ಅವನು ಬ್ರಿಟಿಷರ ಕೈಗೊಂಬೆಯಾದ. ಕಂಪನಿಯು ಹೇರಳ ಹಣ ಮತ್ತು `ಇಪ್ಪತ್ತನಾಲ್ಕು ಪರಗಣ’ ಎಂಬ ಜಿಲ್ಲೆಯ ಜಮೀನ್ದಾರಿ ಹಕ್ಕನ್ನು ಪಡೆಯಿತು. ಇದು ಕಂಪನಿಯು ಭಾರತದಲ್ಲಿ ಕಬಳಿಸಿದ ಪ್ರಪ್ರಥಮ ಭೂಭಾಗವಾಗಿತ್ತು. ಪ್ಲಾಸಿ ಕದನವು ಮುಂದಿನ ಬಕ್ಸಾರ್ ಕದನಕ್ಕೂ ಕಾರಣವಾಯಿತು. ವ್ಯಾಪಾರಿಗಳಾಗಿ ಬಂದಿದ್ದ ಇಂಗ್ಲಿಷರು ಒಮ್ಮಿಂದೊಮ್ಮೆ ಆಡಳಿತ ನಡೆಸುವ ಅಧಿಕಾರ ಪಡೆದರು. ಪ್ಲಾಸಿ ವಿಜಯವು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆಗೆ ನಾಂದಿಯಾಯಿತು.

ಮುಖ್ಯ ಇಸವಿಗಳು

1711-1761 – ಭಾರತದಲ್ಲಿ ಮರಾಠರ ಪರಮಾಧಿಕಾಲದ ಕಾಲ

1739 – ನಾದಿರ್‍ಷಾ ಮೊಗಲ ರಾಜ್ಯದ ಮೇಲೆ ದಾಳಿ ಮಾಡಿದ್ದು.

1757 – ಪ್ಲಾಸಿ ಕದನ

1761 – ಮೂರನೇ ಪಾಣಿಪತ್ ಕದನ

ಪ್ರಶ್ನೋತ್ತರಗಳು

ಹದಿನೆಂಟನೆಯ ಶತಮಾನದ ಭಾರತ #ಅಭ್ಯಾಸದ ಪ್ರಶ್ನೋತ್ತರಗಳು

*************