ಸ್ಥಳೀಯ ಆಡಳಿತ – ಅಧ್ಯಾಯ 8
ಪಾಠದ ಪರಿಚಯ
ಭಾರತವು ವಿಶಾಲವಾದ ದೇಶ. ಜನ ಸಂಖ್ಯೆಯು ದೊಡ್ಡದು. ಈ ವಿಶಾಲ ದೇಶದ ಆಡಳಿತವನ್ನು ಕೇಂದ್ರ ಸರ್ಕಾರ ಒಂದೇ ನಿರ್ವಹಿಸಲು ಸಾಧ್ಯವಿಲ್ಲ ಹಾಗೂ ಆಡಳಿತ ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಸ್ಥಳೀಯ ಸರ್ಕಾರಗಳು ಜಾರಿಗೊಂಡಿವೆ.
ಕರ್ನಾಟಕ ಸರ್ಕಾರದ ಆಡಳಿತಕ್ಕೆ ಪೂರಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳೆಂಬ ಸ್ಥಳೀಯ ಆಡಳಿತ ಸಂಸ್ಥೆಗಳಿವೆ. ನಗರ ಪ್ರದೇಶಗಳಲ್ಲಿ ಪುರಸಭೆ, ನಗರಸಭೆ ಮತ್ತು ಮಹಾನಗರಪಾಲಿಕೆಗಳಿವೆ. ಗ್ರಾಮಸಭೆಗಳನ್ನು ಬಲಪಡಿಸುವುದರೊಂದಿಗೆ ಗ್ರಾಮಾಭಿವೃದ್ಧಿ ಅಥವಾ ನಗರಾಭಿವೃದ್ಧಿ ಕಾರ್ಯಗಳನ್ನು ಸ್ಥಳೀಯರೇ ಕಾರ್ಯಗತಗೊಳಿಸಬೇಕೆಂಬುದು 1993ರಲ್ಲಿ ಜಾರಿಗೆ ಬಂದ ‘ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ’ಯ ಉದ್ದೇಶವಾಗಿದೆ. ಈ ದಿಕ್ಕಿನಲ್ಲಿ ಸರ್ಕಾರವು ಪಂಚಾಯಿತಿಗಳಿಗೆ ಕೆಲವೊಂದು ಅಧಿಕಾರಗಳನ್ನು ನೀಡಿದೆಯಲ್ಲದೆ ಹಣಕಾಸನ್ನು ಒದಗಿಸಿದೆ. ಈ ಪಾಠದಲ್ಲಿ ಸ್ಥಳೀಯ ಸಂಸ್ಥೆಗಳ ಮಹತ್ವ, ರಚನೆ, ಕಾರ್ಯ ಮತ್ತು ಆದಾಯದ ಮೂಲಗಳ ಬಗ್ಗೆ ವಿವರಣೆಯಿದೆ.
ಪಾಠ ಪ್ರವೇಶ
1 ಮೇಲಿನ ಚಿತ್ರಗಳಲ್ಲಿ ನೀವು ಏನನ್ನು ಕಾಣುವಿರಿ?
2 ಇಲ್ಲಿ ಚಿತ್ರಿತವಾದ ಸಮಸ್ಯೆಗಳು ನಿಮ್ಮ ಊರಿನಲ್ಲಿ / ನಗರದಲ್ಲಿ ಇವೆಯೆ?
3 ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ನೀವು ನೀಡುವ ಸಲಹೆಗಳು ಯಾವುವು?
ಸ್ಥಳೀಯ ಸ್ವಯಂ ಆಡಳಿತ : ಒಂದು ಪ್ರದೇಶದ ಸಮಸ್ಯೆಗಳನ್ನು ಅಲ್ಲಿಯ ಸ್ಥಳೀಯರು ಚೆನ್ನಾಗಿ ಬಲ್ಲರು. ತಮ್ಮ ಪ್ರದೇಶದಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿವೆ ಎಂಬುದನ್ನು ಕೂಡ ಅವರು ತಿಳಿದಿದ್ದಾರೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದರೆ ಸ್ಥಳೀಯರಿಗೆ ಸಾಕಷ್ಟು ಅಧಿಕಾರ ಹಾಗೂ ಹಣಕಾಸಿನ ಬೆಂಬಲ ಬೇಕಲ್ಲವೆ? ಇದಕ್ಕಾಗಿ ನಮ್ಮ ದೇಶದಲ್ಲಿ ‘ಪಂಚಾಯತ್ ರಾಜ್ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಅದರಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪಂಚಾಯಿತಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಅವುಗಳಿಗೆ ಅಧಿಕಾರ ಮತ್ತು ಹಣಕಾಸನ್ನು ಸರ್ಕಾರ ಒದಗಿಸುತ್ತದೆ. ಇಂಥ ಸ್ಥಳೀಯ ಸರ್ಕಾರಗಳು ಹೊಂದಿರುವ ಉದ್ದೇಶಗಳೆಂದರೆ –
● ಗ್ರಾಮಗಳಲ್ಲಿ ಸ್ವಯಂ ಆಡಳಿತವನ್ನು ಸ್ಥಾಪಿಸುವುದು.
● ಪಂಚಾಯಿತಿಗಳಲ್ಲಿ ಮೀಸಲಾತಿ ನೀಡುವ ಮೂಲಕ ಪರಿಶಿಷ್ಟ ಜಾತಿ – ವರ್ಗ, ಹಿಂದುಳಿದ ಜಾತಿ – ವರ್ಗ ಮತ್ತು ಮಹಿಳೆಯರ ಸಬಲೀಕರಣ.
● ಸ್ಥಳೀಯರಿಂದಲೇ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ.
● ಅಧಿಕಾರವನ್ನು ಹಂಚಿಕೊಳ್ಳುವ ಮೂಲಕ ಆಡಳಿತವನ್ನು ಚುರುಕುಗೊಳಿಸುವುದು.
ಪಂಚಾಯಿತಿ ಪದ್ಧತಿಯಂತೆ, ಗ್ರಾಮ ಮಟ್ಟದಲ್ಲಿ ‘ಗ್ರಾಮ ಪಂಚಾಯಿತಿ, ತಾಲ್ಲೂಕು ಮಟ್ಟದಲ್ಲಿ ‘ತಾಲ್ಲೂಕು ಪಂಚಾಯಿತಿ’, ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿಗಳಿವೆ.
ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿಗಳು
ರಚನೆ: ಪಂಚಾಯಿತಿ ಪ್ರದೇಶಗಳಲ್ಲಿ ವಾಸಿಸುವ, 18 ವರ್ಷಕ್ಕೆ ಮೇಲ್ಪಟ್ಟವರು ಪಂಚಾಯಿತಿ ಸದಸ್ಯರನ್ನು ಚುನಾಯಿಸುತ್ತಾರೆ. ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಮೀಸಲಾತಿಯಿದೆ. ಸದಸ್ಯರು ತಮ್ಮಲ್ಲಿಯೇ ಒಬ್ಬರನ್ನು ಅಧ್ಯಕ್ಷರನ್ನಾಗಿಯೂ ಮತ್ತೊಬ್ಬರನ್ನು ಉಪಾಧ್ಯಕ್ಷರನ್ನಾಗಿಯೂ ಆಯ್ಕೆ ಮಾಡುತ್ತಾರೆ. ಪಂಚಾಯಿತಿಯ ಅಧಿಕಾರಾವಧಿ ಐದು ವರ್ಷ. ಪಂಚಾಯಿತಿಗೆ ಕಛೇರಿಯಿದೆ ದಿನನಿತ್ಯದ ಆಡಳಿತವನ್ನು ಮಾಡಲು ಅಧಿಕಾರಿಯೊಬ್ಬರು ಇರುತ್ತಾರೆ.
ಪಂಚಾಯಿತಿ ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು ಪಂಚಾಯಿತಿಯ ಮುಖ್ಯ ಕಾರ್ಯವಾಗಿದೆ. ಅದರ ಆದಾಯದ ಮೂಲಗಳೆಂದರೆ ಸರ್ಕಾರ ಮತ್ತು ಜಿಲ್ಲಾ ಪಂಚಾಯಿತಿಯಿಂದ ಬರುವ ಅನುದಾನಗಳು ಹಾಗೂ ಪಂಚಾಯಿತಿಯು ಸಂಗ್ರಹಿಸುವ ತೆರಿಗೆ ಮತ್ತು ಬಾಡಿಗೆ.
ಗ್ರಾಮಸಭೆ : ಗ್ರಾಮಸಭೆಯು ಪಂಚಾಯತ್ ರಾಜ್ ವ್ಯವಸ್ಥೆಯ ಅತ್ಯಂತ ಕೆಳಸ್ತರದ ಸಭೆಯಾಗಿದ್ದು, ಅದನ್ನು ಬಲಪಡಿಸುವುದು ಈ ವ್ಯವಸ್ಥೆಯ ಮುಖ್ಯ ಗುರಿಯಾಗಿದೆ. 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಗ್ರಾಮಸಭೆಯ ಸದಸ್ಯರು. ಅದು ವರ್ಷಕ್ಕೆ ಕನಿಷ್ಠ ಎರಡು ಬಾರಿ ಸಭೆ ಸೇರುತ್ತದೆ. ಆ ವೇಳೆ ಸದಸ್ಯರು ತಮ್ಮ ತಮ್ಮ ಸಮಸ್ಯೆಗಳನ್ನು ನೇರವಾಗಿ ಪಂಚಾಯಿತಿಯ ಮುಂದೆ ಇಡಬಹುದು.
ಗ್ರಾಮಸಭೆಯು ತನ್ನ ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ಮಾಡುತ್ತದೆ. ಅದು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಗ್ರಾಮಪಂಚಾಯಿತಿಗೆ ನೆರವನ್ನೂ ನೀಡುತ್ತದೆ.
ಜಿಲ್ಲಾ ಪಂಚಾಯಿತಿ
ರಚನೆ: ಜಿಲ್ಲಾ ಪಂಚಾಯಿತಿಯಲ್ಲಿ ಪ್ರತಿಯೊಂದು ತಾಲ್ಲೂಕಿನಿಂದ ಚುನಾಯಿತರಾದ ಸದಸ್ಯರಿರುತ್ತಾರೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರೂ ಇರುತ್ತಾರೆ. ಜೊತೆಯಲ್ಲಿ ಜಿಲ್ಲೆಯ ತಾಲೂಕು ಪಂಚಾಯಿತಿಗಳ ಅಧ್ಯಕ್ಷರೂ ಇದರ ಸದಸ್ಯರಾಗಿರುತ್ತಾರೆ. ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಇರುವಂತೆ ಇಲ್ಲಿಯೂ ಮೀಸಲಾತಿಯಿದೆ. ಸದಸ್ಯರ ಅಧಿಕಾರಾವಧಿ ಐದು ವರ್ಷಗಳು.
ಜಿಲ್ಲಾ ಪಂಚಾಯಿತಿಯ ಸದಸ್ಯರು ತಮ್ಮಲ್ಲಿಯೇ ಒಬ್ಬರನ್ನು ಅಧ್ಯಕ್ಷರನ್ನಾಗಿಯೂ ಮತ್ತೊಬ್ಬರನ್ನು ಉಪಾಧ್ಯಕ್ಷರನ್ನಾಗಿಯೂ ಆರಿಸುತ್ತಾರೆ. ಅನೇಕ ಸ್ಥಾಯಿ ಸಮಿತಿಗಳನ್ನು ರಚಿಸಲಾಗುತ್ತದೆ. ಪ್ರತಿಯೊಂದಕ್ಕೂ ಒಬ್ಬ ಸದಸ್ಯನು ಮುಖ್ಯಸ್ಥನಾಗಿರುತ್ತಾನೆ. ಉದಾಹರಣೆಗೆ ಶಿಕ್ಷಣ ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ, ಇತ್ಯಾದಿ. ‘ಮುಖ್ಯ ಕಾರ್ಯನಿರ್ವಹಣಾಧಿಕಾರಿ’ಯು (ಸಿ.ಇ.ಒ.) ಜಿಲ್ಲಾ ಪಂಚಾಯಿತಿಯ ಅಧಿಕಾರಿಯಾಗಿರುತ್ತಾರೆ.
ಪ್ರಮುಖ ಕಾರ್ಯಗಳು:
● ಜಿಲ್ಲಾ ಪಂಚಾಯಿತಿ ಪ್ರದೇಶದ ಅಭಿವೃದ್ಧಿಗಾಗಿ ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸುವುದು.
● ನೈಸರ್ಗಿಕ ಪ್ರಕೋಪಗಳಿಗೆ ತುತ್ತಾದವರಿಗೆ ಪರಿಹಾರ ಒದಗಿಸುವುದು.
● ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಮೇಲ್ವಿಚಾರಣೆ ನೋಡಿಕೊಳ್ಳುವುದು.
● ಸರ್ಕಾರಿ ಶಾಲೆಗಳ ನಿರ್ವಹಣೆ,
ಆದಾಯದ ಮೂಲಗಳು:
● ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರವು ನೀಡುವ ಅನುದಾನ ಮತ್ತು ಸಾಲವನ್ನೆತ್ತಿ ಪಡೆದ ಹಣ.
● ತೆರಿಗೆ, ಬಾಡಿಗೆ ಮತ್ತು ಸೇವಾ ಶುಲ್ಕಗಳ ಮೂಲಕ ಸಂಗ್ರಹಿಸಿದ ಆದಾಯ.
ನಗರಾಡಳಿತ
ಪುರಸಭೆ ಮತ್ತು ನಗರಪಾಲಿಕೆಗಳು – ರಚನೆ:
ನಗರ ಪ್ರದೇಶಗಳಲ್ಲಿ ಪುರಸಭೆ, ನಗರಪಾಲಿಕೆ ಮತ್ತು ಮಹಾನಗರಪಾಲಿಕೆಗಳೆಂಬ ಪೌರಸಂಸ್ಥೆಗಳಿವೆ. ಪುರಸಭೆ ಮತ್ತು ನಗರಸಭೆಗಳ ಸದಸ್ಯರನ್ನು ಸ್ಥಳೀಯ ಜನರೇ ಚುನಾಯಿಸುತ್ತಾರೆ. ಸದಸ್ಯರನ್ನು ‘ಕೌನ್ಸಿಲರ್’ ಎಂದು ಕರೆಯುತ್ತಾರೆ.
ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಈ ಪೌರ ಸಂಸ್ಥೆಗಳಲ್ಲಿ ಮೀಸಲಾತಿಯಿದೆ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಶಾಸಕರು ಪೌರಸಂಸ್ಥೆಗಳ ಸದಸ್ಯರಾಗಿರುತ್ತಾರೆ. ಪೌರಸಂಸ್ಥೆಗಳ ಅಧಿಕಾರಾವಧಿ ಐದು ವರ್ಷ.
ಸದಸ್ಯರು ತಮ್ಮಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿಯೂ ಇನ್ನೊಬ್ಬರನ್ನು ಉಪಾಧ್ಯಕ್ಷರನ್ನಾಗಿಯೂ ಆಯ್ಕೆ ಮಾಡುತ್ತಾರೆ. ಪುರಸಭೆಯ ಆಡಳಿತವನ್ನು ಮುಖ್ಯ ಅಧಿಕಾರಿ ನಿರ್ವಹಿಸುವರು. ‘ಕಮಿಷನರು’ ಅಥವಾ ‘ಆಯುಕ್ತರು’ ನಗರಸಭೆಯ ಮುಖ್ಯ ಅಧಿಕಾರಿ. ಈ ಅಧಿಕಾರಿಗಳು ಸರ್ಕಾರದಿಂದ ನೇಮಕಗೊಂಡವರು.
ಮಹಾನಗರ ಪಾಲಿಕೆಗಳು: ನಮ್ಮ ರಾಜ್ಯದಲ್ಲಿ ಹನ್ನೊಂದು ಮಹಾನಗರ ಪಾಲಿಕೆಗಳು ಇವೆ.
ರಚನೆ: ಪುರಸಭೆ ಮತ್ತು ನಗರಪಾಲಿಕೆಗಳಲ್ಲಿರುವಂತೆ ಇಲ್ಲಿಯೂ ಮೀಸಲಾತಿಯಿದೆ. ಆಯಾ ಕ್ಷೇತ್ರದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ಆಯಾ ಮಹಾನಗರಪಾಲಿಕೆಯ ಸದಸ್ಯರಾಗಿರುತ್ತಾರೆ. ಸದಸ್ಯರನ್ನು ‘ಕಾರ್ಪೊರೇಟರ್’ ಎಂದು ಕರೆಯುತ್ತಾರೆ. ಸದಸ್ಯರ ಅಧಿಕಾರಾವಧಿ ಐದು ವರ್ಷ.
ಸದಸ್ಯರು ತಮ್ಮಲ್ಲಿಯೇ ಒಬ್ಬರನ್ನು ‘ಮೇಯರ್’ (ಮಹಾಪೌರ) ಆಗಿಯೂ ಇನ್ನೊಬ್ಬರನ್ನು “ಉಪಮೇಯರ್’’ (ಉಪಮಹಾಪೌರ) ಆಗಿಯೂ ಆಯ್ಕೆ ಮಾಡುತ್ತಾರೆ.
ಪೌರಸಂಸ್ಥೆಗಳ ಕಾರ್ಯಗಳು: ಪುರಸಭೆ, ನಗರಸಭೆ ಮತ್ತು ಮಹಾನಗರಪಾಲಿಕೆಗಳು ಅನೇಕ ಅಭಿವೃದ್ಧಿ ಕೆಲಸಗಳನ್ನು ಕಾರ್ಯಗತ ಮಾಡುತ್ತವೆ. ಇವುಗಳಲ್ಲಿ ಸಾರ್ವಜನಿಕ ಆರೋಗ್ಯ, ಬೀದಿ ದೀಪ, ನಗರ ನೈರ್ಮಲ್ಯ, ಒಳಚರಂಡಿ ವ್ಯವಸ್ಥೆ, ನಲ್ಲಿ ನೀರಿನ ಪೂರೈಕೆ, ರಸ್ತೆ, ಕಟ್ಟಡ ಮತ್ತು ಉದ್ಯಾನವನ ನಿರ್ಮಾಣ ಮುಖ್ಯವಾದುವುಗಳು, ನಗರ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ‘ನಗರಾಭಿವೃದ್ಧಿ ಪ್ರಾಧಿಕಾರ’ವಿದೆ.
ಆದಾಯ ಮೂಲಗಳು: ರಾಜ್ಯಸರ್ಕಾರವು ನೀಡುವ ಅನುದಾನವು ಪುರಸಭೆ, ನಗರಸಭೆ ಮತ್ತು ಮಹಾನಗರಪಾಲಿಕೆಗಳ ಆದಾಯದ ಮುಖ್ಯ ಮೂಲವಾಗಿದೆ. ಸೊತ್ತಿನ ತೆರಿಗೆ, ನೀರು ಸರಬರಾಜು ಕರ, ಆರೋಗ್ಯ ಕರ, ವಿದ್ಯಾಕರ, ವಾಚನಾಲಯ ಕರ, ಭಿಕ್ಷುಕರ ಕರ, ಅಗ್ನಿಕರ ಹಾಗೂ ಇನ್ನಿತರ ಕರ ಮತ್ತು ಬಾಡಿಗೆಗಳು ಅವುಗಳ ಆದಾಯದ ಮೂಲಗಳಾಗಿವೆ.
ಹೊಸ ಪದಗಳು
ಸಬಲೀಕರಣ – ದುರ್ಬಲರನ್ನು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಪಡಿಸುವುದು.
ಮೀಸಲಾತಿ – ಕೆಲವು ವರ್ಗದವರಿಗೆ ಸ್ಥಾನಗಳನ್ನು ಕಾಯ್ದಿರಿಸುವುದು.
ಅನುದಾನ – ಅಭಿವೃದ್ಧಿ ಕಾರ್ಯಕ್ರಮ ಮತ್ತು ಇತರ ಉದ್ದೇಶಕ್ಕೆ ಸರ್ಕಾರ ಒದಗಿಸುವ ಹಣಕಾಸು.
ನೈಸರ್ಗಿಕ ಪ್ರಕೋಪ – ನೆರೆ, ಚಂಡಮಾರುತ ಮುಂತಾದ ಭೀಕರ ಅನಾಹುತಗಳು.
ವಿಡಿಯೋ ಪಾಠಗಳು
ಅಭ್ಯಾಸಗಳು
***************