ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು – ಅಧ್ಯಾಯ 15
ಪಾಠದ ಪರಿಚಯ
ಪಾಶ್ಚಿಮಾತ್ಯ ಶಿಕ್ಷಣದ ಅನುಷ್ಠಾನ ಭಾರತೀಯರಲ್ಲಿ ಒಂದು ಹೊಸ ಜಾಗೃತಿಯನ್ನು ಮೂಡಿಸಿತು. ಭಾರತೀಯರು ತಮ್ಮ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಹಲವಾರು ಮಾರ್ಗಗಳನ್ನು ಹುಡುಕತೊಡಗಿದರು. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭಾರತೀಯ ಸಮಾಜವನ್ನು ಸುಧಾರಿಸಲು ಶ್ರಮಿಸಿದ 19ನೇ ಶತಮಾನದ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಕರ ಕಾರ್ಯಗಳನ್ನು ನಾವೀಗ ತಿಳಿಯೋಣ.
ಆಧುನಿಕ ಪಾಶ್ಚಿಮಾತ್ಯ ವಿಚಾರಧಾರೆಯ ಪರಿಣಾಮವಾಗಿ ಭಾರತದಲ್ಲಿ ಒಂದು ನೂತನ ಜಾಗೃತಿ ಉಂಟಾಯಿತು. ಪಾಶ್ಚಿಮಾತ್ಯ ಸಂಸ್ಕೃತಿ, ವೇಷಭೂಷಣ, ನಡಾವಳಿಗಳು, ಸಮಾಜ, ಧಾರ್ಮಿಕ ವಿಚಾರಗಳು, ನಂಬಿಕೆಗಳು ಮತ್ತು ಆಂಗ್ಲರ ಸಾಮಾಜಿಕ ಆದರ್ಶಗಳು ಭಾರತೀಯರ ಮೇಲೆ ಗಾಢವಾದ ಪ್ರಭಾವ ಬೀರಿದವು. ವಿಶೇಷವಾಗಿ ಭಾರತೀಯರು ಪಾಶ್ಚಿಮಾತ್ಯರ ವೈಜ್ಞಾನಿಕ ವಿಚಾರಧಾರೆ, ಮಾನವತಾವಾದ ಹಾಗೂ ಕಾರ್ಯಕಾರಣ ಸಿದ್ಧಾಂತಗಳಿಂದ ಪ್ರಭಾವಿತರಾದರು. ಈ ಬೆಳವಣಿಗೆಗಳ ಪರಿಣಾಮವು ವಸಾಹತುಶಾಹಿ ಕಾಲದ ಭಾರತದಲ್ಲಿ ಪುನರುಜ್ಜೀವನದ ಹುಟ್ಟಿಗೆ ನಾಂದಿಯಾಯಿತು. ಸಮಾನತೆಯ ಆಶಯಗಳನ್ನು ಸಾರುವ ಹೊಸ ಅರಿವೇ ಈ ಪುನರುಜ್ಜೀವನ ಚಳವಳಿ. ಇದನ್ನು ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಯ ಹೆಸರಿನಿಂದಲೂ ಕರೆಯುವರು. ಈ ಚಳವಳಿಗಳು ದಲಿತ ಮತ್ತು ಮಹಿಳಾ ವರ್ಗಗಳ ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದವು. ಬ್ರಿಟಿಷರು ಇಂಗ್ಲಿಷ್ ಶಿಕ್ಷಣವನ್ನು ಭಾರತೀಯರ ವಿಮೋಚನೆಗೆ ದಾರಿಯಾಗಿದೆಯೆಂದು ಪ್ರತಿಪಾದಿಸುತ್ತಲೆ, ವಸಾಹತು ಸಿದ್ಧಾಂತವನ್ನು ಭಾರತೀಯರ ಮೇಲೆ ಹೇರುತ್ತಾ ಹೋದರು. ಎಂಬ ಚರ್ಚೆಗಳು ಇವೆ.
ಬ್ರಹ್ಮ ಸಮಾಜ (ಸಾ.ಶ. 1828)
ಆಧುನಿಕ ಕಾಲಘಟ್ಟದ ಭಾರತದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದವರಲ್ಲಿ ರಾಜಾ ರಾಮಮೋಹನ ರಾಯ್ ಮೊದಲಿಗರು. ಇವರನ್ನು `ಭಾರತದ ಪುನರುಜ್ಜೀವನ ಪಿತಾಮಹ’ ಎಂದು ರವೀಂದ್ರನಾಥ ಟಾಗೋರ್ ಕರೆದಿರುವುದು ಸಮರ್ಥನೀಯವಾಗಿದೆ.

ಜಡ ಭಾರತೀಯ ಸಮಾಜದಲ್ಲಿ ಚೇತನ ತುಂಬುವ ಉದ್ದೇಶವನ್ನು ಹೊಂದಿದ್ದ ರಾಜಾ ರಾಮಮೋಹನ ರಾಯ್ ಸಾ.ಶ. 1814ರಲ್ಲಿ ಆತ್ಮೀಯ ಸಭಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಸಾ.ಶ. 1819ರ ವೇಳೆಗೆ ಸ್ಥಗಿತಗೊಂಡಿತು. ನಂತರ ಸಾ.ಶ. 1828ರಲ್ಲಿ ಬ್ರಹ್ಮಸಭಾ’ವನ್ನು ಸ್ಥಾಪಿಸಿದರು. ಅದು ಮರು ವರ್ಷ ಬ್ರಹ್ಮ ಸಮಾಜ’ ಎಂದು ನಾಮಕರಣಗೊಂಡಿತು. ರಾಜಾ ರಾಮ ಮೋಹನ ರಾಯ್ ಪೂರ್ವ ಮತ್ತು ಪಶ್ಚಿಮದ ಚಿಂತನೆಗಳ ಸಮನ್ವಯದ ಪ್ರತಿನಿಧಿಯಾಗಿದ್ದರು. ಸತಿ ಪದ್ಧತಿ, ಜಾತಿ ಪದ್ಧತಿ, ಮೂರ್ತಿ ಪೂಜೆ, ಬಹುಪತ್ನಿತ್ವ, ಬಾಲ್ಯ ವಿವಾಹ ಹಾಗೂ ಎಲ್ಲಾ ತರದ ಮೂಢ ನಂಬಿಕೆಗಳನ್ನು ಬ್ರಹ್ಮ ಸಮಾಜವು ಬಲವಾಗಿ ವಿರೋಧಿಸಿತು. ರಾಮಮೋಹನ ರಾಯ್ ಮತ್ತು ಅವರ ಸಹವರ್ತಿಗಳು ಅರ್ಥಹೀನ ಸತಿ ಪದ್ಧತಿಯನ್ನು ನಿರ್ಮೂಲನಗೊಳಿಸುವಂತೆ ಬ್ರಿಟಿಷ್ ಸರ್ಕಾರವನ್ನು ಕೋರಿದರು. ಇದರಿಂದ ಅಂದಿನ ಗವರ್ನರ್ ಜನರಲ್ ಆಗಿದ್ದ ವಿಲಿಯಮ್ ಬೆಂಟಿಂಕ್‍ನು ಸತಿ ಪದ್ಧತಿ ಆಚರಣೆಯನ್ನು ಕಾನೂನುಬಾಹಿರವೆಂದು ಘೋಷಿಸಿದನು (ಸಾ.ಶ. 1829). ಪಾಶ್ಚಿಮಾತ್ಯ ಶಿಕ್ಷಣವನ್ನು ಪ್ರತಿಪಾದಿಸಿದ ರಾಮಮೋಹನ ರಾಯ್ ಆ ಮೂಲಕ ಅಮಾನವೀಯ ಪದ್ಧತಿಗಳನ್ನು ತೊಡೆದು ಹಾಕಬಹುದೆಂದು ಬಲವಾಗಿ ನಂಬಿದ್ದರು. ವಿಧವಾ ವಿವಾಹ ಮತ್ತು ಏಕದೇವತಾರಾಧನೆಯ ಪರವಾಗಿದ್ದ ರಾಮಮೋಹನ ರಾಯ್ ಅವರುಸಂವಾದ ಕೌಮುದಿ’ ಪತ್ರಿಕೆಯ ಮೂಲಕ ಸಾಮಾಜಿಕ ಸುಧಾರಣಾ ಚಳವಳಿಯ ಪ್ರಕ್ರಿಯೆಯನ್ನು ಆರಂಭಿಸಿದರು.
ವೈಚಾರಿಕತೆಯ ಮೂಲಕ ಹಿಂದೂ ಧರ್ಮವನ್ನು ಪರಿಶುದ್ಧಗೊಳಿಸಲು ರಾಮಮೋಹನ ರಾಯ್ ಯತ್ನಿಸಿದರು. ತಮ್ಮ ವಿಚಾರವನ್ನು ಸಮರ್ಥಿಸಲು ಐದು ಉಪನಿಷತ್ತುಗಳನ್ನು ಸಂಸ್ಕೃತದಿಂದ ಬಂಗಾಳಿಗೆ ಭಾಷಾಂತರಿಸಿದರು.
ರಾಮಮೋಹನ ರಾಯ್ ಇಂಗ್ಲಿಷ್ ಶಿಕ್ಷಣವನ್ನು ಪ್ರತಿಪಾದಿಸಿದ ಮೊದಲಿಗರಲ್ಲಿ ಒಬ್ಬರು. ತಮ್ಮ ಖರ್ಚಿನಲ್ಲಿ ಇಂಗ್ಲಿಷ್ ಶಾಲೆ ನಡೆಸುತ್ತಿದ್ದರು. ಅವರು ವೇದಾಂತ ಕಾಲೇಜನ್ನು ಕೂಡ ಸ್ಥಾಪಿಸಿದರು. ರಾಮಮೋಹನ ರಾಯ್ ಭಾರತೀಯ ಪತ್ರಿಕೋದ್ಯಮದ ಆದ್ಯ ಪ್ರವರ್ತಕರಲ್ಲಿ ಒಬ್ಬರಾಗಿದ್ದಾರೆ. ಹಲವು ನಿಯತಕಾಲಿಕೆಗಳನ್ನು ಅವರು ಪ್ರಕಟಿಸಿದರು. ಒಟ್ಟಿನಲ್ಲಿ ಅವರು ಜೀವನವಿಡೀ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಿದರು. ಅವರ ಸಮಾಜಮುಖಿ ಕಾರ್ಯಗಳನ್ನು ಮುಂದೆ ದೇವೇಂದ್ರನಾಥ ಟಾಗೋರ್ ಮತ್ತು ಕೇಶವ್‍ಚಂದ್ರ ಸೇನ್ ಮುಂದುವರಿಸಿದರು.
ನಿಮಗೆ ತಿಳಿದಿರಲಿ :
`ರಾಜಾ’ ಎಂಬುದು ರಾಮಮೋಹನ ರಾಯ್ ಅವರಿಗೆ ಮೊಗಲ್ ಬಾದಷಹ ಸಾ.ಶ. 1829ರಲ್ಲಿ ನೀಡಿದ ಬಿರುದಾಗಿತ್ತು.
ಪ್ರಾರ್ಥನಾ ಸಮಾಜ (ಸಾ.ಶ. 1867)
ಪ್ರಾರ್ಥನಾ ಸಮಾಜವನ್ನು ಆತ್ಮಾರಾಮ ಪಾಂಡುರಂಗರು ಪ್ರಾರಂಭಿಸಿದರು. ಇದು ಬ್ರಹ್ಮ ಸಮಾಜದ ನಂತರ ಮುಂಬೈ ಪ್ರದೇಶದಲ್ಲಿ ಪ್ರಾರಂಭವಾದ ಪ್ರಮುಖ ಸಮಾಜ ಸುಧಾರಣಾ ಸಂಸ್ಥೆ. ಬಾಳಾ ವಾಗಳೆ, ಎನ್.ಜಿ. ಚಂದಾವರ್ಕರ್, ಎಂ.ಜಿ. ರಾನಡೆ ಮತ್ತು ಇತರರು ಇದರ ಪ್ರಮುಖ ನಾಯಕರು. ಇವರು ವಿಧವಾ ವಿವಾಹ, ಅಂತರ್ಜಾತಿ ವಿವಾಹ, ಮಹಿಳೆಯರ ಸ್ಥಾನಮಾನದ ಉನ್ನತೀಕರಣ ಮತ್ತು ಶೋಷಿತ ವರ್ಗದವರ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದರು. ಅಲ್ಲದೆ ನಿರ್ಗತಿಕರಿಗೆ ಮತ್ತು ಅನಾಥರಿಗೆ ಆಶ್ರಮಗಳನ್ನು ಸ್ಥಾಪಿಸಿದರು. ವಿಧವೆಯರ ಉದ್ಧಾರಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದರು.

ಸತ್ಯಶೋಧಕ ಸಮಾಜ (ಸಾ.ಶ. 1873)
ಮಹಾತ್ಮ ಜ್ಯೋತಿಬಾ ಫುಲೆ (ಸಾ.ಶ. 1827-1890) ರವರಿಂದ ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳವಳಿ ಆರಂಭವಾಯಿತು. ಮಹಾರಾಷ್ಟ್ರದ ಕೆಳವರ್ಗದವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅವರು ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಅಸ್ಪøಶ್ಯರು, ಅನಾಥರು ಮತ್ತು ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು. ಬ್ರಾಹ್ಮಣ ಪುರೋಹಿತಶಾಹಿಯನ್ನು ಖಂಡಿಸಿದ ಅವರು `ಗುಲಾಮಗಿರಿ’ ಎಂಬ ಕೃತಿಯನ್ನು ರಚಿಸಿ ತಮ್ಮ ಚಿಂತನೆಗಳನ್ನು ಸಂವಾದದ ರೂಪದಲ್ಲಿ ವಿವರಿಸಿದರು. ಪತ್ನಿ ಸಾವಿತ್ರಿಬಾಯಿಯ ಜೊತೆಗೂಡಿ ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಆರಂಭಿಸಿದರು. ಬಾಲ ವಿಧವೆಯರಿಗೆ ಸಾ.ಶ. 1863ರಲ್ಲಿ ಪುನರ್‍ವಸತಿ ಕೇಂದ್ರವನ್ನು ತೆರೆಯುವ ಮೂಲಕ ನಡೆಯುತ್ತಿದ್ದ ಶಿಶುಹತ್ಯೆ ಪ್ರಕರಣಗಳನ್ನು ಕೊನೆಗಾಣಿಸುವ ಪ್ರಯತ್ನ ಮಾಡಿದರು. ವಿಧವಾ ವಿವಾಹವನ್ನು ಉತ್ತೇಜಿಸಿದರು. ವಾಸ್ತವವಾಗಿ ಫುಲೆ ಅವರನ್ನು ಬಿ.ಆರ್. ಅಂಬೇಡ್ಕರ್ ತಮ್ಮ ತಾತ್ವಿಕ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿದ್ದರು.

ಯಂಗ್ ಬಂಗಾಲಿಯನ್ ಚಳವಳಿ: ರಾಜಾ ರಾಮಮೋಹನ ರಾಯ್ ಅವರ ಸುಧಾರಣಾ ತುಡಿತ ಬಂಗಾಳದ ಅನೇಕ ಯುವ ಚಿಂತನಶೀಲರನ್ನು ಪ್ರೇರೇಪಿಸಿತು. ಇದು ‘ತರುಣ ಬಂಗಾಲಿ’ ಚಳವಳಿಗೆ ನಾಂದಿಯಾಯಿತು. ಆಂಗ್ಲೋಇಂಡಿಯನ್ ಯುವಕ ಹೆನ್ರಿ ವಿವಿಯನ್ ಡಿರೋಜಿಯೊರವರು ಈ ಚಳವಳಿಯ ನೇತಾರರಾಗಿದ್ದರು. ಸ್ವಂತಿಕೆ ಮತ್ತು ವಿವೇಚನೆಯಿಂದ ಅಲೋಚಿಸುವಂತೆ ಅವರು ಯುವಕರಿಗೆ ಕರೆ ನೀಡಿದರು. ಆದರೆ ಭಾರತೀಯರು ಆ ಸಮಯದಲ್ಲಿ ಅವರ ಕರೆಗೆ ಸೂಕ್ತವಾಗಿ ಸ್ಪಂದಿಸಲಿಲ್ಲ.
ಆರ್ಯ ಸಮಾಜ (ಸಾ.ಶ. 1875)
ಸ್ವಾಮಿ ದಯಾನಂದ ಸರಸ್ವತಿ (ಸಾ.ಶ. 1824-1883) ಆರ್ಯ ಸಮಾಜವನ್ನು ಸ್ಥಾಪಿಸಿದರು. ಅವರ ಮೊದಲ ಹೆಸರು ಮೂಲಶಂಕರ ಎಂದಾಗಿತ್ತು. ವೇದಗಳ ಕಾಲದ ಭಾರತದ ಆದರ್ಶ ಸಮಾಜ ಪುನಃ ಸ್ಥಾಪನೆಯಾಗಬೇಕು ಎಂಬುದು ಅವರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ದಯಾನಂದ ಸರಸ್ವತಿಯವರು “ವೇದಗಳಿಗೆ ಹಿಂದಿರುಗಿ” ಎಂದು ಕರೆ ನೀಡಿದರು. ಮೂರ್ತಿಪೂಜೆ, ಅಸ್ಪೃಶ್ಯತೆ, ಬಾಲ್ಯವಿವಾಹ ಮತ್ತು ಜಾತಿ ಪದ್ಧತಿಯನ್ನು ಅವರು ಖಂಡಿಸಿದರು. ದಯಾನಂದ ಸರಸ್ವತಿಯವರು ವಿವಾಹವನ್ನು ಅಂತರ್ಜಾತೀಯ ಪ್ರೋತ್ಸಾಹಿಸಿದರು. ಮತ್ತು ವಿಧವಾ ಅಲ್ಲದೇ ಏಕದೇವತಾರಾಧನೆಯನ್ನು ಪ್ರತಿಪಾದಿಸಿದರು.

ದಯಾನಂದ ಸರಸ್ವತಿಯವರು ತಮ್ಮ ವಿಚಾರಧಾರೆಯನ್ನು ಪ್ರಸಿದ್ಧ ಕೃತಿಯಾದ `ಸತ್ಯಾರ್ಥ ಪ್ರಕಾಶ’ದಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಆರ್ಯ ಸಮಾಜವು ಭಾರತೀಯ ಶಿಕ್ಷಣಾಭಿವೃದ್ದಿಗೆ ಶ್ರಮಿಸಿದ್ದಲ್ಲದೆ, ರಾಷ್ಟ್ರೀಯ ಚಳವಳಿಗೆ ಸ್ಫೂರ್ತಿ ನೀಡಿತು. ಆರ್ಯ ಸಮಾಜದ ನಾಯಕರಾದ ಲಾಲಾ ಹಂಸರಾಜ್ ಅವರು ಲಾಹೋರಿನಲ್ಲಿ “ದಯಾನಂದ ಆಂಗ್ಲೋವೇದಿಕ್ ಶಾಲೆ” (D.A.V.1886) ಯನ್ನು ಸ್ಥಾಪಿಸಿದರು. ತಿಲಕ್, ಲಾಲಾ ಲಜಪತ್ ರಾಯ್‍ರಂತಹ ರಾಷ್ಟ್ರೀಯ ನಾಯಕರು ಆರ್ಯ ಸಮಾಜದ ತತ್ವ ಮತ್ತು ಚಿಂತನೆಗಳಿಂದ ಗಾಢವಾಗಿ ಪ್ರಭಾವಿತರಾದರು. ಮತಾಂತರಗೊಂಡಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವುದಕ್ಕಾಗಿ ದಯಾನಂದರ ಶಿಷ್ಯರಾದ ಶ್ರದ್ಧಾನಂದರು “ಶುದ್ಧಿ ಚಳವಳಿ”ಯನ್ನು ಆರಂಭಿಸಿದರು.
ದಯಾನಂದರು ಕೇವಲ ಜನ್ಮದ ಆಧಾರದಲ್ಲಿ ಬ್ರಾಹ್ಮಣರು ಅಧಿಕಾರ ಪಡೆಯುವುದನ್ನು ತಿರಸ್ಕರಿಸಿದರು. ಸ್ತ್ರೀಯರ ಸಹಿತ ಎಲ್ಲರಿಗೂ ವೇದಗಳನ್ನು ಕಲಿಯುವ ಅಧಿಕಾರವಿದೆಯೆಂದು ಘೋಷಿಸಿದರು. ಗೋಪೂಜೆಯನ್ನು ಪ್ರತಿಪಾದಿಸಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ ಆರ್ಯ ಸಮಾಜವು ಸ್ವರಾಜ್ಯ ಮತ್ತು ಸ್ವದೇಶಿ ಭಾವನೆಯನ್ನು ಪ್ರಚೋದಿಸಿದ ಒಂದು ಆಂದೋಲನವಾಗಿತ್ತು.

ರಾಮಕೃಷ್ಣ ಮಿಷನ್ (ಸಾ.ಶ. 1897)
“ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ”. ಇದು ಸ್ವಾಮಿ ವಿವೇಕಾನಂದರು ಭಾರತೀಯ ಯುವಜನತೆಗೆ ನೀಡಿದ ಕರೆ. ಇವರ ಮೊದಲ ಹೆಸರು ನರೇಂದ್ರನಾಥ ದತ್ತ. ಇವರು ಕೊಲ್ಕತಾದಲ್ಲಿ ಸಾ.ಶ. 1863 ಜನವರಿ 12ರಂದು ಜನಿಸಿದರು. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದ ಇವರು ತದನಂತರದಲ್ಲಿ ಸನ್ಯಾಸತ್ವ ಸ್ವೀಕರಿಸಿದರು. ರಾಮಕೃಷ್ಣರ ಮರಣದ ನಂತರ ಅವರ ಶಿಷ್ಯರನ್ನು ಒಗ್ಗೂಡಿಸಿ ಮಾರ್ಗದರ್ಶನ ನೀಡುವ ಜವಾಬ್ದಾರಿ ನರೇಂದ್ರನಾಥ ದತ್ತರ ಹೆಗಲ ಮೇಲೆ ಬಿತ್ತು. ಸಾ.ಶ. 1892ರಲ್ಲಿ ಖೇತ್ರಿಯ ರಾಜ ಅಜಿತ್ ಸಿಂಗ್ ಸಲಹೆಯ ಮೇರೆಗೆ ನರೇಂದ್ರನಾಥ ದತ್ತರ ಹೆಸರು ಸ್ವಾಮಿ ವಿವೇಕಾನಂದ ಎಂದು ನಾಮಕರಣವಾಯಿತು. ಅಮೇರಿಕದ ಚಿಕಾಗೋ ನಗರದಲ್ಲಿ ನಡೆದ ಪ್ರಥಮ ವಿಶ್ವ ಧರ್ಮ ಸಮ್ಮೇಳನದಲ್ಲಿ (ಸಾ.ಶ. 1893) ಅವರು ಹಿಂದೂ ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಅಲ್ಲಿ ಅವರು ವೇದಾಂತವನ್ನು ಕುರಿತು ಮಾಡಿದ ಭಾಷಣ ಅವರನ್ನು ವಿಶ್ವವಿಖ್ಯಾತರನ್ನಾಗಿಸಿತು. ಪಶ್ಚಿಮ ಸಂಸ್ಕೃತಿಯ ಹಲವು ಸಾಧನೆಗಳು, ಮಹಿಳಾ ಸಮಾನತೆಯ ಆಶಯಗಳು ಅವರಿಗೆ ಹಿಡಿಸಿದವು.

ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿದ ವಿವೇಕಾನಂದರು ಭಾರತದ ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಕಂಡು ಮರುಗಿದರು. ಎಲ್ಲಿಯವರೆಗೆ ಜನರು ಹಸಿವು, ಬಡತನ ಮತ್ತು ಅಜ್ಞಾನದಲ್ಲಿರುವರೋ ಅಲ್ಲಿಯವರೆಗೆ ನಾನು ಮತ್ತೆ ಮತ್ತೆ ಜನ್ಮತಾಳಿ ಅದನ್ನು ಹೋಗಲಾಡಿಸಲು ಶ್ರಮಿಸುತ್ತೇನೆ ಎನ್ನುತ್ತಿದ್ದರು.
ಪಂಡಿತ ಈಶ್ವರಚಂದ್ರ ವಿದ್ಯಾಸಾಗರರವರು ಬ್ರಾಹ್ಮಣೇತರ ವಿದ್ಯಾರ್ಥಿಗಳಿಗಾಗಿ ಸಂಸ್ಕೃತ ಕಾಲೇಜನ್ನು ತೆರೆದರು. ಸಾ.ಶ. 1856ರಲ್ಲಿ ಮೊದಲಬಾರಿಗೆ ಮೇಲ್ವರ್ಗದಲ್ಲಿ ಕಾನೂನುಬದ್ಧ ವಿಧವಾ ಪುನರ್‍ವಿವಾಹವು ಕೊಲ್ಕತಾದಲ್ಲಿ ವಿದ್ಯಾಸಾಗರರ ನೇತೃತ್ವದಲ್ಲಿ ನಡೆಯಿತು.
ಮಾನವಹಿತ ಮತ್ತು ಸಮಾಜ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಅವರು ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಸ್ತ್ರೀಯರ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವ ಹೊಂದಿದ ಸ್ವಾಮೀಜಿಯವರು, “ಸ್ತ್ರೀಯರ ಉದ್ಧಾರ ನಮ್ಮ ರಾಷ್ಟ್ರದ ಉದ್ಧಾರ” ಎಂದು ಒತ್ತಿಹೇಳಿದರು. `ದರಿದ್ರ ನಾರಾಯಣ’ರ (ಬಡವರ) ಸೇವೆಗೆ ಕರೆನೀಡಿದರು. ಒಟ್ಟಾರೆ ಭಾರತದ ಉನ್ನತಿಯ ಕನಸನ್ನು ಕಂಡರು.
ಸ್ವಾಮಿ ವಿವೇಕಾನಂದರನ್ನು ಬಾಲ ಗಂಗಾಧರ ತಿಲಕರು `ಭಾರತದ ರಾಷ್ಟ್ರೀಯತೆಯ ನಿಜವಾದ ಪಿತಾಮಹ’ ಎಂದು ಬಣ್ಣಿಸಿದ್ದಾರೆ. ಸುಭಾಷ್‍ಚಂದ್ರ ಬೋಸರನ್ನು ಒಳಗೊಂಡಂತೆ ಅನೇಕ ರಾಷ್ಟ್ರೀಯ ಹೋರಾಟಗಾರರು ಇವರ ಬರವಣಿಗೆಗಳಿಂದ ಪ್ರೇರಣೆಗೊಂಡರು.
ಸ್ವಾಮಿ ವಿವೇಕಾನಂದರು ವಿಶ್ವ ಧರ್ಮಸಮ್ಮೇಳನಕ್ಕೆ ಹೋಗುವ ಮುನ್ನ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದರು. ವಿವೇಕಾನಂದರನ್ನು ತಮ್ಮ ಅರಮನೆಗೆ ಆಹ್ವಾನಿಸಿದ 10ನೇ ಚಾಮರಾಜ ಒಡೆಯರ್ ಅವರು ಸಮ್ಮೇಳನಕ್ಕೆ ಹೋಗಲು ಧನಸಹಾಯ ನೀಡಿದರು. ವಿವೇಕಾನಂದರ ಸಲಹೆ ಮೇಲೆ ದಲಿತರಿಗೆ ಮೂರು ಪ್ರತ್ಯೇಕ ಶಾಲೆಗಳನ್ನು ಮೈಸೂರು ಒಡೆಯರ್ ತೆರೆದರು.
ಥಿಯಸಾಫಿಕಲ್ ಸೊಸೈಟಿ (ಸಾ.ಶ. 1875)
ಥಿಯಸಾಫಿಕಲ್ ಸೊಸೈಟಿ (ಬ್ರಹ್ಮವಿದ್ಯಾ ಸಮಾಜ)ಯನ್ನು ರಷ್ಯನ್ ಅಮೇರಿಕನ್ ಮಹಿಳೆ ಮ್ಯಾಡಂ ಎಚ್.ಪಿ. ಬ್ಲಾವಟ್‍ಸ್ಕಿ ಮತ್ತು ಅಮೇರಿಕದ ಕರ್ನಲ್ ಎಚ್.ಎಸ್. ಆಲ್ಕಾಟ್ ಇವರು ನ್ಯೂಯಾರ್ಕ್‍ನಲ್ಲಿ ಸ್ಥಾಪಿಸಿದರು. ಭಾರತಕ್ಕೆ ಆಗಮಿಸಿ ಚೆನ್ನೈ ಬಳಿಯ ಅಡ್ಯಾರ್ ಎಂಬ ಸ್ಥಳದಲ್ಲಿ ಸೊಸೈಟಿಯ ಅಂತರ್‍ರಾಷ್ಟ್ರೀಯ ಕೇಂದ್ರವನ್ನು ಆರಂಭಿಸಿದರು ನಂತರ ಡಾ. ಅನಿಬೆಸೆಂಟ್ ಇದರ ಅಧ್ಯಕ್ಷರಾಗಿದ್ದರು. ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದ ಅವರು ಭಗವದ್ಗೀತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದರು. ನ್ಯೂ ಇಂಡಿಯಾ’ ಮತ್ತು ಕಾಮನ್‍ವೆಲ್ತ್’ ಎಂಬ ಪತ್ರಿಕೆಗಳನ್ನು ಹೊರಡಿಸಿದರು. ಭಾರತದಲ್ಲಿ ಥಿಯಸಾಫಿಕಲ್ ಚಳವಳಿಯ ಕೇಂದ್ರ ಶಕ್ತಿಯಾಗಿ ಮುನ್ನಡೆಸಿದರು.
ಥಿಯಸಾಫಿಕಲ್ ಸೊಸೈಟಿಯ ಉದ್ದೇಶಗಳೆಂದರೆ:
1. ಭೇದ ಭಾವಗಳನ್ನು ಬಿಟ್ಟು ವಿಶ್ವ ಭಾತೃತ್ವವನ್ನು ನೆಲೆಗೊಳಿಸುವುದು.
2. ಧರ್ಮ, ತತ್ತ್ವಶಾಸ್ತ್ರ ಮತ್ತು ವಿಜ್ಞಾನ ಇವುಗಳ ತುಲನಾತ್ಮಕ ಅಧ್ಯಯನ ನಡೆಸುವುದು.
3. ಪ್ರಕೃತಿಯ ನಿಗೂಢ ತತ್ವಗಳು ಮತ್ತು ಮನುಷ್ಯನಲ್ಲಿ ಅಡಗಿರುವ ಸುಪ್ತಶಕ್ತಿಗಳನ್ನು ಕುರಿತು ಶೋಧ ನಡೆಸುವುದು.
ಅನಿಬೆಸೆಂಟ್ ಬನಾರಸ್‍ನಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಿದರು. ಇದೇ ಮುಂದೆ ಬನಾರಸ್ ಹಿಂದೂ ಯುನಿವರ್ಸಿಟಿ (B.H.U.) ಎಂಬ ಹೆಸರನ್ನು ಪಡೆಯಿತು. ಅವರು ಮುಂದೆ ಹೋಂರೂಲ್ ಚಳವಳಿಯನ್ನು ಸಹ ಆರಂಭಿಸಿದರು. ಹಾಗೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು (ಸಾ.ಶ. 1917).
ಅಲಿಘರ್ ಚಳವಳಿ ಮತ್ತು ಸರ್ ಸಯ್ಯದ್ ಅಹ್ಮದ್ಖಾನ್
ಬಹುತೇಕ ಮುಸ್ಲಿಮರು ಪಾಶ್ಚಾತ್ಯ ಶಿಕ್ಷಣವನ್ನು ಸಂಶಯದಿಂದ ನೋಡುತ್ತಿದ್ದರು ಮತ್ತು ತಮ್ಮ ಧರ್ಮ ಹಿತಾಸಕ್ತಿಗೆ ಮಾರಕವೆಂದು ನಂಬಿದ್ದರು. ಆರಂಭದಲ್ಲಿ ನವಾಬ್ ಅಬ್ದುಲ್ ಲತೀಫರು ಸಾ.ಶ. 1863ರಲ್ಲಿ `ಮಹಮಡನ್ ಲಿಟರರಿ ಸೊಸೈಟಿ’ ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಮುಸ್ಲಿಮರಲ್ಲಿ ಇಂಗ್ಲಿಷ್ ಶಿಕ್ಷಣ ವಿಸ್ತರಿಸಲು ಪ್ರಯತ್ನಿಸಿದರು. ಜೊತೆಗೆ ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ತರುವ ಪ್ರಯತ್ನ ಮಾಡಿದರು. ಈ ಪ್ರಯತ್ನಕ್ಕೆ ಚಳವಳಿಯ ಸ್ವರೂಪ ನೀಡಿದವರು ಸರ್ ಸಯ್ಯದ್ ಅಹ್ಮದ್ ಖಾನ್. ಸಾ.ಶ. 1817ರಲ್ಲಿ ದಿಲ್ಲಿಯಲ್ಲಿ ಜನಿಸಿದ ಇವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ನೇಮಕಗೊಂಡರು. ತನ್ನ ಸಮುದಾಯ ಇಂಗ್ಲಿಷ್ ಶಿಕ್ಷಣದಿಂದ ವಂಚಿತರಾಗಿ ಆರ್ಥಿಕ ಹಾಗೂ ಸಾಮಾಜಿಕ ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎಂದು ಭಾವಿಸಿದರು. ಶಿಕ್ಷಣವನ್ನು ಪಡೆಯುವ ಮೂಲಕ ಸರ್ಕಾರದಲ್ಲಿ ಮುಸ್ಲಿಂ ಸಮುದಾಯ ಸೂಕ್ತ ಪ್ರಾತಿನಿಧ್ಯ ಪಡೆಯಬೇಕೆಂಬುದು ಅವರ ಮಹದಾಸೆಯಾಗಿತ್ತು.

ಅಂತೆಯೇ ಒಬ್ಬ ಸಮಾಜ ಸುಧಾರಕರಾಗಿ ಪರ್ದಾಪದ್ಧತಿ, ಬಹುಪತ್ನಿತ್ವ ಹಾಗೂ ವಿವಾಹ ವಿಚ್ಛೇದನ ಪದ್ಧತಿಗಳನ್ನು ವಿರೋಧಿಸಿದರು. ಇಂಗ್ಲಿಷಿನ ವೈಜ್ಞಾನಿಕ ಮತ್ತು ಸಾಹಿತ್ಯಕ ಕೃತಿಗಳನ್ನು ಉರ್ದುವಿಗೆ ಭಾಷಾಂತರಿಸಲು ಟ್ರಾನ್ಸ್‍ಲೇಷನ್ ಸೊಸೈಟಿ’ಯನ್ನು ಪ್ರಾರಂಭಿಸಿದರು. ಅನಂತರದಲ್ಲಿ ಈ ಸಂಸ್ಥೆಸೈಂಟಿಫಿಕ್ ಸೊಸೈಟಿ’ ಎಂದು ನಾಮಕರಣಗೊಂಡಿತು. ವೈಜ್ಞಾನಿಕ ಆಲೋಚನೆಗಳನ್ನು ಮುಸ್ಲಿಮರಲ್ಲಿ ಪ್ರಚಾರ ಪಡಿಸಲು `ಅಲಿಘರ್ ಇನ್ಸ್‍ಟಿಟ್ಯುಟ್ ಗೆಝೆಟ್’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು.
ಸಾ.ಶ. 1875ರಲ್ಲಿ ಮಹಮಡನ್ ಆಂಗ್ಲೊ ಓರಿಯಂಟಲ್ ಕಾಲೇಜನ್ನು ಆರಂಭಿಸಿದರು. ಈ ಸಂಸ್ಥೆಯೇ ಸಾ.ಶ. 1920ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿತು.
ಶ್ರೀ ನಾರಾಯಣಗುರು

ಶ್ರೀ ನಾರಾಯಣಗುರು ಓರ್ವ ಪ್ರಮುಖ ಸಂತ ಮತ್ತು ಸಮಾಜ ಸುಧಾರಕರಾಗಿ ಪ್ರಸಿದ್ಧಿ ಹೊಂದಿದ್ದಾರೆ. ಅವರು ಸಾ.ಶ. 1854ರಲ್ಲಿ ತಿರುವಾಂಕೂರಿನ `ಇಳವ’ ಸಮುದಾಯದ ಕುಟುಂಬವೊಂದರಲ್ಲಿ ಜನಿಸಿದರು. “ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ” ಎಂಬ ಸಂಸ್ಥೆಯನ್ನು ಸಾ.ಶ. 1903ರಲ್ಲಿ ಸ್ಥಾಪಿಸಿದರು. ಅದರ ಮೂಲಕ ಅವರು ಕೇರಳದ ಎಳವರು ಸೇರಿದಂತೆ ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಗತಿಗಾಗಿ ಶ್ರಮಿಸಿದರು. ಜಾತಿ ಪದ್ಧತಿ, ಪ್ರಾಣಿಬಲಿಯನ್ನು ವಿರೋಧಿಸಿದರು. ಸಂಸ್ಕøತ ಶಾಲೆಗಳನ್ನು ತೆರೆದು ಅಲ್ಲಿ ಜಾತಿಮತ ಭೇದರಹಿತವಾಗಿ ಎಲ್ಲರಿಗೂ ಪ್ರವೇಶ ನೀಡಿದರು. ಅವರು ಸುಮಾರು ಮೂವತ್ತು ದೇವಸ್ಥಾನಗಳನ್ನು ನಿರ್ಮಿಸಿದರು. ಕೇರಳದ ಅಸ್ಪೃಶ್ಯರೂ ಸೇರಿದಂತೆ ಎಲ್ಲಾ ಜಾತಿಯವರಿಗೂ ಪ್ರವೇಶ ಕಲ್ಪಿಸಿದರು. ದೇವಾಲಯಗಳಲ್ಲಿ ಎಲ್ಲ ಮತಧರ್ಮಗಳ ಗ್ರಂಥಗಳನ್ನು ಒಳಗೊಂಡ ಉತ್ತಮ ಗ್ರಂಥಾಲಯ ಇರಬೇಕೆಂದು ಬಯಸಿದರು. ಶ್ರೀ ನಾರಾಯಣಗುರು ಅವರ ಆಶಯವು ಈ ಹೇಳಿಕೆಯಲ್ಲಿ ವ್ಯಕ್ತವಾಗುತ್ತದೆ: “ಒಬ್ಬ ದೇವರು, ಒಂದು ಧರ್ಮ ಮತ್ತು ಒಂದು ಜಾತಿ” (One God, One Religion and One Caste). ಇವರ ಪ್ರಭಾವ ಕರ್ನಾಟಕದ ಮೇಲೂ ಉಂಟಾಗಿರುವುದನ್ನು ಗಮನಿಸಬಹುದು. ನಾರಾಯಣಗುರು ಅವರು ಸಾ.ಶ. 1928ರಲ್ಲಿ ನಿಧನರಾದರು.
ಮಹಿಳಾ ಸಮಾಜ ಸುಧಾರಕಿಯರು
ಮೇಡಂ ಹೆಚ್.ಪಿ. ಬ್ಲಾವಟ್‍ಸ್ಕಿ, ಅನಿಬೆಸೆಂಟ್, ಸಾವಿತ್ರಿಬಾಯಿ ಫುಲೆ, ತಾರಾಬಾಯಿಶಿಂದೆ, ಪಂಡಿತ್ ರಮಾಬಾಯಿ ಮುಂತಾದವರು ಭಾರತದ ಪ್ರಮುಖ ಸಾಮಾಜಿಕ ಸುಧಾರಕರು.
ಸಾವಿತ್ರಿಬಾಯಿ ಫುಲೆ
ಸಾವಿತ್ರಿಬಾಯಿ ಫುಲೆ ಭಾರತದ ಪ್ರಸಿದ್ಧ ಸಮಾಜ ಸುಧಾರಕರು, ಶೈಕ್ಷಣಿಕ ಸುಧಾರಕರು ಹಾಗೂ ಕವಯಿತ್ರಿ. ತಮ್ಮ ಪತಿ ಜ್ಯೋತಿಬಾ ಫುಲೆಯವರೊಡಗೂಡಿ ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಆರಂಭಿಸಿದರಲ್ಲದೆ ತಾವೇ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ಬಾಲ ವಿಧವೆಯವರಿಗಾಗಿ ಪುನರ್ ವಸತಿ ಕೇಂದ್ರಗಳನ್ನು ತೆರೆಯುವ ಮೂಲಕ ನಡೆಯುತ್ತಿದ್ದ ಶಿಶುಹತ್ಯೆ ಪ್ರಕರಣಗಳನ್ನು ಕೊನೆಗಾಣಿಸಲು ಪ್ರಯತ್ನ ಮಾಡಿದರು. ಜಾತಿ ಪದ್ಧತಿ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಡಿದರು. ಅದಕ್ಕಾಗಿ ಅವರು ಸಮಾಜದ ವಿರೋಧವನ್ನು ಎದುರಿಸಬೇಕಾಯಿತು.

ಪತಿ ಜ್ಯೋತಿಬಾ ಫುಲೆಯ ಸಾಮಾಜಿಕ ಹೋರಾಟಗಳಲ್ಲಿ ಹೆಗಲಿಗೆ ಹೆಗಲುಕೊಟ್ಟು ದುಡಿದರು. ಅವರ ಸಾವಿನ ನಂತರ ‘ಸತ್ಯಶೋಧಕ ಸಮಾಜ’ವನ್ನು ಮುನ್ನಡೆಸಿದರು. ಪ್ಲೇಗ್ ಮಹಾಮಾರಿಯ ರೋಗಕ್ಕೆ ತುತ್ತಾದವರ ಸೇವೆಯನ್ನು ತಮ್ಮ ಮಗನೊಡನೆ ಸೇರಿ ಮಾಡುತ್ತಿರುವಾಗಲೇ ಪ್ಲೇಗ್ ರೋಗಕ್ಕೆ ತುತ್ತಾದರು. ಇವರ ಎಲ್ಲಾ ಹೋರಾಟಕ್ಕೆ ಸ್ನೇಹಿತೆಯಾದ ಫಾತಿಮಾ ಶೇಕ್ ಜೊತೆಯಾಗಿದ್ದರು.
ತಾರಾಬಾಯಿ ಶಿಂದೆ
ತಾರಾಬಾಯಿ ಶಿಂದೆ ಮಹಾರಾಷ್ಟ್ರದ ಮೊದಲ ಮಹಿಳಾ ಹೋರಾಟಗಾರ್ತಿ. ಜ್ಯೋತಿಬಾ ಫುಲೆಯವರ ಸತ್ಯಶೋಧಕ ಸಮಾಜದ ಸಕ್ರಿಯ ಸದಸ್ಯರಾಗಿ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಾಲ ವಿಧವೆಯರ ರಕ್ಷಣೆ ಮತ್ತು ವಿಧವಾ ಪುನರ್ವಿವಾಹಕ್ಕೆ ಬೆಂಬಲ ನೀಡಿದರು. ತಮ್ಮ ಕೃತಿ ‘ಸ್ತ್ರೀ-ಪುರುಷ ತುಲನಾ’ದಲ್ಲಿ ಮಹಿಳೆಯ ಶೋಷಣೆಯನ್ನು ಉಗ್ರವಾಗಿ ಪ್ರತಿಭಟಿಸಿದ್ದಾರೆ.

ಪಂಡಿತ್ ರಮಾಬಾಯಿ

ಪಂಡಿತ್ ರಮಾಬಾಯಿ ಅವರು ಭಾರತದ ಪ್ರಸಿದ್ಧ ಕ್ರೈಸ್ತ ಸಮಾಜ ಸುಧಾರಕಿ. ಅನಂತಶಾಸ್ತ್ರಿ ಡೊಂಗ್ಸೆ ಹಾಗೂ ಲಕ್ಷ್ಮೀಬಾಯಿ ದಂಪತಿಗಳ ಪುತ್ರಿಯಾಗಿ ಪಶ್ಚಿಮಘಟ್ಟದ ಗಂಗಾಮೂಲ ಎಂಬಲ್ಲಿ ಜನಿಸಿದರು. ಅಂದಿನ ಸಾಮಾಜಿಕ ಪರಿಸ್ಥಿತಿಗೆ ವಿರುದ್ಧವಾಗಿ ಶಿಕ್ಷಣ ಪಡೆದರು. ಇಂಗ್ಲೆಂಡಿನಲ್ಲಿ ಓದುವಾಗ ಕ್ರೈಸ್ತ ಧರ್ಮೀಯರಾದರು. ಭಾರತೀಯ ಮಹಿಳೆಯ ಉದ್ಧಾರಕ್ಕಾಗಿ ಜೀವನವನ್ನೇ ಮುಡುಪಿಟ್ಟು ಸಾ.ಶ. 1889 ರಲ್ಲಿ ‘ಮುಕ್ತಿ ಮಿಷನ್’ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆಯು ವಿಧವೆಯರು, ಅನಾಥರು ಹಾಗೂ ಕುಡುಕರಿಗೆ ಜೀವನೋಪಾಯ ಕಲ್ಪಿಸುತ್ತಾ ಇಂದಿಗೂ ಕಾರ್ಯಶೀಲವಾಗಿದೆ.
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * * * * *