ಸಸ್ಯಾಧಾರ ಬೇರು – ಪಾಠ – 4

ಹಿಂದಿನ ತರಗತಿಯಲ್ಲಿ ನೀನು ಈಗಾಗಲೇ ಸಸ್ಯದ ಬಗ್ಗೆ ತಿಳಿದಿರುವೆ. ನಿನ್ನ ಸುತ್ತಲಿರುವ ಅನೇಕ ಸಸ್ಯಗಳ ಭಾಗಗಳನ್ನು ಗಮನಿಸಿರುವೆ. ಈ ಚಿತ್ರದಲ್ಲಿ ಕಾಣುವ ಸಸ್ಯದ ಭಾಗಗಳನ್ನು ಹೆಸರಿಸು.

ಸಸ್ಯದ ಬೇರು ಎಲ್ಲಿ ಬೆಳೆಯುತ್ತದೆ?
ಸಸ್ಯದ ಬೇರುಗಳನ್ನು ನೀನು ನೋಡಿದ್ದೀಯಾ?
ಯಾವ ಸಸ್ಯದ ಬೇರುಗಳನ್ನು ನೀನು ನೋಡಿರುವೆ?
ಬೇರಿನ ಬಣ್ಣವೇನು?

ಮಾಡಿ-ನೋಡು
ಎರಡು ತೆಂಗಿನ ಚಿಪ್ಪುಗಳನ್ನು ಇಲ್ಲವೆ ಸಣ್ಣ ಡಬ್ಬಿಗಳನ್ನು ತೆಗೆದುಕೊ. ಎರಡರಲ್ಲಿಯೂ ಮಣ್ಣನ್ನು ತುಂಬಿಸು. ಒಂದು ಚಿಪ್ಪಿನಲ್ಲಿ ರಾಗಿ ಅಥವಾ ಗೋಧಿ ಕಾಳುಗಳನ್ನು ಹಾಕು. ಮತ್ತೊಂದರಲ್ಲಿ ಏನೂ ಹಾಕಬೇಡ. ಎರಡೂ ಚಿಪ್ಪಿಗೂ ದಿನವೂ ಸ್ವಲ್ಪ ನೀರು ಚಿಮುಕಿಸು. ಒಂದು ವಾರದೊಳಗೆ ರಾಗಿ ಅಥವಾ ಗೋಧಿ ಕಾಳುಗಳು ಮೊಳೆಯುತ್ತವೆ. ಮೊಳಕೆಗಳು ಸ್ವಲ್ಪ ದೊಡ್ಡದಾದ ನಂತರ ಎರಡೂ ಚಿಪ್ಪುಗಳನ್ನು ಬೋರಲು ಹಾಕು. ಎರಡೂ ಚಿಪ್ಪಿನಿಂದ ಹೊರಬಂದ ಮಣ್ಣನ್ನು ಗಮನಿಸು.

ಬೇರುಗಳು ತಮ್ಮ ಜಾಲದಿಂದ ಮಣ್ಣಿನ ಕಣಗಳನ್ನು ಹಿಡಿದಿಡುತ್ತವೆ. ಇದರಿಂದ ಸಸ್ಯಕ್ಕೆ ನೆಲದ ಮೇಲೆ ನಿಲ್ಲಲು ಆಧಾರ ಸಿಗುತ್ತದೆ.

ಮಾಡಿ-ನೋಡು
ಶಾಲೆಯ ಅಥವಾ ಮನೆಯ ಕೈತೋಟದ ಮಣ್ಣಿನಲ್ಲಿ ನಾಲ್ಕಾರು ಹುರಳಿ ಬೀಜಗಳನ್ನು ಬಿತ್ತು. ಕೆಲವು ದಿನಗಳ ನಂತರ ಸಸಿಗಳು ಹೊರಬರುತ್ತವೆ. ಅವುಗಳಲ್ಲಿ ಎರಡು ಚಿಕ್ಕ ಸಸ್ಯಗಳನ್ನು ಬೇರು ಹಾಳಾಗದಂತೆ ಮಣ್ಣಿನಿಂದ ಮೃದುವಾಗಿ ತೆಗೆ. ಒಂದು ಸಸ್ಯದ ಬೇರುಗಳನ್ನು ಕತ್ತರಿಸು. ಇನ್ನೊಂದನ್ನು ಹಾಗೆಯೇ ಬಿಡು. ಎರಡು ಅಗಲ ಬಾಯಿಯಿರುವ ಕುಂಡಗಳನ್ನು ತೆಗೆದುಕೊ. ಹೆಚ್ಚಿನ ನೀರು ಹೊರಹೋಗಲು ಕೆಳಗೆ ಸಣ್ಣ ರಂಧ್ರವನ್ನು ಮಾಡು. ಎರಡೂ ಕುಂಡಗಳಲ್ಲಿ ಮಣ್ಣನ್ನು ತುಂಬಿಸಿ ಒಂದೊಂದು ಗಿಡವನ್ನು ನೆಡು. ಕುಂಡಗಳನ್ನು ಬಿಸಿಲಿನಲ್ಲಿಟ್ಟು ಪ್ರತಿದಿನವೂ ನೀರು ಹಾಕು. 2 ಅಥವಾ 3 ದಿನಗಳ ನಂತರ ಗಿಡಗಳಲ್ಲಿ ಆಗುವ ಬದಲಾವಣೆಯನ್ನು ಗಮನಿಸು.

ಸಸ್ಯಗಳು ಬೆಳೆಯಲು ಬೇರು ಬೇಕು.

ಮಾಡಿ-ನೋಡು
ಒಂದು ಗಾಜಿನ ಶೀಷೆಯಲ್ಲಿ ಅಥವಾ ಲೋಟದಲ್ಲಿ ಸ್ವಲ್ಪ ನೀರನ್ನು ತೆಗೆದುಕೊ. ನೀರಿಗೆ ಒಂದೆರಡು ಹನಿ ಕೆಂಪು ಇಂಕು ಅಥವಾ ಯಾವುದೇ ಬಣ್ಣವನ್ನು ಹಾಕು. ಕರ್ಣಕುಂಡಲ ಅಥವಾ ಗೌರಿ ಗಿಡದ ಒಂದು ಸಸಿಯನ್ನು ಮಣ್ಣಿನಿಂದ ನಿಧಾನವಾಗಿ ಬೇರು ಹಾಳಾಗದಂತೆ ತೆಗೆ. ಸಸ್ಯದ ಬೇರುಗಳನ್ನು ಚೆನ್ನಾಗಿ ತೊಳೆದು ಸಸ್ಯವನ್ನು ಬಣ್ಣದ ನೀರಿನಲ್ಲಿಡು. ಲೋಟವನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಡು. ಮಾರನೆಯ ದಿನ ಸಸ್ಯದಲ್ಲಾದ ಬದಲಾವಣೆಯನ್ನು ಗಮನಿಸು.

ಓದಿ-ತಿಳಿ
ಬೇರುಗಳು ಸಸ್ಯಕ್ಕೆ ಬೇಕಾಗುವ ನೀರು ಮತ್ತು ಪೋಷಕಾಂಶಗಳನ್ನು ಮಣ್ಣಿನಿಂದ ಹೀರಿಕೊಳ್ಳುತ್ತವೆ. ಬೇರುಗಳಿಂದ ನೀರು ಮತ್ತು ಪೋಷಕಾಂಶಗಳು, ಕಾಂಡ ಹಾಗೂ ಎಲೆಗಳನ್ನು ತಲುಪುತ್ತವೆ.

ಸಸ್ಯದ ಆಧಾರ ಬೇರು
ಬೇರಿನ ಜಾಲವು ಮಣ್ಣಿನ ಕಣಗಳನ್ನು, ನೀರನ್ನು ಹರಿದು ಹೋಗದಂತೆ ತಡೆಯುತ್ತದೆ.
ಸಸ್ಯವನ್ನು ಮಣ್ಣಿನಲ್ಲಿ ಭದ್ರವಾಗಿ ಹಿಡಿದಿಡುತ್ತವೆ.
ನೀರು ಮತ್ತು ಪೆÇೀಷಕಾಂಶಗಳನ್ನು ಮಣ್ಣಿನಿಂದ ಹೀರಿ ಸಸ್ಯದ ಇತರ ಭಾಗಗಳಿಗೆ ಕಳುಹಿಸುತ್ತವೆ.

ಮೇಲಿನ ಚಿತ್ರಗಳನ್ನು ಹೆಸರಿಸು. ಇವುಗಳನ್ನು ನಿಮ್ಮ ಮನೆಯಲ್ಲಿ ಬಳಸುತ್ತೀರಾ? ಏಕೆ? ಇವು ಸಸ್ಯದ ಯಾವ ಭಾಗದಿಂದ ಬರುತ್ತವೆ?

ಸಂವೇದ ವಿಡಿಯೋ ಪಾಠಗಳು

Samveda – 4th – EVS – Sasyaadhaara Beru

ಪೂರಕ ವಿಡಿಯೋಗಳು

ಸಸ್ಯಾಧಾರ ಬೇರು | ಪಾಠ 4 | 4th standard EVS | lesson 4 | Sasyadhaara beru |
ಸಸ್ಯಾಧಾರ ಬೇರು | ಪಾಠ 4 | 4th standard EVS | lesson 4 | Sasyadhaara beru |

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Bean Time-Lapse – 25 days | Soil cross section
Structure and Function of Roots
What are modifications of root? | Plants | Biology | Extraclass.com

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿನಗಿದು ಗೊತ್ತೆ?

* 2007ರಲ್ಲಿ ಬ್ರಿಟನ್ನಿನ ರೈತನೊಬ್ಬ 19 ಅಡಿ ಉದ್ದದ ಕ್ಯಾರೆಟ್ ಬೆಳೆದ ದಾಖಲೆ ಇದೆ.

* ಹುಲ್ಲಿನ ಜಾತಿಗೆ ಸೇರಿದ ಸಸ್ಯವೊಂದರ ಬೇರಿನ ಉದ್ದದ ದಾಖಲೆ 600 km. ಇದು ಬೆಂಗಳೂರಿನಿಂದ ಕಲಬುರಗಿಯ ನಡುವಿನ ಅಂತರದಷ್ಟು.

* ಆಲದ ಮರ ತನ್ನ ಬಿಳಿಲು ಬೇರಿನ ಸಹಾಯದಿಂದ ಸುಮಾರು 5 ಎಕರೆಗೂ ಹೆಚ್ಚು ವಿಸ್ತಾರವಾಗಿ ಬೆಳೆದ ದಾಖಲೆಗಳಿವೆ. ಉದಾಹರಣೆಗೆ, ಬೆಂಗಳೂರಿನಲ್ಲಿರುವ ದೊಡ್ಡ ಆಲದ ಮರ.

* ಮರಗಳ ಮೇಲೆ ಬೆಳೆಯುವ ಕೆಲವು ಸಸ್ಯಗಳ (ಅಪ್ಪು ಸಸ್ಯಗಳ) ಬೇರುಗಳು ಹಸಿರಾಗಿದ್ದು ಗಾಳಿಗೆ ತೆರೆದುಕೊಂಡಿರುತ್ತವೆ. ಇವು ಗಾಳಿಯಲ್ಲಿರುವ ನೀರಾವಿಯನ್ನು ಹೀರಿಕೊಳ್ಳುತ್ತವೆ.

* ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳಲ್ಲಿ ಹಲವು ಸಸ್ಯಗಳ ಬೇರುಗಳು ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ ಮತ್ತು ಸಸ್ಯಕ್ಕೆ ಬೇಕಾದಾಗ ಒದಗಿಸುತ್ತವೆ. ಕೆಲವು ಜನಾಂಗಗಳು ಬೇರಿನಲ್ಲಿರುವ ನೀರನ್ನು ಕುಡಿಯಲು ಕೂಡ ಉಪಯೋಗಿಸುವುದುಂಟು. ಸುಮಾರು 70kg ಯಷ್ಟು ನೀರನ್ನು ಸಂಗ್ರಹಿಸಿಟ್ಟ ಬೇರುಗಳ ದಾಖಲೆಯೂ ಇದೆ.