ಸವಿಜೇನು – ಪಾಠ – 2
ಜಾತ್ರೆಗೆ ಹೋಗಿದ್ದ ಊರಿನ ಮಕ್ಕಳು ಮಿಠಾಯಿ ತಿನ್ನುತ್ತಾ ನಿಂತಿದ್ದರು. ತಿನ್ನುವಾಗ ಉದುರಿದ ಮಿಠಾಯಿ ಚೂರುಗಳ ಸುತ್ತಲೂ ಇರುವೆಗಳ ಹಿಂಡೇ ನೆರೆದಿತ್ತು.
ಫಾತಿಮಾ : ಇಲ್ಲಿ ನೋಡು ರಾಧಾ, ಎಷ್ಟೊಂದು ಇರುವೆಗಳು ಮಿಠಾಯಿ ಚೂರುಗಳಿಗೆ ಹೇಗೆ ಮುತ್ತಿಗೆ ಹಾಕಿವೆ!
ರಾಧಾ : ಹೌದು ಫಾತಿಮಾ. ಎಷ್ಟು ಒಗ್ಗಟ್ಟಿನಿಂದ ಎಲ್ಲವೂ ಸೇರಿ ಆಹಾರವನ್ನು ಸಾಗಿಸುತ್ತಿವೆಯಲ್ಲ?
ತೇಜಸ್ : ಓಹೋ ! ಅಲ್ಲಿ ನೋಡಿ. ಬೆಕ್ಕಿನ ಮರಿಗಳು ಎಷ್ಟು ಮುದ್ದಾಗಿವೆ !
ಫಾತಿಮಾ : ಅಬ್ಬಾ! ಎಷ್ಟು ಬೆಳ್ಳಗಿವೆ. ತಾಯಿ ಬೆಕ್ಕು ಮರಿಗಳನ್ನು ಎಷ್ಟು ಪ್ರೀತಿಯಿಂದ ನೆಕ್ಕುತ್ತಿದೆಯಲ್ಲಾ.
ರಾಧಾ : ನಮ್ಮಂತೆಯೇ ಪ್ರಾಣಿಗಳೂ ಕೂಡಿ ಬಾಳುತ್ತವೆಯಲ್ಲವೆ?
ತೇಜಸ್ : ಹೌದು, ಹೆಚ್ಚಿನ ಪ್ರಾಣಿಗಳು ಕೂಡಿ ಬಾಳುತ್ತವೆ ಎಂದು ಅಪ್ಪ ಹೇಳಿದ್ದರು. ನಾನೊಮ್ಮೆ ನಾಗರಹೊಳೆ ಕಾಡಿಗೆ ಹೋಗಿದ್ದಾಗ ಜಿಂಕೆಗಳ ಹಿಂಡನ್ನು ಕಂಡಿದ್ದೆ. ಆನೆಗಳು ಕೂಡ ಗುಂಪಿನಲ್ಲಿಯೇ ಇದ್ದವು. ಹುಲಿಯನ್ನೂ ನೋಡಿದೆ. ಆದರೆ ಅದು ಮಾತ್ರ ಒಂಟಿಯಾಗಿತ್ತು.
ಫಾತಿಮಾ : ಅಲ್ಲಿ ನೋಡಿ, ನಾಯಿಗಳು ಹೇಗೆ ಬ್ರೆಡ್ಡಿನ ತುಂಡಿಗೆ ಜಗಳವಾಡುತ್ತಿವೆ.
ರಾಧಾ : ಆಕಾಶವನ್ನು ನೋಡಿ, ಬೆಳ್ಳಕ್ಕಿಗಳು ಹೇಗೆ ಒಟ್ಟಾಗಿ ಹಾರುತ್ತಿವೆ.
ತೇಜಸ್ : ಹೌದು ರಾಧಾ, ಅಲ್ಲಿ ನೋಡು. ಮರದ ಮೇಲೆ ಮಂಗ ಕುಳಿತಿದೆ.
ಫಾತಿಮಾ : ಮರಿಯು ತಾಯಿಯ ಹೊಟ್ಟೆಯನ್ನು ಅಪ್ಪಿ ಹಿಡಿದಿದೆ.
ರಾಧಾ : ಅಯ್ಯೋ ! ಅದು ಬಿದ್ದುಬಿಟ್ಟರೆ?
ತೇಜಸ್ : ಇಲ್ಲ, ಮರಿಯು ತಾಯಿಯನ್ನು ಗಟ್ಟಿಯಾಗಿ ಹಿಡಿದಿದೆ.
ರಾಧಾ : ತೇಜಸ್ ಅಲ್ಲಿ ನೋಡು. ಸಣ್ಣ ಕೋಳಿ ಮರಿಗಳು. ಅವುಗಳಿಗೆ ತಾಯಿ ಕೋಳಿಯು ಆಹಾರ ಹುಡುಕುವುದನ್ನು ಕಲಿಸುತ್ತಿದೆ.
ಈ ಮಕ್ಕಳಂತೆ ನೀನು ಕೂಡ ನಿನ್ನ ಸುತ್ತಲಿರುವ ಪ್ರಾಣಿಗಳ ವರ್ತನೆಯನ್ನು ಗಮನಿಸು.
ಫಾತಿಮಾ : ಜೇನುನೊಣವನ್ನು ನೋಡು. ಅದು ಹೂವಿನ ಮೇಲೆ ಕುಳಿತು ಹೇಗೆ ಮಕರಂದ ಹೀರುತ್ತಿದೆ!
ರಾಧಾ : ಬಾ ಜೇನನ್ನು ಮಾತನಾಡಿಸೋಣ.
ತೇಜಸ್ : ಜೇನೇ, ಜೇನೇ, ನಿನ್ನ ಗೂಡೆಲ್ಲಿ?
ಜೇನು : ಅಲ್ಲಿ ನೋಡು, ಆ ಮರದಲ್ಲಿರುವುದೇ ನನ್ನ ಗೂಡು.
ತೇಜಸ್ : ಅಲ್ಲಿ ಬರೀ ಜೇನುನೊಣಗಳೇ ಕಾಣುತ್ತಿವೆ.
ಜೇನು : ಅದೇ ನನ್ನ ಕುಟುಂಬ.
ಫಾತಿಮಾ : ಏನು ! ಇಷ್ಟೊಂದು ದೊಡ್ಡದೇ ನಿನ್ನ ಕುಟುಂಬ!
ಜೇನು : ಹೌದು, ಒಂದು ಜೇನು ಕುಟುಂಬದಲ್ಲಿ ಸಾವಿರಾರು ಜೇನು ನೊಣಗಳಿರುತ್ತವೆ ಎಂದು ನಿಮಗೆ ಗೊತ್ತೇ? ಒಂದು ರಾಣಿಜೇನು, ಮತ್ತೆಲ್ಲ ಕೆಲಸಗಾರ ಜೇನುಗಳು. ಗೂಡು ಕಟ್ಟುವುದು, ಆಹಾರ ಸಂಗ್ರಹಿಸುವುದು, ರಾಣಿ ಜೇನನ್ನು ನೋಡಿಕೊಳ್ಳುವುದು ಮುಂತಾದ ಕೆಲಸಗಳನ್ನೆಲ್ಲಾ ಕೆಲಸಗಾರ ಜೇನುಗಳೇ ಮಾಡುತ್ತವೆ. ಮೊಟ್ಟೆ ಇಡುವುದಷ್ಟೇ ರಾಣಿಯ ಕೆಲಸ.
ರಾಧಾ : ಅಬ್ಬಾ !
ತೇಜಸ್ : ನಿಮ್ಮ ಗೂಡು ನೋಡುವುದಕ್ಕೆ ಎಷ್ಟು ಚೆನ್ನಾಗಿದೆ.
ಜೇನು : ನಾವು ಉತ್ಪಾದಿಸುವ ಅಂಟು ದ್ರವವೇ ಮೇಣ. ಅದರಿಂದಲೇ ನಾವು ಗೂಡು ಕಟ್ಟೋದು. ಮರದ ಕೊಂಬೆ, ಪೆÇಟರೆ, ದೊಡ್ಡ ಕಟ್ಟಡಗಳ ತಾರಸಿ ಮುಂತಾದ ಕಡೆ ನಾವು ಗೂಡು ಕಟ್ಟುತ್ತೇವೆ.
ಫಾತಿಮಾ : ನಿನ್ನ ಆಹಾರ ಹೂವಿನ ಮಕರಂದವಲ್ಲವೆ?
ಜೇನು : ಹೌದು, ಹೆಚ್ಚಾಗಿ ಸಂಗ್ರಹಿಸಿದ ಮಕರಂದವನ್ನು ಗೂಡಿನಲ್ಲಿಟ್ಟು ಆಹಾರ ಬೇಕಾದಾಗ ಸವಿಯುತ್ತೇವೆ. ಇದೇ ಜೇನುತುಪ್ಪ.
ತೇಜಸ್ : ನನಗೂ ಜೇನುತುಪ್ಪವೆಂದರೆ ಬಹಳ ಇಷ್ಟ. ಇದಕ್ಕೆ ಔಷಧೀಯ ಗುಣಗಳಿವೆ ಎಂದು ಅಜ್ಜಿ ಹೇಳುತ್ತಿರುತ್ತಾರೆ.
ಜೇನು : ನಿಜ. ನೀವು ತಿನ್ನುವ ಜೇನುತುಪ್ಪವೆಲ್ಲ ಶುದ್ಧವಲ್ಲ ಗೊತ್ತೇ. ಅದರಲ್ಲಿ ಬೆಲ್ಲ ಅಥವಾ ಸಕ್ಕರೆ ನೀರು ಕೂಡಾ ಬೆರೆಸಿ ಮಾರುತ್ತಾರೆ.
ಫಾತಿಮಾ : ಮತ್ತೆ ಶುದ್ಧ ಜೇನುತುಪ್ಪವೆಂದು ಗೊತ್ತಾಗುವುದು ಹೇಗೆ?
ಜೇನು : ಹೀಗೆ ಮಾಡು.
ಮಾಡಿ-ನೋಡು
ಗಾಜಿನ ಲೋಟದಲ್ಲಿ ನೀರು ಹಾಕು. ಆನಂತರ ಅದಕ್ಕೆ ಒಂದೆರಡು ಹನಿಗಳಷ್ಟು ಜೇನುತುಪ್ಪವನ್ನು ಹಾಕು. ಹನಿಗಳು ಲೋಟದ ತಳಭಾಗವನ್ನು ಸೇರುವ ಮೊದಲೇ ನೀರಿನಲ್ಲಿ ಬೆರೆತುಹೋದರೆ ಅದು ಶುದ್ಧವಲ್ಲ. ಹನಿಗಳು ಲೋಟದ ತಳಭಾಗವನ್ನು ಸೇರಿ ನಿಧಾನವಾಗಿ ನೀರಿನೊಂದಿಗೆ ಬೆರೆತರೆ ಅದು ಶುದ್ಧ ಜೇನು.
ಈಗ ಗೊತ್ತಾಯಿತೇ?
ತೇಜಸ್ : ಓಹೋ!
ಜೇನು : ಅಯ್ಯೋ ಸಮಯವಾಯಿತು. ಮಕರಂದವನ್ನು ಸಂಗ್ರಹಿಸಬೇಕು. ನಾನಿನ್ನು ಬರುತ್ತೇನೆ ಮಕ್ಕಳೇ.
ರಾಧಾ : ಸರಿ ಜೇನೇ ಮತ್ತೆ ಸಿಗೋಣ.
ಫಾತಿಮಾ : ನಾನು ಸಣ್ಣ ಜೇನನ್ನು ನೋಡಿದ್ದೇನೆ ಗೊತ್ತಾ. ಅವು ಕಲ್ಲುಸಂದಿಗಳಲ್ಲಿ ಗೂಡು ಕಟ್ಟುತ್ತವೆ.
ಈ ಚಿತ್ರಗಳನ್ನು ಗಮನಿಸು. ಜೇನುನೊಣಗಳ ಗಾತ್ರ ಹಾಗೂ ಗೂಡುಗಳು ಒಂದೇ ರೀತಿಯಾಗಿರುವುದಿಲ್ಲ. ವಿವಿಧ ರೀತಿಯ ಜೇನು ಮತ್ತು ಗೂಡುಗಳನ್ನು ನಿನ್ನ ಸುತ್ತ ಮುತ್ತ ಗಮನಿಸು.
ತೇಜಸ್ : ಜೇನುನೊಣಗಳನ್ನು ಸಾಕಿ ಜೇನುತುಪ್ಪವನ್ನು ಸಂಗ್ರಹಿಸುವುದನ್ನು ನಾನು ನಾಗರಹೊಳೆಯ ಕಾಡಿನ ಬಳಿ ನೋಡಿದ್ದೇನೆ ಗೊತ್ತಾ?
ಫಾತಿಮಾ : ಮರದಿಂದ ಮಾಡಿದ ಜೇನು ಪೆಟ್ಟಿಗೆಗಳನ್ನು ಹೂತೋಟಗಳಲ್ಲಿ ಇಡುತ್ತಾರೆ. ಅದರಲ್ಲಿ ಸಂಗ್ರಹವಾಗುವ ಜೇನುತುಪ್ಪವನ್ನು ಪಡೆಯುತ್ತಾರೆ.
ತೇಜಸ್ : ಹೌದು, ನಾನು ನನ್ನ ಚಿಕ್ಕಪ್ಪನ ತೋಟದಲ್ಲಿ ನೋಡಿದ್ದೇನೆ.
ರಾಧಾ : ನಮ್ಮ ಮನೆಯಲ್ಲಿ ಜೇನುತುಪ್ಪವನ್ನು ತುಂಬಾ ಬಳಸುತ್ತಾರೆ. ನನಗೂ ತುಂಬಾ ಇಷ್ಟ.
ತೇಜಸ್ ಮತ್ತು ಫಾತಿಮಾ : ನಮಗೂ ಇಷ್ಟ.
ರಾಧಾ : ಜೇನುಗೂಡಿನಿಂದ ಇನ್ನೂ ಹಲವು ಉತ್ಪನ್ನಗಳು ಸಿಗುತ್ತವೆ ಎಂದು ತಾತ ಆಗಾಗ ಹೇಳುತ್ತಿರುತ್ತಾರೆ.
ನಿನ್ನ ಮನೆಯಲ್ಲಿ ಜೇನುತುಪ್ಪವನ್ನು ಉಪಯೋಗಿಸುತ್ತೀಯಾ? ಏತಕ್ಕಾಗಿ ಉಪಯೋಗಿಸುವೆ?
ಹಾಡಿ-ನಲಿ
ಜೇನು ಹಿಂಡು ಸಾಗುತಿದೆ
ಹೂವಿನಿಂದ ಹೂವಿಗೆ
ಸಂಗ್ರಹಿಸುತ ಮಕರಂದ
ಮರಳಿ ತಮ್ಮ ಗೂಡಿಗೆ.
ಹೆಜ್ಜೇನು, ಕೋಲ್ಜೇನು
ಜೇನಿನಲ್ಲಿ ಬಗೆಬಗೆ
ಜೇನುಮೇಣ ಜೇನುತುಪ್ಪ
ಜೇನುತ್ಪನ್ನ ವಿಧ ವಿಧ.
ಜೇನು ಉಳಿಸಿ ಜೇನು ಬೆಳೆಸಿ
ಜೇನು ನಮ್ಮ ಬಂಧು
ಆಹಾರವು ಔಷಧವು
ಸಿಗುವುದಮ್ಮ ಎಂದೆಂದೂ.
ಜೇನುಗೂಡಿನ ಉತ್ಪನ್ನಗಳಿಂದ ಯಾವ ಯಾವ ವಸ್ತುಗಳನ್ನು ತಯಾರಿಸುತ್ತಾರೆ? ಚಿತ್ರವನ್ನು ನೋಡಿ ತಿಳಿ.
ಜೇನುತುಪ್ಪ ಮೇಣದ ಬತ್ತಿ
ಬಣ್ಣ ಮುಲಾಮು ಇಂಕ್
ನಿನಗಿದು ಗೊತ್ತೆ?
1) ಒಂದು ಜೇನುನೊಣವು ತನ್ನ ಒಂದು ಸಂಗ್ರಹಣಾ ಸಂಚಾರದಲ್ಲಿ 50 ರಿಂದ 100 ಹೂಗಳಿಗೆ ಭೇಟಿ ಕೊಡುತ್ತದೆ.
2) ಜೇನುತುಪ್ಪ ಒಂದೇ ಮಾನವರು ತಿನ್ನುವ, ಕೀಟಗಳಿಂದ ಉತ್ಪಾದಿತ ಆಹಾರ.
3) ಇರುವೆಗಳು, ಗೆದ್ದಲು ಹುಳುಗಳು ನೆಲವನ್ನು ಬಗೆದು ತೋಡುವುದರಿಂದ ಮಣ್ಣಿನಲ್ಲಿ ಗಾಳಿಯಾಡಿ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ.
4) ಜೇನುಗೂಡು, ಪಕ್ಷಿಗಳ ಗೂಡು, ಇರುವೆ ಗೂಡು, ಗೆದ್ದಲು ಹುಳುಗಳ ಹುತ್ತ, ಜೇಡರ ಬಲೆ ಮುಂತಾದವು ಪ್ರಾಣಿ ಜಗತ್ತಿನಲ್ಲಿ ಕಾಣಬರುವ ಅದ್ಭುತ ನಿರ್ಮಾಣಗಳು.
5) ಬಿಸಿಲಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಬೆನ್ನ ಮೇಲೆ ಎಲೆ ಹೊತ್ತು ತಿರುಗುವ ಇರುವೆಯನ್ನು ಛತ್ರಿ ಇರುವೆ ಎನ್ನುವರು.
Thanks for sharing. I read many of your blog posts, cool, your blog is very good.