ಸಮುದಾಯ – ಪಾಠ-3

ಒಂದು ನಿಶ್ಚಿತ ಪ್ರದೇಶದಲ್ಲಿ ವಾಸಿಸುವ ಜನರ ಸಮೂಹವನ್ನು ಸಮುದಾಯ ಎಂದು ಕರೆಯುತ್ತಾರೆ. ಸಮುದಾಯದಲ್ಲಿನ ಸದಸ್ಯರು ಪರಸ್ಪರ ಅವಲಂಬಿತರಾಗಿರುತ್ತಾರೆ. ಬೇರೆ ಬೇರೆ ಹೆಸರುಗಳಿಂದ ಸಮುದಾಯವನ್ನು ಗುರುತಿಸುತ್ತಾರೆ.
ಉದಾಹರಣೆ : ಗ್ರಾಮ ಸಮುದಾಯ, ನಗರ ಸಮುದಾಯ, ಬುಡಕಟ್ಟು ಸಮುದಾಯ.
ವಿವಿಧ ಸಮುದಾಯಗಳು ಇಲ್ಲಿ ಒಂದು ಊರಿನ ಚಿತ್ರವಿದೆ. ನೋಡು, ಎಷ್ಟೊಂದು ಮನೆಗಳಿವೆಯಲ್ಲವೆ?


ಈ ಊರಿನಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿವೆ. ಈ ಎಲ್ಲಾ ಕುಟುಂಬಗಳ ಗುಂಪನ್ನು ಸಮುದಾಯ ಎಂದು ಕರೆಯುತ್ತಾರೆ.
ರವಿಯ ಕಥೆಯನ್ನು ಓದಿ ಪ್ರಶ್ನೆಗೆ ಉತ್ತರಿಸು. ಆನಂದಪುರದಲ್ಲಿ ರವಿಯ ಮನೆ ಇದೆ. ಇವನ ತಂದೆ ಇಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. ಇದೇ ರೀತಿ ಹಲವರು ಇದೇ ಊರಿನಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದಾರೆ. ಒಬ್ಬರ ಮನೆಯಲ್ಲಿ ಕಾರ್ಯಕ್ರಮ ಇದ್ದರೆ ಎಲ್ಲರೂ ನೆರವಾಗುತ್ತಾರೆ. ರವಿಯ ತಂದೆ ರೈತರಾಗಿದ್ದು, ತಮ್ಮ ಕೆಲಸಕ್ಕೆ ಹಲವರನ್ನು ಅವಲಂಬಿಸಿದ್ದಾರೆ.


ಓದಿ-ತಿಳಿ

* ನಾವು, ನಮ್ಮವರು ಎಂಬ ಭಾವನೆಯೊಂದಿಗೆ ಒಂದು ನಿಶ್ಚಿತ ಭೂಪ್ರದೇಶದಲ್ಲಿ ವಾಸಿಸುವ ಜನಸಮೂಹವನ್ನು ಸಮುದಾಯ ಎನ್ನುವರು. ಸಮುದಾಯದ ಎಲ್ಲಾ ಸದಸ್ಯರು ತಾವು ತಮ್ಮ ಸಮೂಹವನ್ನು ಅವಲಂಬಿಸಿದ್ದೇವೆ ಎಂಬ ಭಾವನೆ ಹೊಂದಿರುತ್ತಾರೆ. ಸಮುದಾಯದ ಗಾತ್ರ ಚಿಕ್ಕದಾಗಿದ್ದರೆ ಈ ಭಾವನೆ ಹೆಚ್ಚಾಗಿರುತ್ತದೆ. ಗಾತ್ರ ದೊಡ್ಡದಾದಂತೆ ಈ ಭಾವನೆ ಕಡಿಮೆಯಾಗುತ್ತದೆ.

* ಪರಿಸರದಲ್ಲಿ ಹೆಚ್ಚಿನ ಪ್ರಾಣಿ ವರ್ಗಗಳು (ಜೀವಿಗಳು) ಗುಂಪುಗಳಲ್ಲಿಯೇ ವಾಸಿಸುತ್ತಿದ್ದು, ಸಮುದಾಯ ಕಂಡುಬರುತ್ತದೆ. ಜೇನು ಹುಳುಗಳು, ಇರುವೆಗಳು ಸಮುದಾಯದಲ್ಲಿ ವಾಸಿಸುವುದರೊಂದಿಗೆ ಕೆಲಸಗಳ ಹಂಚಿಕೆಯನ್ನು ಮಾಡಿಕೊಂಡು ಜೀವಿಸುತ್ತವೆ ಎಂಬುದೇ ಇವುಗಳ ವಿಶೇಷತೆ. ನಿನ್ನ ಸುತ್ತಲಿನ ಪರಿಸರದಲ್ಲಿ ಕಂಡು ಬರುವ ಇತರ ಜೀವಿಗಳ ಸಮುದಾಯವನ್ನು ಗುರ್ತಿಸಿ, ಸ್ನೇಹಿತರೊಂದಿಗೆ ಚರ್ಚಿಸು.

ಗ್ರಾಮೀಣ ಸಮುದಾಯ
ನಗರ ಸಮುದಾಯ
ಬುಡಕಟ್ಟು ಸಮುದಾಯ


ಗ್ರಾಮೀಣ ಸಮುದಾಯ, ನಗರ ಸಮುದಾಯ ಮತ್ತು ಬುಡಕಟ್ಟು ಸಮುದಾಯವೆಂಬ ವಿವಿಧ ಸಮುದಾಯಗಳಿವೆ.
ಇಲ್ಲಿ ಒಂದು ಗ್ರಾಮೀಣ ಸಮುದಾಯದ ಚಿತ್ರವಿದೆ. ಈ ಚಿತ್ರದಲ್ಲಿರುವ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು ಯಾವುವು ಎಂಬುದನ್ನು ಗುರುತಿಸು.

ಸಮುದಾಯದಲ್ಲಿ ಪ್ರತಿ ಕುಟುಂಬಕ್ಕೂ ದಿನನಿತ್ಯದ ಚಟುವಟಿಕೆಗಳಿಗೆ ಅನೇಕ ವಸ್ತು ಸಲಕರಣೆಗಳ ಅವಶ್ಯಕತೆಯಿದೆ. ಗ್ರಾಮ ಸಮುದಾಯಗಳಲ್ಲಿ ಪರಸ್ಪರ ಅವಲಂಬನೆ ಹೆಚ್ಚಾಗಿ ಕಂಡುಬರುತ್ತದೆ. ಪ್ರತಿಯೊಂದು ವೃತ್ತಿಯವರನ್ನು ಎಲ್ಲರೂ ಗೌರವಿಸುತ್ತಾರೆ.
ಭಾರತದಲ್ಲಿ ಶೇಕಡಾ 72 ಭಾಗದಷ್ಟು ಜನರು ಗ್ರಾಮಗಳಲ್ಲಿ ವಾಸಿಸುತ್ತಾರೆ. ಇವರಲ್ಲಿ ಶೇಕಡ 70 ಭಾಗದಷ್ಟು ಮಂದಿಗೆ ಕೃಷಿಯೇ ಜೀವನಾಧಾರ. ಕೃಷಿಯೊಂದಿಗೆ ಹೈನುಗಾರಿಕೆ (ಹಸು, ಎಮ್ಮೆ ಸಾಕಣೆ) ಕೋಳಿ ಸಾಕಣೆ, ಮೀನುಗಾರಿಕೆ, ರೇಷ್ಮೆಹುಳು ಸಾಕಣೆ ಮುಂತಾದ ಉಪ ಕಸುಬುಗಳನ್ನು ಮಾಡುತ್ತಾರೆ. ನೇಕಾರ, ಕಮ್ಮಾರ, ಬಡಗಿ, ಬುಟ್ಟಿ ಹೆಣೆಯುವ ಇತ್ಯಾದಿ ಕಸುಬುಗಳನ್ನು ಗ್ರಾಮಗಳಲ್ಲಿ ಕಾಣಬಹುದು. ಕೃಷಿ ಚಟುವಟಿಕೆಗೆ ಮಳೆಯನ್ನು ಅವಲಂಬಿಸಿದ್ದಾರೆ. ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಉದ್ಯೋಗ ಸಂಬಂಧಿ ಸಮಸ್ಯೆಗಳು ಗ್ರಾಮಗಳಲ್ಲಿವೆ. ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವು ಯಾವುವೆಂದರೆ

 • ಗ್ರಾಮೀಣ ವಿದ್ಯಾವಂತ ಯುವಜನರಿಗೆ ಸ್ವಂತ ಉದ್ಯೋಗಕ್ಕಾಗಿ ರೋಜಗಾರ್ ಯೋಜನೆ ಮತ್ತು ಜವಾಹರ್‍ಗ್ರಾಮ ಸಮೃದ್ಧಿ ಯೋಜನೆ.
 • ಗುಣಾತ್ಮಕ ಶಿಕ್ಷಣವನ್ನು ನೀಡಲು ಸರ್ವ ಶಿಕ್ಷಣ ಅಭಿಯಾನ.
 • ಗ್ರಾಮ ನೈರ್ಮಲ್ಯದ ಗುರಿಗಾಗಿ ನಿರ್ಮಲ ಗ್ರಾಮ ಯೋಜನೆ.
 • ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮೀ ಯೋಜನೆ.
 • ಬಡವರಿಗೆ ಉಚಿತ ನಿವೇಶನ ಮತ್ತು ಮನೆಗಳನ್ನು ಕಟ್ಟಲು ಸಾಲ ಹಾಗೂ ಅನುದಾನ ನೀಡಲು ಆಶ್ರಯ ಯೋಜನೆ.

ನಗರ ಸಮುದಾಯ

ಮಹಾನಗರದ ಚಿತ್ರ


ಇಂತಹ ಮಹಾನಗರಗಳಿಗೆ ಜನರು ಶಿಕ್ಷಣ, ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಬರುತ್ತಾರೆ. ವಿಧ ವಿಧದ ವೃತ್ತಿಗಳನ್ನು ಮಾಡುವ ಜನರು ನಗರಗಳಲ್ಲಿ ಕಂಡುಬರುತ್ತಾರೆ.
ಈ ಕೆಳಗಿನ ಚಿತ್ರಗಳನ್ನು ನೋಡಿ, ಇವರು ಯಾವ ಕೆಲಸ ಮಾಡುತ್ತಿದಾರೆ ಎಂಬುದನ್ನು ಬರೆ. ಇದೇ ವೃತ್ತಿಯನ್ನು ಮಾಡುವವರು ನಿನ್ನ ಊರಿನಲ್ಲಿದ್ದರೆ. ಆ ಚಿತ್ರಕ್ಕೆ ಗುರುತು ಹಾಕು.


ಭಾರತದಲ್ಲಿ ಸುಮಾರು ಐದು ಸಾವಿರ ನಗರಗಳಿವೆ. ಅವುಗಳಲ್ಲಿ ಸುಮಾರು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇಪ್ಪತ್ತೇಳು ಮಹಾನಗರಗಳಿವೆ. ಇವುಗಳಲ್ಲಿ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಒಂದು.
ನಗರದ ಚಿತ್ರಣವನ್ನು ನೀಡುವ ಹಲವಾರು ಚಿತ್ರಗಳು ಇಲ್ಲಿವೆ. ಈ ಚಿತ್ರಗಳನ್ನು ಅವಲೋಕಿಸಿ ಪ್ರಶ್ನೆಗಳಿಗೆ ಉತ್ತರಿಸು.


ಶಿಕ್ಷಕರ ಸಹಾಯದಿಂದ ಈ ಕೆಳಗಿನವುಗಳನ್ನು ಗೆಳೆಯರೊಂದಿಗೆ ಚರ್ಚಿಸು. ನಂತರ ತರಗತಿಯಲ್ಲಿ ಎಲ್ಲರ ಮುಂದೆ ಹೇಳು.

 • ನಗರದಲ್ಲಿನ ವಸತಿ ಸಮಸ್ಯೆ
 • ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್)
 • ಕೈಗಾರಿಕಾ ಪ್ರದೇಶಗಳಲ್ಲಿನ ಮಾಲಿನ್ಯ
 • ಕಸದ ವಿಲೇವಾರಿ
 • ಕೊಳಚೆ ಪ್ರದೇಶಗಳು
 • ಜಲ ಮಾಲಿನ್ಯ

ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅವು ಯಾವುವೆಂದರೆ,

ಒಳಚರಂಡಿ ವ್ಯವಸ್ಥೆ
ಶುದ್ಧ ಕುಡಿಯುವ ನೀರಿನ ಪೂರೈಕೆ
ಸುಸಜ್ಜಿತ ಬಸ್ಸು ನಿಲ್ದಾಣಗಳ ವ್ಯವಸ್ಥೆ
ಸುಸಜ್ಜಿತ ರೈಲು ನಿಲ್ದಾಣಗಳ ವ್ಯವಸ್ಥೆ
ನಗರದ ಹೊರವಲಯಗಳಲ್ಲಿ ವರ್ತುಲ ರಸ್ತೆಗಳ ವ್ಯವಸ್ಥೆ
ಉದ್ಯಾನವನಗಳ ನಿರ್ಮಾಣ

ಸರ್ಕಾರದ ಕಾರ್ಯಕ್ರಮದ ಜೊತೆಗೆ ನಗರದಲ್ಲಿರುವ ಪ್ರತಿಯೊಬ್ಬರೂ ನಗರದ ಸ್ವಚ್ಛತೆಯನ್ನು ಕಾಪಾಡಬೇಕು. ಸಹಕಾರ, ಸ್ನೇಹ, ಪ್ರೀತಿ, ವಿಶ್ವಾಸದಿಂದ ಎಲ್ಲರೂ ಬಾಳಬೇಕು.

ಬುಡಕಟ್ಟು ಸಮುದಾಯ

ದಟ್ಟ ಅರಣ್ಯಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಗುಂಪನ್ನು ಬುಡಕಟ್ಟು ಸಮುದಾಯ ಎಂದು ಕರೆಯುತ್ತೇವೆ. ಇವರ ವಸತಿ, ಭಾಷೆ, ಉಡುಗೆ, ತೊಡುಗೆ, ವಿವಾಹ ಪದ್ಧತಿ ಇತ್ಯಾದಿ ವಿಶಿಷ್ಟವಾಗಿರುತ್ತವೆ. ಕರ್ನಾಟಕದಲ್ಲಿ ಮೈಸೂರು ಜಿಲ್ಲೆಯ ಸೋಲಿಗರು, ದಕ್ಷಿಣ ಕನ್ನಡ ಜಿಲ್ಲೆಯ ಕೊರಗರು, ಕೊಡಗು ಜಿಲ್ಲೆಯ ಜೇನು ಕುರುಬರು ಮತ್ತು ಯೆರವರು ಮುಂತಾದ ಬುಡಕಟ್ಟು ಸಮುದಾಯಗಳಿವೆ.

ಈ ಸಮುದಾಯದವರು ಕಾಡು, ಗುಡ್ಡಗಾಡುಗಳಲ್ಲಿ ವಾಸಿಸುವುದರಿಂದ ಆರೋಗ್ಯ, ವಸತಿ, ಶಿಕ್ಷಣ, ಸಾರಿಗೆ, ಆಹಾರ, ವಿದ್ಯುತ್ ಮುಂತಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಈ ಸಮುದಾಯಗಳಿಗೆ ಶಿಕ್ಷಣ, ಆಹಾರ ವಿತರಣೆ, ಮನೆ, ಆರೋಗ್ಯ ಮುಂತಾದ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನದಲ್ಲಿದೆ.
ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಮತ್ತು ಪರಸ್ಪರ ನೆರವಾಗಲು ನಿರ್ದಿಷ್ಟ ಪ್ರದೇಶದಲ್ಲಿ ಒಂದಾಗಿ ಬದುಕುವ ಜನರ ಗುಂಪೇ ಸಮುದಾಯ ಎಂದು ನೀನು ತಿಳಿದೆ. ಗ್ರಾಮ, ನಗರ ಮತ್ತು ಬುಡಕಟ್ಟು ಸಮುದಾಯದೊಂದಿಗೆ ನಾವು ಬೇರೆ ರೂಪದ ಸಮುದಾಯಗಳನ್ನೂ ಕೂಡ ಕಾಣಬಹುದು.

ನೀನು ಈಗಾಗಲೇ ಹಲವಾರು ವೃತ್ತಿ / ಕೆಲಸಗಳ ಬಗ್ಗೆ ತಿಳಿದಿರುವೆ. ನೀನು ಮಾಡುವ ಊಟಕ್ಕೆ ಎಷ್ಟೆಲ್ಲಾ ಜನರ ನೆರವು ಅವಶ್ಯಕವಿದೆ ಎಂಬುದು ನಿನಗೆ ತಿಳಿದಿದೆಯೆ? ಇಲ್ಲಿಟ್ಟಿರುವ ಚಾರ್ಟ್ ಗಮನಿಸು. ಇದರಿಂದ ನೀನೇನು ಕಲಿತೆ ಎಂಬುದನ್ನು ಬರೆ.

ಅಬ್ಬಾ! ಆಹಾರ ಪದಾರ್ಥ ನಮಗೆ ಸಿಗಲು ಇಷ್ಟು ಜನರು ಕೆಲಸ ಮಾಡಿದ್ದಾರೆ ಎನ್ನುವುದಾದರೆ, ಇನ್ನು ಬಟ್ಟೆ ತಯಾರಿಕೆ, ಮನೆ ನಿರ್ಮಾಣ ಇತ್ಯಾದಿ ವಸ್ತುಗಳ ತಯಾರಿಕೆಯ ಹಿಂದೆ ಇನ್ನೆಷ್ಟು ಜನರ ಶ್ರಮ ಇದೆ ಎಂಬುದನ್ನು ಆಲೋಚಿಸು. ಇವರಲ್ಲಿ ಒಬ್ಬರು ಇಲ್ಲದಿದ್ದರೂ ಕೆಲಸ ಪೂರ್ಣಗೊಳ್ಳುವುದಿಲ್ಲ. ವಸ್ತುವನ್ನು ದುಡ್ಡುಕೊಟ್ಟು ಅಂಗಡಿಯಿಂದ ತರುತ್ತೇವೆ. ಸುಲಭವಾಗಿ ಸಿಗುತ್ತದೆ ಎಂದು ನಾವು ಭಾವಿಸುವುದಕ್ಕಿಂತ ನಾವು ಬಳಸುವ ವಸ್ತುವಿನ ಹಿಂದೆ ನೂರಾರು ಜನರ ಶ್ರಮವಿದೆ ಎಂಬುದನ್ನು ಮರೆಯಬಾರದು. ಆದ್ದರಿಂದ ಸಮುದಾಯದಲ್ಲಿನ ಪ್ರತಿಯೊಂದು ವೃತ್ತಿ/ ಕೆಲಸವನ್ನು ನಾವು ಗೌರವದಿಂದ ಕಾಣಬೇಕು. ಪ್ರತಿಯೊಬ್ಬರನ್ನೂ ಗೌರವಿಸಬೇಕು.

ಈ ಚಿತ್ರಗಳನ್ನು ನೋಡು. ಇವರು ಯಾರು? ಇವರಿಂದ ನಮಗಾಗುವ ಉಪಯೋಗಗಳೇನು? ಕೊಟ್ಟಿರುವ ಜಾಗದಲ್ಲಿ ಬರೆ.

ಸಮುದಾಯದಲ್ಲಿ ವಸ್ತುಗಳನ್ನು ತಯಾರಿಸಿ ಸರಬರಾಜು ಮಾಡುವವರು, ಪರಿಸರವನ್ನು ಸ್ವಚ್ಛವಾಗಿರಿಸುವವರು, ಮೂಲಭೂತ ಸೌಕರ್ಯ ಪೂರೈಸುವವರೊಂದಿಗೆ ಮನೋರಂಜನೆ, ಸಂತೋಷ, ಮಾಹಿತಿ, ಮಾನಸಿಕ ನೆಮ್ಮದಿ ನೀಡುವವರೂ ಅಗತ್ಯ. ಪ್ರತಿಯೊಂದು ವೃತ್ತಿಯೂ ಮುಖ್ಯ. ಒಂದು ಸಮುದಾಯದ ಅಭಿವೃದ್ಧಿಯಲ್ಲಿ ಎಲ್ಲರ ಪಾತ್ರವೂ ಇದೆ. ಅವರ ವೃತ್ತಿಗೂ ಬೆಲೆ ಇದೆ ಎಂದು ತಿಳಿದು ಪ್ರತಿಯೊಬ್ಬರನ್ನೂ ಗೌರವಿಸು.

ಸಮುದಾಯದಲ್ಲಿ ಯಾರಿಗಾದರೂ ತೊಂದರೆಯಾದಾಗ ಸಮುದಾಯದ ಜನ ನೆರವಾಗುತ್ತಾರೆ. ಇದೇ ರೀತಿ ಪ್ರವಾಹ, ಬರಗಾಲ, ಭೂಕಂಪ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಹಾನಿಯುಂಟಾದಾಗ ವಿವಿಧ ಸಮುದಾಯಗಳು ನೆರವಾಗುತ್ತವೆ.
ಪ್ರತಿಯೊಬ್ಬ ವ್ಯಕ್ತಿಯು ಸಮುದಾಯದ ಒಂದು ಭಾಗ. ಗುಂಪಿನಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯಿಂದಾಗಿ ಸಮುದಾಯ ರಚನೆಯಾಗಿದೆ. ಸಮುದಾಯದ ಸಹಕಾರವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ.
ಆದ್ದರಿಂದ ನಾವು ಸಂದರ್ಭ ಬಂದಾಗ ಸಮುದಾಯದ ಇತರರಿಗೆ ನೆರವಾಗಬೇಕು.

ವಿಡಿಯೋ ಪಾಠಗಳು

Samudaya – 5th – EVS – Samudaaya (Part 1 of 2) | ಭಾಗ – 1
Samudaya – 5th – EVS – Samudaaya (Part 1 of 2) | ಭಾಗ – 2

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.