ಸಮುದಾಯ – ಕ್ರೀಡೆಗಳು – ಪಾಠ – 4

ಕ್ರೀಡೆಗಳು ಸಮುದಾಯದಿಂದಲೇ ಹುಟ್ಟಿಕೊಂಡಿವೆ. ತಮ್ಮ ಬಿಡುವಿನ ಸಮಯವನ್ನು ಕಳೆಯಲು ಜನರು ಕಂಡುಕೊಂಡ ಒಂದು ಮಾರ್ಗ – ಕ್ರೀಡೆ. ಕ್ರೀಡೆಗಳು ಸಮುದಾಯದಲ್ಲಿನ ವ್ಯಕ್ತಿಗಳ ಸಂಬಂಧವನ್ನು ಹೆಚ್ಚಿಸುತ್ತವೆ. ಸಮುದಾಯದಲ್ಲಿನ ಹಿರಿಯರು ಮತ್ತು ಕಿರಿಯರು ಒಟ್ಟಿಗೆ ಕೂಡಿ ಆಡುವ ಅವಕಾಶವನ್ನು ಕಲ್ಪಿಸುತ್ತವೆ. ಜನರು ಮನೋರಂಜನೆಗಾಗಿ ಮತ್ತು ದೈಹಿಕ ವ್ಯಾಯಾಮಕ್ಕಾಗಿ ಕಂಡುಕೊಂಡ ಚಟುವಟಿಕೆಗಳೇ ಕ್ರೀಡೆಗಳು. ಇವು ಸಮುದಾಯದ ಸಾಮರಸ್ಯವನ್ನು ಹೆಚ್ಚಿಸಿ ಎಲ್ಲರೂ ಒಟ್ಟಾಗಿ ಕೂಡಿ ಆಡಿ, ನಲಿಯುವ ಚಟುವಟಿಕೆಗಳಾಗಿವೆ.

ಆಟಗಳಿಂದಾಗುವ ಪ್ರಯೋಜನಗಳು :-

ಸಂತೋಷಮನೋರಂಜನೆದೈಹಿಕ ಕಸರತ್ತು
ಬುದ್ಧಿಶಕ್ತಿ ಬೆಳವಣಿಗೆಸ್ಪರ್ಧಾ ಮನೋಭಾವಸ್ನೇಹ
ಸಹಕಾರಸೋಲು ಗೆಲುವು ಸಮನಾಗಿ ಸ್ವೀಕರಿಸುವ ಮನೋಭಾವಜ್ಞಾನ

ಈ ಚಿತ್ರಗಳನ್ನು ಗಮನಿಸು. ಇವರು ಪ್ರತಿದಿನವೂ ತಪ್ಪದೆ ಇವುಗಳನ್ನು ಮಾಡುತ್ತಾರೆ.

ಆಟ, ಯೋಗ, ದೈಹಿಕ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಇವುಗಳನ್ನು ಅಭ್ಯಾಸ ಮಾಡುವುದರಿಂದ ನರ ಮತ್ತು ಸ್ನಾಯುಗಳ ಹೊಂದಾಣಿಕೆ ಉಂಟಾಗಿ ದೇಹ ಬಲಗೊಳ್ಳುತ್ತದೆ. ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದು. ಒಳ್ಳೆಯ ದೈಹಿಕ ಆಕಾರವನ್ನು ಪಡೆಯುವುದರಿಂದ ದೇಹ ಸುಂದರವಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಬಿಡುವಿನ ವೇಳೆಯ ಸದುಪಯೋಗವಾಗುತ್ತದೆ. ಮನೋರಂಜನೆ ಮತ್ತು ಉಲ್ಲಾಸ ಉಂಟಾಗಿ ಸದಾ ಲವಲವಿಕೆಯಿಂದ ಕೂಡಿ ಹೆಚ್ಚು ಚುರುಕಾಗಿರಬಹುದು.

ಆಲೋಚಿಸು :-

  • ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದ ಮನುಷ್ಯನಲ್ಲಿ ಯಾವ ತೊಂದರೆಗಳು ಉಂಟಾಗಬಹುದು ?
  • ದಡೂತಿ ದೇಹದ ವ್ಯಕ್ತಿಯು ತನ್ನ ತೂಕ ಇಳಿಸಲು ಯಾವ ಕ್ರಮಗಳನ್ನು ಅನುಸರಿಸುವುದು ಸೂಕ್ತ ಎಂದು ಭಾವಿಸುವೆ ?

ಕ್ರೀಡೆಗಳಿಂದ ನಮಗೆ ಮಾತ್ರ ಪ್ರಯೋಜನವಾಗುವುದೆ?
ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಿಂದ ದೇಶ ವಿದೇಶಗಳ ನಡುವೆ ಸ್ನೇಹ, ಸೌಹಾರ್ದತೆ ಹೆಚ್ಚಿ, ಪರಸ್ಪರ ಬಾಂಧವ್ಯ ಬೆಳೆದು, ಸಂಬಂಧಗಳು ಉತ್ತಮಗೊಳ್ಳುತ್ತವೆ.

ಕೆಲವು ಅಂತಾರಾಷ್ಟ್ರೀಯ ಕ್ರೀಡೆಗಳ ಹೆಸರು ಬರೆ

ಈ ಚಿತ್ರಗಳನ್ನು ನೋಡು. ಕೊಟ್ಟಿರುವ ಹೆಸರು ಪಟ್ಟಿಯ ನೆರವಿನಿಂದ ಅವುಗಳ ಹೆಸರು ಬರೆ. (ಶಿಕ್ಷಕರ ಸಹಾಯ ಪಡೆ)

ಪರ್ವತಾರೋಹಣ
ಆಕಾಶನೆಗೆತ
ತೆಪ್ಪದಾಟ
ಪರ್ವತ ಕಾಲು ಬಂಡಿ
ಪರ್ವತ ಚಾರಣ

ಈ ಚಿತ್ರಗಳನ್ನು ನೋಡಿದಾಗ ಅಬ್ಬಾ! ಎಂದು ಎನಿಸುತ್ತದೆ ಅಲ್ಲವೆ? ಇವೂ ಕೂಡ ಕ್ರೀಡೆಗಳೇ. ಇವುಗಳನ್ನು ಸಾಹಸ ಕ್ರೀಡೆಗಳು ಎನ್ನುತ್ತಾರೆ.

ಓದಿ-ತಿಳಿ :

ರೋಮಾಂಚನ ಮತ್ತು ವಿಶೇಷ ಅನುಭವ ನೀಡುವ ದೈಹಿಕ ಸಾಮಥ್ರ್ಯವನ್ನು ಆಧರಿಸಿದ ಕ್ರೀಡೆಗಳಲ್ಲಿ ಸಾಹಸ ಕ್ರೀಡೆಗಳೂ ಸೇರುತ್ತವೆ. ಈ ಕ್ರೀಡೆಗಳು ಸಾಮಾನ್ಯವಲ್ಲದ ಸನ್ನಿವೇಶಗಳಲ್ಲಿ ಗುರಿ ಮುಟ್ಟುವ ಸವಾಲನ್ನು ಒಡ್ಡುತ್ತವೆ. ಈ ಕ್ರೀಡೆಗಳು ಹೆಚ್ಚಿನ ತಯಾರಿ, ವೇಗ, ಕುಶಲತೆ, ತರಬೇತಿ ಮತ್ತು ದೈಹಿಕ ಕಸರತ್ತನ್ನು ಹೊಂದಿದ್ದು, ಕ್ರೀಡಾ ಪಟುವಿಗೆ ಹೊಸ ಹೊಸ ಸವಾಲನ್ನು ಒಡ್ಡುತ್ತವೆ. ಇಂತಹ ಕ್ರೀಡೆಗಳಿಂದ ಮನಸ್ಸಿಗೆ ಉಲ್ಲಾಸ, ಅಪಾಯ ಎದುರಿಸುವ ಛಲ, ಮಾನಸಿಕ ಸ್ಥೈರ್ಯ, ದೈಹಿಕ ಕಸರತ್ತು ಮತ್ತು ಮನೋರಂಜನೆ ದೊರೆಯುತ್ತವೆ. ಆದರೆ ಇವು ಅಪಾಯಕಾರಿ ಕ್ರೀಡೆಗಳೂ ಹೌದು. ಆದ್ದರಿಂದ ಈ ಕೆಳಕಂಡ ಎಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ.

  • ಸರಿಯಾದ ತರಬೇತಿ ಮತ್ತು ಮಾರ್ಗದರ್ಶನವಿಲ್ಲದೆ ಈ ಕ್ರೀಡೆಗಳಲ್ಲಿ ಭಾಗವಹಿಸಬಾರದು.
  • ಈ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮುನ್ನ ಅವುಗಳಿಗೆ ಬೇಕಾದ ವಿಶಿಷ್ಟ ಸಾಧನಗಳನ್ನು ಮತ್ತು ನಿರ್ದಿಷ್ಟ ಕುಶಲತೆಯನ್ನು ಕಡ್ಡಾಯವಾಗಿ ಪಡೆದಿರಬೇಕು.
  • ಬಹಳ ತಾಳ್ಮೆ ಹಾಗೂ ಜವಾಬ್ದಾರಿಯಿಂದ ವರ್ತಿಸಬೇಕು. ಸಂದರ್ಭವನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸಬೇಕು.
  • ಸಾಹಸ ಕ್ರೀಡೆಗಳ ಸಂದರ್ಭದಲ್ಲಿ ಬರುವ ಅಪಾಯ, ಹಾನಿ ಮತ್ತು ಆಪತ್ತುಗಳನ್ನು ಭಾಗವಹಿಸುವ ಕ್ರೀಡಾಳು ಕೂಲಂಕುಷವಾಗಿ ಅಭ್ಯಾಸ ಮಾಡಿ, ಅವುಗಳನ್ನು ಎದುರಿಸಲು ಅನುಭವವನ್ನು ಪಡೆದು, ಬೇಕಾದ ತಯಾರಿ ಮತ್ತು ತರಬೇತಿಯನ್ನು ಪಡೆದಿರಬೇಕು.
  • ತಂಡದ ಸಹಯೋಗದೊಂದಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು.

ಇಲ್ಲಿ ಕೆಲವು ಗ್ರಾಮೀಣ ಸಾಹಸ ಕ್ರೀಡೆಗಳ ಚಿತ್ರಗಳನ್ನು ನೀಡಿದೆ. ಇವುಗಳ ಹೆಸರನ್ನು ಹಿರಿಯರ ಸಹಾಯದಿಂದ ಬರೆ.

ನಿನಗಿದು ಗೊತ್ತೆ?

* ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಏರಿದವರು ಎಡ್ಮಂಡ್ ಹಿಲರಿ ಮತ್ತು ತೇನ್‍ಸಿಂಗ್ ನೋರ್ಗೆ.

* ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿಪಾಲ್.

* ಗ್ರಾಮೀಣ ಸಾಹಸ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳು. ಆದರೆ ಆಧುನಿಕತೆ, ಟಿ.ವಿ., ಅಂತರ್‍ಜಾಲದ ಪ್ರಭಾವದಿಂದಾಗಿ ಇತ್ತೀಚೆಗೆ ಇವು ಮರೆಯಾಗುತ್ತಿವೆ.

* ಕುಸ್ತಿ ಕ್ರೀಡೆಯು ಮೈಸೂರು ಮಹಾರಾಜರ ಕಾಲದಿಂದಲೂ ಬಂದಿದ್ದು, ಇಂದಿಗೂ ದಸರಾ ಕ್ರೀಡೆಯ ಒಂದು ಭಾಗವಾಗಿ ಉಳಿದುಕೊಂಡಿದೆ.

* ಸೈಕಲ್ ತುಳಿಯುವುದು, ಈಜುವುದು, ಬಿರುಸಾಗಿ ನಡೆಯುವುದು, ಯೋಗಾಭ್ಯಾಸ ಮಾಡುವುದು ಉತ್ತಮ ಅಭ್ಯಾಸ. ಇದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.

ಸಂವೇದ ವಿಡಿಯೋ ಪಾಠಗಳು

Samveda – 5th – EVS – Kridegalu

ಪೂರಕ ವಿಡಿಯೋಗಳು

ಸಮುದಾಯ ಕ್ರೀಡೆಗಳು| ಪರಿಸರ ಅಧ್ಯಯನ | 5ನೇ ತರಗತಿ ಪಾಠ 4|Samudaya Kreedegalu/Samudaya kridegalu| 5th Std EVS

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Top 10 | Outdoor Indian Games | Childhood Awesome Games | Outdoor Games

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.