ಮಕ್ಕಳಿಗೆ ಸಮಾಜ ವಿಜ್ಞಾನದಲ್ಲಿ ಬರುವ ನಮ್ಮ ಕರ್ನಾಟಕವನ್ನು ಆಳಿದ ವಿವಿಧ ರಾಜಮನೆತನದವರ ಸ್ಮಾರಕಗಳು ಹಾಗೂ ಆ ಸ್ಥಳಗಳಿಗೆ ಭೇಟಿ ನೀಡಿ ಅವರು ನೀಡಿದ ಕೊಡುಗೆಗಳನ್ನು ತಿಳಿಯುವ ಉದ್ದೇಶದಿಂದ  ಈ ವರ್ಷದ ಶೈಕ್ಷಣಿಕ ಪ್ರವಾಸವನ್ನು ಐತಿಹಾಸಿಕ ಸ್ಥಳಗಳಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಕೆ.ಅರ್.ಎಸ್. ಜಲಾಶಯ ಹಾಗೂ ಬೃಂದಾವನ ಉದ್ಯಾನವನ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಮೈಸೂರು ಅರಮನೆ, ಪ್ರಾಚ್ಯ ವಸ್ತು ಸಂಶೋಧನಾಲಯ ಹಾಗೂ ಸೇಂಟ್ ಫಿಲೋಮಿನಾ ಚರ್ಚ್ ಇಲ್ಲಿಗೆ ಎರಡು ದಿನಗಳ ಪ್ರವಾಸವನ್ನು ಏರ್ಪಡಿಸಲಾಯಿತು.

ದಿನಾಂಕ 30-11-2023ರ ರಾತ್ರಿ 11-15ಕ್ಕೆ ಹುಲ್ಕುತ್ರಿಯಿಂದ ಪ್ರಾರಂಭವಾದ ನಮ್ಮ ಪ್ರವಾಸವು ಸಾಗರ-ಶಿವಮೊಗ್ಗ ಮಾರ್ಗವಾಗಿ ಬೆಳಿಗ್ಗೆ 5-30ಕ್ಕೆ ಬೇಲೂರು ತಲುಪಿದೆವು. ಬೇಲೂರಿನ ಚೆನ್ನಕೇಶವ ದೇವಾಲಯದ ಪಕ್ಕದಲ್ಲಿರುವ ಬೇಲೂರು ಭವನ ಲಾಡ್ಜ್ ನಲ್ಲಿ ಶೌಚ-ಸ್ನಾನಾದಿ ಕ್ರಿಯೆಗಳನ್ನು ಪೂರೈಸಿ, ಶ್ರೀ ಚೆನ್ನಕೇಶವ ದೇವರ ದರ್ಶನಕ್ಕೆ ತೆರಳಿದೆವು. ದೇವಾಲಯದ ಭವ್ಯತೆ, ಹೊಯ್ಸಳರ ಲಾಂಛನ, ಸೂಕ್ಷ್ಮ ಕೆತ್ತನೆಗಳು, ಶಿಲಾಬಾಲಿಕೆಯ ವಿಗ್ರಹ, ನಕ್ಷತ್ರಾಕಾರದ ಜಗತಿ ಇತ್ಯಾದಿಗಳನ್ನು ವೀಕ್ಷಿಸಿದೆವು. ಅಲ್ಲಿಂದ ದಾರಿ ಮಧ್ಯದಲ್ಲಿ ಉಪಹಾರವನ್ನು ಸೇವಿಸಿ ಹಳೇಬೀಡಿನತ್ತ ಪ್ರಯಾಣ ಬೆಳೆಸಿದೆವು.

ಹಳೇಬೀಡಿನ ದೇವಾಯಲ, ನಂದಿ ವಿಗ್ರಹ, ಸೂಕ್ಷ್ಮ ಕೆತ್ತನೆ ಹಾಗೂ ಪಕ್ಕದಲ್ಲಿರುವ ಧೋರ ಸಮುದ್ರವನ್ನು ವೀಕ್ಷಿಸಿದೆವು. ನಂತರ ಶ್ರವಣಬೆಳಗೊಳದತ್ತ ಪ್ರಯಾಣ ಬೆಳೆಸಿದೆವು. ಮಧ್ಯಾಹ್ನ 12-30ರ ಸುಮಾರಿಗೆ ವಿಂದ್ಯಗಿರಿ ಬೆಟ್ಟವನ್ನು ಏರಿದೆವು. ಚಾವುಂಡರಾಯ ನಿರ್ಮಿಸಿದ ಬಾಹುಬಲಿಯ ಏಕಶಿಲಾ ವಿಗ್ರಹದ ದರ್ಶನ ಪಡೆದೆವು. ವಿಂದ್ಯಗಿರಿ ಬೆಟ್ಟದಿಂದಲೇ ಚಂದ್ರಗಿರಿ ಬೆಟ್ಟ ಹಾಗೂ ಚಾವುಂಡರಾಯ ಬಸದಿಯನ್ನು ವೀಕ್ಷಿಸಿದೆವು. ತದನಂತರ ಶ್ರವಣಬೆಳಗೊಳದಲ್ಲೇ ಭೋಜನ ಮುಗಿಸಿ ಕೆ.ಆರ್.ಎಸ್. ಬೃಂದಾವನದ ಕಡೆ ಹೊರಟೆವು. ಸಂಜೆ 5-15ರ ಸುಮಾರಿಗೆ ಬೃಂದಾವನ ತಲುಪಿ ಅಲ್ಲಿ ಉದ್ಯಾನವನ ಹಾಗೂ ಜಲಾಶಯವನ್ನು ವೀಕ್ಷಿಸಿದೆವು. ನಂತರ ಮೊದಲೇ ಮುಂಗಡವಾಗಿ ಕಾಯ್ದಿರಿಸಿದ ಮೈಸೂರಿನ ಯುಥ್ ಹಾಸ್ಟೇಲ್ ಗೆ ತಂಗಲು ತೆರಳಿದೆವು.

ಮೈಸೂರಿನ ಯುಥ್ ಹಾಸ್ಟೇಲ್ ನಲ್ಲಿ ವ್ಯವಸ್ಥೆಯು ಉತ್ತಮವಾಗಿತ್ತು. ಮಗಲು ಪ್ರತಿಯೊಬ್ಬರಿಗೂ ಮಂಚ ಹಾಗೂ ಶುದ್ದೀಕರಿಸಿದ ನೀರಿನೊಂದಿಗೆ ಬೆಳಿಗ್ಗೆ ಸ್ನಾನಕ್ಕೆ ಬಿಸಿ ನೀರು ನೀಡಿದ್ದರು. ಬೆಳಿಗ್ಗೆ (02-12-2023) ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ತೆರಳಿದೆವು. ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆದು, ದೇವಸ್ಥಾನದ ಉಪಹಾರ ಸೇವಿಸಿ ಅಲ್ಲಿಂದ ಮೃಗಾಲಯ ವೀಕ್ಷಣೆಗಾಗಿ ತೆರಳಿದೆವು.

ಮೈಸೂರಿನ ಮೃಗಾಲಯದಲ್ಲಿ ಬೇರೆ ಬೇರೆ ದೇಶಗಳ ವಿವಿಧ ಜಾತಿಯ ಪಕ್ಷಿಗಳಾದ ಬಾರ್ಹೆಡೆಡ್ಗೂಸ್, ಕಪ್ಪುಹಂಸ, ನೀಲಿಚಿನ್ನದಮಕಾವ್, ಬ್ರೌನ್ವುಡ್ಗೂಬೆ, ಬಾಚಣಿಗೆಬಾತುಕೋಳಿ, ಸಾಮಾನ್ಯಆಸ್ಟ್ರಿಚ್, ಡಾರ್ವಿನ್ಸ್ರಿಯಾ, ಎಕ್ಲೆಕ್ಟಸ್ಗಿಳಿ, ಗೋಫಿನ್ಸ್ಕಾಕಟೂ, ಗೋಲ್ಡನ್ಫೆಸೆಂಟ್, ಗ್ರೇಟ್ಇಂಡಿಯನ್ಹಾರ್ನ್ಬಿಲ್, ಗ್ರೇಟ್ವೈಟ್ಪೆಲಿಕನ್, ಮಿಲಿಟರಿಮಕಾವ್, ಮಾಂಸಹಾರಿ ಪ್ರಾಣಿಗಳಾದ ಆಫ್ರಿಕನ್ಹಂಟಿಂಗ್ಚೀತಾ, ಬೆಂಗಾಲ್ಫಾಕ್ಸ್, ಧೋಲೆ, ಭಾರತೀಯಬೂದುತೋಳ, ನರಿ, ಜಾಗ್ವಾರ್, ಚಿರತೆ, ಚಿರತೆಬೆಕ್ಕು, ತೋಳ,  ಚಿರತೆ, ಹುಲಿ, ಹೀಗೆ ಹಲವಾರು ಪ್ರಾಣಿಗಳು, ಸರಿಸೃಪಗಳಲ್ಲಿ ಭಾರತೀಯನಾಗರಹಾವು, ಕಿಂಗ್ಕೋಬ್ರಾ, ರೆಟಿಕ್ಯುಲೇಟೆಡ್ಹೆಬ್ಬಾವು, ಮಾನಿಟರ್ಹಲ್ಲಿ, ಮಲಬಾರ್ಪಿಟ್ವಿಪರ್, ಸಸ್ತನಿಗಳಲ್ಲಿ ಚಿಂಪಾಂಜಿ, ಗೊರಿಲ್ಲಾ, ಹಮಾದ್ರಿಯಾಸ್ಬಬೂನ್, ಹನುಮಾನ್ಲಾಂಗೂರ್, ಒರಾಂಗುಟನ್, ಸಸ್ಯಹಾರಿಗಳಲ್ಲಿ ಆಫ್ರಿಕನ್ಆನೆ, ಏಷ್ಯಾಟಿಕ್ಆನೆ, ಕೇಪ್ಬಫಲೋ, ಜಿರಾಫೆ, ಹಿಪಪಾಟಮಸ್ ಹೀಗೆ ಮೊದಲಾದವುಗಳನ್ನು ವೀಕ್ಷಿಸಲಾಯಿತು.

ನಂತರ ಊಟ ಮುಗಿಸಿ ಅರಮನೆಗೆ ಭೇಟಿ ನೀಡಿದೆವು. ಅರಮನೆಯ ಛಾವಣಿಯ ಕಲಾಕೃತಿ, ಪ್ರೇಕ್ಷಕರ ಸಭಾಂಗಣ, ಕಮಾನುಗಳು, ಅರಮನೆಯ ಉದ್ಯಾನ ವೀಕ್ಷಿಸಿದೆವು.

ಅರಮನೆಯಿಂದ ನೇರವಾಗಿ ಕೌಟಿಲ್ಯ ಸರ್ಕಲ್ ಬಳಿ ಇರುವ ಪ್ರಾಚ್ಯ ವಸ್ತು ಸಂಶೋಧನಾಯಲಕ್ಕೆ ಭೇಟಿ ನೀಡಿ ಅಲ್ಲಿ ಸಹ ನಿರ್ದೇಶಕರಿಂದ ತಾಳೆಗರಿಯ ಮೇಲೆ ಬರವಣಿಗೆ, ತಾಳೆಗರಿಯನ್ನು ಸಿದ್ಧಪಡಿಸುವ ಹಂತಗಳು, ಅದನ್ನು ಸಂರಕ್ಷಿಸುವ ವಿಧಾನವನ್ನು ತಿಳಿಸಿಕೊಟ್ಟರು. ಅಲ್ಲದೇ ಸಂಶೋಧನಾಲಯದಲ್ಲಿ ಎಲ್ಲರಿಗೂ ತಾಳೆಗರಿಯ ಸಂಗ್ರಹಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟರು.

ಅರಮನೆ ವೀಕ್ಷಣೆ ಬಳಿಕ ಸೇಂಟ್ ಫಿಲೋಮಿನಾ ಚರ್ಚ್ ಗೆ ಭೇಟಿ ನೀಡಿದೆವು. ಭಾರತದಲ್ಲೇ ಅತ್ಯಂತ ಎತ್ತರದ ಗೋಪುರಗಳನ್ನು ಹೊಂದಿರುವ ಈ ದೇವಾಲಯವು ಗೋಥಿಕ್ ಶೈಲಿಯಲ್ಲಿದೆ. ಕೊಲೋನ್ ಕೆಥೆಡ್ರಲ್ ಹೋಲಿಕೆಯಲ್ಲಿ ಕಟ್ಟಲಾದ ‌ಈ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆಯೇ ಒಳಗಿನ ಪ್ರಶಾಂತ ವಾತಾವರಣವು ಬಂದವರನ್ನು ಮೂಕರನ್ನಾಗಿಸುತ್ತದೆ. ದೇವಾಲಯದ ಮಧ್ಯಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಇಳಿದು catacomb ನಲ್ಲಿ ಮಲಗಿರುವ ಸಂತ ಫಿಲೋಮಿನಾ ಎಂಬ ಯುವರಾಣಿಯ ಮುಗ್ದತೆ ಹಾಗೂ ದೈವಕಳೆಯ ದರ್ಶನ ಮಾಡಲಾಯಿತು.

ನಿಗದಿತ ಯೋಜನೆಯಂತೆ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷತೆಗಳನ್ನು ತಿಳಿದು ಅರ್ಥಪೂರ್ಣವಾಗಿ ಶೈಕ್ಷಣಿಕ ಪ್ರವಾಸವನ್ನು ಮುಗಿಸಲಾಯಿತು. ರಾತ್ರಿಯ ಭೋಜನವನ್ನು ಮೈಸೂರಿನಲ್ಲಿ ಪೂರೈಸಿ ನಮ್ಮ ಊರಿನತ್ತ ಹೊರಟೆವು. ಹುಲ್ಕುತ್ರಿ ತಲುಪಿದಾಗ ಬೆಳಿಗ್ಗೆ 8-30 ಆಗಿತ್ತು.