ದಿನಾಂಕ 18-12-2022 ಹಾಗೂ 19-12-2022 ರಂದು ಶಾಲಾ ಶೈಕ್ಷಣಿಕ ಪ್ರವಾಸದ ನಿಮಿತ್ತ ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಹಾಗೂ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಾಗಿತ್ತು. 4 ರಿಂದ 7ನೇ ತರಗತಿಯ ಒಟ್ಟು 18 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಒಟ್ಟು 30 ಜನ ಪಾಲಕರೊಂದಿಗೆ ಪ್ರವಾಸಕ್ಕೆ ತೆರಳಲಾಗಿತ್ತು.

18-12-2022ರ ಸಂಜೆ 9-45ಕ್ಕೆ ಹುಲ್ಕುತ್ರಿ ಶಾಲೆಯಿಂದ ಹೊರಟ ನಮ್ಮ ತಂಡ ಬೆಳಿಗ್ಗೆ 3-15 ಬಾದಾಮಿ ತಲುಪಿದೆವು. ಬೆಳಿಗ್ಗಿನ ದೈನಂದಿನ ಚಟುವಟಿಕೆಗಳನ್ನು ಪೂರೈಸಿ, 6-30ಕ್ಕೆ ಬಾದಾಮಿಯ ಬನಶಂಕರಿ ದೇವಾಲಯವನ್ನು ವೀಕ್ಷಿಸಿ ಅಲ್ಲಿಂದ ಶಿಯೋಗಿ ಮಂದಿರ ತೆರಳಿದೆವು. ನಂತರ ಬಾದಾಮಿಯ ಗುಹಾಂತರ ದೇವಾಲಯ ವೀಕ್ಷಿಸಲಾಯಿತು. ಅಲ್ಲಿಂದ ಪಟ್ಟದಕಲ್ಲಿನಲ್ಲಿ ದುರ್ಗಾ ದೇವಾಲಯ, ಚಂದ್ರಶೇಖರ ದೇವಾಲಯ ವೀಕ್ಷಿಸಿದೆವು. ನಂತರ ಐಹೊಳೆಯನ್ನು ಸಂದರ್ಶಿಸಿದೆವು. ಈ ಎಲ್ಲಾ ದೇವಾಲಯಗಳಲ್ಲಿಯ ವಾಸ್ತುಶಿಲ್ಪ, ಮೂರ್ತಿ ಕೆತ್ತನೆ ಅದ್ಭುತವಾಗಿದೆ.

ಮಧ್ಯಾಹ್ನ ಊಟ ಮುಗಿಸಿ ಕೂಡಲಸಂಗಮದತ್ತ ಹೊರಟೆವು. ಅಲ್ಲಿ ಶ್ರೀ ಬಸವೇಶ್ವರರು ಲಿಂಗೈಕ್ಯರಾದ ಸ್ಥಳವನ್ನು ಹಾಗೂ ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮವನ್ನು ವೀಕ್ಷಿಸಿದೆವು. ಅಲ್ಲಿಂದ ಆಲಮಟ್ಟಿ ಜಲಾಶಯದತ್ತ ನಮ್ಮ ಪ್ರಯಾಣ ಮುಂದುವರೆಯಿತು. ಅಲ್ಲಿ ಸಂಜೆ 6-15 ತಲುಪಿದ್ದರಿಂದ ನಮಗೆ ಉದ್ಯಾನವನದಲ್ಲಿ ವಿಹರಿಸಲು ಆಗಲಿಲ್ಲ. ಹಾಗಾಗಿ ಪಕ್ಕದಲ್ಲಿ ನಡೆಯುತ್ತಿರುವ ಸಂಗೀತ ಕಾರಂಜಿ ವೀಕ್ಷಿಸಲು ತೆರಳಿದೆವು. ಬೆಳಿಗ್ಗಿನಿಂದ ಸುತ್ತಾಡಿದ ನಮಗೆ ಸಂಗೀತ ಕಾರಂಜಿಯು ಮನ್ನಸ್ಸಿಗೆ ಮುದ ನೀಡಿತು.

ರಾತ್ರಿ ಊಟ ಮುಗಿಸಿ 10-45ಕ್ಕೆ ಹುಲ್ಕುತ್ರಿಯ ಕಡೆ ಪ್ರಯಾಣ ಬೆಳೆಸಿ ಬೆಳಿಗ್ಗೆ 6-00 ಗಂಟೆಗೆ ಶಾಲೆ ತಲುಪಿದೆವು. ಒಟ್ಟಾರೆಯಾಗಿ ಈ ಪ್ರವಾಸವು ಶೈಕ್ಷಣಿಕವಾಗಿ ಶಾಲಾ ಮಕ್ಕಳಿಗೆ ಅದ್ಭುತ ಅನುಭವ ನೀಡಿದೆ.

**************