ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲ್ಕುತ್ರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ದರ್ಶನ ಹರಿಕಾಂತರವರು 12-02-2022 ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದ ಸಾಗರೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಹೃದಯ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದರು.

ದರ್ಶನ ಹರಿಕಾಂತ ಹುಲ್ಕುತ್ರಿ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ.

ಅತ್ಯಂತ ಕುಗ್ರಾಮದ ಶಾಲೆಯ ಶಿಕ್ಷಕರಾಗಿದ್ದ ಇವರು, ತಮ್ಮ ಶಾಲೆಯ ಮೂಲಕ ಕುಗ್ರಾಮ ರಾಜ್ಯದಲ್ಲಿ ಹೆಸರುಗಳಿಸುವಂತೆ ಮಾಡಿದ್ದಾರೆ. ಶಾಲೆಯ ಸಹ ಶಿಕ್ಷಕರ ಜೊತೆಗೂಡಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಕ್ಕಳಿಗೆ ತಂತ್ರಜ್ಞಾನ ಸಹಿತ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮಕ್ಕಳಿಗೆ ಕೃಷಿ ಅಧ್ಯಯನ ಅಂಗವಾಗಿ ಗದ್ದೆನಾಟಿ, ಗದ್ದೆಕೊಯ್ಲು, ಚಾರಣ, ಕ್ಷೇತ್ರ ಅಧ್ಯಯನ , ಹೊರಸಂಚಾರದಂತಹ ವಿಶೇಷ ಯೋಜನೆಗಳ ಮೂಲಕ ತಿಳುವಳಿಕೆ ಮಟ್ಟವನ್ನು ಹೆಚ್ಚಿಸುವ ಸಾರ್ಥಕ ಕೆಲಸ ಮಾಡಿರುತ್ತಾರೆ. ಪ್ರತಿವರ್ಷ ಮೆಟ್ರಿಕ್ ಸಂತೆ ಆಯೋಜಿಸಿ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ವೃದ್ಧಿಸಿದ್ದಾರೆ. ಸ್ಮಾರ್ಟ್ ಕ್ಲಾಸ್ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ.  ಅಲ್ಲದೇ ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯ ಹೆಸರಿನಲ್ಲಿ ವೆಬ್ ಸೈಟ್ ತೆರೆದಿದ್ದಾರೆ. ಇದು ರಾಜ್ಯದಲ್ಲಿಯೇ ಸರ್ಕಾರಿ ಶಾಲೆಯ ಮೊದಲ ಅಧಿಕೃತ ವೆಬ್ ಸೈಟ್ ಎನ್ನುವ ಹೆಗ್ಗಳಿಕೆಗೆ ಸಹ ಪಾತ್ರವಾಗಿದೆ.

ತಮ್ಮ ವೆಬ್ ಸೈಟ್ ಬಳಸಿ ಶಾಲೆಯಲ್ಲಿ ಸ್ಮಾರ್ಟ್ ಟಿವಿ ಮೂಲಕ ಮಕ್ಕಳಿಗೆ ಪಾಠವನ್ನು ಬೋಧಿಸುವ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮೂರಿನ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎನ್ನುವ ಕಾರಣಕ್ಕೆ ಪಾಲಕರು ಖಾಸಗಿ ಶಾಲೆಯತ್ತ ಮುಖ ಮಾಡದೇ ಸರ್ಕಾರಿ ಶಾಲೆಯತ್ತ ಆಕರ್ಷಿತರಾಗುತ್ತಿದ್ದಾರೆ.

ಇವರ ಈ ಎಲ್ಲಾ ಸಾಧನೆ ಪರಿಗಣಿಸಿ, ಶೈಕ್ಷಣಿಕ ಕ್ಷೇತ್ರದಲ್ಲಿನ ಇವರ ಸಾಧನೆಗಾಗಿ ಸಾಗರಸುತ್ತ ಪತ್ರಿಕೆ ಬಳಗ, ಸಾಗರ, ಸಹೃದಯ ಬಳಗ, ಸಾಗರ ಹಾಗೂ ತಾಲೂಕು ಇತಿಹಾಸ ವೇದಿಕೆ, ಸಾಗರ ಇವರು ತಮ್ಮ 21ನೇ ವರ್ಷದ ಸಾಗರೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಹೃದಯ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ.