ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರಂಜನಾ ಭಂಡಾರಿಯವರಿಗೆ ಸಿದ್ದಾಪುರ ತಾಲೂಕ ಭಂಡಾರಿ ಸಮಾಜದಿಂದ ಅಭಿನಂದನಾ ಸಮಾರಂಭವನ್ನು ದಿನಾಂಕ : 08-04-2022 ರಂದು ಹುಲ್ಕುತ್ರಿಯಲ್ಲಿ ನೆರವೇರಿಸಲಾಯಿತು.

ಸಿದ್ದಾಪುರ ತಾಲೂಕಿನಲ್ಲಿ ಭಂಡಾರಿ ಸಮಾಜ ಸೀಮಿತ ಕುಟುಂಬವನ್ನು ಹೊಂದಿದೆ. ಹೊನ್ನಾವರ ಮೂಲದವರಾದ ರಂಜನಾ ಅವರು ಕುಗ್ರಾಮದ ಹುಲ್ಕುತ್ರಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಮಕ್ಕಳಿಗೆ ಶಿಕ್ಷಣದ ಜೊತೆ ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪೋಷಿಸಿಕೊಂಡು ರಾಜ್ಯಮಟ್ಟದಲ್ಲಿ ಮಾಡಿರುವ ಸಾಧನೆ ಅಭಿನಂದನಾರ್ಹವಾದುದು ಎಂದು ನಿವೃತ್ತ ತಾಲೂಕ ಯೋಜನಾಧಿಕಾರಿಗಳು ಹಾಗೂ ಸಿದ್ದಾಪುರ ತಾಲೂಕ ಭಂಡಾರಿ ಸಮಾಜದ ಅಧ್ಯಕ್ಷರೂ ಆಗಿರುವ ಶ್ರೀ ಎನ್.ಆರ್. ಹೆಗಡೇಕರ ರಂಜನಾ ಅವರನ್ನು ಸನ್ಮಾನಿಸಿ ನುಡಿದರು.

ದಾವಣೆಗೆರೆಯಲ್ಲಿ ನಡೆದ 2020-21ನೇ ಸಾಲಿನ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿ ತಾಲೂಕಿನ ಹುಲ್ಕುತ್ರಿ ಶಾಲೆಯ ಸಹಶಿಕ್ಷಕಿಯಾದ ರಂಜನಾ ಭಂಡಾರಿಯವರು 200 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಅವರ ಈ ಸಾಧನೆಯನ್ನು ಗಮನಿಸಿ ಸಿದ್ದಾಪುರ ತಾಲೂಕಿನ ಭಂಡಾರಿ ಸಮಾಜವು ಹುಲ್ಕುತ್ರಿ ಶಾಲೆಗೆ ಬಂದು ಅಭಿನಂದಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಿದ್ದಾಪುರ ತಾಲೂಕಿನ ಭಂಡಾರಿ ಸಮಾಜದ ಅಧ್ಯಕ್ಷರು ಹಾಗೂ ನಿವೃತ್ತ ತಾಲೂಕ ಯೋಜನಾಧಿಕಾರಿಗಳು ಆದ ಶ್ರೀ ಎನ್.ಆರ್. ಹೆಗಡೇಕರ, ಭಂಡಾರಿ ಸಮಾಜದಿಂದ ಶ್ರೀ ಗುರುಮೂರ್ತಿ ಪಂಡಿತ, ಶ್ರೀ ಗಜಾನನ ಭಂಡಾರಿ, ಶ್ರೀ ಸತ್ಯನಾರಾಯಣ ಭಂಡಾರಿ, ಶ್ರೀ ಕಮಲಾಕರ ಭಂಡಾರಿ, ಕು. ರಮ್ಯ ಭಂಡಾರಿ ಹಾಗೂ ಶ್ರೀ ರವಿ ಭಂಡಾರಿ ಉಪಸ್ಥಿತರಿದ್ದರು. ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಸುರೇಶ ಬಂಗಾರ್ಯ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿ ಮಂಜುನಾಥ ಗೌಡ, ಸೋವಿನಕೊಪ್ಪ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ರಾಧ ವೆಂಕಟ್ರಮಣ ಗೌಡ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಸ್ವಾಗತಿಸಿದರು. ಮೈತ್ರಿ ಹೆಗಡೆ ನಿರ್ವಹಿಸಿದರು.