ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪರಿಭಾಷೆಗಳ ಪರಿಚಯ – ಅಧ್ಯಾಯ-9
ಪಾಠದ ಪರಿಚಯ
ಶಾಸನಗಳನ್ನು ರೂಪಿಸುವ ಶಾಸಕಾಂಗ ಶಾಸನಗಳನ್ನು ಜಾರಿಗೊಳಿಸುವ ಕಾರ್ಯಾಂಗ ಹಾಗೂ ರಾಜಕೀಯ ವ್ಯವಸ್ಥೆಯ ರಕ್ಷಕ ಎಂದೆ ಕರೆಯಲ್ಪಡುವ ನ್ಯಾಯಾಂಗದ ಮೂಲ ಪರಿಕಲ್ಪನೆಯ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ.
ಪೀಠಿಕೆ:
ಶಾಸಕಾಂಗವು ರಾಜ್ಯದ ಇಚ್ಛೆಯನ್ನು ರೂಪಿಸುವ ಮತ್ತು ವ್ಯಕ್ತಪಡಿಸುವ ಸರ್ಕಾರದ ಮೊದಲನೆಯ ಅಂಗವಾಗಿದೆ. ಇದು ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯನಿರ್ವಹಣೆಗೂ ಆಧಾರವಾಗಿದೆ. ಆದುದರಿಂದ ಶಾಸಕಾಂಗವನ್ನು ಸಾರ್ವಜನಿಕ ಅಭಿಪ್ರಾಯದ `ಬಾರೋ ಮೀಟರ್’ ಎಂದು ಕರೆಯಲಾಗಿದೆ.
ಅರ್ಥ: ಶಾಸಕಾಂಗ ಅಥವಾ ಪಾರ್ಲಿಮೆಂಟ್ ಎಂಬ ಪದವು ಫ್ರೆಂಚ್ ಭಾಷೆಯ ‘Parler’ ಮತ್ತು ಲ್ಯಾಟಿನ್ ಭಾಷೆಯ ‘Parlamentum’ ಎಂಬ ಶಬ್ಧಗಳಿಂದ ಬಂದಿದೆ. ಮಾತನಾಡು, ಚರ್ಚಿಸು ಎಂಬ ಅರ್ಥವನ್ನು ಇದು ಸೂಚಿಸುತ್ತದೆ.
ಒಂದು ದೇಶದ ಪ್ರಜಾಪ್ರತಿನಿಧಿಗಳು ಒಂದೆಡೆ ಸೇರಿ ಜನರ ಅಭಿಪ್ರಾಯವನ್ನು ತಿಳಿಸುವ ವೇದಿಕೆಯಾಗಿರುವುದರಿಂದ ಶಾಸಕಾಂಗವನ್ನು ಸಾರ್ವಜನಿಕ ಅಭಿಪ್ರಾಯದ ಕನ್ನಡಿ’ ಎಂದು ಕರೆಯಲಾಗಿದೆ. ಶಾಸಕಾಂಗವು ಒಂದು ರಾಷ್ಟ್ರಕ್ಕೆ ಅಗತ್ಯವಾದ ಹೊಸ ಕಾನೂನುಗಳನ್ನು ರೂಪಿಸುವ ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಮಾರ್ಪಾಡು ಮಾಡುವ ಹಾಗೂ ಅನುಪಯೋಗಿ ಕಾನೂನುಗಳನ್ನು ರದ್ದುಪಡಿಸುವ ಪರಮ ಅಧಿಕಾರವನ್ನು ಹೊಂದಿದೆ. ಆದುದರಿಂದ ಶಾಸಕಾಂಗವನ್ನುಒಂದು ರಾಷ್ಟ್ರದ ಕಾನೂನುಗಳನ್ನು ರೂಪಿಸುವ ಕಾರ್ಖಾನೆ’ ಎಂತಲೂ ಕರೆಯಲಾಗಿದೆ.
ವಿವಿಧ ರಾಷ್ಟ್ರಗಳ ಶಾಸಕಾಂಗದ ಹೆಸರುಗಳು:
- ಭಾರತ – ಸಂಸತ್ತು (Parliament)
- ಮಾಲ್ಡಿವ್ಸ್ – ಮಜ್ಲೀಸ್ (Majlis)
- ಜರ್ಮನಿ – ಬುಂಡೇಸ್ಟಾಗ್ (Bundestag)
- ಇಸ್ರೇಲ್ – ನೆಸ್ಸೆಟ್ (Knesset)
- ಫ್ರಾನ್ಸ್ – ನ್ಯಾಷನಲ್ ಅಸೆಂಬ್ಲಿ (National Assembly)
- ಡೆನ್ಮಾರ್ಕ್ – ಫೊಕೇಟಿಂಗ್ (Folketing)
ಶಾಸಕಾಂಗದ ಪ್ರಾಮುಖ್ಯತೆ:
ಸರ್ಕಾರದ ಮೂರು ಅಂಗಗಳಲ್ಲಿ ಶಾಸಕಾಂಗವು ಮೊದನೆಯ ಅಂಗ. ಜನಪ್ರತಿನಿಧಿಗಳನ್ನು ಹೊಂದಿರುವ ಶಾಸಕಾಂಗವು ರಾಷ್ಟ್ರದ ಸಾರ್ವಭೌಮತ್ವದ ಸಂಕೇತವಾಗಿದೆ.
ಶಾಸಕಾಂಗವು ತನ್ನ ಕಾನೂನುಗಳ ಮೂಲಕ ಪ್ರಜೆಗಳ ಇಚ್ಛೆಯನ್ನು ವ್ಯಕ್ತಪಡಿಸುವ ಪ್ರಭಾವಿ ಮಾಧ್ಯಮವಾಗಿದೆ.
ಶಾಸಕಾಂಗದ ಪ್ರಾಮುಖ್ಯತೆಯನ್ನು ಈ ಕೆಳಕಂಡ ಅಂಶಗಳಿಂದ ಅರಿಯಬಹುದು.
1. ಕಾನೂನುಗಳ ರಚನೆ: ಶಾಸಕಾಂಗವು ಸಂವಿಧಾನ ಬದ್ಧವಾಗಿ ರಾಜ್ಯಕ್ಕೆ ಅಗತ್ಯವಿರುವ ಕಾನೂನುಗಳನ್ನು ರಚನೆ ಮಾಡುವ ಪರಮಾಧಿಕಾರವನ್ನು ಹೊಂದಿದೆ.
2. ಸರ್ಕಾರದ ರಚನೆ: ಸಾರ್ವತ್ರಿಕ ಚುನಾವಣೆಗಳಲ್ಲಿ ಜನಾದೇಶವನ್ನು ಪಡೆದ ಪಕ್ಷವು ಶಾಸನ ಸಭೆಗಳಲ್ಲಿ ತನ್ನ ಬಹುಮತವನ್ನು ಸಾಬೀತು ಪಡಿಸುವ ಮೂಲಕ ಸರ್ಕಾರವನ್ನು ರಚನೆ ಮಾಡುತ್ತದೆ.
3. ಸಂವಿಧಾನ ತಿದ್ದುಪಡಿ: ಶಾಸಕಾಂಗವು ಸಂವಿಧಾನದ ವಿಧಿಗಳನ್ನು ತಿದ್ದುಪಡಿ ಮಾಡುವುದು. ಹೊಸ ಶಾಸನಗಳನ್ನು ರಚಿಸುವುದು, ಹೊಸ ವಿಧಿಗಳನ್ನು ಸೇರಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತದೆ.
4. ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ : ಶಾಸಕಾಂಗವು ಪ್ರಜೆಗಳ ಕುಂದುಕೊರತೆಗಳನ್ನು ಬಹಿರಂಗವಾಗಿ ಚರ್ಚಿಸುವ ಒಂದು ಪ್ರಮುಖ ವೇದಿಕೆಯಾಗಿದೆ. ಶಾಸಕಾಂಗದ ಸದಸ್ಯರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸದನದ ಗಮನವನ್ನು ಸೆಳೆಯುತ್ತಾರೆ.
5. ರಾಷ್ಟ್ರಜೀವನದ ಕನ್ನಡಿ: ಶಾಸಕಾಂಗವು ಜನತೆಯ ಆಶೋತ್ತರಗಳನ್ನು ಈಡೇರಿಸಲು ಬೇಕಾದ ಸಾರ್ವಜನಿಕ ನೀತಿ ನಿಯಮಗಳನ್ನು ರೂಪಿಸುವುದರ ಮೂಲಕ ರಾಷ್ಟ್ರದ ಸಮಗ್ರ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.
ಒಟ್ಟಿನಲ್ಲಿ ಶಾಸಕಾಂಗವು ಸರ್ಕಾರದ ಪ್ರಮುಖ ಅಂಗವಾಗಿದೆ. ಅಲ್ಲದೆ ಕಾರ್ಯಾಂಗ ಮತ್ತು ನ್ಯಾಯಾಂಗದಂತೆಯೇ ರಾಷ್ಟ್ರದ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತದೆ.
ಶಾಸಕಾಂಗದ ರಚನೆ:
ಸರ್ಕಾರದ ವ್ಯವಸ್ಥೆಯಲ್ಲಿ ಶಾಸಕಾಂಗಕ್ಕೆ ಪ್ರಮುಖ ಸ್ಥಾನವಿದೆ. ಶಾಸಕಾಂಗದ ರಚನೆಯು ಎರಡು ಪದ್ಧತಿಗಳನ್ನು ಹೊಂದಿದೆ.
1. ಏಕಸದನ ಶಾಸಕಾಂಗ – ಒಂದೇ ಸದನವಿರುತ್ತದೆ.
2. ದ್ವಿಸದನ ಶಾಸಕಾಂಗ – ಎರಡು ಸದನಗಳಿರುತ್ತವೆ.
ದ್ವಿಸದನ ಶಾಸಕಾಂಗ ವ್ಯವಸ್ಥೆಯಲ್ಲಿ ಎರಡು ಸದನಗಳಿವೆ. ಮೇಲ್ಮನೆ (Upper House) ಎಂತಲೂ ಮತ್ತೊಂದನ್ನು ಕೆಳಮನೆ (Lower House) ಎಂದೂ ಕರೆಯಲಾಗುತ್ತದೆ.
ಶಾಸಕಾಂಗದ ವಿಧಗಳು:
ಶಾಸಕಾಂಗವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ:-
1. ಏಕಸದನ ಶಾಸಕಾಂಗ – (UNICAMERALISM)
2. ದ್ವಿಸದನ ಶಾಸಕಾಂಗ – (BICAMERALISM)
1. ಏಕಸದನ ಶಾಸಕಾಂಗ: ಶಾಸಕಾಂಗವೊಂದು ಏಕೈಕ ಸದನವನ್ನು ಹೊಂದಿರುವುದೇ ಏಕಸದನ ಶಾಸಕಾಂಗ. ಇಲ್ಲಿ ಜನತೆಯ ಇಚ್ಛೆಯು ಏಕಸದನನದಲ್ಲಿ ಮಾತ್ರ ವ್ಯಕ್ತವಾಗುತ್ತದೆ.
ಏಕಸದನ ಶಾಸಕಾಂಗವು ಚರ್ಚೆಗಳು ಅನಾವಶ್ಯಕವಾಗಿ ಪುನರಾವರ್ತನೆಯಾಗುವುದನ್ನು ತಪ್ಪಿಸುತ್ತದೆ. ಅಲ್ಲದೆ ದೇಶದ ಹಿತದೃಷ್ಟಿಯಿಂದ ಮಿತವ್ಯಯವನ್ನು ಕಾಪಾಡುತ್ತದೆ.
ಏಕಸದನವನ್ನು ಹೊಂದಿರುವ ಪ್ರಮುಖ ದೇಶಗಳೆಂದರೆ ಗ್ರೀಸ್, ಫಿನ್‍ಲ್ಯಾಂಡ್, ಸ್ವೀಡನ್, ಡೆನ್ಮಾರ್ಕ್, ಯುಗೋಸ್ಲಾವಿಯ, ಪೋರ್ಚುಗಲ್, ನ್ಯೂಜಿಲ್ಯಾಂಡ್ ಮುಂತಾದವುಗಳು.
2. ದ್ವಿಸದನ ಶಾಸಕಾಂಗ : ಎರಡು ಸದನಗಳನ್ನು ಹೊಂದಿರುವ ಶಾಸಕಾಂಗವೇ ದ್ವಿಸದನ ಶಾಸಕಾಂಗ. ಜನತೆಯ ಸಂಕಲ್ಪವನ್ನು ಎರಡು ಸದನಗಳಲ್ಲಿ ಚರ್ಚಿಸಿ ಕಾನೂನನ್ನು ರೂಪಿಸಲಾಗುತ್ತದೆ.
ದ್ವಿಸದನ ಶಾಸಕಾಂಗ ಪದ್ಧತಿಯು ಐತಿಹಾಸಿಕ ಆಕಸ್ಮಿಕತೆಯಿಂದ ಇಂಗ್ಲೆಂಡಿನಲ್ಲಿ ಜನ್ಮ ತಾಳಿತು. ಇಂದು ವಿಶ್ವದ ಬಹುತೇಕ ರಾಷ್ಟ್ರಗಳು ಈ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಉದಾಹರಣೆಗೆ ಭಾರತದ ಶಾಸಕಾಂಗವಾದ ಸಂಸತ್ತು’ ದ್ವಿಸದನ ಶಾಸಕಾಂಗವಾಗಿದೆ. ಅದರ ಕೆಳಮನೆಯನ್ನು ಲೋಕಸಭೆ’ ಎಂದು ಮೇಲ್ಮನೆಯನ್ನು ರಾಜ್ಯಸಭೆ ಎಂದು ಕರೆಯಲಾಗಿದೆ. ಅದೇ ರೀತಿ ಇಂಗ್ಲೆಂಡಿನ ಶಾಸಕಾಂಗವಾದ ಪಾರ್ಲಿಮೆಂಟ್’ ದ್ವಿಸದನ ಶಾಸಕಾಂಗವಾಗಿದೆ. ಅದರ ಕೆಳಮನೆಯನ್ನು “ಸಾಮಾನ್ಯರ ಸಭೆ’ ಎಂದು ಮೇಲ್ಮನೆಯನ್ನು `ಶ್ರೀಮಂತ ಸಭೆ’ ಎಂದು ಕರೆಯಲಾಗಿದೆ.
ಶಾಸಕಾಂಗದ ಅಧಿಕಾರ ಮತ್ತು ಕಾರ್ಯಗಳು :
ಶಾಸಕಾಂಗದಲ್ಲಿ ಅನೇಕ ವಿಷಯಗಳ ಮತ್ತು ಮಸೂದೆಗಳ ಬಗೆಗೆ ಆಗುವ ಚರ್ಚೆಗಳು ಪ್ರಜಾಭಿಪ್ರಾಯವನ್ನು ರೂಪಿಸುತ್ತವೆ. ಕಾರ್ಯಾಂಗವು ಸರ್ಕಾರದ ಬಾಹ್ಯ ಸ್ವರೂಪವಾದರೆ ಶಾಸಕಾಂಗವು ಅದರ ಆಂತರಿಕ ಸ್ವರೂಪ. ಶಾಸಕಾಂಗವು ವ್ಯಾಪಕ ಅಧಿಕಾರ ಹೊಂದಿದೆ.
ಕಾರ್ಯಾಂಗ
ಪೀಠಿಕೆ :
ಸರ್ಕಾರದ ಮೂರು ಅಂಗಗಳಲ್ಲಿ ಕಾರ್ಯಾಂಗವು ಬಹುಮುಖ್ಯವಾದ ಅಂಗವಾಗಿದೆ. ಶಾಸಕಾಂಗದಿಂದ ರೂಪಿಸಲ್ಪಟ್ಟ ಶಾಸನಗಳನ್ನು ಅನುಷ್ಠಾನಗೊಳಿಸುವ ಅಂಗವೇ ಕಾರ್ಯಾಂಗವಾಗಿದೆ. ಇದು ರಾಷ್ಟ್ರದ ಸಮಗ್ರ ಆಡಳಿತವನ್ನು ನಿರ್ವಹಿಸುತ್ತದೆ. ಆದ್ದರಿಂದ ಇದನ್ನು ಆಡಳಿತಾತ್ಮಕ ಅಂಗವೆಂದೇ ಕರೆಯಲಾಗುತ್ತದೆ. ಪ್ರತಿ ಹಂತದಲ್ಲಿಯೂ ಕಾರ್ಯಾಂಗವು ಪ್ರಾಯೋಗಿಕ ಉದ್ದೇಶಗಳಿಗಾಗಿ ಸರ್ಕಾರದೊಡನೆ ಗುರುತಿಸಿಕೊಳ್ಳುತ್ತದೆ. ಏಕೆಂದರೆ ಸರ್ಕಾರದ ಬಹುಪಾಲು ಅಧಿಕಾರಗಳು ಕಾರ್ಯಾಂಗದಲ್ಲಿಯೇ ಕೇಂದ್ರಿಕೃತವಾಗಿರುತ್ತವೆ.
ಅರ್ಥ : ಕಾರ್ಯಾಂಗ ಎಂಬ ಪದವು ಆಂಗ್ಲ ಭಾಷೆಯ ಎಕ್ಸಿಕ್ಯುಟಿವ್ (Executive) ಪದದ ರೂಪಾಂತರವಾಗಿದೆ. ಇದು ಮಧ್ಯಕಾಲೀನ ಲ್ಯಾಟಿನ್ ಭಾಷೆಯ ಎಕ್ಸಿಕ್ಯೂ (Exsequi) ಎಂಬ ಶಬ್ದದಿಂದ ಬಂದಿದೆ. ಇದರರ್ಥ `ಕಾರ್ಯನಿರ್ವಹಿಸು’ ಎಂದಾಗುತ್ತದೆ.
ಸಂಕುಚಿತ ಅರ್ಥದಲ್ಲಿ ಕಾರ್ಯಾಂಗವೆಂದರೆ, ರಾಜ್ಯದ ಮುಖ್ಯ ಕಾರ್ಯನಿರ್ವಾಹಕ ಹಾಗೂ ಅದರ ಸಲಹೆಗಾರ ಎಂದು ಪರಿಗಣಿಸಲಾಗಿದೆ. ಉದಾಹರಣೆಗೆ ಭಾರತದಲ್ಲಿ ರಾಷ್ಟ್ರಪತಿ ಹಾಗೂ ಸಚಿವ ಸಂಪುಟವಾದರೆ, ಅಮೇರಿಕಾದಲ್ಲಿ ರಾಷ್ಟ್ರಾಧ್ಯಕ್ಷರು ಮತ್ತು ಅವರ ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ.
ವಿಶಾಲ ಅರ್ಥದಲ್ಲಿ ಕಾರ್ಯಾಂಗವೆಂದರೆ, ಶಾಸನಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಅಧಿಕೃತ ವ್ಯಕ್ತಿಗಳ ಸಮೂಹವಾಗಿವೆ. ಅಂದರೆ ರಾಷ್ಟ್ರದ ಮುಖ್ಯಸ್ಥರು, ಮಂತ್ರಿಗಳು ಹಾಗೂ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಗುಮಾಸ್ತರು ಮುಂತಾದ ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ.
ವ್ಯಾಖ್ಯೆಗಳು :
ಗಾರ್ನರ್‍ರವರ ಪ್ರಕಾರ : ಶಾಸಕಾಂಗ, ಸಂವಿಧಾನ ಮತ್ತು ನ್ಯಾಯಾಂಗದ ನಿರ್ಧಾರಗಳ ಮೂಲಕ ವ್ಯಕ್ತವಾಗುವ ರಾಜ್ಯದ ಇಚ್ಛೆಯನ್ನು ಕಾರ್ಯಗತಗೊಳಿಸುವ ಸರ್ಕಾರದ ಅಂಗವೇ ಕಾರ್ಯಾಂಗ.’
ವಿಲ್ಲೋಬಿರವರ ಪ್ರಕಾರ : ಕಾರ್ಯಾಂಗೀಯ ಅಧಿಕಾರ ಅಥವಾ ಅದರ ಕಾರ್ಯ ಇಡೀ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದು, ಅದರ ಕಾನೂನುಗಳು ಅದರ ಹಲವಾರು ಅಂಗಗಳು ಕೋರಿಕೆಯನ್ನು ಈಡೇರಿಸುವಂತೆ ನೋಡಿಕೊಳ್ಳುವುದೇ ಕಾರ್ಯಾಂಗ.’
ಮಹತ್ವ :
ಪ್ರತಿಯೊಂದು ರಾಜಕೀಯ ವ್ಯವಸ್ಥೆಗಳಲ್ಲಿಯೂ ಕಾರ್ಯಾಂಗವು ಕೇಂದ್ರ ಸ್ಥಾನವನ್ನು ಅಲಂಕರಿಸುತ್ತದೆ. ಇದರ ಮಹತ್ವವು ಈ ಕೆಳಕಂಡಂತಿವೆ.
1. ಕಾರ್ಯಾಂಗವೇ ಸರ್ಕಾರದ ಯಂತ್ರ : ಮೆದುಳು ಇಲ್ಲದ ದೇಹವನ್ನು ಹೇಗೆ ಊಹಿಸಲು ಸಾಧ್ಯವಿಲ್ಲವೊ ಹಾಗೇ ಕಾರ್ಯಾಂಗವಿಲ್ಲದ ರಾಜ್ಯವನ್ನು ಊಹಿಸಲು ಸಾಧ್ಯವಿಲ್ಲ. ರಾಷ್ಟ್ರದ ಸಂಪೂರ್ಣ ಆಡಳಿತದ ಜವಾಬ್ದಾರಿಯನ್ನು ಕಾರ್ಯಾಂಗವೇ ನಿರ್ವಹಿಸುತ್ತದೆ. ಕಾರ್ಯಾಂಗದ ರಚನಾ ರೀತಿ ಹಾಗೂ ಕಾರ್ಯನಿರ್ವಹಣೆ ಇಡೀ ಸರ್ಕಾರದ ಸಾಮಥ್ರ್ಯದ ಪ್ರತೀಕವಾಗಿದೆ.
2. ಕಾನೂನನ್ನು ಅನುಷ್ಠಾನಗೊಳಿಸುವುದು : ಕಾರ್ಯಾಂಗವು ಅಸ್ತಿತ್ವದಲ್ಲಿಲ್ಲದಿದ್ದರೆ ಶಾಸಕಾಂಗವು ರೂಪಿಸುವ ಕಾಯಿದೆಗಳು ಅನುಷ್ಠಾನಗೊಳ್ಳುವುದಿಲ್ಲ. ಶಾಸಕಾಂಗವು ಎಷ್ಟೇ ಉತ್ತಮ ಶಾಸನಗಳನ್ನು ರಚಿಸಿದರೂ ಅದನ್ನು ಸರಿಯಾಗಿ ಕಾರ್ಯರೂಪಕ್ಕೆ ತರುವ ಹೊಣೆ ಕಾರ್ಯಾಂಗದ್ದಾಗಿದೆ.
3. ಪರಿಣಾಮಕಾರಿ ಪ್ರಜಾಪ್ರಭುತ್ವದ ಸಾಧನ : ಇಂದು ಪ್ರಜಾಪ್ರಭುತ್ವವು ಸರ್ಕಾರದ ಬಗೆಯಾಗಿರದೆ, ಜನರ ಜೀವನ ವಿಧಾನವೇ ಆಗಿದೆ. ಪ್ರತೀ ಹಂತದಲ್ಲಿಯೂ ಪ್ರಜಾಪ್ರಭುತ್ವವು ಪರಿಣಾಮಕಾರಿಯಾಗಬೇಕಾದರೆ ಕಾರ್ಯಾಂಗವು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ದಕ್ಷ ನಾಯಕತ್ವವುಳ್ಳ ಕಾರ್ಯಾಂಗ ಅಗತ್ಯವಾಗಿದೆ.
4. ಕಲ್ಯಾಣ ರಾಜ್ಯದ ಸಾಧನ : ಆಧುನಿಕ ರಾಜ್ಯಗಳೆಲ್ಲವೂ ಕಲ್ಯಾಣ ರಾಜ್ಯ ಸ್ಥಾಪನೆಯ ಗುರಿಯನ್ನು ಹೊಂದಿವೆ. ಪ್ರಜೆಗಳ ಅಭಿವೃದ್ಧಿಗಾಗಿ ಅಗಾಧವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಫಲವಾಗಿ ಕಾರ್ಯಾಂಗವು ಹೆಚ್ಚು ಪ್ರಾಮುಖ್ಯವನ್ನು ಪಡೆಯುತ್ತಿದೆ.
5. ರಾಷ್ಟ್ರದ ಘನತೆಯ ಪ್ರತೀಕ : ಅಂತರಾಷ್ಟ್ರೀಯ ಸಂಬಂಧಗಳ ಸಂವರ್ಧನೆಯಲ್ಲಿ, ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಂರಕ್ಷಿಸುವಲ್ಲಿ ಕಾರ್ಯಾಂಗವು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಶಾಂತಿ ಮತ್ತು ಸೌಹಾರ್ದಯುತ ವಿದೇಶಾಂಗ ನೀತಿಯನ್ನು ಅನುಷ್ಠಾನಗೊಳಿಸಿ ರಾಷ್ಟ್ರದ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ.
ಲಿಪ್ಟಮನ್‍ರವರು ಮತದಾರರು ಸರ್ಕಾರದ ಮೇಲೆ ವಿಧಿಸಿರುವ ಹೊಸ ಜವಾಬ್ದಾರಿಗಳು ಹಾಗೂ ಸರ್ಕಾರವು ಪಡೆದುಕೊಂಡ ಪ್ರತಿಯೊಂದು ಹೆಚ್ಚುವರಿ ಅಧಿಕಾರವೆಲ್ಲವೂ ಕಾರ್ಯಾಂಗದ ಪ್ರಾಮುಖ್ಯತೆ ಹೆಚ್ಚಲು ಕಾರಣವಾಗಿದೆ ಎಂದಿದ್ದಾರೆ.
ಕಾರ್ಯಾಂಗದ ವಿಧಗಳು:
ಕಾರ್ಯಾಂಗದ ವಿಧಗಳನ್ನು ನಿಖರವಾಗಿ ಇಂತಿಷ್ಟೇ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಒಂದೇ ರಾಷ್ಟ್ರದಲ್ಲಿ ಎರಡು ಅಥವಾ ಮೂರು ಬಗೆಯ ಕಾರ್ಯಾಂಗಗಳೂ ಏಕಕಾಲದಲ್ಲಿ ಅಸ್ತಿತ್ವದಲ್ಲಿರಬಹುದಾಗಿದೆ. ಇದರ ವಿಧಗಳು ಈ ಕೆಳಗಿನಂತಿವೆ.
1. ನಾಮ ಮಾತ್ರ ಕಾರ್ಯಾಂಗ : ರಾಷ್ಟ್ರದ ಮುಖ್ಯಸ್ಥನ ಹೆಸರಿನಲ್ಲಿ ಸರ್ಕಾರದ ಮುಖ್ಯಸ್ಥರು ಅಧಿಕಾರ ಚಲಾಯಿಸುವ ಪದ್ದತಿಯೇ ನಾಮಮಾತ್ರ ಕಾರ್ಯಾಂಗ. ಭಾರತದ ರಾಷ್ಟ್ರಪತಿ ಹಾಗೂ ಬ್ರಿಟನ್‍ನ ರಾಣಿ ಅಥವಾ ರಾಜನು ನಾಮ-ಮಾತ್ರ ಕಾರ್ಯಾಂಗದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರೆ, ಪ್ರಧಾನಮಂತ್ರಿಯನ್ನೊಳಗೊಂಡ ಮಂತ್ರಿಮಂಡಲವು ನೈಜ ಕಾರ್ಯಾಂಗವಾಗಿ ಅವರ ಹೆಸರಿನಲ್ಲಿ ಅಧಿಕಾರವನ್ನು ಚಲಾಯಿಸುತ್ತದೆ.
2. ನೈಜ ಕಾರ್ಯಾಂಗ : ಕಾರ್ಯಾಂಗದ ಮುಖ್ಯಸ್ಥನು ವಾಸ್ತವವಾಗಿ ನೈಜ ಅಧಿಕಾರವನ್ನು ಚಲಾಯಿಸುವ ಪದ್ದತಿಯೇ ನೈಜ ಕಾರ್ಯಾಂಗ. ಉದಾಹರಣೆಗೆ ಭಾರತದ ಪ್ರಧಾನಮಂತ್ರಿಯನ್ನೊಳಗೊಂಡ ಮಂತ್ರಿಮಂಡಲ.
3. ಸಂಸದೀಯ ಕಾರ್ಯಾಂಗ : ಕಾರ್ಯಾಂಗವು ಶಾಸನ ಸಭೆಯಿಂದ ಆಯ್ಕೆಗೊಂಡು ಅದರ ವಿಶ್ವಾಸದಲ್ಲಿಯೇ ಕಾರ್ಯನಿರ್ವಹಿಸುವ ಪದ್ದತಿಯೇ ಸಂಸದೀಯ ಕಾರ್ಯಾಂಗವಾಗಿದೆ. ಶಾಸಕಾಂಗದ ಕೆಳಮನೆಯ ವಿಶ್ವಾಸವಿರುವವರೆಗೂ ಕಾರ್ಯಾಂಗವು ಅಧಿಕಾರದಲ್ಲಿರುತ್ತದೆ. ಈ ಪದ್ದತಿಯಲ್ಲಿ ರಾಷ್ಟ್ರದ ಮುಖ್ಯಸ್ಥನು ನಾಮಮಾತ್ರ ಕಾರ್ಯಾಂಗದ ಅಧಿಕಾರಿಯಾಗಿದ್ದು ವಾಸ್ತವ ಅಧಿಕಾರವನ್ನು ಪ್ರಧಾನಿಯನ್ನೊಳಗೊಂಡ ಕ್ಯಾಬಿನೆಟ್ ಹೊಂದಿರುತ್ತದೆ.
4. ಅಧ್ಯಕ್ಷೀಯ ಕಾರ್ಯಾಂಗ : ಕಾರ್ಯಾಂಗದ ಮುಖ್ಯಸ್ಥನು ಪ್ರಜೆಗಳಿಂದ ನೇರವಾಗಿ ಆಯ್ಕೆಯಾಗಿದ್ದು, ಶಾಸಕಾಂಗದಿಂದ ಸೃಷ್ಟಿಯಾಗಿಲ್ಲದ ಮತ್ತು ಶಾಸಕಾಂಗಕ್ಕೆ ಜವಾಬ್ದಾರಿಯುತವಾಗಿರದ ಪದ್ದತಿಯೇ ಅಧ್ಯಕ್ಷೀಯ ಕಾರ್ಯಾಂಗ. ಡಿ.ವಿ.ವರ್ನೆರವರು ಸರ್ಕಾರದ ಮುಖ್ಯಸ್ಥ ಮತ್ತು ರಾಷ್ಟ್ರದ ಮುಖ್ಯಸ್ಥ ಒಬ್ಬನೇ ಆಗಿರುವ ಕಾರ್ಯಾಂಗವೇ ಅಧ್ಯಕ್ಷೀಯ ಕಾರ್ಯಾಂಗ ಎಂದಿದ್ದಾರೆ. ಉದಾಹರಣೆಗೆ ಅಮೇರಿಕಾ.
5. ಏಕವ್ಯಕ್ತಿ ಕಾರ್ಯಾಂಗ : ಒಂದು ಕೇಂದ್ರ ಸರ್ಕಾರದ ಕೈಯಲ್ಲಿ ರಾಜ್ಯದ ಎಲ್ಲಾ ಅಧಿಕಾರಗಳು ಕೇಂದ್ರಿಕೃತವಾಗಿರುವ ಕಾರ್ಯಾಂಗವೇ ಏಕವ್ಯಕ್ತಿ ಕಾರ್ಯಾಂಗವಾಗಿದೆ. ಪ್ರೊ|| ಗಾರ್ನರ್‍ರವರು? ಕೇಂದ್ರವೊಂದರ ಅಂಗಗಳಿಗೆ ಸರ್ಕಾರದ ಸಮಸ್ತ ಅಧಿಕಾರವೆಲ್ಲವೂ ಸಂವಿಧಾನಬದ್ದವಾಗಿ ದೊರೆತಿದ್ದು ಅದರ ಮೂಲಕ ಪ್ರಾಂತೀಯ ಅಥವಾ ಸ್ಥಳೀಯ ಸರ್ಕಾರಗಳು ತಮ್ಮ ಅಧಿಕಾರ ಮತ್ತು ಸ್ವಾಯತ್ತತೆಯೊಂದಿಗೆ ಅಸ್ತಿತ್ವವನ್ನು ಪಡೆದಿರುವ ಕಾರ್ಯಾಂಗವೇ ಏಕವ್ಯಕ್ತಿ ಕಾರ್ಯಾಂಗ ಎಂದಿದ್ದಾರೆ. ಉದಾಹರಣೆಗೆ ಇಂಗ್ಲೆಂಡ್.
6. ಬಹುವ್ಯಕ್ತಿ ಕಾರ್ಯಾಂಗ : ಕಾರ್ಯಾಂಗದ ಅಧಿಕಾರವೆಲ್ಲವೂ ಏಕವ್ಯಕ್ತಿಯಲ್ಲಿ ಇರದೇ, ಅನೇಕ ವ್ಯಕ್ತಿಗಳು ಅಥವಾ ಅನೇಕ ಸಂಸ್ಥೆಗಳಲ್ಲಿ ಹಂಚಲ್ಪಟ್ಟಿರುವ ಪದ್ದತಿಯೇ ಬಹುವ್ಯಕ್ತಿ ಕಾರ್ಯಾಂಗ. ಉದಾಹರಣೆಗೆ ಸ್ವಿಡ್ಜರ್‍ಲ್ಯಾಂಡ್.
7. ರಾಜಕೀಯ ಕಾರ್ಯಾಂಗ : ಜನತೆಯಿಂದ ನಿಗದಿತ ಅವಧಿಗೆ ಚುನಾಯಿತವಾದ ಕಾರ್ಯಾಂಗವನ್ನು ರಾಜಕೀಯ ಕಾರ್ಯಾಂಗವೆಂದು ಕರೆಯಲಾಗುತ್ತದೆ. ಉದಾಹರಣೆಗೆ ರಾಷ್ಟ್ರಗಳ ಮಂತ್ರಿಮಂಡಲ.
8. ಶಾಶ್ವತ ಕಾರ್ಯಾಂಗ : ನಿವೃತ್ತಿಯಾಗುವವರೆಗೂ ಅಧಿಕಾರದಲ್ಲಿದ್ದು, ಶಾಸನಗಳನ್ನು ಅನುಷ್ಠಾನಗೊಳಿಸುವ ನೌಕರಶಾಹಿ ವರ್ಗವೇ ಶಾಶ್ವತ ಕಾರ್ಯಾಂಗ. ಇವರು ರಾಜಕೀಯ ಕಾರ್ಯಾಂಗದ ನಿರ್ದೇಶನಗಳನ್ನು ಪಾಲಿಸುವ ಹಾಗೂ ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಯಾವುದೇ ಪಕ್ಷಗಳು ಸರ್ಕಾರವನ್ನು ರಚಿಸಿದರೂ ನಿರ್ದಿಷ್ಟವಾದ ಅಧಿಕಾರದ ಅವಧಿಯನ್ನು ಹೊಂದಿರುತ್ತದೆ. ಆದರೆ ಈ ನೌಕರಶಾಹಿ ವರ್ಗವು ಶಾಶ್ವತವಾಗಿದ್ದು, ರಾಜಕೀಯ ಕಾರ್ಯಾಂಗದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ.
ಒಟ್ಟಿನಲ್ಲಿ ರಾಷ್ಟ್ರದ ಸಂಪೂರ್ಣ ಆಡಳಿತದ ಜವಾಬ್ದಾರಿಯನ್ನು ಕಾರ್ಯಾಂಗವೇ ಹೊಂದಿರುತ್ತದೆ. ಆಧುನಿಕತೆ ಹಾಗೂ ವೈಜ್ಞಾನಿಕತೆ ಬೆಳೆದಂತೆ ಕಾರ್ಯಾಂಗದ ಜವಾಬ್ದಾರಿಯು ಹೆಚ್ಚುತ್ತಿದೆ. ಕಾರ್ಯಾಂಗವು ರಾಜ್ಯದ ಜೀವಾಳವಾಗಿದೆ. ಪ್ರಜಾಪ್ರಭುತ್ವದಲ್ಲಿ ಸೈದ್ದಾಂತಿಕವಾಗಿ ಶಾಸಕಾಂಗವು ಶ್ರೇಷ್ಠ ಅಂಗವಾಗಿದ್ದರೂ, ವ್ಯವಹಾರಿಕವಾಗಿ ಕಾರ್ಯಾಂಗವು ಸಮಸ್ತ ರಾಜ್ಯಾಡಳಿತವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ನ್ಯಾಯಾಂಗ
ಪೀಠಿಕೆ:
ರಾಜಕೀಯ ವ್ಯವಸ್ಥೆಯಲ್ಲಿ ನ್ಯಾಯಾಂಗವು ಪ್ರಮುಖವಾದುದಾಗಿದೆ. ಶಾಸಕಾಂಗದಿಂದ ರೂಪಿಸಲ್ಪಟ್ಟ ಕಾನೂನುಗಳನ್ನು, ಕಾರ್ಯಾಂಗದ ಆಜ್ಞೆಗಳನ್ನು ಅರ್ಥೈಸುವ ಹಾಗೂ ನ್ಯಾಯಾಡಳಿತವನ್ನು ನಿರ್ವಹಿಸುವ ಸರ್ಕಾರದ ಮೂರನೇ ಅಂಗವೇ ನ್ಯಾಯಾಂಗ. ಇದನ್ನು ರಾಷ್ಟ್ರದ ಕಾವಲುಗಾರನೆಂದು ಸಹ ಕರೆಯಲಾಗಿದೆ. ಶಿಷ್ಠರ ಪರಿಪಾಲನೆ, ದುಷ್ಟರ ಶಿಕ್ಷೆ, ಇದರ ಆದ್ಯ ಕರ್ತವ್ಯವಾಗಿದೆ. ಸುವ್ಯವಸ್ಥಿತ ರಾಷ್ಟ್ರ ನಿರ್ಮಾಣ ನ್ಯಾಯಾಂಗ ವ್ಯವಸ್ಥೆಯಿಂದ ಮಾತ್ರ ಸಾಧ್ಯ.
ಅರ್ಥ:
ನ್ಯಾಯಾಂಗ ಅಥವಾ Judiciary ಎಂಬ ಪದವು ಲ್ಯಾಟಿನ್ ಭಾಷೆಯ ಜಸ್ಟಿಶಿಯಾ (justitia) ಎಂಬ ಪದದಿಂದ ಬಂದಿದೆ.
ವ್ಯಾಖ್ಯೆ:
ಜಾನ್‍ರಾಲ್ಸ್ ರವರ ಪ್ರಕಾರ “ಪ್ರಜೆಗಳ ಹಕ್ಕುಗಳನ್ನು ನಿರ್ಧರಿಸಿ ಸಂರಕ್ಷಿಸುವ, ಅಪರಾಧಿಗಳನ್ನು ಶಿಕ್ಷಿಸುವ, ನ್ಯಾಯವನ್ನು ಎತ್ತಿಹಿಡಿಯುವ ಮತ್ತು ಮುಗ್ದರನ್ನು ದುರಾಕ್ರಮಣದ ಅಪಾಯದಿಂದ ರಕ್ಷಿಸುವ ಸರ್ಕಾರದ ಅಂಗವೇ ನ್ಯಾಯಾಂಗ”.
ಮಹತ್ವ:
`ಕತ್ತಲೆಯಿಂದ ನ್ಯಾಯದ ದೀಪವು ಹೊರಹೊರಟರೆ ಕಗ್ಗತ್ತಲೆಯ ಕ್ರೌರ್ಯ ಏನೆಂಬುವುದು ಮನವರಿಕೆಯಾಗುತ್ತದೆ’ ಎಂಬ ಲಾರ್ಡ್‍ಬ್ರೈಸ್ ರವರ ಹೇಳಿಕೆ ನ್ಯಾಯಾಂಗದ ಮಹತ್ವ ಏನೆಂಬುದನ್ನು ತಿಳಿಸುತ್ತದೆ. ಈ ಕೆಳಕಂಡ ಅಂಶಗಳು ಇದನ್ನು ದೃಡೀಕರಿಸುತ್ತವೆ.
1. ಕಾನೂನನ್ನು ರಕ್ಷಿಸುವುದು : ಮನುಷ್ಯರು ಎಷ್ಟೇ ಉತ್ತಮರಾದರೂ ಸಹ ಕಾನೂನಿನ ಭಯವಿಲ್ಲದಿದ್ದಾಗ ಸ್ವಾಭಾವಿಕವಾಗಿ ಕಾನೂನುಗಳಿಗೆ ಅವಿಧೇಯತೆಯನ್ನು ತೋರುತ್ತಾರೆ. ಇಂತಹ ಸಂದರ್ಭದಲ್ಲಿ ಕಾನೂನನ್ನು ಧಿಕ್ಕರಿಸಿದ ವ್ಯಕ್ತಿಗಳಿಗೆ ಶಿಕ್ಷೆ ನೀಡುವ ಮೂಲಕ ನ್ಯಾಯಾಂಗವು ಜನರು ತಮ್ಮ ತಮ್ಮ ಮಿತಿಗಳನ್ನು ಅರಿತುಕೊಂಡು ಸಮಾಜದಲ್ಲಿ ಬದುಕಲು ಅವಕಾಶವನ್ನು ಕಲ್ಪಿಸುತ್ತದೆ.
2. ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ರಕ್ಷಣೆ : ನ್ಯಾಯಾಂಗಕ್ಕೆ ಸರ್ಕಾರದ ಹಾಗೂ ವ್ಯಕ್ತಿಗಳ ಆಕ್ರಮಣದಿಂದ ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಇದೆ. ಆದ್ದರಿಂದ ಇದನ್ನು ಹಕ್ಕು ಮತ್ತು ಸ್ವಾತಂತ್ರ್ಯಗಳ ಸಂರಕ್ಷಕ ಎಂದೇ ವರ್ಣಿಸಲಾಗಿದೆ. ಇದು ಸರ್ಕಾರವನ್ನು ತನ್ನ ಅಧಿಕಾರ ವ್ಯಾಪ್ತಿ ಮೀರದಂತೆ ನೋಡಿಕೊಳ್ಳುತ್ತದೆ. ಈ ಮೂಲಕ ಸರ್ಕಾರದ ನಿರಂಕುಶತೆಯನ್ನು ನಿಯಂತ್ರಿಸುತ್ತದೆ. ಪ್ರಜೆಗಳ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ.
3. ನಾಗರಿಕ ಭದ್ರತೆ ಮತ್ತು ಕಲ್ಯಾಣ : ಪ್ರಜೆಗಳ ಯೋಗಕ್ಷೇಮ ಹಾಗೂ ಭದ್ರತೆಯು ಒಂದು ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯನ್ನು ಅವಲಂಬಿಸಿದೆ. ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಜನರ ಪ್ರಾಣ, ಆಸ್ತಿ ಪಾಸ್ತಿಯನ್ನು ರಕ್ಷಿಸುವ ಹೊಣೆ ನ್ಯಾಯಾಂಗದ್ದಾಗಿದೆ. ಎಲ್ಲಿ ನ್ಯಾಯಾಂಗವು ಸರಿಯಾಗಿ ಕೆಲಸ ನಿರ್ವಹಿಸುತ್ತದೆಯೋ, ಅಲ್ಲಿ ಜನರಲ್ಲಿ ಭದ್ರತಾ ಭಾವನೆ ಮೂಡುತ್ತದೆ. ಇದು ಸಮಾಜದ ಆಭಿವೃದ್ಧಿಗೂ ಸಹಕಾರಿಯಾಗುತ್ತದೆ.
4. ರಾಜ್ಯದಲ್ಲಿ ಸುವ್ಯವಸ್ಥೆಯ ಸ್ಥಾಪನೆ : ನ್ಯಾಯಾಂಗವು ರಾಜ್ಯದಲ್ಲಿ ಕಾನೂನನ್ನು ಜಾರಿಗೊಳಿಸಿ ಅದನ್ನು ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸುತ್ತದೆ. ನ್ಯಾಯಾಂಗವು ನಾಗರಿಕ ಕಾನೂನು, ಅಪರಾಧಿಕ ಕಾನೂನು ಮತ್ತು ಸಾಂವಿಧಾನಿಕ ಕಾನೂನಿನ ಬಗ್ಗೆಯೂ ವ್ಯವಹರಿಸುತ್ತದೆ. ಈ ಮೂಲಕ ರಾಜ್ಯದಲ್ಲಿ ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನೆರವಾಗುತ್ತದೆ.
5. ಸಾರ್ವಜನಿಕರಲ್ಲಿ ನಂಬಿಕೆಯನ್ನು ಮೂಡಿಸುವುದು. : ಸಂವಿಧಾನದ ಸಾಮಥ್ರ್ಯವು ನ್ಯಾಯಾಂಗದ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಅವಲಂಬಿಸಿದೆ. ಸಂವಿಧಾನದಲ್ಲಿ ಜನರ ವಿಶ್ವಾಸ ಉಳಿಯುವಂತೆ ನೋಡಿಕೊಳ್ಳುವುದು ನ್ಯಾಯಾಂಗದ ಜವಾಬ್ದಾರಿಯಾಗಿದೆ. ಇದು ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ಜೀವಂತವಾಗಿ ಇಡುತ್ತದೆ.
`ದೇಶದ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳು ದುರ್ಬಲ ಮತ್ತು ಬಡವರ್ಗದ ಪರ ಇರುವುದನ್ನು ಖಾತರಿಪಡಿಸಿಕೊಳ್ಳುವುದು ನ್ಯಾಯಾಂಗದ ಹೆಬ್ಬಯಕೆಯಾಗಿದೆ’ ಎಂಬ ಜಸ್ಟೀಸ್ ಭಗವತಿಯವರ ಹೇಳಿಕೆ ನ್ಯಾಯಾಂಗದ ಮಹತ್ವವನ್ನು ಇಮ್ಮಡಿಗೊಳಿಸುತ್ತದೆ.
ರಚನೆ :
ನ್ಯಾಯಾಂಗದ ರಚನೆಯು ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ಭಿನ್ನವಾಗಿದೆ. ಪ್ರತಿಯೊಂದು ರಾಷ್ಟ್ರವು ಆಯಾಯ ದೇಶದ ರಾಜಕೀಯ ವ್ಯವಸ್ಥೆಗೆ ಹೊಂದಿಕೊಂಡಂತೆ ನ್ಯಾಯಾಂಗವನ್ನು ರಚಿಸಿಕೊಂಡಿರುತ್ತವೆ. ಕೆಲವು ರಾಷ್ಟ್ರಗಳಲ್ಲಿ ಏಕೀಕೃತ ನ್ಯಾಯಾಂಗ ವ್ಯವಸ್ಥೆ ಇದ್ದರೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಸಂಯುಕ್ತ ನ್ಯಾಯಾಂಗ ವ್ಯವಸ್ಥೆಯನ್ನು ಕಾಣಬಹುದಾಗಿದೆ.
ಏಕೀಕೃತ ನ್ಯಾಯಾಂಗ ವ್ಯವಸ್ಥೆಯ ರಚನೆ:
ಏಕೀಕೃತ ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಷ್ಟ್ರದೊಳಗಿನ ನ್ಯಾಯಾಲಯಗಳೆಲ್ಲವೂ ಶ್ರೇಣೀಕೃತ ತತ್ವದ ಆಧಾರದ ಮೇಲೆ ರಚಿತಗೊಂಡು ಕಾರ್ಯನಿರ್ವಹಿಸುತ್ತವೆ. ಏಕೀಕೃತ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಕೇಂದ್ರಕ್ಕೆ ಸಂಬಂಧಿಸಿದ ವಿವಾದಗಳನ್ನು ಸರ್ವೋಚ್ಚ ನ್ಯಾಯಾಲಯ ಬಗೆಹರಿಸಿದರೆ, ರಾಜ್ಯಕ್ಕೆ ಸಂಬಂಧಿಸಿದ ವಿವಾದಗಳನ್ನು ರಾಜ್ಯದ ಉಚ್ಚ ನ್ಯಾಯಾಲಯಗಳು, ಜಿಲ್ಲೆಗೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯಗಳು, ತಾಲ್ಲೂಕು ಮಟ್ಟದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್‍ಗಳು ನ್ಯಾಯತೀರ್ಮಾನ ಮಾಡುತ್ತವೆ. ಇವುಗಳೆಲ್ಲವೂ ಏಕ ಆದೇಶಕ್ಕೆ ಬದ್ಧವಾಗಿರುತ್ತವೆ. ಉದಾಹರಣೆಗೆ ಭಾರತ, ಕೆನಡ.
ಅಧೀನ ನ್ಯಾಯಾಲಯಗಳು ತೀರ್ಪುಕೊಡುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಮತ್ತು ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ನಿದರ್ಶನಗಳನ್ನಾಗಿ ಇಟ್ಟುಕೊಂಡಿರುತ್ತವೆ. ಸರ್ವೋಚ್ಚ ನ್ಯಾಯಾಲಯವೇ ತೀರ್ಪುಗಳನ್ನು ನಿದರ್ಶನಗಳನ್ನಾಗಿ ಇಟ್ಟುಕೊಂಡಿರುತ್ತವೆ. ಸರ್ವೋಚ್ಚ ನ್ಯಾಯಾಲಯವೇ ಅಂತಿಮ ಮನವಿಯ ನ್ಯಾಯಾಲಯವಾಗಿರುತ್ತದೆ. ಎಲ್ಲಾ ಸ್ವರೂಪದ ಪ್ರಕರಣಗಳ ವಿಲೇವಾರಿ ಮಾಡಿ ನೀಡಿದ ತೀರ್ಪುಗಳ ಮರುಪರಿಶೀಲನೆಗೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವುದು ಇಲ್ಲಿ ಅನಿವಾರ್ಯ. ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಮರುಪರಿಶೀಲಿಸುವ ಮತ್ತ್ಯಾವ ನ್ಯಾಯಾಲಯವು ಇಲ್ಲಿ ಅಸ್ತಿತ್ವದಲ್ಲಿರುವುದಿಲ್ಲ.
ಸಂಯುಕ್ತ ನ್ಯಾಯಾಂಗ ವ್ಯವಸ್ಥೆಯ ರಚನೆ:
ಸಂಯುಕ್ತ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಪ್ರತ್ಯೇಕ ಹಾಗು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುತ್ತವೆ. ರಾಜ್ಯಗಳಲ್ಲಿನ ಉಚ್ಚ ನ್ಯಾಯಾಲಯಗಳು ರಾಜ್ಯಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತವೆ. ಉದಾಹರಣೆಗೆ ಅಮೇರಿಕ ಸಂಯುಕ್ತ ಸಂಸ್ಥಾನದ ಕೇಂದ್ರದಲ್ಲಿ ಸರ್ವೋಚ್ಚ ನ್ಯಾಯಾಲಯವಿದೆ. ಇದು ಸಂವಿಧಾನಾತ್ಮಕವಾಗಿ ರಚನೆಗೊಂಡಿರುತ್ತದೆ. ರಾಜ್ಯಗಳಲ್ಲಿನ ನ್ಯಾಯಾಲಯಗಳನ್ನು ಕೇಂದ್ರ ಶಾಸನ ಸಭೆ (ಕಾಂಗ್ರೆಸ್)ಯ ಶಾಸನಗಳನ್ವಯ ರಚಿಸಲಾಗುತ್ತದೆ. ಇವುಗಳು ರಾಜ್ಯಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ.
ಸ್ವಿಟ್ಜರ್‍ಲ್ಯಾಂಡ್ ನಲ್ಲಿಯೂ ಸಂಯುಕ್ತ ನ್ಯಾಯಾಂಗ ವ್ಯವಸ್ಥೆ ಇದೆ. ಕೇಂದ್ರ ಮತ್ತು ರಾಜ್ಯಗಳೆರಡು ಸ್ವತಂತ್ರವಾದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುತ್ತವೆ. ನ್ಯಾಯಾಧೀಶರುಗಳನ್ನು ಅಲ್ಲಿಯ ಫೆಡರಲ್ ಅಸೆಂಬ್ಲಿ ಆಯ್ಕೆ ಮಾಡುತ್ತದೆ. ಸಾಂವಿಧಾನಿಕ ಕಾನೂನಿನ ಬಗ್ಗೆಯೂ ವ್ಯವಹರಿಸುತ್ತದೆ. ಈ ಮೂಲಕ ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನೆರವಾಗುತ್ತದೆ.
ನ್ಯಾಯಾಂಗದ ಕಾರ್ಯಗಳು:
ನ್ಯಾಯಾಂಗವು ಸರ್ಕಾರದ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ನ್ಯಾಯಿಕ ಕಾರ್ಯವನ್ನು ನಿರ್ವಹಿಸುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತದೆ. ಇದರ ಕಾರ್ಯಗಳು ಇಂತಿವೆ.
1. ಕಾನೂನನ್ನು ಅರ್ಥೈಸುವುದು: ನ್ಯಾಯಾಂಗವೂ ಅಸ್ಪಷ್ಟ ಮತ್ತು ತೀರಾ ಸಂಕ್ಷಿಪ್ತ ಕಾನೂನುಗಳಿಗೆ ಅಗತ್ಯತೆಗೆ ತಕ್ಕಂತೆ ಅರ್ಥ ವಿವರಣೆ ನೀಡುತ್ತದೆ. ನಾವು ಸಂವಿಧಾನದ ಅಡಿಯಲ್ಲಿದ್ದೇವೆ, ಆದರೆ ಸಂವಿಧಾನ ನ್ಯಾಯಾಧೀಶರು ಹೇಳಿದ ಹಾಗೆ? ಎನ್ನುವ ಜಸ್ಟೀಸ್ ಹ್ಯೂಗ್ಸ್‍ರ ಹೇಳಿಕೆ ಇದನ್ನು ಸಮರ್ಥಿಸುತ್ತದೆ.
2. ನ್ಯಾಯ ತೀರ್ಮಾನ: ನ್ಯಾಯಾಂಗದ ಮುಖ್ಯ ಕಾರ್ಯವೆಂದರೆ ಆಚರಣೆಯಲ್ಲಿರುವ ಕಾನೂನಿಗೆ ಬದ್ಧವಾಗಿ ನ್ಯಾಯತೀರ್ಮಾನ ಮಾಡುವುದಾಗಿದೆ. ಇದು ವ್ಯಕ್ತಿ – ವ್ಯಕ್ತಿಗಳ ನಡುವೆ ಅಥವಾ ವ್ಯಕ್ತಿ ಮತ್ತು ಸರ್ಕಾರದ ನಡುವೆ, ರಾಜ್ಯ – ರಾಜ್ಯಗಳ ನಡುವಿನ ವಿವಾದಗಳನ್ನು ನ್ಯಾಯ ನಿರ್ಣಯದ ಮೂಲಕ ಬಗೆಹರಿಸುವ ಕಾರ್ಯವನ್ನು ನಿರ್ವಹಿಸುತ್ತದೆ.
3. ಆಜ್ಞೆಗಳನ್ನು ಹೊರಡಿಸುವುದು: ಪ್ರಜೆಗಳು ತಮ್ಮ ಹಕ್ಕುಗಳಿಗೆ ಚ್ಯುತಿ ಉಂಟಾದಾಗ ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಅವರ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯವು ಆಜ್ಞೆಗಳನ್ನು ಹೊರಡಿಸಿ ಹಕ್ಕುಗಳನ್ನು ರಕ್ಷಿಸುತ್ತದೆ. ಇವುಗಳನ್ನು `ರಿಟ್’ ಆಜ್ಞೆಗಳೆನ್ನುತ್ತಾರೆ.
4. ಸಲಹೆ ನೀಡುವುದು: ಭಾರತದಂತಹ ದೇಶದಲ್ಲಿ ಕ್ಲಿಷ್ಟ ಪ್ರಶ್ನೆಗಳು ಎದುರಾದಾಗ ನ್ಯಾಯಾಂಗವು ಸರ್ಕಾರಕ್ಕೆ ಸಲಹೆ ನೀಡುತ್ತದೆ. ಆದರೆ ಈ ಕಾರ್ಯವನ್ನು ಮಾಡಲೇಬೇಕೆಂಬ ನಿಯಮವೇನು ಇಲ್ಲ. ಇದು ಅಮೇರಿಕಾದಲ್ಲಿ ಆಚರಣೆಯಲ್ಲಿಲ್ಲ.
5. ನ್ಯಾಯಿಕ ವಿಮರ್ಶೆ: ಶಾಸಕಾಂಗದಿಂದ ರಚಿಸಲ್ಪಟ್ಟ ಶಾಸನಗಳು ಮತ್ತು ಕಾರ್ಯಾಂಗದಿಂದ ಹೊರಡಿಸಲ್ಪಟ್ಟ ಆಜ್ಞೆಗಳ ಸಂವಿಧಾನ ಬದ್ಧತೆಯನ್ನು ಪರಿಶೀಲಿಸಿ, ಅವುಗಳ ಸಿಂಧುತ್ವ ಮತ್ತು ಅಸಿಂಧುತ್ವವನ್ನು ಘೋಷಿಸುವ ಅಧಿಕಾರವೇ ನ್ಯಾಯಿಕ ವಿಮರ್ಶೆಯಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ನ್ಯಾಯಾಂಗವು ನ್ಯಾಯಿಕ ವಿಮರ್ಶೆಯ ಅಧಿಕಾರವನ್ನು ಹೊಂದಿರುತ್ತದೆ. ಉದಾಹರಣೆಗೆ ಅಮೇರಿಕ, ಭಾರತ.
ಒಟ್ಟಿನಲ್ಲಿ ನ್ಯಾಯಾಂಗವು ಸಮಗ್ರ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಪೂರ್ಣ ಹೊಣೆಯನ್ನು ಹೊಂದಿದೆ. ಇದು ಶಾಸಕಾಂಗದ ಶಾಸನಗಳು, ಕಾರ್ಯಾಂಗದ ಆಜ್ಞೆಗಳು, ಪ್ರಜೆಗಳ ಹಿತಾಸಕ್ತಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ನಿರ್ಭೀತ ನ್ಯಾಯಾಂಗವು ಸ್ವಸ್ಥ ಸಮಾಜದ ಕೈದೀವಿಗೆಯಾಗಿದೆ.
ಪ್ರಶ್ನೋತ್ತರ
* * * * * * * * * *