ನಾವು ವಾಸಿಸುವ ವಿಶ್ವವು ದ್ರವ್ಯ ಮತ್ತು ಶಕ್ತಿಯಿಂದಾಗಿದೆ ಎಂದು ಹಿಂದಿನ ಪಾಠದಲ್ಲಿ ತಿಳಿದಿರುವೆ. ಮಾನವರು ಪರಿಸರದ ಒಂದು ಭಾಗ. ಪರಿಸರದ ಅನೇಕ ಸ್ವಾಭಾವಿಕ ಸಂಗತಿಗಳನ್ನು ಮಾನವರು ಅರ್ಥಮಾಡಿಕೊಂಡಿದ್ದಾರೆ. ಪರಿಸರದಲ್ಲಿ ಕಂಡು ಬರುವ ಬದಲಾವಣೆಗಳಿಗೆ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರಕೃತಿಯಲ್ಲಿನ ವಿಸ್ಮಯಗಳಿಗೆ ವೈಜ್ಞಾನಿಕವಾಗಿ ಆಲೋಚಿಸುವುದನ್ನು ಕಲಿತಿದ್ದಾರೆ. ನಾವು ದಿನನಿತ್ಯ ಬಲ, ಕೆಲಸ, ಶಕ್ತಿ ಎಂಬ ಪದಗಳನ್ನು ಬಳಸುತ್ತಿರುತ್ತೇವೆ. ಇವು ಏನು? ಇದರ ಬಗ್ಗೆ ತಿಳಿಯೋಣ.

ಈ ಪಾಠವನ್ನು ಕಲಿತ ನಂತರ ನೀನು,
* ಕೆಲಸ ಪದದ ಅರ್ಥ ತಿಳಿಯುವೆ.
* ಕೆಲಸ ಮಾಡಲು ಶಕ್ತಿ ಅವಶ್ಯಕ ಎಂದು ತಿಳಿಯುವೆ.
* ಶಕ್ತಿಯ ವಿವಿಧ ರೂಪಗಳನ್ನು ಅರ್ಥಮಾಡಿಕೊಳ್ಳುವೆ ಮತ್ತು ವಿವಿಧ ರೂಪದ ಶಕ್ತಿಗಳ ಉಪಯೋಗಗಳಿಗೆ ಉದಾಹರಣೆ ನೀಡುವೆ.
* ಶಕ್ತಿಯು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುವುದನ್ನು ಗುರುತಿಸುವೆ.
* ಶಕ್ತಿಯ ಸಂರಕ್ಷಣೆಯ ಮಹತ್ವವನ್ನು ಗುರುತಿಸುವೆ.

ಕೆಲಸ
ನಮ್ಮ ದಿನನಿತ್ಯ ಚಟುವಟಿಕೆಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಪದ ಕೆಲಸ. ಆದರೆ ಕೆಲಸ ಎಂಬ ಪದಕ್ಕೆ ನಿಖರವಾದ ಅರ್ಥವಿದೆ.

ಮೇಲಿನ ಚಿತ್ರದಲ್ಲಿ ರಮೇಶ ಮತ್ತು ರಶೀದಾ ಇಬ್ಬರೂ ಪ್ರಯತ್ನ ಪೂರ್ವಕವಾಗಿ ಬಲ ಪ್ರಯೋಗಿಸಿ ಚಟುವಟಿಕೆ ಮಾಡುತ್ತಿದ್ದಾರೆ. ರಮೇಶ ಬಾವಿಯಿಂದ ನೀರು ಸೇದುವ ಕೆಲಸ ಪೂರೈಸಬಹುದು. ಆದರೆ ರಶೀದಾ ಎಷ್ಟು ಪ್ರಯತ್ನಿಸಿದರೂ ಗೋಡೆ ಚಲಿಸಲಾರದು.

ವಸ್ತುವಿನ ಮೇಲೆ ಪ್ರಯೋಗವಾದ ಬಲವು ಆ ವಸ್ತುವನ್ನು ಅದೇ ದಿಕ್ಕಿನಲ್ಲಿಯೇ ಚಲಿಸುವಂತೆ ಮಾಡಿದರೆ ಕೆಲಸ ಆಗಿದೆ ಎಂದು ಅರ್ಥ.

ಚಟುವಟಿಕೆ : ನೀನು ಮಾಡುವ ಯಾವುದಾದರೂ 5 ಕೆಲಸಗಳ ಹೆಸರು ಬರೆ.
(ಉದಾಹರಣೆಯನ್ನು ಗಮನಿಸು) * ನೀರು ತರುವುದು.

ಮೇಲಿನ ಎಲ್ಲಾ ಕೆಲಸಗಳನ್ನು ನೀನು ಬಲ ಪ್ರಯೋಗಿಸಿ ಮಾಡಿರುವೆ. ಒಂದು ವಸ್ತುವಿನ ಮೇಲೆ ಬಲ ಪ್ರಯೋಗವಾದರೆ, ಅದು ವಸ್ತುವಿನ ಸ್ಥಾನಪಲ್ಲಟ ಮಾಡುತ್ತದೆ. ಕೆಲಸವು ವಸ್ತುವಿನ ಮೇಲೆ ಪ್ರಯೋಗವಾಗುವ ಬಲದ ಪ್ರಮಾಣವನ್ನು ಅವಲಂಬಿಸುತ್ತದೆ.

ಚಟುವಟಿಕೆ : ನೀನು ಈ ದಿನ ಮಾಡಿದ 3 ಕೆಲಸಗಳ ಹೆಸರು ಬರೆ.

ಮೇಲಿನ ಚಿತ್ರದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಲಾಗುತ್ತಿದೆ ಎಂಬುದನ್ನು ಕೆಳಗೆ ಕೊಟ್ಟಿರುವ ಜಾಗದಲ್ಲಿ ಬರೆ. —————

ಚಟುವಟಿಕೆ : ಶಿಕ್ಷಕರು ವಿದ್ಯಾರ್ಥಿಗಳನ್ನು ಗುಂಪು ಮಾಡಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವುದು.
ಉದಾಹರಣೆಗೆ,

  • ಗಿಡಗಳಿಗೆ ನೀರು ಹಾಕುವುದು.
  • ಚಿತ್ರ ಬಿಡಿಸುವುದು.
  • ತರಗತಿಯ ಬೆಂಚುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು.

ಆಲೋಚಿಸು : ಮೇಲ್ಕಂಡ ಚಟುವಟಿಕೆಗಳನ್ನು ಕೆಲಸ ಎನ್ನುತ್ತೇವೆ. ಏಕೆ?

ನಾವು ದಿನನಿತ್ಯ ನಮ್ಮ ಅವಶ್ಯಕತೆಗಳಿಗಾಗಿ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿರುತ್ತೇವೆ. ಈ ಚಟುವಟಿಕೆಗಳನ್ನು ಕೆಲಸ ಎನ್ನುತ್ತೇವೆ. ಕೆಲಸ ಮಾಡಲು ಶಕ್ತಿಯನ್ನು ಬಳಸುತ್ತೇವೆ. ಹೆಚ್ಚು ಕೆಲಸ ಮಾಡಿದಾಗ ನಮಗೆ ಆಯಾಸವಾಗುತ್ತದೆ. ಶ್ರಮ ಜೀವಿಗಳು ಹೆಚ್ಚಿನ ಶಕ್ತಿ ಉಪಯೋಗಿಸಿ ಕೆಲಸ ಮಾಡುತ್ತಾರೆ.

ಆಲೋಚಿಸು : ನೀನೊಬ್ಬನೇ ನಿನ್ನ ತರಗತಿ ಕೋಣೆಯಲ್ಲಿರುವ ಮರದ ಮೇಜನ್ನು ನಿನ್ನ ಎರಡು ಕೈಗಳಿಂದ ಎತ್ತಬಲ್ಲೆಯಾ?

ನಮಗೆ ಶಕ್ತಿಯಿದ್ದರೆ ಮಾತ್ರ ಕೆಲಸ ಮಾಡುವ ಸಾಮಥ್ರ್ಯವಿರುತ್ತದೆ. ಸಣ್ಣ ಪುಟ್ಟ ಕೆಲಸಗಳಿಗೆ ಕಡಿಮೆ ಶಕ್ತಿ, ದೊಡ್ಡ ಕೆಲಸಗಳಿಗೆ ಹೆಚ್ಚು ಶಕ್ತಿ ಬೇಕಾಗುತ್ತದೆ.

ಚಟುವಟಿಕೆ : ನಿನ್ನ ಹಾಗೂ ನಿನ್ನ ಸಹಪಾಠಿಯ ಪುಸ್ತಕದ ಬ್ಯಾಗನ್ನು ಮೇಲೆತ್ತಲು ಪ್ರಯತ್ನಿಸು. ಎಷ್ಟು ಸ್ನೇಹಿತರ ಪುಸ್ತಕ ಬ್ಯಾಗ್‍ಗಳನ್ನು ಒಟ್ಟಾಗಿ ನೀನು ಮೇಲೆ ಎತ್ತಬಲ್ಲೆ?

ಪ್ರತೀ ಕೆಲಸ ಮಾಡಲು ನವiಗೆ ಬೇಕಾಗುವ ಶಕ್ತಿಯನ್ನು ನಾವು ಆಹಾರ ಸೇವನೆಯಿಂದ ಪಡೆಯುತ್ತೇವೆ. ಪರಿಸರದಲ್ಲಿ ಹಲವು ಕೆಲಸಗಳಿಗೆ ಬೇಕಾಗುವ ಶಕ್ತಿಯನ್ನು ವಿವಿಧ ಮೂಲಗಳಿಂದ ಪಡೆಯುತ್ತೇವೆ.

ಉದಾಹರಣೆಗೆ,
ದೈಹಿಕವಾದ ಶಕ್ತಿಯಿಂದ ಭಾರವನ್ನು ಹೊರುತ್ತೇವೆ. ಇಂಧನ ಶಕ್ತಿಯಿಂದ ವಾಹನ ಚಲಿಸುತ್ತದೆ. ಸಸ್ಯಗಳು ಬೆಳೆಯಲು ಸೌರಶಕ್ತಿಯ ಅಗತ್ಯವಿದೆ. ಅಂದರೆ ಪ್ರತಿ ಕೆಲಸವು ಅದಕ್ಕೆ ಬೇಕಾದ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿದೆ. ಕೆಲಸ ಅಗತ್ಯ ಚಟುವಟಿಕೆಯಾದರೆ ಶಕ್ತಿ ಕೆಲಸವನ್ನು ಪೂರೈಸುವ ಅವಶ್ಯಕತೆಯಾಗಿವೆ.

ಒಂದು ವಸ್ತುವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವಂತೆ ಮಾಡುವುದನ್ನು ಕೂಡ ಕೆಲಸ ಎಂದು ಹೇಳಬಹುದು. ಯಾವುದೇ ವಸ್ತುವನ್ನು ಒಂದು ಸ್ಥಳದಿಂದ ಬೇರೆಡೆಗೆ ಸಾಗಿಸಲು ಶಕ್ತಿ ಬೇಕಾಗುತ್ತದೆ.

ಆಲೋಚಿಸು : ಶಕ್ತಿಯನ್ನು ಬಳಸದೆ ಮಾಡಬಹುದಾದ ಕೆಲಸಗಳಿವೆಯಾ?

ಆಕಾಶದಲ್ಲಿ ಹಾರುವ ವಿಮಾನ, ಭೂಮಿಯ ಮೇಲೆ ಚಲಿಸುವ ವಾಹನ, ನೀರಿನಲ್ಲಿ ತೇಲುವ ದೋಣಿ, ಹಡಗು, ದಿನನಿತ್ಯದ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವ ವಿದ್ಯುತ್ ಸಾಧನಗಳಲ್ಲಿ ಒಂದಲ್ಲಾ ಒಂದು ರೀತಿಯ ಶಕ್ತಿಯು ಬಳಕೆಯಾಗುತ್ತದೆ.

ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ ಶಕ್ತಿಯ ವಿವಿಧ ರೂಪಗಳನ್ನು ಗಮನಿಸು.

ಮಾನವರಷ್ಟೇ ಅಲ್ಲದೆ ಪರಿಸರದಲ್ಲಿಯೂ ಪ್ರಕೃತಿ ಸಹಜವಾದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ಎಲ್ಲಾ ಚಟುವಟಿಕೆಗಳು ನಡೆಯಬೇಕಾದ್ದಲ್ಲಿ ಶಕ್ತಿ ಅವಶ್ಯವಾಗಿ ಬೇಕು. ಇಲ್ಲಿ ಅಗತ್ಯವಾದ ಶಕ್ತಿ ಯಾವುದು ಎಂದು ತಿಳಿಯೋಣ.

ವಿಧವಿಧವಾದ ಕೆಲಸಗಳು ಅದಕ್ಕನುಗುಣವಾದ ಶಕ್ತಿಯನ್ನು ಅವಲಂಬಿಸಿವೆ. ಪರಿಸರದಲ್ಲಿ ಪ್ರಕೃತಿ ಸಹಜವಾದ ಶಕ್ತಿಯಿದೆ. ಸೂರ್ಯ, ಗಾಳಿ, ನೀರು, ಕಲ್ಲಿದ್ದಲು ಇತ್ಯಾದಿಗಳು ಪರಿಸರದಲ್ಲಾಗುವ ದಿನನಿತ್ಯದ ಚಟುವಟಿಕೆಗಳಿಗೆ ಬೇಕಾದ ಶಕ್ತಿಯನ್ನು ಒದಗಿಸುತ್ತವೆ. ಈಗ ನಾವು ಶಕ್ತಿಯ ವಿವಿಧ ರೂಪಗಳ ಬಗ್ಗೆ ತಿಳಿಯೋಣ.

ಓಡಾಡುವ, ಏರುವ, ಇಳಿಯುವ, ವಸ್ತುಗಳನ್ನು ಎಳೆಯುವ, ನೂಕುವ – ಇಂತಹ ಚಟುವಟಿಕೆಗಳಿಗೆ ಸ್ನಾಯು ಶಕ್ತಿ ಅವಶ್ಯ. ಇದು ನಮ್ಮ ಶರೀರದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಯಿಂದ ಉಂಟಾಗುವ ಶಕ್ತಿ.

ಆಲೋಚಿಸು : ಪೌಷ್ಟಿಕ ಆಹಾರ ಸೇವಿಸುವಂತೆ ಹಿರಿಯರು ಒತ್ತಾಯಿಸುವರು. ಏಕಿರಬಹುದು?

ಸ್ನಾಯು ಶಕ್ತಿ ಬಳಸಿ ನೀನು ಮಾಡುವ ಯಾವುದಾದರೂ 4 ಕೆಲಸಗಳನ್ನು ಬರೆ.

ಓದಿ – ತಿಳಿ : ಕ್ರಮವಾದ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಸ್ನಾಯು ಶಕ್ತಿಯನ್ನು ಹೆಚ್ಚಿಸಬಹುದು.

ಒಂದು ವಸ್ತುವು ತನ್ನ ಸ್ಥಾನದಿಂದ ಪಡೆಯುವ ಶಕ್ತಿಯನ್ನು ಪ್ರಚ್ಛನ್ನಶಕ್ತಿ ಎಂದೂ, ತನ್ನ ಚಲನೆಯಿಂದ ಪಡೆಯುವ ಶಕ್ತಿಯನ್ನು ಚಲನಶಕ್ತಿ ಎಂದೂ ಕರೆಯುತ್ತಾರೆ. ಪ್ರಚ್ಛನ್ನ ಶಕ್ತಿ ಮತ್ತು ಚಲನ ಶಕ್ತಿಗಳ ಒಟ್ಟು ಮೊತ್ತವನ್ನು ಯಾಂತ್ರಿಕ ಶಕ್ತಿ ಎಂದು ಕರೆಯುತ್ತಾರೆ.

ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರು ಪ್ರಚ್ಛನ್ನ ಶಕ್ತಿಯನ್ನು ಹೊಂದಿರುತ್ತದೆ. ಆ ನೀರನ್ನು ಅಣೆಕಟ್ಟಿನ ಬಾಗಿಲುಗಳ ಮೂಲಕ ಹರಿಯಬಿಟ್ಟಾಗ ಪ್ರಚ್ಛನ್ನ ಶಕ್ತಿಯು ಚಲನ ಶಕ್ತಿಯಾಗಿ ಬದಲಾಗುತ್ತದೆ.

ಯಾಂತ್ರಿಕ ಶಕ್ತಿ ಬಳಸಿ ನಿನ್ನ ಮನೆಯಲ್ಲಿ ಮಾಡುವ ಯಾವುದಾದರೂ 2 ಕೆಲಸಗಳನ್ನು ಬರೆ.

——————————————–

ಉರುವಲು, ಇಂಧನ, ಸೂರ್ಯ ಇನ್ನಿತರ ಶಕ್ತಿಗಳಿಂದ ಶಾಖವನ್ನು ಪಡೆದು ನಮ್ಮ ದಿನ ನಿತ್ಯದ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ.

ನಿನ್ನ ಮನೆಯಲ್ಲಿ ಉಷ್ಣದ ಸಹಾಯದಿಂದ ಮಾಡುವ ಯಾವುದಾದರೂ 2 ಕೆಲಸಗಳನ್ನು ಇಲ್ಲಿ ಬರೆ.

——————————-

ಚಟುವಟಿಕೆ : ನಿನ್ನ ಅಂಗೈಗಳನ್ನು ಒಂದಕ್ಕೊಂದು ಹಲವು ಬಾರಿ ಉಜ್ಜು. ನಂತರ ಅಂಗೈಯನ್ನು ಮುಖಕ್ಕೆ ತಾಗಿಸು. ತಂಪಾಯಿತೆ? ಬಿಸಿಯಾಯಿತೆ?

ಇಲ್ಲಿ ಸ್ನಾಯುಶಕ್ತಿ ಉಷ್ಣಶಕ್ತಿಯಾಗಿ ಬದಲಾವಣೆಯಾಯಿತು.

ಉರುವಲು, ಅನಿಲ, ಸೀಮೆಎಣ್ಣೆ, ಇತ್ಯಾದಿಗಳ ಉಷ್ಣಶಕ್ತಿಯಿಂದ ನಾವು ಅಡುಗೆ, ನೀರು ಕಾಯಿಸುವ ಮುಂತಾದ ಕೆಲಸಗಳನ್ನು ಮಾಡುತ್ತೇವೆ.

ಚಳಿಗಾಲದಲ್ಲಿ ಘನೀಕೃತ ಎಣ್ಣೆಯ ಪಾತ್ರೆಗಳನ್ನು ಒಲೆಯ ಉರಿ ಇಲ್ಲವೆ ಸೂರ್ಯನ ಬಿಸಿಲಿಗೆ ಇಡುತ್ತಾರೆ. ಏಕಿರಬಹುದು? ಆಲೋಚಿಸಿ, ಬರೆ.

——————————————–

ಆಲೋಚಿಸು : ಅಡುಗೆ ತಯಾರಿಸುವಾಗ ಉರಿಯುವ ಒಲೆಯ ಮೇಲಿಟ್ಟ ಪಾತ್ರೆಯ ಮುಚ್ಚಳ ಅಲುಗಾಡಲು ಕಾರಣ ಏನಿರಬಹುದು?

ಉರುವಲು ಉರಿಯುವುದರಿಂದ ಉಷ್ಣ ಬಿಡುಗಡೆಯಾಗುತ್ತದೆ. ವಿದ್ಯುಚ್ಛಕ್ತಿಯ ಉತ್ಪಾದನೆ ಮಾಡಲು ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲನ್ನು ಉರುವಲನ್ನಾಗಿ ಬಳಸಲಾಗುತ್ತದೆ.

ಓದಿ-ತಿಳಿ : ರಾಯಚೂರಿನಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗಿದೆ.

ಆಲೋಚಿಸು : ಇದ್ದಿಲಿನ ಇಸ್ತ್ರಿಪೆಟ್ಟಿಗೆ ಬಳಸುವಾಗ ಯಾವುದು ಉಷ್ಣಶಕ್ತಿಯಾಗುತ್ತದೆ?

ಭೂಮಿಯ ಮೇಲಿರುವ ಎಲ್ಲಾ ಶಕ್ತಿಗಳ ಮೂಲ ಆಕರ ಸೂರ್ಯ. ಸೂರ್ಯನಿಂದ ಪಡೆಯುವ ಶಕ್ತಿಯನ್ನು ಸೌರಶಕ್ತಿ ಎನ್ನುತ್ತಾರೆ. ಜೀವಿಗಳು ಬದುಕಲು ಸೂರ್ಯನ ಶಕ್ತಿಯನ್ನು ಅವಲಂಬಿಸಿವೆ. ಸಸ್ಯಗಳು ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ತಮ್ಮ ಆಹಾರವನ್ನು ತಯಾರಿಸುತ್ತವೆ. ಈ ಪ್ರಕ್ರಿಯೆಯನ್ನು ದ್ಯುತಿ ಸಂಶ್ಲೇಷಣೆ ಎಂದು ಕರೆಯಲಾಗುವುದು.

ಆಲೋಚಿಸು : ಒಂದು ವೇಳೆ ಸೂರ್ಯನ ಬೆಳಕು ಇಲ್ಲದಿದ್ದರೆ ಏನಾಗುತ್ತಿತ್ತು?

ಚಟುವಟಿಕೆ : ಗೆಳೆಯರು ಇಲ್ಲವೆ ಹಿರಿಯರೊಂದಿಗೆ ಚರ್ಚಿಸಿ, ಬರೆ.

  • ಬೇಸಿಗೆ ಕಾಲದಲ್ಲಿ ಒಣ ಹಾಕಿದ ಬಟ್ಟೆಗಳು ಬಹಳ ಬೇಗ ಒಣಗುತ್ತವೆ. ಹೇಗೆ?
  • ಬೇಸಿಗೆ ಕಾಲದಲ್ಲಿ ಕೆರೆ ಬಾವಿಗಳ ನೀರು ಕಡಿಮೆಯಾಗುತ್ತದೆ. ಏಕೆ?
  • ವಿಪರೀತ ಚಳಿ ಇರುವಾಗ ಜನರು ಸೂರ್ಯನ ಬೆಳಕಿಗಾಗಿ ಕಾಯುತ್ತಾರೆ. ಏಕೆ?
  • ಸೌರ ಜಲತಾಪಕವನ್ನು ಏಕೆ ಬಳಸುತ್ತಾರೆ?

ಈ ಚಿತ್ರಗಳನ್ನು ಗಮನಿಸು. ಸೌರಶಕ್ತಿಯನ್ನು ಎಲ್ಲಿ ಬಳಸಲಾಗಿದೆ ಎಂದು ಗುರುತಿಸಿ ಹೇಳು.

ಚಟುವಟಿಕೆ : ನೀನು ಬಹಳ ಹತ್ತಿರದಿಂದ ನೋಡಿರುವ ಅಥವಾ ಬಳಸಿರುವ ಸೌರಶಕ್ತಿಯ ಸಾಧನಗಳ ಹೆಸರು ಬರೆ.

ಚಟುವಟಿಕೆ :

  • ಸೌರಶಕ್ತಿ ಸಾಧನಗಳ ಚಿತ್ರಗಳನ್ನು ಸಂಗ್ರಹಿಸಿ ಒಂದು ಚಾರ್ಟ್ ಸಿದ್ಧಪಡಿಸು.
  • ಸೌರಶಕ್ತಿಯ ಉಪಯೋಗದ ಬಗ್ಗೆ ಮಾಹಿತಿ ಸಂಗ್ರಹಿಸಿ, ಕವನ ಬರೆ ಅಥವಾ ಅದರ ಬಗ್ಗೆ ಮಾತನಾಡು.

ಸೌರ ಶಕ್ತಿಯನ್ನು ವಿವಿಧ ಕೆಲಸಗಳಿಗೆ ಬಳಸುವುದರಿಂದ ವಿದ್ಯುಚ್ಛಕ್ತಿಯ ಬಳಕೆ ಕಡಿಮೆ ಮಾಡಬಹುದು ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು.

ವಾಯುವು ಶಕ್ತಿಯ ಆಕರಗಳಲ್ಲೊಂದು. ಚಲಿಸುವ ವಾಯುವು (ಗಾಳಿ) ತನ್ನಲ್ಲಿ ಶಕ್ತಿಯನ್ನು ಹೊಂದಿರುತ್ತದೆ. ಇದನ್ನು ಪವನ ಶಕ್ತಿ (ಗಾಳಿ ಶಕ್ತಿ) ಎನ್ನುತ್ತಾರೆ.

ಪುರಾತನ ಕಾಲದಿಂದಲೂ ಬೀಸುವ ಗಾಳಿಯ ಸಹಾಯದಿಂದ ಸಾಗರದಲ್ಲಿ ದೋಣಿ ಮತ್ತು ಹಡಗುಗಳನ್ನು ಚಲಿಸುವಂತೆ ಮಾಡಲಾಗುತ್ತಿತ್ತು.

ವೇಗವಾಗಿ ಚಲಿಸುವ ಗಾಳಿಯ ಸಹಾಯದಿಂದ ಗಾಳಿ ಗಿರಣಿ ತಿರುಗುತ್ತದೆ. ಇಲ್ಲಿ ಉಂಟಾಗುವ ಪವನಶಕ್ತಿಯಿಂದ ತಿರುಗುವ ಯಂತ್ರಗಳು (ಟರ್ಬೈನ್) ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ನೆರವಾಗುತ್ತವೆ.

ಗೆಳೆಯರೊಂದಿಗೆ / ಹಿರಿಯರೊಂದಿಗೆ ಚರ್ಚಿಸಿ ಬರೆ.

ಪವನ ಶಕ್ತಿಯಿಂದ ಮಾಡುವಂತಹ ಇನ್ನಿತರ ಕೆಲಸಗಳನ್ನು ತಿಳಿದು ಬರೆ.
ಉದಾಹರಣೆ : ಗಾಳಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ

ಗಾಳಿಯಲ್ಲಿ ಅಗಾಧ ಶಕ್ತಿ ಇದೆ. ಗಾಳಿಯ ಶಕ್ತಿ ಬಳಸಿ ಹಲವು ಕೆಲಸ ಮಾಡಲು ಸಾಧ್ಯವಿದೆ. ಗಾಳಿಯನ್ನು ಶಕ್ತಿಯಾಗಿ ಉಪಯೋಗಿಸುತ್ತೇವೆ. ಗಾಳಿಯಿಂದ ಶಕ್ತಿಯನ್ನು ಬಳಸಿದಂತೆ ಗಾಳಿಯಿಂದಾಗುವ ಅನಾಹುತಗಳಿಂದ ಸಂರಕ್ಷಿಸಿಕೊಳ್ಳಲು ಕಲಿಯಬೇಕು.

ಆಲೋಚಿಸು : ಸುಂಟರಗಾಳಿ ಅಥವಾ ಬಿರುಗಾಳಿಯಿಂದ ಆಗುವ ದುಷ್ಪರಿಣಾಮಗಳೇನು? ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ, ನಿನ್ನ ಗೆಳೆಯ / ಗೆಳತಿಯರೊಂದಿಗೆ ಚರ್ಚಿಸು.

ಹರಿಯುವ ನೀರು ಶಕ್ತಿಯ ಆಕರ. ಹರಿಯುವ ನೀರನ್ನು ಶಕ್ತಿಯ ಮೂಲದಂತೆ ಬಳಸಬೇಕಾದರೆ ಅದನ್ನು ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟುಗಳಲ್ಲಿ ಸಂಗ್ರಹಿಸಬೇಕು (ಪ್ರಚ್ಛನ್ನಶಕ್ತಿ). ಸಂಗ್ರಹಿಸಿದ ನೀರು ಎತ್ತರ ಪ್ರದೇಶದಿಂದ ರಭಸವಾಗಿ ಬೀಳುವಂತೆ ಮಾಡಬೇಕು. ಹಾಗೆ ರಭಸವಾಗಿ ಬೀಳುವ ನೀರು ಅಧಿಕ ಬಲದಿಂದ ಟರ್ಬೈನ್‍ಗಳ ಮೇಲೆ ಬಿದ್ದು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತದೆ. ಇಂತಹ ಜಲವಿದ್ಯುದಾಗರಗಳನ್ನು ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳು ಎನ್ನುವರು.

ನಿನಗೆ ತಿಳಿದಿರುವ ಅಣೆಕಟ್ಟುಗಳ ಹೆಸರನ್ನು ಬರೆ. ಅದರಲ್ಲಿ ನೀನು ಭೇಟಿ ನೀಡಿದ ಅಣೆಕಟ್ಟು ಇದ್ದರೆ ಸರಿ ಗುರುತು ಹಾಕು.

ಕರ್ನಾಟಕದ ಕೆಲವು ನದಿಗಳಿಗೆ ಅಡ್ಡವಾಗಿ ಕಟ್ಟಿದ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಕೇಂದ್ರಗಳ ಹೆಸರನ್ನು ಗ್ರಂಥಾಲಯದ ಪುಸ್ತಕಗಳ ನೆರವಿನಿಂದ ಪಟ್ಟಿಮಾಡು.

ಅಣೆಕಟ್ಟುಗಳುಜಲವಿದ್ಯುತ್ ಕೇಂದ್ರಗಳು

ನೀರಿನ ಶಕ್ತಿಯನ್ನು ಬಳಸಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿದ ಮಾನವ ಪ್ರಯತ್ನ ಮೆಚ್ಚತಕ್ಕದ್ದು .

ನೀರಿನ ಶಕ್ತಿ ಬಳಸಿ ಮಾಡುವ ಕೆಲಸಗಳನ್ನು ಹೆಸರಿಸು.

——————————————

ಓದಿ ತಿಳಿ : ಸಾಗರದ ಅಲೆಗಳಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಭರತಶಕ್ತಿ ಎನ್ನುವರು.

ನೈಸರ್ಗಿಕ ಸಂಪನ್ಮೂಲವಾದ ನೀರು ಅಮೂಲ್ಯವಾಗಿದ್ದು, ಅದನ್ನು ಮಿತವಾಗಿ ಬಳಸಬೇಕು. ಅಷ್ಟೇ ಅಲ್ಲದೆ ಅಧಿಕ ವೆಚ್ಚ ಹಾಗೂ ಶ್ರಮದಿಂದ ಉತ್ಪಾದಿಸಿರುವ ವಿದ್ಯುಚ್ಛಕ್ತಿಯನ್ನು ಕೂಡಾ ಮಿತವಾಗಿ ಬಳಸಿ ಶಕ್ತಿಯ ಸಂರಕ್ಷಣೆ ಮಾಡಬೇಕು.

ನೀನು ವಿದ್ಯುತ್‍ಅನ್ನು ಉಳಿಸುವ 2 ಸಂದರ್ಭಗಳನ್ನು ಬರೆ.

————————

ಆಲೋಚಿಸು : ವಿದ್ಯುಚ್ಛಕ್ತಿ ಇಲ್ಲದೆ ಇದ್ದರೆ ಏನಾಗುತ್ತಿತ್ತು ?

ಓದಿ-ತಿಳಿ : ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಜಲವಿದ್ಯುದಾಗಾರಗಳನ್ನು ಜಲವಿದ್ಯುತ್ ಉತ್ಪಾದನಾ ಕೇಂದ್ರಗಳು ಎನ್ನುವರು.

ಹೀಗೆ ಮಾಡು : (ಹಿರಿಯರ ಸಹಾಯ ಪಡೆ)

* ಮಳೆಗಾಲದಲ್ಲಿ ನಿನ್ನ ಕೆಲವು ಕೆಲಸಗಳಿಗೆ ಸಂಗ್ರಹಿಸಿದ ಮಳೆ ನೀರನ್ನೇ ಬಳಸು.

* ಮಳೆಕೊಯ್ಲಿಗೆ ಅವಕಾಶ ಇದ್ದರೆ ಸದುಪಯೋಗ ಮಾಡು.

* ಇಂಗು ಗುಂಡಿ ಮಾಡಿ ಮಳೆ ನೀರಿನ ಸದುಪಯೋಗ ಮಾಡು.

ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನೆಲ್ಲಾ ದಿನ ನಿತ್ಯದ ಕೆಲಸಗಳನ್ನು ವಿದ್ಯುತ್‍ನ ಸಹಾಯದಿಂದ ಸುಲಭವಾಗಿ ಮಾಡುತ್ತಾನೆ. ವಿದ್ಯುತ್ ಬಳಕೆಯ ಮೂಲಕ ಸ್ವಲ್ಪ ಸಮಯದಲ್ಲಿ ಅಧಿಕ ಕೆಲಸ ಸಾಧ್ಯವಾಗುತ್ತದೆ.

ನಿನ್ನ ಮನೆಯಲ್ಲಿ ವಿದ್ಯುತ್ ಸಾಧನ ಬಳಸಿ ಮಾಡುವ ಯಾವುದಾದರೂ 4 ಕೆಲಸಗಳನ್ನು ಬರೆ.

ವಿದ್ಯುತ್ ಸಾಧನಕೆಲಸ

ಇಲ್ಲಿ ಕೊಟ್ಟಿರುವ ವಿದ್ಯುತ್ ಸಾಧನಗಳನ್ನು ಗಮನಿಸು.

ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಮನೆ ಹಾಗೂ ಇತರ ಸ್ಥಳಗಳಿಗೆ ವಿದ್ಯುತ್ ಸರಬರಾಜಾಗುತ್ತದೆ. ವಿದ್ಯುತ್ ಸಾಧನಗಳನ್ನು ಬಳಸುವಾಗ ಅಪಾಯವಾಗದಂತೆ ಎಚ್ಚರ ವಹಿಸಬೇಕು.

ಕೃಷಿ ತ್ಯಾಜ್ಯಗಳು, ಸಸ್ಯದ ಅವಶೇಷಗಳು ಮತ್ತು ಪ್ರಾಣಿಗಳ ಸಗಣಿ ಇವೇ ಮೊದಲಾದವುಗಳನ್ನು ವಾಯುವಿನ ಸಂಪರ್ಕವಿಲ್ಲದಂತೆ ಕೊಳೆಯಿಸಿದಾಗ ಉಂಟಾಗುವ ಅನಿಲವನ್ನು ಜೈವಿಕ ಅನಿಲ ಎನ್ನುತ್ತಾರೆ. ಇದನ್ನು ಅಡುಗೆ ಮಾಡಲು ಉಪಯೋಗಿಸುತ್ತಾರೆ. ಜೈವಿಕ ಅನಿಲದಿಂದ ಸಿಗುವ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸಿ ಹಲವು ಕೆಲಸಗಳಿಗೆ ಬಳಸಬಹುದು.

ನೀನು ತಿಳಿದಿರುವಂತೆ ಜೈವಿಕ ಶಕ್ತಿಯಿಂದ ಯಾವ ಯಾವ ಕೆಲಸ ಮಾಡಬಹುದು? ಇಲ್ಲಿ ಬರೆ.

———————

ಚಟುವಟಿಕೆ : ಬಳಸಿ ಬಿಸಾಡುವ ಜೈವಿಕ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸಲು ನಿನಗೇನಾದರೂ ತಿಳಿದಿದ್ದರೆ ಗೆಳೆಯರೊಂದಿಗೆ ಸೇರಿ ಸಿದ್ದಪಡಿಸು.

ಕೃಷಿ ತ್ಯಾಜ್ಯಗಳಿಂದ ತಯಾರಿಸಲ್ಪಟ್ಟ ಜೈವಿಕ ಶಕ್ತಿಯು ಮಾನವನಿಗೆ ಆರೋಗ್ಯಕರವಾದ ಪರಿಸರ ನಿರ್ಮಿಸುವಲ್ಲಿ ಸಹಕಾರಿಯಾಗಿದೆ.

ವಸ್ತುಗಳ ನಡುವೆ ರಾಸಾಯನಿಕ ಕ್ರಿಯೆ ನಡೆದು ಶಕ್ತಿ ಉಂಟಾಗುತ್ತದೆ.
ಉದಾಹರಣೆ : ವಿದ್ಯುತ್ ಕೋಶಗಳಲ್ಲಿ ರಾಸಾಯನಿಕ ಕ್ರಿಯೆ ನಡೆದು ವಿದ್ಯುತ್ ಉಂಟಾಗುತ್ತದೆ.

ಪರಿಸರದಲ್ಲಿ ದೊರೆಯುವ ಇನ್ನೊಂದು ಶಕ್ತಿ ಇಂಧನ ಶಕ್ತಿಯಾಗಿದೆ. ಇಂಧನವೆಂದರೆ, ಉರಿಯಲು ಸಹಾಯವಾಗುವ ಹಾಗೂ ಉಷ್ಣ ಮತ್ತು ಸಾಮಾನ್ಯವಾಗಿ ಬೆಳಕನ್ನು ಬಿಡುಗಡೆ ಮಾಡುವ ನೈಸರ್ಗಿಕ ಸಂಪನ್ಮೂಲ. ಇದನ್ನು ವಿದ್ಯುತ್‍ ಶಕ್ತಿ, ಉಷ್ಣ ಶಕ್ತಿ ಮತ್ತು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಬಹುದು.

ಚಟುವಟಿಕೆ : ಈ ಕೆಳಗಿನವುಗಳಲ್ಲಿ ಬಳಸುವ ಇಂಧನಗಳನ್ನು ಶಿಕ್ಷಕರು/ ಹಿರಿಯರಿಂದ ತಿಳಿದು ಆಯಾ ಚಿತ್ರದ ಕೆಳಗೆ ಬರೆ.

ನಿನ್ನ ಮನೆಯಲ್ಲಿ ಇಂಧನ ಬಳಸಿ ಉಪಯೋಗಿಸುವ ಸಾಧನಗಳೇನಾದರೂ ಇದ್ದರೆ ಅವುಗಳನ್ನು ಹೆಸರಿಸು.

————————–

ಓದಿ ತಿಳಿ : ವಿವಿಧ ಖನಿಜಗಳು ಮತ್ತು ಅವುಗಳ ಉತ್ಪನ್ನಗಳೇ ಇಂಧನಗಳು. ಇವು ಭೂಮಿಯಿಂದ ದೊರೆಯುತ್ತವೆ. ಇವು ಕಾಲ ಕ್ರಮೇಣ ಮುಗಿದು ಹೋಗುತ್ತವೆ. ಮತ್ತೆ ಉತ್ಪತ್ತಿಯಾಗಲು ಅಧಿಕ ವರ್ಷಗಳೇ ಬೇಕಾಗುತ್ತದೆ.

ಸೌದೆ ಸಹ ಒಂದು ಇಂಧನ. ಅದು ಉರಿಯುವುದರಿಂದ ಉಷ್ಣ ಬಿಡುಗಡೆಯಾಗಿ ಉಷ್ಣದ ಶಕ್ತಿಯಿಂದ ಅಡುಗೆ ಹಾಗೂ ಇನ್ನಿತರ ಕೆಲಸ ಮಾಡಲು ಸಾಧ್ಯ.

ಆಲೋಚಿಸು : ಇಂಧನವನ್ನು ಅನಗತ್ಯವಾಗಿ ಬಳಸುವ ಸಂದರ್ಭಗಳಿದ್ದರೆ ಇಲ್ಲಿ ಬರೆ.

————————-

ನಿಸರ್ಗ ಸಂಪತ್ತಾದ ಇಂಧನವನ್ನು ಮಿತವಾಗಿ ಬಳಸಿ ಪರಿಸರದ ಸಂರಕ್ಷಣೆ ಮಾಡಬೇಕು. ಸಾಂಪ್ರದಾಯಿಕ ಇಂಧನದ ಬದಲಿಗೆ ಸೌರಶಕ್ತಿಯನ್ನು ಹೆಚ್ಚಾಗಿ ಬಳಸಬೇಕು.

ಚಟುವಟಿಕೆ : ಇಂಧನದಿಂದಾಗುವ ಒಳಿತು, ಕೆಡುಕುಗಳ ಬಗ್ಗೆ ವಿಷಯ ಸಂಗ್ರಹಿಸಿ, ತರಗತಿಯಲ್ಲಿ ಚರ್ಚಾ ಸಭೆ ನಡೆಸು.

ಪರಿಸರದಲ್ಲಿ ದೊರೆಯುವ ಅನೇಕ ಮೂಲಗಳಿಂದಲೇ ನಮಗೆ ಶಕ್ತಿಯು ನಾನಾ ರೂಪದಲ್ಲಿ ದೊರೆಯುತ್ತದೆ.

ನೀನು ಈಗಾಗಲೇ ಕಲಿತ ಶಕ್ತಿಯ ವಿವಿಧ ರೂಪಗಳನ್ನು ಇಲ್ಲಿ ಬರೆ.

  1. ______
  2. ______

ಆಲೋಚಿಸು :

  • ಶಕ್ತಿಯನ್ನು ಸಂಗ್ರಹಿಸಿಟ್ಟುಕೊಂಡು ಉಪಯೋಗಿಸಲು ಸಾಧ್ಯವೇ?
  • ಬ್ಯಾಟರಿಗಳಲ್ಲಿ ವಿದ್ಯುತ್ ಶೇಖರಿಸಲಾಗುತ್ತಿದೆಯೇ? ಅದು ಸಾಧ್ಯವೇ?

ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಶಕ್ತಿಯ ಬದಲಾವಣೆ

ಸೂರ್ಯ, ನೀರು, ಗಾಳಿ, ಆಹಾರ, ರಾಸಾಯನಿಕ ಕ್ರಿಯೆ – ಹೀಗೆ ವಿವಿಧ ಮೂಲಗಳಿಂದ ಬರುವ ಶಕ್ತಿಯು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಇರುತ್ತದೆ. ಬೇರೆ ಬೇರೆ ರೂಪದಲ್ಲಿರುವ ಶಕ್ತಿಯು ಬದಲಾವಣೆ ಹೊಂದಿ ಮನುಷ್ಯನ ಬದುಕಿಗೆ ಉಪಯೋಗವಾಗುತ್ತದೆ.

ಉದಾಹರಣೆಗೆ,
* ಇಂಧನವು ಯಾಂತ್ರಿಕ ಶಕ್ತಿಯಾಗಿ ಬದಲಾಗುವುದು. (ವಾಹನ ಚಲಿಸಲು)
* ಸೌದೆಯು ಉಷ್ಣ ಶಕ್ತಿಯಾಗಿ ಬದಲಾಗುವುದು. (ಅಡುಗೆ ಮಾಡಲು)

ಕೆಳಗಿನ ಚಟುವಟಿಕೆಯಲ್ಲಿ ಶಕ್ತಿಯು ಯಾವ ರೂಪದಿಂದ ಯಾವ ರೂಪಕ್ಕೆ ಬದಲಾಯಿತು ಎಂಬುದನ್ನು ಬರೆ. ಕೊಟ್ಟಿರುವ ಉದಾಹರಣೆಯನ್ನು ಗಮನಿಸು.

ಶಕ್ತಿಯು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುತ್ತದೆ ಎಂಬುದನ್ನು ಉದಾಹರಣೆಗಳಿಂದ ತಿಳಿದೆವು.

ಶಕ್ತಿಯು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯಾಗುವ ಬೇರೆ ಉದಾಹರಣೆಗಳನ್ನು ಇಲ್ಲಿ ಬರೆ.

—————————————-

ಶಕ್ತಿಯನ್ನು ಉಂಟುಮಾಡಲು ಇಲ್ಲವೆ ನಾಶಪಡಿಸಲು ಸಾಧ್ಯವಿಲ್ಲ. ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದು. ಒಂದಲ್ಲ ಒಂದು ರೂಪದಲ್ಲಿ ಶಕ್ತಿ ಉಳಿದಿರುತ್ತದೆ.

ನೈಸರ್ಗಿಕ ಮೂಲಗಳಾದ ಸೂರ್ಯ, ಗಾಳಿ, ನೀರು, ಇಂಧನಗಳಿಂದ ಬರುವ ಶಕ್ತಿಗಳನ್ನು ಮಿತವಾಗಿ ಬಳಸಿದರೆ ಶಕ್ತಿಯನ್ನು ಉಳಿತಾಯ ಮಾಡಬಹುದು.

ಕೆಳಗೆ ಕೊಟ್ಟಿರುವ ಚಟುವಟಿಕೆಯಿಂದ ಯಾವ ಪರ್ಯಾಯ ಶಕ್ತಿ ಉಳಿಸಬಹುದು ಎಂಬುದನ್ನು ಸುಳಿವು ಬಳಸಿ ಬರೆ. (ಇಂಧನ, ರಾಸಾಯನಿಕ, ವಿದ್ಯುತ್, ಇದ್ದಿಲು)

ಕೆಳಗಿನ ಚಟುವಟಿಕೆಗಳಿಗೆ ಬಳಸುವ ಶಕ್ತಿಯ ಬದಲಿಗೆ ಉಳಿತಾಯವಾಗಿ ಯಾವ ಪರ್ಯಾಯ ಶಕ್ತಿಯನ್ನು ಬಳಸಬಹುದು ಎಂಬುದನ್ನು ಸುಳಿವು ಬಳಸಿ ಬರೆ.
(ಸೌರ ಜಲತಾಪಕ, ಗೋಬರ್ ಗ್ಯಾಸ್, ಸೌರಕುಕ್ಕರ್, ಸೋಲಾರ್, ರಾಸಾಯನಿಕ ಶುಷ್ಕಕೋಶ)

ಕೆಲಸ ಮಾಡುವಾಗ ಕೆಲವೊಮ್ಮೆ ಒಂದು ಶಕ್ತಿಗೆ ಬದಲಾಗಿ ಇನ್ನೊಂದು ಶಕ್ತಿಯನ್ನು ಪರ್ಯಾಯವಾಗಿ ಬಳಸಬಹುದು.

ಉದಾಹರಣೆ: ವಿದ್ಯುತ್ ಮತ್ತು ಇಂಧನಗಳಿಗೆ ಬದಲಾಗಿ ಸೌರಶಕ್ತಿಯನ್ನು ಬಳಸಬಹುದು.

ಶಕ್ತಿಯು ನಮ್ಮ ಅಗತ್ಯ ಪೂರೈಸುವ ಹಾಗೂ ಬದುಕಲು ಬೇಕಾದ ಪ್ರಮುಖ ಅಂಶವಾಗಿದೆ. ದೇಹಕ್ಕೆ ಆಹಾರದಿಂದ ಮತ್ತು ಇನ್ನಿತರ ಚಟುವಟಿಕೆಗಳಿಗೆ ಪರಿಸರದಿಂದ ಪಡೆದ ಶಕ್ತಿಯನ್ನು ಅಷ್ಟೇ ಜಾಗರೂಕತೆಯಿಂದ ಬಳಸಿದರೆ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸಬಹುದು.

Samveda – 5th – EVS – Vismaya Shakti (Part 1 of 4)
Samveda – 5th – EVS – Vismaya Shakti (Part 2 of 4)
Samveda – 5th – EVS – Vismaya Shakti (Part 3 of 4)
Samveda – 5th – EVS – Vismaya Shakti (Part 4 of 4)
ವಿಸ್ಮಯ ಶಕ್ತಿ #5ನೇ ತರಗತಿ ಪರಿಸರ ಅಧ್ಯಯನ#ಪಾಠ -13 ಪ್ರಶ್ನೋತ್ತರಗಳು#5th EVS vismaya shakti #question answers

ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೆಲೆ ಕ್ಲಿಕ್ ಮಾಡಿ