ವಸತಿ ವೈವಿಧ್ಯ – ಪಾಠ – 10
ಈ ಪಾಠವನ್ನು ಕಲಿತ ನಂತರ ನೀನು,
* ಕಾಲದಿಂದ ಕಾಲಕ್ಕೆ ಮನೆಗಳ ನಿರ್ಮಾಣದಲ್ಲಿರುವ ವ್ಯತ್ಯಾಸಗಳನ್ನು ಗುರುತಿಸುವೆ.
* ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿನ ಮನೆಗಳಿಗಿರುವ ವ್ಯತ್ಯಾಸವನ್ನು ಕಂಡುಕೊಳ್ಳುವೆ.
* ನಗರಗಳಲ್ಲಿರುವ ಬಹುಮಹಡಿ ಕಟ್ಟಡ ಮತ್ತು ಕೊಳಚೆ ಪ್ರದೇಶಗಳ ಬಗ್ಗೆ ತಿಳಿಯುವೆ.
* ಪ್ರಾಣಿಗಳ ಆವಾಸ ಮತ್ತು ವಸತಿಗಳಲ್ಲಿನ ವೈವಿಧ್ಯವನ್ನು ಪತ್ತೆ ಮಾಡುವೆ.
* ಪಕ್ಷಿ ಮತ್ತು ಪ್ರಾಣಿ ಗೂಡುಗಳ ರಚನೆ, ಅವಕ್ಕೆ ಬಳಸುವ ಸಾಮಗ್ರಿಗಳಲ್ಲಿರುವ ವೈವಿಧ್ಯವನ್ನು ಗುರುತಿಸುವೆ.
ಮನೆಯ ಅಗತ್ಯ, ಅದರ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳು, ಕಟ್ಟುವ ವಿಧಾನಗಳ ಬಗ್ಗೆ ಕೆಲವು ವಿಚಾರಗಳನ್ನು ನೀನು ತಿಳಿದಿರುವೆ. ನಮ್ಮ ರಾಜ್ಯದ ವಿವಿಧ ಭಾಗಗಳಲ್ಲಿ ಕಟ್ಟುವ ಮನೆಗಳ ಬಗ್ಗೆ ತಿಳಿಯೋಣ.
ಶಿಕ್ಷಣ ಇಲಾಖೆಯು ಧಾರವಾಡದಲ್ಲಿ ಶಿಬಿರವೊಂದನ್ನು ಹಮ್ಮಿಕೊಂಡಿದೆ. ಇಲ್ಲಿಗೆ ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳು ಬಂದಿದ್ದಾರೆ. ಅವರು ತಮ್ಮ ಪ್ರದೇಶದ ಮನೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಬಾ ಅಲ್ಲಿಗೆ ಹೋಗೋಣ. ಅಗೋ ಅಲ್ಲಿ ಮಕ್ಕಳೆಲ್ಲ ಸುತ್ತುವರೆದು ಕುಳಿತಿದ್ದಾರೆ. ಒಬ್ಬೊಬ್ಬರೇ ಮಾತನಾಡುತ್ತಿದ್ದಾರೆ. ನಾವೂ ಕುಳಿತು ಕೇಳೋಣ.
ನಾನು ಸಂಗೀತ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಿಂದ ಬಂದಿದ್ದೇನೆ. ಅಲ್ಲಿ ಬಿಸಿಲು ಬಹಳ. ಮಳೆ ಕಡಿಮೆ. ನಮ್ಮಲ್ಲಿ ಮನೆಗಳನ್ನು ಶಹಾಬಾದ್ ಕಲ್ಲುಗಳಿಂದ ಅಥವಾ ಚಪ್ಪಡಿಗಳಿಂದ ಕಟ್ಟುತ್ತಾರೆ. ಮೇಲ್ಚಾವಣಿಗೆ ಕಟ್ಟಿಗೆ (ತೊಲೆ) ಯಿಂದ ಜಂತಿಗಳನ್ನು ಇಟ್ಟು ಅವುಗಳ ಮೇಲೆ ಮಣ್ಣನ್ನು ಕಲಸಿ ಹಾಕುತ್ತಾರೆ. ಅದರ ಮೇಲೆ ಕೆಲವರು ಶಹಾಬಾದ್ ಚಪ್ಪಡಿಗಳನ್ನು ಹಾಕುತ್ತಾರೆ.
ಜೇವರ್ಗಿಯ ಭಾಗದ ಜನರು ಕಲ್ಲುಗಳಿಂದ ಮನೆ ಕಟ್ಟುತ್ತಾರೆ. ಏಕೆಂದು ಗೆಳೆಯರೊಡನೆ, ಶಿಕ್ಷಕರೊಡನೆ ಚರ್ಚಿಸಿ ಬರೆ.
ಇಲ್ಲಿ ಮನೆ ಮಾಳಿಗೆಗೆ (ಮೇಲ್ಚಾವಣಿಗೆ) ಮಣ್ಣನ್ನು ಹಾಕಿರುತ್ತಾರೆ. ಏಕೆಂದು ಗೆಳೆಯರೊಡನೆ, ಶಿಕ್ಷಕರೊಡನೆ ಚರ್ಚಿಸಿ ಬರೆ.
ನಾನು ಜಾನ್. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಬಂದಿದ್ದೇನೆ. ಅಲ್ಲಿ ಮಳೆ ಹೆಚ್ಚಾಗಿ ಬೀಳುತ್ತದೆ. ಇಟ್ಟಿಗೆ ಅಥವಾ ಮಣ್ಣಿನಿಂದ ಮನೆಯ ಗೋಡೆ ಕಟ್ಟಿ, ಭತ್ತದ ಹುಲ್ಲಿನಿಂದ ಇಳಿಜಾರಾಗಿ ಮೇಲ್ಚಾವಣಿ ನಿರ್ಮಿಸುತ್ತಾರೆ. ಪ್ರತಿವರ್ಷ ಅದರ ಮೇಲೆ ಹೊಸ ಹುಲ್ಲನ್ನು ಹಾಕುತ್ತಾರೆ. 4-5 ವರ್ಷಕ್ಕೊಮ್ಮೆ ಹುಲ್ಲನ್ನು ಸಂಪೂರ್ಣವಾಗಿ ಬದಲಾಯಿಸುತ್ತಾರೆ.
ಇನ್ನು ಕೆಲವರು ಜಂಬಿಟ್ಟಿಗೆ (ಒಂದು ವಿಧವಾದ ಗಟ್ಟಿ ತುಂಡಿನಂತಹ ಕೆಂಪುಮಣ್ಣು)ಯಿಂದ ಗೋಡೆಯನ್ನು ಕಟ್ಟುತ್ತಾರೆ. ಮೇಲ್ಚಾವಣಿಗೆ ಹೆಂಚುಗಳಿಂದ ಇಳಿಜಾರಾದ ಮಾಡನ್ನು ನಿರ್ಮಿಸುತ್ತಾರೆ.
ಮಳೆ ಹೆಚ್ಚಾಗಿ ಬೀಳುವ ಚಿಕ್ಕಮಗಳೂರಿನಂತಹ ಪ್ರದೇಶಗಳಲ್ಲಿ ಮನೆಯ ಮಾಡನ್ನು (ಮೇಲ್ಚಾವಣಿ) ಇಳಿಜಾರಾಗಿ ನಿರ್ಮಿಸುತ್ತಾರೆ. ಏಕೆ? ಯೋಚಿಸಿ ಬರೆ.
ಮೇಲ್ಛಾವಣಿಗೆ ಹುಲ್ಲನ್ನು ಬಳಸುವುದರಿಂದ ಏನು ಅನುಕೂಲ? ಗೆಳೆಯರೊಡನೆ ಚರ್ಚಿಸಿ ಉತ್ತರ ಬರೆ.
ನಾನು ಹಸೀನಾ. ಬೆಂಗಳೂರಿನವಳು. ಇಲ್ಲಿ ಇತ್ತೀಚೆಗೆ ಮನೆಗಳ ಮೇಲೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಅವುಗಳನ್ನು ಬಹುಮಹಡಿ ಕಟ್ಟಡಗಳೆನ್ನುತ್ತಾರೆ.
ಸುಟ್ಟ ಇಟ್ಟಿಗೆ ಅಥವಾ ಸಿಮೆಂಟ್‍ನಿಂದ ಮಾಡಿದ ಇಟ್ಟಿಗೆಗಳು ಮತ್ತು ಉಕ್ಕಿನ ಕಂಬಿಗಳಿಂದ ಮನೆಗಳನ್ನು ನಿರ್ಮಿಸುತ್ತಾರೆ. ನೆಲಕ್ಕೆ ಬಣ್ಣ ಬಣ್ಣದ ಹಾಸನ್ನು ಬಳಸುತ್ತಾರೆ. ಮೇಲಕ್ಕೆ ಹತ್ತಲು ಮೆಟ್ಟಿಲುಗಳ ಜೊತೆಗೆ ಲಿಫ್ಟ್ ಸೌಕರ್ಯ ಇರುತ್ತದೆ. ಇಂತಹ ಬಹುಮಹಡಿ ಕಟ್ಟಡಗಳನ್ನು ಕಟ್ಟಲು ಕ್ರೇನ್, ಮಿಕ್ಸರ್‍ನಂತಹ ದೊಡ್ಡ ದೊಡ್ಡ ಯಂತ್ರಗಳ ಅಗತ್ಯವಿದೆ.
ಬಹುಮಹಡಿ ಕಟ್ಟಡಗಳಿಂದ ಆಗುವ ಅನುಕೂಲ ಏನು? ಯೋಚಿಸಿ ಬರೆ.
ಬಹುಮಹಡಿ ಕಟ್ಟಡಗಳಿಂದ ಆಗುವ ಅನಾನುಕೂಲವನ್ನು ಗುಂಪಿನಲ್ಲಿ ಚರ್ಚಿಸು. ನಿನ್ನ ಅಭಿಪ್ರಾಯವನ್ನು ಬರೆ.
ನಾನು ವಿವೇಕ. ನಾನೂ ಸಹ ಬೆಂಗಳೂರಿನವನೇ. ನನ್ನ ಮನೆ ಒಂದು ಕೊಳಚೆ ಪ್ರದೇಶದ ಬಳಿ ಇದೆ. ಅಲ್ಲಿರುವ ಮನೆಗಳು ಅತಿ ಚಿಕ್ಕವು. ಮನೆಯನ್ನು ಇಟ್ಟಿಗೆ, ಗರಿ, ತಗಡಿನಿಂದ ನಿರ್ಮಿಸಿರುತ್ತಾರೆ.
ಮೇಲ್ಛಾವಣಿಗೆ ತೆಂಗಿನ ಗರಿ ಅಥವಾ ತಗಡಿನ ಹೊದಿಕೆ ಹಾಕಿರುತ್ತಾರೆ. ಕೆಲವರು ಹೆಂಚಿನ ಚಾವಣಿಯನ್ನು ನಿರ್ಮಿಸುತ್ತಾರೆ. ಚರಂಡಿಗಳು ಇಲ್ಲದಿರುವುದರಿಂದ ಪಾತ್ರೆ ತೊಳೆದ, ಬಟ್ಟೆ ಒಗೆದ ಮತ್ತು ಸ್ನಾನ ಮಾಡಿದ ನೀರೆಲ್ಲಾ ಮನೆಯ ಮುಂದೆ ನಿಂತಿರುತ್ತದೆ. ಇದರಿಂದ ಸೊಳ್ಳೆಗಳ ಹಾವಳಿ ಜಾಸ್ತಿ. ಒಂದು ಸಣ್ಣ ಜಾಗದಲ್ಲಿ ನೂರಾರು ಮನೆಗಳು ಒಂದರ ಪಕ್ಕ ಒಂದು ಬಹಳ ಒತ್ತೊತ್ತಾಗಿ ಇರುತ್ತವೆ. ಹೀಗಾಗಿ ಈ ಮನೆಗಳಿಗೆ ಸಾಕಷ್ಟು ಗಾಳಿ, ಬೆಳಕು ಸಿಗುವುದಿಲ್ಲ. ಅಲ್ಲಿ ವಾಸಿಸುವ ಜನರೂ ಕೂಡ ಮನೆಯ ಸುತ್ತಮುತ್ತ ಸ್ವಚ್ಛಗೊಳಿಸದೆ ಮನೆಯ ಕಸವನ್ನೆಲ್ಲಾ ಅಲ್ಲಲ್ಲೇ ಸುರಿಯುವುದರಿಂದ ತಿಪ್ಪೆಗಳು ನಿರ್ಮಾಣವಾಗಿವೆ. ಕೊಳೆತ ತಿಪ್ಪೆಗಳ ಮೇಲೆ ಕುಳಿತ ನೊಣ, ಇತರ ಕೀಟಗಳು, ರೋಗಾಣುಗಳು ರೋಗಗಳನ್ನು ಹರಡುತ್ತವೆ.
ನೀನು ಇಂತಹ ಕೊಳಚೆ ಪ್ರದೇಶಗಳನ್ನು ನೋಡಿದ್ದೀಯಾ? ಕೊಳಚೆ ಪ್ರದೇಶಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬಹುದು? ಯೋಚಿಸಿ, ನಾಲ್ಕು ಬದಲಾವಣೆಗಳನ್ನು ಬರೆ.
ಆಯಾ ಪ್ರದೇಶದಲ್ಲಿ ದೊರಕುವ ವಸ್ತುಗಳು, ಅಲ್ಲಿನ ಹವಾಮಾನ, ಇವುಗಳಿಗೆ ತಕ್ಕಂತೆ ಮನೆಗಳನ್ನು ಕಟ್ಟುತ್ತಾರೆ ಎಂದು ನೀನು ತಿಳಿದೆಯಲ್ಲವೆ? ಈಗ ವೆಂಕಜ್ಜಿ ಹೇಳಿದ ಕಥೆ ಕೇಳೋಣ.
ಬಹುಕಾಲದಿಂದ ತನ್ನ ಹಳ್ಳಿಯಲ್ಲೇ ಇದ್ದ ವೆಂಕಜ್ಜಿ ಬೆಂಗಳೂರಿನ ಬಹು ಮಹಡಿ ಕಟ್ಟಡದಲ್ಲಿರುವ ತನ್ನ ಮೊಮ್ಮಗನ ಮನೆಗೆ ಬಂದರು. ಅಲ್ಲಿನ ವೈಭವವನ್ನು ಕಂಡು ಬೆರಗಾದರು. ಸೋಫಾದ ಮೇಲೆ ಕುಳಿತು ಸುಧಾರಿಸಿಕೊಳ್ಳುತ್ತಾ, ತನ್ನ ಬಾಲ್ಯದ ದಿನಗಳನ್ನು ನೆನೆಸಿಕೊಂಡರು.
ಆಗ ನಾನಿನ್ನೂ ಸಣ್ಣ ಹುಡುಗಿ. ನಾನು, ನನ್ನ ಮೂವರು ತಂಗಿಯರು ಮತ್ತು ಇಬ್ಬರು ತಮ್ಮಂದಿರೊಟ್ಟಿಗೆ ಹಾಗೂ ತಂದೆ-ತಾಯಿಯರೊಂದಿಗೆ ತೆಂಗಿನ ಗರಿಯ ಗುಡಿಸಲಲ್ಲಿ ವಾಸಿಸುತ್ತಿದ್ದೆವು.
ಮಳೆ ಬಂದಾಗ ನಮ್ಮ ಗುಡಿಸಲು ಸೋರುತ್ತಿತ್ತು. ಬಿಸಿಲಿಗೆ ಗರಿ ಒಣಗಿ ರಂಧ್ರಗಳು ಕಾಣುತ್ತಿದ್ದವು. ಒಂದು ದಿನ ನಮ್ಮ ಗುಡಿಸಲು ಬೆಂಕಿಗೆ ಆಹುತಿಯಾಯಿತು. ಗುಡಿಸಲು ಸುಟ್ಟುಹೋದ ಮೇಲೆ ನನ್ನ ಅಪ್ಪ-ಅಮ್ಮ ಮನೆಯೊಂದನ್ನು ನಿರ್ಮಿಸಲು ನಿರ್ಧರಿಸಿದರು. ಅಪ್ಪ ಮತ್ತೊಬ್ಬರ ನೆರವಿನೊಂದಿಗೆ ಮಣ್ಣನ್ನು ಕಲಸಿ ಗೋಡೆ ಸಿದ್ಧಪಡಿಸಿದರು.
ಹಳ್ಳಿಯ ಪಕ್ಕದಲ್ಲಿದ್ದ ಕಾಡಿನಿಂದ ಬಿದಿರಿನ ದೊಡ್ಡ ಗಳಗಳನ್ನು ಕಡಿದು ಅಪ್ಪ ಹೊತ್ತು ತಂದರು. ಅಮ್ಮನೊಂದಿಗೆ ನಾನು, ತಮ್ಮ ಮತ್ತು ತಂಗಿಯರು ಬಿದಿರಿನ ಸಣ್ಣ ಗಳಗಳನ್ನು ಹೊತ್ತು ತಂದೆವು. ಮಣ್ಣಿನ ಗೋಡೆಗಳ ಮೇಲೆ ಈ ಗಳಗಳನ್ನು ಜೋಡಿಸಿ ಅವುಗಳ ಮೇಲೆ ಮಣ್ಣನ್ನು ಹರಡಿದೆವು. ನಂತರ ಬಯಲಿನಲ್ಲಿ ಅಲೆದು ನಾವುಗಳು ಸಂಗ್ರಹಿಸಿದ ಸಗಣಿಯನ್ನು ಕಲಸಿ ಅಮ್ಮ ನೆಲಕ್ಕೆ ಮತ್ತು ಒಳಗಿನ ಗೋಡೆಗಳಿಗೆ ಹಚ್ಚಿದರು. ಮನೆ ಮುಂದೆ ಸಗಣಿಯಿಂದ ಸಾರಿಸಿ, ಕೆಮ್ಮಣ್ಣು, ರಂಗೋಲಿಯಿಂದ ಅಲಂಕರಿಸಿ ಮನೆ ಪ್ರವೇಶಿಸಿದೆವು.
ಆನಂತರ ನಾನು ದೊಡ್ಡವಳಾದೆ. ನನ್ನ ಮದುವೆಯಾಯಿತು. ನನ್ನ ಗಂಡನ ಮನೆಗೆ ಬಂದೆ. ಆ ಮನೆ ನಮ್ಮ ಮನೆಗಿಂತ ಉತ್ತಮವಾಗಿತ್ತು. ಅವರ ಮನೆಯ ಗೋಡೆಯನ್ನು ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ್ದರು. ಗೋಡೆಗಳಿಗೆ ಸಾರಣೆಯನ್ನೂ ಮಾಡಲಾಗಿತ್ತು. ಚಾವಣಿಗೆ ಮಂಗಳೂರು ಹೆಂಚನ್ನು ಹಾಕಿದ್ದರು. ನೆಲಕ್ಕೆ ಕಡಪ ಕಲ್ಲುಗಳನ್ನು ಹಾಕಲಾಗಿತ್ತು. ಮರಗಳಿಂದ ಮಾಡಿದ ಬಾಗಿಲುಗಳನ್ನು ಅಂದವಾಗಿ ಕೆತ್ತನೆ ಮಾಡಿ ಜೋಡಿಸಲಾಗಿತ್ತು. ವಿಶಾಲವಾದ ಕಿಟಕಿ ಬಾಗಿಲುಗಳು ಇದ್ದದ್ದರಿಂದ ಗಾಳಿ, ಬೆಳಕು ಚೆನ್ನಾಗಿ ಬರುತ್ತಿತ್ತು. ನಮ್ಮ ಅಕ್ಕ ಪಕ್ಕದ ಮನೆಗಳನ್ನು ಇದೇ ರೀತಿ ನಿರ್ಮಿಸಿದ್ದರೂ ಮೇಲ್ಛಾವಣಿಗೆ ಚಪ್ಪಡಿಯನ್ನು ಹಾಕಿದ್ದರು. ನೆಲವನ್ನು ಸಿಮೆಂಟಿನಿಂದ ಸಾರಿಸಿ ನುಣುಪು ಮಾಡಿದ್ದರು.
ನನಗೆ ನೆಲವನ್ನು ಸಗಣಿ ಇಲ್ಲವೇ ಕೆಂಪುಮಣ್ಣಿನಿಂದ ಸಾರಿಸುವ ಕೆಲಸ ಇರಲಿಲ್ಲ. ನೀರಿನಿಂದ ನೆಲವನ್ನು ಒರೆಸಿದರೆ ಸಾಕಿತ್ತು. ತನ್ನ ಮೊಮ್ಮಗ ನೀಡಿದ ಕಾಫಿಯ ಸವಿಯನ್ನು ಹೀರುತ್ತಿದ್ದ ವೆಂಕಜ್ಜಿಗೆ ತನ್ನ ಮಗಳ ಮನೆಯ ನೆನಪಾಯಿತು. ತಾರಸಿಯ ಮೇಲ್ಛಾವಣಿ, ನುಣುಪಾದ ಕಲ್ಲುಹಾಸು, ಗೋಡೆಗೆ ಬಣ್ಣಗಳು, ಮನೆಯ ಸುತ್ತ ಗಿಡಗಳು, ಕಾಂಪೌಂಡ್ ಇವೆಲ್ಲಾ ಇದ್ದ ಮಗಳ ಮನೆ ಚೆನ್ನಾಗಿತ್ತು.
ವೆಂಕಜ್ಜಿ ಈಗ ತನ್ನ ಮೊಮ್ಮಗನ ಮನೆಯನ್ನು ನೋಡುತ್ತಿದ್ದಾರೆ. 15-20 ಮಹಡಿಗಳ ಕಟ್ಟಡ. ಸುಮಾರು 500ಕ್ಕೂ ಹೆಚ್ಚು ಮನೆಗಳಿವೆ. ಮೇಲಿನ ಮಹಡಿಗಳಿಗೆ ಹೋಗಲು ಲಿಫ್ಟ್ ಇದೆ. ಈ ಮನೆಗಳನ್ನು ಕಟ್ಟಲು ಹಲವು ಯಂತ್ರಗಳನ್ನು ಬಳಸಿದ್ದಾರೆ. ಮನೆಯಲ್ಲಿ 3 ಕೊಠಡಿಗಳಿವೆ. ಊಟದ ಕೋಣೆ, ಹಾಲ್ ಎಲ್ಲವೂ ಚೆನ್ನಾಗಿವೆ. ಆದರೂ ಮನೆಗಳನ್ನು ಬೆಂಕಿಪೆÇಟ್ಟಣದಂತೆ ಒಂದರ ಪಕ್ಕದಲ್ಲಿ ಒಂದರಂತೆ ಕಟ್ಟಿದ್ದಾರೆ. ಗಾಳಿ ಬೆಳಕಿಗೆ ಸ್ವಲ್ಪ ತೊಂದರೆಯೇ. ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಲು ಕಪಾಟುಗಳನ್ನು ಮಾಡಿದ್ದಾರೆ. ಬಾಗಿಲು-ಕಿಟಕಿಗಳಿಗೆ ಮರವೇ ಇಲ್ಲ. ಎಲ್ಲಾ ಉಕ್ಕು ಅಥವಾ ಪ್ಲಾಸ್ಟಿಕ್‍ನಿಂದ ಮಾಡಿದ್ದಾರೆ.
ಗುಡಿಸಲಿನಿಂದ ಮನೆಗಳ ನಿರ್ಮಾಣದಲ್ಲಾದ ಬದಲಾವಣೆಗೆ ವೆಂಕಜ್ಜಿ ಬೆರಗಾಗಿದ್ದಾಳೆ.
* ಈ ಕಥೆಯಿಂದ ನೀನು ಏನನ್ನು ತಿಳಿದೆ? ಬರೆ.
ವೆಂಕಜ್ಜಿ ಕಥೆಯಲ್ಲಿ ಬರುವ 5 ರೀತಿಯ ಮನೆಗಳನ್ನು ಹೆಸರಿಸು.
ನಿನ್ನ ಊರಿನ ಮನೆ ನಿರ್ಮಾಣದಲ್ಲಿ ಯಾವ ಬದಲಾವಣೆಗಳು ಆಗಿವೆ? ಹಿರಿಯರನ್ನು ಕೇಳಿ ಬರೆ.
ಮನೆ ನಿರ್ಮಾಣಕ್ಕೆ ಬಳಸುತ್ತಿರುವ ಸಾಮಗ್ರಿಗಳಲ್ಲಿ ಬದಲಾವಣೆ ಆಗುತ್ತಿದೆ. ಗುಡಿಸಿಲಿನಿಂದ ಬಹುಮಹಡಿ ಕಟ್ಟಡದವರೆಗೆ ಬಳಸುವ ಸಾಮಗ್ರಿಗಳನ್ನು ಇಲ್ಲಿ ಬರೆ.
ಮನೆಗೆ ಬಳಸುವ ವಿವಿಧ ಮರಗಳ ಹೆಸರನ್ನು ತಿಳಿದುಕೊ.
ಇಲ್ಲಿ ಮನೆ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳ ಚಿತ್ರಗಳಿವೆ. ನಿನ್ನ ಮನೆ ಕಟ್ಟಲು ಬಳಸಿರುವ ಸಾಮಗ್ರಿಗೆ ಸರಿ ಗುರುತು ಹಾಕು.
ನಾವು ನಿರ್ಮಿಸುವ ಮನೆಗಳಲ್ಲಿ ಬದಲಾವಣೆ ಆಗುತ್ತಿದೆ. ಪ್ರಾಣಿ-ಪಕ್ಷಿಗಳ ವಸತಿಗಳಲ್ಲಿ ಬದಲಾವಣೆ ಆಗುತ್ತಿದೆಯೆ? ಗಮನಿಸು.
ನೀನು ಹಲವು ಪ್ರಾಣಿಗಳ ವಾಸಸ್ಥಳಗಳನ್ನು ಗಮನಿಸಿದ್ದೀಯ ಅಲ್ಲವೆ? ಕೆಳಗಿನ ಪ್ರಾಣಿಗಳ ವಾಸಸ್ಥಳಗಳನ್ನು ವೀಕ್ಷಿಸಿ, ಕೋಷ್ಟಕ ತುಂಬು.
ನಮ್ಮಂತೆ ಪ್ರಾಣಿಗಳ ವಾಸಸ್ಥಳದಲ್ಲೂ ವೈವಿಧ್ಯವಿದೆ. ಪ್ರಾಣಿಗಳೂ ವಿವಿಧ ಸಾಮಗ್ರಿಗಳನ್ನು ಬಳಸಿ ತಮ್ಮ ಗೂಡುಗಳನ್ನು ನಿರ್ಮಿಸುತ್ತವೆ, ಅಲ್ಲವೆ?
ಮಾಡಿ-ನೋಡು
ಪ್ರಾಣಿಗಳ ಗೂಡುಗಳನ್ನು ಕಾಗದ, ರಟ್ಟು, ಹುಲ್ಲು, ಗರಿ ಮುಂತಾದ ವಸ್ತುಗಳನ್ನು ಬಳಸಿ ಮಾಡಲು ಪ್ರಯತ್ನಿಸು. ನಿನಗೆ ಸುಲಭವಾಗಿ ಸಿಗುವ ಬೆಂಕಿ ಪೆಟ್ಟಿಗೆ, ರಟ್ಟು, ಮಣ್ಣು ಮತ್ತು ಇಟ್ಟಿಗೆ ಮುಂತಾದ ವಸ್ತುಗಳನ್ನು ಸಂಗ್ರಹಿಸಿ ಮನೆಯನ್ನು ಕಟ್ಟು.
ನಿನಗಿದು ಗೊತ್ತೆ?
* ದುಬೈನಲ್ಲಿರುವ ಬುರ್ಜ್ ಖಲೀಫಾ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ. ಇದರ ಎತ್ತರ 829.2 ಮೀಟರ್ (2722 ಅಡಿಗಳು).
* ಮುಂಬೈನ ಧಾರಾವಿ ಭಾರತದಲ್ಲೇ ಅತ್ಯಂತ ದೊಡ್ಡ ಕೊಳಚೆ ಪ್ರದೇಶ. ಇಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಇದನ್ನು ಏಷ್ಯಾ ಖಂಡದ ಅತಿ ದೊಡ್ಡ ಕೊಳಚೆ ಪ್ರದೇಶ ಎಂದೂ ಹೇಳುತ್ತಾರೆ.
* ಇತ್ತೀಚೆಗೆ ವಸ್ತುಗಳನ್ನು ಹಿತಮಿತವಾಗಿ ಬಳಸಿ, ಪರಿಸರವನ್ನು ನಾಶಮಾಡದಂತಹ ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೂರ್ಯನ ಶಾಖವನ್ನು ಬಳಸಿ ನೀರನ್ನು ಕಾಯಿಸುವುದು, ಮಳೆಯ ನೀರನ್ನು ಸಂಗ್ರಹಿಸುವುದು, ಕಸವನ್ನು ಮನೆಯಲ್ಲೇ ನಿರ್ವಹಿಸುವುದು ಮುಂತಾದವನ್ನು ಅಳವಡಿಸಿಕೊಂಡು ಮನೆಗಳನ್ನು ಕಟ್ಟಲು, ಹೆಚ್ಚು ಜನರು ಉತ್ಸಾಹವನ್ನು ತೋರಿಸುತ್ತಿದ್ದಾರೆ.
* ಇರುವೆಗಳ ಗೂಡು 650 ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಹರಡಿರುವ ಹಲವು ದಾಖಲೆಗಳಿವೆ. ಇವನ್ನು ಮಹಾಗೂಡುಗಳೆನ್ನುತ್ತಾರೆ. ಇದರಲ್ಲಿ ಲಕ್ಷಾನುಲಕ್ಷ ಇರುವೆಗಳು ವಾಸಿಸುತ್ತವೆ.
ಸಂವೇದ ವಿಡಿಯೋ ಪಾಠಗಳು
Samveda – 4th – EVS – Vasati
ಪೂರಕ ವಿಡಿಯೋಗಳು
ವಸತಿ ವೈವಿಧ್ಯ | VASATHI VAIVIDYA | 4th EVS KANNADA |
ವಸತಿ ವೈವಿಧ್ಯ | VASATHI VAIVIDYA | 4th EVS KANNADA | 4ನೇ ತರಗತಿ
ವಸತಿ ವೈವಿಧ್ಯ | VASATHI VAIVIDYA | 4th EVS KANNADA | 4ನೇ ತರಗತಿ
I am a student of BAK College. The recent paper competition gave me a lot of headaches, and I checked a lot of information. Finally, after reading your article, it suddenly dawned on me that I can still have such an idea. grateful. But I still have some questions, hope you can help me.