ವಚನಗಳ ಭಾವಸಂಗಮ – ಪದ್ಯ-4

ಜೇಡರ ದಾಸಿಮಯ್ಯ, ಮಡಿವಾಳ ಮಾಚಯ್ಯ, ಮುಕ್ತಾಯಕ್ಕ ಮತ್ತು ಸತ್ಯಕ್ಕ
ವಚನಕಾರರು –

ಪ್ರವೇಶ : ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೆಯ ಶತಮಾನ ಅತ್ಯಮೂಲ್ಯವಾದದ್ದು. ವಚನ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರ. ಜನಸಾಮಾನ್ಯರು ತಮ್ಮ ಸ್ವಾನುಭೂತಿ, ನಿವೇದನೆಗಳನ್ನು ತಮ್ಮ ತಮ್ಮ ಇಷ್ಟ ದೇವರ ಹೆಸರಿನಲ್ಲಿ ಅಂಕಿತನಾಮನನ್ನಿಟ್ಟುಕೊಂಡು ವಚನಗಳ ರೂಪದಲ್ಲಿ ಹೊರಹೊಮ್ಮಿದ ಕಾಲವಿದು. ಈ ಕಾಲದಲ್ಲಿ ಜಾತಿ ಭೇದವಿಲ್ಲದೆ ಗಂಡು ಹೆಣ್ಣೆಂಬ ತಾರತಮ್ಯವಿಲ್ಲದೇ ಹಲವಾರು ಮಂದಿ ವಚನಗಳನ್ನು ರಚಿಸಿದ್ದಾರೆ. ಜೇಡರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ಮುಕ್ತಾಯಕ್ಕ, ಸತ್ಯಕ್ಕ ಮೊದಲಾದವರ ವಚನಗಳು ಕನ್ನಡ ಸಾಹಿತ್ಯದಲ್ಲಿ ಹೇರಳವಾಗಿವೆ. ಈ ವಚನಕಾರರ ವಚನಗಳನ್ನು ಅವರವರ ವಚನಾಂಕಿತದಿಂದ ಸುಲಭವಾಗಿ ಅದರ ಕರ್ತೃವನ್ನು ರಚನೆಕಾರರನ್ನು ಗುರುತಿಸಲು ಸಾಧ್ಯವಾಗಿದೆ. ಇಂಥ ಅಮೂಲ್ಯ ವಚನಗಳ ಭಾವಾಂತರಂಗದಲ್ಲಿ ಭಕ್ತನ ಪರೀಕ್ಷೆ, ಪರಿಶುದ್ಧತೆ, ಆಚಾರ-ವಿಚಾರಗಳು ಹಾಗೂ ಭಕ್ತರ ಪ್ರಾಮಾಣಿಕ ನಡೆನುಡಿಗಳನ್ನು ಈ ವಚನ ಭಾವ ಸಂಗಮದಲ್ಲಿ ಕಾಣಬಹುದು.

ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಮಿಸುನಿಯದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇರ್ದೆಡೆ
ಕರವಿಡಿದೆತ್ತಿಕೊಂಬ ನಮ್ಮ ರಾಮನಾಥ
– ಜೇಡರ ದಾಸಿಮಯ್ಯ.

ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು
ನಿಂದಕರ ನುಡಿಯಿಂದ ಏಡಿಸಲೈ ಶಿವಭಕ್ತಿಯ ಪ್ರಭೆಯಾಯಿತು
ಅಹುದೆಂದಡೆ ಅಲ್ಲವೆಂದತಿಗಳೆವರು
ಕುತರ್ಕಶಾಸ್ತ್ರದಿಂದ ಯಮಗತಿಗರ ಕೂಡೆ
ನಾನಾ ಜನ್ಮಕ್ಕೇರದೆ, ಶಿವಾಚಾರದ ಪಥವ ತೋರಯ್ಯಾ
ಕಲಿದೇವರ ದೇವ
– ಮಡಿವಾಳ ಮಾಚಯ್ಯ

ನುಡಿಯಲುಬಾರದು ಕೆಟ್ಟ ನುಡಿಗಳ
ನಡೆಯಲುಬಾರದು ಕೆಟ್ಟ ನಡೆಗಳ
ನುಡಿದಡೇನು, ನಡೆಯದಿರ್ದಡೇನು
ಹಿಡಿದ ವ್ರತವ ಬಿಡದಿರಲು
ಅದೇ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ
– ಮುಕ್ತಾಯಕ್ಕ

ಲಂಚವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನುವಸ್ತ್ರ ಬಿದ್ದಿದ್ದರೆ
ನಾನು ಕೈಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.
– ಸತ್ಯಕ್ಕ

ಕೃತಿಕಾರರ ಪರಿಚಯ

ಜೇಡರ ದಾಸಿಮಯ್ಯ

ಹನ್ನೊಂದನೆಯ ಶತಮಾನದಲ್ಲಿದ್ದ ಹಿರಿಯ ಶಿವಶರಣ. ಯಾದಗಿರಿ ಸನಿಹದ ಮುದೇನೂರಿ ನವನು. ದಾಸಿಮಯ್ಯ ಪ್ರಥಮ ವಚನಕಾರನೆಂದೇ ಮಾನ್ಯನಾಗಿದ್ದಾನೆ.‘ರಾಮನಾಥ’ ಎಂಬ ಅಂಕಿತದಿಂದ ರಚಿಸಿರುವ ಇವರ 150 ವಚನಗಳು ದೊರೆತಿವೆ. ಸರಳ ಮತ್ತು ನೇರ ನಿರೂಪಣೆಯಿಂದ ಕೂಡಿದ ದಾಸಿಮಯ್ಯನವರ ವಚನಗಳು ಸಾಮಾಜಿಕ ಮೌಲ್ಯದಿಂದ ಜನಮಾನ್ಯವಾಗಿದೆ. ಜೇಡರದಾಸಿಮಯ್ಯನವರ ಈ ವಚನದಲ್ಲಿ ಶಿವನು ತನ್ನ ಭಕ್ತರನ್ನು ಹೇಗೆ ಪರೀಕ್ಷೆಗೆ ಒಳಪಡಿಸಿ, ಪರಿಶುದ್ಧರನ್ನಾಗಿ ಮಾಡಿ ಕೈವಿಡಿದು ಕಾಯುತ್ತಾನೆಂಬುದನ್ನು ಉಪಮೆಗಳ ಮೂಲಕ ತಿಳಿಸಿದ್ದಾನೆ.

ಮಡಿವಾಳ ಮಾಚಯ್ಯ

ಮಡಿವಾಳ ಮಾಚಯ್ಯ 12ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬರು. ಇವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಹಿಪ್ಪರಗಿ. ಬಸವಣ್ಣನವರ ಕೀರ್ತಿ ಕೇಳಿ ಹೊಸ ಧರ್ಮಕ್ಕೆ ಆಕರ್ಷಣೆಗೊಂಡು ಕಲ್ಯಾಣಕ್ಕೆ ಹೋದವರಲ್ಲಿ ಮೊದಲಿಗರು. ಮಾಚಯ್ಯ ಕಲ್ಯಾಣದಲ್ಲಿ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿಮಾಡಿಕೊಂಡಿದ್ದವರು. ಇವರ 353 ವಚನಗಳು ಉಪಲಬ್ದವಾಗಿವೆ. ಇವರ ವಚನಾಂಕಿತನಾಮ ‘ಕಲಿದೇವರ ದೇವ’ಎಂಬುದು. ಶಿವಭಕ್ತರು ಅನೇಕ ಸತ್ವಪರೀಕ್ಷೆಗಳಿಂದ ಪರಿಶುದ್ಧರಾಗಿದ್ದಾರೆ. ಅನ್ಯಾಯ ಮಾರ್ಗವನ್ನಿಡಿದು ನಡೆಯುವ ಸಾಮಾನ್ಯ ಮನುಷ್ಯರು ತಮ್ಮ ಹೀನ ಕೃತ್ಯಗಳಿಂದ ಅನೇಕ ಜನ್ಮಾಂತರಗಳಲ್ಲಿ ಬಳಲುತ್ತಾರೆ. ಶಿವಭಕ್ತರನ್ನು ಈ ಜನ್ಮಾಂತರಗಳಿಂದ ಬಳಲಿಸದೆ ಅವರಿಗೆ ಶಿವಾಚಾರದ ಸನ್ಮಾರ್ಗ ತೋರಿಸು ಎಂಬುದು ಈ ವಚನದಲ್ಲಿದೆ.

ಮುಕ್ತಾಯಕ್ಕ

12ನೆಯ ಶತಮಾನದಲ್ಲಿದ್ದ ಅನುಭಾವಿ ಶಿವಶರಣೆ. ಮುಕ್ತಾಯಕ್ಕನ ಜನ್ಮಸ್ಥಳ ಲಕ್ಕುಂಡಿ. ಅಜಗಣ್ಣ ಅಂಕಿತವಿರುವ ಇವರ 37 ವಚನಗಳು ದೊರೆತಿವೆ. ಆಧ್ಯಾತ್ಮ ಸಾಧನೆಯ ಗುಪ್ತಭಕ್ತ ಅಜಗಣ್ಣನು ಮುಕ್ತಾಯಕ್ಕನ ಸಹೋದರ ಮತ್ತು ಗುರು. ಇವರಿಬ್ಬರ ಅನುಭಾವಿ ನಿಲುವಿಗೆ ಸಂಬಂಧಿಸಿದಂತೆ ಸೂಕ್ಷ್ಮ ಪದರಗಳನ್ನು ಬಿಡಿಸಿ ತೋರುವ ವಚನಗಳಿವು. ಶಿವಭಕ್ತನಿಗೆ ನಡೆ-ನುಡಿಗಳು ಬಹಳ ಮುಖ್ಯ, ನಡೆನುಡಿಗಳ ಪರಿಶುದ್ಧತೆಯೇ ನಿಜವಾದ ವ್ರತ. ಇದು ಮಹಾಜ್ಞಾನ ಸಂಪಾದನೆಯ ಮಾರ್ಗವೆಂಬುದು ಈ ವಚನದಲ್ಲಿ ವ್ಯಕ್ತವಾಗಿದೆ.

ಸತ್ಯಕ್ಕ

12ನೆಯ ಶತಮಾನದಲ್ಲಿದ್ದ ಶಿವಶರಣೆಯರಲ್ಲಿ ಒಬ್ಬಳು. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು ಸತ್ಯಕ್ಕನ ಜನ್ಮಸ್ಥಳ. ಶಿವಭಕ್ತರ ಮನೆಯಂಗಳ ಕಸಗುಡಿಸುತ್ತ ಶಿವಭಕ್ತಿಯನ್ನು ಆಚರಿಸುವುದು ಇವರ ಕಾಯಕವಾಗಿತ್ತು. ‘ಶಿವನಲ್ಲದೆ ಅನ್ಯ ದೈವವ ಪೂಜಿಸೆ; ಶಿವ ಶಬ್ದವಲ್ಲದೆ ಅನ್ಯ ದೈವದ ಶಬ್ದವ ಕೇಳೆ’ ಎಂಬ ಪ್ರತಿಜ್ಞೆ ಅವರದಾಗಿತ್ತು. “ಶಂಭುಜಕ್ಕೇಶ್ವರ” ಎಂಬುದು ಸತ್ಯಕ್ಕನ ವಚನಗಳ ಅಂಕಿತನಾಮ. ಇವರ 27 ವಚನಗಳು ದೊರಕಿವೆ.

ಪರರಧನ, ಪರಿಶ್ರಮವಿಲ್ಲದೆ ದೊರಕುವ ಯಾವುದೇ ಆಸೆ-ಆಮಿಷಗಳಿಗೆ ಶಿವಶರಣರು ಒಳಗಾಗಬಾರದು, ಹಾಗೇನಾದರೂ ಒಳಗಾದ ಪಕ್ಷದಲ್ಲಿ ಅಂಥವರಿಗೆ ನರಕ ತಪ್ಪಿದ್ದಲ್ಲ. ಅಂಥವರು ಶಿವಶರಣರೇ ಅಲ್ಲವೆಂಬ ಭಾವ ಪ್ರಕೃತ ವಚನದ್ದಾಗಿದೆ.

ಮರು ಓದು

1. ಹರ ತನ್ನ ಭಕ್ತರ ತಿರಿವಂತೆ ಮಾಡುವ, ಒರೆದು ನೋಡುವ ಮಿಸುನಿಯದ ಚಿನ್ನದಂತೆ, ಅರೆದು ನೋಡುವ ಚಂದನದಂತೆ, ಅರಿದು ನೋಡುವ ಕಬ್ಬಿನ ಕೋಲಿನಂತೆ, ಬೆದರದೆ ಬೆಚ್ಚದೆ ಇದ್ದಡೆ, ಕರ ಪಿಡಿದು ಎತ್ತಿಕೊಂಬ ನಮ್ಮ ರಾಮನಾಥ.

2. ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆ ಆಯಿತು, ನಿಂದಕರ ನುಡಿಯಿಂದ ಏಡಿಸಲೈ ಶಿವಭಕ್ತಿಯ ಪ್ರಭೆ ಆಯಿತು ಅಹುದು ಎಂದಡೆ ಅಲ್ಲವೆಂದು ಅತಿಗಳು ಏವರು ಕುತರ್ಕಶಾಸ್ತ್ರದಿಂದ ಯಮಗತಿಗರ ಕೂಡೆ ನಾನಾ ಜನ್ಮಕ್ಕೆ ಏರದೆ, ಶಿವಾಚಾರದ ಪಥವ ತೋರಯ್ಯಾ ಕಲಿದೇವರ ದೇವ.

3. ನುಡಿಯಲು ಬಾರದು ಕೆಟ್ಟ ನುಡಿಗಳ, ನಡೆಯಲು ಬಾರದು ಕೆಟ್ಟ ನಡೆಗಳ, ನುಡಿದೊಡೆ ಏನು ನುಡಿಯದೆ ಇರ್ದಡೆ ಏನು ? ಹಿಡಿದ ವ್ರತ ಬಿಡದೆ ಇರಲು , ಅದೇ ಮಹಾ ಜ್ಞಾನದ ಆಚರಣೆ ಎಂಬೆನು ಅಜಗಣ್ಣ ತಂದೆ.

4. ಲಂಚವಂಚನಕ್ಕೆ ಕೈ ಆನದ ಭಾಷೆ, ಬಟ್ಟೆಯಲ್ಲಿ ಹೊನ್ನುವಸ್ತ್ರ ಬಿದ್ದಿದ್ದರೆ ನಾನು ಕೈಮುಟ್ಟಿ ಎತ್ತಿದೆನು, ಆದರೆ ನಿಮ್ಮ ಆಣೆ ನಿಮ್ಮ ಪ್ರಮಥರ ಆಣೆ. ಅದೇನು ಕಾರಣವು ಎಂದರೆ, ನೀವು ಇಕ್ಕಿದ ಭಿಕ್ಷದಲ್ಲಿ ಇಪ್ಪೆನಾಗಿ. ಇಂತು ಅಲ್ಲದೆ ನಾನು ಅಳಿಮನವ ಮಾಡಿ ಪರ ದ್ರವ್ಯಕ್ಕೆ ಆಸೆ ಮಾಡಿದೆನು ಆದರೆ ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನು ಎದ್ದು ಹೋಗಾ ಶಂಭುಜಕ್ಕೇಶ್ವರಾ.

ಪದಗಳ ಅರ್ಥ

ತಿರಿ – ಭಿಕ್ಷೆಬೇಡು, ತಿರುಗಾಡು;
ಮಿಸುನಿ – ಚಿನ್ನ, ಹೊನ್ನು;
ಅರೆದು – ತೇದು, ಉಜ್ಜಿ;
ಅರಿ – ಕತ್ತರಿಸು;
ಬೆದರು – ಹೆದರು, ಭಯಪಡು;
ಕರ – ಕೈ;
ಅಂಧಕಾರ – ಕತ್ತಲೆ, ತಿಮಿರ;
ಪ್ರಭೆ – ಕಾಂತಿ, ಪ್ರಕಾಶ;
ನಿಂದಕರು – ನಿಂದಿಸುವವ, ಬಯ್ಯುವವ;
ಏಡಿಸಲು – ಛೇಡಿಸು, ಚೇಷ್ಟೆಮಾಡು;
ಕುತರ್ಕ – ನ್ಯಾಯವಿಲ್ಲದ ಮಾತು;
ಪಥ – ಮಾರ್ಗ, ದಾರಿ;
ವ್ರತ – ನಿಯಮ, ಪೂಜೆ, ಧಾರ್ಮಿಕ ಅನುಷ್ಠಾನ;
ಬಟ್ಟೆ – ಮಾರ್ಗ, ದಾರಿ;
ಪ್ರಮಥರು – ಶಿವನ ಭಕ್ತರು;
ಅಳಿಮನ – ದೃಢವಲ್ಲದ ಮನಸ್ಸು, ಅಸ್ಥಿರವಾದ ಮನಸ್ಸು;
ಅದ್ದಿ – ಮುಳುಗಿಸು, ತೋಯಿಸು;

ಸಂವೇದ ವಿಡಿಯೋ ಪಾಠಗಳು

Samveda – 7th – Kannada – Vachanagala Bhavasangama (Part 1 of 2)

Samveda – 7th – Kannada – Vachanagala Bhavasangama (Part 2 of 2)

ಪದ್ಯದ ಮಾದರಿ ಗಾಯನ

https://youtu.be/Z1GsV-UF79I

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪ್ರಶ್ನೋತ್ತರಗಳು

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.