ವಚನಗಳು – ಪದ್ಯ-3

– ಬಸವಣ್ಣ, ಅಂಬಿಗರ ಚೌಡಯ್ಯ

– ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ

ಪ್ರವೇಶ : ಜೀವನದಲ್ಲಿ ದೇವರನ್ನು ಕಾಣಲು ಅಂತರಂಗಶುದ್ಧಿ ಬಹಳ ಮುಖ್ಯ. ಅನ್ಯ ಚಿಂತೆಗಿಂತ ದೇವರನ್ನು ಕಾಣಬೇಕು ಎಂಬ ಚಿಂತೆ ಮುಖ್ಯ. ಜೀವನದಲ್ಲಿ ಸ್ತುತಿ-ನಿಂದೆಗಳು ಬಂದಾಗ ಮನದಲ್ಲಿ ಕೋಪ ಮಾಡಿಕೊಳ್ಳದೆ ಸಮಾಧಾನಿಯಾಗಿರುವುದು ಮುಖ್ಯ. ಮಾನವನು ನಿರಹಂಕಾರಿಯಾಗಿ ನುಡಿಗೆ ತಕ್ಕ ನಡೆಯುಳ್ಳವರಾಗಿ, ದಾನಿಗಳಾಗಿ ಇರುವುದು ಮುಖ್ಯ ಎಂಬುದು ಇಲ್ಲಿನ ಆಶಯವಾಗಿದೆ.

1
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ; ಇದೇ ಬಹಿರಂಗಶುದ್ಧಿ;
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ.
– ಬಸವಣ್ಣ

2
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲಿ ಇಪ್ಪವರನು ಕಂಡೆನು.
ಶಿವನ ಚಿಂತೆಯಲಿದ್ದವರೊಬ್ಬರನು ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣ.
– ಅಂಬಿಗರ ಚೌಡಯ್ಯ

3
ಬೆಟ್ಟದ ಮೇಲೊಂದು ಮನೆಯ ಮಾಡಿ,
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ,
ನೊರೆತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ,
ಶಬ್ದಕ್ಕೆ ನಾಚಿದಡೆಂತಯ್ಯಾ?
ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯಾ,
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
– ಅಕ್ಕಮಹಾದೇವಿ

4
ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು;
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ;
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ
ದೃಢವಿಲ್ಲದ ಭಕ್ತಿ ಒಡೆದ ಕುಂಭದಲಿ
ಸುಜಲವ ತುಂಬಿದಂತೆ ಮಾರಯ್ಯ ಪ್ರಿಯ ಅಮರೇಶ್ವರ
ಲಿಂಗವ ಮುಟ್ಟದ ಭಕ್ತಿ.
– ಆಯ್ದಕ್ಕಿ ಲಕ್ಕಮ್ಮ

ಕೃತಿಕಾರರ ಪರಿಚಯ

ಬಸವಣ್ಣ

ಶಿವಶರಣ ಬಸವಣ್ಣ ಅವರು ಕ್ರಿ.ಶ. ಸುಮಾರು 12 ನೆಯ ಶತಮಾನದ ಪ್ರಸಿದ್ಧ ವಚನಕಾರರು ಮತ್ತು ಸಮಾಜ ಸುಧಾರಕರು. ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದರು. ಇವರು ಕಳಚುರಿ ವಂಶದ ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿ, ರಾಜ್ಯದ ಮಹಾದಂಡನಾಯಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ‘ಕೂಡಲ ಸಂಗಮದೇವಾ’ ಅಂಕಿತದಿಂದ ರಚಿಸಿರುವ ಇವರ ಸಾವಿರಾರು ವಚನಗಳು ದೊರೆತಿವೆ.

ಅಂಬಿಗರ ಚೌಡಯ್ಯ

ಶಿವಶರಣ ಅಂಬಿಗರ ಚೌಡಯ್ಯ ಅವರು ಕ್ರಿ .ಶ. ಸುಮಾರು 12ನೆಯ ಶತಮಾನದ ಪ್ರಸಿದ್ಧ ವಚನಕಾರರು ಮತ್ತು ಸಮಾಜ ಸುಧಾರಕರು. ಇವರು ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ್ರಾ ನದಿ ತೀರದಲ್ಲಿ ತನ್ನ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು. ಸಮಾಜ ಚಿಂತನೆಯ ಮೂಲಕ ಜನತೆಯ ಒಳಿತನ್ನು ಬಯಸಿದ ವಚನಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಒಬ್ಬನಾಗಿದ್ದಾರೆ. ನಮಗೆ ಸದ್ಯಕ್ಕೆ ಸಿಕ್ಕಿರುವ ಅಂಬಿಗರ ಚೌಡಯ್ಯ ಅವರ ವಚನಗಳು 278, ಅವುಗಳಲ್ಲಿ ಚೌಡಯ್ಯ ಅವರ ಅಂತರಾಳದ ಅನುಭವ, ಸಮಾಜದಲ್ಲಿ ತಾವು ಕಂಡು ಉಂಡ ಅನುಭವಗಳನ್ನು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಇವರ ಅಂಕಿತ ನಾಮ ‘ಅಂಬಿಗರ ಚೌಡಯ್ಯ’ ಎಂಬುದಾಗಿದೆ.

ಅಕ್ಕಮಹಾದೇವಿ

ಶಿವಶರಣೆ ಅಕ್ಕಮಹಾದೇವಿ ಅವರು ಕ್ರಿ ಶ. ಸುಮಾರು 12ನೆಯ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ ಗ್ರಾಮದಲ್ಲಿ ಜನಿಸಿದರು. ಇವರು ಒಬ್ಬ ಶ್ರೇಷ್ಠ ವಚನಕಾರ್ತಿ ಹಾಗೂ ಕವಯಿತ್ರಿ. ಇವರ 434 ವಚನಗಳು ಲಭ್ಯವಾಗಿವೆ.
ಇವರ ಬರೆವಣಿಗೆಯು ಭಾವಗೀತಾತ್ಮಕವಾದುದು. ಜೀವನದ ನೋವುನಲಿವು, ಆಧ್ಯಾತ್ಮಿಕ ನಿಲುವು ಅವರ ಅಭಿವ್ಯಕ್ತಿಯ ವೈಶಿಷ್ಟ್ಯಗಳಾಗಿವೆ. ‘ಚೆನ್ನಮಲ್ಲಿಕಾರ್ಜುನ’ ಎಂಬುದು ಇವರ ವಚನಗಳ ಅಂಕಿತವಾಗಿದೆ.

ಆಯ್ದಕ್ಕಿ ಲಕ್ಕಮ್ಮ

ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರು ಕ್ರಿ. ಶ. ಸುಮಾರು 12 ನೆಯ ಶತಮಾನದ ವಚನಕಾರ್ತಿ ಹಾಗೂ ಕಾಯಕಯೋಗಿ. ಬಸವಣ್ಣ ಅವರ ಸಮಕಾಲೀನರು. ಕಾಯಕಯೋಗಿ ಆಯ್ದಕ್ಕಿ ಮಾರಯ್ಯ ಅವರ ಧರ್ಮಪತ್ನಿ. ಇವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮದವರು. ಬಸವಣ್ಣ ಅವರ ಕೀರ್ತಿಯನ್ನು ಕೇಳಿದ ಇವರು ಕಲ್ಯಾಣಕ್ಕೆ ಬಂದು ನೆಲೆಸುತ್ತಾರೆ. ಮಹಾಮನೆಯ ಅಂಗಳದಲ್ಲಿ ಶುದ್ಧ ಅಕ್ಕಿಯನ್ನು ಆಯ್ದು ಜಂಗಮ ದಾಸೋಹವನ್ನು ನಡೆಸುತ್ತಿದ್ದರು. ‘ಮಾರಯ್ಯ ಪ್ರಿಯ ಅಮರೇಶ್ವರಲಿಂಗ’ ಎಂಬುದು ಇವರ ವಚನಗಳ ಅಂಕಿತವಾಗಿದೆ.

ಪದಗಳ ಅರ್ಥ

ಅರಿವು – ತಿಳಿವಳಿಕೆ, ಜ್ಞಾನ
ಒಲಿಸು – ಮನವೊಪ್ಪಿಸು
ಗರ್ವ – ಸೊಕ್ಕು, ಅಹಂಕಾರ
ದ್ರವ್ಯ – ಐಶ್ವರ್ಯ, ಸಂಪತ್ತು
ಪರಿ – ರೀತಿ, ಕ್ರಮ
ಹಳಿ – ನಿಂದಿಸು, ದೂಷಿಸು
ಹಾನಿ – ಕೇಡು, ನಾಶ, ನಷ್ಟ
ಹುಸಿ – ಸುಳ್ಳು, ಅಸತ್ಯ

ಸಂವೇದ ವಿಡಿಯೋ ಪಾಠಗಳು

Samveda – 5th – Kannada – Vachanagalu

ಪೂರಕ ವಿಡಿಯೋಗಳು

ವಚನಗಳು | ಸಿರಿ ಕನ್ನಡ | ಐದನೇ ತರಗತಿ | ಪದ್ಯಪಾಠ 3| Vachanagalu |5th Class Kannada Poem With Animation

ಪದ್ಯದ ಮಾದರಿ ಗಾಯನ

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ poem
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ poem
ಬೆಟ್ಟದ ಮೇಲೊಂದು ಮನೆಯ ಮಾಡಿ poem
ಬೆಟ್ಟದ ಮೇಲೊಂದು ಮನೆಯ ಮಾಡಿ poem
ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು I ಶರಣರ ವಚನಾಮೃತ I Sharanara Vachanmrutha

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ ಮಾಹಿತಿ

ನಾಮಪದದ ವಿಶೇಷ ಗುಣವನ್ನು ತಿಳಿಸುವ ಅಥವಾ ಸೂಚಿಸುವ ಪದವೇ ಗುಣ ವಿಶೇಷಣ.
ಉದಾ : ರಿತೇಶನ ಬಳಿ ಕರಿಯ ಮೊಲವಿದೆ.
ಇಲ್ಲಿ ‘ಕರಿಯ’ ಎಂಬುದು ಮೊಲದ ಬಣ್ಣವನ್ನು ತಿಳಿಸುತ್ತದೆ.
1. ಕಾಂಚನಾ ಸುಂದರ ಹುಡುಗಿ.
2. ದರ್ಶಿನಿ ಕೆಂಪು ಲಂಗವನ್ನು ತೊಟ್ಟಿದ್ದಾಳೆ.
3. ರಾಘುವಿನ ಹತ್ತಿರ ದೊಡ್ಡ ವಿಮಾನವಿದೆ.
ಇಲ್ಲಿ ಅಡಿಗೆರೆ ಎಳೆಯಲಾದ ‘ಸುಂದರ’, ‘ಕೆಂಪು’, ‘ದೊಡ್ಡ’ ಈ ಪದಗಳನ್ನು ಗಮನಿಸಿರಿ. ಬಣ್ಣ, ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಾಗಿವೆ. ಇವುಗಳನ್ನು ‘ಗುಣ ವಿಶೇಷಣ’ಗಳೆನ್ನುವರು.

ಕನ್ನಡ ಪಾಠಗಳು – ಗುಣವಾಚಕಗಳು (ಗುಣವಿಶೇಷಣಗಳು)

ಓದಿಗೆ ಮನ್ನಣೆ

1. ವಿವಿಧ ವಚನಕಾರರ ವಚನಗಳನ್ನು ಸಂಗ್ರಹಿಸಿ ಓದಿರಿ.


2. ಧ್ವನಿ ಸುರುಳಿಯಲ್ಲಿರುವ ವಚನಗಳನ್ನು ಆಲಿಸಿರಿ.

ವಚನ ಮಂತ್ರ

ಶುಭನುಡಿ

1. ಬಹಿರಂಗಶುದ್ಧಿಗಿಂತ ಅಂತರಂಗಶುದ್ಧಿ ಬಹಳ ಮುಖ್ಯ.
2. ದೈವ ಚಿಂತನೆಯಿಂದ ಮನಸ್ಸಿಗೆ ಆನಂದ ದೊರೆಯುತ್ತದೆ.
3. ಹೊಗಳಿಕೆಗೆ ಹಿಗ್ಗಬಾರದು; ತೆಗಳಿಕೆಗೆ ಕುಗ್ಗಬಾರದು.
4. ನಡೆನುಡಿಗಳು ಒಂದಾಗಿರಬೇಕು.