ರಾಜ್ಯ ಸರ್ಕಾರ – ಅಧ್ಯಾಯ-11
ಪಾಠದ ಪರಿಚಯ
ಈ ಅಧ್ಯಾಯದಲ್ಲಿ ರಾಜ್ಯ ಸರ್ಕಾರದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಪರಿಚಯವಿದೆ. ಜೊತೆಗೆ ದ್ವಿಸದನ ವ್ಯವಸ್ಥೆ, ಮೇಲ್ಮನೆ ಮತ್ತು ಕೆಳಮನೆಗಳ ಮಹತ್ವವನ್ನು ನಿರೂಪಣೆ ಮಾಡಲಾಗಿದೆ. ಶಾಸಕರ ಅರ್ಹತೆಗಳು ಹಾಗೂ ಕಾರ್ಯಗಳು; ಮತ್ತು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಅರ್ಹತೆಗಳು, ಕಾರ್ಯಗಳು ಮತ್ತು ಅಧಿಕಾರಗಳ ಬಗ್ಗೆ ಕೂಡ ಇಲ್ಲಿ ವಿವರಣೆಯಿದೆ.
ಕೆಳಗಿನ ಚಿತ್ರವನ್ನು ನೋಡಿ.


ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಶಾಸನಗಳನ್ನು (ಕಾನೂನುಗಳನ್ನು) ಮಾಡುತ್ತಾರೆ. (ಶಾಸಕಾಂಗ)




ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳಿವೆ. ಇವುಗಳ ಅಧಿಕಾರ ವ್ಯಾಪ್ತಿ ಕಡಿಮೆ. ಆದರೂ ಇವುಗಳಿಗೆ ತಮ್ಮದೇ ಆದ ಸ್ವಯಮಾಧಿಕಾರ ಅಥವಾ ಸ್ವಾಯತ್ತತೆ ಇದೆ. ರಾಜ್ಯಗಳು ಮುಖ್ಯವಾಗಿ ಭಾಷೆಗಳ ಆಧಾರದಲ್ಲಿ ರಚನೆಗೊಂಡಿವೆ. ಕರ್ನಾಟಕದಲ್ಲಿ ಕನ್ನಡ ರಾಜ್ಯ ಭಾಷೆ.
ನಮ್ಮ ಸಂವಿಧಾನವು ಎಲ್ಲ ರಾಜ್ಯಗಳಲ್ಲಿ ಏಕಪ್ರಕಾರದ ರಾಜ್ಯಾಡಳಿತವನ್ನು ರೂಪಿಸಿದೆ. ಸಾಮಾನ್ಯವಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾದರಿಯನ್ನೇ ಹೊಂದಿದೆ.
ರಾಜ್ಯ ಶಾಸಕಾಂಗ: ಸರ್ಕಾರದ ಮೂರು ಅಂಗಗಳೆಂದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ. ರಾಜ್ಯಪಾಲ ಮತ್ತು ವಿಧಾನಮಂಡಲ(ಎರಡೂ ಸದನಗಳು) ಸೇರಿ ರಾಜ್ಯ ಶಾಸಕಾಂಗವಾಗುತ್ತದೆ. ಶಾಸಕಾಂಗವು ರಾಜ್ಯದ ಶಾಸನಗಳನ್ನು ಮಾಡುತ್ತದೆ.
ಭಾರತದ ಆರು ರಾಜ್ಯಗಳಲ್ಲಿ ಮಾತ್ರವೇ ಶಾಸಕಾಂಗವು ವಿಧಾನಸಭೆ’ ಮತ್ತು ‘ವಿಧಾನಪರಿಷತ್ತು’ ಎಂಬ ಎರಡು ಸದನಗಳನ್ನು ಒಳಗೊಂಡಿದೆ. ಹೀಗಿದ್ದರೆ ‘ದ್ವಿಸದನ ಪದ್ಧತಿ’ ಎನ್ನುವರು. ಉಳಿದ ಎಲ್ಲ ರಾಜ್ಯಗಳಲ್ಲಿ ವಿಧಾನಸಭೆ ಮಾತ್ರವೇ ಇದೆ. ಇದು ಏಕಸದನ ಪದ್ಧತಿ’ ಎನಿಸಿದೆ. ಕರ್ನಾಟಕದಲ್ಲಿ ದ್ವಿಸದನ ಪದ್ಧತಿಯಿದೆ.
ವಿಧಾನಸಭೆ (ಕೆಳಮನೆ)
ರಚನೆ: ಇದು ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಬಂದ ಅಭ್ಯರ್ಥಿಗಳ ಸದನವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಒಟ್ಟು 224 ಸ್ಥಾನಗಳಿವೆ.
ವಿಧಾನ ಸಭೆಗೆ ರಾಜ್ಯಪಾಲರು ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಸೇರಿದ ಒಬ್ಬರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಾರೆ. ಈ ಮೊದಲು ವಿಧಾನ ಸಭೆಗೆ ರಾಜ್ಯಪಾಲರು ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದ ಒಬ್ಬರನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡುವ ಅವಕಾಶವನ್ನು ಹೊಂದಿದ್ದರು. ಆದರೆ 2020ರ 104ನೆ ಸಂವಿಧಾನ ತಿದ್ದುಪಡಿಯನ್ವಯ ಈ ಅವಕಾಶವನ್ನು ಮುಂದುವರೆಸಿಲ್ಲ.
ವಿಧಾನಸಭೆಯ ಸದಸ್ಯರು (ಎಂಎಲ್‍ಎ) ತಮ್ಮೊಳಗೆ ಒಬ್ಬರನ್ನು ಸಭಾಧ್ಯಕ್ಷರನ್ನಾಗಿ (ಸ್ಪೀಕರ್) ಚುನಾಯಿಸುತ್ತಾರೆ. ವಿಧಾನಸಭೆಯ ಅಧಿಕಾರಾವಧಿ ಐದು ವರ್ಷಗಳು. ಇದು ಖಾಯಂ ಸಭೆಯಲ್ಲ. ವಿಧಾನಸಭಾ ಸದಸ್ಯರ ಅರ್ಹತೆಗಳು:
* ಭಾರತದ ಪ್ರಜೆಯಾಗಿರಬೇಕು.
* ಕನಿಷ್ಠ 25 ವರ್ಷ ಆಗಿರಬೇಕು.
* ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
* ದಿವಾಳಿಯಾಗಿರಬಾರದು.
ಶಾಸಕರ ಜವಾಬ್ದಾರಿಗಳು: ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು, ಜನರ ಸುಖದುಃಖಗಳಲ್ಲಿ ಭಾಗವಹಿಸಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅವರ ಮುಖ್ಯ ಜವಾಬ್ದಾರಿಯಾಗಿದೆ. ಜನಕಲ್ಯಾಣ ಯೋಜನೆಗಳಲ್ಲಿಯೂ ಅವರು ವಿಶೇಷ ಕಾಳಜಿ ವಹಿಸತಕ್ಕದ್ದು. ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ, ಅವರಿಗೆ ಸರ್ಕಾರವು ಮಾಸಿಕ ವೇತನ ಮತ್ತು ಕೆಲವು ಸವಲತ್ತುಗಳನ್ನು ನೀಡಿದೆ. ಅವರು ಕೆಲವು ಹಕ್ಕುಗಳು ಮತ್ತು ರಕ್ಷಣೆಗಳನ್ನೂ ಪಡೆದಿದ್ದಾರೆ.
ವಿಧಾನಸಭೆಯ ಅಧಿಕಾರ ಮತ್ತು ಕಾರ್ಯಗಳು:
* ವಾಸ್ತವವಾಗಿ ವಿಧಾನಸಭೆಯೇ ರಾಜ್ಯದ ಶಾಸಕಾಂಗವಾಗಿದೆ.
* ಹಣಕಾಸು ವಿಷಯದಲ್ಲಿ ವಿಧಾನಸಭೆಯ ನಿರ್ಣಯವೇ ಅಂತಿಮ.
* ಪ್ರಮುಖವಾಗಿ ಮಂತ್ರಿಮಂಡಲದ ಮೇಲೆ ನಿಯಂತ್ರಣ (ಹತೋಟಿ) ಇಟ್ಟುಕೊಳ್ಳುವುದು ಅದರ ಕಾರ್ಯವಾಗಿದೆ. ಮಂತ್ರಿಮಂಡಲದ ಕಾರ್ಯ/ನೀತಿಗಳು ಅಸಮಾಧಾನಕರವಾಗಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ ಬಹುಮತ ಸಾಬೀತು ಪಡಿಸಿದರೆ ಮಂತ್ರಿಮಂಡಲವನ್ನು ವಜಾಗೊಳಿಸಬಹುದಾಗಿದೆ.
* ವಿಧಾನಸಭೆಯ ಸದಸ್ಯರು ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸುತ್ತಾರೆ.
ವಿಧಾನಪರಿಷತ್ತು (ಮೇಲ್ಮನೆ)
ರಚನೆ: ವಿಧಾನಪರಿಷತ್ತಿನ ಸದಸ್ಯರ (ಎಂ.ಎಲ್.ಸಿ.) ಸಂಖ್ಯೆಯು ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆಯ 1/3ಕ್ಕಿಂತ ಹೆಚ್ಚಿರಬಾರದು. ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರ ಬಲ ಕೆಲವು ಸದಸ್ಯರನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡುತ್ತಾರೆ. ಇನ್ನುಳಿದವರನ್ನು ವಿಧಾನಸಭೆಯ ಸದಸ್ಯರು, ಸ್ಥಳೀಯ ಸಂಸ್ಥೆಗಳು, ನೋಂದಾಯಿಸಿದ ಪದವೀಧರರು ಹಾಗೂ ಶಿಕ್ಷಕರು ಆಯ್ಕೆ ಮಾಡುತ್ತಾರೆ.
ವಿಧಾನಪರಿಷತ್ತಿನ ಸದಸ್ಯರ ಅಧಿಕಾರಾವಧಿ ಆರು ವರ್ಷಗಳು. ಸದಸ್ಯರಿಗೆ ಕನಿಷ್ಠ 30 ವರ್ಷ ಆಗಿರಬೇಕು.
ರಾಜ್ಯ ಕಾರ್ಯಾಂಗ: ರಾಜ್ಯ ಕಾರ್ಯಾಂಗವು ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಹಾಗೂ ಅವರ ಮಂತ್ರಿಮಂಡಲವನ್ನು ಒಳಗೊಂಡಿದೆ. ಸಾಮಾನ್ಯವಾಗಿ ಅದರ ರಚನೆ ಮತ್ತು ಕಾರ್ಯಗಳು ಕೇಂದ್ರ ಕಾರ್ಯಾಂಗವನ್ನು ಹೋಲುತ್ತದೆ.
ರಾಜ್ಯಪಾಲ: ರಾಜ್ಯಪಾಲರು ಸಾಂವಿಧಾನಿಕವಾಗಿ ಮಾತ್ರವೇ ಕಾರ್ಯಾಂಗದ ಮುಖ್ಯಸ್ಥರು. ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಮುಖ್ಯಮಂತ್ರಿಯವರು. ರಾಜ್ಯಪಾಲರನ್ನು
ರಾಷ್ಟ್ರಪತಿ ನೇಮಕ ಮಾಡುತ್ತಾರೆ. ರಾಜ್ಯಪಾಲರ ಅಧಿಕಾರಾವಧಿ ಐದು ವರ್ಷ.
ರಾಜ್ಯಪಾಲರ ಅರ್ಹತೆ:
* ಭಾರತದ ಪ್ರಜೆಯಾಗಿರಬೇಕು.
* ಕನಿಷ್ಠ 35 ವರ್ಷಗಳು ತುಂಬಿರಬೇಕು.
* ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಸದಸ್ಯರಾಗಿರಬಾರದು.
ರಾಜ್ಯಪಾಲರ ಅಧಿಕಾರಗಳು:
ರಾಜ್ಯಪಾಲರು ಮುಖ್ಯಮಂತ್ರಿಯವರನ್ನು ನೇಮಿಸಿ ಅವರ ಸಲಹೆ ಮೇರೆಗೆ ಇತರ
ಮಂತ್ರಿಗಳನ್ನು ನೇಮಿಸುತ್ತಾರೆ.
* ಶಾಸನಸನಗಳು ಅಂಗೀಕರಿಸಿದ ವಿಧೇಯಕವು ಜಾರಿಗೆ ಬರಬೇಕಾದರೆ ರಾಜ್ಯಪಾಲರ ಒಪ್ಪಿಗೆಬೇಕು.
* ರಾಜ್ಯದಲ್ಲಿ ಸಾಂವಿಧಾನಿಕ ಅಸ್ಥಿರತೆ ಉಂಟಾದರೆ, ರಾಜ್ಯಪಾಲರು ರಾಷ್ಟ್ರಪತಿಯವರಿಗೆ ವರದಿ ನೀಡಿ ರಾಜ್ಯ ಸರ್ಕಾರವನ್ನು ವಜಾ ಮಾಡಿಸಬಹುದು.
* ರಾಷ್ಟ್ರಪತಿ ರಾಜ್ಯ ಸರ್ಕಾರವನ್ನು ವಿಸರ್ಜಿಸಿ, ರಾಜ್ಯದಲ್ಲಿ ರಾಷ್ಟ್ರಾಧ್ಯಕ್ಷರ ಆಡಳಿತ ಜಾರಿಯಲ್ಲಿರುವ ಅವಧಿಯಲ್ಲಿ, ರಾಜ್ಯಪಾಲರೇ ರಾಜ್ಯದ ಆಡಳಿತವನ್ನು ವಾಸ್ತವವಾಗಿ ನಡೆಸುತ್ತಾರೆ.
ಮುಖ್ಯಮಂತ್ರಿ: ಕೇಂದ್ರದಲ್ಲಿ ಪ್ರಧಾನಮಂತ್ರಿಯವರು ಸರ್ಕಾರದ ಮುಖ್ಯಸ್ಥರಾಗಿದ್ದರೆ, ರಾಜ್ಯದಲ್ಲಿ ಮುಖ್ಯಮಂತ್ರಿಯವರು ಸರ್ಕಾರದ ಮುಖ್ಯಸ್ಥರು. ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದ ಅಥವಾ ಗುಂಪಿನ ನಾಯಕರನ್ನು ಮುಖ್ಯಮಂತ್ರಿಯವರನ್ನಾಗಿ ರಾಜ್ಯಪಾಲರು ನೇಮಿಸುತ್ತಾರೆ.
ಮುಖ್ಯಮಂತ್ರಿಯವರ ಅಧಿಕಾರ ಮತ್ತು ಕರ್ತವ್ಯಗಳು:
* ಮುಖ್ಯಮಂತ್ರಿಯವರ ಸಲಹೆ ಮೇರೆಗೆ ರಾಜ್ಯಪಾಲರು ಮಂತ್ರಿಗಳನ್ನು ನೇಮಿಸುತ್ತಾರೆ.
* ಮುಖ್ಯಮಂತ್ರಿಯವರು ಮಂತ್ರಿಗಳಿಗೆ ಖಾತೆಗಳನ್ನು ನೀಡುವ ಮತ್ತು ಬದಲಾಯಿಸುವ
ಅಧಿಕಾರವನ್ನು ಪಡೆದಿದ್ದಾರೆ.
* ಮಂತ್ರಿಗಳನ್ನು ಪದಚ್ಯುತಿಗೊಳಿಸುವ ಅಧಿಕಾರ ಮುಖ್ಯಮಂತ್ರಿಯವರಿಗಿದೆ.
* ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಪ್ರಮುಖ ಪಾತ್ರವಹಿಸುತ್ತಾರೆ.
* ಒಟ್ಟಿನಲ್ಲಿ ರಾಜ್ಯದ ಪ್ರಗತಿಯು ಮುಖ್ಯಮಂತ್ರಿಯವರ ನೇತೃತ್ವ ಹೊಂದಿರುವ ಮಂತ್ರಿಮಂಡಲದ ಉತ್ತಮ ಆಡಳಿತದಿಂದ ಸಾಧ್ಯವಾಗುತ್ತದೆ.
ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * *