ರಾಜ್ಯ ನಿರ್ದೇಶಕ ತತ್ವಗಳು
ಪಾಠದ ಪರಿಚಯ :
ನಮ್ಮ ಸಂವಿಧಾನದಲ್ಲಿ ಅಳವಡಿಸಿರುವ ರಾಜ್ಯ ನಿರ್ದೇಶಕ ತತ್ವಗಳು ಪ್ರಸ್ತಾವನೆಯಲ್ಲಿ ವ್ಯಕ್ತವಾಗಿರುವ ಧ್ಯೇಯೋದ್ದೇಶಗಳನ್ನು ಸಾಧಿಸಲು ಇವು ಸಹಾಯವಾಗುತ್ತವೆ ಎಂಬುದನ್ನು ವಿವರಿಸಲಾಗಿದೆ.
ರಾಜ್ಯ ನಿರ್ದೇಶಕ ತತ್ವಗಳ ಅರ್ಥ :
ಸುಖೀರಾಜ್ಯ ಸ್ಥಾಪನೆಯ ಗುರಿಯನ್ನು ಸಾಧಿಸುವುದಕ್ಕಾಗಿ ಸಂವಿಧಾನವು ಕೆಲವು ತತ್ವಗಳನ್ನು ಮುಂದಿಟ್ಟು ರಾಜ್ಯಕ್ಕೆ ಮಾರ್ಗದರ್ಶನ ನೀಡಿದೆ. ಇಂತಹ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯ ನಿರ್ದೇಶಕ ತತ್ವಗಳು ಎನ್ನುವರು.
ರಾಜ್ಯ ನಿರ್ದೇಶಕ ತತ್ವಗಳ ಪ್ರಾಮುಖ್ಯತೆ :
ರಾಜ್ಯ ನಿರ್ದೇಶಕ ತತ್ವಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡುವ ನಿರ್ದೇಶನಗಳಾಗಿವೆ. ಕಾನೂನು ರಚಿಸುವಾಗ, ನೀತಿಗಳನ್ನು ರಚಿಸಿ ಜಾರಿಗೆ ತರುವಾಗ ಈ ತತ್ವಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಾಧಿಸಲು ಮತ್ತು ಸುಖಿಃ ರಾಜ್ಯವನ್ನು ಸ್ಥಾಪಿಸಲು ರಾಜ್ಯ ನಿರ್ದೇಶಕ ತತ್ವಗಳು ಮುಖ್ಯವೆನಿಸುತ್ತವೆ.
ರಾಜ್ಯ ನಿರ್ದೇಶಕ ತತ್ವಗಳ ವಿಧಗಳು :
ಭಾರತ ಸಂವಿಧಾನದಲ್ಲಿ ಅಳವಡಿಸಿರುವ ರಾಜ್ಯ ನಿರ್ದೇಶಕ ತತ್ವಗಳು ಕೆಳಕಂಡಂತಿವೆ.
- ಸಾಮಾಜಿಕ ನ್ಯಾಯ : ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸಿ ಜನಕಲ್ಯಾಣವನ್ನು ಸಾಧಿಸುವುದು.
- ದುರ್ಬಲರಿಗೆ ಸಾಮಾಜಿಕ ನ್ಯಾಯ : ದುರ್ಬಲರಿಗೆ ಜೀವನಾಧಾರ ನೀಡುವುದು; ಅವರ ಆರ್ಥಿಕ ಶೋಷಣೆಯ ನಿವಾರಣೆ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು ಅವರಿಗೆ ಕಾನೂನಿನ ಉಚಿತ ನೆರವು ಒದಗಿಸುವುದು.
- ಮಹಿಳೆ ಮತ್ತು ಮಕ್ಕಳ ಕಲ್ಯಾಣ : ಒಂದೇ ರೀತಿಯ ಕೆಲಸಕ್ಕೆ ಪುರುಷರಷ್ಟೇ ಮಹಿಳೆಯರಿಗೂ ಸಮಾನ ವೇತನ ; ಮಹಿಳೆಯರಿಗೆ ಹೆರಿಗೆ ಸೌಲಭ್ಯ ; ಮಕ್ಕಳ ಶೋಷಣೆಯ ತಡೆ ; ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಅವಕಾಶ ಮತ್ತು ಅವರಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ.
- ಕಾರ್ಮಿಕ ಕಲ್ಯಾಣ : ಕಾರ್ಮಿಕರ ಯೋಗಕ್ಷೇಮ ನೋಡಿಕೊಳ್ಳುವುದು : ದುಡಿಯುವ ಹಕ್ಕು ; ದುಡಿಯಲು ಅನುಕೂಲಕರ ವಾತಾವರಣ ; ಕಾರ್ಮಿಕರಿಗೆ ಕನಿಷ್ಠ ವೇತನ ; ಮತ್ತು ಅವರಿಗೆ ಆಡಳಿತದಲ್ಲಿ ಭಾಗಿಗಳಾಗಲು ಅವಕಾಶ ನೀಡುವುದು.
- ಅಸಹಾಯಕರಿಗೆ ನೆರವು : ವೃದ್ಧ, ರೋಗಿ ಮತ್ತು ನಿರುದ್ಯೋಗಿಗಳು ಬದುಕಲು ಸರ್ಕಾರದಿಂದ ನೆರವು.
- ಸರ್ವರಿಗೂ ಸಮಾನ ಕಾನೂನು : ಭಾರತದ ಎಲ್ಲ ಪ್ರಜೆಗಳಿಗೂ ಸಮಾನ ನಾಗರಿಕ ಕಾನೂನು ಜಾರಿಮಾಡುವುದು.
- ಮದ್ಯಪಾನ ನಿಷೇಧ : ಮದ್ಯಪಾನದಿಂದ ಆರೋಗ್ಯ ಕೆಡುತ್ತದೆ, ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ ; ಹಾಗೂ ಮಹಿಳೆಯರ ಶೋಷಣೆ ಹೆಚ್ಚುತ್ತದೆ. ಇದಕ್ಕಾಗಿ ನಮ್ಮ ಸಂವಿಧಾನವು ಮದ್ಯಪಾನ ನಿಷೇಧವನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
- ಕೃಷಿ ಮತ್ತು ಪಶು ಸಂಗೋಪನೆಯ ಸಂಘಟನೆ : “ರಾಜ್ಯವು ಕೃಷಿಯನ್ನು ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಸಂಘಟನೆ ಗೊಳಿಸುವುದಕ್ಕೆ ಪ್ರಯತ್ನಿಸತಕ್ಕುದು ಮತ್ತು ವಿಶೇಷವಾಗಿ ತಳಿಗಳನ್ನು ಸಂರಕ್ಷಿಸಿ ಉತ್ತಮಗೊಳಿಸುವುದಕ್ಕಾಗಿ ಹಸುಗಳ ಮತ್ತು ಕರುಗಳ ಹಾಗೂ ಇತರ ಹಾಲು ಕೊಡುವ ಮತ್ತು ಭಾರ ಎಳೆಯುವ ದನಕರುಗಳ ವಧೆಯನ್ನು ನಿಷೇಧಿಸುವುದಕ್ಕಾಗಿ ಕ್ರಮ ಕೈಗೊಳ್ಳತಕ್ಕುದು” ಎಂದು ಸಂವಿಧಾನದಲ್ಲಿ ನಿರ್ದೇಶಿಸಲಾಗಿದೆ.
- ಪರಿಸರ : ಪರಿಸರ ರಕ್ಷಣೆ ಮತ್ತು ಸುಧಾರಣೆ ಹಾಗೂ ವನ್ಯಜೀವಿಗಳ ರಕ್ಷಣೆ; ಗಣಿಗಾರಿಕೆ, ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯಗಳಿಂದ ಪರಿಸರವನ್ನು ಸಂರಕ್ಷಿಸುವುದು. ಹಾಗೂ ವನ್ಯಜೀವಿಗಳ ರಕ್ಷಣೆ ಮಾಡುವುದು.
- ಐತಿಹಾಸಿಕ ಸ್ಮಾರಕಗಳ ರಕ್ಷಣೆ : ಐತಿಹಾಸಿಕ ಸ್ಥಳಗಳ ಹಾಗೂ ಸ್ಮಾರಕಗಳ ರಕ್ಷಣೆ ಮಾಡುವುದು ಉದಾಹರಣೆ: ಹಂಪಿ, ಬೇಲೂರು, ಹಳೇಬೀಡು, ಪಟ್ಟದಕಲ್ಲು, ಶ್ರೀರಂಗಪಟ್ಟಣ, ವಿಜಯಪುರ, ಬಾದಾಮಿ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಸಂರಕ್ಷಿಸುವುದು.
- ಅಂತಾರಾಷ್ಟ್ರೀಯ ಶಾಂತಿ, ಭದ್ರತೆಗಳನ್ನು ಕಾಪಾಡುವುದರಲ್ಲಿ ದೇಶವು ಸಹ ಭಾಗಿಯಾಗುವುದು.
ಚಿತ್ರಗಳು
ಸಾಮಾಜಿಕ ನ್ಯಾಯ ಎಂದರೇನು? ಜಾತಿ, ಧರ್ಮ, ಲಿಂಗ, ಭಾಷೆ, ವರ್ಣ, ಪ್ರದೇಶ ಮತ್ತು ಅಂತಸ್ತುಗಳ ಭೇದಭಾವ ಇಲ್ಲದೆ ಎಲ್ಲಾ ನಾಗರಿಕರಿಗೆ ರಕ್ಷಣೆ ನೀಡುವುದು ಹಾಗೂ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡುವುದೇ ಸಾಮಾಜಿಕ ನ್ಯಾಯ. ಹಿಂದುಳಿದ ವರ್ಗಗಳ ಹಿತಾಸಕ್ತಿ, ಕನಿಷ್ಠ ವೇತನ, ಜೀತಪದ್ಧತಿಯ ನಿರ್ಮೂಲನ, ಮಕ್ಕಳ ಶೋಷಣೆಯ ನಿರ್ಮೂಲನ, ಸ್ತ್ರೀಯರಿಗೆ ಸಮಾನ ಹಕ್ಕು ಹಾಗೂ ಗೌರವ ಮುಂತಾದವುಗಳು ಸಾಮಾಜಿಕ ನ್ಯಾಯಕ್ಕೆ ಒಳಪಟ್ಟಿವೆ.
ಸಂವಿಧಾನವು ಹಲವಾರು ಸಲಹೆ ಮತ್ತು ನಿರ್ದೇಶನಗಳನ್ನು ರಾಜ್ಯಕ್ಕೆ ನೀಡಿದೆ. ಆದರೂ ಅವುಗಳ ಉಲ್ಲಂಘನೆಯಾದರೆ, ನಾಗರಿಕರು ನ್ಯಾಯಾಲಯದಲ್ಲಿ ದೂರು ಸಲ್ಲಿಸುವಂತಿಲ್ಲ. (ಉದಾಹರಣೆ – ಆರು ದಶಕಗಳು ಕಳೆದರೂ ಕೇಂದ್ರ ಸರ್ಕಾರ ಮತ್ತು ಅನೇಕ ರಾಜ್ಯ ಸರ್ಕಾರಗಳು ಮದ್ಯಪಾನ ನಿಷೇಧ ಕಾನೂನು ತಂದಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ದೂರು ಸಲ್ಲಿಸುವಂತಿಲ್ಲ.)
Reading your article has greatly helped me, and I agree with you. But I still have some questions. Can you help me? I will pay attention to your answer. thank you.