ದಿನಾಂಕ 1.11.2023 ರಿಂದ 03-11-2023ರ ವರೆಗೆ ಮೂರು ದಿನಗಳ ಕಾಲ ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣ ಉಡುಪಿಯಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಮಂಜುನಾಥ ಗೌಡ ತೃತೀಯ ಸ್ಥಾನವನ್ನು ಪಡೆದು ನಮ್ಮ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾಳೆ.
ಈ ಹಿಂದೆ ನಡೆದ ವಲಯ ಮಟ್ಟದಲ್ಲಿ 100 ಮೀಟರ್ ಓಟ, ಎತ್ತರ ಜಿಗಿತ ಮತ್ತು ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೀರಾಗ್ರಣಿಯಾಗಿರುತ್ತಾಳೆ. ತಾಲೂಕ ಮಟ್ಟದಲ್ಲಿ ಎತ್ತರ ಜಿಗಿತದಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ತೃತೀಯ ಹಾಗೂ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಳು. ಜಿಲ್ಲಾ ಮಟ್ಟದಲ್ಲಿ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನವನ್ನು ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು.
8ನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ತೀರ್ವ ಪೈಪೋಟಿ :
14 ವರ್ಷ ವಯೋಮಾನದೊಳಗೆ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ 8ನೇ ತರಗತಿಗಳು ಸೇರಿ 99 ಜನ ಸ್ಪರ್ಧಾಳುಗಳಿದ್ದರು. ಅಂತಿಮ ಸುತ್ತಿನಲ್ಲಿ 7 ಸ್ಪರ್ಧಾಳುಗಳಲ್ಲಿ ತೀರ್ವ ಪೈಪೋಟಿ ನಡೆದು ತೃತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಮೊದಲೆರಡು ಸ್ಥಾನವು ಆಳ್ವಾಸ್ ಶಿಕ್ಷಣ ಸಂಸ್ಥೆಯ 8ನೇ ತರಗತಿಯ ವಿದ್ಯಾರ್ಥಿನಿಯರ ಪಾಲಾಯಿತು.
ಈ ವಿದ್ಯಾರ್ಥಿನಿಯ ಕ್ರೀಡಾ ಸಾಧನೆಯನ್ನು ಮೆಚ್ಚಿ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಪಾಲಕ ಪೋಷಕರು ಹಾಗೂ ಸಮಸ್ತ ಹಾವಿನಬೀಳು ನಾಗರಿಕರು ಅಭಿನಂದಿಸಿರುತ್ತಾರೆ. ಯಾವುದೇ ದೈಹಿಕ ಶಿಕ್ಷಕರಿಲ್ಲದೆ ಶಾಲೆಯಲ್ಲಿರುವ ಶಿಕ್ಷಕರ ಮಾರ್ಗದರ್ಶನದಿಂದ ಗ್ರಾಮೀಣ ಪ್ರತಿಭೆಯೊಂದು ಈ ಸಾಧನೆಯನ್ನು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.