ಯಾಣ ಕುರಿತೊಂದು ಪತ್ರ – ಪಾಠ-7
ರಚನಾ ಸಮಿತಿ
ಪ್ರವೇಶ: ನಮ್ಮ ಕನ್ನಡ ನಾಡು ಪ್ರಾಕೃತಿಕ ಸೊಬಗಿನಿಂದ ಕೂಡಿದ ಸುಂದರ ನಾಡು. ಕನ್ನಡ ನಾಡಿನ ಯಾವ ಭಾಗಕ್ಕೆ ಹೋದರೂ ಅಲ್ಲಿ ಪ್ರೇಕ್ಷಣೀಯ ಸ್ಥಳಗಳು ಅನೇಕ. ಅವುಗಳ ಪರಿಚಯ ನಮ್ಮ ವಿದ್ಯಾರ್ಥಿಗಳಿಗೆ ಆಗಬೇಕಾಗಿರುವುದು ಬಹು ಮುಖ್ಯ. ಇಲ್ಲಿ ಚಾರಣಕ್ಕೆ ಪ್ರಸಿದ್ಧವಾದ ಯಾಣದ ಸಂಕ್ಷಿಪ್ತ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ಇದರೊಂದಿಗೆ ಮಕ್ಕಳಿಗೆ ‘ಇ-ಅಂಚೆ’ ರಚಿಸುವ ಬಗ್ಗೆ ಮಾಹಿತಿ ನೀಡುವುದು ಈ ಪಾಠದ ಆಶಯ.
ಸಲೀಂ, ರಾಗಿಣಿ, ಜೆನಿಫರ್ ಹಾಗೂ ಶಂಕರ ಪ್ರತಿದಿನ ಜೊತೆಯಾಗಿ ಓದಿಕೊಳ್ಳಲು ಗೆಳೆಯರಾಜುವಿನ ಮನೆಗೆ ಬರುತ್ತಿದ್ದರು. ಆಯಾ ದಿನ ಶಾಲೆಯಲ್ಲಿ ನಡೆದ ಪಾಠದ ಬಗ್ಗೆ ಚರ್ಚೆ ನಡೆಸುತ್ತಿದ್ದರು.
ಅದೊಂದು ಭಾನುವಾರ. ಎಲ್ಲರೂ ರಾಜುವಿನ ಮನೆಗೆ ಬಂದರು. ಸಲೀಂ ಗೆಳೆಯರ ಬಳಿ ‘ಈಗ ನಾವೊಂದು ಆಟ ಆಡೋಣ. ಆ ಮೇಲೆ ಓದಿಕೊಳ್ಳೋಣ’ ಎಂದನು. ಯಾವ ಆಟ ಎಂಬುದರ ಬಗ್ಗೆ ಜೋರಾಗಿ ಚರ್ಚೆ ನಡೆಯಿತು. ಆಗ ಒಳಗಿನಿಂದ ಬಂದ ರಾಜುವಿನ ಅಮ್ಮ “ಯಾರೂ ಗಲಾಟೆ ಮಾಡಬೇಡಿ. ರಾಜುವಿನ ಅಪ್ಪ ಕಂಪ್ಯೂಟರ್‍ನಲ್ಲಿ ಏನೋ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿ ಒಳಗೆ ಹೋದರು. ಆಗ ರಾಗಿಣಿ, “ಈ ಸಲೀಂನಿಗೆ ಯಾವಾಗ್ಲೂ ಬರೀ ಆಟದ್ದೆ ಚಿಂತೆ. ನಿನ್ನೆ ಪದ್ಮಿನಿ ಮೇಡಂ ನಮಗೆಲ್ಲಾ ಕಂಪ್ಯೂಟರ್‍ನಲ್ಲಿ ವಿಶೇಷ ಪತ್ರ ಬರೆಯುವ ಬಗ್ಗೆ ಹೇಳಿಕೊಡಲಿಲ್ವೆ” ಎಂದು ವಿಷಯಕ್ಕೆ ಬಂದಳು. ಆಗ ಎಲ್ಲರೂ “ಹೌದಲ್ವ” ಎಂದು ಪತ್ರ ಬರೆಯುವ ಕುರಿತ ಚರ್ಚೆಗೆ ತಿರುಗಿದರು. ಅಷ್ಟರಲ್ಲಿ ರಾಜುವಿನ ತಂದೆ ಸುಂದರ್ ಹೊರಗೆ ಬಂದರು. “ಏನು ಮಕ್ಕಳೇ, ಏನು ನಡೆಸಿದ್ದೀರಿ?” ಎಂದು ಕೇಳಿದರು. ಅದಕ್ಕೆ ಚೂಟಿ ರಾಗಿಣಿಯು ಪದ್ಮಿನಿ ಮೇಡಂ ಹೇಳಿದ ಗೃಹಪಾಠದ ಬಗ್ಗೆ ತಿಳಿಸಿ, “ಅದನ್ನು ಹೇಗೆ ಬರೆಯುವುದು ಎಂದು ತಿಳಿಯದೆ ಚರ್ಚೆ ಮಾಡ್ತಾ ಇದ್ದೇವೆ ಮಾಮ” ಎಂದಳು.
ಆಗ ಸುಂದರ್, ‘ಬನ್ನಿ’ ಎಂದು ಎಲ್ಲರನ್ನು ಕಂಪ್ಯೂಟರ್ ಕೊಠಡಿಗೆ ಕರೆದುಕೊಂಡು ಹೋಗಿ ‘ಇ-ಅಂಚೆ’ ಅಥವಾ ‘ಇ-ಮೇಲ್’ ಬಗ್ಗೆ ಕಂಪ್ಯೂಟರಿನಲ್ಲಿ ತೋರಿಸುತ್ತಾ ‘ಇ-ಮೇಲ್’ ಅಂದರೆ ಕಂಪ್ಯೂಟರ್ ಮೂಲಕ ಪತ್ರಗಳನ್ನು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ಜನಪ್ರಿಯ ವಿಧಾನ ಎಂದರು. ಸಲೀಂ ಕುತೂಹಲದಿಂದ, “ಅಂಕಲ್, ಇ-ಮೇಲ್ ಎಂದರೇನು? ಎಂದು ಕೇಳಿದನು. ಅದಕ್ಕೆ ಸುಂದರ್ ‘ಇ’ಅಂದರೆ ಇಂಗ್ಲಿಷಿನಲ್ಲಿ ‘ಇಲೆಕ್ಟ್ರಾನಿಕ್’, ‘ಮೇಲ್’ ಎಂದರೆ ‘ಅಂಚೆ’ ಹಾಗಾಗಿ ಎಲೆಕ್ಟ್ರಾನಿಕ್ ಮೇಲ್ ಅನ್ನು ‘ಇ-ಅಂಚೆ’ ಎನ್ನುತ್ತಾರೆ ಎಂದರು.
ಶಂಕರ್-“ಮಾಮ, ಇ-ಮೇಲ್ ಅನ್ನು ಹೇಗೆ ಕಳಿಸ್ತಾರೆ? ಮತ್ತೆ ಇದನ್ನು ಎಲ್ಲಿ, ಯಾರು ಓದಬಹುದು?” ಎಂದು ಕೇಳಿದ. ಅದಕ್ಕೆ ಸುಂದರ್- “ನೋಡಿ ಮಕ್ಕಳೆ, ಮಾಮೂಲಿ ಅಂಚೆ ವ್ಯವಸ್ಥೆಯಂತೆ ಇಲ್ಲಿಯೂ ಪತ್ರ ತಲುಪಬೇಕಾದ ವಿಳಾಸಬೇಕು. ಇದಕ್ಕೆ ‘ಇ-ಮೇಲ್’ ವಿಳಾಸ ಅನ್ನುತ್ತಾರೆ. ನೀವು ನನಗೆ ಕಳುಹಿಸಿದ ಇ-ಮೇಲ್‍ನ್ನು ನಾನು ಕಂಪ್ಯೂಟರಿನಲ್ಲಿ ತೆರೆದು ಓದಬೇಕೆಂದರೆ ನನ್ನದೇ ಆದ ‘ಗುಪ್ತ ಸಂಕೇತ’ (Pass word) ಇರುತ್ತದೆ. ಅದನ್ನು ಬಳಸಿ ತೆರೆದು ಓದಬಲ್ಲೆ. ಈಗ ನಿಮಗೇನು ಬೇಕು? ಪದ್ಮಿನಿ ಮೇಡಂ ವಿಶೇಷ ಪತ್ರ ಬರೆದುಕೊಂಡು ಬರಲು ಹೇಳಿದ್ದಾರೆ. ಅಷ್ಟೇತಾನೆ? ಈಗ ನಿಮಗೊಂದು ವಿಶೇಷ ಪತ್ರ ತಯಾರಿಸಿ, ಕಳಿಸುತ್ತೇನೆ. ಅದನ್ನು ನಿಮ್ಮ ಶಾಲೆಯ ಕಂಪ್ಯೂಟರ್‍ನಲ್ಲಿ ತೆರೆದು ತೋರಿಸಿ” ಎಂದರು.
ಅದಕ್ಕೆ ರಾಗಿಣಿ, “ಅದು ಹೇಗೆ ಮಾಮ!” ಎಂದಳು. ಆಗ ಸುಂದರ್ “ನನ್ನ ಮಗನಿಗೆ ಕಂಪ್ಯೂಟರ್ ಬಳಸುವ ಬಗ್ಗೆ ಸ್ವಲ್ಪ ಗೊತ್ತಿದೆ. ಅವನ ಹೆಸರಿನಲ್ಲಿ ಒಂದು ‘ಇ-ಮೇಲ್’ ತಯಾರಿಸಿ ಒಂದು ಗುಪ್ತ ಸಂಕೇತ ಕೊಡುತ್ತೇನೆ. ನೋಡುತ್ತಿರಿ” ಎಂದರು. ಸುಂದರ್ ‘ಇ-ಮೇಲ್’ ರಚಿಸುವುದನ್ನು ಮಕ್ಕಳು ಕುತೂಹಲದಿಂದ ಗಮನಿಸಿದರು. ಸುಂದರ್, ರಾಜುವಿನ ಹೆಸರಿನಲ್ಲಿ ಒಂದು ಇ-ಮೇಲ್ ವಿಳಾಸ ತಯಾರಿಸಿದರು. ಅದರ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಗುಟ್ಟಾಗಿ ತಿಳಿಸಿದರು. ಆಗ ಸಲೀಂ “ಮಾಮ, ಅದೇಕೆ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಹೇಳಿದಿರಿ. ನಮಗೆ ಹೇಳಲಿಲ್ಲ ಯಾಕೆ?” ಎಂದ. ಅದಕ್ಕೆ ಸುಂದರ್, “ನೋಡು ಸಲೀಂ, ಒಬ್ಬರ ಗುಪ್ತ ಸಂಕೇತ ಇನ್ನೊಬ್ಬರಿಗೆ ಗೊತ್ತಾಗಬಾರದು. ಗೊತ್ತಾದರೆ ಯಾರು ಬೇಕಾದರೂ ಪತ್ರ ಓದಬಹುದಲ್ವೆ? ಬೇರೆಯವರ ಪತ್ರ ನಾವು ಓದಬಾರದಲ್ವೆ? ಅದಕ್ಕಾಗಿ ಗುಪ್ತ ಸಂಕೇತ ಅವನಿಗೆ ಮಾತ್ರ ಹೇಳಿದ್ದು” ಎಂದರು.
[email protected] ಎಂಬುದು ರಾಜುವಿನ ಇ-ಮೇಲ್ ವಿಳಾಸ. “ಮಕ್ಕಳೇ, ರಾಜುವಿನ ಇ-ಮೇಲ್ ವಿಳಾಸಕ್ಕೆ ನನ್ನ ಮೇಲ್‍ನಿಂದ ಚಾರಣಕ್ಕೆ ಪ್ರಸಿದ್ಧವಾದ ಯಾಣದ ಕೆಲವು ಚಿತ್ರ ಹಾಗೂ ವಿವರವನ್ನು ಕಳುಹಿಸುತ್ತೇನೆ “ಎಂದರು. ಅನಂತರ ಇ-ಮೇಲ್ ತೆರೆಯುವುದರ ಬಗ್ಗೆ ರಾಜುವಿಗೆ ತಿಳಿಸಿದರು. ರಾಜು ಇಮೇಲ್ ತೆರೆದ. ಆ ಲೇಖನವನ್ನು ರಾಜು ತನ್ನ ಗೆಳೆಯನಿಗೆ ಬರೆದ ಪತ್ರದಂತೆ ಬದಲಾಯಿಸಿಕೊಳ್ಳಲು ಸುಂದರ್ ಸಲಹೆ ನೀಡಿದರು.
ಮಕ್ಕಳೆಲ್ಲರು: “ನೀವು ನಮಗೆ ಒಳ್ಳೆಯ ಮಾಹಿತಿ ಹೇಳಿದ್ದೀರಿ ಮಾಮ. ಇ-ಮೇಲ್ ಬಗ್ಗೆ ಹೇಳಿಕೊಟ್ಟು ಮಾದರಿ ಸಹಿತ ವಿವರಿಸಿದ್ದೀರಿ. ನಿಮಗೆ ಧನ್ಯವಾದಗಳು” ಎಂದು ಹೇಳಿ ಅಲ್ಲಿಂದ ಹೊರಟರು. ಮಾರನೆಯ ದಿನ ಮಕ್ಕಳೆಲ್ಲ ಶಾಲೆಗೆ ಬಂದರು. ಪದ್ಮಿನಿ ಮೇಡಂ, “ಮಕ್ಕಳೇ ಶನಿವಾರ ನಾನು ಪತ್ರ ಲೇಖನದ ಬಗ್ಗೆ ತಿಳಿಸಿ, ವಿಶೇಷ ಪತ್ರ ಬರೆದುಕೊಂಡು ಬರಲು ಹೇಳಿದ್ದೆ. ಯಾರು ಈ ಪ್ರಯತ್ನ ಮಾಡಿದ್ದೀರಿ? ಎಂದರು. ಆಗ ರಾಜು, ರಾಗಿಣಿ, ಸಲೀಂ, ಜೆನಿಫರ್ ಹಾಗು ಶಂಕರ್ ಎದ್ದು ನಿಂತು, “ಟೀಚರ್, ನಮ್ಮನ್ನು ಕಂಪ್ಯೂಟರ್ ಕೊಠಡಿಗೆ ಕರೆದುಕೊಂಡು ಹೋಗಿ, ಅಲ್ಲಿ ನಿಮಗೆ ನಮ್ಮ ವಿಶೇಷ ಪತ್ರ ತೋರಿಸುತ್ತೇವೆ” ಎಂದರು.
ಎಲ್ಲರೂ ಕಂಪ್ಯೂಟರ್ ಕೊಠಡಿಗೆ ಹೋದರು. ರಾಜು ಕಂಪ್ಯೂಟರ್ ತೆರೆದು ಯಾರಿಗೂ ಕಾಣದ ಹಾಗೆ ತನ್ನ ಗುಪ್ತ ಸಂಕೇತ ಬಳಸಿ ‘ಇ-ಮೇಲ್’ನಲ್ಲಿದ್ದ ಪತ್ರವನ್ನು ತೆರೆದು ತೋರಿಸಿದ. ಅದರಲ್ಲಿನ ಯಾಣದ ಚಿತ್ರಗಳನ್ನು ಹಾಗೂ ಅದರ ವಿವರಗಳನ್ನು ರಾಗಿಣಿ ಮತ್ತು ಜೆನಿಫರ್ ಓದಿದರು…….
ಪ್ರೀತಿಯ ಸಲೀಂ,
ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಗಗನಚುಂಬಿ ಹೆಬ್ಬಂಡೆಗಳ ತಾಣವಾದ ಯಾಣ ಕೂಡ ಒಂದು. ಶಿರಸಿಯಿಂದ ಯಾಣ ಎಂಬ ಹಳ್ಳಿ ತಲುಪಿ ಅಲ್ಲಿಂದ 2ಕಿ.ಮೀ ಕಾಲುದಾರಿಯಲ್ಲಿ ಪ್ರಯಾಣಿಸಬೇಕು. ಬಹಳ ಇಕ್ಕಟ್ಟಾದ ಕಾಡಿನ ದಾರಿಯಲ್ಲಿ ಸಾಗುವಾಗ ಸುಸ್ತಾಗುತ್ತದೆ. ಹೀಗೆ ಸಾಗುವಾಗ ತಂಪು ಗಾಳಿಯ ಅನುಭವ ಹಿತ ನೀಡುತ್ತದೆ. ಮುಂದೆ ಸಾಗಿದರೆ ನಮಗೆ ಮೋಹಿನಿ ಶಿಖರ ಎದುರಾಗುತ್ತದೆ. ಇದು ಸುಮಾರು 300 ಅಡಿ ಎತ್ತರವಿದೆ. ಈ ಶಿಖರವನ್ನು ನೋಡುತ್ತಾ ಮುಂದುವರಿದರೆ ಮೈ ರೋಮಾಂಚನಗೊಳಿಸುವ 390 ಅಡಿ ಎತ್ತರದ ಭೈರವೇಶ್ವರ ಶಿಖರ ಕಾಣುತ್ತದೆ. ಈ ಶಿಖರ ಕಪ್ಪುಕಲ್ಲಿನ ಉಕ್ಕಿನ ಕೋಟೆಯಂತಿದೆ. ಪ್ರಕೃತಿ ಮಾತೆಯೆ ಶಿಲ್ಪಿಯ ರೂಪು ತಾಳಿ ಇಲ್ಲಿನ ಆಕೃತಿಗಳನ್ನು ಕೆತ್ತಿದಳೆ? ಎಂಬಷ್ಟರ ಮಟ್ಟಿಗೆ ಆ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ.
ಯಾಣದ ಕುರಿತಾದ ಒಂದು ದಂತಕಥೆಯಿದೆ. ಪುರಾಣ ಕಾಲದಲ್ಲಿ ಯಾಣದಲ್ಲಿ ಭಸ್ಮಾಸುರನೆಂಬ ರಾಕ್ಷಸ ವಾಸವಾಗಿದ್ದ. ಈತನ ಉಪಟಳ ಸಹಿಸಲು ಅಸಾಧ್ಯವಾದಾಗ ಶಿವನು ಆತನನ್ನು ಸುಟ್ಟು ಬೂದಿ ಮಾಡಿದ. ಈ ಬೂದಿಯಿಂದ ದೊಡ್ಡದಾದ ಶಿಖರ ಬೆಳೆಯಿತು ಎಂಬುದೇ ಆ ದಂತಕಥೆ. ಆದರೆ ಭೂಗರ್ಭ ಶಾಸ್ತ್ರದ ಸಂಶೋಧನೆ ಪ್ರಕಾರ ಅತಿ ಹೆಚ್ಚು ಖನಿಜ ಸಂಪತ್ತಿನಿಂದ, ಸುಣ್ಣದ ಕಲ್ಲಿನಿಂದ ಕೂಡಿದ ಜಾಗ ಇದಾಗಿದೆ. ಇಲ್ಲಿನ ಕಲ್ಲಿನ ಗುಹೆಯೊಳಗೆ ಪ್ರವೇಶಿಸುವುದು ಒಂದು ಸುಂದರ ಅನುಭವ.
ಯಾಣ ಕುಮಟ ತಾಲ್ಲೂಕಿಗೆ ಹೊಂದಿಕೊಂಡಿದ್ದು ಅಲ್ಲಿಂದ 25 ಕಿ.ಮೀ. ದೂರದಲ್ಲಿದೆ. ಅಲ್ಲಿ ಶಿವರಾತ್ರಿಯ ದಿನ ಭೈರವೇಶ್ವರ ಸ್ವಾಮಿಯ ಉತ್ಸವ ನಡೆಯುತ್ತದೆ. ಯಾಣದ ಬಗ್ಗೆ ಕೇಳುವುದಕ್ಕಿಂತ ನೋಡಿ ಅನುಭವಿಸುವುದೇ ಚಂದ. ನಮ್ಮನ್ನು ಯಾಣ ಪ್ರವಾಸಕ್ಕೆ ಕರೆದುಕೊಂಡು ಹೋಗುವಂತೆ ಪದ್ಮಿನಿ ಮೇಡಂ ಅವರಲ್ಲಿ ಕೇಳಿಕೊಳ್ಳೋಣ. ಅಲ್ಲವೇ?
-ನಿನ್ನ ಗೆಳೆಯ
ರಾಜು.
ಮಕ್ಕಳು ಸಿದ್ಧಪಡಿಸಿದ ವಿಶೇಷ ಪತ್ರವನ್ನು ನೋಡಿ ಶಿಕ್ಷಕರಿಗೆ ಸಂತೋಷವಾಯಿತು. ಪದ್ಮಿನಿ ಟೀಚರ್ ಮಕ್ಕಳಿಗೆ ಶಹಬ್ಬಾಸ್ ಹೇಳಿದರು. ಹಾಗೂ ಇತರ ಮಕ್ಕಳಿಗೆ ‘ಇ-ಮೇಲ್’ ಪತ್ರದ ಬಗ್ಗೆ, ಅದರ ಆವಶ್ಯಕತೆಯ ಬಗ್ಗೆ ತಿಳಿಸಿದರು. ಯಾಣಕ್ಕೆ ಪ್ರವಾಸ ಹೋಗೋಣ ಎಂದರು. ಮಕ್ಕಳಿಗೆಲ್ಲ ಸಂತೋಷವಾಯಿತು.
ಪದಗಳ ಅರ್ಥ
ಸಂದೇಶ – ಸುದ್ದಿ; ನಿರೂಪ.
ವಿನಿಮಯ -ಒಂದಕ್ಕೆ ಬದಲಾಗಿ ಮತ್ತೊಂದನ್ನು ಕೊಡುವಿಕೆ; ಅದಲು ಬದಲು ಮಾಡಿಕೊಳ್ಳು.
ಚೂಟಿ – ಚುರುಕು; ಲವಲವಿಕೆ.
ವಿಶೇಷ – ಪ್ರತ್ಯೇಕವಾದ; ವಿಶಿಷ್ಟವಾದ.
ಗಗನಚುಂಬಿ – ಆಕಾಶವನ್ನು ಮುಟ್ಟುವಂತಹದು; ಬಹಳ ಎತ್ತರವಾದುದು.
ಹೆಬ್ಬಂಡೆ – ದೊಡ್ಡದಾದ ಕಲ್ಲು.
ಇಕ್ಕಟ್ಟು – ಸಂದಿಗ್ಧ; ಕಿರಿದಾದ.
ಶಿಖರ – ಮರ, ಬೆಟ್ಟಗಳ ತುದಿ; ದೇವಾಲಯಗಳ ಗೋಪುರ.
ಉತ್ಪತ್ತಿ– ಸೃಷ್ಟಿ; ಉಂಟಾಗು; ಹುಟ್ಟು.
ವಿವರ ತಿಳಿಯಿರಿ
ಕಂಪ್ಯೂಟರ್ :- ಇದನ್ನು ಸಂಗಣಕವೆಂದೂ ಗಣಕಯಂತ್ರವೆಂದೂ ಕರೆಯುತ್ತಾರೆ.
ಭೂಗರ್ಭ ಶಾಸ್ತ್ರ :- ಭೂಮಿಯ ಪದರಗಳ ಮತ್ತು ಭೂಮಿಯ ಒಳಗಿರುವ ವಸ್ತುಗಳ ವಿಷಯವನ್ನು ಅಧ್ಯಯನ ಮಾಡುವ ಶಾಸ್ತ್ರ.
ಗುಪ್ತ ಸಂಕೇತ :- ‘ಇ-ಮೇಲ್’ ಬಳಸುವ ಪ್ರತಿಯೊಬ್ಬರಿಗೂ ಅವರದ್ದೇ ಆದ ಗುಪ್ತ ಸಂಕೇತವಿರುತ್ತದೆ. ಅದನ್ನು ಬಳಸಿದಾಗ ಮಾತ್ರ ಅವರವರ ‘ಇ-ಪತ್ರ’ (ಅಂಚೆ) ತೆರೆದುಕೊಳ್ಳುವುದು. ಗುಪ್ತ ಸಂಕೇತವನ್ನು ‘ಪಾಸ್‍ವರ್ಡ್’ಎಂದು ಕರೆಯುತ್ತಾರೆ.
ಚಾರಣ :- ಬೆಟ್ಟ ಗುಡ್ಡಗಳ ಕಡೆಗೆ ಸಾಹಸದ ನಡಿಗೆ.
ದಂತಕಥೆ – ಬಾಯಿಯಿಂದ ಬಾಯಿಗೆ ಹರಡುವ ಕಲ್ಪಿತ ಕಥೆ.
ಸಂವೇದ ವಿಡಿಯೋ ಪಾಠಗಳು
ಪೂರಕ ವಿಡಿಯೋಗಳು
ಇ-ಮೇಲ್ ಬರೆಯುವ ವಿಧಾನ
ಅಭ್ಯಾಸಗಳು
ವ್ಯಾಕರಣ ಮಾಹಿತಿ
ಹಿಂದಿನ ತರಗತಿಯಲ್ಲಿ ನಾವು ಕನ್ನಡ ಸಂಧಿಗಳನ್ನು ಅಧ್ಯಯನ ಮಾಡಿದ್ದೆವು. ಈಗ ಸಂಸ್ಕೃತ ಪದಗಳು ಪರಸ್ಪರ ಪರವಾದಾಗ ಆಗುವ ಸಂಧಿಗಳ ಕುರಿತು ತಿಳಿಯೋಣ.
ಸಂಸ್ಕೃತ ಸಂಧಿ :
ಸವರ್ಣ ದೀರ್ಘ ಸಂಧಿಗಳು : ಒಂದೇ ಜಾತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘರೂಪ ಪಡೆಯುವುದು ಸವರ್ಣದೀರ್ಘ ಸಂಧಿ. (ಉದಾ: ಪೂರ್ವಪದದ ಕೊನೆಯ ‘ಅ’ ಹಾಗೂ ಉತ್ತರ ಪದದ ಮೊದಲಿನ ‘ಅ’ ಸೇರಿ ‘ಆ’ ಆಗುವುದು. ಅಂತೆಯೇ ಇ + ಇ = ಈ, ಉ + ಉ = ಊ ಆಗುತ್ತವೆ)
ಸೂಚನೆ: ಪೂರ್ವಪದದ ಕೊನೆಯ ಅಕ್ಷರ ದೀರ್ಘವಾಗಿದ್ದರೆ ಅಡ್ಡಿಯೇನಿಲ್ಲ. ಅಂತೆಯೇ ಉತ್ತರ ಪದದ ಮೊದಲ ಅಕ್ಷರ ದೀರ್ಘವಾಗಿರಲೂಬಹುದು.
ಉದಾ:
ದೇವ + ಆಲಯ = ದೇವಾಲಯ (ಅ + ಆ = ಆ)
ದೇವ + ಅಸುರ = ದೇವಾಸುರ (ಅ + ಅ = ಆ)
ಮಹಾ + ಆತ್ಮ = ಮಹಾತ್ಮ (ಆ + ಆ = ಆ)
ರವಿ + ಇಂದ್ರ = ರವೀಂದ್ರ (ಇ + ಇ = ಈ)
ಗಿರಿ + ಈಶ = ಗಿರೀಶ (ಇ + ಈ = ಈ)
ಗುರು + ಉಪದೇಶ = ಗುರೂಪದೇಶ (ಉ + ಉ = ಊ)
ಗುಣಸಂಧಿ : ‘ಅ’, ’ಆ’-ಕಾರಗಳ ಮುಂದೆ ‘ಇ’, ’ಈ’-ಕಾರವು ಬಂದಾಗ ‘ಏ’-ಕಾರವು, ‘ಉ’, ‘ಊ’ಕಾರವು ಬಂದಾಗ ‘ಓ’ಕಾರವು, ‘ಋ’-ಕಾರವು ಬಂದಾಗ ‘ಅರ್’-ಕಾರವು ಸೇರಿದಾಗ ಗುಣಸಂಧಿ ಎನಿಸುವುದು.
ಉದಾ :
ಸುರ + ಇಂದ್ರ = ಸುರೇಂದ್ರ (ಅ + ಇ = ಏ)
ದೇವ + ಈಶ = ದೇವೇಶ (ಅ + ಈ = ಏ)
ಚಂದ್ರ + ಉದಯ = ಚಂದ್ರೋದಯ (ಅ + ಉ = ಓ)
ಮಹಾ + ಋಷಿ = ಮಹರ್ಷಿ (ಆ + ಋ = ಅರ್)
ಪತ್ರ ಲೇಖನ
ಹಿಂದಿನ ತರಗತಿಯಲ್ಲಿ ನಾವು ಪತ್ರಲೇಖನ ಮಾಡುವಾಗ ಅನುಸರಿಸುವ ವಿಧಾನಗಳು, ಸಂಬೋಧನೆಗಳು ಹಾಗೂ ಪತ್ರಗಳ ಕೆಲವು ವಿಧಗಳ ಬಗ್ಗೆ ತಿಳಿದುಕೊಂಡಿದ್ದೆವು. ಇಲ್ಲಿ ವ್ಯಾವಹಾರಿಕ ಪತ್ರ (ಅರ್ಜಿ ಬರವಣಿಗೆ) ಬರೆಯುವ ಬಗ್ಗೆ ತಿಳಿಯೋಣ.
ವ್ಯಾವಹಾರಿಕ ಪತ್ರಗಳಲ್ಲಿ ನಿರ್ದಿಷ್ಟವಾದ ಉದ್ದೇಶವಿರುತ್ತದೆ. ಉಳಿದಂತೆ ಖಾಸಗಿ ಪತ್ರದ ಎಲ್ಲ ನಿಯಮಗಳು ಅನ್ವಯಿಸುತ್ತವೆ. ಆದರೂ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ಖಾಸಗಿ ಪತ್ರದಲ್ಲಿ ನಾವು ಯಾರಿಗೆ ಪತ್ರ ಬರೆಯುತ್ತೇವೆಯೋ ಅವರ ವಿಳಾಸವನ್ನು ಕೊನೆಯಲ್ಲಿ ಮಾತ್ರ ಬರೆಯುತ್ತೇವೆ. ಆದರೆ ವ್ಯಾವಹಾರಿಕ ಪತ್ರದಲ್ಲಿ ವಿಳಾಸವನ್ನು ಎರಡನೆಯ ಹಂತದಲ್ಲಿ ಬರೆಯುತ್ತೇವೆ.
ಪ್ರಥಮ ಹಂತ:- ಬರೆಯುವವರ ವಿಳಾಸವು/ಶಿರೋನಾಮೆಯು ‘ಲೆಟರ್ ಹೆಡ್’ನಲ್ಲಿ ಇದ್ದರೆ ದಿನಾಂಕವನ್ನು ಮಾತ್ರ ಸೂಚಿಸಿದರೆ ಸಾಕು. ಮುದ್ರಿತ ವಿಳಾಸವಿಲ್ಲದಿದ್ದರೆ ಪತ್ರದ ಬಲಭಾಗದಲ್ಲಿ ಅಥವಾ ಎಡಭಾಗದಲ್ಲಿ ವಿಳಾಸ ಬರೆಯಬೇಕು.
ಎರಡನೆಯ ಹಂತ:- ಯಾರಿಗೆ ಪತ್ರ ಬರೆಯುತ್ತೇವೆಯೋ ಅವರ ವಿಳಾಸವನ್ನು ಎಡಭಾಗದಲ್ಲಿ ಬರೆಯಬೇಕು.
ಮೂರನೆಯ ಹಂತ:- ಮಾನ್ಯರೆ ಅಥವಾ ಮಹನೀಯರೆ ಎಂದು ಸಂಬೋಧಿಸಬೇಕು.
ನಾಲ್ಕನೆಯ ಹಂತ:- ಇಲ್ಲಿ ಪತ್ರದ ವಿಷಯವಿರಬೇಕು. ಖಾಸಗಿ ಪತ್ರದಲ್ಲಿ ವಿಷಯ ಎಂಬ ಹಂತ ಇರುವುದಿಲ್ಲ. ಪತ್ರದ ಸಾರವನ್ನು ಮೂರು ನಾಲ್ಕು ಪದಗಳಲ್ಲಿ ಹೇಳುವ ಕ್ರಮವಿದು.
ಐದನೆಯ ಹಂತ:- ಇಲ್ಲಿ ಪತ್ರದ ಒಡಲು ಬರಬೇಕು. ಒಡಲು ಪತ್ರದ ಅತಿಮುಖ್ಯಭಾಗ. ವಿಷಯವನ್ನು ವಿವರಿಸುವುದು ಇಲ್ಲಿಯೇ. ಪತ್ರದಲ್ಲಿ ಹೇಳಬೇಕಾದ ವಿಷಯವನ್ನು ಪೂರ್ತಿಯಾಗಿ ಇಲ್ಲಿ ಬರೆಯಬೇಕು.
ಆರನೆಯ ಹಂತ:- ‘ವಂದನಾಪೂರ್ವಕ’/ ‘ವಂದನೆಗಳೊಂದಿಗೆ’ ಎಂದು ಬರೆಯಬೇಕು. ಈ ಪದದೊಂದಿಗೆ ಪತ್ರದ ಮುಕ್ತಾಯವಾಗಬೇಕು. ವ್ಯಾವಹಾರಿಕ ಪತ್ರಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಗಳೆಂದರೆ ಧನ್ಯವಾದಗಳು, ವಂದನೆಗಳೊಂದಿಗೆ.
ಏಳನೆಯ ಹಂತ:- ಪತ್ರದ ಕೊನೆಗೆ ಬಲಭಾಗದಲ್ಲಿ ನಿಮ್ಮ ನಂಬುಗೆಯ / ನಿಮ್ಮ ವಿಶ್ವಾಸಿ ಎಂದು ಬರೆದು ಅದರ ಕೆಳಗೆ ಸಹಿ ಹಾಕಬೇಕು. (ಸಹಿ ಮಾಡಿದ ಅನಂತರ ತಮ್ಮ ಹುದ್ದೆಯ ಮೊಹರು ಇದ್ದರೆ ಹಾಕಬೇಕು.)
ವಿಳಾಸವನ್ನು 2ನೆಯ ಹಂತದಲ್ಲಿ ಬರೆದಂತೆಯೇ ಲಕೋಟೆಯ ಮೇಲೆಯೂ ಬರೆಯಬೇಕು.
ಮಾದರಿ ಅರ್ಜಿ ಪತ್ರ
ನಿಮ್ಮ ಊರಿನ ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿಯವರಿಗೆ ಬರೆದ ಮನವಿಪತ್ರ.
ಇವರಿಂದ ದಿನಾಂಕ: 22-11-2016
ವಿನಯ್‍ಕುಮಾರ್, ಗ್ರಾಮಸ್ಥ,
ಕಾವಡಿ ಅಗ್ರಹಾರ,
ಕೆಂಪಾಪುರ.
ಇವರಿಗೆ…
ಅಧ್ಯಕ್ಷರು,
ಗ್ರಾಮ ಪಂಚಾಯಿತಿ,
ಕಾವಡಿ ಅಗ್ರಹಾರ.
ಮಾನ್ಯರೇ,
ವಿಷಯ: ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡಿಸುವ ಬಗ್ಗೆ.
ಈ ವರ್ಷ ನಮ್ಮ ಕೆಂಪಾಪುರದಲ್ಲಿ ಅತಿವೃಷ್ಟಿಯಿಂದಾಗಿ ರಸ್ತೆಗಳೆಲ್ಲಾ ಹಾಳಾಗಿವೆ. ರಸ್ತೆಯಲ್ಲಿ ಹೊಂಡಗುಂಡಿಗಳು ಉಂಟಾಗಿವೆ. ರಸ್ತೆಯಲ್ಲಿ ಸರಾಗವಾಗಿ ನಡೆದಾಡಲು ಆಗುತ್ತಿಲ್ಲ. ರಾತ್ರಿಯ ವೇಳೆ ನಡೆದಾಡುವಾಗ ಹಲವರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇದರಿಂದ ಭಯದ ಸ್ಥಿತಿಯಲ್ಲಿ ಸಾರ್ವಜನಿಕರಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೂ ಬಂದಿದೆ. ಆದರೆ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಬೇಸರ ತಂದಿದೆ.
ಇನ್ನಾದರೂ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು, ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಿ ಅನುಕೂಲ ಮಾಡುವಿರೆಂದು ನಿರೀಕ್ಷಿಸುತ್ತೇನೆ. ಇದರೊಂದಿಗೆ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿದ ದಾಖಲೆ ಪತ್ರಗಳನ್ನು ಲಗತ್ತಿಸಲಾಗಿದೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ಸಹಿ
(ವಿನಯ್ ಕುಮಾರ್)
ಯೋಜನೆ
ವಿವಿಧ ನಮೂನೆಯ ಪತ್ರಗಳನ್ನು ಬರೆಯಿರಿ. (ವ್ಯಾವಹಾರಿಕ, ಖಾಸಗಿ, ಆದೇಶ)
ಓದಿಗೆ ಮನ್ನಣೆ
ನಮ್ಮ ನಾಡಿನ ಅನೇಕ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿರಿ.
ಕರ್ನಾಟಕದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳನ್ನು ತಿಳಿಯಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು
ಕರ್ನಾಟಕದ ಪ್ರವಾಸಿ ಸ್ಥಳಗಳು ಆಕರ್ಷಣೆ ಮತ್ತು ನಿದ್ರಾಜನಕವನ್ನು ನೀಡುತ್ತದೆ. ಇವುಗಳಲ್ಲಿ ಕೆಲವು ಸುಪ್ರಸಿದ್ಧವಾಗಿದ್ದರೆ, ಇನ್ನು ಕೆಲವು ಮೆಚ್ಚುಗೆ ಪಡೆಯದೇ ಉಳಿದಿವೆ.
ರಾಜ್ಯದ ಭೌಗೋಳಿಕ ಸ್ಥಳವು ಕರ್ನಾಟಕದ ವೈವಿಧ್ಯಮಯ ಪ್ರವಾಸಿ ಸ್ಥಳಗಳನ್ನು ಖಾತ್ರಿಪಡಿಸುತ್ತದೆ, ಅದು ಸಾಕಷ್ಟು ಆಕರ್ಷಕವಾಗಿದೆ.
ಐತಿಹಾಸಿಕ ಮತ್ತು ಸರ್ವೋತ್ಕೃಷ್ಟ ರಾಜ್ಯವಾದ ಕರ್ನಾಟಕವು ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ.
ಕನ್ನಡ ಕರಾವಳಿ, ಪಶ್ಚಿಮ ಘಟ್ಟಗಳು ಮತ್ತು ಡೆಕ್ಕನ್ ಪ್ರಸ್ಥಭೂಮಿಯ ನಡುವೆ ಬೀಗ ಹಾಕಿರುವ ರಾಜ್ಯವು ಕಾಡುಗಳು, ಬೆಟ್ಟಗಳು, ದೇವಾಲಯಗಳು, ಗುಹೆಗಳ ಬೀಚ್‌ಗಳು, ನದಿ ತೀರಗಳು, ಸರೋವರಗಳು, ಕಾಫಿ ಎಸ್ಟೇಟ್‌ಗಳು, ಜಲಪಾತಗಳು, ಅವಶೇಷಗಳು ಮತ್ತು ಇನ್ನೂ ಹೆಚ್ಚಿನ ಆಸಕ್ತಿದಾಯಕ ಪ್ರವಾಸಿ ತಾಣಗಳ ಪಟ್ಟಿಯನ್ನು ಹೊಂದಿದೆ.
ನಿಮ್ಮ ಪ್ರೀತಿಪಾತ್ರರೊಂದಿಗೆ ಅದ್ಭುತವಾದ ವಿಹಾರಕ್ಕೆ ನೀವು ಗೋಜುಬಿಡಬಹುದಾದ ಕರ್ನಾಟಕದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು .
ಕರ್ನಾಟಕದಲ್ಲಿ ಭೇಟಿ ನೀಡಲು 47 ಅತ್ಯುತ್ತಮ ಪ್ರವಾಸಿ ಸ್ಥಳಗಳು
ಬೀಚ್‌ಗಳು, ಶ್ರೀಮಂತ ಜೀವವೈವಿಧ್ಯ, ಪ್ರಾಚೀನ ನಗರಗಳು, ಕಡಿದಾದ ಪರ್ವತಗಳು, ಶ್ರೀಮಂತ ಜೀವವೈವಿಧ್ಯ ಮತ್ತು ಹೆಚ್ಚಿನವುಗಳಿಂದ ಆರಂಭವಾಗಿದೆ. ಕರ್ನಾಟಕದ ನಗರಗಳು ಆಧುನಿಕತೆ ಮತ್ತು ಪ್ರಾಚೀನ ಆಕರ್ಷಣೆಯ ಸಮ್ಮಿಲನವಾಗಿದೆ.
ಪ್ರಪಂಚದಾದ್ಯಂತದ ಪ್ರವಾಸಿಗರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಅದ್ಭುತ ಸಮಯವನ್ನು ಕಳೆಯಲು ಕರ್ನಾಟಕದ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಇಲ್ಲಿ ನಾವು ನಿಮಗೆ ಕರ್ನಾಟಕದಲ್ಲಿ ಭೇಟಿ ನೀಡಲು ಕೆಲವು ಅತ್ಯುತ್ತಮ ಸ್ಥಳಗಳ ಆಯ್ಕೆ ಪಟ್ಟಿಯನ್ನು ನೀಡುತ್ತೇವೆ.
- ಬೆಂಗಳೂರು
- ಕೂರ್ಗ್
- ಕಬಿನಿ
- ಜೋಗ್ ಫಾಲ್ಸ್
- ಶಿವಮೊಗ್ಗ
- ಮಂಗಳೂರು
- ಕಾರವಾರ
- ಗೋಕರ್ಣ
- ಬಂಡೀಪುರ ರಾಷ್ಟ್ರೀಯ ಉದ್ಯಾನವನ
- ದಾಂಡೇಲಿ
- ಹಂಪಿ
- ಬಿಜಾಪುರ
- ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು
- ಉಡುಪಿ
- ಚಿತ್ರದುರ್ಗ ಕೋಟೆ
- ನಂದಿ ಹಿಲ್ಸ್
- ಚಿಕ್ಕಮಗಳೂರು
- ಮೈಸೂರು
- ಮುರುಡೇಶ್ವರ
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
- ದುಬಾರೆ
- ಕೋಟಗಿರಿ
- ಶ್ರೀರಂಗಪಟ್ಟಣ
- ಶೃಂಗೇರಿ
- ಬೇಲೂರು
- ಶ್ರವಣಬೆಳಗೊಳ
- ದೇವಬಾಗ್
- ಹಳೇಬೀಡು
- ಕುದುರೆಮುಖ
- ಕೆಮ್ಮನಗುಂಡಿ
- ಶಿವಗಂಗೆ
- ಮರವಂತೆ
- ಸಕಲೇಶಪುರ
- ಮಡಿಕೇರಿ
- ಕನಕಪುರ
- ಕುಶಾಲನಗರ
- ಹಾಸನ
- ರಾಮನಗರ
- ಮಧುಗಿರಿ
- ಮಾಕಳಿದುರ್ಗ
- ಚಿಕ್ಕಬಳ್ಳಾಪುರ
- ಸಾವನದುರ್ಗ
- ತಲಕಾಡು
- ಆಗುಂಬೆ
- ಸಿರ್ಸಿ
- ಯಾನಾ
- ಅಂಕೋಲಾ
ಇವು ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣಗಳಾಗಿವೆ.
ಚಾರಣಕ್ಕೆ ಪ್ರಸಿದ್ಧವಾದ ಯಾಣ, ಕೆಮ್ಮಣ್ಣುಗುಂಡಿಯಂಥ ಸ್ಥಳಗಳ ಬಗ್ಗೆ ಓದಿ ತಿಳಿದುಕೊಳ್ಳಿರಿ.
https://kn.wikipedia.org/wiki/%E0%B2%AF%E0%B2%BE%E0%B2%A3
ಚಾರಣಕ್ಕೆ ಪ್ರಸಿದ್ಧವಾದ ಯಾಣದ ಕುರಿತು ತಿಳಿಯಲು ಲಿಂಕ್ ಮೇಲೆ ಕ್ಲಿಕ್ ಮಾಡಿ.
ಚಾರಣಕ್ಕೆ ಪ್ರಸಿದ್ಧವಾದ ಕೆಮ್ಮಣ್ಣುಗುಂಡಿಯ ಕುರಿತು ತಿಳಿಯಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಶುಭ ನುಡಿ
ದೇಶ ಸುತ್ತು ಅನುಭವ ಪಡೆ.
ಪ್ರಕೃತಿ ಸೌಂದರ್ಯವನ್ನು ನೋಡಿ ಆನಂದಿಸಬೇಕೇ ಹೊರತು ಹಾಳು ಮಾಡಬಾರದು.
ಪ್ರಕೃತಿ ಬೆಳೆಯಲಿ, ಜೀವರಾಶಿ ಉಳಿಯಲಿ.
***********