ಮೌರ್ಯರು ಮತ್ತು ಕುಷಾಣರು – ಅಧ್ಯಾಯ 3

ಪಾಠದ ಪರಿಚಯ

ಮೌರ್ಯ ಸಾಮ್ರಾಜ್ಯವು ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ. ವಿವಿಧ ಕ್ಷೇತ್ರಗಳಿಗೆ ಅದು ನೀಡಿದ ಕೊಡುಗೆ ಅಪೂರ್ವವಾದುದು. ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಈ ವಂಶದ ಹೆಸರಾಂತ ಸಾಮ್ರಾಟರು. ಇವರ ಜೀವನ ಮತ್ತು ಸಾಧನೆಗಳನ್ನು ಈ ಪಾಠದಲ್ಲಿ ವಿವರಿಸಲಾಗಿದೆ. ಕುಷಾಣ ವಂಶದ ಪ್ರಸಿದ್ಧ ದೊರೆ ಕನಿಷ್ಕನ ಕೊಡುಗೆಗಳನ್ನೂ ಹೇಳಲಾಗಿದೆ.

ಪಾಠಪ್ರವೇಶ

ಹೀನಾ ಕೌಸರ್ ಐದನೇ ತರಗತಿಯ ವಿದ್ಯಾರ್ಥಿನಿ. ನೋಟುಗಳ ಮೇಲೆ ಮುದ್ರಣವಾದ ಸಂಸತ್ ಭವನ ಮತ್ತು ಗಾಂಧೀಜಿಯ ಚಿತ್ರಗಳನ್ನು ಅವಳು ಈಗಾಗಲೇ ಗುರುತಿಸಿದ್ದಳು. ಆದರೆ ನಾಣ್ಯ ಮತ್ತು ನೋಟಿನ ಮೇಲೆ ಸಿಂಹಗಳ ಲಾಂಛನ ಏಕಿದೆಯೆಂದು ಅವಳಿಗೆ ತಿಳಿಯದು. ಶಿಕ್ಷಕರು ಅಶೋಕನ ಪಾಠವನ್ನು ಮಾಡಿ ಮುಗಿಸಿದಾಗ ಅವಳಿಗೆ ಉತ್ತರ ಸಿಕ್ಕಿತು.

“ಪ್ರಜೆಗಳೆಲ್ಲರು ತನ್ನ ಮಕ್ಕಳಿದ್ದಂತೆ’’ ಈ ಮಾತನ್ನು ನುಡಿದವನು ಯಾರು ಗೊತ್ತೆ? ಅವನೇ ಅಶೋಕ ಚಕ್ರವರ್ತಿ. ಇಂತಹ ಸಾಮ್ರಾಟನ ರಾಜವಂಶದ ಬಗ್ಗೆ ತಿಳಿಯೋಣ.

ಚಂದ್ರಗುಪ್ತ ಮೌರ್ಯ:

ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಚಂದ್ರಗುಪ್ತನಿಗೆ ಸಲ್ಲುತ್ತದೆ. ತಂದೆಯನ್ನು ಕಳೆದುಕೊಂಡಿದ್ದ ಇವನನ್ನು ವಿಷ್ಣುಗುಪ್ತ (ಇವನಿಗೆ ಕೌಟಿಲ್ಯ ಮತ್ತು ಚಾಣಕ್ಯ) ಎಂಬ ಬ್ರಾಹ್ಮಣನು ತಕ್ಷಶಿಲಾ ನಗರಕ್ಕೆ ಕರೆದೊಯ್ದು, ಅಲ್ಲಿ ಯೋಗ್ಯ ಶಿಕ್ಷಣವನ್ನು ಕೊಡಿಸಿದನು. ಇದರ ಉದ್ದೇಶ ಚಂದ್ರಗುಪ್ತನ ಮೂಲಕ ಭಾರತದ ವಾಯವ್ಯ ಭೂಭಾಗವನ್ನು ಗ್ರೀಕರ ಆಳ್ವಿಕೆಯಿಂದ ಮುಕ್ತಗೊಳಿಸುವುದಾಗಿತ್ತು. ಇದೇ ವೇಳೆ ಮಗಧ ರಾಜನ ದುಷ್ಟ ಆಡಳಿತವನ್ನು ಕಿತ್ತೊಗೆಯುವುದು ಕೂಡ ಕೌಟಿಲ್ಯನ ಗುರಿಯಾಗಿತ್ತು.

ಶಿಕ್ಷಣ ಮುಗಿಸಿದ ತರುವಾಯ ಚಂದ್ರಗುಪ್ತನು ಕೌಟಿಲ್ಯನ ಆದೇಶದಂತೆ ಸೈನ್ಯವೊಂದನ್ನು ಕಟ್ಟಿ. ಗ್ರೀಕರೊಡನೆ ಯುದ್ಧ ಹೂಡಿ ಅವರನ್ನು ಭಾರತದ ನೆಲದಿಂದ ಹೊರದಬ್ಬಿದನು. ಅನಂತರ ಮಗಧ ರಾಜನನ್ನು ಸಂಹರಿಸಿ, ಉತ್ತರ ಭಾರತದಲ್ಲಿ ಸಾಮ್ರಾಜ್ಯವೊಂದನ್ನು ಸ್ಥಾಪನೆ ಮಾಡಿದನು. ಪಾಟಲೀಪುತ್ರ (ಪಟ್ನಾ) ಸಾಮ್ರಾಜ್ಯದ ರಾಜಧಾನಿಯಾಯಿತು.

ಗ್ರೀಕ

ಈ ಮಧ್ಯೆ ಸೆಲ್ಯೂಕಸ್ ಎಂಬ ಗ್ರೀಕ್ ಅಧಿಕಾರಿಯು, ಭಾರತದ ಮೇಲೆ ದಂಡೆತ್ತಿ ಬಂದನು. ಆದರೆ ಚಂದ್ರಗುಪ್ತನು ಅವನನ್ನು ಯುದ್ಧದಲ್ಲಿ ಹೀನಾಯವಾಗಿ ಸೋಲಿಸಿದನು. ಸೆಲ್ಯೂಕಸ್ ಶಾಂತಿ ಒಪ್ಪಂದವೊಂದನ್ನು ಮಾಡಿಕೊಂಡು ಅಫ್‍ಘಾನಿಸ್ತಾನ ಮತ್ತು ಬಲೂಚಿಸ್ತಾನದ ಭೂಭಾಗಗಳನ್ನು ಚಂದ್ರಗುಪ್ತನಿಗೆ ಬಿಟ್ಟುಕೊಟ್ಟನು. ಇದಕ್ಕೆ ಪ್ರತಿಯಾಗಿ ಚಂದ್ರಗುಪ್ತನು ಯುದ್ಧ ತರಬೇತಿ ಪಡೆದ 500 ಆನೆಗಳನ್ನು ಉಡುಗೊರೆಯಾಗಿ ಆತನಿಗೆ ಕೊಟ್ಟನು. ಸೆಲ್ಯೂಕಸನು ತನ್ನ ರಾಯಭಾರಿಯಾಗಿ ಮೆಗಸ್ತನೀಸ್ ಎಂಬವನನ್ನು ಚಂದ್ರಗುಪ್ತನ ಆಸ್ಥಾನಕ್ಕೆ ಕಳುಹಿಸಿದನು. ಮೆಗಸ್ತನೀಸ್ ಆ ಕಾಲದ ಭಾರತದ ಸ್ಥಿತಿಗತಿಗಳ ಬಗ್ಗೆ ಬರೆದಿಟ್ಟ ಪುಸ್ತಕವೇ `ಇಂಡಿಕಾ’.

ಸೆಲ್ಯೂಕಸ್ – ಗ್ರೀಕ್ ಅಧಿಕಾರಿ
ಮೆಗಸ್ತನೀಸ್ ಆ ಕಾಲದ ಭಾರತದ ಸ್ಥಿತಿಗತಿಗಳ ಬಗ್ಗೆ ಬರೆದಿಟ್ಟ ಪುಸ್ತಕ – `ಇಂಡಿಕಾ’.

ಕೌಟಿಲ್ಯನ ಅರ್ಥಶಾಸ್ತ್ರ: ಕೌಟಿಲ್ಯನು ಚಂದ್ರಗುಪ್ತಮೌರ್ಯನ ಕೌಟಿಲ್ಯಮಂತ್ರಿಯಾಗಿದ್ದನು. ಈತನು ರಚಿಸಿದ ಕೃತಿ `ಅರ್ಥಶಾಸ್ತ್ರ’. ಇದು ರಾಜ್ಯದ ಆಡಳಿತಗಾರರಿಗೆ ಮಾರ್ಗದರ್ಶನ ನೀಡುವ ಉತ್ತಮ ಕೃತಿ. ರಾಜನ ಗುಣ, ನಡತೆ ಮತ್ತು ಶಿಕ್ಷಣಕ್ಕೆ ವಿಶೇಷ ಒತ್ತುನೀಡಬೇಕೆಂಬುದು ಕೌಟಿಲ್ಯನ ಅಭಿಪ್ರಾಯವಾಗಿದೆ. ಏಕೆಂದರೆ ರಾಜನು ಹೇಗಿರುವನೋ ಹಾಗೆಯೇ ಪ್ರಜೆಗಳಿರುತ್ತಾರೆ. ಪ್ರಜೆಗಳ ಭದ್ರತೆ, ಸಮೃದ್ಧಿಗಳಿಗೆ ರಾಜನು ಕಾರಣನಾಗಿರುತ್ತಾನೆ.

“ರಾಜಕೀಯ ರಂಗದಲ್ಲಿ ಯಾರನ್ನೂ ನಂಬುವಂತಿಲ್ಲ. ಸರ್ಕಾರಿ ಇಲಾಖೆ ಹಾಗೂ ಜನತೆಯ ಮಧ್ಯೆ ಗೂಢಚಾರರನ್ನು ನೇಮಿಸತಕ್ಕದ್ದು. ಹಣಕಾಸಿನ ವಿಷಯದಲ್ಲಿ ರಾಜನು ವಿಶೇಷ ಕಾಳಜಿ ವಹಿಸಿ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಪ್ರಜೆಗಳ ಹಿತವೇ ರಾಜನ ಹಿತ. ಪ್ರಜೆಗಳು ಸಂತೋಷದಲ್ಲಿದ್ದರೆ ಮಾತ್ರವೇ ರಾಜನು ಸಂತೋಷದಲ್ಲಿರಬಹುದು. ಕೌಟಿಲ್ಯನ ಇಂತಹ ಕೆಲವು ವಿಚಾರಗಳು ಇಂದಿಗೂ ಪ್ರಸ್ತುತ.

ಅಶೋಕ ಚಕ್ರವರ್ತಿ

ಚಂದ್ರಗುಪ್ತನ ಅನಂತರ ಆತನ ಮಗನಾದ ಬಿಂದುಸಾರನು ಸಿಂಹಾಸನವನ್ನೇರಿದನು. ಬಿಂದುಸಾರನ ಅನಂತರ ಅಧಿಕಾರಕ್ಕೆ ಬಂದ ಅಶೋಕನು ತನ್ನ ಆದರ್ಶಗಳಿಂದ ಜಗತ್ತಿನ ಇತಿಹಾಸದಲ್ಲಿ ವಿಶಿಷ್ಟ ಸ್ಥಾನಪಡೆದ ಚಕ್ರವರ್ತಿಯಾಗಿದ್ದಾನೆ.

ಅಶೋಕ ಚಕ್ರವರ್ತಿ

ಅಶೋಕನ ಶಾಸನಗಳು: ಅಶೋಕನ ಜೀವನ ಮತ್ತು ಅಶೋಕನ ಶಿಲಾಶಾಸನ (ಬ್ರಾಹ್ಮಿಲಿಪಿ)ಸಾಧನೆಗಳ ಬಗ್ಗೆ ವಿವರಗಳನ್ನು ತಿಳಿಸುವ ಅವನ ಶಿಲಾಶಾಸನಗಳು ನಮ್ಮ ದೇಶದೆಲ್ಲೆಡೆ ದೊರಕಿವೆ. ಕರ್ನಾಟಕದಲ್ಲಿ ಅವನ ಹದಿನಾಲ್ಕು ಶಾಸನಗಳು ದೊರಕಿವೆ. ಕರ್ನಾಟಕದ ಕೆಲವು ಪ್ರದೇಶಗಳು ಅಶೋಕನ ಸಾಮ್ರಾಜ್ಯದಲ್ಲಿದ್ದವು.

ಅಶೋಕನ ಶಾಸನ – ರಾಯಚೂರು ಜಿಲ್ಲೆ

ಕಳಿಂಗ ಯುದ್ಧ: ಅಶೋಕನ ಆಳ್ವಿಕೆಯ ಕಾಲದ ಮಹತ್ವದ ಘಟನೆಯೆಂದರೆ ಕಳಿಂಗ ಯುದ್ಧ. ಈ ಘೋರ ಯುದ್ಧದಲ್ಲಿ ಸುಮಾರು ಒಂದು ಲಕ್ಷ ಜನರು ಪ್ರಾಣ ತೆತ್ತರಲ್ಲದೆ, ಒಂದೂವರೆ ಲಕ್ಷ ಯೋಧರು ಯುದ್ಧಕೈದಿಗಳಾದರು.

ಯುದ್ಧದಲ್ಲಿ ಸ್ವತಃ ಭಾಗಿಯಾಗಿದ್ದ ಅಶೋಕನು ಯುದ್ಧದ ಭಯಾನಕ ಸಾವು ನೋವುಗಳಿಂದ ತತ್ತರಿಸಿ ಹೋದನು. ಪರಿಣಾಮವಾಗಿ ಅವನ ಮನಸ್ಸು ಪರಿವರ್ತನೆಗೊಂಡಿತು. ಆ ಶಿಕ್ಷಣದಿಂದಲೇ ಯುದ್ಧಮಾಡುವುದನ್ನು ತೊರೆಯಲು ದೃಢ ನಿರ್ಧಾರ ಮಾಡಿದನು. ಧರ್ಮದ ವಿಜಯವೇ ನಿಜವಾದ ವಿಜಯ ಎಂಬುದನ್ನು ಮನಗಂಡನು.

ಕಳಿಂಗ ಯುದ್ಧ
ಕಳಿಂಗ ಯುದ್ಧ ನಡೆದ ಸ್ಥಳ – ದಯಾ ನದಿ ತೀರ

ಅಲ್ಪಕಾಲದಲ್ಲೇ ಅಶೋಕನು ಬುದ್ಧನ ಆದರ್ಶಗಳಿಂದ ಪ್ರಭಾವಿತಗೊಂಡು ಅವುಗಳನ್ನು ತನ್ನ ಪ್ರಜೆಗಳಿಗೆ ಬೋಧನೆ ಮಾಡಿದನು. ಮತೀಯ ಆಚರಣೆಗಿಂತ ಉತ್ತಮ ಗುಣ, ನಡತೆಗಳೇ ಹೆಚ್ಚು ಮುಖ್ಯವಾದದ್ದು. ಹಿರಿಯರು ಮತ್ತು ಗುರುಗಳನ್ನು ಗೌರವದಿಂದ ಕಾಣಬೇಕು. ಅಹಿಂಸೆಯೇ ಪರಮ ಧರ್ಮ. ಜೀವರಾಶಿಗಳಿಗೆ ಹಿಂಸೆ ಮಾಡಬಾರದು. ಈ ರೀತಿಯಾಗಿ ವಿಶ್ವಪ್ರೇಮವನ್ನು ಸಾರಿದ ಆದರ್ಶವಾದಿ ಸಾಮ್ರಾಟನು ಜಗತ್ತಿನ ಇತಿಹಾಸದಲ್ಲಿ ಪ್ರಾಯಶಃ ಬೇರೊಬ್ಬನಿಲ್ಲ.

ಧರ್ಮ ಪ್ರಸಾರ: ಅಶೋಕನುಪಾಟಲೀಪುತ್ರದಲ್ಲಿ ಬೌದ್ಧ ಸಮ್ಮೇಳನವನ್ನು ನಡೆಸಿದನು. ಬೌದ್ಧ ನೀತಿಸೂತ್ರಗಳನ್ನು ಹರಡಲು ರಾಯಭಾರಿಗಳನ್ನು ದೇಶವಿದೇಶ ಗಳಿಗೆ ಕಳುಹಿಸಿದನು. ಅವುಗಳನ್ನು ಬಂಡೆಗಳು ಮತ್ತು ಶಿಲಾಸ್ತಂಭಗಳ ಮೇಲೆ ಕೆತ್ತಿಸಿದನು. ಅವನು ಪ್ರಚಾರ ಮಾಡಿದ ನೀತಿ ಸೂತ್ರಗಳು ಸಂಕುಚಿತ ಮತೀಯ ಸೂತ್ರಗಳಾಗಿರಲಿಲ್ಲ.

ಮೌರ್ಯರ ಆಡಳಿತ ಪದ್ಧತಿ: ಕೇಂದ್ರ ಆಡಳಿತಕ್ಕೆ ರಾಜನೇ ಆಡಳಿತ ವ್ಯವಸ್ಥೆಯ ಮುಖ್ಯಸ್ಥನಾಗಿದ್ದನು. ಎಲ್ಲ ಅಧಿಕಾರಗಳು ಆತನ ಕೈಯಲ್ಲಿದ್ದವು. ರಾಜನಿಗೆ ಸಲಹೆ ನೀಡಲು ಮಂತ್ರಿ ಮಂಡಲವೊಂದಿತ್ತು. ಆಡಳಿತದ ವಿಭಾಗಗಳನ್ನು ನೋಡಿಕೊಳ್ಳಲು ಉನ್ನತ ಅಧಿಕಾರಿಗಳಿದ್ದರು. ಅವರಲ್ಲಿ `ಧರ್ಮಮಹಾಮಾತ್ರರು’ ಎಂಬ ವಿಶೇಷ ಅಧಿಕಾರಿಗಳು ಜನರಲ್ಲಿ ಉತ್ತಮ ನೀತಿ ನಡತೆಯನ್ನು ಪ್ರಚಾರ ಮಾಡುತ್ತಿದ್ದರು. ಅನಾಥರು, ವಿಧವೆಯರು ಮತ್ತು ವಯೋವೃದ್ಧರ ಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಅವರಿಗಿತ್ತು. ಆಡಳಿತದ ಅನುಕೂಲಕ್ಕಾಗಿ ವಿಶಾಲವಾದ ಸಾಮ್ರಾಜ್ಯವನ್ನು ಹಲವು ಪ್ರಾಂತಗಳಾಗಿ ವಿಂಗಡಿಸಲಾಗಿತ್ತು.

ಗ್ರಾಮ ಆಡಳಿತ: ಗ್ರಾಮಗಳಲ್ಲಿ `ಗ್ರಾಮಿಕ’ನು ಅಲ್ಲಿಯ ಹಿರಿಯರ ನೆರವಿನಿಂದ ಆಡಳಿತ ಮಾಡುತ್ತಿದ್ದನು. ಗ್ರಾಮಗಳಿಗೆ ಸಾಕಷ್ಟು ಅಧಿಕಾರ ನೀಡಲಾಗಿತ್ತು. ಗ್ರಾಮದ ವಿವಾದಗಳನ್ನು ಗ್ರಾಮಸಭೆಯೇ ಬಗೆಹರಿಸುತ್ತಿತ್ತು.

ವಾಸ್ತು ಮತ್ತು ಮೂರ್ತಿಶಿಲ್ಪ:

ಅಶೋಕನ ಕಾಲದ ಕೆಲವು ವಾಸ್ತು ಮತ್ತು ಮೂರ್ತಿಶಿಲ್ಪಗಳನ್ನು ಇಂದಿಗೂ ಕಾಣಬಹುದಾಗಿದೆ. ಅವುಗಳೆಂದರೆ –

● ಸ್ತೂಪಗಳು ಮತ್ತು ವಿಹಾರಗಳು. ಅಶೋಕನ ಕಾಲದ ಸ್ತೂಪ ಮಧ್ಯಪ್ರದೇಶದ ಸಾಂಚಿ ಎಂಬಲ್ಲಿದೆ.

● ಶಿಲಾಗುಹೆಗಳು, ಏಕಶಿಲಾ ಸ್ತಂಭಗಳು ಮೂವತ್ತು ಅಡಿ ಎತ್ತರವಿದ್ದು ಅವುಗಳ ನುಣುಪು ಅದ್ಭುತವಾಗಿದೆ. ಸ್ತಂಭದ ಮೇಲುಭಾಗದಲ್ಲಿ (ಬೋದಿಗೆ) ಗೂಳಿ ಮತ್ತು ನಾಲ್ಕು ಸಿಂಹಗಳ ವಿಗ್ರಹವಿದೆ. ಸಾರನಾಥದ ವಸ್ತುಸಂಗ್ರಹಾಲಯದಲ್ಲಿ `ಸಿಂಹಬೋದಿಗೆ’ಯ ಸ್ತಂಭವನ್ನು ಕಾಣಬಹುದು. ಈ ಸಿಂಹಬೋದಿಗೆಯು ನಮ್ಮ ರಾಷ್ಟ್ರಲಾಂಛನ.

ಮೌರ್ಯ ಸಾಮ್ರಾಜ್ಯದ ಅವನತಿ: ಮೌರ್ಯ ಸಾಮ್ರಾಜ್ಯವು ಅಶೋಕನ ಮರಣಾನಂತರದ ಐವತ್ತು ವರ್ಷಗಳಲ್ಲಿ ಪತನಗೊಂಡಿತು. ಇದಕ್ಕೆ ಕೆಲವು ಕಾರಣಗಳನ್ನು ನೀಡಲಾಗಿದೆ.

● ಸಾರಿಗೆ ಸಂಪರ್ಕಗಳ ಕೊರತೆಯಿದ್ದ ಅಂದಿನ ಕಾಲದಲ್ಲಿ ವಿಸ್ತಾರವಾದ ಸಾಮ್ರಾಜ್ಯವನ್ನು ಬಹುಕಾಲ ಆಳುವುದು ದುಸ್ತರವಾಗಿತ್ತು.

● ಅಶೋಕನ ಅನಂತರದ ರಾಜರುಗಳು ದುರ್ಬಲರಾಗಿದ್ದರು.

● ಸಾಮ್ರಾಜ್ಯದಲ್ಲಿ ಅಂತಃಕಲಹಗಳು ತಲೆದೋರಿ, ಸಾಮ್ರಾಜ್ಯವು ಒಡೆದು ಹೋಯಿತು.

● ಈ ನಡುವೆ ಭಾರತದ ವಾಯವ್ಯ ಭಾಗದಲ್ಲಿ ವಿದೇಶೀ ಆಕ್ರಮಣಗಳು ಕೂಡಾ ನಡೆದವು.

● ಮೌರ್ಯ ಸೇನಾನಿಯು ಮೌರ್ಯ ವಂಶದ ಕೊನೆಯ ಅರಸನನ್ನು ಕೊಂದು ತಾನೇ ಅಧಿಕಾರವಹಿಸಿಕೊಂಡನು.

ಕುಷಾಣರು

ಕನಿಷ್ಕ: ಸುಮಾರು 2000 ವರ್ಷಗಳ ಹಿಂದೆ ಚಿಂಧಾರ (ಈಗಿನ ಅಫ್‍ಘಾನಿಸ್ತಾನ) ಎಂಬ ಪ್ರದೇಶದಲ್ಲಿ ಕುಷಾಣ ಎಂಬ ರಾಜವಂಶವು ಆಳ್ವಿಕೆ ನಡೆಸುತ್ತಿತ್ತು. ಕಾಲಕ್ರಮೇಣ ಭಾರತದ ಕೆಲವು ಭಾಗಗಳು ಕುಷಾಣರ ವಶವಾದುವು. ಕುಷಾಣ ವಂಶದ ಅರಸರಲ್ಲಿ ಕನಿಷ್ಕ ಪ್ರಸಿದ್ಧನಾಗಿದ್ದನು. ಅವನು ಸುದೀರ್ಘಕಾಲ ಯುದ್ಧಗಳನ್ನು ಹೂಡಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಉತ್ತರ ಭಾರತದಲ್ಲಿ ಅವನ ಸಾಮ್ರಾಜ್ಯವು ಬಿಹಾರದವರೆಗೂ ಚಾಚಿತ್ತು.

ಕನಿಷ್ಕ
ಕನಿಷ್ಕ

ಕನಿಷ್ಕನು ಬೌದ್ಧಮತ ಅನುಯಾಯಿಯಾಗಿದ್ದು, ಸ್ತೂಪಗಳನ್ನು ಕಟ್ಟಿಸಿದನು. ಬೌದ್ಧಮತ ಪ್ರಚಾರಕರನ್ನು ದೇಶವಿದೇಶಗಳಿಗೆ ಕಳುಹಿಸಿದನಲ್ಲದೆ ಕಾಶ್ಮೀರದಲ್ಲಿ ಬೌದ್ಧ ಮಹಾಸಭೆಯನ್ನು ನಡೆಸಿದನು.

ಕಲೆ ಮತ್ತು ವಾಸ್ತುಶಿಲ್ಪ: ಕನಿಷ್ಕನು ಅನೇಕ ಸ್ತೂಪಗಳನ್ನು ನಿರ್ಮಿಸಿದನು. ಪುರುಷಪುರದಲ್ಲಿ (ಇಂದಿನ ಪೇಶಾವರ್) ಅವನು ಕಟ್ಟಿಸಿದ ಸ್ತೂಪಕ್ಕೆ ಹದಿಮೂರು ಅಂತಸ್ತುಗಳ ಗೋಪುರವಿತ್ತು. ಗೋಪುರವು 400 ಅಡಿ ಎತ್ತರವಿದ್ದು ಆ ಕಾಲದ ಒಂದು ಕೌತುಕವೆನಿಸಿತ್ತು.

ಪುರುಷಪುರ – ಸ್ತೂಪ

ಕನಿಷ್ಕನು ಕಲಾಪೋಷಕನಾಗಿದ್ದನು. ಅವನು ಬೇರೆ ಬೇರೆ ದೇಶಗಳ ಕಲಾಕಾರರನ್ನು ತನ್ನಲ್ಲಿಗೆ ಕರೆಸಿಕೊಂಡನು. ಇದರ ಪರಿಣಾಮವಾಗಿ ವಿವಿಧ ಕಲಾ ಶೈಲಿಗಳು (ವಿಶಿಷ್ಟ ವಿಧಾನಗಳು) ಬೆರೆತು ಗಾಂಧಾರ ಮತ್ತು ಮಥುರಾ ಎಂಬ ಹೊಸ ಶೈಲಿಗಳು ಹುಟ್ಟಿಕೊಂಡವು. ಮಥುರೆಯಲ್ಲಿ ಕನಿಷ್ಕನ ಕಲ್ಲಿನ ವಿಗ್ರಹ ದೊರಕಿದೆ. ಇದರ ತಲೆಭಾಗವು ನಾಶವಾಗಿದ್ದು, ಕೆಳಭಾಗದಲ್ಲಿ ಕನಿಷ್ಕನ ಹೆಸರನ್ನು ಕೆತ್ತಲಾಗಿದೆ. ಕುಷಾಣರ ಅನೇಕ ನಾಣ್ಯಗಳು ದೊರೆತಿವೆ.

ಸಾಹಿತ್ಯ: ಕನಿಷ್ಕನು ವಿದ್ವಾಂಸರು ಮತ್ತು ಸಾಹಿತಿಗಳಿಗೆ ಆಶ್ರಯ ನೀಡಿದ್ದನು. ಅವರಲ್ಲಿ `ಸಾಹಿತ್ಯ ರತ್ನ’ ಬಿರುದಾಂಕಿತನಾದ ಅಶ್ವಘೋಷ ಪ್ರಮುಖನು. ಇವನು `ಬುದ್ಧಚರಿತ’ ಎಂಬ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ್ದಾನೆ.

ನಾಗಾರ್ಜುನನು ಕನಿಷ್ಕನ ಆಸ್ಥಾನದಲ್ಲಿದ್ದ ಶ್ರೇಷ್ಠ ತತ್ವಜ್ಞಾನಿ ಹಾಗೂ ವಿಜ್ಞಾನಿ. ವಸುಮಿತ್ರ ಓರ್ವ ವಿದ್ವಾಂಸ ಹಾಗೂ ಬೌದ್ಧ ಮಹಾಸಭೆಯ ಅಧ್ಯಕ್ಷನಾಗಿದ್ದವನು. ಚರಕ ಎಂಬವನು ಕನಿಷ್ಕನ ವೈದ್ಯನಾಗಿದ್ದ. “ಚರಕ ಸಂಹಿತೆ” ಎಂಬ ಮಹತ್ವದ ಆಯುರ್ವೇದ ಗ್ರಂಥವನ್ನು ಇವನು ಬರೆದನು. ಆಯುರ್ವೇದವು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದೆ.

ನಾಗಾರ್ಜುನ
ಚರಕ – “ಚರಕ ಸಂಹಿತೆ”

ಹೊಸ ಪದಗಳು

ರಾಯಭಾರಿ – ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಳುಹಿಸಲ್ಪಡುವ ರಾಜದೂತ ಅಥವಾ ಪ್ರತಿನಿಧಿ.

ಸಾಮ್ರಾಜ್ಯ – ಅತಿ ವಿಸ್ತಾರವಾದ ರಾಜ್ಯ.

ಗೂಢಚಾರ – ಗುಟ್ಟಾಗಿ ಶೋಧನೆ ಮಾಡುವವನು.

ಭ್ರಷ್ಟಾಚಾರ – ದುರಾಚಾರ, ಲಂಚ ಪಡೆಯುವುದು.

ಶಿಲಾಶಾಸನ – ಬಂಡೆಗಳ ಮೇಲೆ ಕೊರೆದಿಟ್ಟ ಬರಹ.

ಸ್ತೂಪ – ಬುದ್ಧನ ಶರೀರದ ಅವಶೇಷಗಳನ್ನು (ಹಲ್ಲು, ಎಲುಬು ಇತ್ಯಾದಿ) ಕಲಶದಲ್ಲಿ ಶೇಖರಿಸಿ, ಆ ಕಲಶದ ಸುತ್ತಲೂ ಕಟ್ಟಿದ ಅರ್ಧಗೋಲಾಕೃತಿಯ ರಚನೆ.

ನಿಮಗೆ ತಿಳಿದಿರಲಿ

1) ಅಶೋಕನ ಶಾಸನಗಳು ಕರ್ನಾಟಕದಲ್ಲಿ ರಾಯಚೂರು, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ಮತ್ತು ಗುಲ್ಜರ್ಗಾ ಜಿಲ್ಲೆಗಳಲ್ಲಿವೆ. ಮಸ್ಕಿ (ರಾಯಚೂರು ಜಿಲ್ಲೆ) ಎಂಬಲ್ಲಿನ ಶಿಲಾಶಾಸನದಲ್ಲಿ ಅಶೋಕನನ್ನು `ದೇವಾನಾಂಪ್ರಿಯ’ ಮತ್ತು `ಪ್ರಿಯದರ್ಶಿ’ ಎಂದು ಕರೆಯಲಾಗಿದೆ.

2) ಅಶೋಕನು ಬೌದ್ಧ ರಾಯಭಾರಿಗಳನ್ನು ಭಾರತದ ಬೇರೆ ಬೇರೆ ರಾಜ್ಯಗಳಿಗೆ ಮಾತ್ರವಲ್ಲದೆ ಬರ್ಮಾ (ಮಯನ್ಮಾರ್) ಶ್ರೀಲಂಕಾ, ಈಜಿಪ್ಟ್, ಪಶ್ಚಿಮ ಏಷ್ಯ ಹಾಗೂ ಪೂರ್ವ ಯುರೋಪ್ ದೇಶಗಳಿಗೂ ಕಳುಹಿಸಿದನು. ಅಶೋಕನ ಹಿರಿಯ ಮಗ ಮಹೇಂದ್ರ ಮತ್ತು ಹಿರಿಯ ಪುತ್ರಿ ಸಂಘಮಿತ್ರಾ ಶ್ರೀಲಂಕೆಗೆ ತೆರಳಿದರು. ಕರ್ನಾಟಕದ ಮೈಸೂರಿಗೆ (ಆಗಿನ ಮಹಿಷಮಂಡಲ) ಮಹಾದೇವ ಮತ್ತು ಉತ್ತರ ಕನ್ನಡ ಜಿಲ್ಲೆಯ ಬನವಾಸಿಗೆ ರಕ್ಷಿತ ಎಂಬ ಧರ್ಮಪ್ರಚಾರಕರು ಬಂದಿದ್ದರು.

3) 2300 ವರ್ಷಗಳಿಗೂ ಹಿಂದಿನ ಮೌರ್ಯರ ಆಡಳಿತ ಪದ್ಧತಿಯ ಮೂಲಸ್ವರೂಪವನ್ನು ಭಾರತದ ಈಗಿನ ಆಡಳಿತದಲ್ಲಿ ಕಾಣಬಹುದು. ಈಗಿನ ಆಡಳಿತ ಸ್ತರಗಳು ಹೀಗಿವೆ: ಕೇಂದ್ರ, ರಾಜ್ಯಗಳು, ವಿಭಾಗಗಳು, ಜಿಲ್ಲೆಗಳು, ತಾಲೂಕುಗಳು, ಹೋಬಳಿ ಮತ್ತು ಗ್ರಾಮಗಳು.

4) ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪ: ವಾಸ್ತುಶಿಲ್ಪ ಎಂದರೆ ಕಟ್ಟಡ ನಿರ್ಮಾಣದ ಕಲೆ. ಮೂರ್ತಿಶಿಲ್ಪ ಎಂದರೆ ವಿಗ್ರಹಗಳನ್ನು ನಿರ್ಮಿಸುವ ಕಲೆ. ಅಶೋಕನ ಕಾಲದಲ್ಲಿ ವಾಸ್ತುಶಿಲ್ಪ ನಿರ್ಮಾಣಕ್ಕಾಗಿ ಕಟ್ಟಿಗೆ ಮತ್ತು ಇಟ್ಟಿಗೆಗಳ ಬದಲು ಕಲ್ಲುಗಳ ಬಳಕೆ ಆರಂಭವಾಯಿತು. ಇದರಿಂದಾಗಿಯೇ ಮೌರ್ಯರ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳು ಇಂದಿಗೂ ಉಳಿದುಬಂದಿವೆ.

5) ಭಾರತದಲ್ಲಿ ಆಯುರ್ವೇದವು ಇಂದಿಗೂ ಅತ್ಯಂತ ಜನಪ್ರಿಯ ವೈದ್ಯಕೀಯ ಪದ್ಧತಿಯಾಗಿದೆ. ವಿಶ್ವಸಂಸ್ಥೆ ಇದಕ್ಕೆ ಮಾನ್ಯತೆ ನೀಡಿದೆ. ಇತರ ದೇಶಗಳಲ್ಲಿಯೂ ಈ ಪದ್ಧತಿಯ ಬಳಕೆ ಹೆಚ್ಚುತ್ತಿದೆ.

ಸಂವೇದ ವಿಡಿಯೋ ಪಾಠಗಳು

Samveda – 8th – Social Science – Mouryaru matte Kushanaru
Samveda – 6th – Social Science – Uttara Bharatada Pramukha Raja Manetanagalu (Part 1 of 2)
Samveda – 6th – Social Science – Uttara Bharatada Pramukha Raja Manetanagalu (Part 2 of 2)

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

ಮೌರ್ಯ ಸಾಮ್ರಾಜ್ಯ ಭಾಗ -1| ಚಂದ್ರಗುಪ್ತ ಮೌರ್ಯ| ಕೌಟಿಲ್ಯ| mourya empire |

ಪ್ರಶ್ನೋತ್ತರಗಳು

mouryaru mattu kushanaru notes,6th standard social science chapter 3 note in Kannada,ಮೌರ್ಯರು ಕುಶಾಣರು.

**********