ಪಾಠದ ಪರಿಚಯ :-
1526 ರಲ್ಲಿ ಬಾಬರ್ ಭಾರತದ ಮೇಲೆ ದಂಡೆತ್ತಿ ಬಂದು, ದಿಲ್ಲಿ ಸುಲ್ತಾನರ ಆಳ್ವಿಕೆಯನ್ನು ಕೊನೆಗೊಳಿಸಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈ ಪಾಠದಲ್ಲಿ ಅಕ್ಬರ್ ಮತ್ತು ಔರಂಗಜೇಬನ ಆಳ್ವಿಕೆಯನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಮೊಗಲರ ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ನಿರೂಪಿಸಲಾಗಿದೆ. ಕೊನೆಯಲ್ಲಿ ಸಾಮ್ರಾಜ್ಯದ ಅವನತಿಗೆ ಕಾರಣವಾದ ಅಂಶಗಳನ್ನು ಹೇಳಲಾಗಿದೆ. ಒಟ್ಟಿನಲ್ಲಿ ಇದು ಎರಡು ಶತಮಾನಗಳ ಕಾಲ ಪ್ರಮುಖ ರಾಜಕೀಯ ಏಳು-ಬೀಳಿನ ಚರಿತ್ರೆ ಇದಾಗಿದೆ.
ಭಾರತದ ಇತಿಹಾಸದಲ್ಲಿ ಮೂರು ಸಾಮ್ರಾಜ್ಯಗಳು ಪ್ರಸಿದ್ಧವಾದವು. ಅವುಗಳಲ್ಲಿ ಒಂದು ಮೌರ್ಯ ಸಾಮ್ರಾಜ್ಯ ಮತ್ತೊಂದು ಗುಪ್ತ ಸಾಮ್ರಾಜ್ಯ. ಮೊಗದೊಂದು ಮೊಗಲ್ ಸಾಮ್ರಾಜ್ಯ. ಮೊಗಲ್ ರಾಜಮನೆತನದ ಸ್ಥಾಪಕ ಬಾಬರ್. ಆರಂಭದಲ್ಲಿ ಇವನು ಅಫ್ಘಾನಿಸ್ಥಾನದ ಕಾಬೂಲ್ ಎಂಬ ಪುಟ್ಟ ಪ್ರದೇಶವನ್ನು ಆಳುತ್ತಿದ್ದ. ಸಂಪದ್ಭರಿತ ಭಾರತದ ಮೇಲೆ ಆಕ್ರಮಣ ಮಾಡಲು ಸಮಯ ಕಾಯುತ್ತಿದ್ದ.