ಮೈಲಾರ ಮಹಾದೇವ – ಪಾಠ – 5

ಪ್ರವೇಶ : ನಾವೀಗ ಸ್ವತಂತ್ರ್ಯ ಭಾರತದಲ್ಲಿದ್ದೇವೆ. 1947ಕ್ಕಿಂತ ಹಿಂದೆ ಭಾರತದ ಆಡಳಿತ ಬ್ರಿಟಿಷರ ಕೈಯಲ್ಲಿತ್ತು. ಬ್ರಿಟಿಷರಿಂದ ಭಾರತವನ್ನು ಬಿಡಿಸಿಕೊಳ್ಳಲು ಹಲವಾರು ಮಂದಿ ಹೋರಾಡಿದರು. ಮೋಹನದಾಸ ಕರಮಚಂದ ಗಾಂಧಿ ಅವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟವೇ ನಡೆಯಿತು. ಭಾರತದಾದ್ಯಂತ ಹಲವರು ಈ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದಿಂದಲೂ ಹಲವಾರು ಜನ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಯಲ್ಲಿ ಭಾಗವಹಿಸಿದರು. ಕೆಲವರು ಈ ಹೋರಾಟದಲ್ಲಿ ಹುತಾತ್ಮರೂ ಆದರು. ಹೀಗೆ ಹೋರಾಟಮಾಡಿ ಹುತಾತ್ಮರಾದವರಲ್ಲಿ ಒಬ್ಬರು ಮೈಲಾರ ಮಹಾದೇವ. ಅವರ ಜೀವನ ಚರಿತ್ರೆಯನ್ನು ನೀವಿಲ್ಲಿ ಕಾಣಬಹುದು. ಇವರೆಲ್ಲರ ಹೋರಾಟ ಮತ್ತು ತ್ಯಾಗದ ಫಲವಾಗಿ ನಮಗೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿತು. ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹಿರಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ.

ಭಾರತ ಬ್ರಿಟಿಷರ ಆಡಳಿತಕ್ಕೆ ಸೇರಿದ್ದ ಕಾಲ. ಅವರ ಆಡಳಿತದಿಂದ ಬಿಡಿಸಿಕೊಂಡು ಭಾರತವನ್ನು ಸ್ವತಂತ್ರವಾದ ದೇಶವನ್ನಾಗಿ ಮಾಡಲು ಹಲವಾರು ಭಾರತೀಯರು ಹೋರಾಟ ಮಾಡುತ್ತಿದ್ದರು.

ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಎಂಬುದೊಂದು ಹಳ್ಳಿ. ಆ ಹಳ್ಳಿಯಲ್ಲಿ ದೇಶಭಕ್ತರೊಬ್ಬರು ಭಾಷಣ ಮಾಡುತ್ತಿದ್ದರು. ಅವರ ಭಾಷಣದಲ್ಲಿ “ವಿದೇಶೀ ವಸ್ತ್ರಗಳನ್ನು ತ್ಯಜಿಸಿ ನಮ್ಮ ದೇಶದಲ್ಲೇ ತಯಾರು ಮಾಡಿದ ಬಟ್ಟೆಗಳನ್ನು ತೊಡಬೇಕು” ಎಂದೆಲ್ಲ ಹೇಳುತ್ತಿದ್ದರು. ಆ ಮಾತು ಕೇಳುತ್ತಿದ್ದ 8-10 ವರ್ಷದ ಒಬ್ಬ ಬಾಲಕ ತನ್ನ ತಲೆ ಮುಟ್ಟಿ ನೋಡಿದ. ಅವನ ತಲೆಯ ಮೇಲೆ ವಿದೇಶಿ ಟೊಪ್ಪಿಗೆ ಇತ್ತು. ಕೂಡಲೆ ಟೊಪ್ಪಿಗೆಯನ್ನು ತೆಗೆದು ನೆಲಕ್ಕೆಸೆದ.

ಹೀಗೆ ಟೊಪ್ಪಿಗೆ ನೆಲಕ್ಕೆಸೆದ ಹುಡುಗನ ಹೆಸರು ಮೈಲಾರ ಮಹಾದೇವ. 8ನೆಯ ಜೂನ್ 1911ರಂದು ಮೋಟೆಬೆನ್ನೂರಿನಲ್ಲಿ ಜನಿಸಿದರು. ತಂದೆ ಮಾರ್ತಂಡಪ್ಪ, ಮಹಾದೇವನ ತಾಯಿ ಬಸಮ್ಮ ದೇಶಪ್ರೇಮಿ. ಆ ಹೊತ್ತಿಗೆ ಬ್ರಿಟಿಷರ ವಿರುದ್ಧ ಹೋರಾಡಿದ್ದ ಆ ತಾಯಿ ಜೈಲುವಾಸವನ್ನು ಅನುಭವಿಸಿದವರು. ಆ ತಾಯಿಗೆ ತಕ್ಕ ಮಗ ಮಹಾದೇವ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೋಟೆಬೆನ್ನೂರಿನಲ್ಲಿ ಮುಗಿಸಿದ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಹತ್ತಿರವಿದ್ದ ಹಂಸಭಾವಿಯ ಶಾಲೆಗೆ ಹೋದ. ಆದರೆ ಆತನಿಗೆ ಓದು ರುಚಿಸಲಿಲ್ಲ. ಸ್ವದೇಶೀ ಬಟ್ಟೆಗಳ ವಿಚಾರ ಯಾವಾಗಲೂ ಮನಸ್ಸಿನಲ್ಲಿ ಗುನುಗುಡುತ್ತಿತ್ತು. ಮಹಾತ್ಮಾ ಗಾಂಧೀಜಿ ಖಾದಿ ಬಟ್ಟೆಯ ಬಗೆಗೆ ಒಲವು ಹೊಂದಿದ್ದು, ಎಲ್ಲ ಕಡೆಯಲ್ಲೂ ಆ ವಿಚಾರ ಪ್ರಚಾರ ಮಾಡುತ್ತಿದ್ದರು. ಬಾಲಕ ಮಹಾದೇವನಿಗೆ ಖಾದಿ ಬಟ್ಟೆಯನ್ನು ಕುರಿತು ಪ್ರಚಾರಮಾಡಬೇಕೆಂಬ ಆಸೆ ಹೆಚ್ಚಾಯಿತು.

ಮಹಾದೇವ ಹನ್ನೆರಡು-ಹದಿಮೂರರ ಹರೆಯ. ವಿಜಯಪುರ ಜಿಲ್ಲೆಯಲ್ಲಿ ಕಲಾದಗಿ ಎಂಬ ಒಂದು ಗ್ರಾಮವಿದೆ. ಅಲ್ಲಿ ಆ ಕಾಲದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು. ಮಹಾದೇವ ಅಲ್ಲಿಗೆ ಹೋದ. ಅಲ್ಲಿ ಖಾದಿಯನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡ. ಖಾದಿಯನ್ನು ಹೊತ್ತು ಊರೂರು ತಿರುಗಿ ಮಾರಾಟ ಮಾಡಿದ. ಖಾದಿ ಬಳಕೆಯನ್ನು ಕುರಿತು ಪ್ರಚಾರವನ್ನೂ ನಡೆಸಿದ.

ಮಹಾದೇವ ಅವರಿಗೆ ಸಬರಮತಿ ಆಶ್ರಮದಿಂದ ಕರೆ ಬಂದಿತು. ಮಹಾದೇವ ಅಲ್ಲಿಗೆ ಹೋದರು. ಆ ವೇಳೆಗೆ ಪ್ರಸಿದ್ಧ ದಂಡಿ ಸತ್ಯಾಗ್ರಹ ನಡೆಯುತ್ತಿತ್ತು. ಗಾಂಧೀಜಿಯವರೊಡನೆ ದಂಡಿಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದವರಿಗೆ ಸೆರೆಮನೆ ವಾಸದ ಶಿಕ್ಷೆಯಾಯಿತು. ಮಹಾದೇವ ಆರು ತಿಂಗಳು ಸೆರೆಮನೆಯಲ್ಲಿ ಕಳೆದರು.

ದಂಡಿಯಾತ್ರೆ ಮುಗಿದು ಮಹಾದೇವ ಹುಟ್ಟೂರಿಗೆ ವಾಪಸ್ಸು ಬಂದರು. ಆ ಹೊತ್ತಿಗಾಗಲೇ ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಸ್ವಾತಂತ್ರ್ಯ ಸೇನಾನಿ ಎಂಬುದಾಗಿ ಅವರಿಗೆ ಹೆಸರು ಬಂದಿತ್ತು. ಊರಿನಲ್ಲಿ ಮಹಾದೇವ ಅವರಿಗೆ ಅದ್ದೂರಿಯ ಸ್ವಾಗತ ಸಿಕ್ಕಿತು.

ಮಹಾದೇವ ತಮ್ಮ ಹೆಂಡತಿ ಸಿದ್ದಮ್ಮ ಅವರನ್ನು ಸಿದ್ಧಮತಿ ಎಂದು ಕರೆಯುತ್ತಿದ್ದರು. ಸಬರಮತಿಯ ಸುಖವಾಸ ತನಗಷ್ಟೇ ಅಲ್ಲದೆ ಹೆಂಡತಿಗೂ ಆಗಬೇಕೆಂದು ಅವರನ್ನೂ ಸಬರಮತಿಗೆ ಕರೆದುಕೊಂಡು ಹೋದರು. ಅಲ್ಲಿ ಸಿದ್ದಮ್ಮ ಬ್ರಿಟಿಷ್ ಸರಕಾರಕ್ಕೆ ಅಸಹಕಾರ ನೀಡುವ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಊರಿಗೆ ಬಂದಿದ್ದ ಮಹಾದೇವ ಇಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಹಿಂಡಲಗಾ ಜೈಲಿನಲ್ಲಿದ್ದಾಗ ಗಾಂಧೀಜಿಯವರು ಅಲ್ಲಿಗೆ ಭೇಟಿ ನೀಡಿ ಮಹಾದೇವರನ್ನು ಕಂಡು ಅವರನ್ನು ಪ್ರೋತ್ಸಾಹಿಸಿದರು.

ಮಹಾದೇವರಿಗೆ ಜೈಲಿನಿಂದ ಬಿಡುಗಡೆಯಾಯಿತು. ಹಲವಾರು ಬಾರಿ ಜೈಲಿಗೆ ಹೋಗಿದ್ದರಿಂದ ದೇಹದ ಆರೋಗ್ಯದ ಬಗೆಗೆ ಅವರಿಗೆ ಕಾಳಜಿ ಉಂಟಾಯಿತು. ಶಿಸ್ತುಬದ್ಧವಾದ ವ್ಯಾಯಾಮವನ್ನು ಕಲಿಯಬೇಕೆನಿಸಿತು. ವ್ಯಾಯಾಮವನ್ನು ಕಲಿತರು. ವ್ಯಾಯಾಮ ಕಲಿಯುವಾಗಲೇ ಔಷಧಗಳ ಶಾಸ್ತ್ರವನ್ನು ಅಭ್ಯಾಸ ಮಾಡಿದರು. ಹಳ್ಳಿಗರ ಸೇವೆ ಮಾಡುವ ಉದ್ದೇಶದಿಂದ ಒಂದು ಸೇವಾಶ್ರಮವನ್ನು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಚರಕದಿಂದ ನೂಲು ತೆಗೆಯುವುದು, ಪ್ರಕೃತಿ ಚಿಕಿತ್ಸೆ, ವ್ಯಾಯಾಮ ಮುಂತಾದವುಗಳನ್ನು ಹಳ್ಳಿಯ ಜನರಿಗೆ ಅಭ್ಯಾಸ ಮಾಡಿಸಿದರು. ಸೇವಾಶ್ರಮದಲ್ಲಿ ತಯಾರಿಯಾಗುತ್ತಿದ್ದ ಖಾದಿಯನ್ನು ಊರೂರಿಗೆ ಕೊಂಡು ಹೋಗಿ ಮಾರಾಟ ಮಾಡಿದರು. ‘ಮಹಾದೇವನ ಖಾದಿ’ ಎಂದೇ ಇದು ಪ್ರಸಿದ್ಧಿಯಾಯಿತು. ಇದರ ಜೊತೆಯಲ್ಲಿ ಪತಿ-ಪತ್ನಿಯರ ಸ್ವಾತಂತ್ರ್ಯದ ತುಡಿತ, ಹೋರಾಟ ಜನಪ್ರಿಯವಾಯಿತು. ಊರಿನ ಜನರು ಇವರ ಗುಣಗಾನ ಮಾಡಿದರು.

ಚಿಕ್ಕವಯಸಿದ್ರು ಒಳ್ಳೇ ಚೊಕ್ಕ ಮಾತನಾಡತಾನಾ|

ಹಕ್ಕಿ ತನ್ನ ಮರಿಗೆ ಮುದ್ದುಕೊಟ್ಟಾಂಗ|

ನಕ್ಕರೊಂದು ಚಂದ ಅವನು|

ನುಡಿದರೊಂದು ಚಂದ ನಮಗೆ|

ಸಿಕ್ಕೊದಿಲ್ಲೊ ಇಂಥಾ ಚೊಕ್ಕಬಂಗಾರದಂಥವಾ||

ಸ್ವಾತಂತ್ರ್ಯ ಹೋರಾಟ ದಿನ ದಿನ ಬೆಳೆಯುತ್ತ ಹೋಯಿತು. 1942ರಲ್ಲಿ ಗಾಂಧೀಜಿಯವರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆ ಮಾಡಿದರು. ದೇಶದೆಲ್ಲೆಡೆ ಗಾಂಧೀಜಿಯವರ ಘೋಷಣೆಗೆ ಭಾರತೀಯರ ಬೆಂಬಲ ದೊರೆಯಿತು. ದಕ್ಷಿಣ ಭಾಗದ ಈ ಚಳುವಳಿಗೆ ಮೈಲಾರ ಮಹಾದೇವ ನೇತೃತ್ವ ವಹಿಸಿದರು. ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಗಾಂಧೀಜಿಯವರ ಘೋಷಣೆಯನ್ನು ಪ್ರಚಾರ ಮಾಡಿದರು. ಅವರ ಮಾತುಗಳು ದೇಶಭಕ್ತಿಯನ್ನು ಬಡಿದೆಬ್ಬಿಸಿದವು.

ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕಾದರೆ ಅವರು ನಡೆಸುತ್ತಿರುವ ಆಡಳಿತಕ್ಕೆ ಧಕ್ಕೆ ಉಂಟುಮಾಡಿ ಅವರಿಗೆ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನಿಸಬೇಕಿತ್ತು. ಮಹಾದೇವ ತಮ್ಮ ಸಂಗಡಿಗರೊಂದಿಗೆ ಇಂಥ ಸಾಹಸಕ್ಕೆ ಅಣಿಯಾದರು. ರೈಲು ಓಡಾಟದ ಮೇಲೆ ಇವರು ಗಮನವಿಟ್ಟರು. ಸವಣೂರು ಎಂಬಲ್ಲಿ ರೈಲು ನಿಲ್ದಾಣವನ್ನು ಬ್ರಿಟಿಷ್ ಪೊಲೀಸರಿಗೆ ಗೊತ್ತಾಗದಂತೆ ಸುಟ್ಟುಹಾಕಿದರು. ಹೊನ್ನತ್ತಿ ಎಂಬಲ್ಲಿ ಪೊಲೀಸರ ಬಂದೂಕು ಅಪಹರಿಸಿದರು. ಬಾಳೆಹೊಸೂರಿನ ಪೊಲೀಸ್ ಕೇಂದ್ರವನ್ನು ಸುಟ್ಟರು.

ಮಹಾದೇವ ಮತ್ತು ಸಂಗಡಿಗರ ಈ ಕೃತ್ಯಗಳಿಂದ ಬ್ರಿಟಿಷ್ ಸರ್ಕಾರ ನಡುಗಿತು. ಮಹಾದೇವಪ್ಪನವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಿತು. ಹಗಲಿರುಳೆನ್ನದೆ ಬ್ರಿಟಿಷ್ ಪೊಲೀಸರು ಮಹಾದೇವ ಹಾಗೂ ಅವರ ತಂಡದವರಿಗಾಗಿ ಶೋಧ ನಡೆಸಿದರು.

ಹಾವೇರಿ ಜಿಲ್ಲೆಯ ಹೊಸ ರಿತ್ತಿಯಲ್ಲಿ ಕಂದಾಯವನ್ನು ಬಲವಂತವಾಗಿ ವಸೂಲಿ ಮಾಡಿ ಜನರನ್ನು ಹಿಂಸಿಸುತ್ತಿದ್ದ ಸರಕಾರದ ಕೇಂದ್ರವಿತ್ತು. ಅದನ್ನು ಆಕ್ರಮಿಸಿಕೊಳ್ಳಬೇಕೆಂದು ನಿರ್ಧಾರವಾಯಿತು. ತಮ್ಮೊಟ್ಟಿಗೇ ಇದ್ದ ಪತ್ನಿ ಸಿದ್ದಮ್ಮನನ್ನು ಹಾಗೂ ಮಗಳಾದ ಕಸ್ತೂರಿದೇವಿಯನ್ನು ಹುಬ್ಬಳ್ಳಿಗೆ ಕಳುಹಿಸಿದರು. 1943ರ ಏಪ್ರಿಲ್ 1 ರಂದು ಬೆಳಗಿನ ಸಮಯ. ಹೊಸರಿತ್ತಿಯ ಸಮೀಪದ ವೀರಭದ್ರ ದೇವಾಲಯದಲ್ಲಿ ಪೊಲೀಸರ ತುಕಡಿಯಿತ್ತು. ಅದರ ಪಕ್ಕದಲ್ಲೇ ಖಜಾನೆ. ಮಹಾದೇವ ತನ್ನ ಸಂಗಡಿಗರೊಂದಿಗೆ ಮುತ್ತಿಗೆ ಹಾಕಿದರು. ಮಹಾದೇವ ಅವರ ಧೈರ್ಯಕ್ಕೆ ಹೆದರಿ ಹಲವು ಪೊಲೀಸರು ಓಟ ಕಿತ್ತರು. ಮಹಾದೇವ ಖಜಾನೆಯ ಬೀಗ ಮುರಿಯುವುದರಲ್ಲಿ ನಿರತರಾಗಿದ್ದರು. ಅಡಗಿ ಕುಳಿತಿದ್ದ ಒಬ್ಬ ಪೊಲೀಸ್ ಮಹಾದೇವನ ಎದೆಗೆ ಗುಂಡು ಹೊಡೆದ. ಮಹಾದೇವ ರಕ್ತದ ಮಡುವಿನಲ್ಲಿ ಬಿದ್ದರು. ಅವರ ಸಂಗಡಿಗರು ಗುಂಡು ಹೊಡೆದ ಪೊಲೀಸನನ್ನು ಹೊಡೆಯಲು ಹೋದರು. ನಮ್ಮದು ಅಹಿಂಸಾತ್ಮಕ ಹೋರಾಟ, ಪೊಲೀಸರನ್ನು ಕೊಲ್ಲದಿರಿ, ಹಿಂಸೆ ಮಾಡದಿರಿ ಎಂದು ಮಹಾದೇವ ಸಂಗಡಿಗರನ್ನು ತಡೆದರು. ಮಹಾದೇವನ ಉಸಿರಾಟ ನಿಂತಿತು. ದೇಶದೆಲ್ಲೆಡೆ ಈ ಸುದ್ದಿ ಹರಡಿತು. ಪತ್ನಿ ಸಿದ್ಧಮ್ಮ ಗಂಡನ ಬಲಿದಾನದ ತ್ಯಾಗವನ್ನು ಧೈರ್ಯವಾಗಿ ಎದುರಿಸಿದರು. ಮಹಾದೇವರಿಗಾಗಿ ದೇಶ ಮರುಗಿತು. ಈ ಮರುಕ ಹಾಡಾಗಿ ಹರಿಯಿತು.

ಭಾರತ ದೇಶದ ಬಂಧ ವಿಮೋಚನೆಗೆ ಭಾರೀ ಕಷ್ಟವ ಸೋಸಿದರು

ತಾರುಣ್ಯವೆಲ್ಲವ ತುರಂಗದಲಿ ಕಳೆದು ಮಡಿದ ಮಹಾಶೂರ ಮೈಲಾರರು

ತುಂಟರ ತುಂಟನು, ಭಂಟರ ಭಂಟನು, ಸಾತ್ವಿಕರೊಳಗೆ ಸರದಾರ!

ದಿಟ್ಟನ ಹೆಸರನು ಹುಟ್ಟಿದ ಕೂಸಿಗೆ ಇಟ್ಟರೂ ತೀರದು ಉಪಕಾರ!

ಆಶಯ : ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಸ್ವಾತಂತ್ರ್ಯಯೋಧರು ಎಂದು ಕರೆಯುತ್ತಾರೆ. ಒಂದು ಉದ್ದೇಶಕ್ಕಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟ ಇಂಥ ಯೋಧರು ಭಾರತದಲ್ಲಿ ಹಲವಾರು ಮಂದಿ ಇದ್ದಾರೆ. ದೇಶವೇ ಮುಖ್ಯ ಅದರ ಮುಂದೆ ಉಳಿದೆಲ್ಲವೂ ಗೌಣ. ದೇಶದ ಉಳಿವಿಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಿದ್ದವರು ಈ ಹಿರಿಯರು. ಸ್ವಾರ್ಥವನ್ನು ಮರೆತು ದೇಶದ ಪ್ರಗತಿಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡರು ಇಂಥ ಅಸಂಖ್ಯಾತ ಯೋಧರನ್ನು ನಾವು ಕೃತಜ್ಞತೆಯಿಂದ ಸ್ಮರಿಸಬೇಕು. ಸ್ವಾತಂತ್ರ್ಯಯೋಧರ ಹೋರಾಟದಿಂದ ಸ್ವಾತಂತ್ರ್ಯ ಪಡೆದೆವು. ಸೈನಿಕರ, ಪೊಲೀಸರ ಸೇವಾನಿಷ್ಠೆಯಿಂದ ನಾವು ನಾಡಿನೊಳಗೆ ನೆಮ್ಮದಿಯಿಂದ ಬದುಕುತ್ತಿದ್ದೇವೆ. ನಮ್ಮ ಮೇಲೆ ಎಷ್ಟು ಜನರ ಋಣವಿದೆಯಲ್ಲವೆ?

ಪದಗಳ ಅರ್ಥ

ಟೊಪ್ಪಿಗೆ – ಟೋಪಿ;

ಕಿತ್ತಿ ಬರತಾರ – ಕಿತ್ತು ಬರುತ್ತಾರೆ; ಉತ್ಸಾಹದಿಂದ ಬರುತ್ತಾರೆ;

ಚಿಕ್ಕವಯಸಿದ್ರು – ಚಿಕ್ಕ ವಯಸ್ಸಿದ್ದರೂ;

ಚೊಕ್ಕ – ಚೆನ್ನಾಗಿ, ಅಚ್ಚುಕಟ್ಟಾಗಿ;

ಚಂದ – ಚೆನ್ನ;

ಚೊಕ್ಕಬಂಗಾರ – ಅಪ್ಪಟ ಬಂಗಾರ, ಅಪರಂಜಿ;

ಧಕ್ಕೆ – ತೊಂದರೆ;

ಅಣಿಯಾಗು – ಸಿದ್ಧವಾಗು;

ಶೋಧ – ಹುಡುಕಾಟ;

ತುಕಡಿ – ಸೈನ್ಯ;

ಕಾಳಗ – ಯುದ್ಧ, ಹೋರಾಟ;

ಮಡು – ಕೊಳ್ಳ ;

ಕಾಲ್ತೆಗೆ – ಓಡಿಹೋಗು;

ದಿಟ್ಟತನ – ಧೈರ್ಯ;

ಖಜಾನೆ – ಬೊಕ್ಕಸ;

ಖಾದಿ – ಕೈನೂಲಿನಿಂದ ನೆಯ್ದಬಟ್ಟೆ ;

ಓಟಕೀಳು – ಓಡಿಹೋಗು ;

ಗುನುಗು – ಸತತವಾಗಿ ಧ್ವನಿಮಾಡು ;

ಜೈಲು – ಸೆರೆಮನೆ, ಬಂಧೀಖಾನೆ;

ಬಲಿದಾನ – ಪ್ರಾಣತ್ಯಾಗ;

ಸೋಸಿದರು – ಅನುಭವಿಸಿದರು.

ಟಿಪ್ಪಣಿ

ಸವಣೂರು – ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು ;

ಹೊನ್ನತ್ತಿ – ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಗ್ರಾಮ ;

ಬಾಳೆಹೊಸೂರು – ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಒಂದು ಗ್ರಾಮ.

ಪಾಠದ ಪೂರಕ ವಿವರಣೆ :

ಅಸಹಕಾರ ಚಳುವಳಿ : ಸರ್ಕಾರದ ವಿರುದ್ಧ ಜನತೆ ತನ್ನ ಅಸಮ್ಮತಿ, ವಿರೋಧ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗ. ಬ್ರಿಟನ್ ಸರಕಾರ ಭಾರತದ ಮೇಲೆ ವಿಧಿಸಿದ್ದ ಎಲ್ಲ ಕಾನೂನುಗಳಿಗೆ ಸಹಕರಿಸಬಾರದೆಂದು ನಡೆಸಿದ ಹೋರಾಟ.

ಅಸಹಕಾರ ಚಳುವಳಿ

ಸತ್ಯಾಗ್ರಹ : ಮಹಾತ್ಮಾ ಗಾಂಧಿಯವರು ತಮ್ಮ ಜೀವನದಲ್ಲಿ ಕಂಡುಕೊಂಡ ಸಿದ್ಧಾಂತ ಹಾಗೂ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ನಡೆಸಿದ ಚಳವಳಿ. ಮಹಾತ್ಮಾ ಗಾಂಧಿಯವರು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ವಿಮೋಚನೆಗೊಳಿಸಲು ಸತ್ಯಾಗ್ರಹ ಮಾರ್ಗವನ್ನು ರೂಪಿಸಿದರು. ಮೊದಲು ‘ಸದಾಗ್ರಹ’ ಎಂದೂ ಅನಂತರ ‘ಸತ್ಯಾಗ್ರಹ’ ಎಂದೂ ಅದಕ್ಕೆ ಹೆಸರಿಟ್ಟರು.

ಸತ್ಯಾಗ್ರಹದಲ್ಲಿ ಪ್ರಮುಖವಾದುದು ದಂಡಿ ಉಪ್ಪಿನ ಸತ್ಯಾಗ್ರಹ.

ಸಬರಮತಿ ಆಶ್ರಮ : ಗಾಂಧೀಜಿ ಸ್ಥಾಪಿಸಿದ ಪ್ರಪಂಚ ಪ್ರಸಿದ್ಧ ಆಶ್ರಮ. ಗುಜರಾತ್ ಹತ್ತಿರವಿರುವ ಕೋಜಾಟ್ ಎಂಬಲ್ಲಿ ಗೆಳೆಯ ಜೀವನ್‍ಲಾಲ್ ದೇಸಾಯಿಯವರ ಬಂಗಲೆಯನ್ನು ಬಾಡಿಗೆಗೆ ತೆಗೆದುಕೊಂಡು 1915 ಮೇ 25 ರಂದು ಈ ಆಶ್ರಮವನ್ನು ಇವರು ಆರಂಭಿಸಿದರು. ಈ ಆಶ್ರಮಕ್ಕೆ ಸತ್ಯಾಗ್ರಹ ಆಶ್ರಮವೆಂದು ಹೆಸರಿಡಲಾಗಿತ್ತು. 1917ರಲ್ಲಿ ಅಹಮದ್ ನಗರದಿಂದ ಉತ್ತರಕ್ಕೆ 6 ಕಿ.ಮೀ. ದೂರದಲ್ಲಿರುವ ಸಬರಮತಿ ನದಿ ದಂಡೆಯಮೇಲೆ ಈ ಆಶ್ರಮವನ್ನು ಸ್ಥಳಾಂತರಿಸಲಾಯಿತು. ಇದರಿಂದ ಸಬರಮತಿ ಆಶ್ರಮವೆಂದು ಹೆಸರಾಯಿತು.

Splendid Tour of Sabarmati Ashram – Gandhi Ashram , Udyog Mandir, Riverfront || Ahmedabad

ದಂಡಿ ಸತ್ಯಾಗ್ರಹ : 1930ರ ಮಾರ್ಚ್ 12ರಂದು ಗಾಂಧಿಯವರು ತಮ್ಮ ಸುಪ್ರಸಿದ್ಧ ಉಪ್ಪಿನ ಸತ್ಯಾಗ್ರಹವನ್ನಾರಂಭಿಸಿದರು. 78 ಮಂದಿ ಅನುಯಾಯಿಗಳೊಂದಿಗೆ ಗಾಂಧಿಯವರು ಅಹಮದಾಬಾದಿನಿಂದ 240 ಮೈಲಿ ದೂರದಲ್ಲಿ ಸಮುದ್ರ ದಂಡೆಯಲ್ಲಿರುವ ದಂಡಿಗೆ ಹೊರಟರು. ಅವರಲ್ಲಿ ಮಹಾದೇವ ಕರ್ನಾಟಕದಿಂದ ಏಕೈಕ ಪ್ರತಿನಿಧಿಯಾಗಿ ಉಪ್ಪಿನ ಸತ್ಯಾಗ್ರಹದಲ್ಲಿ ಮಹಾತ್ಮಾ ಗಾಂಧೀಜಿಯವರೊಂದಿಗೆ ಭಾಗವಹಿಸಿದರು. ಉಪ್ಪಿನ ತಯಾರಿಕೆಯಲ್ಲಿ ಸರ್ಕಾರ ಹೊಂದಿದ್ದ ಏಕಸ್ವಾಮ್ಯವನ್ನು ವಿರೋಧಿಸಿ ಕಾನೂನು ಭಂಗ ಮಾಡುವುದು ಅವರ ಉದ್ದೇಶ. ಏಪ್ರಿಲ್ 6ರಂದು ಅವರು ದಂಡಿಯನ್ನು ತಲುಪಿ, ಸಮುದ್ರಸ್ನಾನ ಮಾಡಿ ನೈಸರ್ಗಿಕ ಉಪ್ಪನ್ನು ಕೈಯಲ್ಲಿ ಹಿಡಿದರು. ನಾಡಿನಾದ್ಯಂತ ಜನರು ಗಾಂಧಿಯವರ ಕರೆಯಂತೆ ಸತ್ಯಾಗ್ರಹವನ್ನಾಚರಿಸಿದರು. ಸುಮಾರು ಒಂದು ಲಕ್ಷ ಜನ ದಸ್ತಗಿರಿಯಾದರು. ಗಾಂಧಿಯವರ ದಸ್ತಗಿರಿ ಆಯಿತು. ಸರ್ಕಾರ ಅವರನ್ನು ಸೆರೆಯಲ್ಲಿಟ್ಟಿತ್ತು. ಸತ್ಯಾಗ್ರಹವನ್ನು ಅಂತ್ಯಗೊಳಿಸುವ ಬಗ್ಗೆ ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಸಹಿಯಾಯಿತು. ಸತ್ಯಾಗ್ರಹಿಗಳು ಬಿಡುಗಡೆಯಾದರು. ಕೆಲವೊಂದು ಮಿತಿಗಳೊಳಗೆ, ಸ್ವಂತ ಉಪಯೋಗಕ್ಕಾಗಿ ಉಪ್ಪನ್ನು ತಯಾರಿಸಲು ಅವಕಾಶ ಲಭ್ಯವಾಯಿತು.

Mahatma Gandhi, Sarojini Naidu and others during the Salt Satyagraha, April 1930

ಸಂವೇದ ವಿಡಿಯೋ ಪಾಠಗಳು

Samveda – 7th – Kannada – Mailara Mahadeva (Part 1 of 2)

Samveda – 7th – Kannada – Mailara Mahadeva (Part 2 of 2)

ಪೂರಕ ವಿಡಿಯೋಗಳು

ಮೈಲಾರ ಮಹಾದೇವ | Mylara mahadeva | 7th standard kannada | lesson 5

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವ್ಯಾಕರಣ

ಅನ್ಯದೇಶ್ಯ ಶಬ್ದಗಳು

ಒಂದು ಪ್ರದೇಶದಲ್ಲಿ ಸಾಮಾನ್ಯವಾಗಿ ಒಂದು ಭಾಷೆ ಹರಡಿಕೊಂಡಿರುತ್ತದೆ. (ಉದಾಹರಣೆಗೆ, ನಮ್ಮ ರಾಜ್ಯದಲ್ಲಿ ಕನ್ನಡ ರೂಢಿಯಾಗಿದೆ) ಈ ದೇಶಭಾಷೆಯನ್ನು ಆಡುವವರಿಗೆ ಬೇರೆ ಭಾಷೆಗಳನ್ನು ಆಡುವವರ ಸಂಗಡ ಹಲವು ವಿಧಗಳಲ್ಲಿ ಸಂಪರ್ಕ ಉಂಟಾಗುತ್ತದೆ. ಹೊರಗಿನಿಂದ ಅವರು ಬಂದು ಇವರ ಸಂಗಡ ವ್ಯಾಪಾರ ಮಾಡಬಹುದು. ಇವರ ದೇಶವನ್ನು ಗೆದ್ದು ಆಳಬಹುದು. ಇಲ್ಲೇ ಮನೆ ಮಾಡಿಕೊಂಡು ನೆಲೆಸಬಹುದು. ಇಂಥ ಸಂದರ್ಭಗಳಲ್ಲಿ ಅವರ ಭಾಷೆಗಳಿಂದ ಹಲಕೆಲವು ಶಬ್ದಗಳು ಒಂದು ದೇಶಭಾಷೆಗೆ ಸೇರಿಹೋಗುತ್ತವೆ. ಹೀಗೆ ಹೊರಗಿನ ಭಾಷೆಗಳಿಂದ ಬಂದು ಒಂದು ಭಾಷೆಗೆ ಸೇರುವ ಶಬ್ದಗಳಿಗೆ ಅನ್ಯದೇಶ್ಯಗಳೆಂದು ಹೆಸರು.

ಕನ್ನಡಕ್ಕೆ ಬಂದ ಅನ್ಯದೇಶ್ಯ ಪದಗಳಿಗೆ ಕೆಲವು ಉದಾಹರಣೆಗಳು

ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳು:

ಭೂಮಿ, ನದಿ, ಅಜ್ಜ, ದಯೆ, ರಾತ್ರಿ, ಕಥೆ, ಸಂಜೆ, ನಿದ್ದೆ, ಹಬ್ಬ, ದೀಪ, ಮುಖ, ಶಕ್ತಿ, ಧರ್ಮ, ಪುಣ್ಯ, ರಾಜ, ಯುದ್ಧ ಇತ್ಯಾದಿ…

ಪೋರ್ಚುಗೀಸಿನಿಂದ ಬಂದುವು :

ಅಲಮಾರು, ಸಾಬೂನು, ಪಾದ್ರಿ, ಇಸ್ತ್ರೀ, ಮೇಜು ಇತ್ಯಾದಿ…

ಪರ್ಸೋ – ಅರಾಬಿಕ್‍ನಿಂದ ಬಂದುವು :

ಜಮೀನು, ಸರ್ಕಾರ, ರೈತ, ಸಲಾಮು, ಕಾನೂನು, ಕಾಗದ, ಬಂದೂಕ, ಚುನಾವಣೆ, ಮಂಜೂರು, ದರ್ಬಾರು, ಅಸಲು, ನಕಲು, ರಸ್ತೆ ಇತ್ಯಾದಿ

ದೇಶ್ಯ – ಅನ್ಯದೇಶ್ಯ ಶಬ್ದಗಳು

ದೇಶೀಯ,ಅನ್ಯದೇಶೀಯ ಪದ | Deshiya,AnyaDeshiyaPada | ಕನ್ನಡ ವ್ಯಾಕರಣ | Kannada Grammar | Upayuktha

ವಿಶೇಷಣಗಳು

ಒಂದು ಊರಿನಲ್ಲಿ ಶಂಕರ ಎಂಬ ಚಿಕ್ಕ ಹುಡುಗನಿದ್ದನು.

ಬಿಳಿ ಆನೆಗಳು ಬರ್ಮಾ ದೇಶದಲ್ಲಿ ಕಾಣಬರುತ್ತವೆ.

ಹಳೇ ಎತ್ತಿಗೆ ಹಾಳು ಬಂಡಿ

ಮೇಲಿನ ವಾಕ್ಯಗಳನ್ನು ಗಮನಿಸಿ. ಇಲ್ಲಿ ‘ಚಿಕ್ಕ ಹುಡುಗ’, ‘ಬಿಳಿ ಆನೆ’, ‘ಹಳೇ ಎತ್ತು’ ಎಂಬಲ್ಲಿ ‘ಚಿಕ್ಕ’, ‘ಹಳೇ, `ಬಿಳಿ’ ಎಂಬ ಪದಗಳು ಅದೇ ವಾಕ್ಯದಲ್ಲಿ ಕಾಣುವ ಹುಡುಗ, ಎತ್ತು ಹಾಗೂ ಆನೆ ಎಂಬ ನಾಮಪದಗಳ ವಿಶೇಷವನ್ನು ಕುರಿತು ಹೇಳುತ್ತವೆ. ದೊಡ್ಡ ಚೀಲ, ಕೆಂಪು ತಾವರೆ, ಪುಟ್ಟ ನಾಯಿಮರಿ ಇವೆಲ್ಲ ಪದಗಳಲ್ಲೂ ವಿಶೇಷಣಗಳಿರುವುದನ್ನು ಗಮನಿಸಿ. ಹೀಗೆ ನಾಮಪದಗಳ ಮೊದಲಲ್ಲಿ ಆಯಾ ನಾಮಪದಗಳ ವಿಶೇಷವನ್ನು ಕುರಿತು ಹೇಳುವ ಪದಗಳನ್ನು ‘ವಿಶೇಷಣ’ಗಳೆನ್ನುತ್ತೇವೆ.

ವ್ಯಾಕರಣ ಮಾಹಿತಿ ಗುಣ ವಿಶೇಷಣಗಳು