ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು – ಅಧ್ಯಾಯ-8

18ನೇ ಅಕ್ಟೋಬರ್ 1999 ರಂದು 200 km/h ವೇಗದ ಚಂಡಮಾರುತ ಒರಿಸ್ಸಾಗೆ ಅಪ್ಪಳಿಸಿತು. ಈ ಚಂಡಮಾರುತವು 45,000 ಮನೆಗಳನ್ನು ಧ್ವಂಸಗೊಳಿಸಿ, 7,00,000 ಜನರನ್ನು ನಿರಾಶ್ರಿತರನ್ನಾಗಿಸಿತು. ಅದೇ ವರ್ಷ ಅಕ್ಟೋಬರ್ 29 ರಂದು 260 km/h ವೇಗದ ಎರಡನೇ ಚಂಡಮಾರುತವು ಪುನಃ ಒರಿಸ್ಸಾಗೆ ಅಪ್ಪಳಿಸಿತು. ಇದು 9 ಮೀ ಎತ್ತರದ ನೀರಿನ ಅಲೆಗಳನ್ನು ಹೊತ್ತು ತಂದಿತ್ತು. ಸಾವಿರಾರು ಜನರ ಪ್ರಾಣ ಹಾನಿಯಾಯಿತು. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿ ಪಾಸ್ತಿ ನಾಶವಾಯಿತು. ಚಂಡಮಾರುತವು ಕೃಷಿ, ಸಾರಿಗೆಸಂಪರ್ಕ ಮತ್ತು ವಿದ್ಯುತ್ ಸರಬರಾಜಿನ ಮೇಲೆ ದುಷ್ಪರಿಣಾಮ ಬೀರಿತು.

ಹಾಗಾದರೆ ಚಂಡಮಾರುತಗಳು ಎಂದರೇನು? ಅವು ಹೇಗೆ ಉಂಟಾಗುತ್ತವೆ? ಅವು ಏಕೆ ವಿನಾಶಕಾರಿ? ಇಂತಹ ಹಲವು ಪ್ರಶ್ನೆಗಳಿಗೆ ಈ ಅಧ್ಯಾಯದಲ್ಲಿ ಉತ್ತರ ಕಂಡುಕೊಳ್ಳೋಣ.

ಗಾಳಿಯನ್ನು ಒಳಗೊಂಡ ಕೆಲವು ಚಟುವಟಿಕೆಗಳಿಂದ ನಾವು ಪ್ರಾರಂಭಿಸೋಣ. ಈ ಚಟುವಟಿಕೆಗಳು ಚಂಡಮಾರುತದ ಕೆಲವು ಮೂಲಭೂತ ಲಕ್ಷಣಗಳನ್ನು ಸ್ಪಷ್ಟಪಡಿಸುತ್ತವೆ. ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೆ ಮೊದಲು, ಚಲಿಸುವ ಗಾಳಿಯನ್ನು ಮಾರುತ (wind) ಎನ್ನುವರು ಎಂಬುದನ್ನು ನೆನಪಿಸಿಕೊಳ್ಳಿ.

8.1 ಗಾಳಿಯು ಒತ್ತಡವನ್ನು ಉಂಟುಮಾಡುತ್ತದೆ.

ಚಟುವಟಿಕೆ 8.1
ಬಿಸಿಗೊಳಿಸುವುದನ್ನು ಒಳಗೊಂಡ ಯಾವುದೇ ಚಟುವಟಿಕೆಗಳನ್ನು ಮಾಡುವಾಗ ಬಹಳ ಎಚ್ಚರವಹಿಸಿ. ಅಂತಹ ಚಟುವಟಿಕೆಗಳನ್ನು ನಿಮ್ಮ ಕುಟುಂಬದ ಹಿರಿಯರ ಅಥವಾ ನಿಮ್ಮ ಶಿಕ್ಷಕರ ಸಮ್ಮುಖದಲ್ಲಿ ಮಾಡಿ.

ಈ ಚಟುವಟಿಕೆಯಲ್ಲಿ ನೀವು ನೀರನ್ನು ಕುದಿಸುವ ಅಗತ್ಯವಿದೆ.

ಮುಚ್ಚಳವಿರುವ ಒಂದು ತಗಡಿನ ಡಬ್ಬವನ್ನು ತೆಗೆದುಕೊಳ್ಳಿ ಸುಮಾರು ಅದರ ಅರ್ಧದಷ್ಟು ನೀರು ತುಂಬಿ, ಅದು ಕುದಿಯುವವರೆಗೆ ಬೆಂಕಿಯ ಜ್ವಾಲೆಯಿಂದ ಕಾಯಿಸಿ. ಕೆಲವು ನಿಮಿಷಗಳವರೆಗೆ ನೀರನ್ನು ಕುದಿಯಲು ಬಿಡಿ. ಜ್ವಾಲೆಯನ್ನು ನಂದಿಸಿ, ತಕ್ಷಣ ಡಬ್ಬದ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ. ಬಿಸಿಯಾದ ಡಬ್ಬವನ್ನು ಹಿಡಿದುಕೊಳ್ಳುವಾಗ ಎಚ್ಚರವಿರಲಿ. ಲೋಹದ ಅಗಲವಾದ ಪಾತ್ರೆ ಅಥವಾ ಕೈ ತೊಳೆಯುವ ತೊಟ್ಟಿಯಲ್ಲಿ ಡಬ್ಬವನ್ನು ಎಚ್ಚರದಿಂದ ಇಟ್ಟು ಡಬ್ಬದ ಮೇಲೆ ತಣ್ಣನೆಯ ನೀರು ಸುರಿಯಿರಿ. ಡಬ್ಬದ ಆಕಾರ ಏನಾಯಿತು?

ತಗಡಿನ ಡಬ್ಬದ ಆಕಾರದಲ್ಲಿ ಏಕೆ ವ್ಯತ್ಯಾಸವಾಯಿತೆಂದು ಊಹಿಸಬಲ್ಲಿರ?

ನಿಮಗೆ ತಗಡಿನ ಡಬ್ಬ ಸಿಗದೆ ಇದ್ದರೆ ಒಂದು ಮೆದು ಪ್ಲಾಸ್ಟಿಕ್ ಬಾಟಲನ್ನು ತೆಗೆದುಕೊಳ್ಳಿ. ಅದಕ್ಕೆ ಬಿಸಿನೀರನ್ನು ತುಂಬಿ. ನಂತರ ಬಾಟಲನ್ನು ಖಾಲಿಮಾಡಿ, ತಕ್ಷಣ ಬಿಗಿಯಾಗಿ ಬಿರಡೆಯನ್ನು ಮುಚ್ಚಿ, ಸುರಿಯುವ ತಣ್ಣನೆಯ ನೀರಿನ ಕೆಳಗೆ ಹಿಡಿಯಿರಿ.

ಈಗ ನಿಮ್ಮ ಕೆಲವು ಅನುಭವಗಳನ್ನು ಸ್ಮರಿಸಿಕೊಳ್ಳಿ.

ನೀವು ಗಾಳಿಪಟ ಹಾರಿಸುವಾಗ ನಿಮ್ಮ ಹಿಂಬದಿಯಿಂದ ಬೀಸುವ ಗಾಳಿಯು ಹಾರಾಟಕ್ಕೆ ಸಹಾಯಮಾಡುವುದೆ?

ನೀವು ದೋಣಿಯಲ್ಲಿ ಸಾಗುವಾಗ ನಿಮ್ಮ ಹಿಂದಿನಿಂದ ಗಾಳಿ ಬೀಸಿದರೆ ದೋಣಿ ನಡೆಸಲು ಸುಲಭವಾಗುವುದೆ?

ಬೀಸುವ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಬೈಸಿಕಲ್ ಸವಾರಿ ಮಾಡುವುದು ನಿಮಗೆ ಕಷ್ಟವಾಗುವುದೆ?

ಬೈಸಿಕಲ್‍ನ ಟ್ಯೂಬ್ ಹಿಗ್ಗಲು ಅದಕ್ಕೆ ಗಾಳಿ ತುಂಬಬೇಕೆಂದು ನಿಮಗೆ ಗೊತ್ತು. ಅಷ್ಟೇ ಅಲ್ಲದೆ ಅತಿಯಾಗಿ ಗಾಳಿ ತುಂಬಿದ ಟ್ಯೂಬ್ ಒಡೆಯಬಹುದೆಂದೂ ನಿಮಗೆ ತಿಳಿದಿದೆ. ಹಾಗಾದರೆ ಟ್ಯೂಬ್ ಒಳಗಿನ ಗಾಳಿ ಏನು ಮಾಡುತ್ತದೆ?

ಟ್ಯೂಬ್‍ಗೆ ತುಂಬಿದ ಗಾಳಿಯು ಹೇಗೆ ಅದಕ್ಕೆ ಆಕಾರವನ್ನು ನೀಡುತ್ತದೆ ಎಂಬುದನ್ನು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ.

ಗಾಳಿಯು ಒತ್ತಡವನ್ನು ಉಂಟುಮಾಡುತ್ತದೆ ಎಂಬುದನ್ನು ಈ ಎಲ್ಲಾ ಅನುಭವಗಳು ತೋರಿಸುತ್ತವೆ. ಗಾಳಿ ಬೀಸುವಾಗ ಅದರ ಒತ್ತಡದಿಂದಲೇ ಮರದ ಎಲೆಗಳು, ಬ್ಯಾನರ್‍ಗಳು ಅಥವಾ ಬಾವುಟಗಳು ಹಾರಾಡುತ್ತವೆ. ಗಾಳಿಗೆ ಒತ್ತಡವಿದೆ ಎಂದು ತೋರಿಸುವ ಇನ್ನೂ ಕೆಲವು ಅನುಭವಗಳನ್ನು ಪಟ್ಟಿಮಾಡಿ.

ತಗಡಿನ ಡಬ್ಬದ (ಅಥವಾ ಪ್ಲಾಸ್ಟಿಕ್ ಬಾಟಲಿನ) ಆಕಾರದಲ್ಲಿ ವ್ಯತ್ಯಾಸವುಂಟಾಗಲು ಕಾರಣವೇನೆಂದು ನಾವು ವಿವರಿಸಲು ಪ್ರಯತ್ನಿಸೋಣ. ಡಬ್ಬದ ಮೇಲೆ ತಣ್ಣನೆಯ ನೀರು ಸುರಿದಾಗ ಡಬ್ಬದ ಒಳಗಿನ ನೀರಾವಿ ತಣಿದು ನೀರಾಗುತ್ತದೆ. ಇದರಿಂದ ಒಳಗಿನ ಗಾಳಿಯ ಪ್ರಮಾಣ ಕಡಿಮೆಯಾಗುತ್ತದೆ. ಡಬ್ಬದ ಹೊರಗೆ ಗಾಳಿ ಉಂಟುಮಾಡುವ ಒತ್ತಡಕ್ಕಿಂತ ಒಳಗಿನ ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಡಬ್ಬದ ಗಾತ್ರ ಕುಗ್ಗುತ್ತದೆ.

ಗಾಳಿಯು ಒತ್ತಡವನ್ನು ಉಂಟುಮಾಡುವುದೆಂದು ಈ ಕೆಳಗಿನ ಚಟುವಟಿಕೆ ಮತ್ತೊಮ್ಮೆ ದೃಢಪಡಿಸುತ್ತದೆ.

8.2 ವೇಗವಾಗಿ ಬೀಸುವ ಮಾರುತಗಳು ಕಡಿಮೆ ಒತ್ತಡದ ಗಾಳಿಯನ್ನು ಒಳಗೊಂಡಿರುತ್ತವೆ.

ಚಟುವಟಿಕೆ 8.2
ಒಂದು ಖಾಲಿ ಬಾಟಲಿನ ಬಾಯಿಗಿಂತ ಚಿಕ್ಕದಾಗಿರುವಂತೆ ಒಂದು ಕಾಗದವನ್ನು ಉಂಡೆಗಟ್ಟಿ. ಬಾಟಲಿಯನ್ನು ಅಡ್ಡವಾಗಿ ಹಿಡಿದು ಕಾಗದದ ಉಂಡೆಯನ್ನು ಅದರ ಬಾಯಿಯ ಸ್ವಲ್ಪ ಒಳಭಾಗದಲ್ಲಿಡಿ. ಈಗ ಕಾಗದದ ಉಂಡೆ ಬಾಟಲಿಯ ಒಳಗೆ ಹೋಗುವಂತೆ ಬಾಯಿಂದ ಗಾಳಿಯನ್ನು ಊದಲು ಪ್ರಯತ್ನಿಸಿ. ಬೇರೆ ಬೇರೆ ಗಾತ್ರದ ಬಾಟಲಿಗಳನ್ನು ಬಳಸಿ ಈ ಚಟುವಟಿಕೆ ಮಾಡಿ. ನಿಮ್ಮ ಗೆಳೆಯರಲ್ಲಿ ಯಾರಾದರೂ ಬಾಟಲಿನ ಒಳಭಾಗಕ್ಕೆ ಕಾಗದದ ಉಂಡೆಯನ್ನು ಊದಬಲ್ಲರೇ? ಸವಾಲು ಹಾಕಿ.

ಪಹೇಲಿ ಮತ್ತು ಬೂಝೊ ಕೆಳಕಂಡ ಪ್ರಶ್ನೆಯನ್ನು ಕುರಿತು ಆಲೋಚಿಸುತ್ತಿದ್ದಾರೆ.
ಕಾಗದದ ಉಂಡೆಯನ್ನು ಬಾಟಲಿನ ಒಳಭಾಗಕ್ಕೆ ಊದುವುದು ಏಕೆ ಕಷ್ಟ?

ಚಟುವಟಿಕೆ 8.3
ಬಲೂನುಗಳನ್ನು ಊದಿ
ಸುಮಾರು ಒಂದೇ ಗಾತ್ರದ ಎರಡು ಬಲೂನುಗಳನ್ನು ತೆಗೆದುಕೊಳ್ಳಿ. ಅವುಗಳ ಒಳಗೆ ಸ್ವಲ್ಪ ನೀರು ತುಂಬಿ. ಎರಡೂ ಬಲೂನುಗಳನ್ನು ಊದಿ, ದಾರಗಳಿಂದ ಪ್ರತ್ಯೇಕವಾಗಿ ಕಟ್ಟಿ. ಈ ಬಲೂನುಗಳನ್ನು 8-10 cm ಅಂತರದಲ್ಲಿ ಬೈಸಿಕಲ್ ಚಕ್ರದ ಸ್ಪೋಕ್ಸ್ ಕಡ್ಡಿ ಅಥವಾ ಒಂದು ಕಟ್ಟಿಗೆಯ ಕಡ್ಡಿಗೆ ಕಟ್ಟಿ ತೂಗುಬಿಡಿ. ಬಲೂನುಗಳ ಮಧ್ಯ ಭಾಗದಿಂದ ಗಾಳಿಯನ್ನು ಊದಿ.

ಏನಾಗುವುದೆಂದು ನೀವು ನಿರೀಕ್ಷಿಸುವಿರಿ? ಏನಾಗುವುದೆಂದು ತಿಳಿದುಕೊಳ್ಳಲು ಬೇರೆ ಬೇರೆ ಕಡೆಗಳಿಂದ ಬಲೂನುಗಳ ಮೇಲೆ ಗಾಳಿಯನ್ನು ಊದಲು ಪ್ರಯತ್ನಿಸಿ.

ಚಟುವಟಿಕೆ 8.4
ಗಾಳಿಯನ್ನು ಊದಿ ಮೇಲೇರಿಸುವಿರಾ?

ಚಿತ್ರ 8.5ರಲ್ಲಿ ತೋರಿಸಿದಂತೆ 20cm ಉದ್ದ ಮತ್ತು 3cm ಅಗಲವಾದ ಒಂದು ಕಾಗದದ ಪಟ್ಟಿಯನ್ನು ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಹಿಡಿದುಕೊಳ್ಳಿ. ಈಗ ಕಾಗದದ ಪಟ್ಟಿಯ ಮೇಲೆ ಬಾಯಿಂದ ಗಾಳಿಯನ್ನು ಊದಿ.

ಪಹೇಲಿಯು ಕಾಗದದ ಪಟ್ಟಿ ಮೇಲೇರುತ್ತದೆ ಎಂದುಕೊಳ್ಳುತ್ತಾಳೆ, ಬೂಝೊ ಕಾಗದ ಪಟ್ಟಿ ಕೆಳಗೆ ಬಾಗುತ್ತದೆ ಎಂದುಕೊಳ್ಳುತ್ತಾನೆ.

ಕಾಗದದ ಪಟ್ಟಿ ಏನಾಗುವುದೆಂದು ನೀವು ಆಲೋಚಿಸುವಿರಿ? ಈಗ ನಾವು ಚಟುವಟಿಕೆ 8.2, 8.3 ಮತ್ತು 8.4 ರಲ್ಲಿ ಗಮನಿಸಿದ ಅಂಶಗಳನ್ನು ಅರ್ಥಮಾಡಿಕೊಳ್ಳೋಣ.

ನೀವು ಗಮನಿಸಿದ ಅಂಶಗಳು ನೀವು ಆಲೋಚಿಸಿದಂತೆಯೇ ಇವೆಯೆ? ಮಾರುತದ ಹೆಚ್ಚು ವೇಗವು, ಗಾಳಿಯ ಕಡಿಮೆ ಒತ್ತಡವನ್ನು ಒಳಗೊಂಡಿರುತ್ತದೆ ಎನಿಸುವುದೆ?

ನಾವು ಬಾಟಲಿಯ ಬಾಯಿಯ ಒಳಗೆ ಗಾಳಿಯನ್ನು ಊದಿದಾಗ ಬಾಟಲಿನ ಬಾಯಿಯ ಹತ್ತಿರದ ಗಾಳಿಯ ವೇಗ ಹೆಚ್ಚಾಗಿರುತ್ತದೆ. ಇದರಿಂದ ಅಲ್ಲಿ ಒತ್ತಡ ಕಡಿಮೆಯಾಗುತ್ತದೆ. ಬಾಟಲಿನ ಒಳಗಿನ ಗಾಳಿಯ ಒತ್ತಡವು ಬಾಟಲಿನ ಬಾಯಿಯ ಹತ್ತಿರದ ಗಾಳಿಯ ಒತ್ತಡಕ್ಕಿಂತ ಹೆಚ್ಚಾಗಿರುತ್ತದೆ. ಬಾಟಲಿಯ ಒಳಗಿರುವ ಗಾಳಿಯು ಕಾಗದದ ಉಂಡೆಯನ್ನು ಹೊರಗೆ ತಳ್ಳುತ್ತದೆ.

ಚಟುವಟಿಕೆ 8.3ರಲ್ಲಿ ನೋಡಿದಂತೆ ನೀವು ಎರಡು ಬಲೂನುಗಳ ನಡುವೆ ಗಾಳಿಯನ್ನು ಊದಿದಾಗ ಅವು ಪರಸ್ಪರ ಹತ್ತಿರ ಬರುತ್ತವೆ. ಇದು ಹೇಗೆ ಸಾಧ್ಯ? ಬಲೂನುಗಳ ನಡುವಿನ ಗಾಳಿಯ ಒತ್ತಡ ಕಡಿಮೆಯಾದಾಗ ಮಾತ್ರ ಈ ರೀತಿ ಆಗಲು ಸಾಧ್ಯ. ಆಗ ಬಲೂನುಗಳ ಹೊರಗಿನ ಗಾಳಿಯ ಒತ್ತಡ ಇವೆರಡನ್ನು ಪರಸ್ಪರ ಹತ್ತಿರಕ್ಕೆ ತಳ್ಳಬಲ್ಲದು.

ಚಟುವಟಿಕೆ 8.4 ರಲ್ಲಿ ಕಾಗದದ ಪಟ್ಟಿಯ ಮೇಲೆ ಗಾಳಿಯನ್ನು ಊದಿದಾಗ ಅದು ಮೇಲೇರಿದ್ದನ್ನು ನೋಡಿದಿರಿ. ಊದುವುದರಿಂದ ಕಾಗದದ ಪಟ್ಟಿಯ ಮೇಲಿನ ಗಾಳಿಯ ಒತ್ತಡ ಕಡಿಮೆಯಾದರೆ ಮಾತ್ರ ಈ ರೀತಿ ಆಗಬಲ್ಲದು.

ಮಾರುತದ ಹೆಚ್ಚಾದ ವೇಗವು ಸಹಜವಾಗಿ ಗಾಳಿಯ ಕಡಿಮೆ ಒತ್ತಡವನ್ನು ಒಳಗೊಂಡಿರುತ್ತದೆ. ಎಂಬುದನ್ನು ನಾವು ನೋಡಿದೆವು.

ಕಟ್ಟಡಗಳ ಛಾವಣಿಯ ಮೇಲೆ ಅತಿವೇಗದ ಮಾರುತಗಳು ಬೀಸಿದಾಗ ಏನಾಗಬಹುದು ಎಂದು ನೀವು ಊಹಿಸಬಲ್ಲಿರ? ಛಾವಣಿಗಳು ದುರ್ಬಲವಾಗಿದ್ದರೆ ಅವು ಕಿತ್ತು ಹಾರಿ ಹೋಗುತ್ತವೆ. ಇಂತಹ ಅನುಭವಗಳು ನಿಮಗೆ ಆಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮಾರುತಗಳು ಹೇಗೆ ಉಂಟಾಗುತ್ತವೆ? ಅವು ಹೇಗೆ ಮಳೆಯನ್ನು ತರುತ್ತವೆ? ಕೆಲವು ವೇಳೆ ಅವು ಹೇಗೆ ವಿನಾಶಕಾರಿಯಾಗಬಲ್ಲವು? ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.

ನೀವು ಈಗಾಗಲೇ ತಿಳಿದಿರುವಂತೆ ಚಲಿಸುವ ಗಾಳಿಯನ್ನು ಮಾರುತ ಎನ್ನುವರು. ಗಾಳಿಯು ತನ್ನ ಹೆಚ್ಚು ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡದ ಪ್ರದೇಶಕ್ಕೆ ಚಲಿಸುತ್ತದೆ. ಒತ್ತಡದಲ್ಲಿ ವ್ಯತ್ಯಾಸ ಹೆಚ್ಚಾದಷ್ಟೂ ಗಾಳಿಯು ಮತ್ತಷ್ಟು ವೇಗವಾಗಿ ಚಲಿಸುತ್ತದೆ. ಹಾಗಾದರೆ ಪ್ರಕೃತಿಯಲ್ಲಿ ಒತ್ತಡದ ವ್ಯತ್ಯಾಸಗಳು ಹೇಗೆ ಉಂಟಾಗುತ್ತವೆ? ಇದರಲ್ಲಿ ತಾಪದಲ್ಲಿನ ವ್ಯತ್ಯಾಸದ ಪಾತ್ರವಿದೆಯೇ? ಕೆಳಗಿನ ಚಟುವಟಿಕೆಗಳು ಇದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ.

8.3 ಉಷ್ಣದಿಂದ ಗಾಳಿಯ ವಿಕಸನ

ಚಟುವಟಿಕೆ 8.5
ಒಂದು ಗಟ್ಟಿ ಗಾಜಿನ ಪ್ರನಾಳವನ್ನು ತೆಗೆದುಕೊಳ್ಳಿ. ಅದರ ಬಾಯಿಗೆ ಒಂದು ಬಲೂನನ್ನು ಸಿಕ್ಕಿಸಿ ಟೇಪ್ ಸುತ್ತಿ ಬಿಗಿಗೊಳಿಸಿ. ಒಂದು ಬೀಕರಿಗೆ ಸ್ವಲ್ಪ ಬಿಸಿನೀರು ಹಾಕಿ ಬಲೂನ್ ಜೋಡಿಸಿದ ಪ್ರನಾಳವನ್ನು ಅದರಲ್ಲಿ ಅದ್ದಿ. ಬಲೂನಿನ ಆಕಾರದಲ್ಲಿ ಏನಾದರೂ ಬದಲಾವಣೆ ಉಂಟಾಯಿತೇ ಎಂಬುದನ್ನು 2-3 ನಿಮಿಷಗಳವರೆಗೆ ಗಮನಿಸಿ. ಪ್ರನಾಳವನ್ನು ಬಿಸಿನೀರಿನಿಂದ ಹೊರಗೆ ತೆಗೆದು ಕೊಠಡಿಯ ತಾಪಕ್ಕೆ ಬರುವವರೆಗೆ ತಣಿಯಲು ಬಿಡಿ. ಇನ್ನೊಂದು ಬೀಕರಿನಲ್ಲಿ ಮಂಜಿನಂತೆ ತಣ್ಣಗೆ ಕೊರೆವ ನೀರನ್ನು ತೆಗೆದುಕೊಂಡು ಬಲೂನ್ ಜೋಡಿಸಿದ ಪ್ರನಾಳವನ್ನು 2-3 ನಿಮಿಷಗಳವರೆಗೆ ಅದರಲ್ಲಿ ಅದ್ದಿ ಬಲೂನಿನ ಆಕಾರದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ.

ಆಲೋಚಿಸಿ, ಉತ್ತರಿಸಲು ಪ್ರಯತ್ನಿಸಿ.
ಪ್ರನಾಳವನ್ನು ಬಿಸಿನೀರಿನಲ್ಲಿ ಇಟ್ಟಾಗ ಬಲೂನು ಹಿಗ್ಗಲು ಕಾರಣವೇನು?
ಪ್ರನಾಳವನ್ನು ತಣ್ಣನೆಯ ನೀರಿನಲ್ಲಿ ಇಟ್ಟಾಗ ಇದೇ ಬಲೂನು ಕುಗ್ಗಿತು ಏಕೆ?

ಮೊದಲಿನ ವೀಕ್ಷಣೆಯಲ್ಲಿ ಉಷ್ಣದಿಂದ ಗಾಳಿಯು ವಿಕಸನಗೊಳ್ಳುವುದು ಎಂದು ನಾವು ಊಹಿಸಬಹುದೆ? ಪ್ರನಾಳದ ಒಳಗಿನ ಗಾಳಿಯು ತಣಿದಾಗ ಏನಾಗುವುದೆಂದು ಈಗ ನೀವು ಹೇಳುವಿರ?

ಮುಂದಿನ ಚಟುವಟಿಕೆ ಬಹಳ ಆಸಕ್ತಿದಾಯಕವಾಗಿದೆ. ಇದು ಬಿಸಿಯಾದ ಗಾಳಿಯ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳುವಂತೆ ಮಾಡುತ್ತದೆ.

ಚಟುವಟಿಕೆ 8.6
ಒಂದೇ ಗಾತ್ರದ ಎರಡು ಕಾಗದದ ಚೀಲಗಳು ಅಥವಾ ಕಾಗದದ ಖಾಲಿ ಲೋಟಗಳನ್ನು ತೆಗೆದುಕೊಳ್ಳಿ.

ಎಚ್ಚರಿಕೆ
ಉರಿಯುವ ಮೇಣದ ಬತ್ತಿಯನ್ನು ಎಚ್ಚರದಿಂದ ಬಳಸಿ.

ಎರಡೂ ಚೀಲಗಳನ್ನು ತಲೆಕೆಳಗಾಗಿಸಿ ಒಂದು ಲೋಹದ ಅಥವಾ ಮರದ ಕಡ್ಡಿಯ ಎರಡೂ ತುದಿಗಳಿಗೆ ಕಟ್ಟಿ ತೂಗುಬಿಡಿ. ಕಡ್ಡಿಯ ಮಧ್ಯಕ್ಕೆ ಒಂದು ದಾರದ ತುಂಡನ್ನು ಕಟ್ಟಿ ಕಡ್ಡಿಯನ್ನು ತಕ್ಕಡಿಯ ರೀತಿಯಲ್ಲಿ (ಚಿತ್ರ 8.7) ಸಮತೋಲನವಾಗಿರುವಂತೆ ಹಿಡಿದುಕೊಳ್ಳಿ. ಉರಿಯುವ ಮೇಣದ ಬತ್ತಿಯನ್ನು ಒಂದು ಚೀಲದ ಕೆಳಗೆ ಚಿತ್ರದಲ್ಲಿ ತೋರಿಸಿದಂತೆ ಇಟ್ಟು ಏನಾಗುವುದೆಂದು ಗಮನಿಸಿ.

ಚೀಲಗಳ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಲು ಕಾರಣವೇನು? ಬಿಸಿಯಾದ ಗಾಳಿಯು ಮೇಲೇರುವುದು ಎಂಬುದನ್ನು ಈ ಚಟುವಟಿಕೆಯು ಸೂಚಿಸುವುದೆ? ಬಿಸಿಯಾದ ಗಾಳಿಯು ಮೇಲೇರಿದಂತೆ ಚೀಲವನ್ನು ಮೇಣದ ಬತ್ತಿಯಿಂದ ಮೇಲೆ ತಳ್ಳುತ್ತದೆ. ಚೀಲಗಳ ಸಮತೋಲನದ ವ್ಯತ್ಯಾಸದಿಂದ ಬಿಸಿಯಾದ ಗಾಳಿಯು ತಣ್ಣನೆಯ ಗಾಳಿಗಿಂತ ಹಗುರವೆಂದು ತಿಳಿದುಬರುವುದೆ?

ಹೊಗೆಯು ಯಾವಾಗಲೂ ಏಕೆ ಮೇಲೇರುತ್ತದೆ ಎಂದು ನೀವು ವಿವರಿಸುವಿರ?

ಬಿಸಿಯಾದ ಗಾಳಿಯು ವಿಕಸನ ಹೊಂದಿ ಹೆಚ್ಚು ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತದೆ. ಮೊದಲಿನ ಪ್ರಮಾಣದಷ್ಟೇ ಗಾಳಿಯು ವಿಕಸನ ಹೊಂದಿ ಹೆಚ್ಚು ಪ್ರದೇಶವನ್ನು ಆಕ್ರಮಿಸುವುದರಿಂದ ಹಗುರವಾಗುತ್ತದೆ. ಆದ್ದರಿಂದ ಬಿಸಿಯಾದ ಗಾಳಿಯು ತಣ್ಣನೆಯ ಗಾಳಿಗಿಂತ ಹಗುರವಾಗಿರುತ್ತದೆ. ಈ ಕಾರಣದಿಂದಲೇ ಹೊಗೆಯು ಮೇಲೇರುತ್ತದೆ.

ಒಂದು ಪ್ರದೇಶದ ಬಿಸಿಗಾಳಿಯು ಮೇಲೇರುವ ಹಲವು ಸನ್ನಿವೇಶಗಳು ಪ್ರಕೃತಿಯಲ್ಲಿವೆ. ಇಂತಹ ಪ್ರದೇಶದಲ್ಲಿ ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಸುತ್ತಮುತ್ತಲಿನ ಪ್ರದೇಶದ ತಣ್ಣನೆಯ ಗಾಳಿಯು ನುಗ್ಗಿ ಆ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತದೆ. ಇದರಿಂದ ನೀವು ಅಧ್ಯಾಯ 4ರಲ್ಲಿ ತಿಳಿದುಕೊಂಡಂತೆ ಗಾಳಿಯಲ್ಲಿ ಸಂವಹನ ಏರ್ಪಡುತ್ತದೆ.

8.4 ಭೂಮಿಯ ಮೇಲಿನ ಅಸಮ ಉಷ್ಣತೆಯಿಂದ ಮಾರುತ ಪ್ರವಾಹಗಳು ಉಂಟಾಗುತ್ತವೆ.

ಈ ಸಂದರ್ಭಗಳೆಂದರೆ:

(ಎ) ಭೂಮಧ್ಯರೇಖೆ ಮತ್ತು ಧ್ರುವಗಳ ನಡುವಿನ ಅಸಮಾನ ಉಷ್ಣತೆ

ಭೂಮಧ್ಯರೇಖೆಯ ಸಮೀಪದ ಪ್ರದೇಶಗಳು ಸೂರ್ಯನಿಂದ ಹೆಚ್ಚು ಉಷ್ಣವನ್ನು ಪಡೆಯುತ್ತವೆ ಎಂದು ಭೂಗೋಳ ವಿಷಯದಲ್ಲಿ ನೀವು ಕಲಿತಿರಬಹುದು. ಈ ಭಾಗದ ಗಾಳಿಯು ಬಿಸಿಯಾಗಿರುತ್ತದೆ. ಬಿಸಿಯಾದ ಗಾಳಿಯು ಮೇಲೇರುತ್ತದೆ ಮತ್ತು ಭೂಮಧ್ಯ ರೇಖೆಯ ಎರಡೂ ಬದಿಯ 0-30 ಡಿಗ್ರಿ ಅಕ್ಷಾಂಶ ಪಟ್ಟಿಯಿಂದ ತಣ್ಣನೆಯ ಗಾಳಿಯು ಒಳಗೆ ಬರುತ್ತದೆ. ಈ ಮಾರುತಗಳು ಉತ್ತರ ಮತ್ತು ದಕ್ಷಿಣದಿಂದ ಭೂಮಧ್ಯ ರೇಖೆಯ ಕಡೆಗೆ ಬೀಸುತ್ತವೆ. ಧ್ರುವ ಪ್ರದೇಶದಲ್ಲಿ 60 ಡಿಗ್ರಿ ಸಮೀಪದ ಅಕ್ಷಾಂಶಗಳಿಗಿಂತ ಗಾಳಿಯು ತಂಪಾಗಿರುತ್ತದೆ. ಈ ಅಕ್ಷಾಂಶಗಳಲ್ಲಿನ ಬಿಸಿಗಾಳಿಯು ಮೇಲೇರುತ್ತದೆ ಮತ್ತು ಈ ಸ್ಥಳವನ್ನು ಆಕ್ರಮಿಸಲು ಧ್ರುವ ಪ್ರದೇಶಗಳ ತಂಪಾದ ಗಾಳಿಯು ಒಳಗೆ ನುಗ್ಗುತ್ತದೆ. ಈ ರೀತಿ ಚಿತ್ರ 8.8 ರಲ್ಲಿ ತೋರಿಸಿದಂತೆ ಮಾರುತಗಳ ಪರಿಚಲನೆಯು ಧ್ರುವಗಳಿಂದ ಬಿಸಿಯಾದ ಅಕ್ಷಾಂಶಗಳ ಕಡೆಗೆ ರೂಪುಗೊಳ್ಳುತ್ತದೆ.

ಉತ್ತರದಿಂದ ದಕ್ಷಿಣಕ್ಕೆ ಅಥವಾ ದಕ್ಷಿಣದಿಂದ ಉತ್ತರಕ್ಕೆ ಮಾರುತಗಳು ದಕ್ಷಿಣೋತ್ತರವಾಗಿ ಚಲಿಸುತ್ತವೆ. ಅಲ್ಲದೆ ಭೂಮಿಯ ಭ್ರಮಣೆಯಿಂದ ಮಾರುತಗಳ ದಿಕ್ಕು ಬದಲಾಗುತ್ತದೆ.

(ಬಿ) ಭೂಮಿ ಮತ್ತು ನೀರಿನ ಅಸಮ ಉಷ್ಣತೆ

ಅಧ್ಯಾಯ 4ರಲ್ಲಿ ಕಡಲ್ಗಾಳಿ ಮತ್ತು ನೆಲಗಾಳಿಗಳ ಬಗ್ಗೆ ನೀವು ಓದಿರುವಿರಿ.
ಬೇಸಿಗೆಯಲ್ಲಿ ಭೂಮಧ್ಯರೇಖೆಯ ಬಳಿಯ ನೆಲವು ಬಹಳ ಬೇಗನೆ ಬಿಸಿಯಾಗುತ್ತದೆ ಮತ್ತು ಸಾಕಷ್ಟು ಬಾರಿ ನೆಲದ ತಾಪವು ಸಾಗರಗಳ ನೀರಿನ ತಾಪಕ್ಕಿಂತ ಹೆಚ್ಚಾಗಿರುತ್ತದೆ. ಭೂಮಿಯ ಮೇಲಿನ ಗಾಳಿಯು ಬಿಸಿಯಾಗಿ ಮೇಲೇರುತ್ತದೆ. ಇದರಿಂದ ಮಾರುತಗಳು ಸಾಗರಗಳಿಂದ ಭೂಮಿಯ ಕಡೆಗೆ ಹರಿದು ಬರುತ್ತವೆ. ಇವೇ ಮಾನ್ಸೂನ್ ಮಾರುತಗಳು (ಚಿತ್ರ 8.9).

ಮಾನ್ಸೂನ್ ಎಂಬ ಪದ ಅರೇಬಿಕ್‍ನ ಮೌಸಮ್ ಎಂಬ ಪದದಿಂದ ಬಂದಿದೆ ಇದರ ಅರ್ಥ – ಋತು.

ಚಳಿಗಾಲದಲ್ಲಿ ಮಾರುತಗಳು ಬೀಸುವ ದಿಕ್ಕು ವ್ಯತಿರಿಕ್ತವಾಗುತ್ತದೆ. ಇವು ಭೂಮಿಯಿಂದ ಸಾಗರಗಳ ಕಡೆಗೆ ಚಲಿಸುತ್ತವೆ (ಚಿತ್ರ 8.10).

ಸಾಗರಗಳಿಂದ ಬೀಸುವ ಮಾರುತಗಳು ನೀರನ್ನು ಹೊತ್ತೊಯ್ದು ಮಳೆಯನ್ನು ಸುರಿಸುತ್ತವೆ. ಇದು ಜಲಚಕ್ರದ ಒಂದು ಭಾಗ.

ಮಾನ್ಸೂನ್ ಮಾರುತಗಳು ನೀರನ್ನು ಹೊತ್ತೊಯ್ದು ಮಳೆ ಸುರಿಸುತ್ತವೆ.

ಮೋಡಗಳು ಮಳೆ ಸುರಿಸಿ ನಮಗೆ ಆನಂದ ಉಂಟುಮಾಡುತ್ತವೆ. ನಮ್ಮ ದೇಶದ ರೈತರು ತಮ್ಮ ಬೆಳೆಗಳಿಗಾಗಿ ಮಳೆಯನ್ನೇ ಪ್ರಮುಖವಾಗಿ ಅವಲಂಬಿಸಿರುವರು. ಮೋಡಗಳು ಮತ್ತು ಮಳೆಯನ್ನು ಕುರಿತು ಅನೇಕ ಜನಪದ ಗೀತೆಗಳಿವೆ. ಇವುಗಳನ್ನು ರೈತರು ತಮ್ಮ ಹೊಲಗದ್ದೆಗಳಲ್ಲಿ ಹಾಡಿ ಸಂತೋಷಪಡುವರು. ಅಂತಹ ಗೀತೆಗಳು ನಿಮಗೆ ತಿಳಿದಿರಬಹುದು. ನಿಮಗಾಗಿ ಇಲ್ಲೊಂದು ಗೀತೆ.

ಮಾಯದಂಥ ಮಳೆ ಬಂತಣ್ಣ
ಮದಗಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ
ಮದಗಾದ ಕೆರೆಗೆ ||ಮಾಯ||

ಅಂಗೈಯಷ್ಟು ಮೋಡಾನಾಗಿ
ಭೂಮಿ ತೂಕದ ಗಾಳಿಬೀಸಿ
ಗುಡುಗು ಗೂಡಾಗಿ ಚೆಲ್ಲಿದಳು
ಗಂಗಮ್ಮ ತಾಯಿ…….||ಮಾಯ||

(ಈ ಜಾನಪದ ಗೀತೆಯನ್ನು ನಿಮ್ಮ ಶಿಕ್ಷಕರು/ಪೋಷಕರ ಸಹಾಯ ಪಡೆದು ಪೂರ್ಣಗೊಳಿಸಿ ಮತ್ತು ಸಹಪಾಠಿಗಳೊಂದಿಗೆ ಹಾಡಿ ಆನಂದಿಸಿ.)

ಆದಾಗ್ಯೂ ಈ ಮಾರುತಗಳು ಯಾವಾಗಲೂ ಒಳ್ಳೆಯ ಪರಿಣಾಮವನ್ನೇ ಉಂಟುಮಾಡುವುದಿಲ್ಲ. ಆಗಿಂದಾಗ್ಗೆ ಸಮಸ್ಯೆಗಳನ್ನೂ ಸೃಷ್ಟಿಸುತ್ತವೆ. ಅಂತಹ ಕೆಲವು ಸಮಸ್ಯೆಗಳನ್ನು ಪಟ್ಟಿ ಮಾಡುವಿರ?
ನಿಮ್ಮ ಶಿಕ್ಷಕರು ಮತ್ತು ಪೋಷಕರೊಡನೆ ಈ ಸಮಸ್ಯೆಗಳಿಗೆ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಚರ್ಚಿಸಿ.

ಸ್ವತಃ ಪ್ರಕೃತಿಯೇ ಕೆಲವು ಸನ್ನೀವೇಶಗಳಲ್ಲಿ ವಿಕೋಪಗಳನ್ನು ಸೃಷ್ಟಿಸಿ ಮನುಷ್ಯ, ಪ್ರಾಣಿ, ಪಕ್ಷಿ ಹಾಗು ಸಸ್ಯ ಸಂಕುಲಗಳ ಜೀವಕ್ಕೆ ಆತಂಕವನ್ನು ತಂದೊಡ್ಡುತ್ತದೆ.
ಇಂತಹ ಎರಡು ಸನ್ನಿವೇಶಗಳಾದ ಬಿರುಗಾಳಿ ಮತ್ತು ಚಂಡಮಾರುತಗಳ ಬಗ್ಗೆ ಅಭ್ಯಾಸ ಮಾಡೋಣ.

8.5 ಬಿರುಗಾಳಿ ಮತ್ತು ಚಂಡಮಾರುತಗಳು

ಉಷ್ಣ ಹಾಗೂ ಆದ್ರ್ರ ಉಷ್ಣವಲಯ ಪ್ರದೇಶವಾದ ಭಾರತದಲ್ಲಿ ಆಗಿಂದಾಗ್ಯೆ ಬಿರುಗಾಳಿಗಳು ಉಂಟಾಗುತ್ತವೆ. ತಾಪದ ಹೆಚ್ಚಳದಿಂದ ಬಲವಾದ ಮೇಲ್ಮಖ ಮಾರುತಗಳು ಸೃಷ್ಟಿಯಾಗುತ್ತವೆ. ಈ ಮಾರುತಗಳು ನೀರಿನ ಹನಿಗಳನ್ನು ಮೇಲಕ್ಕೆ ಕೊಂಡೊಯ್ಯುತ್ತವೆ. ಅವು ಅಲ್ಲಿ ಘನೀಕರಣ ಹೊಂದಿ, ಪುನಃ ಕೆಳಗೆ ಬೀಳುತ್ತವೆ. ಮೇಲೇರುವ ಗಾಳಿಯ ಜೊತೆಗೆ ಕ್ಷಿಪ್ರವಾಗಿ ಕೆಳಗೆ ಬೀಳುವ ನೀರಿನ ಹನಿಗಳ ಚಲನೆಯಿಂದ ಮಿಂಚು ಮತ್ತು ಗುಡುಗು ಉಂಟಾಗುತ್ತದೆ. ಇಂತಹ ಸಂದರ್ಭವನ್ನು ಗುಡುಗು ಸಹಿತ ಬಿರುಗಾಳಿ (thunderstorm) ಎನ್ನುವರು. ಉನ್ನತ ತರಗತಿಗಳಲ್ಲಿ ಮಿಂಚಿನ ಬಗ್ಗೆ ನೀವು ಅಭ್ಯಾಸ ಮಾಡುವಿರಿ.

ಬಿರುಗಾಳಿಯೊಂದಿಗೆ ಮಿಂಚು ಇರುವಾಗ ನಾವು ಕೆಳಕಂಡ ಮುನ್ನೆಚ್ಚರಿಕೆಗಳನ್ನು ವಹಿಸಬೇಕು.
• ಒಂಟಿಯಾದ ಮರದ ಕೆಳಗೆ ಆಶ್ರಯ ಪಡೆಯಬಾರದು. ನೀವು ಕಾಡಿನಲ್ಲಿರುವಾಗ ಸಣ್ಣ ಮರದ ಕೆಳಗೆ ಆಶ್ರಯ ಪಡೆಯಿರಿ. ಆದರೆ ನೆಲದ ಮೇಲೆ ಮಲಗಬಾರದು.
• ಲೋಹದ ತುದಿಯಿರುವ ಛತ್ರಿಯ ಕೆಳಗೆ ಆಶ್ರಯ ಪಡೆಯಬಾರದು.
• ಕಿಟಕಿಯ ಹತ್ತಿರ ಕುಳಿತುಕೊಳ್ಳಬಾರದು. ತೆರೆದ ಯಂತ್ರಾಗಾರ, ಲೋಹದ ಶೆಡ್‍ಗಳು ಆಶ್ರಯ ಪಡೆಯಲು ಸುರಕ್ಷಿತ ಸ್ಥಳಗಳಲ್ಲ.
• ಆಶ್ರಯ ಪಡೆಯಲು ಕಾರು ಅಥವಾ ಬಸ್ ಸುರಕ್ಷಿತ.
• ನೀವು ಈಜುತ್ತಿದ್ದರೆ ನೀರಿನಿಂದ ಹೊರಬಂದು ಕಟ್ಟಡದಲ್ಲಿ ಆಶ್ರಯ ಪಡೆಯಿರಿ.

ಬಿರುಗಾಳಿ ಚಂಡಮಾರುತವಾಗುವುದು ಹೇಗೆ?

ನೀರು ತನ್ನ ದ್ರವ ಸ್ಥಿತಿಯಿಂದ ಆವಿಯ ಸ್ಥಿತಿಗೆ ಬದಲಾಗಲು ಉಷ್ಣದ ಅಗತ್ಯವಿದೆ ಎಂದು ನೀವು ತಿಳಿದಿರುವಿರಿ. ಆವಿಯು ತಣಿದು ದ್ರವರೂಪಕ್ಕೆ ಬರುವಾಗ ನೀರು ಉಷ್ಣವನ್ನು ಬಿಟ್ಟುಕೊಡುವುದೆ? ಇದನ್ನು ಸಮರ್ಥಿಸುವ ಯಾವುದಾದರೂ ಅನುಭವವಿದ್ದರೆ ಸ್ಮರಿಸುವಿರ?

ಚಂಡ ಮಾರುತದ ರಚನೆ
ಚಂಡಮಾರುತದ ಕೇಂದ್ರಭಾಗ ಒಂದು ಪ್ರಶಾಂತ ಪ್ರದೇಶ. ಇದನ್ನು ಚಂಡಮಾರುತದ ಕಣ್ಣು (eye) ಎನ್ನುವರು. ವಾತಾವರಣದ 10 ರಿಂದ 15 cm ಎತ್ತರದಲ್ಲಿ ತೀವ್ರ ಬಿರುಸಾಗಿ ಸುತ್ತುವ ಗಾಳಿಯ ಸಮೂಹವೇ ಬೃಹತ್ ಚಂಡಮಾರುತ. ಇದರ ಕಣ್ಣಿನ ವ್ಯಾಸ 10 ರಿಂದ 30 cm ವರೆಗೆ ಇರುತ್ತದೆ (ಚಿತ್ರ 8.11). ಇದು ಮೋಡಗಳಿಲ್ಲದ ಹಗುರವಾದ ಮಾರುತಗಳನ್ನು ಒಳಗೊಂಡ ಒಂದು ಪ್ರದೇಶ. ಇಂತಹ ಶುಭ್ರ, ಪ್ರಶಾಂತವಾದ ಕಣ್ಣಿನ ಸುತ್ತಲೂ (ಚಿತ್ರ 8.12) ಸುಮಾರು 150 cm ಗಾತ್ರದ ಮೋಡದ ಪ್ರದೇಶವಿರುತ್ತದೆ. ಈ ಪ್ರದೇಶದಲ್ಲಿ ತೀವ್ರವೇಗದ (150-250 cm/h) ಮಾರುತಗಳು ಮತ್ತು ಸಾಂದ್ರ ಮೋಡಗಳು ಭಾರಿ ಮಳೆಯನ್ನು ಸುರಿಸುತ್ತವೆ. ಈ ಪ್ರದೇಶದಿಂದ ಹೊರಗೆ ಮಾರುತಗಳ ವೇಗ ಕ್ರಮೇಣ ಕಡಿಮೆಯಾಗುತ್ತದೆ. ಚಂಡಮಾರುತಗಳು ರೂಪುಗೊಳ್ಳುವುದು ಒಂದು ಸಂಕೀರ್ಣ ಪ್ರಕ್ರಿಯೆ. ಇದರ ಒಂದು ಮಾದರಿಯನ್ನು ಚಿತ್ರ 8.11 ರಲ್ಲಿ ತೋರಿಸಿದೆ.

ಮೋಡಗಳು ರೂಪುಗೊಳ್ಳುವ ಮೊದಲು ನೀರು ವಾತಾವರಣದಿಂದ ಉಷ್ಣವನ್ನು ಮೇಲೆ ಕೊಂಡೊಯ್ದು ಆವಿಯಾಗಿ ಬದಲಾಗುತ್ತದೆ. ಈ ನೀರಾವಿಯು ನೀರಿನ ಹನಿಗಳಾಗಿ ದ್ರವರೂಪಕ್ಕೆ ಮರಳಿದಾಗ ಅದರ ಉಷ್ಣವು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ವಾತಾವರಣಕ್ಕೆ ಬಿಡುಗಡೆಯಾದ ಉಷ್ಣವು ಸುತ್ತಲಿನ ಗಾಳಿಯನ್ನು ಬಿಸಿಗೊಳಿಸುತ್ತದೆ. ಗಾಳಿಯು ಮೇಲೇರಲು ಪ್ರಯತ್ನಿಸುವುದರಿಂದ ಅದರ ಒತ್ತಡದಲ್ಲಿ ಇಳಿಕೆಯಾಗುತ್ತದೆ. ಆಗ ಬಿರುಗಾಳಿಯ ಕೇಂದ್ರದೆಡೆಗೆ ಬಹಳಷ್ಟು ಗಾಳಿಯು ನುಗ್ಗುತ್ತದೆ. ಈ ಚಕ್ರ ಪುನರಾವರ್ತನೆಯಾಗುತ್ತದೆ. ಈ ಸರಪಳಿ ಕ್ರಿಯೆಗಳು ಅತಿ ಕಡಿಮೆ ಒತ್ತಡದ ವ್ಯವಸ್ಥೆಯ ಸುತ್ತಲೂ ಅತಿವೇಗದ ಮಾರುತಗಳು ಸುತ್ತುವಂತೆ ಮಾಡಿ ಕೊನೆಗೊಳ್ಳುತ್ತವೆ. ಇಂತಹ ಹವಾಮಾನ ಪರಿಸ್ಥಿತಿಯನ್ನು ಚಂಡಮಾರುತ (cyclone) ಎನ್ನುವರು. ಮಾರುತಗಳ ವೇಗ, ಮಾರುತಗಳ ದಿಕ್ಕು, ತಾಪಮಾನ ಮತ್ತು ಆದ್ರ್ರತೆಯಂತಹ ಅಂಶಗಳು ಚಂಡಮಾರುತಗಳು ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

8.6 ಚಂಡಮಾರುತಗಳು ಉಂಟುಮಾಡುವ ವಿನಾಶ

ಚಂಡಮಾರುತ ಅತ್ಯಂತ ವಿನಾಶಕಾರಿಯಾಗಬಲ್ಲದು. ಬಿರುಗಾಳಿಯು ನೂರಾರು ಕಿಲೋಮೀಟರ್‍ಗಳ ದೂರದಲ್ಲಿರುವಾಗಲೇ ಪ್ರಬಲ ಮಾರುತಗಳು ಸಮುದ್ರದ ನೀರನ್ನು ತೀರದ ಕಡೆಗೆ ದೂಡಬಲ್ಲವು. ಇವೇ ಚಂಡಮಾರುತ ಸಮೀಪಿಸುತ್ತಿರುವುದರ ಆರಂಭಿಕ ಮುನ್ಸೂಚನೆಗಳು. ಈ ಮಾರುತಗಳಿಂದ ಉಂಟಾದ ನೀರಿನ ಅಲೆಗಳು ಅತ್ಯಂತ ಶಕ್ತಿಶಾಲಿಯಾಗಿದ್ದು, ಇವುಗಳನ್ನು ಯಾರೂ ದಾಟಲಾರರು.

ಇದರ ಕಣ್ಣಿನಲ್ಲಿನ ಅಲ್ಪ ಒತ್ತಡ ನೀರಿನ ಮೇಲ್ಮೈಯನ್ನು ಮೇಲೇರುವಂತೆ ಮಾಡುತ್ತದೆ. ಈ ನೀರಿನ ಉಬ್ಬರ 3-12 ಮೀಟರ್ ಎತ್ತರವಿರಬಹುದು (ಚಿತ್ರ 8.13). ಒಂದು ನೀರಿನ ಗೋಡೆ ತೀರದ ಕಡೆಗೆ ಸಾಗಿಬರುವಂತೆ ಇದು ಗೋಚರಿಸುತ್ತದೆ. ಇದರ ಪರಿಣಾಮವಾಗಿ ಸಮುದ್ರದ ನೀರು ತಗ್ಗಾದ ತೀರ ಪ್ರದೇಶಗಳಿಗೆ ನುಗ್ಗಿ ಜನಜೀವನ ಮತ್ತು ಆಸ್ತಿಪಾಸ್ತಿಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ ಹಾಗೂ ಮಣ್ಣಿನ ಫಲವತ್ತತೆಯನ್ನೂ ಕಡಿಮೆ ಮಾಡುತ್ತದೆ.

ನಿರಂತರವಾಗಿ ಸುರಿವ ಭಾರಿಮಳೆಯು ಪ್ರವಾಹವನ್ನು ಉಂಟುಮಾಡಿ, ಪರಿಸ್ಥಿತಿಯನ್ನು ಮತ್ತಷ್ಟು ಹಾಳುಗೆಡವಬಲ್ಲದು.

ತೀವ್ರ ವೇಗದ ಮಾರುತಗಳು ಚಂಡಮಾರುತದೊಂದಿಗೆ ಸೇರಿ ಮನೆಗಳು, ದೂರವಾಣಿ ಮತ್ತು ಇತರೆ ಸಂಪರ್ಕ ವ್ಯವಸ್ಥೆಗಳು, ಮರಗಿಡ ಮುಂತಾದವುಗಳಿಗೆ ಹಾನಿ ಉಂಟು ಮಾಡಿ ಜನಜೀವನ, ಆಸ್ತಿ-ಪಾಸ್ತಿಗಳಿಗೆ ತೀವ್ರ ನಷ್ಟವುಂಟಾಗುತ್ತದೆ.

ಚಂಡಮಾರುತವನ್ನು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಅಮೇರಿಕಾ ಖಂಡದಲ್ಲಿ ಇದನ್ನು ಹರ್ರಿಕೇನ್ ಎಂದು ಕರೆಯುವರು. ಪಿಲಿಪೈನ್ಸ್ ಮತ್ತು ಜಪಾನ್‍ಗಳಲ್ಲಿ ಇದನ್ನು ಟೈಫೂನ್ ಎಂದು ಕರೆಯುವರು (ಚಿತ್ರ 8.14).

ಟಾರ್ನಡೊ (ಸುಂಟರಗಾಳಿ)

ನಮ್ಮ ದೇಶದಲ್ಲಿ ಟಾರ್ನಡೊಗಳು ಆಗಿಂದಾಗ್ಗೆ ಸಂಭವಿಸುವುದಿಲ್ಲ. ಟಾರ್ನಡೊಗಳು ಆಲಿಕೆಯಾಕಾರದ, ಭೂಮಿಯಿಂದ ಆಕಾಶದವರೆಗೆ ಹಬ್ಬಿದ ಒಂದು ಕಪ್ಪುಮೋಡ (ಚಿತ್ರ 8.16). ಬಹಳಷ್ಟು ಟಾರ್ನಡೊಗಳು ದುರ್ಬಲವಾಗಿರುತ್ತವೆ. ಉಗ್ರ ಸ್ವರೂಪದ ಟಾರ್ನಡೊಗಳು ಸುಮಾರು 300 cm/h ವೇಗದಲ್ಲಿ ಚಲಿಸಬಲ್ಲವು. ಟಾರ್ನಡೊಗಳು ಚಂಡಮಾರುತದಲ್ಲಿ ಅಂತರ್ಗತವಾಗಿ ಉಂಟಾಗಬಹುದು.

ಭಾರತದ ಇಡೀ ಕರಾವಳಿ ತೀರವು ಚಂಡಮಾರುತಗಳಿಂದ ಬಾಧಿತವಾಗುತ್ತದೆ. ಅದರಲ್ಲಿ ಪೂರ್ವ ಕರಾವಳಿ ಇನ್ನೂ ಹೆಚ್ಚು. ಭಾರತದ ಪಶ್ಚಿಮ ಕರಾವಳಿಯು ಚಂಡಮಾರುತಗಳ ತೀವ್ರತೆ ಮತ್ತು ಆವರ್ತತೆಯಿಂದ ಬಾಧಿತವಾಗುವುದು ಕಡಿಮೆ.

ಸುಂಟರ ಗಾಳಿಯ ವ್ಯಾಸವು ಕಡಿಮೆ ಎಂದರೆ ಒಂದು ಮೀಟರ್ ಮತ್ತು ಹೆಚ್ಚೆಂದರೆ ಒಂದು ಕಿಲೋಮೀಟರ್ ಅಥವಾ ಅದಕ್ಕಿಂತ ವಿಶಾಲವಾಗಿಯೂ ಇರಬಹುದು. ಆಲಿಕೆಯಾಕಾರದ ಟಾರ್ನಡೊಗಳು ತಮ್ಮ ತಳಭಾಗದಿಂದ ಧೂಳು, ಅವಶೇಷಗಳೆಲ್ಲವನ್ನೂ ಹೀರಿಕೊಂಡು (ಕಡಿಮೆ ಒತ್ತಡದಿಂದಾಗಿ) ತನ್ನ ಮೇಲಿನ ತುದಿಯಿಂದ ಹೊರಚೆಲ್ಲುತ್ತವೆ. ಟಾರ್ನಡೊಗಳಿಗೆ ಸಿಲುಕಿ ಬದುಕುಳಿದವರ ಕೆಲವು ವಿಚಾರಗಳು ಇಲ್ಲಿವೆ (ಡಿಸ್ಕವರಿ ಚಾನಲ್‍ನ “ಯಂಗ್ ಡಿಸ್ಕವರಿ” ಸರಣಿಯಿಂದ)

“ಮೋಡ ಸಮೀಪಿಸುತ್ತಿರುವುದನ್ನು ನೋಡಿ ನಾನು ಮನೆಯ ಒಳಗೆ ಆಶ್ರಯ ಪಡೆಯಲು ಯತ್ನಿಸಿದೆ. ಆದರೆ ನಾನು ಬಾಗಿಲ ಬಳಿಗೆ ಬಂದ ತಕ್ಷಣ ಮನೆಯ ಛಾವಣಿ ಆಕಾಶಕ್ಕೆ ಹಾರಿತು. ನನಗೇನೂ ಅಪಾಯ ಸಂಭವಿಸಲಿಲ್ಲ.”

“ಬಿರುಗಾಳಿ ಬಂದು ಹೋದನಂತರ ನಾವು ಗೋಧಿಯ ಹೊಲಗಳಲ್ಲಿ ಕಸ, ಕಡ್ಡಿ, ತ್ಯಾಜ್ಯ ಪದಾರ್ಥಗಳನ್ನು ಸ್ವಚ್ಛಗೊಳಿಸಬೇಕಾಯಿತು. ಮುರಿದ ಹಲಗೆಗಳು, ಮರದ ಕೊಂಬೆಗಳು ಅಲ್ಲದೇ ರೆಕ್ಕೆ, ಪುಕ್ಕ ಹರಿದು ಸತ್ತ ಕೋಳಿಗಳು, ಚರ್ಮ ಸುಲಿದಂತೆ ಕಾಣುವ ಮೊಲಗಳನ್ನು ನಾವು ಎತ್ತಿ ಹೊರಗೆ ಹಾಕಿದೆವು.”

ಭೂಮಿಯ ಒಳಗೆ ಕಿಟಕಿಗಳಿಲ್ಲದ ನೆಲಮಾಳಿಗೆ ಕೋಣೆ ಟಾರ್ನಡೊದಿಂದ ರಕ್ಷಣೆ ಪಡೆಯಲು ಸೂಕ್ತ ಆಶ್ರಯ ಅಥವಾ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ತ್ಯಾಜ್ಯ ಅವಶೇಷಗಳು ತಲುಪಲಾರದ ಸ್ಥಳದಲ್ಲಿ ಮೇಜು ಅಥವಾ ಬೆಂಚಿನ ಕೆಳಗೆ ಆಶ್ರಯ ಪಡೆಯುವುದು ಒಳ್ಳೆಯದು. ಮಂಡಿ ಊರಿ ಕೆಳಗೆ ಬಾಗಿ ತಲೆ ಮತ್ತು ಕುತ್ತಿಗೆಯನ್ನು ತೋಳುಗಳಿಂದ ರಕ್ಷಿಸಿಕೊಳ್ಳಬೇಕು (ಚಿತ್ರ 8.15).

8.7 ಪರಿಣಾಮಕಾರಿ ಸುರಕ್ಷತಾ ಕ್ರಮಗಳು

• ಚಂಡಮಾರುತಗಳ ಬಗ್ಗೆ ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ಸೇವೆ.
• ಸರ್ಕಾರಿ ಸಂಸ್ಥೆಗಳು, ಬಂದರುಗಳು, ಮೀನುಗಾರರು, ಹಡಗುಗಳು ಹಾಗೂ ಜನಸಾಮಾನ್ಯರಿಗೆ ಎಚ್ಚರಿಕೆ ಸಂದೇಶಗಳ ಕ್ಷಿಪ್ರ ಸಂವಹನ.
• ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಸುರಕ್ಷಿತ ಆಶ್ರಯ ತಾಣಗಳ ನಿರ್ಮಾಣ ಮತ್ತು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಆಡಳಿತಾತ್ಮಕ ವ್ಯವಸ್ಥೆ ಮಾಡುವುದು.

ಎಲ್ಲ ಬಿರುಗಾಳಿಗಳೂ ಅಲ್ಪ ಒತ್ತಡದ ವ್ಯವಸ್ಥೆಗಳು ಎಂಬುದನ್ನು ನಾವು ತಿಳಿದಿದ್ದೇವೆ. ಬಿರುಗಾಳಿ ಉಂಟಾಗುವಲ್ಲಿ ಮಾರುತದ ವೇಗವು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಮಾರುತಗಳ ವೇಗವನ್ನು ಅಳತೆ ಮಾಡುವುದು ಮುಖ್ಯ. ಮಾರುತಗಳ ವೇಗವನ್ನು ಅಳೆಯುವ ಸಾಧನವನ್ನು ವಾಯುವೇಗ ಮಾಪಕ (anemometer) ಎನ್ನುವರು.

ಜನಸಾಮಾನ್ಯರ ಕರ್ತವ್ಯಗಳು

• ದೂರದರ್ಶನ, ರೇಡಿಯೊ ಮತ್ತು ವಾರ್ತಾಪತ್ರಿಕೆಗಳ ಮೂಲಕ ಹವಾಮಾನ ಇಲಾಖೆ ನೀಡುವ ಎಚ್ಚರಿಕೆಗಳನ್ನು ಕಡೆಗಣಿಸಬಾರದು. ಮುಖ್ಯವಾಗಿ ನಾವು ಮನೆಯ ಅಗತ್ಯ ವಸ್ತುಗಳು, ಸಾಕುಪ್ರಾಣಿಗಳು, ವಾಹನಗಳು ಮುಂತಾದವುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರವಾಹಗಳಿಂದ ರಸ್ತೆಗಳು ಹಾಳಾಗಿರುವ ಸಾಧ್ಯತೆ ಇರುವುದರಿಂದ ನೀರು ನಿಂತ ರಸ್ತೆಗಳಲ್ಲಿ ವಾಹನ ನಡೆಸಬಾರದು.
ಪೋಲೀಸ್, ಅಗ್ನಿಶಾಮಕದಳ ಮತ್ತು ಆರೋಗ್ಯ ಕೇಂದ್ರಗಳಂತಹ ಎಲ್ಲಾ ತುರ್ತುಸೇವೆಗಳ ದೂರವಾಣಿ ಸಂಖ್ಯೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

ನೀವು ಚಂಡಮಾರುತ ಪೀಡಿತ ಪ್ರದೇಶದಲ್ಲಿ ವಾಸವಿದ್ದರೆ ಇನ್ನೂ ಕೆಲವು ಮುನ್ನೆಚ್ಚರಿಕೆಗಳು
• ಕಲುಷಿತವಾದ ನೀರನ್ನು ಕುಡಿಯಬೇಡಿ, ತುರ್ತು ಸಂದರ್ಭಗಳಿಗಾಗಿ ಯಾವಾಗಲೂ ಕುಡಿಯುವ ನೀರನ್ನು ಸಂಗ್ರಹಿಸಿಡಿ.
• ಒದ್ದೆಯಾದ ವಿದ್ಯುತ್ ಸ್ವಿಚ್‍ಗಳು ಮತ್ತು ಕೆಳಗೆ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬೇಡಿ.
• ಚಂಡಮಾರುತವಿದ್ದಾಗ ವಿನೋದಕ್ಕಾಗಿ ಮನೆಯಿಂದ ಹೊರಗೆ ಹೋಗದಿರಿ.
• ರಕ್ಷಣಾದಳದ ಮೇಲೆ ಅನುಚಿತ ಬೇಡಿಕೆಗಳಿಂದ ಒತ್ತಡ ಹೇರಬೇಡಿ.
• ನಿಮ್ಮ ಸ್ನೇಹಿತರಿಗೆ ಮತ್ತು ನೆರೆಹೊರೆಯವರಿಗೆ ಸಹಾಯಮಾಡಿ.

8.8 ಆಧುನಿಕ ತಂತ್ರಜ್ಞಾನದ ಸಹಾಯ

ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚು ಸುರಕ್ಷಿತವಾಗಿದ್ದೇವೆ. ಕಳೆದ ಶತಮಾನದ ಆರಂಭದಲ್ಲಿ ಕರಾವಳಿ ನಿವಾಸಿಗಳಿಗೆ ಸಂಭವಿಸಬಹುದಾದ ಚಂಡಮಾರುತವನ್ನು ಎದುರಿಸುವ ಸಿದ್ಧತೆಗಾಗಿ ಅಥವಾ ಮನೆ ಖಾಲಿ ಮಾಡಲು ಒಂದು ದಿನಕ್ಕಿಂತ ಕಡಿಮೆ ಅವಧಿ ದೊರೆಯುತ್ತಿತ್ತು. ಆದರೆ ಇಂದಿನ ಪ್ರಪಂಚ ಬಹಳಷ್ಟು ಭಿನ್ನವಾಗಿದೆ. ಚಂಡಮಾರುತದ ಕಣ್ಗಾವಲು (cyclone alert) ಅಥವಾ ಚಂಡಮಾರುತದ ಎಚ್ಚರಿಕೆ ಕುರಿತು 48 ಗಂಟೆಗಳ ಮೊದಲೇ ತಿಳಿಸಲಾಗುತ್ತದೆ. ಉಪಗ್ರಹಗಳು ಮತ್ತು ರಡಾರ್‍ಗಳಿಗೆ ಧನ್ಯವಾದಗಳು. 24 ಗಂಟೆಗಳ ಮೊದಲೇ ಚಂಡಮಾರುತಗಳ ಬಗ್ಗೆ ಇವುಗಳಿಂದ ಮುನ್ಸೂಚನೆ ನೀಡಲಾಗುತ್ತದೆ. ಚಂಡಮಾರುತವು ಕರಾವಳಿ ತೀರವನ್ನು ಸಮೀಪಿಸಿದಂತೆ ಪ್ರತಿ ಅರ್ಧಗಂಟೆ ಅಥವಾ ಗಂಟೆಗೊಮ್ಮೆ ಸಂದೇಶವನ್ನು ಬಿತ್ತರಿಸಲಾಗುತ್ತದೆ. ಚಂಡಮಾರುತಕ್ಕೆ ಸಂಬಂಧಿಸಿದ ವಿಕೋಪಗಳ ಉಸ್ತುವಾರಿಗಾಗಿ ಅನೇಕ ರಾಷ್ಟೀಯ ಮತ್ತು ಅಂತರರಾಷ್ಟೀಯ ಸಂಸ್ಥೆಗಳು ಸಹಕರಿಸುತ್ತವೆ.

ಪ್ರಮುಖ ಪದಗಳು

ವಾಯುವೇಗ ಮಾಪಕ
ಕನಿಷ್ಠ ಒತ್ತಡ
ಟಾರ್ನಡೊ
ಚಂಡಮಾರುತ
ಮಾನ್ಸೂನ್ ಮಾರುತಗಳು
ಟೈಫೂನ್
ಹರ್ರಿಕೇನ್
ಒತ್ತಡ
ಮಾರುತಗಳ ಪರಿಚಲನಾ ವಿನ್ಯಾಸ
ಮಿಂಚು
ಬಿರುಗಾಳಿ

ನೀವು ಕಲಿತಿರುವುದು

• ನಮ್ಮ ಸುತ್ತಲಿನ ಗಾಳಿಯು ಒತ್ತಡವನ್ನು ಉಂಟುಮಾಡುತ್ತದೆ.
• ಗಾಳಿಯು ಉಷ್ಣತೆಯಿಂದ ಹಿಗ್ಗುತ್ತದೆ, ತಣಿದಾಗ ಕುಗ್ಗುತ್ತದೆ.
• ಬಿಸಿಯಾದ ಗಾಳಿಯು ಮೇಲೇರುತ್ತದೆ ಇದಕ್ಕೆ ಹೋಲಿಸಿದಾಗ ತಂಪಾದ ಗಾಳಿಯು ಭೂಮಿಯ ಮೇಲ್ಮೈ ಕಡೆಗೆ ಕುಸಿಯಲು ಯತ್ನಿಸುತ್ತದೆ.
• ಬಿಸಿಯಾದ ಗಾಳಿಯು ಮೇಲೇರಿದಾಗ ಅಲ್ಲಿನ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಮತ್ತು ತಂಪಾದ ಗಾಳಿಯು ಆ ಸ್ಥಳವನ್ನು ಪ್ರವೇಶಿಸುತ್ತದೆ.
• ಬೀಸುವ ಗಾಳಿಯೇ ಮಾರುತ.
• ಭೂಮಿಯ ಅಸಮ ಉಷ್ಣತೆಯೇ ಮಾರುತಗಳ ಚಲನೆಗೆ ಮೂಲ ಕಾರಣ
• ಮಾರುತಗಳು ಕೊಂಡೊಯ್ಯುವ ನೀರಾವಿಯು ಮಳೆಯನ್ನು ತರುತ್ತದೆ.
• ಅತಿವೇಗದ ಮಾರುತಗಳು ಮತ್ತು ಗಾಳಿಯ ಒತ್ತಡದಲ್ಲಿನ ವ್ಯತ್ಯಾಸವು ಚಂಡಮಾರುತಗಳನ್ನು ಉಂಟುಮಾಡಬಲ್ಲವು.
• ಉಪಗ್ರಹಗಳು ಮತ್ತು ರಡಾರ್‍ಗಳಂತಹ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಚಂಡಮಾರುತಗಳ ಉಸ್ತುವಾರಿ ಸುಲಭವೆನಿಸಿದೆ.
• ಸ್ವ-ಸಹಾಯವೇ ಶ್ರೇಷ್ಠ ಸಹಾಯ. ಆದ್ದರಿಂದ ಸಮೀಪಿಸುವ ಚಂಡಮಾರುತದ ವಿರುದ್ಧ ರಕ್ಷಣೆಗಾಗಿ ಸನ್ನದ್ಧರಾಗಿರಲು ಮುಂದಾಲೋಚಿಸಿ, ಯೋಜನೆ ರೂಪಿಸುವುದು ಉತ್ತಮ.
• ಕೆಳಗಿನ ನಕ್ಷಾ ನಿರೂಪಣೆಯು ಮೋಡಗಳ ರಚನೆ, ಮಳೆ ಸುರಿಯುವಿಕೆ, ಹಾಗೂ ಬಿರುಗಾಳಿ ಮತ್ತು ಚಂಡಮಾರುತಗಳ ಸೃಷ್ಟಿಗೆ ಕಾರಣವಾದ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ವಿಸ್ತರಿತ ಕಲಿಕೆ – ಚಟುವಟಿಕೆಗಳು ಮತ್ತು ಯೋಜನೆಗಳು

1. ಚಟುವಟಿಕೆ 8.5 ನ್ನು ಸ್ವಲ್ಪ ವಿಭಿನ್ನವಾಗಿ ಮನೆಯಲ್ಲಿ ನೀವು ಮಾಡಬಹುದು. ಒಂದೇ ಗಾತ್ರದ ಎರಡು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿಕೊಳ್ಳಿ. ಎರಡರ ಬಾಯಿಗೂ ಒಂದೊಂದು ಬಲೂನು ಕಟ್ಟಿ ಒಂದನ್ನು ಬಿಸಿಲಿನಲ್ಲಿ ಮತ್ತೊಂದನ್ನು ನೆರಳಿನಲ್ಲಿ ಇಡಿ. ನಿಮ್ಮ ವೀಕ್ಷಣೆ ಮತ್ತು ಫಲಿತಾಂಶಗಳನ್ನು ಚಟುವಟಿಕೆ 8.5 ರೊಂದಿಗೆ ಹೋಲಿಸಿ ನೋಡಿ.

2. ನಿಮ್ಮ ಸ್ವಂತದ ವಾಯುವೇಗ ಮಾಪಕವನ್ನು ನೀವೇ ಮಾಡಬಹುದು. ಈ ಕೆಳಗಿನವುಗಳನ್ನು ಸಂಗ್ರಹಿಸಿ :
ಕಾಗದದ 4 ಸಣ್ಣ ಲೋಟಗಳು (ಐಸ್‍ಕ್ರೀಮ್ ಕಪ್‍ಗಳನ್ನು ಬಳಸಿ), 2 ರಟ್ಟಿನ ತುಂಡುಗಳು (ಉದ್ದ 20 cm ಮತ್ತು ಅಗಲ 2cm), ಅಂಟು, ಸ್ಟಾಪ್ಲರ್, ಒಂದು ಸ್ಕೆಚ್‍ಪೆನ್ ಮತ್ತು ಒಂದು ತುದಿಯಲ್ಲಿ ಅಳಿಸುವ ರಬ್ಬರ್ ಇರುವ ಚೂಪು ಮಾಡಿದ ಪೆನ್ಸಿಲ್. ಒಂದು ಅಳತೆಪಟ್ಟಿಯನ್ನು ತೆಗೆದುಕೊಳ್ಳಿ. ಚಿತ್ರ 8.18 ರಲ್ಲಿ ತೋರಿಸಿದಂತೆ ಅಡ್ಡಗೆರೆಗಳನ್ನು ಎಳೆಯಿರಿ. ಇದರಿಂದ ರಟ್ಟಿನ ಕೇಂದ್ರ ಬಿಂದುಗಳು ದೊರೆಯುತ್ತವೆ.

ಪ್ಲಸ್(+) ಆಕಾರದಲ್ಲಿರುವಂತೆ ರಟ್ಟಿನ ಪಟ್ಟಿಗಳನ್ನು ಕೇಂದ್ರಗಳಲ್ಲಿ ಒಂದರ ಮೇಲೊಂದು ಇರುವಂತೆ ಜೋಡಿಸಿ. ಈಗ ಕಾಗದದ ಲೋಟಗಳನ್ನು ರಟ್ಟಿನ ಪಟ್ಟಿಗಳ ತುದಿಗಳಿಗೆ ಜೋಡಿಸಿ. ಒಂದು ಲೋಟದ ಹೊರ ಮೇಲ್ಮೈಗೆ ಮಾರ್ಕರ್ ಅಥವಾ ಸ್ಕೆಚ್‍ಪೆನ್‍ನಿಂದ ಬಣ್ಣ ಬಳಿಯಿರಿ. ಎಲ್ಲಾ 4 ಲೋಟಗಳೂ ಒಂದೇ ದಿಕ್ಕಿಗೆ ಮುಖ ಮಾಡಿರಲಿ.

ರಟ್ಟಿನ ಪಟ್ಟಿಗಳ ಕೇಂದ್ರಗಳ ಮೂಲಕ ಒಂದು ಪಿನ್ ಚುಚ್ಚಿ, ಪೆನ್ಸಿಲ್ ತುದಿಯ ರಬ್ಬರ್‍ಗೆ ಸಿಕ್ಕಿಸಿ, ಲೋಟಗಳಿಗೆ ಗಾಳಿಯನ್ನು ಊದಿದರೆ ರಟ್ಟಿನ ಪಟ್ಟಿಗಳು ಸರಾಗವಾಗಿ ತಿರುಗುತ್ತವೆಯೇ ಪರೀಕ್ಷಿಸಿ. ನಿಮ್ಮ ವಾಯುವೇಗ ಮಾಪಕ ಸಿದ್ಧವಾಯಿತು. ಒಂದು ನಿಮಿಷದಲ್ಲಿ ಇದು ಸುತ್ತುವ ಸುತ್ತುಗಳನ್ನು ಎಣಿಸುವುದರಿಂದ ಗಾಳಿಯ ವೇಗದ ಅಂದಾಜು ನಿಮಗೆ ದೊರೆಯುತ್ತದೆ. ಗಾಳಿಯ ವೇಗದ ಬದಲಾವಣೆಯನ್ನು ವೀಕ್ಷಿಸಲು ಇದನ್ನು ಬೇರೆ ಬೇರೆ ಸ್ಥಳಗಳಲ್ಲಿ ಮತ್ತು ದಿನದ ಬೇರೆ ಬೇರೆ ಸಮಯದಲ್ಲಿ ಬಳಸಿ.

ತುದಿಯಲ್ಲಿ ರಬ್ಬರ್ ಜೋಡಿಸಿದ ಪೆನ್ಸಿಲ್ ನಿಮ್ಮ ಬಳಿ ಇಲ್ಲದಿದ್ದರೆ ಒಂದು ಬಾಲ್ ಪೆನ್ನಿನ ತುದಿಯನ್ನು ಬಳಸಬಹುದು. ಒಟ್ಟಾರೆ ರಟ್ಟಿನ ಪಟ್ಟಿಗಳು ಸರಾಗವಾಗಿ ತಿರುಗುವಂತಿರಬೇಕು.

ಈ ವಾಯುವೇಗ ಮಾಪಕವು ವೇಗದ ಬದಲಾವಣೆಗಳನ್ನು ಮಾತ್ರ ಸೂಚಿಸುವುದೇ ಹೊರತು ಗಾಳಿಯ ವಾಸ್ತವ ವೇಗವನ್ನಲ್ಲ ಎಂಬುದು ನೆನಪಿರಲಿ.

3. ಬಿರುಗಾಳಿ ಮತ್ತು ಚಂಡಮಾರುತಗಳ ಬಗೆಗಿನ ಲೇಖನಗಳು ಮತ್ತು ಚಿತ್ರಗಳನ್ನು ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳಿಂದ ಸಂಗ್ರಹಿಸಿ. ಇವುಗಳನ್ನು ಬಳಸಿ, ಈ ಅಧ್ಯಾಯದಲ್ಲಿ ನೀವು ಕಲಿತದ್ದನ್ನು ಆಧರಿಸಿ ಒಂದು ಕಥೆ ರೂಪಿಸಿ.

4. ಒಂದು ಕರಾವಳಿ ರಾಜ್ಯದ ಅಭಿವೃದ್ಧಿ ಯೋಜನೆಯನ್ನು ರೂಪಿಸುವ ಜವಾಬ್ದಾರಿ ಹೊತ್ತ ಒಂದು ಸಮಿತಿಯ ಸದಸ್ಯರು ನೀವಾಗಿದ್ದೀರಿ ಎಂದು ಭಾವಿಸಿ, ಚಂಡಮಾರುತದಿಂದ ಉಂಟಾದ ಜನರ ಕಷ್ಟ-ನಷ್ಟಗಳನ್ನು ಕಡಿಮೆ ಮಾಡಲು ವಹಿಸಬೇಕಾದ ಕ್ರಮಗಳ ಬಗ್ಗೆ ಒಂದು ಕಿರುಭಾಷಣ ತಯಾರಿಸಿ.

5. ಚಂಡಮಾರುತದ ಪರಿಣಾಮಕ್ಕೆ ತುತ್ತಾದ ಜನರ ನೈಜ ಅನುಭವಗಳನ್ನು ಸಂಗ್ರಹಿಸಲು ಪ್ರತ್ಯಕ್ಷದರ್ಶಿಗಳ ಸಂದರ್ಶನ ಮಾಡಿ.

6. 15 cm ಉದ್ದ ಮತ್ತು 1 ರಿಂದ 1.5 cm ವ್ಯಾಸದ ಒಂದು ಅಲ್ಯೂಮಿನಿಯಮ್ ಕೊಳವೆಯನ್ನು ತೆಗೆದುಕೊಳ್ಳಿ. ಒಂದು ಸಾಧಾರಣ ಗಾತ್ರದ ಆಲೂಗಡ್ಡೆಯಿಂದ 2 cm ದಪ್ಪದ ಒಂದು ಸೀಳನ್ನು ಕತ್ತರಿಸಿ. ಕೊಳವೆಯನ್ನು ಈ ಸೀಳಿಗೆ ಸೇರಿಸಿ, ಒತ್ತಿ. 2-3 ಬಾರಿ ತಿರುಗಿಸಿ ಕೊಳವೆಯನ್ನು ತೆಗೆಯಿರಿ. ಒಂದು ಆಲೂಗಡ್ಡೆಯ ತುಂಡು ಕೊಳವೆಯಲ್ಲಿ ಬಿರಡೆಯಂತೆ ಸಿಲುಕಿರುವುದನ್ನು ನೀವು ಗಮನಿಸುವಿರಿ. ಇದೇ ಪ್ರಕ್ರಿಯೆಯನ್ನು ಕೊಳವೆಯ ಇನ್ನೊಂದು ತುದಿಯೊಂದಿಗೆ ಪುನರಾವರ್ತಿಸಿ. ಈಗ ಎರಡೂ ತುದಿಗಳು ಆಲೂಗಡ್ಡೆ ತುಂಡುಗಳಿಂದ ಮುಚ್ಚಲ್ಪಟ್ಟು ಮಧ್ಯದಲ್ಲಿ ಗಾಳಿ ತುಂಬಿದ ಒಂದು ಕೊಳವೆ ನಿಮ್ಮ ಬಳಿ ಇದೆ. ಒಂದು ತುದಿಯಲ್ಲಿ ಚೂಪಾಗಿಲ್ಲದ ಪೆನ್ಸಿಲ್ ತೆಗೆದುಕೊಳ್ಳಿ. ಈ ತುದಿಯಿಂದ ಒಂದು ಬದಿಯ ಆಲೂಗಡ್ಡೆ ತುಂಡನ್ನು ಕೊಳವೆಯ ಒಳಗೆ ತಳ್ಳಿ (ಚಿತ್ರ 8.20).

ಏನಾಗುವುದೆಂದು ಗಮನಿಸಿ. ಹೆಚ್ಚಾದ ಗಾಳಿಯ ಒತ್ತಡವು ಪ್ರಾಸಂಗಿಕವಾಗಿ ಯಾವ ರೀತಿ ವಸ್ತುಗಳನ್ನು ತಳ್ಳಬಲ್ಲದು ಎಂಬುದನ್ನು ಈ ಚಟುವಟಿಕೆ ತೋರಿಸುತ್ತದೆ.

ಎಚ್ಚರಿಕೆ
ನೀವು ಈ ಚಟುವಟಿಕೆಯನ್ನು ಮಾಡುವಾಗ, ಕೊಳವೆಯ ಮುಂಭಾಗದಲ್ಲಿ ಯಾರೂ ನಿಂತಿಲ್ಲವೆಂದು ಖಚಿತಪಡಿಸಿಕೊಳ್ಳಿ.

ಕೆಳಕಂಡ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚು ವಿಷಯಗಳನ್ನು ನೀವು ತಿಳಿಯಬಹುದು.
http://www.imd.gov.in/

ನಿಮಗಿದು ಗೊತ್ತೆ?
ಸಿಡಿಲಿನ ಕೋಲ್ಮಿಂಚು 400,000 km/h ಗಿಂತಲೂ ಹೆಚ್ಚು ವೇಗವಾಗಿ ಚಲಿಸುತ್ತದೆ. ಇದು ತನ್ನ ಸುತ್ತಲಿನ ಗಾಳಿಯನ್ನು ಸೂರ್ಯನ ಮೇಲ್ಮೈ ತಾಪದ 4 ಪಟ್ಟಿಗೂ ಹೆಚ್ಚು ಬಿಸಿಮಾಡಬಲ್ಲದು. ಈ ಕಾರಣದಿಂದಲೇ ಮಿಂಚು ಬಹಳ ಅಪಾಯಕಾರಿ.

ಸಂವೇದ ವಿಡಿಯೋ ಪಾಠಗಳು

Samveda – 7th – Science – Wind, Storm, and Cyclone (Part 1 of 3)
Samveda – 7th – Science – Wind, Storm, and Cyclone (Part 2 of 3)
Samveda – 7th – Science – Wind, Storm, and Cyclone (Part 3 of 3)

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

Class 7 Science WIND UNEVEN HEATING OF THE EARTH – Erudex Learning App
How Cyclones Work [Class 7, Chapter 8, Winds Storms and Cyclones, NCERT]
Warm Air Rises – Warm Water Fills the Balloon
Watch The Birth of a Tornado | National Geographic
Tornadoes 101 | National Geographic
Science Experiments For Kids | Anemometer