ಭಾರತ – ನಮ್ಮ ಹೆಮ್ಮೆ – ಅಧ್ಯಾಯ -1

ಪಾಠದ ಪರಿಚಯ

ದೇಶದ ಹಿರಿಮೆ ಗರಿಮೆಗಳ ಬಗ್ಗೆ ಅರಿವು ಮೂಡಿಸುವುದು ಶಿಕ್ಷಣದ ಒಂದು ಅತ್ಯವಶ್ಯ ಆಯಾಮ. ಇಂತಹ ಅರಿವು ವಿದ್ಯಾರ್ಥಿಗಳಲ್ಲಿ ದೇಶದ ಕುರಿತು ಹೆಮ್ಮೆ, ಗೌರವವನ್ನು ಮೂಡಿಸುವುದರೊಂದಿಗೆ ಭಾವನಾತ್ಮಕ ಏಕತೆಯನ್ನು ತರಬಲ್ಲದು. ಇದನ್ನು ಗಮನದಲ್ಲಿರಿಸಿ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳು ಮತ್ತು ಎತ್ತಿಹಿಡಿದಿರುವ ಸಾರ್ವಕಾಲಿಕ ಮೌಲ್ಯಗಳನ್ನು ಈ ಪಾಠದಲ್ಲಿ ಪರಿಚಯಿಸಲಾಗಿದೆ.

ಪಾಠಪ್ರವೇಶ
ಮೇಡಂ, ನಾವೇಕೆ ದೇಶದ ಬಗ್ಗೆ ಹೆಮ್ಮೆಪಡಬೇಕು?’’ ಇದು ಸತೀಶನ ಸಹಜ ಪ್ರಶ್ನೆ. ಇದಕ್ಕೆ ಶಿಕ್ಷಕಿ ವಿವರವಾಗಿಯೇ ಉತ್ತರ ನೀಡಿದರು : ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’’- ‘ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು’.
ಭಾರತವೂ ಸೇರಿದಂತೆ, ಅನೇಕ ಪುರಾತನ ನಾಗರಿಕತೆಗಳಲ್ಲಿ ಮಾತೃದೇವತೆಯ ಆರಾಧನೆ ಇತ್ತು.

ಅಲೆಮಾರಿ ಜೀವನ ನಡೆಸುತ್ತಿದ್ದ ಆದಿಮಾನವ ಒಂದೆಡೆ ವಾಸಮಾಡಲು ತೊಡಗಿದ ಮೇಲೆ ಗ್ರಾಮ ಜೀವನ ಆರಂಭವಾಯಿತು. ಅದಕ್ಕೆ ಹೊಂದಿಕೊಳ್ಳುತ್ತ ಆತನಿಗೆ ತನ್ನ ಗ್ರಾಮದ ಬಗ್ಗೆ ಮೋಹ ಉಂಟಾಗಿರಬೇಕು; ಆ ನೆಲದ ರಕ್ಷಣೆ ತನ್ನ ಪವಿತ್ರ ಹೊಣೆ ಎನಿಸಿರಬೇಕು. ಕಾಲ ಸಂದಂತೆ ಗ್ರಾಮಗಳು ಒಂದುಗೂಡಿ ರಾಜ್ಯವಾದಾಗ, ರಾಜ್ಯಗಳು ಬೆರೆತು ಸಾಮ್ರಾಜ್ಯವಾದಾಗ, ದೇಶಭಕ್ತಿ ಮೂರ್ತರೂಪ ತಳೆಯಿತು. ದೇಶಸೇವೆ ಈಶಸೇವೆಗೆ ಸಮವಾಯಿತು. ಹುಟ್ಟಿದ ನೆಲ ತಾಯಿನಾಡಿನ ಸ್ಥಾನಕ್ಕೇರಿತು. ನಾವು ದೇಶದ ಸಾಧನೆಗಳನ್ನು ಅರಿತುಕೊಂಡಾಗ ಅದರ ಬಗ್ಗೆ ಹೆಮ್ಮೆಪಡುವುದು ಸಹಜವಲ್ಲವೆ?

ಭರತಖಂಡ, ಹಿಂದೂಸ್ತಾನ, ಇಂಡಿಯಾ, ಜಂಬೂದ್ವೀಪ :
ಪ್ರಾಚೀನ ಕಾಲದಿಂದಲೂ ನಮ್ಮ ದೇಶವನ್ನು ‘ಭಾರತ’ ಎಂಬುದಾಗಿ ಕರೆಯಲಾಗುತ್ತಿತ್ತು. ನಮ್ಮ ದೇಶಕ್ಕೆ ‘ಭಾರತ’ ಎಂಬ ಹೆಸರು ಹೇಗೆ ಬಂತು ಗೊತ್ತೆ? ಪುರಾಣಗಳ ಪ್ರಕಾರ, ವೃಷಭನಾಥನ ಹಿರಿಯ ಮಗ ಭರತನೆಂಬ ಓರ್ವ ರಾಜನಿದ್ದನಂತೆ. ಭರತನು ಆಳಿದ ನಾಡು ‘ಭರತಖಂಡ’, ‘ಭರತವರ್ಷ’’ (ಭಾರತದೇಶ) ಎನಿಸಿತು.
ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಪರ್ಷಿಯಾ ದೇಶದ ಜನರು ಸಿಂಧೂ ನದಿ ಬಯಲಿನ ಜನರೊಂದಿಗೆ ಸಂಪರ್ಕಕ್ಕೆ ಬಂದರು. ಪರ್ಷಿಯನ್ನರು ಅವರನ್ನು ‘ಹಿಂದೂ’ ಎಂದು ಕರೆದರು. ಮುಂದೆ ಗ್ರೀಕರು ಭಾರತೀಯರೊಂದಿಗೆ ಸಂಪರ್ಕಕ್ಕೆ ಬಂದಾಗ, ಅವರ ಬಾಯಲ್ಲಿ ‘ಹಿಂದೂ’ ಪದವು ‘ಇಂಡು’ ಆಯಿತು. ಹಾಗೆಯೇ ಸಿಂಧು ನದಿಯು ‘ಇಂಡಸ್’ ಆಯಿತು.
ಮಹಮ್ಮದೀಯರ ಆಕ್ರಮಣದೊಂದಿಗೆ ‘ಹಿಂದೂ’ ಪದ ಮತ್ತೆ ಬಳಕೆಗೆ ಬಂತು. ಅವರು ಈ ದೇಶವನ್ನು ಹಿಂದೂಸ್ತಾನ, ಇಲ್ಲಿಯ ಜನರು ಹಿಂದುಗಳು’ ಮತ್ತು ಅವರ ಧರ್ಮ ಹಿಂದೂ ಧರ್ಮ’ ಎಂದು ಕರೆದರು. ಆಂಗ್ಲರ ಪ್ರಭಾವದಿಂದ ಪಾಶ್ಚಾತ್ಯರಿಗೆ ಈ ದೇಶ ‘ಇಂಡಿಯಾ’ ಮತ್ತು ಹಿಂದೂಧರ್ಮವು ‘ಹಿಂದೂಯಿಸಂ’ ಎನಿಸಿತು.

ಸಿಂಧು ನದಿ

ಸಿಂಧು ನದಿ

ಭಾರತದ ಭವ್ಯತೆಯನ್ನು ತೆರೆದಿಟ್ಟ ಯುರೋಪಿಯನ್ನರು :
ಕೆಲವು ಮಂದಿ ಆಂಗ್ಲ ವಿದ್ವಾಂಸರು ಈ ನೆಲದ ಪ್ರಾಚೀನ ಭವ್ಯತೆಯನ್ನು ಜಗತ್ತಿಗೆ ತೋರಿಸಿಕೊಡಲು ಕಾರಣರಾದರು. ಅಂಥವರಲ್ಲಿ ವಿಲಿಯಂ ಜೋನ್ಸ್ ಜೂನಿಯರ್ ಪ್ರಮುಖ. ಇವನು ಸುಪ್ರೀಂ ಕೋರ್ಟಿನ ನ್ಯಾಯಾಧೀಶ, ಮೇಧಾವಿ, ಸಂಸ್ಕೃತ ಕಲಿತ. “ಸಂಸ್ಕೃತ ಭಾಷೆಯ ನುಡಿಗಟ್ಟು ಅದ್ಭುತ’’ ಎಂದು ಜೋನ್ಸ್ ನುಡಿದ. ಭಾರತದ ಸಾಹಿತ್ಯ ಅಧ್ಯಯನ ಮಾಡುವ ಸಲುವಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿದ. ಈ ಸಂಸ್ಥೆ ಭಗವದ್ಗೀತೆಯ ಇಂಗ್ಲೀಷ್ ಭಾಷಾಂತರವನ್ನು ಪ್ರಕಟಿಸಿತು. ಇದು ಸಂಸ್ಕೃತದಿಂದ ಇಂಗ್ಲೀಷ್ ತರ್ಜುಮೆಗೊಂಡ ಮೊದಲ ಕೃತಿ. ವಿಲಿಯಂ ಜೋನ್ಸ್ ಜೂನಿಯರ್ ‘ಶಾಕುಂತಲಾ’ ಮುಂತಾದ ಸಂಸ್ಕೃತ ಕೃತಿಗಳನ್ನು ಇಂಗ್ಲಿಷಿನಲ್ಲಿ ಸಿದ್ಧಗೊಳಿಸಿದ. ಮುಂದೆ ಫ್ರೆಂಚ್ ಮತ್ತು ಜರ್ಮನ್ ವಿದ್ವಾಂಸರು ಭಾರತೀಯ ಸಂಸ್ಕೃತಿಯ ಅಧ್ಯಯನ ಮುಂದುವರಿಸಿದರು. ಇದೇ ಕಾಲದಲ್ಲಿ ಐವತ್ತು ಉಪನಿಷತ್ತುಗಳು ಪರ್ಷಿಯನ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡವು.

`ಭಾ’ ಎಂದರೆ ಬೆಳಕು. ಜ್ಞಾನವೆಂಬ ಬೆಳಕಿನಲ್ಲಿ
‘ರತ’ (ಆಸಕ್ತ)ರಾಗಿರುವ ಭೂಮಿ (ದೇಶ) ‘ಭಾರತ’.
ಆ ಪರಂಪರೆಯಲ್ಲಿ ಇರುವ ನಾವು ‘ಭಾರತೀಯ’ರು.

ಭೂಪಟದಲ್ಲಿ ನೀಡಿರುವ ಪ್ರಾಚೀನ ಸ್ಥಳ ನಾಮಗಳನ್ನು ಗಮನಿಸಿ. ಇವು ಆ ಕಾಲದ ಶಾಸನಗಳಲ್ಲಿ ಕಂಡುಬರುತ್ತವೆ. ಹೆಚ್ಚಿನ ಸ್ಥಳ ನಾಮಗಳು ಬದಲಾಗಿವೆ. ಉದಾ: ಮಗಧ>ಬಿಹಾರ, ಕಳಿಂಗ>ಒರಿಸ್ಸಾ, ಚೇರ>ಕೇರಳ, ಇಂದ್ರಪ್ರಸ್ಥ>ದೆಹಲಿ, ಪ್ರಯಾಗ>ಅಲಹಾಬಾದ್. ಆದರೆ ಕೆಲವು ಇಂದಿಗೂ ಉಳಿದುಕೊಂಡಿವೆ. ಉದಾ: ಕಾಶ್ಮೀರ, ನೇಪಾಳ, ಕೈಲಾಸ, ಕುರುಕ್ಷೇತ್ರ, ಆಯೋಧ್ಯ. ಕಾಶಿ, ಮಥುರಾ, ಸ್ಥಳ ನಾಮಗಳನ್ನು ಬದಲಿಸುವ ವಿದ್ಯಮಾನವು ಕಾಲಕಾಲಕ್ಕೆ ನಡೆದಿದೆ. ಈಗಲೂ ನಡೆಯುತ್ತಿದೆ. ಉದಾ: ಮದ್ರಾಸ್ >ಚೆನ್ನೈ, ಪ್ರಯಾಗ>ಅಲಹಾಬಾದ್, ಬರೋಡಾ>ವಡೋದರಾ, ಬೊಂಬಾಯಿ>ಮುಂಬೈ, ಇಂತಹ ವಿದ್ಯಮಾನದ ಅರಿವನ್ನು ಮೂಡಿಸುವ ಉದ್ದೇಶದಿಂದ ಪರಿಚಯಾತ್ಮಕವಾಗಿ ಭೂಪಟವನ್ನು ಪ್ರಾರಂಭದಲ್ಲಿಯೇ ನೀಡಲಾಗಿದೆ.

ಗಣಿತ ಕ್ಷೇತ್ರಕ್ಕೆ ಭಾರತೀಯರು ನೀಡಿದ ಅದ್ಭುತ ಕೊಡುಗೆ :
ಅಶೋಕನ ಶಿಲಾಲೇಖನಗಳಲ್ಲಿ ಅಂಕೆಗಳನ್ನು ವಿಪುಲವಾಗಿ ಬಳಸಲಾಗಿದೆ. ಇವು 2300 ವರ್ಷಗಳಷ್ಟು ಹಿಂದಿನವು. ಇದಾದ 1000 ವರ್ಷಗಳ ಮೇಲೂ ಯುರೋಪಿನ ರಾಷ್ಟ್ರಗಳಲ್ಲಿ ಅಂಕೆಗಳು ಬಳಕೆಗೆ ಬಂದಿರಲಿಲ್ಲ. ಅಂಕೆಗಳು, ದಶಮಾಂಶ, ಭಿನ್ನರಾಶಿ, ಬೀಜಗಣಿತ ಇವೆಲ್ಲವೂ ಗಣಿತಕ್ಕೆ ಪ್ರಾಚೀನ ಭಾರತೀಯರು ನೀಡಿದ ಕೊಡುಗೆಗಳು. ಶನ ಅಥವಾ ಸೊನ್ನೆಯನ್ನು ಮೊತ್ತ ಮೊದಲು ಒಂದು ಸಂಖ್ಯಾಸೂಚಕವಾಗಿ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಸೊನ್ನೆಯ ಬಳಕೆಯಿಂದ ಲೆಕ್ಕಾಚಾರದ ತೊಡಕು ಬಗೆಹರಿಯಿತು. ಭೂಮಿ ಗುಂಡಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ ಆರ್ಯಭಟ ತೋರಿಸಿಕೊಟ್ಟದ್ದು. ಆಧುನಿಕ ವಿಜ್ಞಾನದಲ್ಲಿ ಈ ವಾದವನ್ನು ಎತ್ತಿ ಹಿಡಿದ ಕೀರ್ತಿ ಸಲ್ಲುವುದು ಕೊಪರ್ನಿಕಸ್ ಎಂಬಾತನಿಗೆ, ಇವನಿಗಿಂತ ಹತ್ತು ಶತಮಾನ ಹಿಂದಿನವನು ಆರ್ಯಭಟ, ಭಾರತೀಯರು ನಾವಿಕರಿಗಾಗಿ ರೇಖಾಂಶ ನಕ್ಷೆಯನ್ನು ಉಜ್ಜಯಿನಿಯಲ್ಲಿ ಸಿದ್ಧಗೊಳಿಸಿದರು. ಇಂಥದೊಂದು ನಕಾಶೆಯನ್ನು ಬಳಸಿಯೇ 15ನೇ ಶತಮಾನದಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ ಭಾರತದ ಪಶ್ಚಿಮ ತೀರವನ್ನು ಮುಟ್ಟಿದ.

ಕೊಪರ್ನಿಕಸ್

ಭಾರತೀಯ ವಿಜ್ಞಾನಿ ಆರ್ಯಭಟ

ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ

ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ

ಭಾರತೀಯರ ಇನ್ನಷ್ಟು ಕೊಡುಗೆಗಳು
* ಫೈಥಾಗೊರೆಸ್‍ನ ಪ್ರಖ್ಯಾತ ಪ್ರಮೇಯವನ್ನು ಆತನಿಗಿಂತ ಎರಡು ಶತಮಾನಗಳ ಮೊದಲೇ ಗುರುತಿಸಿದ್ದವನು ಭಾರತೀಯ ವಿಜ್ಞಾನಿ ಬೋಧಾಯನ.
* ವಸ್ತುವಿನ ಅವಿಭಾಜ್ಯ ಕಣವಾದ ಅಣುವನ್ನು ಕಣಾದ ಎಂಬ ಭಾರತೀಯ ವಿಜ್ಞಾನಿ, 27 ಶತಮಾನಗಳಷ್ಟು ಹಿಂದೆಯೇ ಪ್ರತಿಪಾದಿಸಿದನು. ರಷ್ಯಾ ದೇಶದಲ್ಲಿ ಅಣು ಸಿದ್ಧಾಂತಕ್ಕೆ ಸಂಬಂಧಿಸಿದ ಪಾಠವು ಕಣಾದನ ಸ್ಮರಣೆಯಿಂದ ಪ್ರಾರಂಭವಾಗುತ್ತದೆ.
* ಭಾರತೀಯರು ಪ್ರಾಚೀನಕಾಲದಿಂದಲೂ ಉಕ್ಕನ್ನು ತಯಾರಿಸುತ್ತಿದ್ದರು.
* ನೌಕಾನಿರ್ಮಾಣ ವಿಜ್ಞಾನದಲ್ಲಿ ಭಾರತೀಯರು ಪ್ರಥಮಸ್ಥಾನದಲ್ಲಿದ್ದರು. ಗುಜರಾತಿನ ಸೂರತ್ ಅತಿ ದೊಡ್ಡ ನೌಕಾನಿರ್ಮಾಣ ಕೇಂದ್ರವೆಂದು ಪ್ರಸಿದ್ಧವಾಗಿತ್ತು. ಭಾರತೀಯರು ಮುಂಗಾರು ಮಾರುತಗಳನ್ನು ಗುರುತಿಸಿದ ಮೇಲೆ ಪ್ರಪಂಚದಲ್ಲಿ ನೌಕಾಯಾನದ ವೇಗ ಹೆಚ್ಚಿತು.
* ವೈಮಾನಿಕ ಶಾಸ್ತ್ರ, ಯೋಗಶಾಸ್ತ್ರ ಮತ್ತು ಸಂಸ್ಕೃತವು ಕೂಡ ಭಾರತೀಯರ ಕೊಡುಗೆಗಳಾಗಿವೆ.

ಕಣಾದ, ಭಾರತೀಯ ವಿಜ್ಞಾನಿ

ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ:
ಸಾಗರಯಾನದಲ್ಲಿ ಭಾರತೀಯರು ನಿಷ್ಣಾತರು. ಆದರೂ ಇತರ ರಾಷ್ಟ್ರಗಳನ್ನು ಆಕ್ರಮಿಸಿ ತಮ್ಮ ಸಂಸ್ಕೃತಿಯನ್ನು ಅವರ ಮೇಲೆ ಹೇರುವ ಸ್ವಭಾವ ನಮ್ಮದಾಗಿರಲಿಲ್ಲ.

ಬೌದ್ಧಮತ ಭಾರತದ ಗಡಿಯಾಚೆಗೆ ಅಫ್ಘಾನಿಸ್ತಾನ, ಟಿಬೆಟ್, ಮಂಗೋಲಿಯ, ಚೀನ, ಕೊರಿಯ ಮತ್ತು ಜಪಾನ್‍ಗಳಲ್ಲಿ ವ್ಯಾಪಿಸಿತು. ಶ್ರೀಲಂಕೆ ಬೌದ್ಧ ಮತವನ್ನು ಸ್ವೀಕರಿಸಿತು. ಜಗತ್ತಿನ ಅತಿ ಎತ್ತರದ ಬುದ್ಧನ ಮೂರ್ತಿ ಅಫ್ಘಾನಿಸ್ತಾನದ ಬಮಿಯಾನ್ ಎಂಬಲ್ಲಿ ಇತ್ತು ಎಂದರೆ ನಿಮಗೆ ಅಚ್ಚರಿಯಾಗುವುದಿಲ್ಲವೆ?

ಬುದ್ಧನ ಮೂರ್ತಿ ಅಫ್ಘಾನಿಸ್ತಾನದ ಬಮಿಯಾನ್

ಬೌದ್ಧಮತ ಮತ್ತು ಹಿಂದೂ ಸಂಸ್ಕೃತಿ ದಕ್ಷಿಣ ಏಷ್ಯದ ವಿವಿಧ ದೇಶಗಳಿಗೆ ಹಬ್ಬಿದವು. ಕಾಂಬೋಡಿಯದ ಅಂಗೋರವಾಟ್ ಎಂಬಲ್ಲಿನ ಭವ್ಯ ಹಿಂದೂ ದೇವಾಲಯವು ಜಗತ್ತಿನ ಶ್ರೇಷ್ಠ ವಾಸ್ತು ಶಿಲ್ಪಗಳಲ್ಲೊಂದು. ಜಾವಾದ ಬೊರಬೊದೂರ್ ಎಂಬಲ್ಲಿ ಜಗತ್ಪ್ರಸಿದ್ಧ ಬೃಹತ್ ಬೌದ್ಧಾಲಯವಿದೆ.

ಕಾಂಬೋಡಿಯದ ಅಂಗೋರವಾಟ್ ಎಂಬಲ್ಲಿನ ಭವ್ಯ ಹಿಂದೂ ದೇವಾಲಯ

ಇವೆರಡೂ ವಿಶ್ವಪರಂಪರೆಗೆ ಸೇರಿದ ತಾಣಗಳಾಗಿವೆ. ಬೊರಬೊದೂರ್ ಬೌದ್ಧಾಲಯ, ಜಾವ ಆಗ್ನೇಯ ಏಷ್ಯದಲ್ಲಿ ಭಾರತೀಯ ಸಂಸ್ಕೃತಿಯು ಸುಮಾರು ಒಂಬತ್ತು ಶತಮಾನಗಳ ಕಾಲ ಅಲ್ಲಿಯ ಜನಜೀವನವನ್ನು ಬೆಳಗಿತು. ಅಲ್ಲಿನ ಹಲವು ದೇಶಗಳಲ್ಲಿ ಸಂಸ್ಕೃತ ಆಡಳಿತ ಭಾಷೆಯಾಯಿತು. ನೃತ್ಯಗಳಲ್ಲಿ, ಹಾಡುಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥೆಗಳು ಇಂದಿಗೂ ಅಲ್ಲಿ ಜೀವಂತವಾಗಿವೆ.

ಬೊರಬೊದೂರ್ ಬೌದ್ಧಾಲಯ, ಜಾವ

ಕೆಲವು ಸಾರ್ವಕಾಲಿಕ ಭಾರತೀಯ ಮೌಲ್ಯಗಳು :

* ಆಚಾರ್ಯ ದೇವೋಭವ : ಭಾರತದ ಪ್ರಾಚೀನ ಸಂಸ್ಕೃತಿಯಲ್ಲಿ ವಿದ್ಯೆ ವಿಕ್ರಯದ ವಸ್ತುವಾಗಿರಲಿಲ್ಲ. ಮೂರು ಸಾವಿರ ವರ್ಷಗಳ ಹಿಂದೆ ಶಿಷ್ಯರಿಗೆ ಗುರುಗಳು ನೀಡುತ್ತಿದ್ದ ಮೌಲ್ಯಗಳು ಎಲ್ಲಾ ಕಾಲಗಳಿಗೂ ಅನ್ವಯವಾಗುವಂಥವು : “ಸತ್ಯವನ್ನು ಹೇಳು. ಧರ್ಮವನ್ನು ಪಾಲಿಸು. ಇದುವರೆಗೆ ಕಲಿತದ್ದರಿಂದಲೇ ತೃಪ್ತನಾಗಬೇಡ, ಗರ್ವಪಡಬೇಡ, ತಾಯಿ, ತಂದೆ, ಆಚಾರ್ಯ ಮತ್ತು ಅತಿಥಿಗಳನ್ನು ದೇವರಂತೆ ಭಾವಿಸು’’. ಈ ಮೌಲ್ಯಗಳು ಇಂದಿಗೂ ನಮ್ಮ ಮುಂದಿವೆ.

* ಅಹಿಂಸೆ, ಪೌರುಷ : ಜಗತ್ತಿನಲ್ಲಿ ಅಹಿಂಸೆಯ ಶ್ರೇಷ್ಠತಮ ಪ್ರತಿಪಾದಕರು ಭಾರತೀಯರು. ಆದರೆ ಪೌರುಷ ಶಕ್ತಿಗಳನ್ನು ಭಾರತೀಯರು ಎಂದೂ ಕಡೆಗಣಿಸಿರಲಿಲ್ಲ. “ಶತ್ರುಗಳಿಗೆ ಅಂಜಿ ಪಲಾಯನ ಮಾಡುವುದಕ್ಕಿಂತ ಯುದ್ಧ ಮಾಡುತ್ತಲೇ ಮಡಿಯಿರಿ’’ ಎನ್ನುವುದು ಪ್ರಾಚೀನರ ಜೀವನಸೂತ್ರವಾಗಿತ್ತು.

* ಎಲ್ಲ ಜನರೂ ಸುಖಿಗಳಾಗಲಿ (ಸರ್ವೇ ಜನಾಃ ಸುಖಿನೋ ಭವಂತು) : ಇದು ನಮ್ಮ ಪ್ರಾಚೀನರ ಒಂದು ಉದಾತ್ತ ಮೌಲ್ಯವಾಗಿದೆ. ‘ವಸುಧೈವ ಕುಟುಂಬಕಂ’ (ಇಡೀ ಜಗತ್ತೇ ಒಂದು ಕುಟುಂಬ) ಎಂಬ ಉದಾತ್ತ ಚಿಂತನೆಯು ಭಾರತೀಯರದ್ದೇ ಆಗಿದೆ.

* ಸರ್ವಧರ್ಮ ಸಮಾನತೆ : ಭಾರತವು ನಂಬಿ ಬಂದಿರುವ ಇನ್ನೊಂದು ಮೌಲ್ಯವೆಂದರೆ ಸರ್ವಧರ್ಮ ಸಮಾನತೆ, ಬೆಳಕು ಎಲ್ಲಿಂದ ಬಂದರೂ ಅದು ಬೆಳಕೇ. ಅದಕ್ಕೆ ಕತ್ತಲೆಯನ್ನು ಹೊಡೆದೋಡಿಸುವ ಶಕ್ತಿಯಿದೆ. ಅಂತೆಯೇ ಮತಧರ್ಮ ಯಾವುದೇ ಇರಲಿ ದೇವರು ಒಬ್ಬನೇ; ನಾಮ ಹಲವು ಎಂಬುದು ವೇದವಾಕ್ಯ.

ಮೇಲೆ ಉಲ್ಲೇಖಿಸಿದ ಎಲ್ಲಾ ಮೌಲ್ಯಗಳೂ ಭಾರತದಲ್ಲಿ ಹುಟ್ಟಿ ಬೆಳೆದ ಸನಾತನ ಧರ್ಮದ ಆಶಯಗಳಾಗಿವೆ.

ಹೊಸ ಪದಗಳು

ಮಾತೃದೇವತೆ – ತಾಯಿಸ್ವರೂಪದ ದೇವತೆ. ಭರತಖಂಡ,
ಭರತವರ್ಷ – ಭರತಕ್ಷೇತ್ರ, ಭಾರತಭೂಮಿ, ಭಾರತದೇಶ, ಭರತವರ್ಷವು ಭೂಮಂಡಲದ ಸಪ್ತ ದ್ವೀಪಗಳಲ್ಲಿ ಒಂದಾಗಿತ್ತು ಎಂಬ ಹೇಳಿಕೆ ಪರಂಪರೆಯಿಂದ ಬಂದಿದೆ ? “ಸಪ್ತದ್ವೀಪ ವಸುಂಧರಾ’.

ನಿಮಗೆ ತಿಳಿದಿರಲಿ

1 ವೃಷಭನಾಥ ಜೈನಮತದ ಮೊದಲನೆಯ ತೀರ್ಥಂಕರ.
2 ದುಷ್ಯಂತ ಶಕುಂತಲೆಯರ ವೀರಪುತ್ರನಾದ ಭರತನಿಂದ ಭಾರತ ಎಂಬ ಹೆಸರಾಯಿತು ಎಂಬ ಪ್ರತೀತಿಯೂ ಇದೆ.
3 ಆಂಗ್ಲರ ಪ್ರಭಾವದಿಂದ ಬೌದ್ಧಮತ, ಜೈನಮತ ಮತ್ತು ಸಿಖ್ ಮತ ಅನುಕ್ರಮವಾಗಿ ಬುದ್ಧಿಸಂ, ಜೈನಿಸಂ ಮತ್ತು ಸಿಖ್ಖಿಸಂ ಎಂದಾಯಿತು.
4 ಇಂದಿನ ಭಾರತಕ್ಕಿಂತ ಇನ್ನೂ ದೊಡ್ಡದಾದ ಪ್ರದೇಶವನ್ನು ಹಿಂದೆ ಭರತವರ್ಷ ವೆನ್ನುತ್ತಿದ್ದರು. ದಕ್ಷಿಣ ಸಮುದ್ರದ ಉತ್ತರಕ್ಕೆ ಮತ್ತು ಹಿಮಾಲಯದ ದಕ್ಷಿಣಕ್ಕೆ ಇರುವ ಭೂಭಾಗವೆಲ್ಲ ಭರತವರ್ಷ; ಅಲ್ಲಿ ವಾಸಿಸುವ ಜನರೆಲ್ಲರೂ ಭಾರತೀಯರು ಎಂಬುದಾಗಿ ವಿಷ್ಣುಪುರಾಣದಿಂದ ನಮಗೆ ತಿಳಿದುಬರುತ್ತದೆ.
5 ಮಯನ್ಮಾರನ್ನು ‘ಬ್ರಹ್ಮದೇಶ, ಇಂಡೋನೇಷ್ಯದಲ್ಲಿರುವ ಜಾವಾ, ಸುಮಾತ್ರಾ, ಬಾಲಿ ಇವನ್ನು ‘ಸುವರ್ಣದ್ವೀಪ’, ವಿಯೆಟ್ನಾಮನ್ನು ‘ಚಂಪಾ’ ಮತ್ತು ಕಾಂಬೋಡಿಯವನ್ನು ‘ಕಂಬುಜ’ ಎಂದು ಪಾಠಗಳು

ವಿಡಿಯೋ ಪಾಠಗಳು

ಭಾರತ ನಮ್ಮ ಹೆಮ್ಮೆ|ಸಮಾಜ ವಿಜ್ಞಾನ|6ನೇ ತರಗತಿ| ಪರಿಷ್ಕೃತ ಪಠ್ಯ|2022- 23|India our pride|6th class

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

ಎಲ್ಲಿದೆ ಸಿಂಧೂ ನದಿ..?ಭಾರತ ಪಾಕಿಸ್ತಾನ ಚೀನಾ||Unknown Facts of Sindhu River

Vasco da Gama: Portuguese Explorer – Fast Facts | History

ಬುದ್ಧನ ಮೂರ್ತಿ ಅಫ್ಘಾನಿಸ್ತಾನದ ಬಮಿಯಾನ್

ಕಾಂಬೋಡಿಯದ ಅಂಗೋರವಾಟ್ ಎಂಬಲ್ಲಿನ ಭವ್ಯ ಹಿಂದೂ ದೇವಾಲಯ

ಬೊರಬೊದೂರ್ ಬೌದ್ಧಾಲಯ, ಜಾವ

ಪ್ರಶ್ನೋತ್ತರಗಳು