ಪಾಠದ ಪರಿಚಯ
ಈ ಅಧ್ಯಾಯದಲ್ಲಿ ನಮ್ಮ ದೇಶ ಭಾರತ (ಮಾತೃ ಭೂಮಿ) ಹಾಗೂ ನಮ್ಮ ರಾಜ್ಯ ಕರ್ನಾಟಕವೆಂಬ ಅರಿವು ಮೂಡಿಸುವುದು. ಪ್ರಪಂಚದಲ್ಲಿ ಭಾರತದ ಸ್ಥಾನ, ಗಾತ್ರ ವಿಸ್ತರಣೆ, ಅದರ ವಿವಿಧ ಭೂ ಸ್ವರೂಪಗಳನ್ನು ತಿಳಿಯುವುದು. ನಮ್ಮ ತಾಯ್ನಾಡು ಕರ್ನಾಟಕದ ಸ್ಥಾನ, ವಿಸ್ತರಣೆ, ನೆರೆಯ ರಾಜ್ಯಗಳು. ಕರ್ನಾಟಕದ ಭೂ ಲಕ್ಷಣಗಳ ಸಂಕ್ಷಿಪ್ತ ಮಾಹಿತಿ ಹಾಗೂ ವಿಭಾಗಗಳನ್ನು ಪರಿಚಯಿಸುವುದು.

ಭಾರತವು ಸಂಪೂರ್ಣವಾಗಿ ಉತ್ತರಗೋಳಾರ್ಧದಲ್ಲಿ ನೆಲೆಸಿದೆ. ಇದೊಂದು ದಕ್ಷಿಣ ಏಷ್ಯಾದ ಪರ್ಯಾಯ ದ್ವೀಪ, ಭಾರತವು ವಿಸ್ತೀರ್ಣದಲ್ಲಿ ಪ್ರಪಂಚದ 7ನೆಯ ಸ್ಥಾನದಲ್ಲಿದೆ ಹಾಗೂ ಎರಡನೆಯ ಜನಭರಿತ ರಾಷ್ಟ್ರ. ಆದರೆ 2022ರ ವಿಶ್ವಸಂಸ್ಥೆ ಮಂಡಿಸಿ, ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂಬ ಚರ್ಚೆಗಳು ಚಾಲ್ತಿಯಲ್ಲಿವೆ. ಇದು ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿ ಭೂಶಿರದವರೆಗೆ ಹಾಗೂ ಪಶ್ಚಿಮದ ಕಛ್‍ನಿಂದ ಪೂರ್ವದ ಅರುಣಾಚಲ ಪ್ರದೇಶದವರೆಗೆ ವಿಸ್ತರಿಸಿದೆ. ಅಕ್ಷಾಂಶಿಕವಾಗಿ 8ಲಿ ಉತ್ತರದಿಂದ 37ಲಿ ಉತ್ತರ ಅಕ್ಷಾಂಶ
ಹಾಗೂ ರೇಖಾಂಶಿಕವಾಗಿ 68ಲಿ ಪೂರ್ವದಿಂದ 97ಲಿ ಪೂರ್ವ ರೇಖಾಂಶಗಳವರೆಗೆ ವಿಸ್ತರಿಸಿದೆ. ಕರ್ಕಾಟಕ ಸಂಕ್ರಾಂತಿ ವೃತ್ತವು ದೇಶದ ಮಧ್ಯಭಾಗದಲ್ಲಿ ಹಾಯ್ದು ಹೋಗಿದೆ.

ಭಾರತದ ನೆರೆಹೊರೆಯ ದೇಶಗಳೆಂದರೆ, ವಾಯುವ್ಯಕ್ಕೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ, ಉತ್ತರಕ್ಕೆ ನೇಪಾಳ, ಭೂತಾನ ಮತ್ತು ಚೀನ ಹಾಗೂ ಪೂರ್ವಕ್ಕೆ ಬಾಂಗ್ಲಾದೇಶ ಮತ್ತು ಮಯನ್ಮಾರ್ ದೇಶಗಳಿವೆ. ಆಗ್ನೇಯ ದಿಕ್ಕಿನಲ್ಲಿ ಶ್ರೀಲಂಕವಿದ್ದು, ಅದು ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿಗಳಿಂದ ಭಾರತದಿಂದ ಪ್ರತ್ಯೇಕಗೊಂಡಿದೆ.

ಭಾರತವನ್ನು ಸುತ್ತುವರಿದ ಜಲ ಭಾಗಗಳೆಂದರೆ: ಪೂರ್ವಕ್ಕೆ ಬಂಗಾಳಕೊಲ್ಲಿ, ಪಶ್ಚಿಮಕ್ಕೆ ಅರಬ್ಬಿ ಸಮುದ್ರ ಹಾಗೂ ದಕ್ಷಿಣಕ್ಕೆ ಹಿಂದೂ ಮಹಾಸಾಗರಗಳಿವೆ. ಆದ್ದರಿಂದ ಭಾರತವು ಉದ್ದವಾದ ಸಮುದ್ರ ತೀರ ಮತ್ತು ದ್ವೀಪಗಳನ್ನು ಹೊಂದಿದೆ.

ಭಾರತದಲ್ಲಿ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು ಮತ್ತು ದೆಹಲಿಯು ರಾಷ್ಟ್ರೀಯ ರಾಜಧಾನಿ ಪ್ರದೇಶವಾಗಿದೆ.

ಭಾರತದ ಪ್ರಾಕೃತಿಕ ವಿಭಾಗಗಳು:

ಭಾರತದಲ್ಲಿ ವೈವಿಧ್ಯವಾದ ಮೇಲ್ಮೈ ಲಕ್ಷಣಗಳಿವೆ. ಭೂರೂಪಾಕೃತಿಯನ್ನಾಧರಿಸಿ ಭಾರತವನ್ನು ನಾಲ್ಕು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಬಹುದು:

  1. ಉತ್ತರದ ಪರ್ವತಗಳು
  2. ಉತ್ತರದ ಮೈದಾನಗಳು
  3. ಪರ್ಯಾಯ ಪ್ರಸ್ಥಭೂಮಿ
  4. ಕರಾವಳಿ ಮೈದಾನಗಳು

1. ಉತ್ತರದ ಪರ್ವತಗಳು: ಇದು ಬಹಳಷ್ಟು ಮಟ್ಟಿಗೆ ಹಿಮಾಲಯ ಪರ್ವತ ಸರಣಿಗಳನ್ನೊಳಗೊಂಡಿದೆ. ದೇಶದ ಉತ್ತರ, ಈಶಾನ್ಯ ಮತ್ತು ಪೂರ್ವಭಾಗಗಳಿಗೆ ಹಿಮಾಲಯಗಳು ನೈಸರ್ಗಿಕ ಗಡಿಯಂತಿವೆ. ಇವು ಪ್ರಪಂಚದಲ್ಲೇ ಅತ್ಯಂತ ಎತ್ತರವಾದ ಪರ್ವತಗಳಾಗಿದ್ದು, ಹಿಮದಿಂದಾವೃತವಾಗಿವೆ. ಅವುಗಳಲ್ಲಿ ಹಲವು ಅತ್ಯಂತ ಎತ್ತರವಾದ ಶಿಖರ, ಆಳವಾದ ಕಣಿವೆ ಕಂದರ, ಹಿಮನದಿ, ಪರ್ವತ ಘಾಟಿ ಮೊದಲಾದ ಸ್ವರೂಪಗಳಿವೆ. ಇಲ್ಲಿನ ಮೌಂಟ್ ಎವರೆಸ್ಟ್ ಶಿಖರವು (8848 ಮೀ.) ಪ್ರಪಂಚದಲ್ಲೇ ಎತ್ತರವಾದುದು. ಆದರೆ ಮೌಂಟ್ ಗಾಡ್ವಿನ್ ಅಸ್ಟಿನ್ (k2, 8611 ಮೀ.) ಭಾರತದ ಅತ್ಯಂತ ಎತ್ತರವಾದ ಶಿಖರ.

ಮೌಂಟ್ ಎವರೆಸ್ಟ್ ಶಿಖರ
ಮೌಂಟ್ ಗಾಡ್ವಿನ್ ಅಸ್ಟಿನ್

ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಿಮಾಲಯ ಪರ್ವತಗಳ ಪಾತ್ರವು ಮಹತ್ವವುಳ್ಳದ್ದು. ಅವು ಸ್ವಾಭಾವಿಕ ಗಡಿಯಂತೆ ವರ್ತಿಸುತ್ತವೆ. ಮಧ್ಯ ಏಷ್ಯಾದಿಂದ ಬೀಸಿ ಬರುವ ಶೀತಗಾಳಿಗಳನ್ನು ತಡೆಯುತ್ತವೆ ಮತ್ತು ಮಾನ್ಸೂನ್ ಮಾರುತಗಳನ್ನು ನಿಯಂತ್ರಿಸಿ ಹೆಚ್ಚು ಮಳೆಯನ್ನು ಸುರಿಸುತ್ತವೆ. ಅನೇಕ ನದಿಗಳಿಗೆ ಉಗಮಸ್ಥಾನ ಹಾಗೂ ಹಲವು ಗಿರಿಧಾಮಗಳಿಗೆ ನೆಲೆಯಾಗಿವೆ.

2. ಉತ್ತರದ ಮೈದಾನಗಳು: ಇವು ಹಿಮಾಲಯ ಪರ್ವತ ಮತ್ತು ಪರ್ಯಾಯ ಪ್ರಸ್ಥಭೂಮಿಗಳ ನಡುವೆ ವಿಸ್ತರಿಸಿವೆ. ಹಿಮಾಲಯ ಪರ್ವತಗಳಲ್ಲಿ ಉಗಮ ಹೊಂದಿ ಇಲ್ಲಿ ಹರಿಯುವ ಸಟ್ಲೇಜ್, ಗಂಗಾ, ಬ್ರಹ್ಮಪುತ್ರ ಮತ್ತು ಅವುಗಳ ಉಪ ನದಿಗಳು ತಂದು ಸಂಚಯ ಮಾಡಿದ ಮೆಕ್ಕಲಿನಿಂದ ಇವು ನಿರ್ಮಾಣವಾಗಿವೆ. ಹೀಗಾಗಿ ಇವು ಫಲವತ್ತಾದ, ವಿಸ್ತಾರವಾದ ಹಾಗೂ ಸಮತಟ್ಟಾದ ಮೈದಾನಗಳಾಗಿವೆ. ಇವು ಕೃಷಿ, ಕೈಗಾರಿಕೆ, ಸಾರಿಗೆ, ನಗರ, ಪಟ್ಟಣ ಇತ್ಯಾದಿಗಳ ಅಭಿವೃದ್ಧಿಗೆ ಪ್ರೋತ್ಸಾಹವಾಗಿವೆ. ಈ ಎಲ್ಲ ಅನುಕೂಲಗಳಿಂದ ಈ ಮೈದಾನಗಳು ಅಧಿಕ ಜನಸಾಂದ್ರತೆಯನ್ನು ಹೊಂದಿವೆ.

ಸಟ್ಲೇಜ್ ನದಿ
ಗಂಗಾ ನದಿ
ಬ್ರಹ್ಮಪುತ್ರ ನದಿ

3. ಪರ್ಯಾಯ ಪ್ರಸ್ಥಭೂಮಿ: ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಇದು ಹೆಚ್ಚು ವಿಸ್ತಾರವಾದುದು. ಉತ್ತರ ಭಾರತದ ಮೈದಾನದಿಂದ ದಕ್ಷಿಣ ಭಾಗದಲ್ಲಿದ್ದು ಬಹುಪಾಲು ಪುರಾತನ ಕಠಿಣವಾದ ಶಿಲೆಗಳಿಂದ ರಚನೆಯಾಗಿದೆ. ನರ್ಮದಾ ಸೋನೆ ಸೀಳು ಕಣಿವೆಯು ಈ ವಿಭಾಗವನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಇದರಿಂದ ಉತ್ತರದ ಭಾಗವನ್ನು ಮಾಳ್ವ ಪ್ರಸ್ಥಭೂಮಿ ಎಂತಲೂ ಮತ್ತು ದಕ್ಷಿಣದ ಭಾಗವನ್ನು ದಖನ್ ಪ್ರಸ್ಥಭೂಮಿ ಎಂತಲೂ ಕರೆಯಲಾಗಿದೆ. ಮಾಳ್ವ ಪ್ರಸ್ಥಭೂಮಿಯು ಉತ್ತರದಲ್ಲಿ ಅರಾವಳಿ ಮತ್ತು ದಕ್ಷಿಣದಲ್ಲಿ ವಿಂಧ್ಯ ಪರ್ವತಗಳಿಂದ ಸುತ್ತುವರಿದಿದೆ. ಅರಾವಳಿ ಸರಣಿಗಳಲ್ಲಿ ಗುರುಶಿಖರ ಎಂಬುದು (1722 ಮೀ) ಅತ್ಯಂತ ಎತ್ತರವಾದ ಶಿಖರ.

ಗುರುಶಿಖರ

ದಖನ್ ಪ್ರಸ್ಥಭೂಮಿಯು ಉತ್ತರದಲ್ಲಿ ಸಾತ್ಪುರ, ಮೈಕೇಲ, ಅಮರಕಂಟಕ ಮತ್ತು ರಾಜಮಹಲ್ ಬೆಟ್ಟಗಳು, ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಮತ್ತು ಪೂರ್ವದಲ್ಲಿ ಪೂರ್ವ ಘಟ್ಟಗಳಿಂದ ಸುತ್ತುವರಿದಿದೆ. ಪಶ್ಚಿಮ ಘಟ್ಟಗಳು ದಕ್ಷಿಣದ ಕಡೆಗೆ ಅಣ್ಣಾಮಲೈ, ಕಾರ್ಡಮಮ್, ಪಳನಿ ಬೆಟ್ಟ ಇತ್ಯಾದಿಯಾಗಿ ಮುಂದುವರಿಯುತ್ತವೆ. ಅಣ್ಣಾಮಲೈನಲ್ಲಿರುವ ‘ಅನೈಮುಡಿ’
(ಸುಮಾರು 2695 ಮೀ.) ಎಂಬುದು ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರವಾದ ಶಿಖರ, ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳು ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ. ಇಲ್ಲಿ ಉದಕ ಮಂಡಲವೆಂಬ ಪ್ರಸಿದ್ಧ ಗಿರಿಧಾಮವಿದೆ. ಪೂರ್ವ ಘಟ್ಟಗಳಿಗಿಂತ ಪಶ್ಚಿಮ ಘಟ್ಟಗಳು ಎತ್ತರವಾಗಿವೆ. ಪಶ್ಚಿಮ ಘಟ್ಟಗಳಲ್ಲಿ ಹಲವು ದಕ್ಷಿಣ ಭಾರತದ ನದಿಗಳು ಉಗಮವಾಗುತ್ತವೆ.

ಪರ್ಯಾಯ ಪ್ರಸ್ಥಭೂಮಿಯು ಸಮೃದ್ಧ ಖನಿಜ ಸಂಪತ್ತುಗಳನ್ನು ಹೊಂದಿದೆ. ಇಲ್ಲಿ ಹರಿಯುವ ನದಿಗಳು ಬೆಳೆಗಳ ಸಾಗುವಳಿಗೆ ನೆರವಾಗುತ್ತವೆ. ಹಾಗೂ ಹಲವು ಜಲಪಾತಗಳಿದ್ದು ಅವು ಜಲವಿದ್ಯುತ್ ತಯಾರಿಕೆಗೆ ಉಪಯುಕ್ತ.

4. ಕರಾವಳಿ ಮೈದಾನಗಳು: ಪರ್ಯಾಯ ಪ್ರಸ್ಥಭೂಮಿಯ ಎರಡೂ ಬದಿ(ಪಕ್ಕ)ಗಳು ಕರಾವಳಿ ಮೈದಾನಗಳಿಂದ ಆವರಿಸಿದೆ. ಅದನ್ನು ಪಶ್ಚಿಮ ತೀರ ಮೈದಾನ ಮತ್ತು ಪೂರ್ವ ತೀರ ಮೈದಾನವೆಂದು ವಿಂಗಡಿಸಬಹುದು.

ಪಶ್ಚಿಮ ಕರಾವಳಿಯು ಅರಬ್ಬಿ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇದೆ. ಇದು ಕಛ್ (ಉತ್ತರ)ನಿಂದ ಕನ್ಯಾಕುಮಾರಿ ಭೂಶಿರ(ದಕ್ಷಿಣ)ದ ವರೆಗೆ ವಿಸ್ತರಿಸಿದೆ. ಇದು ನೇರವಾಗಿದ್ದು ಕಿರಿದಾದ ಶಿಲಾರಚಿತ ಸ್ವರೂಪವುಳ್ಳದ್ದು.

ಪೂರ್ವ ಕರಾವಳಿಯು ಬಂಗಾಳಕೊಲ್ಲಿ ಮತ್ತು ಪೂರ್ವ ಘಟ್ಟಗಳ ಮಧ್ಯೆ, ಉತ್ತರದಲ್ಲಿ ಗಂಗಾ ನದಿಮುಖಜದಿಂದ ದಕ್ಷಿಣದಲ್ಲಿ ಕನ್ಯಾಕುಮಾರಿವರೆಗೆ ವಿಸ್ತರಿಸಿದೆ. ಇದು ಅಗಲವಾಗಿದೆ. ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಪ್ರಮುಖ ಬಂದರುಗಳಿವೆ.

ದ್ವೀಪಗಳು: ಭಾರತದ ಪ್ರಾಂತೀಯ ಜಲರಾಶಿಗಳಲ್ಲಿ 247 ದ್ವೀಪಗಳಿವೆ. ಅವುಗಳಲ್ಲಿ 204 ಬಂಗಾಳಕೊಲ್ಲಿಯಲ್ಲಿವೆ. ಅವುಗಳನ್ನು ಅಂಡಮಾನ್-ನಿಕೋಬಾರ್ ದ್ವೀಪಗಳೆಂದು ಕರೆಯಲಾಗಿದೆ. ಉಳಿದ 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿದ್ದು, ಅವುಗಳನ್ನು ಲಕ್ಷದ್ವೀಪಗಳು ಎನ್ನುವರು. ಅಂಡಮಾನ್ ನಿಕೋಬಾರ್ ದ್ವೀಪಗಳು ಜ್ವಾಲಾಮುಖಿಜನಿತ ಗಟ್ಟಿಶಿಲೆಗಳಿಂದ ರಚನೆಯಾಗಿವೆ. ಆದರೆ ಲಕ್ಷದ್ವೀಪಗಳು ‘ಹವಳ ದಿಣ್ಣೆ’ಗಳಿಂದ ನಿರ್ಮಾಣವಾದವು.

ಅಂಡಮಾನ್-ನಿಕೋಬಾರ್ ದ್ವೀಪ
ಲಕ್ಷದ್ವೀಪಗಳು

ಮರುಭೂಮಿ: ಭಾರತದಲ್ಲೊಂದು ಮರುಭೂಮಿಯಿದೆ. ಅದನ್ನು ‘ಥಾರ್ ಮರುಭೂಮಿ’ ಎನ್ನುವರು. ಇದು ಭಾರತದ ವಾಯುವ್ಯ ಭಾಗದಲ್ಲಿ ವಿಸ್ತರಿಸಿದೆ. ಇದರ ವಿಸ್ತೀರ್ಣದಲ್ಲಿ ಮೂರನೇ ಎರಡು ಭಾಗ ರಾಜಸ್ತಾನದಲ್ಲಿದೆ. ಉಳಿದ ಭಾಗವು ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿದೆ. ಮರುಭೂಮಿಯಲ್ಲಿ ಕೆಲವು ಉಪ್ಪಿನ ಸರೋವರಗಳು ಕಂಡುಬರುತ್ತವೆ. ಸಾಮಾನ್ಯ ಉಪ್ಪು ಪೂರೈಸುವಂತಹ ಹಲವು ಲವಣೀಯ ಸರೋವರಗಳಿವೆ. ಉದಾ : ಸಾಂಬಾರ್, ದಿಡ್ವಾನ್, ಸಾರಗೋಲ್ ಇತ್ಯಾದಿ. ಸಾಂಬಾರ್ ಸರೋವರ ಭಾರತದ ಅತಿ ವಿಸ್ತಾರವಾದ ಉಪ್ಪಿನ ಸರೋವರ.

ಥಾರ್ ಮರುಭೂಮಿ
‘ಥಾರ್ ಮರುಭೂಮಿ’
ಸಾಂಬಾರ್ ಸರೋವರ
ದಿಡ್ವಾನ್ ಸರೋವರ
ಸಾರಗೋಲ್ ಸರೋವರ

ನಮ್ಮ ರಾಜ್ಯವಾದ ಕರ್ನಾಟಕವು ಭಾರತದ ನೈಋತ್ಯ ಭಾಗದಲ್ಲಿದೆ. ವಿಸ್ತೀರ್ಣದಲ್ಲಿ ಭಾರತದ ರಾಜ್ಯಗಳಲ್ಲಿ ಇದು 8ನೆಯ ದೊಡ್ಡ ರಾಜ್ಯ. ಇದು 110 ಮತ್ತು 180 ಉತ್ತರ ಅಕ್ಷಾಂಶ ಹಾಗೂ 740 ಮತ್ತು 780ಪೂರ್ವ ರೇಖಾಂಶ ನಡುವೆ ವಿಸ್ತರಿಸಿದೆ.

ನಮ್ಮ ರಾಜ್ಯವು ಜಲ ಮತ್ತು ನೆಲ ಮೇರೆಗಳೆರಡನ್ನೂ ಹೊಂದಿದೆ. ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ದಿಕ್ಕಿನಲ್ಲಿ ಆಂಧ್ರ ಮತ್ತು ತೆಲಂಗಾಣ ಹಾಗೂ ನೈಋತ್ಯದಲ್ಲಿ ಕೇರಳ ರಾಜ್ಯಗಳಿವೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರವಿದೆ. ರಾಜ್ಯದಲ್ಲಿ 31 ಜಿಲ್ಲೆ ಮತ್ತು 239 ಕಂದಾಯ ತಾಲ್ಲೂಕುಗಳಿವೆ.

ಕರ್ನಾಟಕವು ಭಾರತದ ಪರ್ಯಾಯ ಪ್ರಸ್ಥಭೂಮಿಯ ಒಂದು ಭಾಗವಾಗಿದ್ದು, ವಿವಿಧ ಮೇಲ್ಮೈ ಲಕ್ಷಣಗಳನ್ನು ಹೊಂದಿದೆ. ಪ್ರಾಕೃತಿಕ ರೂಪಾಕೃತಿಯನ್ನಾಧರಿಸಿ ಕರ್ನಾಟಕವನ್ನು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಬಹುದು:

1. ಕರಾವಳಿ ಪ್ರದೇಶ
2. ಮಲೆನಾಡು
3. ಮೈದಾನ.

1. ಕರಾವಳಿ ಪ್ರದೇಶ: ಇದು ಕರ್ನಾಟಕದ ಪಶ್ಚಿಮ ಭಾಗ, ಮಲೆನಾಡು ಮತ್ತು ಅರಬ್ಬಿ ಸಮುದ್ರಗಳ ನಡುವೆ ಕಂಡುಬರುತ್ತದೆ. ಇದು ಉತ್ತರದಲ್ಲಿ ಗೋವಾ ತೀರದಿಂದ ದಕ್ಷಿಣದಲ್ಲಿ ಕೇರಳ ತೀರದವರೆಗೆ (324 ಕಿ.ಮೀ.) ವ್ಯಾಪಿಸಿದೆ. ಇದರಲ್ಲಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಮುದ್ರ ತೀರಗಳು ಸೇರಿವೆ.

ರಾಜ್ಯದ ಕರಾವಳಿ ಉತ್ತರದಲ್ಲಿ ಕಿರಿದಾಗಿದ್ದು ದಕ್ಷಿಣದಲ್ಲಿ ಅಗಲವಾಗಿದೆ. ಈ ಮೂಲಕ ಕರ್ನಾಟಕದ ಪಶ್ಚಿಮಕ್ಕೆ ಹರಿಯುವ ಅನೇಕ ನದಿಗಳು ದಾಟುತ್ತವೆ. ತೀರಕ್ಕೆ ಸಮೀಪದಲ್ಲಿ ಕೆಲವು ದ್ವೀಪಗಳಿವೆ. ಉದಾ: ಸೇಂಟ್‍ಮೇರಿ ದ್ವೀಪ (ಕೋಕನಟ್ ದ್ವೀಪ) ಇತ್ಯಾದಿ. ಈ ಕರಾವಳಿಯಲ್ಲಿ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾದ ನವಮಂಗಳೂರು ಬಂದರಿದೆ. ಅದನ್ನು ‘ಕರ್ನಾಟಕದ ಹೆಬ್ಬಾಗಿಲು’ ಎನ್ನುವರು.

ಸೇಂಟ್‍ಮೇರಿ ದ್ವೀಪ (ಕೋಕನಟ್ ದ್ವೀಪ)
ನವಮಂಗಳೂರು

2. ಮಲೆನಾಡು: ಇದು ಗುಡ್ಡಕಾಡು ಪ್ರದೇಶವಾಗಿದ್ದು, ಕರಾವಳಿ ಮತ್ತು ಮೈದಾನಗಳ ನಡುವೆ ವಿಸ್ತರಿಸಿದೆ. ಇದನ್ನು ‘ಸಹ್ಯಾದ್ರಿ ಸರಣಿಗಳು’ ಎಂತಲೂ ಕರೆಯುವುದು ಜನಪ್ರಿಯವಾಗಿದೆ. ಇದೊಂದು ಕರ್ನಾಟಕದ ಅತಿ ಪ್ರಮುಖ ಪ್ರಾಕೃತಿಕ ವಿಭಾಗ, ಇಲ್ಲಿ ಹೆಚ್ಚು ಮಳೆ ಬೀಳುವುದರಿಂದ ದಟ್ಟವಾದ ಅರಣ್ಯ ಹಾಗೂ ವನ್ಯಧಾಮಗಳಿವೆ. ಅನೇಕ ನದಿಗಳು ಇಲ್ಲಿ ಉಗಮವಾಗುತ್ತವೆ. ಸುಂದರವಾದ ಜಲಪಾತಗಳು (ಉದಾ: ಜೋಗ್ ಜಲಪಾತ) ಹಾಗೂ ಪ್ರವಾಸಿ ಕೇಂದ್ರಗಳಿವೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ‘ಆಗುಂಬೆ’ ಈ ವಿಭಾಗದಲ್ಲಿದೆ. ಕೆಲವು ಎತ್ತರವಾದ ಬೆಟ್ಟಗಳೂ ಇವೆ. ಅವುಗಳಲ್ಲಿ ಒಂದಾದ ‘ಮುಳ್ಳಯ್ಯನಗಿರಿ’ (1913 ಮೀ.) ರಾಜ್ಯದಲ್ಲೇ ಎತ್ತರವಾದುದು.

ಜೋಗ್ ಜಲಪಾತ
‘ಆಗುಂಬೆ’
‘ಮುಳ್ಳಯ್ಯನಗಿರಿ’

3. ಮೈದಾನ ಪ್ರದೇಶ: ಇದು ಮಲೆನಾಡಿನಿಂದ ಪೂರ್ವ ಭಾಗದಲ್ಲಿದ್ದು, ಏರುದಿಣ್ಣೆಗಳಿಂದ ಕೂಡಿದ ಮೇಲ್ಮೈ ಲಕ್ಷಣಗಳನ್ನು ಹೊಂದಿದೆ. ಇದನ್ನು ಈ ಪ್ರದೇಶದ ಮಧ್ಯ ಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯನ್ನಾಧರಿಸಿ ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ: ಉತ್ತರ ಮೈದಾನ ಮತ್ತು ದಕ್ಷಿಣ ಮೈದಾನ

(i) ಉತ್ತರ ಮೈದಾನ: ಸಮತಟ್ಟಾದ ಮೇಲ್ಮೈವುಳ್ಳ ವಿಶಾಲವಾದ ಪ್ರಸ್ಥಭೂಮಿ. ಅಲ್ಲಲ್ಲಿ ಕೆಲವು ಚಪ್ಪಟೆ ಮೇಲ್ತುದಿಯನ್ನುಳ್ಳ ಬೆಟ್ಟಗಳಿವೆ. ಈ ಮೈದಾನದ ಭಾಗವು ಬಸಾಲ್ಟ್ ಶಿಲೆಗಳಿಂದ ರಚಿತವಾಗಿದ್ದು ಕಪ್ಪು ಮಣ್ಣಿನಿಂದ ಆವರಿಸಿದೆ. ಇದು ಪೂರ್ವದ ಕಡೆಗೆ ಇಳಿಜಾರು ಹೊಂದಿದೆ. ಇದನ್ನು ಅನುಸರಿಸಿ ಕೃಷ್ಣಾ ಮತ್ತು ಭೀಮಾ ನದಿಗಳು ಹರಿಯುತ್ತವೆ. ಉತ್ತರ ಮೈದಾನವು ಅತಿ ಕಡಿಮೆ
ಮಳೆಯನ್ನು ಪಡೆಯುತ್ತದೆ.

ಬಸಾಲ್ಟ್ ಶಿಲೆ

(ii) ದಕ್ಷಿಣ ಮೈದಾನ: ಇದನ್ನು ಮೈಸೂರು ಪ್ರಸ್ಥಭೂಮಿ ಎಂದು ಕರೆಯಲಾಗಿದೆ. ಇದು ಸಾಕಷ್ಟು ಏರುದಿಣ್ಣೆಗಳನ್ನುಳ್ಳ ಮೇಲ್ಮೈ ಲಕ್ಷಣ ಹಾಗೂ ಬೆಟ್ಟಗಳ ಸಾಲುಗಳನ್ನು ಹೊಂದಿದೆ. ಅವುಗಳೆಂದರೆ : ಬಿಳಿಗಿರಿರಂಗನ ಬೆಟ್ಟ, ಮಲೆಮಹಾದೇಶ್ವರ ಬೆಟ್ಟ, ನಂದಿ ಬೆಟ್ಟ, ಚಾಮುಂಡಿ ಬೆಟ್ಟ ಮೊದಲಾದವು. ಉತ್ತರ ಮೈದಾನದಂತೆ ಇದೂ ಸಹ ಪೂರ್ವದ ಕಡೆಗೆ ಇಳಿಜಾರಾಗಿದೆ. ಅದನ್ನನುಸರಿಸಿ ಕಾವೇರಿ ನದಿ
ಹರಿಯುವುದು. ಈ ಪ್ರಾಕೃತಿಕ ವಿಭಾಗದ ಬಹುಭಾಗವು ಕೆಂಪು ಮಣ್ಣಿನಿಂದ ಕೂಡಿದೆ. ಉತ್ತರ ಮೈದಾನಕ್ಕಿಂತ ಈ ವಿಭಾಗದಲ್ಲಿ ಹೆಚ್ಚು ಮಳೆ ಬೀಳುವುದು.

ಪರ್ಯಾಯ ದ್ವೀಪ, ವೈವಿಧ್ಯ, ಸಮುದ್ರತೀರ (ಕರಾವಳಿ), ಪ್ರಾಕೃತಿಕ ವಿಭಾಗಗಳು, ಹವಳ, ಘಟ್ಟಗಳು, ಬಸಾಲ್ಟ್.

* ‘ಇಂಡಿಯ’ ಎಂಬ ದೇಶದ ಹೆಸರಿನ ಮೂಲಕ ಗುರುತಿಸಲ್ಪಡುವ ಮಹಾ ಸಾಗರವೇ ಹಿಂದೂ ಮಹಾಸಾಗರ (ಇಂಡಿಯನ್ ಓಶಿಯನ್).

* ಗಂಗಾ ನದಿಯು ಭಾರತದ ಜನರಿಗೆ ಪವಿತ್ರ ನದಿಯಾಗಿದೆ.

* ನಮ್ಮ ದೇಶದ ಮಧ್ಯದಲ್ಲಿ ಹಾಯ್ದು ಹೋಗಿರುವ 821/20 ಪೂರ್ವ ರೇಖಾಂಶ ರೇಖೆಯನ್ನಾಧರಿಸಿ ಭಾರತೀಯ ಪ್ರಮಾಣಿತ ಸಮಯವನ್ನು (Indian Standard Time) ನಿರ್ಧರಿಸಲಾಗಿದೆ.

* ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಾಣ ಬೆಟ್ಟವು ಎರಡು ಕೋಡಗಲ್ಲುಗಳಿಂದ ನಿರ್ಮಾಣಗೊಂಡಿದೆ. ಇಲ್ಲಿಂದ ತಗ್ಗಿಗೆ ತೊರೆಗಳು ಹರಿಯುತ್ತವೆ. ಇದು ಸುತ್ತಲೂ ದಟ್ಟ ಕಾಡುಗಳಿಂದ ಆವರಿಸಿದ್ದು, ಒಂದು ಪ್ರವಾಸಿ ತಾಣವಾಗಿದೆ.

* ವಿಶಿಷ್ಟವಾದ ಆಫ್ರಿಕ ಮೂಲದ ಸೀಸೆ ಆಕೃತಿಯ ಬೃಹದಾಕಾರದ ಬೇಯೋಬಾಬ್ ಮರದ ತೋಪು ಹಾವೇರಿ ಜಿಲ್ಲೆಯ ಸವಣೂರಿನಲ್ಲಿದೆ. (ಇದನ್ನು ಗೋರಖನಾಥ ವೃಕ್ಷ ಎಂದೂ ಕರೆಯುತ್ತಾರೆ).

* ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ ‘ಮುಧೋಳ ಹೌಂಡ್ಸ್’ ಎಂಬ ತಳಿಯ ಬೇಟೆನಾಯಿ ಪ್ರಸಿದ್ಧ ಹಾಗೂ ಅವು ವಿದೇಶಗಳಿಗೂ ರಫ್ತಾಗುತ್ತವೆ.

* ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಕೈಮಗ್ಗದ ಬಟ್ಟೆ (ಸೀರೆ), ಇಳಕಲ್‍ನ ರೇಷ್ಮೆ ಸೀರೆ ಮತ್ತು ಅಥಣಿಯ ಪಾದರಕ್ಷೆಗಳು ಪ್ರಸಿದ್ಧ ಮತ್ತು ಅವುಗಳಿಗೆ ಅಪಾರ ಬೇಡಿಕೆಯಿದೆ.

* ರಾಯಚೂರು ಜಿಲ್ಲೆಯ ಮಸ್ಕಿ ಸಮೀಪದ ಗುಡ್ಡವೊಂದು ಮಲಗಿದ ಬುದ್ದನ ಆಕಾರದಲ್ಲಿದೆ.
ಬಸವಕಲ್ಯಾಣದ (ಬೀದರ್) ಮುಖಾಂತರ ಹರಿಯುವ ಚುಳುಕಿ ನದಿಯು ಬಸವಣ್ಣನವರಿಗೆ ಸ್ಫೂರ್ತಿದಾಯಕವಾಯಿತು.

* ದಾವಣಗೆರೆಯು ಹತ್ತಿ ಜವಳಿ ಉದ್ದಿಮೆಗೆ ಪ್ರಸಿದ್ಧಿಯಾಗಿದ್ದು ಅದನ್ನು `‘ಕರ್ನಾಟಕದ ಮ್ಯಾಂಚೆಸ್ಟರ್’’ ಎಂದು ಕರೆಯಲಾಗಿದೆ.

ಭಾರತದ ಪ್ರಾಕೃತಿಕ ವಿಭಾಗಗಳು | BHARATADA PRAKRUTIKA VIBHAGAGALU| CLASS 7 | SOCIAL SCIENCE | CHAPTER 11
ಭಾರತದ ಪ್ರಾಕೃತಿಕ ವಿಭಾಗಗಳು | 7ನೇ ತರಗತಿ | Bharatada prakrtika vibhagagalu question answer | 7th class|