ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಾ.ಶ. 1857-58) – ಅಧ್ಯಾಯ 16
ಪಾಠದ ಪರಿಚಯ
ಆಧುನಿಕ ಭಾರತದ ಇತಿಹಾಸದಲ್ಲಿ ಸಾ.ಶ. 1857ರ ಸಂವತ್ಸರವು ಒಂದು ಪ್ರಮುಖ ಐತಿಹಾಸಿಕ ಮೈಲಿಗಲ್ಲಾಗಿದೆ. ಬ್ರಿಟಿಷರು ಸಾ.ಶ. 1857ರ ಐತಿಹಾಸಿಕ ಘಟನೆಯನ್ನು ಕೇವಲ ಸಿಪಾಯಿಗಳ ದಂಗೆ ಎಂದು ಪರಿಗಣಿಸಿದರೆ, ಭಾರತೀಯ ರಾಷ್ಟ್ರೀಯವಾದಿಗಳು ಗಟ್ಟಿದನಿಯಲ್ಲಿ ಇದನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಸಾರಿದರು. ಇದು ಮೂಲತಃ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಡೆದ ಮಹಾಹೋರಾಟವಾಗಿತ್ತು. ಸಿಪಾಯಿಗಳು ಮತ್ತು ನಾಗರಿಕರು ಇಬ್ಬರೂ ಸಾಮ್ರಾಜ್ಯಶಾಹಿ ದೊರೆಗಳನ್ನು ಕಿತ್ತೊಗೆಯಲು ಬಯಸಿದರು. ಪ್ರಸ್ತುತ ಅಧ್ಯಾಯದಲ್ಲಿ ಈ ಘಟನೆಯ ಕಾರಣಗಳು, ಸ್ವರೂಪ ಮತ್ತು ಪರಿಣಾಮಗಳನ್ನು ನಿರೂಪಿಸಲಾಗಿದೆ.
ಸಾ.ಶ. 1857ರ ಮಹಾದಂಗೆಯ ಸ್ವರೂಪ
ಬ್ರಿಟಿಷ್ ಇತಿಹಾಸಕಾರರು ಸಾ.ಶ. 1857ರ ಭಾರತೀಯರ ಹೋರಾಟವನ್ನು ಕೇವಲ ಸಿಪಾಯಿಗಳ ದಂಗೆ ಎಂದು ಪರಿಗಣಿಸಿದರು. ಆದರೆ ಭಾರತದ ರಾಷ್ಟ್ರೀಯ ಇತಿಹಾಸಕಾರರು ಅದನ್ನು ಜನತೆಯ ಮಹಾನ್ ಬಂಡಾಯವೆಂದು ಸಾರಿದರಲ್ಲದೆ, `ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದರು.
ಈ ಹೋರಾಟವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಪ್ರಥಮ ಯುದ್ಧವೆಂದು ಕರೆದವರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಮೊದಲಿಗರು. ಪಟ್ಟಾಭಿ ಸೀತಾರಾಮಯ್ಯ ಅವರು ಕೂಡ ಇದನ್ನು ಭಾರತದ ಮೊದಲ ಸ್ವಾತಂತ್ರ್ಯ ಸಮರವೆಂದು ಸಾರಿದರು. ಸೈನಿಕ ದಂಗೆ ಅಲ್ಪಕಾಲದಲ್ಲೇ ಜನತೆಯ ಬಂಡಾಯದ ಸ್ವರೂಪವನ್ನು ಪಡೆದುಕೊಂಡಿತೆಂದು ಜವಾಹರಲಾಲ್ ನೆಹರು ಅಭಿಪ್ರಾಯ ಪಟ್ಟಿದ್ದಾರೆ. ಅದು ದೇಶದ ಬಹುತೇಕ ಜನಸಮುದಾಯಗಳು ಒಂದಾಗಿ ನಡೆಸಿದ ಹೋರಾಟವಾಗಿತ್ತು.



ಸಾ.ಶ. 1857ರ ಹೋರಾಟವು ಭಾರತದ ಇತಿಹಾಸದಲ್ಲಿ ಹೊಸ ರಾಜಕೀಯ ಪ್ರಜ್ಞೆಯನ್ನು ಸೃಷ್ಟಿಸಿತು. ಇದರ ಫಲವಾಗಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳು ವಿವಿಧ ರೂಪಗಳಲ್ಲಿ ಹುಟ್ಟಿ ಬೆಳೆದವು. ಈ ಹೋರಾಟಗಳಲ್ಲಿ ಭಾಗವಹಿಸಿ ಹುತಾತ್ಮರಾದವರು ಬಹುಬೇಗ ದೇಶದಲ್ಲಿ ಮನೆಮಾತಾದರು. ಅವರ ತ್ಯಾಗ ಬಲಿದಾನಗಳನ್ನು ನಾವು ನಿರಂತರವಾಗಿ ಸ್ಮರಿಸಿಕೊಳ್ಳಬೇಕಾಗಿದೆ.
ಸಾ.ಶ. 1857ರ ದಂಗೆಗೆ ಕಾರಣಗಳು
ಬ್ರಿಟಿಷರ ದೀರ್ಘಾವಧಿಯ ಆಡಳಿತದಿಂದ ಭಾರತದ ಆರ್ಥಿಕ ವ್ಯವಸ್ಥೆಯು ರ್ಬಲಗೊಂಡಿತ್ತು. ವಿವಿಧ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ರೈತರು ತೆರಿಗೆಗಳ ಭಾರಕ್ಕೆ ಕುಸಿದಿದ್ದರು. ಕರಕುಶಲ ಕೈಗಾರಿಕೆಗಳು ನಾಶವಾಗತೊಡಗಿ, ಪರಂಪರಾಗತವಾಗಿ ನಂಬಿಕೊಂಡು ಬಂದಿದ್ದ ವೃತ್ತಿಗಳು ತಮ್ಮ ಪ್ರಸ್ತುತತೆ ಅಥವಾ ಶಕ್ತಿಯನ್ನು ಕಳೆದುಕೊಂಡು ಜನರು ಬೀದಿಪಾಲಾದರು. ಇದಕ್ಕೆ ಪ್ರೇರಣೆಯಾದ ಅಂಶಗಳನ್ನು ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆಡಳಿತಾತ್ಮಕ ಮತ್ತು ಸೈನಿಕ ಎಂದು ವಿಂಗಡಿಸಬಹುದು. ಇವುಗಳಲ್ಲಿ ಕೆಲವು ಪ್ರತ್ಯಕ್ಷ ಕಾರಣವಾದರೆ, ಮತ್ತೆ ಕೆಲವು ಪೂರಕ ಕಾರಣಗಳಾಗಿವೆ.
1. ರಾಜಕೀಯ ಕಾರಣ: ಬ್ರಿಟಿಷರ ದಿಗ್ವಿಜಯಗಳು ಮತ್ತು ಉದ್ದೇಶಪೂರ್ವಕ ಆಕ್ರಮಣ ನೀತಿ ಇಲ್ಲಿಯ ಆಳುವ ವರ್ಗ ಮತ್ತು ಜನತೆಯ ಭಾವನೆಗಳಿಗೆ ತೀವ್ರ ಆಘಾತವನ್ನುಂಟುಮಾಡಿತು. ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿ ಮತ್ತು ಲಾರ್ಡ್ ಡಾಲ್‍ಹೌಸಿಯ ಆಕ್ರಮಣಗಳು ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯಿಂದಾಗಿ ಅನೇಕ ಮಹಾರಾಜರು ಮತ್ತು ನವಾಬರು ಪದಚ್ಯುತಿಗೊಳ್ಳುವಂತಾಯಿತು. ಸಾತಾರ, ಜೈಪುರ, ಸಂಬಲ್ ಪುರ, ಉದಯಪುರ, ಝಾನ್ಸಿ, ಔಧ್ ಇವೇ ಮೊದಲಾದ ಪ್ರದೇಶಗಳು ಡಾಲ್‍ಹೌಸಿಯಿಂದ ಆಕ್ರಮಿಸಲ್ಪಟ್ಟವು. ಈ ಸಂಕ್ರಮಣ ಸ್ಥಿತಿಯ ರಾಜಕೀಯ ಒತ್ತಡಗಳಿಂದ ಮೊಗಲ್ ರಾಜ ಬಹಾದೂರ್‍ಷಹ ರಾಜಕೀಯವಾಗಿ ಕೇವಲ ನಾಮಮಾತ್ರ ಚಕ್ರವರ್ತಿಯಾದನು. ಕೆಲವು ರಾಜರ ವಿಶ್ರಾಂತಿ ವೇತನ ತಡೆಹಿಡಿಯಲಾಯಿತು. ರಾಜರ ಬಿರುದುಗಳು ರದ್ದಾದವು.



2. ಆಡಳಿತಾತ್ಮಕ ಕಾರಣ: ಬ್ರಿಟಿಷರು ಎಲ್ಲಾ ನಾಗರಿಕ ಮತ್ತು ಸೈನಿಕ ಉನ್ನತ ಹುದ್ದೆಗಳನ್ನು ಯೂರೋಪಿಯನ್ನರಿಗೆ ಮೀಸಲು ಇಡುವ ಉದ್ದೇಶದಿಂದ ತಮ್ಮ ಹೊಸ ಆಡಳಿತ ವ್ಯವಸ್ಥೆಯನ್ನು ರೂಪಿಸಿದರು. ಈ ವ್ಯವಸ್ಥೆಯ ಸ್ವರೂಪವು ಜನಸಾಮಾನ್ಯರಿಗೆ ಸ್ಪಂದಿಸುವಲ್ಲಿ ವಿಫಲಗೊಂಡಿದ್ದನ್ನು ಬಯಲುಗೊಳಿಸಿತು. ಆಡಳಿತದಲ್ಲಿ ಮಧ್ಯವರ್ತಿಗಳ ಪಾತ್ರ ಪ್ರಮುಖವಾಗಿತ್ತು. ಕಾನೂನಿನ ಆಳ್ವಿಕೆಯು ಸಾಮಾಜಿಕ ಶ್ರೇಣಿ ವ್ಯವಸ್ಥೆಯ ಕುಸಿತಕ್ಕೆ ದಾರಿಮಾಡಿಕೊಟ್ಟಿತು. ಪರ್ಷಿಯನ್ ಭಾಷೆಗೆ ಬದಲಾಗಿ ಇಂಗ್ಲಿಷ್ ನ್ಯಾಯಾಲಯದ ಭಾಷೆಯಾಗಿದ್ದು ಜನತೆಗೆ ಮತ್ತು ಭಾರತೀಯ ಆಳುವ ವರ್ಗಕ್ಕೆ ಸರಿಹೊಂದಲಿಲ್ಲ.

3. ಆರ್ಥಿಕ ಕಾರಣ: ಬ್ರಿಟಿಷರು ತಮ್ಮ ಲಾಭಕ್ಕಾಗಿ ಭಾರತದ ಆರ್ಥಿಕ ಸಂಪನ್ಮೂಲಗಳು ಮತ್ತು ಸಂಪತ್ತನ್ನು ದೋಚುವುದಕ್ಕಾಗಿ ತಮ್ಮ ರಾಜಕೀಯ ಅಧಿಕಾರವನ್ನು ಬಳಸಿಕೊಂಡರು. ಬ್ರಿಟಿಷರ ವ್ಯಾಪಾರಿ ಹಿತಾಸಕ್ತಿಯಿಂದಾಗಿ ಗುಡಿ ಕೈಗಾರಿಕೆ ಮತ್ತು ಇನ್ನಿತರ ಸ್ಥಳೀಯ ಕೈಗಾರಿಕೆಗಳು ನಾಶ ಹೊಂದಿದವು. ಭೂಕಂದಾಯ ನೀತಿಯು ಅತ್ಯಂತ ಶೋಷಣಾತ್ಮಕವಾಗಿತ್ತು. ಅನೇಕ ತಾಲ್ಲೂಕುದಾರರ ಮತ್ತು ಜಮೀನ್ದಾರರ ಸ್ಥಾನಮಾನ ಮತ್ತು ವರಮಾನದ ಮೂಲವನ್ನು ಕಿತ್ತುಕೊಳ್ಳಲಾಯಿತು. ದೊಡ್ಡ ಪ್ರಮಾಣದ ಸಂಪತ್ತಿನ ಹೊರಹರಿವು ಸೃಷ್ಟಿಯಾಯಿತು. ವ್ಯವಸಾಯದ ವಾಣಿಜ್ಯೀಕರಣದಿಂದಾಗಿ ರೈತರ ಆರ್ಥಿಕ ಶಕ್ತಿಯು ಕ್ಷಿಣಿಸಿತು. ತೀವ್ರ ಬರಗಾಲಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು. ಈ ಎಲ್ಲಾ ಅಂಶಗಳು ಭಾರತವನ್ನು ಬಡತನಕ್ಕೆ ತಳ್ಳಿದವು.
4. ಸಾಮಾಜಿಕ ಮತ್ತು ಧಾರ್ಮಿಕ ಕಾರಣ: ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳು ಸಹ ದಂಗೆಯ ಸ್ಫೋಟಕ್ಕೆ ಕಾರಣವಾದವು. ಇಂಗ್ಲಿಷರು ತಮ್ಮ ಜನಾಂಗೀಯ ಶ್ರೇಷ್ಠತೆಯ ಅಮಲಿನಲ್ಲಿದ್ದರು. ಅವರು “ಬಿಳಿಯರ ಮೇಲಿನ ಹೊರೆ” ಸಿದ್ಧಾಂತವನ್ನು ಆಚರಿಸುತ್ತಿದ್ದರು. ಭಾರತೀಯರನ್ನು ನಾಗರೀಕರನ್ನಾಗಿ ಮಾಡಲೆಂದೇ ಬಂದಿದ್ದೇವೆಂದು ಹೇಳತೊಡಗಿದರು. ಅವರು ಭಾರತೀಯರನ್ನು ಸಂಸ್ಕೃತಿ ಮತ್ತು ನಾಗರಿಕತೆಯ ಗಂಧವಿಲ್ಲದ ಅನಾಗರಿಕರು ಎಂದು ವರ್ಣಿಸಿದರು. ಭಾರತೀಯರನ್ನು ಅವರು “ಹಂದಿ”, “ಕರಿ ಮನುಷ್ಯ’’ರು ಇತ್ಯಾದಿ ಪದಗಳಿಂದ ಸಂಬೋಧಿಸುತ್ತಿದ್ದರು. ಯೂರೋಪಿಯನ್ನರ ಮೇಲುಸ್ತುವಾರಿಯಲ್ಲಿದ್ದ ಹೊಟೇಲ್ ಮತ್ತು ಕ್ಲಬ್‍ಗಳಿಗೆ ಭಾರತೀಯರಿಗೆ ಪ್ರವೇಶವಿರಲಿಲ್ಲ. “ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶ ನಿಷಿದ್ಧ” ಎಂಬ ನಾಮಫಲಕಗಳನ್ನು ಅಲ್ಲಿ ತೂಗುಹಾಕಲಾಗಿತ್ತು. ಮೇಲಾಗಿ ಸತಿಪದ್ಧತಿ ಮತ್ತು ಬಾಲ್ಯವಿವಾಹ ನಿಷೇಧ, ವಿಧವಾ ಪುನರ್ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ಈ ಕ್ರಮದಿಂದ ಸಾಂಪ್ರದಾಯಿಕ ಭಾರತೀಯರಿಗೆ ನುಂಗಲಾರದ ತುತ್ತಾಯಿತು. ಜೊತೆಗೆ ಕ್ರೈಸ್ತ ಮತ ಪ್ರಚಾರವು ಸಮಾಜದಲ್ಲಿ ಬ್ರಿಟಿಷರ ವಿರುದ್ಧ ಆಂದೋಲನ ರೂಪಗೊಳ್ಳಲು ಕಾರಣವಾಯಿತು. ಹಿಂದುಗಳು ತಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಿಟಿಷರು ಮಾಡುತ್ತಿರುವ ಹಸ್ತಕ್ಷೇಪ ಎಂದು ಭಾವಿಸಿದರು. ಅಷ್ಟೇ ಅಲ್ಲದೆ ಹೊಸ ರೈಲುಮಾರ್ಗ ಮತ್ತು ಟೆಲಿಗ್ರಾಫ್ ತಂತಿಗಳ ನಿರ್ಮಾಣ ಕಾರ್ಯವು ಬ್ರಿಟಿಷರನ್ನು ಅನುಮಾನದಿಂದ ನೋಡುವಂತಾಯಿತು.
`ಬಿಳಿಯರ ಮೇಲಿನ ಹೊರೆ’ ಎಂದರೆ ಭಾರತೀಯರು ಅನಾಗರಿಕರು. ಅವರನ್ನು ನಾಗರಿಕರನ್ನಾಗಿ ಮಾಡಲು ಯುರೋಪಿಯನ್ನರು ಬಂದಿದ್ದಾರೆ. ಅನಾಗರಿಕರನ್ನು ನಾಗರಿಕರನ್ನಾಗಿಸುವುದು ಬಿಳಿಯರ ಮೇಲಿನ ಜವಾಬ್ದಾರಿ. ಇದೊಂದು ವಸಾಹತುಶಾಹಿಯ ನಾಜೂಕಿನ ತಂತ್ರವಾಗಿತ್ತು. ಈ ಸಿದ್ಧಾಂತ ಕೊಟ್ಟವನು ಕವಿ ರುಡ್‍ಯಾರ್ಡ್ ಕಿಪ್ಲಿಂಗ್.
5. ಸೈನಿಕ ಕಾರಣ: ಭಾರತೀಯ ಸೈನಿಕರಲ್ಲಿ ಅನೇಕ ಅಸಂತೃಪ್ತಿಗಳಿದ್ದವು. ಸೈನಿಕರು ಪಾರಂಪರಿಕವಾಗಿ ಬಳಸುತ್ತಿದ್ದ ಧಾರ್ಮಿಕ ಚಿಹ್ನೆ ಮತ್ತು ಪೇಟಗಳನ್ನು ಧರಿಸಬಾರದೆಂಬ ನಿಷೇಧಕ್ಕೊಳಪಟ್ಟಿದ್ದರು. ಭಾರತೀಯ ಸೈನಿಕರಿಗೆ ಅತ್ಯಂತ ಕಡಿಮೆ ವೇತನ ಇತ್ತು ಮತ್ತು ಮುಂಬಡ್ತಿಯ ಅವಕಾಶಗಳು ಇಲ್ಲದಾಗಿದ್ದವು. ಬ್ರಿಟಿಷ್ ಸೈನಿಕರಿಗೆ ಮಾತ್ರ ಹೆಚ್ಚಿನ ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗಿತ್ತು. ಭಾರತೀಯ ಸೈನಿಕರನ್ನು ಅತ್ಯಂತ ದೂರ ಪ್ರದೇಶಗಳಿಗೆ ಕಾರ್ಯನಿಮಿತ್ತ ಹೆಚ್ಚುವರಿ ವೇತನ ನೀಡದೆ ನಿಯೋಜಿಸಲಾಗುತ್ತಿತ್ತು. ಲಾರ್ಡ್ ಕ್ಯಾನಿಂಗನ “ಸಾಮಾನ್ಯ ಸೇನಾಸೇವಾ ಕಾಯಿದೆ”ಯ ಪ್ರಕಾರ ಎಲ್ಲಾ ಸೈನಿಕರು ಬ್ರಿಟಿಷ್ ಆದೇಶದಂತೆ ಎಲ್ಲೆಂದರಲ್ಲಿ ಕಾರ್ಯನಿಮಿತ್ತ ತೆರಳಬೇಕಿತ್ತು.

6. ತಕ್ಷಣದ ಕಾರಣ: ಜನಸಮೂಹದ ದಂಗೆಗೆ ಸಾ.ಶ. 1857ರ ಸನ್ನಿವೇಶ ಪರಿಪಕ್ವವಾಗಿತ್ತು. ಅವರಲ್ಲಿ ಕಿಚ್ಚೆಬ್ಬಿಸಲು ಒಂದೇ ಒಂದು ಕಿಡಿ ಸಾಕಾಗಿತ್ತು. ಸಾ.ಶ. 1857ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು (ಎನ್‍ಫೀಲ್ಡ್ ರೈಫಲ್) ಸೇನೆಯಲ್ಲಿ ತೊಡಗಿಸಿದ್ದು ಸಿಪಾಯಿ ದಂಗೆಗೆ ತಕ್ಷಣದ ಕಾರಣವಾಯಿತು. ಎನ್‍ಫೀಲ್ಡ್ ಬಂದೂಕುಗಳಿಗೆ ತೋಟಾ (ಕಾರ್ಟ್‍ರಿಡ್ಜ್)ಗಳನ್ನು ತುಂಬುವ ಮುನ್ನ ಅದಕ್ಕೆ ಹೊದಿಸಿದ ಕಾಗದವನ್ನು ಹಲ್ಲಿನಿಂದ ಕಚ್ಚಿ ಹರಿಯಬೇಕಿತ್ತು. ಈ ಕಾಗದಕ್ಕೆ ಹಂದಿ ಮತ್ತು ಗೋವಿನ ಕೊಬ್ಬು ಬಳಸಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಸೈನಿಕರಲ್ಲಿ ಹಬ್ಬಿತು. ಇದು ಮುಸ್ಲಿಂ ಮತ್ತು ಹಿಂದೂ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವುದಾಗಿತ್ತು. ಯಾವ ಸೈನಿಕರು ಅವುಗಳನ್ನು ಬಳಸಲು ನಿರಾಕರಿಸಿದರೋ ಅಂಥವರು ಇಂಗ್ಲಿಷರಿಂದ ಶಿಕ್ಷೆಗೊಳಗಾದರು.
ದಂಗೆಯ ಗತಿ: ಮೀರತ್‍ನಲ್ಲಿ ದಂಗೆಯು ಸಾ.ಶ. 1857ರ ಮೇ 10ರಂದು ಆರಂಭವಾಯಿತು. ಆನಂತರ ಉತ್ತರ ಭಾರತದ ಪ್ರಾಂತ್ಯಗಳಾದ್ಯಂತ ವ್ಯಾಪಕವಾಗಿ ತೀವ್ರಗೊಂಡು ಬಲಯುತವಾಯಿತು. ಮೀರತ್‍ನಲ್ಲಿ ದಂಗೆ ಸ್ಫೋಟಗೊಳ್ಳುವ ಮೊದಲೇ ಬ್ಯಾರಕ್‍ಪುರದ (ಬಂಗಾಲ) ಭಾರತೀಯ ಸಿಪಾಯಿ ಮಂಗಲ್‍ಪಾಂಡೆ ಕೊಬ್ಬು ಸವರಿದ ಬಂದೂಕನ್ನು ಬಳಸಲು ತಿರಸ್ಕರಿಸಿ, ಬಹಿರಂಗವಾಗಿಯೇ ಬ್ರಿಟಿಷ್ ಅಧಿಕಾರಿಯೊಬ್ಬನಿಗೆ ಗುಂಡಿಕ್ಕಿ ಕೊಂದನು. ನಂತರ ಅವನು ಸಹ ಕೊಲ್ಲಲ್ಪಟ್ಟನು. ಮೀರತ್‍ನಲ್ಲಿ ಕಣ್ಣಿಗೆ ಬಿದ್ದ ಪ್ರತಿಯೊಬ್ಬ ಯೂರೋಪಿಯನರನ್ನು ಸಿಪಾಯಿಗಳು ಕೊಂದರು. ‘ಮಾರೋ ಫರಂಗಿಕೋ’ (ಯುರೋಪಿಯನ್ನರನ್ನು ಕೊಲ್ಲಿ) ಎಂದು ಉದ್ರಿಕ್ತರು ಅರಚುತ್ತಾ ದಿಲ್ಲಿಯ ಕಡೆಗೆ ಧಾವಿಸಿದರು. ದಿಲ್ಲಿಯಲ್ಲಿ ಸಿಪಾಯಿಗಳು ವೃದ್ಧ ಮತ್ತು ಶಕ್ತಿಹೀನ ಮೊಗಲ್ ದೊರೆ ಎರಡನೇ ಬಹಾದೂರ್ ಷಹನನ್ನು ಭಾರತದ ಚಕ್ರವರ್ತಿ ಎಂದು ಘೋಷಣೆ ಮಾಡಿದರು.


ಪರಂಗಿ: ಪರಂಗಿ ಪದವು ಪರ್ಷಿಯನ್ ಮೂಲದ್ದಾಗಿದೆ. ಇದನ್ನು ಉರ್ದು ಮತ್ತು ಹಿಂದಿಗಳಲ್ಲಿ ಯುರೋಪಿಯನ್ನರನ್ನು ಕೀಳಾಗಿ ಸೂಚಿಸಲು ಬಳಸಲಾಗುತ್ತಿತ್ತು.
ಅಲ್ಪಕಾಲದಲ್ಲೇ ದಂಗೆಯು ವ್ಯಾಪಕವಾಗಿ ಹಬ್ಬಿತು. ಕ್ರಾಂತಿಯ ಪ್ರಮುಖ ಕೇಂದ್ರಗಳೆಂದರೆ ದಿಲ್ಲಿ, ಕಾನ್ಪುರ, ಲಕ್ನೋ, ಬರೇಲಿ, ಝಾನ್ಸಿ ಮತ್ತು ಬಿಹಾರದ ಆರಾ.

ದಿಲ್ಲಿಯಲ್ಲಿ ಸೇನಾಪತಿ ಬಖ್ತ್‍ಖಾನ್, ಕಾನ್ಪುರದಲ್ಲಿ ನಾನಾ ಸಾಹೇಬ್ ಮತ್ತು ತಾಂತ್ಯಾ ಟೋಪಿ, ಲಕ್ನೋದಲ್ಲಿ ಬೇಗಮ್ ಹಜ್ರತ್ ಮಹಲ್, ಝಾನ್ಸಿಯಲ್ಲಿ ಲಕ್ಷ್ಮೀಬಾಯಿ ಮತ್ತು ಬಿಹಾರದಲ್ಲಿ ಕುಂವರ್ ಸಿಂಗ್‍ರವರ ನೇತೃತ್ವದಲ್ಲಿ ದಂಗೆಗಳು ನಡೆದವು. ಬ್ರಿಟಿಷರು ದಂಗೆಯನ್ನು ಒಂದೊಂದಾಗಿ ದಮನಮಾಡಿದರು. ಬಂಡಾಯವು ಉತ್ತರ ಭಾರತಕ್ಕೆ ಸೀಮಿತವಾಗಿರದೆ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳನಾಡು, ಕೇರಳ, ಗೋವಾ ಮತ್ತು ಪಾಂಡಿಚೇರಿಗಳಿಗೂ ಹಬ್ಬಿತು. ಕರ್ನಾಟಕದಲ್ಲಿ ಮುಂಡರಗಿ ಭೀಮರಾವ್, ಹಲಗಲಿ ಬೇಡ ಜನಾಂಗದವರು, ಸುರಪುರದ ವೆಂಕಟಪ್ಪ ನಾಯಕ ಮತ್ತು ನರಗುಂದದ ಬಾಬಾಸಾಹೇಬ ಮುಖ್ಯ ನಾಯಕರಾಗಿದ್ದರು. ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲೆಡೆ ಬಂಡಾಯವು ವ್ಯಾಪಕವಾಗಿ ನಡೆದರೂ ಕೂಡ ಅಲ್ಪ ಸಮಯದೊಳಗೆ ಬ್ರಿಟಿಷರು ದಂಗೆಯನ್ನು ದಮನ ಮಾಡಿದರು.








ಫಲಿತಾಂಶಗಳು:
ನಾನಾ ಸಾಹೇಬ್ ಈ ಹೋರಾಟವು ವಿಫಲಗೊಂಡರೂ ಅದು ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡಿತು. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿತು. ಈ ಹೋರಾಟದ ಪರಿಣಾಮವಾಗಿ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಅಂತ್ಯಗೊಂಡು ಅದರ ಕೈಯಲ್ಲಿದ್ದ ಭಾರತದ ಆಳ್ವಿಕೆಯನ್ನು ಬ್ರಿಟಿಷ್ ರಾಣಿ ವಹಿಸಿಕೊಂಡಳು. ಸಾ.ಶ. 1858ರಲ್ಲಿ ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಒಂದು “ಘೋಷಣೆ”ಯನ್ನು ಹೊರಡಿಸಿದಳು. ಈ ಘೋಷಣೆಯು ಭಾರತೀಯರ ಹಕ್ಕುಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಗೌರವಿಸುವುದಾಗಿ ಭರವಸೆ ನೀಡಿತು. ಅದು ಜನರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪಮಾಡುವುದಿಲ್ಲವೆಂದು ಸ್ಪಷ್ಟಪಡಿಸಿತು.

ಸಾ.ಶ. 1857-58ರ ಹೋರಾಟವು ಮುಂದೆ ಆಧುನಿಕ ರಾಷ್ಟ್ರೀಯ ಚಳವಳಿಯ ಉದಯಕ್ಕೆ ನಾಂದಿ ಹಾಡಿತು. ಇದು ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ನಿರಂತರ ಸ್ಫೂರ್ತಿಯ ಮೂಲವಾಗಿ ಪರಿಣಮಿಸಿತು.
ವಿಡಿಯೋ ಪಾಠ
ಪ್ರಶ್ನೋತ್ತರಗಳು
* * * * * * *