ಭಾಗ್ಯದ ಬಳೆಗಾರ – ಪದ್ಯಭಾಗ-3

-ಜನಪದಗೀತೆ

ಪ್ರವೇಶ : ಶಾಲೆಯಲ್ಲಿ ನಾಡ ಹಬ್ಬದ ಸಂಭ್ರಮ. ಯಾವ ಯಾವ ಮನೋರಂಜನಾ ಕಾರ್ಯಕ್ರಮ ನೀಡಬೇಕೆಂದು ಮಕ್ಕಳಲ್ಲಿ ಚರ್ಚೆ ಪ್ರಾರಂಭವಾಯಿತು. ಹಾಡು, ನಾಟಕ, ನೃತ್ಯ, ಪ್ರಹಸನ ಹೀಗೆ ಪಟ್ಟಿ ಬೆಳೆಯಿತು. ಪೂರ್ಣಿಮಾಳ ಗುಂಪಿಗೆ ನೃತ್ಯಮಾಡುವ ಜವಾಬ್ದಾರಿ ನೀಡಲಾಯಿತು. ಯಾವ ನೃತ್ಯ ಎಂದಾಗ ಜನಪದ ನೃತ್ಯ ಎಂದು ಶ್ರುತಿ ಹೇಳಿದಳು. ಅರವಿಂದ ಸಿನೆಮಾ ಹಾಡಿಗೆ ನೃತ್ಯ ಮಾಡೋಣ ಎಂದ. ಆದರೆ ಉಳಿದವರು ಒಪ್ಪಲಿಲ್ಲ. ನಮ್ಮಲ್ಲಿ ಬಗೆಬಗೆಯ ಹಾಡುಗಳಿವೆ, ಹಳ್ಳಿಯ ಜನ ಪ್ರೀತಿಯಿಂದ ಅದನ್ನು ರಚಿಸಿದ್ದಾರೆ. ಅದರಲ್ಲಿ ಸೊಗಸಾದ ಭಾಷೆ ಇದೆ. ತುಂಬಾ ಅರ್ಥವೂ ಇರುತ್ತದೆ. ರಾಗ ಹಾಕಲೂ ಚೆಂದ ಎಂಬ ಮಾತುಗಳು ಕೇಳಿಬಂದವು. ಮಕ್ಕಳು ಅಭ್ಯಾಸಮಾಡಿ ಒಂದು ಜನಪದ ನೃತ್ಯವನ್ನು ಪ್ರದರ್ಶನ ಮಾಡಿದರು. ಎಲ್ಲರೂ ಅದರ ಸೊಗಸನ್ನು ಮೆಚ್ಚಿದರು. ಹಲವು ದಿನಗಳು ಹಲವರ ಬಾಯಲ್ಲಿ ಆ ನೃತ್ಯದ ಹಾಡುಗಳು ಗುನುಗುಡುತ್ತಿದ್ದವು.

ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ ||
ನಿನ್ನ ತವರೂರ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
ತೋರಿಸು ಬಾರೇ ತವರೂರ ||1||

ಬಾಳೆ ಬಲಕ್ಕೆ ಬಿಡೊ ಸೀಬೆ ಎಡಕ್ಕೆ ಬಿಡೊ
ನಟ್ಟನಡುವೇಲಿ ನೀ ಹೋಗೋ ಬಳೆಗಾರ
ಅಲ್ಲಿಹುದೇ ನನ್ನ ತವರೂರು|
ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ ||2||

ಆಲೆ ಆಡುತಾವೆ ಗಾಣ ತಿರುಗುತಾವೆ
ನವಿಲು ಸಾರಂಗ ನಲಿತಾವೆ ಬಳೆಗಾರ
ಅದೇ ಕಾಣೋ ನನ್ನ ತವರೂರು|
ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ ||3||

ಹಂಚಿನ ಮನೆ ಕಾಣೋ ಕಂಚಿನ ಕದ ಕಾಣೊ
ಮಿಂಚಾಡೊವೆರಡು ಗಿಣಿ ಕಾಣೊ ಬಳೆಗಾರ
ಅಲ್ಲಿಹುದೇ ನನ್ನ ತವರೂರು|
ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ ||4||

ಮುತ್ತೈದೆ ಹಟ್ಟೀಲಿ ಮುತ್ತೀನ ಚಪ್ಪರ ಹಾಕಿ
ನಟ್ಟ ನಡುವೇಲಿ ಪಗಡೆಯ ಆಡುತಾಳೆ
ಅವಳೆ ಕಾಣೊ ಎನ್ನ ಹಡೆದವ್ವಾ|
ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ ||5||

ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ
ಎನ್ನ ಹಡೆದವ್ಗೆ ಬಲು ಆಸೆ ಬಳೆಗಾರ
ಕೊಂಡ್ಹೋಗೊ ಎನ್ನ ತವರೀಗೆ|
ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರೀಗೆ ||6||

ಆಶಯ : ಬಳೆಗಾರ ಊರಿಂದೂರು ತಿರುಗಿ ಬಳೆಗಳನ್ನು ಮಾರುತ್ತಾನೆ. ಹತ್ತಾರು ಊರುಗಳ, ಹಲವು ಜನರ ಪರಿಚಯ ಅವನಿಗಿರುತ್ತದೆ. ಈ ಗೀತೆಯಲ್ಲಿ ತನ್ನ ತಾಯಿಗೆ ಬಳೆಗಳೆಂದರೆ ಇಷ್ಟ. ಅದನ್ನು ಕೊಂಡುಹೋಗಲು ಬಳೆಗಾರನಿಗೆ ಹೇಳುವ ಹೆಣ್ಣಿನ ಮತ್ತು ಪ್ರಶ್ನೆ ಕೇಳುವ ಬಳೆಗಾರನ ಸಂಭಾಷಣೆ ಈ ಗೀತೆಯಲ್ಲಿದೆ. ತಾಯಿಯ ಮನೆಯ ದಾರಿಯನ್ನು ಹೆಣ್ಣುಮಗಳು ತಿಳಿಸುವ ರೀತಿಯಲ್ಲಿ ಸೊಗಸಿದೆ. ಹಳ್ಳಿಯ ಮನೆಯ ಮತ್ತು ಪರಿಸರದ ಸುಂದರವಾದ ಚಿತ್ರಣವಿದೆ. ತನ್ನ ತವರಿನ ಬಗೆಗೆ ಮಗಳಿಗೆ ಅಪಾರ ಪ್ರೀತಿಯಿದೆ. ಹಳ್ಳಿಗಳಲ್ಲೂ ಇಂದು ಅಪರೂಪವಾಗಿರುವ ಈ ಪರಿಸರವನ್ನು, ಅರಿಯಲು ಈ ಹಾಡು ಅವಕಾಶಮಾಡಿಕೊಡುತ್ತದೆ. ಬರಿಯ ಮರಗಿಡ ಪಕ್ಷಿಗಳ ಮೂಲಕವೇ ತವರಿನ ಗುರುತು ಮಾಡಿಕೊಡುವ ಹೆಣ್ಣುಮಗಳ ಜಾಣ್ಮೆಯನ್ನು ಇಲ್ಲಿ ಕಾಣಬಹುದಾಗಿದೆ.

ಪದಗಳ ಅರ್ಥ

ತವರು – ತಾಯಿಯ ಮನೆ;
ಬಾಳೆ – ಬಾಳೆಯಗಿಡ;
ಸೀಬೆ – ಪೇರಳೆ;
ಮುತ್ತೈದೆ – ಮದುವೆಯಾದ ಹೆಣ್ಣು ;
ಕಂಚು – ಒಂದು ಲೋಹ;
ಮಿಂಚಾಡು – ಹೊಳೆಯುವುದು;
ಗಿಣಿ – ಗಿಳಿ;
ಆಲೆ -ಕಬ್ಬಿನ ರಸ ತೆಗೆಯುವ ಯಂತ್ರ, ಗಾಣ;
ಸಾರಂಗ – ಮೈಮೇಲೆ ಚುಕ್ಕೆಗಳಿರುವ ಜಿಂಕೆ;
ಪಗಡೆ – ಒಂದು ರೀತಿಯ ಆಟ;
ನಟ್ಟ ನಡುವೆ – ಮಧ್ಯೆ;
ಹಟ್ಟಿ – ಮನೆ;
ಹಡೆದವ್ವ – ಹೆತ್ತ ತಾಯಿ;
ಕೊಂಡ್ಹೋಗು – ತೆಗೆದುಕೊಂಡುಹೋಗು.

ವಿವರಣೆ

ಜಾನಪದ – ಜನಪದಕ್ಕೆ ಸಂಬಂಧಿಸಿದ ಅಧ್ಯಯನ,
ಜನಪದ – ಜನ ಸಾಮಾನ್ಯರಿಗೆ ಸಂಬಂಧಿಸಿದ್ದು,
ಪಗಡೆ – ಹಾಸು (ಪಟ್ಟ), ಕಾಯಿ, ದಾಳ ಬಳಸಿ ಆಡುವ ಒಂದು ರೀತಿಯ ಆಟ.

ಸಂವೇದ ವಿಡಿಯೋ ಪಾಠಗಳು

Samveda – 7th – Kannada – Bhagyada Balegara

ಪದ್ಯದ ಮಾದರಿ ಗಾಯನ

Bhagyada Balegaara Kannada Janapada Song
ಭಾಗ್ಯದ ಬಳೆಗಾರ 7ನೇ ತರಗತಿ ಕನ್ನಡ ಭಾಷೆಯ ಮೂರನೇ ಪದ್ಯ. Bhagyada Balegara 7th Standard kannada Poem
Bhagyada Balegara – Kannada Traditional Folk Song – B R Chaya, K Yuvaraj

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಭಾಷಾಭ್ಯಾಸ – ನುಡಿಗಟ್ಟು

ಒಂದು ಭಾಷೆಯನ್ನಾಡುವ ಜನ ತಮ್ಮ ನಿತ್ಯೋಪಯೋಗದಲ್ಲಿ ಇರುವ ಮೂಲಸಾಮಗ್ರಿಯನ್ನೇ ಉಪಯೋಗಿಸಿ-ಒಂದು ಹೊಸ ರೂಪವನ್ನು ಸೃಷ್ಟಿ ಮಾಡಲು ಅಥವಾ ಇರುವ ರೂಪಕ್ಕೆ ಹೊಸ ಅರ್ಥವನ್ನು ತಾತ್ಕಾಲಿಕವಾಗಿ ಹೊಂದಿಸಿ ಪ್ರಯೋಗಿಸಲು ಶಕ್ತರಾಗುತ್ತಾರೆ. ಅಂಥ ಪ್ರಯೋಗಗಳನ್ನು ನುಡಿಗಟ್ಟುಗಳೆಂದು ಗುರುತಿಸುವುದು ವಾಡಿಕೆ. ಅವರಿಬ್ಬರಿಗೆ ಎಣ್ಣೆ ಸೀಗೆ ಎಂದಾಗ, ಪರಸ್ಪರ ವಿರೋಧಿಗಳು ಎಂದರ್ಥ. ಇವನ್ನು ಎಣ್ಣೆ-ತುಪ್ಪ, ಸೀಗೆ-ತುಪ್ಪ ಎಂದಿತ್ಯಾದಿಯಾಗಿ ಉಪಯೋಗಿಸಲು ಬರುವುದಿಲ್ಲ. ಹಣ್ಣು ತಿನ್ನು, ರೊಟ್ಟಿ ತಿನ್ನು ಎಂಬಿತ್ಯಾದಿ ರಚನೆಗಳನ್ನನುಸರಿಸಿ, ಪೆಟ್ಟು ತಿನ್ನು ಎಂಬುದೂ ಮೊದಲು ಚಮತ್ಕಾರಕ್ಕೋ ಹಾಸ್ಯಕ್ಕೋ ಆರಂಭವಾಗಿ ಆಕರ್ಷಕವಾಗಿದ್ದುದರಿಂದ ಸ್ಥಿರವಾಗಿ ಬಳಕೆಯಾಗುತ್ತಿದೆ. ಕಣ್ಣಿಗೆ ಬೀಳು, ಕಣ್ಣು ಬಂತು, ಬಾಲಬಿಚ್ಚು, ಮೂಗುತೂರಿಸು, ಹೊಟ್ಟುಕುಟ್ಟು, ತೋಟದೂರ, ಮೀಸೆ ಮಣ್ಣಾಗು, ಬೇಳೆಬೇಯೊಲ್ಲ, ಕಿವಿಕಚ್ಚು, ಹರಟೆಕೊಚ್ಚು, ಬೆಟ್ಟುಮಡಿಸು, ಟೋಪಿ ಹಾಕು, ಹುಬ್ಬು ಹಾರಿಸು, ತಾರಮ್ಮಯ್ಯ ಆಡು- ಮೊದಲಾದವು ಹೊಸಗನ್ನಡದಲ್ಲಿ ಬೆಳಕಿಗೆ ಬಂದಿರುವ ನುಡಿಗಟ್ಟುಗಳು.

ನುಡಿಗಟ್ಟುಗಳು ವ್ಯಾಕರಣ ನಿಯಮದ ಕಟ್ಟಿಗೆ ಒಳಗಾಗದೆ, ಒಂದು ಭಾಷೆಯನ್ನಾಡುವ ಜನರ ಅನುಭವ, ಅಗತ್ಯ ಹಾಗೂ ಸಂದರ್ಭಕ್ಕೆ ಸರಿಯಾಗಿ ರೂಪುಗೊಳ್ಳುತ್ತವೆ. ಆಕರ್ಷಕವಾಗಿ, ಸಶಕ್ತವಾಗಿದ್ದಲ್ಲಿ ಬಹುಕಾಲ ನೆಲೆ ನಿಲ್ಲುತ್ತವೆ. ಇಲ್ಲದಿದ್ದರೆ ಅಳಿಸಿ ಹೋಗುತ್ತ, ಮರುಹುಟ್ಟು-ಪಡೆಯುತ್ತವೆ.

ಕೆಳಕಂಡ ನುಡಿಗಟ್ಟುಗಳನ್ನು ಗಮನಿಸಿ :
* ಕಿಡಿಕಾರು (ಸಿಟ್ಟಿಗೇಳು) : ದುರ್ಯೋಧನನನ್ನು ಕಾಣುತ್ತಲೇ ಭೀಮನು ಕಿಡಿಕಾರಿದನು.
* ತಲೆದೂಗು (ಒಪ್ಪು) : ಯಕ್ಷಗಾನ ಪಾತ್ರಧಾರಿಯ ಕುಣಿತ ಕಂಡು ಪ್ರೇಕ್ಷಕರು ತಲೆದೂಗಿದರು.
* ಮುಖ ಅರಳು (ಸಂತೋಷವಾಗು) : ತಾಯಿಯನ್ನು ಕಾಣುತ್ತಲೇ ಮಗುವಿನ ಮುಖ ಅರಳಿತು.
* ಮೇಲುಗೈ (ಗೆಲುವು) : ಹಾಕಿ ಆಟದಲ್ಲಿ ಭಾರತದ ಮಹಿಳೆಯರು ಜಪಾನ್ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.

ಚೆನ್ನುಡಿ

“ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ | ಪೆಣ್ಣಲ್ಲವೆ ಪೊರೆದವಳು| ಪೆಣ್ಣುಪೆಣ್ಣೆಂದೇತಕೆ ಬೀಳುಗಳೆವರು| ಕಣ್ಣು ಕಾಣದ ಗಾವಿಲರು|”

– ಸಂಚಿಯ ಹೊನ್ನಮ್ಮ (‘ಹದಿಬದೆಯ ಧರ್ಮ’ ಎಂಬ ಸಾಂಗತ್ಯ ಕೃತಿಯನ್ನು ರಚಿಸಿದವರು)