ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ – ಅಧ್ಯಾಯ – 8
ಪಾಠದ ಪರಿಚಯ
ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಆಳ್ವಾರರು, ದಾಸರು ಮತ್ತು ಉತ್ತರ ಭಾರತದಲ್ಲಿ ಸಂತರು, ಸೂಫಿಗಳು ಭಕ್ತಿ ಪಂಥದ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದರು. ಈ ಅಧ್ಯಾಯದಲ್ಲಿ ಭಕ್ತಿ ಪಂಥದ ಆಶಯ, ಅರ್ಥ ಮತ್ತು ಲಕ್ಷಣಗಳನ್ನು ಹೇಳಲಾಗಿದೆ. ದಕ್ಷಿಣ ಭಾರತದಲ್ಲಿನ ಆಂಡಾಳ್, ಅಕ್ಕಮಹಾದೇವಿ, ಕನಕದಾಸರು, ಪುರಂದರದಾಸರು, ಶಿಶುನಾಳ ಶರೀಫ್ ರನ್ನು ಪರಿಚಯಿಸಲಾಗಿದೆ. ಅದರಂತೆ ಉತ್ತರ ಭಾರತದಲ್ಲಿನ ಕಬೀರದಾಸ, ಗುರುನಾನಕ್, ತುಳಸೀದಾಸ, ಮೀರಾಬಾಯಿ, ಶ್ರೀಚೈತನ್ಯ ಹಾಗೂ ಸೂಫಿ ಸಂತರನ್ನು ಪರಿಚಯಿಸಲಾಗಿದೆ. ಜೊತೆಗೆ ಭಕ್ತಿಪಂಥವು ವಿಭಿನ್ನ ಧರ್ಮೀಯರ ನಡುವೆ ಸಾಧಿಸಿದ ಸಾಮರಸ್ಯವನ್ನು ಹಾಗೂ ಸ್ಥಳೀಯ ಭಾಷೆಗಳ ಸಂಪನ್ನತೆಗೆ ನೀಡಿದ ಕೊಡುಗೆಗಳನ್ನು ವಿವರಿಸಲಾಗಿದೆ.
ಭಾರತವು ವೈವಿಧ್ಯಮಯವಾದ ಸಾಮಾಜಿಕ ಆಚರಣೆಗಳನ್ನು ಹೊಂದಿರುವ ದೇಶವಾಗಿದ್ದು ಮಧ್ಯಯುಗದ ಜನತೆ ಸಾಮಾಜಿಕ ಮತ್ತು ಧಾರ್ಮಿಕ ಬದಲಾವಣೆಗಳನ್ನು ಬಯಸಿದ ಕಾರಣ ಆ ಸಂದರ್ಭದಲ್ಲಿ ಉದಯಿಸಿದ ಕೆಲವು ಭಕ್ತಿ ಪಂಥ ಮತ್ತು ಸೂಫಿ ಪರಂಪರೆಯ ಸಂತರು ಸುಧಾರಣೆಗೆ ಮುಂದಾದರು.
ಅವರು ವಿಶ್ವ ಸಹೋದರತೆಗೆ ಮಹತ್ವ ನೀಡಿ, ಮೋಕ್ಷ ಸಾಧನೆಗೆ ಭಕ್ತಿಯು ಉತ್ತಮ ಮಾರ್ಗವೆಂದು ಸಾರಿದರು. ಈ ಸಂಪ್ರದಾಯವನ್ನು ಭಕ್ತಿ ಪಂಥ ಎನ್ನುವರು.
ಭಕ್ತಿ ಎಂಬ ಸಂಸ್ಕೃತ ಪದವು ಭುಜ್ ಎಂಬ ಮೂಲದಿಂದ ಬಂದಿದೆ. ಭುಜ್ ಎಂದರೆ ಸ್ವೀಕರಿಸು ಎಂದರ್ಥವಾಗುತ್ತದೆ.
ಭಕ್ತಿ ಪಂಥದ ಸಾರ:-
1. ಭಕ್ತಿ ಪಂಥವು ಮೇಲು ಕೀಳು ಎಂಬ ಭೇದಭಾವವನ್ನು ಖಂಡಿಸಿತು. ಸಮಾನತೆಯನ್ನು ಸಾರಿತು.
2. ಭಕ್ತಿಪಂಥದ ಸಂತರು ಕಂದಾಚಾರವನ್ನು ವಿರೋಧಿಸಿ ಅದನ್ನು ಖಂಡಿಸಿದರು.
3. ಇವರು ಜನರ ಹೃದಯವನ್ನು ಬೆಸೆಯುವ ಕಾರ್ಯ ಮಾಡಿದರು.
4. ಸೂಫಿ ಸಂತರು ಧರ್ಮವೆಂದರೆ ಪ್ರೇಮ ಹಾಗೂ ಮಾನವ ಸೇವೆ ಎಂದು ಸಾರಿದರು. ದೇವರು ಒಬ್ಬನೇ ಹಲವಾರು ದೇವರುಗಳು ಇಲ್ಲ ಎಂದು ಸಾರಿದರು.
ದಕ್ಷಿಣ ಭಾರತದ ಭಕ್ತಿ ಪರಂಪರೆ
ಆಂಡಾಳ್:
ತಮಿಳುನಾಡಿನ ವಿಷ್ಣುಭಕ್ತರಾದ 12 ಮಂದಿ ಆಳ್ವಾರಲ್ಲಿ ‘ಆಂಡಾಳ್’ ಕೂಡಾ ಒಬ್ಬರು. ಇವರು ವಿಷ್ಣುಚಿತ್ತರ ಸಾಕುಮಗಳು. ವಿಷ್ಣುಚಿತ್ತರೂ ಒಬ್ಬ ಆಳ್ವಾರ್. ಇವರನ್ನು ಪೆರಿಯಾಳ್ವಾರ್ ಎಂಬ ಹೆಸರಿನಿಂದ ಕರೆಯುತ್ತಾರೆ. ಆಂಡಾಳ್‍ರ ಮೂಲ ಹೆಸರು ಗೋದಾದೇವಿ. ಇವರು ಕೃಷ್ಣನ ಭಕ್ತರು. ಶ್ರೀವಿಲ್ಲಿಪುತ್ತೂರಿನಲ್ಲಿರುವ ಕೃಷ್ಣದೇವಸ್ಥಾನಕ್ಕೆ ಇವರ ತಂದೆ ಹೂಮಾಲೆ ಮಾಡಿ ದೇವರಿಗೆ ಮುಡಿಸುತ್ತಿದ್ದರು. ಆಂಡಾಳ್‍ರವರು ಕೃಷ್ಣನನ್ನೇ ಪ್ರೇಮಿಸಿ, ಆತನೇ ತನ್ನ ಗಂಡನೆಂದು ಹೇಳುತ್ತಿದ್ದರು. ಇವರು ‘ತಿರುಪ್ಪಾಮೈ’ ಎಂಬ ಗ್ರಂಥ ರಚಿಸಿ ದೇವರಿಗೆ ಸಮರ್ಪಿಸಿದರು. ತಮಿಳುನಾಡಿನಲ್ಲಿ ಈ ‘ತಿರುಪ್ಪಾಮೈ’ ವ್ರತಾಚರಣೆಗೆ ತುಂಬಾ ಪ್ರಸಿದ್ಧಿ ಹೊಂದಿದೆ.
ಆಳ್ವಾರರ ಪ್ರಕಾರ ವಿಷ್ಣುಭಕ್ತರಾದವರೆಲ್ಲರೂ ಸಮಾನರು, ಅವರ ಹುಟ್ಟನ್ನು ಯಾರೂ ಕೇಳಬಾರದು. ಜಾತಿ ಭಾವನೆ ಘೋರಪಾಪವೆಂದು ಇವರು ಭಾವಿಸಿದ್ದರು.


ಶ್ರೀವಿಲ್ಲಿಪುತ್ತೂರಿನಲ್ಲಿರುವ ಕೃಷ್ಣದೇವಸ್ಥಾನ
ಅಕ್ಕಮಹಾದೇವಿ:
12ನೇ ಶತಮಾನದಲ್ಲಿ ವಚನ ಚಳವಳಿಯಲ್ಲಿ ಭಾಗವಹಿಸಿದ ದಿಟ್ಟ ಮಹಿಳೆ ಅಕ್ಕಮಹಾದೇವಿ. ಕನ್ನಡ ವಚನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ. ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಅಕ್ಕಮಹಾದೇವಿ ಜನಿಸಿದರು. ಇವರ ತಂದೆ ನಿರ್ಮಲಶೆಟ್ಟಿ. ತಾಯಿ ಸುಮತಿ. ಬಾಲ್ಯದಿಂದಲೇ ಶಿವಭಕ್ತಿಯಲ್ಲಿ ಮುಳುಗಿರುತ್ತಿದ್ದರು. ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನೇ ತನ್ನ ಗಂಡ ಎಂದು ಸಾರಿ ಹೇಳುತ್ತಿದ್ದರು. ಇವರ ತಂದೆ-ತಾಯಿಯರು ಬಲವಂತವಾಗಿ ರಾಜನಾದ ಕೌಶಿಕನೊಂದಿಗೆ ಮದುವೆ ಮಾಡುತ್ತಾರೆ. ತನ್ನ ಗುರು, ಲಿಂಗ, ಜಂಗಮ ಸೇವೆಗೆ ಅಡ್ಡಿಯಾದ್ದರಿಂದ ಅಕ್ಕಮಹಾದೇವಿ ಅರಮನೆ ತ್ಯಜಿಸುತ್ತಾರೆ. ತೊಟ್ಟ ವಸ್ತ್ರಗಳನ್ನು ಬಿಟ್ಟು ಹೊರ ಬರುತ್ತಾರೆ. ನಂತರ ಕಲ್ಯಾಣಕ್ಕೆ ತೆರಳಿ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಕೆಲವು ಕಾಲ ತಂಗುತ್ತಾರೆ. ಅಲ್ಲಿ ‘ಚನ್ನಮಲ್ಲಿಕಾರ್ಜುನ’ ಎಂಬ ಅಂಕಿತದಲ್ಲಿ ಅನೇಕ ವಚನಗಳನ್ನು ರಚಿಸುತ್ತಾರೆ. ಎಲ್ಲ ಶಿವಶರಣರಿಗೂ ಅಕ್ಕಮಹಾದೇವಿಯ ಬಗೆಗೆ ಅಪಾರ ಗೌರವವಿತ್ತು. ಕೊನೆಯ ದಿನಗಳಲ್ಲಿ ಕಲ್ಯಾಣದಿಂದ ಶ್ರೀಶೈಲಕ್ಕೆ ತೆರಳುತ್ತಾರೆ. ಅಂತಿಮವಾಗಿ ಅಲ್ಲಿನ ಕದಳಿ ವನದಲ್ಲಿ ಶಿವೈಕ್ಯರಾಗುತ್ತಾರೆ.

ಪುರಂದರದಾಸರು (ಸಾ.ಶ. 1480 – 1564)
ಇವರು ಕನ್ನಡ ದಾಸ ಸಾಹಿತ್ಯದ ಒಬ್ಬ ಪ್ರಮುಖ ಪುರಂದರದಾಸರು ವ್ಯಕ್ತಿಯಾಗಿದ್ದಾರೆ. ಪುರಂದರ ದಾಸರು ಪುರಂದರಗಡದಲ್ಲಿ ಜನಿಸಿದರು. ಇವರ ಮೂಲ ಹೆಸರು ಶ್ರೀನಿವಾಸ ನಾಯಕ. ತಂದೆ ವರದಪ್ಪ ನಾಯಕರು ಮತ್ತು ತಾಯಿ ಲೀಲಾವತಿ. ಇವರ ಪತ್ನಿ ಲಕ್ಷ್ಮೀಬಾಯಿ ಧರ್ಮನಿಷ್ಠ ಸ್ತ್ರೀಯಾಗಿದ್ದಳು.

ಜಿಪುಣನೂ, ನಾಸ್ತಿಕನೂ ಆದ ಶ್ರೀನಿವಾಸ ನಾಯಕ ಭಗವಂತನ ಪರೀಕ್ಷೆಯಲ್ಲಿ ಸೋತು ತನ್ನೆಲ್ಲ ಸಂಪತ್ತನ್ನು ತ್ಯಾಗ ಮಾಡಿ ಪರಮಾತ್ಮನ ನಾಮ ಸ್ಮರಣೆಯಲ್ಲಿ ತೊಡಗಿದರು. ಇವರು ಕೀರ್ತನೆಗಳನ್ನು ಹಾಡುತ್ತ ಅನೇಕ ಊರುಗಳನ್ನು ಸುತ್ತಿ ಕೃಷ್ಣದೇವರಾಯನ ಆಸ್ಥಾನವನ್ನು ಸೇರಿದರು. ಅಲ್ಲಿ ವ್ಯಾಸರಾಯರು ಇವರಿಗೆ ದೀಕ್ಷೆಯನ್ನು ಕೊಟ್ಟು “ಪುರಂದರ” ಎಂದು ನಾಮಕರಣ ಮಾಡಿದರು. ಪುರಂದರದಾಸರ ಪದಗಳಲ್ಲಿ ಮಾನವೀಯ ಮೌಲ್ಯಗಳು ಅಡಗಿವೆ. ಇವರು ತಮ್ಮ ಕೀರ್ತನೆಗಳಲ್ಲಿ ಮಡಿವಂತಿಕೆಯನ್ನು ಖಂಡಿಸಿದ್ದಾರೆ. ಇವುಗಳಲ್ಲಿ ತತ್ವ, ನೀತಿ ಮತ್ತು ಸಂಗೀತದ ಸಂಗಮವನ್ನು ಕಾಣುತ್ತೇವೆ. ಇವರನ್ನು “ಕರ್ನಾಟಕ ಸಂಗೀತ ಪಿತಾಮಹ” ಎಂದು ಕರೆಯುತ್ತಾರೆ. ‘ಪುರಂದರ ವಿಠ್ಠಲ’ ಎಂಬ ಅಂಕಿತದಿಂದ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. “ದಾಸರೆಂದರೆ ಪುರಂದರ ದಾಸರಯ್ಯಾ” ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದ ಹೊಗಳಿಸಿಕೊಂಡಿದ್ದಾರೆ.
ಕನಕದಾಸರು (ಸುಮಾರು ಸಾ.ಶ. 1508 – 1606)
ಕನಕದಾಸರು ದಾಸ ಸಾಹಿತ್ಯದ ಒಬ್ಬ ಪ್ರಮುಖ ಕೀರ್ತನಕಾರರಾಗಿದ್ದ ಕನಕದಾಸರು ಸುಮಾರು ಸಾ.ಶ. 1508ರಲ್ಲಿ ಹಾವೇರಿ ಜಿಲ್ಲೆಯ ಬಂಕಾಪುರ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದರು. ಇವರ ಮೂಲ ಹೆಸರು ತಿಮ್ಮಪ್ಪ. ಬೀರಪ್ಪ ಮತ್ತು ಬಚ್ಚಮ್ಮ ಇವರ ತಂದೆ-ತಾಯಿಗಳು. ಇವರು ಕಲಿಯೂ ಹೌದು, ಕವಿಯೂ ಹೌದು. ಬಾಡಗ್ರಾಮದ ಸುತ್ತಲಿನ 78 ಗ್ರಾಮಗಳಿಗೆ ನಾಡಗೌಡ ಹಾಗೂ ಢಣಾಯಕರಾಗಿದ್ದರು. ಕೊಪ್ಪರಿಗೆ ತುಂಬಿದ ಕನಕ ದೊರೆಯಲಾಗಿ ಕನಕನಾಯಕ ಆದರೆಂದು ಪ್ರತೀತಿ. ಕೌಟುಂಬಿಕ ಜೀವನದಲ್ಲಿ ವೈರಾಗ್ಯ ಉದಯಿಸಿ, ವ್ಯಾಸರಾಯರ ಶಿಷ್ಯರಾದರು. ಮುಂದೆ ಕನಕದಾಸರೆಂದೆನಿಸಿದರು. ಇವರು ಅನೇಕ ಕೀರ್ತನೆಗಳನ್ನೂ ರಚಿಸಿದ್ದಾರೆ. `ಆದಿಕೇಶವ’ ಇವರ ಅಂಕಿತನಾಮವಾಗಿದೆ. ಕಾಗಿನೆಲೆಯ ಆದಿಕೇಶವ ಇವರ ಇಷ್ಟದೈವ. ಇವರು ತಮ್ಮ ಹಾಡುಗಳಲ್ಲಿ ಸಮಾಜದ ಮೂಢನಂಬಿಕೆಗಳನ್ನು ಖಂಡಿಸಿ ಭಗವಂತನನ್ನು ಸೇರುವ ಸರಳ ಮಾರ್ಗವನ್ನು ಬೋಧಿಸಿದ್ದಾರೆ. ಇವರು ತಮ್ಮ ಕೀರ್ತನೆಯಲ್ಲಿ ಜಾತಿ ಪದ್ಧತಿಯನ್ನು ವಿಡಂಬನೆ ಮಾಡಿದ್ದಾರೆ.

ಕನಕನ ಕಿಂಡಿ: ಉಡುಪಿಯ ದೇವಾಲಯದ ಒಳಗೆ ಕನಕದಾಸರಿಗೆ ಪ್ರವೇಶವನ್ನು ಅಲ್ಲಿನ ಪುರೋಹಿತರು ನಿರಾಕರಿಸುತ್ತಾರೆ. ಆಗ ಕನಕದಾಸರ ಭಕ್ತಿಗೆ ಮೆಚ್ಚಿದ ಶ್ರೀಕೃಷ್ಣನು ಪಶ್ಚಿಮಾಭಿಮುಖನಾಗಿ ತಿರುಗಿ ಕಿಂಡಿಯ ಮೂಲಕ ದರ್ಶನ ಕೊಟ್ಟನೆಂದು ಐತಿಹ್ಯವಿದೆ.

ಕನಕದಾಸರು ಹರಿಭಕ್ತಿಸಾರ, ನಳಚರಿತ್ರೆ, ರಾಮಧಾನ್ಯ ಚರಿತೆ ಎಂಬ ಷಟ್ಪದಿ ಕಾವ್ಯಗಳನ್ನೂ ಮೋಹನ ತರಂಗಿಣಿ ಎಂಬ ಸಾಂಗತ್ಯ ಕೃತಿಯನ್ನೂ ರಚಿಸಿದ್ದಾರೆ.
ಶಿಶುನಾಳ ಶರೀಫ:
ಶಿಶುನಾಳ ಶರೀಫರು ಶಿಶುನಾಳ ಶರೀಫರು ಕನ್ನಡದ ಮೊದಲ ಮುಸ್ಲಿಂ ಅನುಭಾವಿ ಕವಿ. ಇವರನ್ನು `ಕರ್ನಾಟಕದ ಕಬೀರ’ ಎಂದು ಕರೆಯುತ್ತಾರೆ. ಶಿಶುನಾಳ ಎಂಬ ಗ್ರಾಮದಲ್ಲಿ 1819ರಲ್ಲಿ ಜನಿಸಿದರು. ಇವರ ತಂದೆ ಇಮಾಮ್ ಸಾಹೇಬ, ತಾಯಿ ಹಜ್ಜಮಾ. ಶರೀಫರು ಬಾಲಕನಿರುವಾಗಲೇ ಹಿಂದೂ-ಮುಸ್ಲಿಂ ಎರಡೂ ಧರ್ಮಗಳ ಬಗ್ಗೆ ಅರಿತುಕೊಂಡಿದ್ದರು. ನಂತರ ಮುಲ್ಕಿ ಪರೀಕ್ಷೆ ಪಾಸು ಮಾಡಿ ಶರೀಫರು ಕೆಲವು ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಗುರು ಗೋವಿಂದ ಭಟ್ಟರಿಂದ ದೀಕ್ಷೆ ತೆಗೆದುಕೊಂಡು ಅನೇಕ ತತ್ವಪದಗಳನ್ನು ರಚಿಸಿದರು. ಇವರ ಪದಗಳಲ್ಲಿ ರಿವಾಯತ್(ಮೊಹರಂ ಪದ) ಇವೆ. ಅವುಗಳಲ್ಲಿ ಕಾಳಗ ಪದ, ಧಾರ್ಮಿಕ ನೀತಿಪದ, ಅಲಾವಿಪದ, ಸವಾಲ್ ಜವಾಬ್ ಪದಗಳು ಇವೆ. ಶಿಶುನಾಳದಲ್ಲಿ ಇವರ ಸಮಾಧಿ ಇದೆ. ಹಿಂದೂ-ಮುಸ್ಲಿಮರಿಬ್ಬರೂ ಇವರನ್ನು ಆರಾಧಿಸುತ್ತಾರೆ. ಜಾತಿ ಮತ್ತು ಧರ್ಮಗಳ ಗಡಿಮೀರಿ ಇವರು ಮಾನವೀಯ ಮೌಲ್ಯಗಳನ್ನು ಬಿತ್ತಿದರು.


ಶಿಶುನಾಳ ಶರೀಫರ ಸಮಾಧಿ
ಉತ್ತರ ಭಾರತದ ಭಕ್ತಿ ಪರಂಪರೆ
ಕಬೀರದಾಸ್ (ಸಾ.ಶ. 1398 – 1518)
ಕಬೀರದಾಸ್ ಭಕ್ತಿಪಂಥದ ಪ್ರಸಿದ್ಧ ಸಂತರಾದ ಕಬೀರ್ ರಮಾನಂದರ ಶಿಷ್ಯರು. ಇವರು ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯವನ್ನು ತರಲು ಪ್ರಯತ್ನಿಸಿದರು. ಇವರು ವಾರಣಾಸಿಯಲ್ಲಿನ ನೇಕಾರ ಮುಸ್ಲಿಂ ದಂಪತಿಗಳಾದ ನೀರು ಮತ್ತು ನಿಮಾ ರ ಸಾಕು ಮಗ. ಜಾತಿ ಪದ್ಧತಿ, ಆಡಂಬರದ ಜೀವನ, ಜಾತಿ ಶ್ರೇಷ್ಠತೆ, ಧಾರ್ಮಿಕ ಅಸಮಾನತೆ ಇವುಗಳನ್ನು ಖಂಡಿಸಿದರು. ಅಲ್ಲಾ ಮತ್ತು ರಾಮ ಎಂಬುದು ಒಂದೇ ದೇವರ ಎರಡು ಹೆಸರುಗಳು. ಹಿಂದೂ ಮತ್ತು ಮುಸ್ಲಿಮರು ಒಂದು ಮಣ್ಣಿನಿಂದ ತಯಾರಿಸಿದ ಮಡಿಕೆಗಳು ಎಂದು ಬಣ್ಣಿಸಿದರು.

ಕಬೀರರು ತಾನು ರಾಮ ಮತ್ತು ಅಲ್ಲಾಹನ ಮಗನೆಂದು ಸಾರಿದರು. ದೇಹ ದಂಡನೆ, ಉಪವಾಸ, ತೀರ್ಥಯಾತ್ರೆ, ಪವಿತ್ರ ಸ್ಥಾನದಿಂದ ದೇವರನ್ನು ಕಾಣಲು ಸಾಧ್ಯವಿಲ್ಲ. ಆದರೆ ಪವಿತ್ರವಾದ ಭಕ್ತಿಮಾರ್ಗದಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು. ಕಬೀರರು ತಮ್ಮ ತತ್ವಗಳನ್ನು ಜನರಿಗೆ, ಅರ್ಥವಾಗುವಂತೆ ‘ದೋಹ’ (ಎರಡು ಸಾಲಿನ ಪದ್ಯ) ಗಳೆಂಬ ಸಣ್ಣ ಕಾವ್ಯಗಳಲ್ಲಿ ಬೋಧಿಸಿದರು. ಇವರ ಅನುಯಾಯಿಗಳನ್ನು ಕಬೀರ್ ಪಂಥಿಗಳೆಂದು ಕರೆಯುತ್ತಾರೆ.
ಗುರುನಾನಕರು (ಸಾ.ಶ. 1469 – 1539)
ಗುರುನಾನಕರು ಗುರುನಾನಕರು ಸಿಖ್ ಧರ್ಮದ ಸಂಸ್ಥಾಪಕರು. ಇವರು ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬಿನ ತಲವಾಂಡಿ ಗ್ರಾಮದಲ್ಲಿ 1469ರಲ್ಲಿ ಜನಿಸಿದರು. ಮೆಹ್ತಕೌಲ ಮತ್ತು ತೃಪ್ತಾ ಇವರ ತಂದೆ-ತಾಯಿಗಳು. ಅವರು ಹಿಂದೂ-ಮುಸ್ಲಿಂ ಮತಗಳ ಸಮಾನ ಅಂಶಗಳನ್ನು ಒತ್ತಿ ಹೇಳಿದರು. “ಗ್ರಂಥ ಸಾಹಿಬ್” ಎಂಬ ಸಿಖ್ಖರ ಪವಿತ್ರ ಗ್ರಂಥದಲ್ಲಿ ಅವರ ಜಪಜಿಗಳು ಎಂದು ಕರೆಯಲಾಗುವ ಹಾಡುಗಳಿವೆ. ದೇವರ ನಾಮವನ್ನು ಜಪಿಸುವುದು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಸಿಖ್ ಪಂಥ ಮಹತ್ವ ನೀಡಿದೆ. ಸ್ತ್ರೀ-ಪುರುಷರ ಸಮಾನತೆಯನ್ನು ಅದು ಒತ್ತಿ ಹೇಳಿದೆ. ಗುರುನಾನಕರು ದೇವರ ಅಸ್ತಿತ್ವದಲ್ಲಿ ಅಚಲ ನಂಬಿಕೆಯನ್ನು ಹೊಂದಿದ್ದರು. ವಿಶ್ವಕ್ಕೆ ದೇವರು ಒಬ್ಬನೆ, ಅವನು ಸತ್ಯ ನಿತ್ಯನೆಂದು ಸಾರಿದರು. ಜೀವನದಲ್ಲಿ ಮೋಸ, ವಂಚನೆ, ಕಳ್ಳತನ, ಹಿಂಸೆ ಮಾಡಬಾರದು, ಗುರುವಿನಿಂದ ಭಕ್ತಿಯನ್ನು, ಭಕ್ತಿಯಿಂದ ಮುಕ್ತಿಯನ್ನು ಪಡೆಯಬಹುದು ಎಂದು ಹೇಳಿದರು. ಸಾಮಾಜಿಕ ಅನಿಷ್ಟಗಳಾದ ಮೂರ್ತಿಪೂಜೆ, ಜಾತಿಪದ್ಧತಿ, ಸತಿಪದ್ಧತಿ, ಮುಂತಾದವುಗಳನ್ನು ವಿರೋಧಿಸಿದರು. ತಮ್ಮ ದೇಶ ಸಂಚಾರದಲ್ಲಿ ನಾನಕರು ಕರ್ನಾಟಕಕ್ಕೂ ಬಂದಿದ್ದರು. ಅವರು ಬೀದರಿನಲ್ಲಿ ತಂಗಿದ್ದ ಸ್ಥಳವನ್ನು “ನಾನಕ್ ಝರಾ” (ಸಿಹಿ ನೀರಿನ ಬುಗ್ಗೆ) ಎಂದು ಕರೆಯುತ್ತಾರೆ.

ತುಳಸೀದಾಸರು (ಸಾ.ಶ. 1532 – 1623)
ಉತ್ತರ ಭಾರತದ ಭಕ್ತಿ ಮಾರ್ಗದ ಪ್ರತಿಪಾದಕರಲ್ಲಿ ತುಳಸೀದಾಸರು ತುಳಸೀದಾಸರು ಅಗ್ರಗಣ್ಯರಾಗಿದ್ದಾರೆ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು ಹಿಂದೀ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರವಾಗಿದೆ. ಇವರು “ರಾಮಚರಿತ ಮಾನಸ” ಎಂಬ ಗ್ರಂಥವನ್ನು ಬರೆದರು. ಇದು ಹಿಂದೀ ಸಾಹಿತ್ಯದ ಶ್ರೇಷ್ಠ ಕೃತಿಯಾಗಿದೆ. ಉತ್ತರದಲ್ಲಿ ಇದು ‘ತುಳಸೀ ರಾಮಾಯಣ’ ಎಂದು ಜನಪ್ರಿಯವಾಗಿದೆ. ರಾಮಭಕ್ತರಾದ ಇವರು ದೈವಭಕ್ತಿ, ಪರಿಶುದ್ಧ ಜೀವನ, ಪ್ರೀತಿ, ಪ್ರೇಮ, ಸಹನೆ, ಔದಾರ್ಯಗಳನ್ನು ಜನಮನದಲ್ಲಿ ಬಿತ್ತಿದರು.

ಚೈತನ್ಯರು (ಸಾ.ಶ. 1485 – 1533)
ಚೈತನ್ಯರು ಚೈತನ್ಯರು ಪಶ್ಚಿಮ ಬಂಗಾಳದ ನವದ್ವೀಪ (ನಾಡಿಯಾ) ದಲ್ಲಿ ಸಾ.ಶ.1485ರಲ್ಲಿ ಜನಿಸಿದರು. ಜಗನ್ನಾಥ ಮಿಶ್ರಾ ಮತ್ತು ಸಚಿದೇವಿ ಇವರ ತಂದೆ-ತಾಯಿಗಳು. ವಿಶ್ವಂಭರ ಎಂಬುದು ಚೈತನ್ಯರ ಮೊದಲ ಹೆಸರು. ಈಶ್ವರಿಪುರಿ ಇವರ ಗುರುಗಳಾಗಿದ್ದರು. ಚೈತನ್ಯರು ತಮ್ಮ 25ನೇ ವರ್ಷದಲ್ಲಿ ಸಂಸಾರವನ್ನು ತ್ಯಜಿಸಿ ಸನ್ಯಾಸವನ್ನು ಸ್ವೀಕರಿಸಿದರು. ಇವರು ಜಾತಿಭೇದವನ್ನು ಅಲ್ಲಗಳೆದರು. ಮುಕ್ತಿಗೆ ಭಕ್ತಿಯೊಂದೇ ದಾರಿಯೆಂದರು. ವಿಶ್ವಭ್ರಾತೃತ್ವ ದೇವರ ಪ್ರೀತಿಗಳಿಸುವ ಪ್ರಥಮ ಹೆಜ್ಜೆ ಎಂದು ಬೋಧಿಸಿದರು. ಚೈತನ್ಯರು ಭಾರತದ ಎಲ್ಲಾ ಕಡೆ ತೀರ್ಥಯಾತ್ರೆ ಕೈಗೊಂಡು ಪ್ರೇಮದ ಸಂದೇಶ ಸಾರಿದರು. ಆದ್ದರಿಂದ ಪ್ರೇಮ, ಸಹೋದರಭಾವ ಮತ್ತು ದಾನಶೀಲತೆ ಇವು ಅವರ ಬೋಧನೆಯ ತಿರುಳು ಆಗಿತ್ತು. ಇಂದಿನ ಹರೇಕೃಷ್ಣ ಪಂಥ ಇವರಿಂದ ಪ್ರಭಾವಿತವಾಗಿದೆ. ಚೈತನ್ಯರನ್ನು ಶ್ರೀಕೃಷ್ಣನ ಅವತಾರವೆಂದು ಪರಿಗಣಿಸುವ ಬಂಗಾಳದ ಜನತೆ ಅವರನ್ನು “ಚೈತನ್ಯ ಮಹಾಪ್ರಭು” ಎಂದು ಕರೆದಿದ್ದಾರೆ.

ಮೀರಾಬಾಯಿ (ಸಾ.ಶ. 1498 – 1569)
“ಕಲಿಯುಗದ ರಾಧ” ಎಂದು ಕರೆಯಲಾಗುವ ಸಂತ ಮೀರಾಬಾಯಿ ಭಾರತದ ಮಹಾನ್ ಕೀರ್ತನಕಾರ್ತಿ ಆಗಿದ್ದರು. ಇವರು ರಾಜಸ್ಥಾನದಲ್ಲಿ ರಜಪೂತ ರಾಜಮನೆತನದಲ್ಲಿ ಜನಿಸಿದರು. ಮೀರಾಬಾಯಿ ಅವರು ರಾಜಾ ರತನಸಿಂಗನ ಮಗಳು. ಮೇವಾಡದ ರಾಜಕುಮಾರನೊಂದಿಗೆ ಇವರ ವಿವಾಹವಾಯಿತು. ಬಾಲ್ಯದಿಂದಲೂ ಆಧ್ಯಾತ್ಮದ ಕಡೆಗೆ ಒಲವು ಇದ್ದುದರಿಂದ ತನ್ನೆಲ್ಲ ಸಮಯವನ್ನು ಭಗವಂತನ ಪೂಜೆ, ಧ್ಯಾನ ಮತ್ತು ಕೀರ್ತನೆಯಲ್ಲಿ ಕಳೆಯುತ್ತಿದ್ದರು. ಇವರ ಕೃಷ್ಣನ ಆರಾಧನೆಯನ್ನು ಅತ್ತೆ ಕಟುವಾಗಿ ವಿರೋಧಿಸಿದಳು. ಇದನ್ನು ಸಹಿಸಲಾಗದೆ ಮೀರಾಬಾಯಿ ಅರಮನೆ ಬಿಟ್ಟು ಶ್ರೀ ಕೃಷ್ಣನ ಕ್ಷೇತ್ರವಾದ ಬೃಂದಾವನಕ್ಕೆ ಹೋದರು. ಅವರು ರಚಿಸಿದ ಕೀರ್ತನೆಗಳಲ್ಲಿ ಭಕ್ತಿ, ಪ್ರೇಮ ತುಂಬಿ ತುಳುಕಿದೆ. ಗಿರಿಧರ ಗೋಪಾಲ ಇವರ ಆರಾಧ್ಯದೈವ. ತನ್ನ ನೂರಾರು ಭಜನೆಗಳಿಂದ ಮೀರಾಬಾಯಿ ಅವರು ಇಂದಿಗೂ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

ಭಕ್ತಿಪಂಥದ ಪರಿಣಾಮಗಳು
1. ಭಕ್ತಿಸಂತರು ಹಿಂದೂ-ಮುಸ್ಲಿಂ ಸಾಮರಸ್ಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
2. ಭಕ್ತಿ ಸಂತರು ಜನರಾಡುವ ಸ್ಥಳೀಯ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದರು. ಇದರಿಂದಾಗಿ ಭಾರತೀಯ ದೇಶಿ ಭಾಷೆಗಳು ಶ್ರೀಮಂತಗೊಂಡವು.
ಸೂಫಿ ಪರಂಪರೆ:
ಹಿಂದೂಗಳಲ್ಲಿ ಕಬೀರರು, ಕನಕದಾಸರು, ಚೈತನ್ಯರು ಮುಂತಾದವರು ಧರ್ಮ ಜಾಗೃತಿಯನ್ನು ಉಂಟು ಮಾಡಿದಂತೆ, ಮುಸ್ಲಿಮರಲ್ಲಿ ಸೂಫಿ ಸಂತರು ಧರ್ಮ ಜಾಗೃತಿಯನ್ನು ಉಂಟು ಮಾಡಿದರು. ಹಿಂದೂ-ಮುಸ್ಲಿಮರ ಏಕತೆಗಾಗಿ ಶ್ರಮಿಸಿದರು. ಸೂಫಿ ಪಂಥವು ಅರೇಬಿಯಾದಲ್ಲಿ ಉದಯಿಸಿ ಭಾರತವನ್ನು ಪ್ರವೇಶಿಸಿತು.
ಸೂಫಿ ಎಂಬ ಪದವು ‘ಸಾಫ್’ ಎಂಬ ಪದದಿಂದ ಬಂದಿದೆ. ಸಾಫ್ ಎಂದರೆ ಶುದ್ಧಿ ಅಥವಾ ಶುಚಿ ಎಂದು ಅರ್ಥ ಬರುತ್ತದೆ. ಸೂಫಿ ಸಂತರು ಮುಸ್ಲಿಂ ಅನುಭಾವಿಗಳಾಗಿದ್ದು ಸಾದಾ ಉಣ್ಣೆಯ ಅಂಗಿಯನ್ನು ತೊಡುತ್ತಾರೆ.
ಸೂಫಿ ಪಂಥದ ಸಾರ:
1) ದೇವರು ಒಬ್ಬನೇ, ಆತನು ಸರ್ವಶಕ್ತನಾಗಿದ್ದಾನೆ. ನಾವೆಲ್ಲರೂ ಆತನ ಮಕ್ಕಳು ಎಂದು ಪ್ರತಿಪಾದಿಸಿತು.
2) ಉತ್ತಮ ಕಾಯಕ (ಕೆಲಸ)ಕ್ಕೆ ಮಹತ್ವ ನೀಡಿತು.
3) ಎಲ್ಲಾ ಮಾನವರು ಸಮಾನರು ಎಂದು ಸಾರಿತು.
4) ಜಾತಿಪದ್ಧತಿಯನ್ನು ವಿರೋಧಿಸಿತು.
ಕಾಲಕ್ರಮೇಣ ಯೋಗ, ವೇದಾಂತ ಮತ್ತು ಬೌದ್ಧ ಮತದ ಚಿಂತನೆಗಳಿಂದ ಸೂಫಿಗಳು ಪ್ರಭಾವಿತರಾದರು. ಧರ್ಮವೆಂದರೆ ಪ್ರೇಮ, ಮಾನವನ ಸೇವೆ ಎಂಬುದೇ ಸೂಫಿಗಳ ಮೂಲ ತತ್ವವಾಗಿದೆ.
ನಿಜಾಮುದ್ಧೀನ್ ಔಲಿಯ:
ಇವರು ಭಾರತದ ಪ್ರಮುಖ ಸೂಫಿ ಸಂತರು. ಇವರು ದಿಲ್ಲಿಯಲ್ಲಿ ನೆಲೆಸಿ ಬಡತನದ ಜೀವನ ನಡೆಸಿದರು. ಹುಲ್ಲು ಮಾಡಿನ ಮಸೀದಿ ಇವರ ಚಟುವಟಿಕೆಯ ಕೇಂದ್ರವಾಗಿತ್ತು. ದಿಲ್ಲಿಯ ಸುಲ್ತಾನ ದಾನವಾಗಿ ನೀಡಿದ್ದ ಗ್ರಾಮವೊಂದನ್ನು ಇವರು ತಿರಸ್ಕರಿಸಿದರು. ತಮ್ಮನ್ನು ಕಾಣಲು ಬರುತ್ತಿದ್ದ ಭಕ್ತರಿಗೆ ಸದ್ಗುಣ (ಒಳ್ಳೆಯ ಗುಣ) ಕರುಣೆಯ ಸಂದೇಶ ನೀಡುತ್ತಿದ್ದರು.
ಖ್ವಾಜಾ ಬಂದೇನವಾಜ್:
ಬಂದೇನವಾಜ್‍ರು ಪ್ರಸಿದ್ಧ ಚಿಸ್ತಿ ಸೂಫಿ ಸಂತರು. ಇವರು ದೆಹಲಿಯ ನಾಸಿರುದ್ದೀನನ ಶಿಷ್ಯರು. ಬಂದೇನವಾಜ್ ಎಂದರೆ ‘ಮೊರೆಹೊಕ್ಕವರನ್ನು ಪೊರೆಯುವವರು’ ಎಂದು ಅರ್ಥ. ಇವರಿಗೆ ಗೇಸುದರಾಜ್ ಎಂದು ಇನ್ನೊಂದು ಹೆಸರು. ಜೇಸುದರಾಜ್ ಎಂದರೆ ‘ಉದ್ದ ಕೂದಲಿನವನು’ ಎಂದರ್ಥ. ಇವರ ಮೂಲ ಹೆಸರು ಸೈಯದ್ ಮಹಮದ್ ಹುಸೈನಿ. ಇವರಿಗೆ ಸಂಸ್ಕೃತ, ಅರಬೀ, ಪಾರಸಿ, ದಖನಿ (ಉರ್ದು) ಹೀಗೆ ಅನೇಕ ಭಾಷೆಗಳು ಬರುತ್ತಿದ್ದವು. ಇವರು ಕಲಬುರಗಿಗೆ ಬಂದು ನೆಲೆಸಿದರು. ದೊರೆ ಫಿರೋಜ್ ಷಾ ಇವರಿಗೆ ತುಂಬಾ ಗೌರವ ನೀಡುತ್ತಿದ್ದನು. ಇವರು ದಖನಿ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ. ಈಗಲೂ ಕಲಬುರಗಿಯ ಇವರ ದರ್ಗಾದಲ್ಲಿನ ಸಾಹಿತ್ಯ ಭಂಡಾರದಲ್ಲಿ ನೋಡಬಹುದು. ಕಲಬುರಗಿಯಲ್ಲಿ ಪ್ರತಿವರ್ಷ ಇವರ ಉರುಸು ನಡೆಯುತ್ತದೆ.
ಚಿಸ್ತಿ ಪಂಥ:
ಸೂಫಿ ಪಂಥದಲ್ಲಿ ಚಿಸ್ತಿ ಪಂಗಡ ಪ್ರಮುಖವಾದುದು. ಇದರ ಸ್ಥಾಪಕ ಮುಯಿನಿದ್ದೀನ್ ಚಿಸ್ತಿ. ಇವರು ಅಜ್ಮೀರಕ್ಕೆ ಬಂದು ನೆಲೆಸಿದರು. ದೈವಭಕ್ತಿ, ಗುರುಸೇವೆ, ಸನ್ಮಾರ್ಗದಲ್ಲಿ ನಡೆಯುವುದು ಚಿಸ್ತಿ ಅನುಯಾಯಿಗಳ ಲಕ್ಷಣವಾಗಿತ್ತು. ಚಿಸ್ತಿಗಳಿಗೆ ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಕಾಳಜಿಯಿತ್ತು. ಇವರು ಜನ ಬಳಕೆಯ ದಖನ್(ಉರ್ದು) ಭಾಷೆಯಲ್ಲಿ ಕೃತಿ ಬರೆದರು. ಫತೇಪುರ ಸಿಕ್ರಿ ಎಂಬಲ್ಲಿನ ಸಲೀಮ್ ಚಿಸ್ತಿ ಪ್ರಸಿದ್ಧರಾಗಿದ್ದರು.

ಲಾಹೋರ (ಈಗಿನ ಪಾಕಿಸ್ತಾನ) : ಶೇಖ್ ಇಸ್ಮಾಯಿಲ್
ಅಜ್ಮೀರ : ಖ್ವಾಜಾ ಮೊಯಿನುದ್ದೀನ್ ಚಿಸ್ತಿ
ದೆಹಲಿ : ನಿಜಾಮುದ್ದೀನ್ ಔಲಿಯಾ
ಅರ್ಕಾಟ್ : ಟಿಪ್ಪು ಮಸ್ತಾರ ಔಲಿಯಾ
ಕಲಬುರಗಿ : ಖ್ವಾಜಾ ಬಂದೇನವಾಜ.
ಕಾಲಗಣನೆ (ಸಾ.ಶ)
ನಿಜಾಮುದ್ದಿನ್ ಔಲಿಯ 1238 ರಿಂದ 1325
ಕಬೀರದಾಸರು 1440 ರಿಂದ 1518
ಗುರುನಾನಕ್ 1469 ರಿಂದ 1539
ಪುರಂದರದಾಸರು 1480 ರಿಂದ 1564
ಚೈತನ್ಯರು 1485 ರಿಂದ 1533
ಮೀರಾಬಾಯಿ 1498 ರಿಂದ 1569
ಕನಕದಾಸರು 1508 ರಿಂದ 1606
ತುಳಸೀದಾಸರು 1532 ರಿಂದ 1623
ವಿಡಿಯೋ ಪಾಠಗಳು
ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ – 7ನೇ ತರಗತಿ ಸಮಾಜ ವಿಜ್ಞಾನ Part-1
ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ – 7ನೇ ತರಗತಿ ಸಮಾಜ ವಿಜ್ಞಾನ Part-2
ಅಭ್ಯಾಸಗಳು
***********************