ಬ್ರಿಟಿಷ್ ಪ್ರಾಬಲ್ಯದ ಬೆಳವಣಿಗೆ (1758-1856) – 7ನೇ ತರಗತಿ ಸಮಾಜ ವಿಜ್ಞಾನ

ಪಾಠದ ಪರಿಚಯ

ಭಾರತದಲ್ಲಿ 1758-1856ರ ಕಾಲಾವಧಿಯಲ್ಲಿ ಬ್ರಿಟಿಷರು ರಾಜಕೀಯ ಹಾಗೂ ಆರ್ಥಿಕ ಶಕ್ತಿಯಾಗಿ ಹೇಗೆ ಮೂಡಿ ಬಂದರು ಎಂಬುದೇ ಈ ಪಾಠದ ಮುಖ್ಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ನಿರ್ಣಾಯಕವಾದ ಬಕ್ಸಾರ್ ಕದನ, ದಿವಾನಿ ಹಕ್ಕಿನ ಪ್ರಾಪ್ತಿ, ಆಂಗ್ಲೋ-ಮೈಸೂರು, ಆಂಗ್ಲೋ-ಸಿಖ್ ಮತ್ತು ಆಂಗ್ಲೋ-ಮರಾಠ ಯುದ್ಧಗಳನ್ನು ನಿರೂಪಿಸಲಾಗಿದೆ, `ಸಹಾಯಕ ಸೈನ್ಯ ಪದ್ಧತಿ’ ಮತ್ತು `ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ಬ್ರಿಟಿಷರ ಕುಟಿಲ ನೀತಿಗಳನ್ನು ವಿವರಿಸಲಾಗಿದೆ. ಬ್ರಿಟಿಷರ ಧೋರಣೆಗಳಿಂದ ಬೇಸತ್ತ ಭಾರತೀಯರು 1857ರಲ್ಲಿ ಏಕೆ ಬಂಡಾಯವೆದ್ದರು ಎಂಬುದಕ್ಕೆ ಈ ಪಾಠ ಹಿನ್ನೆಲೆಯಾಗಿದೆ.

ಈಸ್ಟ್ ಇಂಡಿಯಾ ಕಂಪನಿ ರಾಬರ್ಟ್ ಕ್ಲೈವನನ್ನು ಬಂಗಾಳದ ಪ್ರಥಮ ಗವರ್ನರ್ ಆಗಿ ನೇಮಿಸಿತು (1758). ಭಾರತದಲ್ಲಿ ಬ್ರಿಟಿಷರ ಪರಮಾಧಿಕಾರಕ್ಕೆ ತಳಹದಿ ಹಾಕಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಎರಡು ವರ್ಷಗಳ ಬಳಿಕ ತನ್ನ ನಾಡಿಗೆ ಮರಳಿದ ಕ್ಲೈವನು ಭಾರತದಿಂದ ದೋಚಿಕೊಂಡು ಹೋದ ಸಂಪತ್ತಿನಿಂದಾಗಿ ಭಾರಿ ಶ್ರೀಮಂತನಾದನು.

ರಾಬರ್ಟ್ ಕ್ಲೈವ

ಇಂಗ್ಲಿಷರ ದುರಾಡಳಿತ

ಕ್ಲೈವನ ನಿರ್ಗಮನದ ಅನಂತರ ಕಂಪನಿಯ ನೌಕರರು ಖಾಸಗಿ ವ್ಯಾಪಾರದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುತ್ತ ಭರ್ಜರಿ ಲಾಭ ಗಳಿಸಿದರು. ಅವರ ಆಸೆ ಬುರುಕತನಕ್ಕೆ ಕೊನೆಯಿರಲಿಲ್ಲ.

ಬ್ರಿಟಿಷ್ ಗವರ್ನರರೂ ಸೇರಿದಂತೆ ಕಂಪನಿಯ ನೌಕರರು ಲಂಚಕೋರರಾಗಿದ್ದರು. ದುರಾಡಳಿತದಿಂದ ಜನರು ಸೊರಗಿ ಹೋಗಿದ್ದರು. ಇಂಥ ಪರಿಸ್ಥಿತಿಯ ಕಾಲವನ್ನು ಬ್ರಿಟಿಷ್ ಇತಿಹಾಸಕಾರರೊಬ್ಬನು “ಬಹಿರಂಗ ಮತ್ತು ನಾಚಿಕೆಯಿಲ್ಲದ ಲೂಟಿಯ ಕಾಲ” ಎಂದು ಬಣ್ಣಿಸಿದ್ದಾನೆ. ಹೀಗಾಗಿ ಬಂಗಾಳದ ಶ್ರೀಮಂತಿಕೆ ಬಹುಬೇಗ ಇಳಿಯಲಾರಂಭಿಸಿತು.

ನವಾಬ ಮೀರ್ ಜಾಫರನಿಂದ ಇನ್ನು ಮುಂದೆ ಹಣ, ಸಂಪತ್ತು ಸಿಗಲಾರದೆಂದು ಇಂಗ್ಲೀಷರಿಗೆ ಬಹುಬೇಗ ಮನವರಿಕೆಯಾಯಿತು. ಆದ್ದರಿಂದ ಬ್ರಿಟಿಷರು ಅವನನ್ನು ಪದಚ್ಯುತಿಗೊಳಿಸಿ ಅವನ ಅಳಿಯ ಮೀರ್‍ಕಾಸಿಂನನ್ನು ನವಾಬನ ಹುದ್ದೆಗೇರಿಸಿದರು. ಇದಕ್ಕೆ ಪ್ರತಿಯಾಗಿ ಮೀರ್ ಕಾಸಿಂ ಮೂರು ಜಿಲ್ಲೆಗಳ ಜಮೀನ್ದಾರಿ ಹಕ್ಕನ್ನು ಬ್ರಿಟಿಷರಿಗೆ ನೀಡಿದನು.

ಮೀರ್ ಕಾಸಿಂ

ಬಕ್ಸಾರ್ ಕದನ (1764) – ಕಾರಣಗಳು ಮತ್ತು ಫಲಿತಾಂಶಗಳು

ಮೀರ್ ಕಾಸಿಂ ಸ್ವತಂತ್ರ ಮನೋಭಾವದವನಾಗಿದ್ದ. ಬ್ರಿಟಿಷರು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ದಸ್ತಕಗಳನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತಗೊಳಿಸಿದನು. ಇದರಿಂದ ಕುಪಿತಗೊಂಡ ಬ್ರಿಟಿಷರು ಆತನನ್ನು  ನವಾಬಗಿರಿಯಿಂದ ಕಿತ್ತೊಗೆದರು. ಆತನು ಸೇಡು ತೀರಿಸಿಕೊಳ್ಳಲು ಔದ್‍ನ ನವಾಬ ಮತ್ತು ಮೊಗಲ್ ರಾಜನೊಂದಿಗೆ ಸೇರಿ ಒಂದು ಸೈನಿಕ ಮೈತ್ರಿಕೂಟವನ್ನು ಮಾಡಿಕೊಂಡನು. ಈ ಮೈತ್ರಿಕೂಟವನ್ನು ಬ್ರಿಟಿಷರು ಬಕ್ಸಾರ್ ಎಂಬಲ್ಲಿ ನಡೆದ ಕದನದಲ್ಲಿ ಪರಾಜಯಗೊಳಿಸಿದರು. ಕದನದ ಪರಿಣಾಮವಾಗಿ ಬ್ರಿಟಿಷರು ಇನ್ನಷ್ಟು ಪ್ರಬಲರಾದರು. ದುರ್ಬಲನಾಗಿದ್ದ ಮೊಗಲ್ ರಾಜನು ಬ್ರಿಟಿಷರ ಆಶ್ರಯ ಯಾಚಿಸಿದನು.

ಬಕ್ಸಾರ್ ಕದನ (1764)

ಔದ್‍

ಬ್ರಿಟಿಷ್ ವರ್ತಕರು ತೆರಿಗೆ ನೀಡದೆ ವ್ಯಾಪಾರ ಕೈಗೊಳ್ಳಲು ನೀಡಲಾದ ವಿಶೇಷ ಅನುಮತಿ ಪತ್ರವನ್ನು ‘ದಸ್ತಕ್’ ಎಂದು ಕರೆಯಲಾಗಿದೆ.

ದಿವಾನಿ ಹಕ್ಕಿನ ಪ್ರಾಪ್ತಿ (1765)

ಕಂಪನಿಯ ವ್ಯವಹಾರಗಳನ್ನು ಸುವ್ಯವಸ್ಥೆಗೊಳಿಸಲು ಬ್ರಿಟಿಷ್ ಸರ್ಕಾರ ಕ್ಲೈವನನ್ನು ಮತ್ತೊಮ್ಮೆ ಭಾರತಕ್ಕೆ ಗವರ್ನರನನ್ನಾಗಿ ಕಳುಹಿಸಿತು. ಆತನು ಇಲ್ಲಗೆ ಬಂದೊಡನೆ  ಕಂಪನಿಯ ಅಧಿಕಾರವನ್ನು ಕಾನೂನುಬದ್ಧಗೊಳಿಸಲು ಮುಂದಾಗಿ, ಮೊಗಲ್ ರಾಜ ಎರಡನೆ ಷಾ ಆಲಂನೊಡನೆ ಒಪ್ಪಂದವನ್ನು ಮಾಡಿಕೊಂಡನು (1765). ಒಪ್ಪಂದದಂತೆ ಕಂಪನಿಯು ಪ್ರತಿವರ್ಷ 26 ಲಕ್ಷ ರೂಪಾಯಿಯನ್ನು ಮೊಗಲ್ ರಾಜನಿಗೆ ನೀಡಬೇಕೆಂದು ನಿರ್ಧರಿಸಲಾಯಿತು. ಇದಕ್ಕೆ ಪ್ರತಿಯಾಗಿ ಬ್ರಿಟಿಷರು ಬಂಗಾಳ (ಅಸ್ಸಾಂ ಸಹಿತ), ಬಿಹಾರ ಮತ್ತು ಒರಿಸ್ಸ ಪ್ರಾಂತ್ಯಗಳ ‘ದಿವಾನಿ’ ಹಕ್ಕನ್ನು ಪಡೆದರು. ದಿವಾನಿಯೆಂದರೆ ಭೂಕಂದಾಯವನ್ನು ಸಂಗ್ರಹಿಸುವ ಹಕ್ಕು.

ಎರಡನೆ ಷಾ ಆಲಂ

ಬಂಗಾಳ (ಅಸ್ಸಾಂ ಸಹಿತ)

ದಿವಾನಿಯ ಪರಿಣಾಮ

ಈಸ್ಟ್ ಇಂಡಿಯಾ ಕಂಪನಿಯು ದಿವಾನಿ ಹಕ್ಕಿನ ಮೂಲಕ ಬಂಗಾಳದಲ್ಲಿ ಅಧಿಕೃತ ಸಾರ್ವಭೌಮತ್ವವನ್ನು ಪಡೆದುಕೊಂಡಂತಾಯಿತು. ಅದು ತೆರಿಗೆಯನ್ನು ವಿಧಿಸುವ ಹಾಗೂ ಸಂಗ್ರಹಿಸುವ ವಿಚಾರದಲ್ಲಿ ಸ್ವಾತಂತ್ರ್ಯವನ್ನು ಹೊಂದಿತು. ಇದರಿಂದಾಗಿ ಬಂಗಾಳ ತೀವ್ರ ಆರ್ಥಿಕ ಶೋಷಣೆಗೆ ಒಳಗಾಯಿತು. ಕಂಪನಿಯು ಕಂದಾಯದ ರೂಪದಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ, ತನ್ನ ಖಜಾನೆ ತುಂಬಿಸಿಕೊಂಡಿತು.

1767ರಲ್ಲಿ ರಾಬರ್ಟ್ ಕ್ಲೈವ್ ಇಂಗ್ಲೆಂಡಿಗೆ ಮರಳಿದನು. ಬಂಗಾಳದಲ್ಲಿ ದುರಾಡಳಿತ ನಡೆಯುತ್ತಲೆ ಇತ್ತು. ಇದೇ ವೇಳೆ ಭೀಕರ ಬರಗಾಲವೊಂದು ಕಾಲಿಟ್ಟಿತು. ಬಂಗಾಳದ ಸುಮಾರು ಮೂರನೇ ಒಂದು ಪಾಲು ಜನರು ಹಸಿವಿನಿಂದ ಅಸುನೀಗಿದರು! ಪರಿಸ್ಥಿತಿಯ ಲಾಭ ಪಡೆಯಲೆಂದೇ ಕಂಪನಿಯು ಮಾರುಕಟ್ಟೆಯಲ್ಲಿದ್ದ ಅಕ್ಕಿಯನ್ನೆಲ್ಲ ಖರೀದಿಸಿ, ಗರಿಷ್ಠ ಬೆಲೆಗೆ ಮಾರಿ, ಅಪಾರ ಲಾಭಗಳಿಸಿತು. ಇದು ಬ್ರಿಟಿಷರ ಆರ್ಥಿಕ ಶೋಷಣೆಯ ಮತ್ತೊಂದು ಮುಖವಾಗಿತ್ತು.

ರೆಗ್ಯುಲೇಟಿಂಗ್ ಆಕ್ಟ್ (1773)

ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಅನೈತಿಕ ಮಾರ್ಗದಿಂದ ಹಣವನ್ನು ಕೊಳ್ಳೆಹೊಡೆಯತೊಡಗಿದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ಸರಕಾರ ಕಂಪನಿಯ ಚಟುವಟಿಕೆಗಳನ್ನು ವ್ಯವಸ್ಥಿತಗೊಳಿಸಿ, ಅದನ್ನು  ಹತೋಟಿಯಲ್ಲಿಡಲು ನಿರ್ಧರಿಸಿತು. ಈ ನಿಟ್ಟಿನಲ್ಲಿ ಬ್ರಿಟಿಷ್ ಸಂಸತ್ತು `ರೆಗ್ಯುಲೇಟಿಂಗ್ ಆಕ್ಟ್’ ಎಂಬ ಕಾಯಿದೆಯನ್ನು ಜಾರಿಗೆ ತಂದಿತು. ಕಾಯಿದೆಯ ಪ್ರಕಾರ ವಾರನ್ ಹೇಸ್ಟಿಂಗ್ಸ್‍ನು ಪ್ರಥಮ ಗವರ್ನರ್ ಜನರಲ್ ಆಗಿ ನೇಮಿಸಲ್ಪಟ್ಟನು. ಅನಂತರ ಇಪ್ಪತ್ತಕ್ಕಿಂತಲೂ ಹೆಚ್ಚು ಮಂದಿ ಗವರ್ನರ್ ಜನರಲ್‍ಗಳು ಆಡಳಿತ ನಡೆಸಿದರು. ಈ ಅವಧಿಯಲ್ಲಿ ಬ್ರಿಟಿಷರು ಕಲ್ಕತ್ತವನ್ನು ತಮ್ಮ ಅಧಿಕಾರದ ಕೇಂದ್ರ ಸ್ಥಾನವನ್ನಾಗಿ ಪರಿವರ್ತಿಸಿಕೊಂಡು ಪ್ರಾಂತೀಯ ಸರಕಾರಗಳ ಕಾರ್ಯವೈಖರಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡರು.

ವಾರನ್ ಹೇಸ್ಟಿಂಗ್ಸ್

ರೆಗ್ಯುಲೇಟಿಂಗ್ ಕಾಯ್ದೆಯ ಲೋಪದೋಷಗಳನ್ನು ಸರಿಪಡಿಸಲು 1784ರಲ್ಲಿ ಬ್ರಿಟಿಷ್ ಸರಕಾರ ಪಿಟ್ಸ್ ಇಂಡಿಯ ಕಾಯ್ದೆಯನ್ನು ಜಾರಿಗೊಳಿಸಿತು.

• ಆಂಗ್ಲೋ-ಮೈಸೂರು ಯುದ್ಧಗಳು (1767-1799)

ಮಕ್ಕಳೇ, ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಬ್ರಿಟಿಷರ ವಿರುದ್ಧ ನಡೆಸಿದ ನಾಲ್ಕು ಯುದ್ಧಗಳನ್ನು ಕುರಿತು ನೀವು 6ನೇ ತರಗತಿಯಲ್ಲಿ ಕಲಿತಿದ್ದೀರಿ. ಈ ಯುದ್ಧಗಳ ಪರಿಣಾಮವಾಗಿ ಟಿಪ್ಪುವಿನ ಅಧೀನದಲ್ಲಿದ್ದ ಮೈಸೂರು ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡು ನಾಲ್ಕು ಭಾಗಗಳಾಗಿ ವಿಭಜನೆ ಮಾಡಿದರು. ಒಂದು ಭಾಗವನ್ನು ಬ್ರಿಟಿಷರು ಇಟ್ಟುಕೊಂಡರು. ಇನ್ನೊಂದು ಭಾಗವನ್ನು ನಿಜಾಮನಿಗೆ, ಮತ್ತೊಂದು ಭಾಗವನ್ನು ಮರಾಠರಿಗೆ, ಉಳಿದ ಭಾಗವನ್ನು ಮೈಸೂರು ಒಡೆಯರ್ ಮನೆತನಕ್ಕೆ ವಹಿಸಿಕೊಟ್ಟರು. ಇದರಿಂದ ದಕ್ಷಿಣ ಭಾರತದಲ್ಲಿ ಬ್ರಿಟಿಷರ ಶಕ್ತಿ ಕ್ರಮೇಣ ವೃದ್ಧಿಸಿತು.

• ಆಂಗ್ಲೋ-ಮರಾಠ ಯುದ್ಧಗಳು (1775-1818)

ಮೂರನೇ ಪಾಣಿಪತ್ ಕದನದಲ್ಲಿ ಪರಾಜಯಗೊಂಡ ಮರಾಠರು ಮತ್ತೆ ಚೇತರಿಸಿಕೊಂಡರು. ಆದರೆ ಅಲ್ಪಕಾಲದಲ್ಲೇ ಅವರಲ್ಲಿ ಅಂತಃಕಲಹಗಳು ಉಂಟಾದವು. ಇದರ ಲಾಭ ಪಡೆಯಲು ಇಂಗ್ಲಿಷರು ಹಲವು ರೀತಿಯ ಯುಕ್ತಿಗಳನ್ನು ಬಳಸಿದರು. ಜೊತೆಗೆ ಮರಾಠರೊಂದಿಗೆ ಮೂರು ಬಾರಿ ಯುದ್ಧ ಮಾಡಿದರು. ಇವುಗಳನ್ನು ಆಂಗ್ಲೋ ಮರಾಠ ಯುದ್ಧಗಳು ಎನ್ನುವರು. ಅಂತಿಮವಾಗಿ ಪೇಶ್ವೆ ಬ್ರಿಟಿಷರಿಗೆ ಶರಣಾದನು. ಈ ಯುದ್ಧಗಳಲ್ಲಿ ಮರಾಠರು ಸೋತು ಅವರ ಸಮಸ್ತ ಪ್ರದೇಶಗಳು ಇಂಗ್ಲಿಷರ ವಶವಾದವು. ಇಂಗ್ಲಿಷರು ಪೇಶ್ವೆಯ ಪಟ್ಟವನ್ನು ಕೂಡ ರದ್ದುಮಾಡಿದರು.

• ಆಂಗ್ಲೋ-ಸಿಖ್ ಯುದ್ಧಗಳು

18ನೇ ಶತಮಾನದ ಉತ್ತರಾರ್ಧದಲ್ಲಿ ಸಿಖ್ಖರಲ್ಲಿ ಅನೇಕ ಪಂಗಟಗಳಿದ್ದವು. ಇಂತಹ ಪಂಗಡವನ್ನು ‘ಮಿಸೆಲ್’ (misl)  ಎನ್ನುವರು. ರಣಜಿತ್ ಸಿಂಗ್ ಎಂಬ ಪರಾಕ್ರಮಿ ಯುವಕನು ಮಿಸೆಲ್ ವೊಂದರ ನಾಯಕನಾಗಿದ್ದನು. ಈತನು ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಲಾಹೋರಿನ (ಪಂಜಾಬ್) ರಾಜನಾದನು. ಸಿಖ್ಖರನ್ನು ಒಗ್ಗೂಡಿಸಿ ಪ್ರಬಲ ರಾಜಕೀಯ ಶಕ್ತಿಯಾಗಿ ಮಾರ್ಪಡಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಸಮಾರು ನಾಲ್ಕು ದಶಕಗಳ ಕಾಲ ಪಂಜಾಬ್ ರಾಜ್ಯವನ್ನಾಳಿದ ಈತನು ಆಧುನಿಕ ಭಾರತದ ಓರ್ವ ಸ್ಮರಣೀಯ ಮಹಾರಾಜನಾಗಿದ್ದಾನೆ.

ರಣಜಿತ್ ಸಿಂಗನ ಮರಣಾನಂತರ (1839) ರಾಜ್ಯದಲ್ಲಿ ರಾಜಕೀಯ ಗೊಂದ ತಲೆದೋರಿತು. ಇಂತಹ ಸಂದರ್ಭವನ್ನೇ ಬ್ರಿಟಿಷರು ಕಾಯುತ್ತಿದ್ದರು. ಬ್ರಿಟಿಷ್ ಮತ್ತು ಸಿಖ್ಖರ ನಡುವೆ ನಾಲ್ಕು ಯುದ್ಧಗಳು ನಡೆದವು. ಕೊನೆಗೆ ಸಿಖ್ಖರು ಸೋಲುವಂತಾಯಿತು. ಪಂಜಾಬ್ ರಾಜ್ಯ ಬ್ರಿಟಿಷರ ವಶವಾಯಿತು (1849).

ಅಫಘನ್ ರಾಜನು ರಣಜಿತ್ ಸಿಂಗನ ರಾಜಕೀಯ ಆಶ್ರಯ  ಪಡೆದಿದ್ದು  ಈ ಸಂದರ್ಭದಲ್ಲಿ ಕೊಹಿನೂರ್ ವಜ್ರವನ್ನು ರಣಜಿತ್ ಸಿಂಗನಿಗೆ ಉಡುಗೊರೆಯಾಗಿ ನೀಡಿದ್ದನು.

ಬ್ರಿಟಿಷರ ಕುಟಿಲ ನೀತಿಗಳು

• ಸಹಾಯಕ ಸೈನ್ಯ ಪದ್ಧತಿ

ಲಾರ್ಡ್ ವೆಲ್ಲೆಸ್ಲಿ (1799-1805) ಎಂಬ ಗವರ್ನರ್ ಜನರಲ್ ಬ್ರಿಟಿಷರ ಪರಮಾಧಿಕಾರವನ್ನು ಸ್ಥಾಪಿಸಲು ಉಪಾಯವೊಂದನ್ನು ಹೂಡಿದನು. ತಮ್ಮ ನೆರೆಯ ರಾಜರಿಂದ ಅಪಾಯ ಉಂಟಾಗದಂತೆ ಬ್ರಿಟಿಷರ ಸೇನಾ ಸಹಾಯ ಪಡೆಯಲು ಭಾರತದ ರಾಜರನ್ನು ಪ್ರೇರೇಪಿಸಿದನು. ಈ ನಿಟ್ಟಿನಲ್ಲಿ ಕೆಲವೊಮ್ಮೆ ಅವರನ್ನು ಬಲವಂತ ಕೂಡ ಮಾಡಿದನು. ಈ ಪದ್ಧತಿಯನ್ನು ಒಪ್ಪಿಕೊಂಡ ರಾಜರು ಇಂಗ್ಲಿಷ್ ಸೇನಾಪಡೆಯನ್ನು ತಮ್ಮ ರಾಜ್ಯದಲ್ಲಿಟ್ಟುಕೊಂಡು ಅದರ ಖರ್ಚು ವೆಚ್ಚವನ್ನು ನಗದು ರೂಪದಲ್ಲಿ ಬ್ರಿಟಿಷರಿಗೆ ನೀಡಬೇಕಿತ್ತು. ಇಲ್ಲವೆ, ರಾಜ್ಯದ ಭೂಭಾಗವೊಂದನ್ನು  ಬ್ರಿಟಿಷರಿಗೆ ಹಸ್ತಾಂತರಿಸಬೇಕಿತ್ತು. ಬ್ರಿಟಿಷರು ಈ ನೀತಿಯನ್ನು `ಸಹಾಯಕ ಸೈನ್ಯ ಪದ್ಧತಿ’ ಎಂದು ಕರೆದರು. ಇದನ್ನು ಒಪ್ಪಿದ ಭಾರತೀಯ ಸಂಸ್ಥಾನಗಳು ಬ್ರಿಟಿಷರ ಸೈನಿಕ ವೆಚ್ಚವನ್ನು ತಾವೇ ಭರಿಸಬೇಕಾಗಿತ್ತು.

ಸಹಾಯಕ ಸೈನ್ಯ ಪದ್ಧತಿಯ ಪರಿಣಾಮಗಳು

• ಸೈನಿಕ ವೆಚ್ಚದ ಅಗಾಧ ಹೊರೆಯು ಭಾರತದ ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿತು.

• ಬ್ರಿಟಿಷರು ಭಾರಿ ಭೂಪ್ರದೇಶಗಳನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ಈ ಪದ್ಧತಿಯನ್ನು ಒಪ್ಪಿಕೊಂಡ ರಾಜರು ಪರೋಕ್ಷವಾಗಿ ಬ್ರಿಟಿಷರ ಅಧೀನರಾದರು.

• ಈ ನೀತಿಗೆ ಒಳಪಟ್ಟ ರಾಜ್ಯಗಳು ತಮ್ಮ ಪರಮಾಧಿಕಾರವನ್ನೇ ಕಳೆದುಕೊಂಡವು.

• ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

`ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ’ಯು ಲಾರ್ಡ್ ಡಾಲ್‍ಹೌಸಿ ಲಾರ್ಡ್ ಡಾಲ್‍ಹೌಸಿ (1848-1856) ಎಂಬ ಗವರ್ನರ್ ಜನರಲ್ ಜಾರಿಗೆ ತಂದ ಒಂದು ವಿಲಕ್ಷಣ ನೀತಿಯಾಗಿತ್ತು. ಯಾವುದೇ ಭಾರತದ ರಾಜನಿಗೆ ಮಕ್ಕಳಿಲ್ಲದಿದ್ದರೆ ದತ್ತುಪುತ್ರನಿಗೆ ಪಟ್ಟವೇರುವ ಹಕ್ಕಿಲ್ಲವೆಂದು ಇವನು ಘೋಷಿಸಿದನು. ಇದರಂತೆ ಪುತ್ರ ಸಂತಾನವಿಲ್ಲದೆ ತೀರಿಕೊಂಡ ಅರಸರ ರಾಜ್ಯಗಳು ಬ್ರಿಟಿಷರ ವಶವಾದವು. ಈ ಕ್ರಮವು ಭಾರತದಲ್ಲಿ ಪ್ರಾಚೀನ ಕಾಲದಿಂದ ಆಚರಣೆಯಲ್ಲಿದ್ದ ದತ್ತು ಸ್ವೀಕಾರ ರೂಢಿಗೆ ವಿರುದ್ಧವಾಗಿತ್ತು. ಈ ಕುಟಿಲ ನೀತಿಯ ಪರಿಣಾಮವಾಗಿ ಔಧ್, ಸತಾರಾ, ನಾಗಪುರ ಮತ್ತು ಝಾನ್ಸಿ ಮುಂತಾದ ಹನ್ನೊಂದು ರಾಜ್ಯಗಳು ನೇರವಾಗಿ ಬ್ರಿಟಿಷರ ವಶವಾದುವು. ಒಟ್ಟಿನಲ್ಲಿ 1856ರಲ್ಲಿ ಡಾಲ್‍ಹೌಸಿಯು ತನ್ನ ದೇಶಕ್ಕೆ ಮರಳುವಾಗ ಭಾರತದ ಮೂರನೇ ಎರಡರಷ್ಟು ಭೂಪ್ರದೇಶವು ಬ್ರಿಟಿಷ್ ಆಳ್ವಿಕೆಗೊಳಪಟ್ಟಿತು.

ಸತಾರಾ

ನಾಗಪುರ

ಝಾನ್ಸಿ

ಭಾರತದಲ್ಲಿ ಬ್ರಿಟಿಷರ ವಿಜಯವು ಅವರ ರಾಜಕೀಯ ವಾಸ್ತವಪ್ರಜ್ಞೆ ಮತ್ತು ಸೇನಾಬಲದ ವಿಜಯವಾಗಿತ್ತು. ಇದಕ್ಕೆ ಸ್ಥಳೀಯ ಒಳಜಗಳಗಳು ಹಾಗೂ ಒಗ್ಗಟ್ಟಿನ ಕೊರತೆ ಪೂರಕವಾದವು. ಜನಹಿತಾಸಕ್ತಿಯು ತಮ್ಮ ಜವಾಬ್ದಾರಿ ಎಂದು ಬ್ರಿಟಿಷರು ಎಂದೂ ಭಾವಿಸಿದಂತಿರಲಿಲ್ಲ. ಸಂಪತ್ತಿನ ಗಳಿಕೆ ಮತ್ತು ಅಧೀಕಾರ ಚಲಾವಣೆಗಳೇ  ಅವರ ಗುರಿಯಾಗಿತ್ತು. ಇದರಿಂದ ರೋಸಿಹೋದ ಜನರು 1857ರಲ್ಲಿ ವ್ಯಾಪಕವಾಗಿ ದಂಗೆಯೆದ್ದರು. ಇದನ್ನು ಕೆಲವು ಲೇಖಕರು `ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದಿದ್ದಾರೆ.

ಮುಖ್ಯ ಇಸವಿಗಳು

1764 – ಬಕ್ಸಾರ್ ಕದನ

1765 – ದಿವಾನಿ ಹಕ್ಕಿನ ಪ್ರಾಪ್ತಿ

1799-1805 – ವೆಲ್ಲೆಸ್ಲಿಯ ಆಡಳಿತ – ಸಹಾಯಕ ಸೈನ್ಯ ಪದ್ಧತಿ

1848 – ಡಾಲ್‍ಹೌಸಿಯ ಆಡಳಿತ – ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

ವಿಡಿಯೋ ಪಾಠಗಳು

ಬ್ರಿಟಿಷ್‌ ಪ್ರಾಬಲ್ಯದ ಬೆಳವಣಿಗೆ | BRITISH PRABALYADA BELAVANIGE |7TH SOCIAL SCIENCE | KANNADA MEDIUM |

ಅಭ್ಯಾಸಗಳು

britishara prabalyada belavanige notes, class 7 social science notes , ಬ್ರಿಟಿಷರ ಪ್ರಾಬಲ್ಯದ ಬೆಳವಣಿಗೆ

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು – ಬಕ್ಸಾರ್ ಕದನ (1764)

बक्सर का युद्ध ( Battle of Buxar in Hindi 1764 ) Buxar ka Yudh
The Battle of plassey
ಬಕ್ಸಾರ್ ಕದನ ಕಾರಣ ಮತ್ತು ಪರಿಣಾಮಗಳು|Battle of Buxar 1764 | Buxar War in Kannada

ಆಂಗ್ಲೋ-ಮೈಸೂರು ಯುದ್ಧಗಳು (1767-1799)

First Anglo Mysore War in Hindi | Modern History of India
Second Anglo Mysore War in Hindi | Modern History of India
Third Anglo Mysore War in Hindi | Modern History of India

ಆಂಗ್ಲೋ-ಮರಾಠ ಯುದ್ಧಗಳು (1775-1818)

First Anglo Maratha War in Hindi | Treaty of Salbai UPSC | Treaty of Purandar | Treaty of Surat
Second Anglo Maratha War in Hindi | Treaty of Bassein 1802 | Modern History of India
Third Anglo Maratha War in Hindi | Modern History of India

ಆಂಗ್ಲೋ-ಸಿಖ್ ಯುದ್ಧಗಳು

First Anglo Sikh War in Hindi
Second Anglo Sikh War | Modern History of India

********