ಬೇಸಿಗೆ – ಪದ್ಯ ಭಾಗ
-ಬಿ.ಆರ್.ಲಕ್ಷ್ಮಣರಾವ್
ಪ್ರವೇಶ : ಮಾನವರಾದ ನಾವು ಪ್ರಕೃತಿಯಿಂದ ಕಲಿಯಬೇಕಾದದ್ದು ಅಪಾರ. ಪ್ರಕೃತಿಯ ಪ್ರತಿಯೊಂದು ವಸ್ತುವೂ ಪರಸ್ಪರ ಸಂಬಂಧವುಳ್ಳದ್ದಾಗಿರುತ್ತವೆ. ಅಂತೆಯೇ ಋತುಮಾನಗಳು ಕೂಡ ಅವು ಬದಲಾದಂತೆ ಹವಾಮಾನವು ಏರುಪೇರಾಗುತ್ತಿರುತ್ತದೆ. ಒಮ್ಮೆ ಪ್ರಖರವಾದ ಬಿಸಿಲು, ಮತ್ತೊಮ್ಮೆ ಗಡಗಡ ನಡುಗುವ ಚಳಿ, ಮಳೆ, ಗಾಳಿ-ಹೀಗೆ ಏನೇ ಆದರೂ ಯಾವುದೇ ಕೆಲಸಕಾರ್ಯಗಳು ನಿಲ್ಲುವುದಿಲ್ಲ. ಪ್ರಕೃತಿಯು ಸಮತೋಲನವನ್ನು ಕಾಯ್ದುಕೊಂಡು ತನ್ನ ಪಾಲಿನ ಕೆಲಸವನ್ನು ಸದಾ ನಿರ್ವಹಿಸುತ್ತ ಇರುತ್ತದೆ.
ಬಂದಿದೆ ಬೇಸಿಗೆ ರಜಾ
ಇದ್ದರೂ ಬಿಸಿಲಿನ ಸಜಾ
ಬನ್ನಿ ಆಡೋಣ,
ಸೂರ್ಯನ ಮಹಿಮೆಯ ಹಾಡೋಣ.
ಏಕೆ ರವಿಗಿಂತ ತಾಪ?
ಯಾರ ಮೇಲವನ ಕೋಪ?
ಎಂದು ಹಳಿಯಬೇಡಿ,
ಸೂರ್ಯನ ತಪ್ಪು ತಿಳಿಯಬೇಡಿ,
ಮೋಡ ಕೂಡಿಸಲು, ಇಳೆಗೆ ಮಳೆ ತರಲು
ದುಡಿಯುತಿಹನು, ಪಾಪ!
ಭೂಮಿಯ ಪೋಷಕ ಸೂರ್ಯ
ಭೂಮಿಗವನು ಅನಿವಾರ್ಯ
ಹೊಗಳಿಕೆ ಬೇಕಿಲ್ಲ,
ತೆಗಳಿದರೆ ಅವ ಕುಗ್ಗುವುದಿಲ್ಲ.
ಬೆಳಕ ನೀಡುವನು, ಬಿಸಿಯನೂಡುವನು
ಮರೆಯದೆ ಕರ್ತವ್ಯ.
ಇಂಥ ಬಿರು ಬಿಸಿಲಿನಲ್ಲಿ
ಮರಾ ಗಿಡಾ ಪೊದೆ ಬಳ್ಳಿ
ಕಂಗಾಲಾಗಿಲ್ಲ,
ನೋಡಿ ರಂಗಾಗಿವೆ ಎಲ್ಲ
ಚಿಗುರು ಹೂತೊಟ್ಟು, ಹಣ್ಣು ಮಿಡಿ ಬಿಟ್ಟು,
ಇವೆ ಸಂಭ್ರಮದಲ್ಲಿ.
ಸೂರ್ಯನಿಂದ ಕಲಿಯೋಣ.
ಪ್ರಕೃತಿಯಂತೆ ನಲಿಯೋಣ.
ಕಷ್ಟಗಳಿಗಂಜದೆ,
ನಮ್ಮ ಕರ್ತವ್ಯ ಮರೆಯದೆ,
ನಲಿಯುತ ಬಾಳಿ, ನಲಿವನು ಹಂಚಿ,
ಧನ್ಯತೆ ಗಳಿಸೋಣ.
ಕವಿ ಕೃತಿ ಪರಿಚಯ
ಬಿ.ಆರ್. ಲಕ್ಷ್ಮಣರಾವ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲ ಗ್ರಾಮದಲ್ಲಿ 09-09-1946ರಲ್ಲಿ ಜನಿಸಿದರು. ತಂದೆ ಬಿ.ಆರ್.ರಾಜಾರಾವ್, ತಾಯಿ ವೆಂಕಟಲಕ್ಷ್ಮಮ್ಮ. ಲಕ್ಷ್ಮಣರಾವ್ ನಿವೃತ್ತ ಉಪಾಧ್ಯಾಯರಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದಾರೆ. ಇವರು ‘ಗೋಪಿ ಮತ್ತು ಗಾಂಡಲೀನ, ಟುವಟಾರ, ಇವಳು ನದಿಯಲ್ಲ, ಸುಬ್ಬಾಭಟ್ಟರ ಮಗಳೇ, ಭಾರತ ಬಿಂದು ರಶ್ಮಿ, ಹನಿಗವಿತೆಗಳು, ವಿನೋದ ಕವಿತೆಗಳು, ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ಕತೆ, ಕಾದಂಬರಿ, ಅನುವಾದ, ಲೇಖನಸಂಕಲನಗಳನ್ನು ರಚಿಸಿದ್ದಾರೆ. ‘ನನಗ್ಯಾಕೋ ಡೌಟು’, ‘ಭಲೇ ಮಲ್ಲೇಶಿ’ ಎಂಬ ನಾಟಕಗಳನ್ನು ಬರೆದಿದ್ದಾರೆ. ಭಾವಗೀತೆಗಳ ಧ್ವನಿ ಸಾಂದ್ರಿಕೆಗಳು(ಸಿ.ಡಿ), ಜನಪ್ರಿಯ ದೂರದರ್ಶನ ಧಾರಾವಾಹಿ ಶೀರ್ಷಿಕೆ ಗೀತೆಗಳು ಹಾಗೂ ಜನಪ್ರಿಯ ಚಲನಚಿತ್ರಗೀತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
‘ಬೇಸಿಗೆ’ ಎಂಬ ಪದ್ಯವನ್ನು ‘ಸುಬ್ಬಾಭಟ್ಟರ ಮಗಳೇ’ ಎಂಬ ಭಾವಗೀತೆಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.
ಪದಗಳ ಅರ್ಥ
ಸಜಾ – ಶಿಕ್ಷೆ.
ಮಹಿಮೆ – ಹಿರಿಮೆ, ಮಹತ್ವ.
ರವಿ – ಭಾನು, ಸೂರ್ಯ, ನೇಸರು.
ತಾಪ – ಬಿಸಿ, ಶಾಖ.
ಹಳಿ – ದೂಷಿಸು, ನಿಂದಿಸು.
ಇಳೆ – ಭೂಮಿ, ಧರೆ.
ಪೋಷಕ – ಸಲಹುವಾತ, ಪಾಲಕ.
ಅನಿವಾರ್ಯ- ಅತ್ಯಗತ್ಯ.
ಹೊಗಳು – ಕೊಂಡಾಡು, ಬಣ್ಣಿಸು.
ತೆಗಳು – ಹೀಯಾಳಿಸು, ನಿಂದಿಸು.
ಮಿಡಿ – ಹೀಚು, ಕಸುಗಾಯಿ.
ಊಡು – ಉಣಿಸು, ತಿನ್ನಿಸು.
ಕರ್ತವ್ಯ – ಕೆಲಸ, ಜವಾಬ್ದಾರಿ.
ಬಿರು – ರಭಸ, ಬಿರುಸು.
ಸಂಭ್ರಮ – ಉತ್ಸಾಹ, ಸಡಗರ.
ಧನ್ಯತೆ – ಸಂತೃಪ್ತಿ.
ವಿಡಿಯೋ ಪಾಠಗಳು
https://www.youtube.com/watch?v=tCH4qAkn7IE
6th std | new syllabus 2017 | 1st language | kannada | 1st poem | lyrical video | besige | ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪ್ರಶ್ನೋತ್ತರಗಳು
ಯೋಜನೆ
ಸೂರ್ಯ, ಚಂದ್ರರ ಕುರಿತಾದ ಪದ್ಯಗಳನ್ನು ಸಂಗ್ರಹಿಸಿ ಬರೆಯಿರಿ (ಕನಿಷ್ಟ ಆರು ಇರಲಿ)
ಚಂದಿರ
ಗುಂಡು ಮೊಗದ ಚಂದಿರ
ನೀನು ಬಹಳ ಸುಂದರ
ಇರುಳಿನಲ್ಲಿ ಮಾತ್ರ ಬರುವೆ
ಹಗಲು ಏಕೆ ಬೇಸರ?
ಏನು ಪ್ರಶ್ನೆ ಮಾಡನೇನು?
ನಿನ್ನ ಗುರುವು ನೇಸರ
ಹೀಗೆ ಶಾಲೆ ಕದಿಯಬಹುದೆ?
ಕಲಿಯಬೇಕು ಅಕ್ಷರ .
ದೃಷ್ಟಿಯಿಟ್ಟು ದಿಟ್ಟಿಸಲು
ಕಪ್ಪು ಕಲೆಯು ನಿನ್ನಲಿ
ಅಮ್ಮನಿಗೆ ಹೇಳಲೇನು?
ಮೇಕಪ್ಪು ಮಾಡಲಿ .
ಮತ್ತೆ ಮತ್ತೆ ತುರುಕಿಹಳು
ಅಮ್ಮ ನನ್ನ ಬಾಯಲಿ
ನಿನ್ನ ತೋರಿ ತಿನಿಸುವಾಗ
ಹೇಗೆ ಬೇಡ ಅನ್ನಲಿ.
ಒಂದು ದಿನವು ತಪ್ಪದೆ
ಬೆಳದಿಂಗಳ ತೇರಲಿ
ಭೂಮಿಸುತ್ತ ಸುತ್ತುತಿರುವ
ನಿನ್ನ ಹರಕೆ ತೀರಲಿ
ಅಪ್ಪ ಗದರುತಿಹನು ನೋಡು?
ನಾನು ಹೋಗಿ ಮಲಗುವೆ.
ಕನಸಿನಲ್ಲೆ ಬಂದು ಬಿಡು!
ನಿನ್ನ ಜೊತೆಗೆ ಆಡುವೆ.
ಮನು ಪುರ
ಭುವಿಯ ಜೀವ
ಚಿಲಿಪಿಲಿಯ ಸಂಗೀತ
ಸಡಗರಡದಿ ಹಾಡುತ
ಹಕ್ಕಿಗಳು ಮುಗಿಲನ್ನೆ ನೋಡಿವೆ
ಬಗೆಬಗೆಯ ರಂಗೋಲಿ
ಬಿಡಿಸುತಾ ಇಬ್ಬನಿ
ಜಗದೊಡೆಯ ನಿನ್ನನ್ನೆ ಕಾದಿವೆ
ನಿನ ಬರುವಿಗಾಗಿ
ಚಡಪಡಿಸಿ ಕಾಯಲು
ತಿರುಗಿಹಳು ಈ ಧರೆ
ನಿನಗೆಂದೆ ತಾನೆ
ಒಲವಿರಿಸಿ ಮೀಸಲು
ಅರಳಿತೂ ತಾವರೆ !
ಇರುಳಿಂದ ನುಸುಳಿ
ಮೂಡಣದಿ ಉದಿಸಿ
ಬೆಳಗುತಾ ಈ ಜಗವ
ಕತ್ತಲೆಗೆ ಕೊರಗಿ
ಸೊರಗಿದ್ದ ಇಳೆಗೆ
ಮುಂಜಾನೆ ತರುವೆ ಜೀವ
ಹಗಲೆಲ್ಲ ಉರಿದು
ದಣಿವಾಯ್ತೆ ನಿನಗೆ
ಕೊಡಲೇನು ನೀರು?
ಸಂಜೆಯಲಿ ಕೆಂಪಾಯ್ತು
ಮುಗಿಲಿನಾ ಕೆನ್ನೆ
ಚಿವುಟಿದ್ದು ಯಾರು?
ಮುಸ್ಸಂಜೆ ಪಡುವಣದಿ
ಮುಳುಗಿದಾ ಮೇಲೆ
ಹೋಗುವೆ ನೀ ಎಲ್ಲಿಗೆ?
ಹೇಳಿಬಿಡು ಮೆಲ್ಲಗೆ!
ಬರುವೆ ನಾ ಅಲ್ಲಿಗೆ.
ಹುಟ್ಟು ಸಾವಿರದೆ
ದಿನವು ತರುವೆಯಾ
ಈ ಭುವಿಗೆ ಬೆಳಕು
ನಿನ್ನಂತೆ ನಾವು
ಮರಳಿ ಬಾರೆವು
ಒಮ್ಮೆ ಮುಗಿದರೆ ಬದುಕು.
ಮನು ಪುರ
ಸೂರ್ಯ, ಚಂದ್ರ, ಬಾವುಟ, ರಾಷ್ಟ್ರಲಾಂಛನ, ರಾಷ್ಟ್ರಪಕ್ಷಿ, ರಾಷ್ಟ್ರಪ್ರಾಣಿ, ರಾಷ್ಟ್ರಪುಷ್ಪಇವುಗಳ ಚಿತ್ರ ಬರೆದು ಬಣ್ಣ ತುಂಬಿರಿ.
ಶುಭ ನುಡಿ
ಕರ್ತವ್ಯಕ್ಕೆ ಮಿಗಿಲಾದುದು ಯಾವುದೂ ಇಲ್ಲ.
ಕಾಯಕವೇ ಕೈಲಾಸ.
ನಾವು ನಮ್ಮ ಕಾಲ ಮೇಲೆ ನಿಲ್ಲೋಣ.