ಬಿಡುಗಡೆಯ ಹಾಡು – ಪದ್ಯ ಭಾಗ-6
ಮುದೇನೂರು ಸಂಗಣ್ಣ-
ಪ್ರವೇಶ : ‘ಸ್ವಾತಂತ್ರ್ಯ’ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಸ್ವಾತಂತ್ರ್ಯವಿಲ್ಲದ ಬದುಕು ನರಕಕ್ಕೆ ಸಮಾನವಾದದ್ದು. ಇದು ಕೇವಲ ಮನುಕುಲಕ್ಕೆ ಮಾತ್ರ ಸೀಮಿತವಾದುದ್ದಲ್ಲ. ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತದೆ. ‘ಪಂಜರದ ಪಕ್ಷಿ’ ಕೇವಲ ಸಾಂಕೇತಿಕ ರೂಪಕವಾಗಿದ್ದು, ಇದು ಸ್ವಾತಂತ್ರ್ಯವಿಹೀನರ ಬದುಕಿನ ಸಂಕೇತವಾಗಿದೆ. ‘ಕಡಲುಗಳ ರಾಣಿ’ ಎನಿಸಿದ ಇಂಗ್ಲೆಂಡ್ ಭಾರತಕ್ಕೆ ವ್ಯಾಪಾರಕ್ಕಾಗಿ ಆಗಮಿಸಿ ನಮ್ಮ ದೇಶವನ್ನು ತಮ್ಮ ವಶಕ್ಕೆ ಪಡೆದು ಭಾರತೀಯರನ್ನು ಪಂಜರದ ಹಕ್ಕಿಯನ್ನಾಗಿಸಿ ಸ್ವಾತಂತ್ರ್ಯ ಹೀನರನ್ನಾಗಿಸಿದ್ದು ಒಂದು ಇತಿಹಾಸ. ಆನಂತರ ಭಾರತೀಯರು ಬ್ರಿಟಿಷರನ್ನು ತೊಲಗಿಸಲು ನಡೆಸಿದ ಸ್ವಾತಂತ್ರ್ಯ ಸಂಗ್ರಾಮವನ್ನು ಕವಿ ಪ್ರಾಕೃತಿಕ ಸನ್ನಿವೇಶಗಳೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಅಮೋಘವಾದ್ದು. ಭಾರತೀಯರ ಐಕ್ಯತೆಯ ಮಂತ್ರದಿಂದ ಮಾತ್ರ ನಾವು ಸ್ವಾತಂತ್ರ್ಯಗಳಿಸಲು ಸಾಧ್ಯವಾಯಿತೆಂಬುದನ್ನು ‘ಬಿಡುಗಡೆಯ ಒಕ್ಕೊರಲ ಹಾಡು’ ಎಂಬ ವಾಕ್ಯದೊಂದಿಗೆ ಧ್ವನಿಪೂರ್ಣಗೊಳಿಸಿದ್ದಾರೆ.
ಹಂಗಿನರಮನೆಯ ಮುಳ್ಳಿನೀ ಪಂಜರದಲ್ಲಿ
ರೆಕ್ಕೆಗಳ ಬಿಗಿ ಹಿಡಿದು ನರಳುತಿದೆ ಹಕ್ಕಿ
ಕದ ಮುರಿದು ಹೊರಬಂದು ಬಾನಾಡಿಯಾಗುತ್ತ
ವಿಹರಿಸಲಿ, ಹರ್ಷಿಸಲಿ ಹಿಗ್ಗಿನೊಳು ಸೊಕ್ಕಿ
ಮಡುಗಟ್ಟಿ ನಿಲ್ಲಿಸಿದ ನೀರು ತಾ ಕೊಳೆಗೊಂಡು
ಚಡಪಡಿಸುತಿದೆ ಮುನ್ನಡೆವ ಹಾದಿ ಹುಡುಕಿ
ಹಸಿದ ನೆಲವನು ತಣಿಸಿ ಹಸಿರು ವಸನವನುಡಿಸಿ
ಅಡೆತಡೆಯ ಗೋಡೆಗಳು ಕೆಡಹಲೈ ದುಡುಕಿ
ಸುತ್ತಿಟ್ಟು ಮೃಗರಾಜ ಹತ್ತಡಿಯ ಹದ್ದಿನೊಳು
ಗೊಣಗುತಿಹ – “ಇನ್ನು ಈ ಬಂಧನ ಸಾಕು”
ಕನಲಿ ಕೆಂಗಿಡಿಯುಗುಳಿ ಪಂಜರಗಳನೆತ್ತುತಿಹ-
ಸೆರೆಯಿಂದ ನಾ ಜಿಗಿದು ಸದರೇರಬೇಕು”
ರವಿಕಿರಣಗಳ ಸೆರೆಯೊಳಡಗಿಸಿಹ ಕಾರಿರುಳೆ
ಹೊರಗೆ ಬಿಡು, ದೂರ ಸರಿ ಹರಡಲೀ ಬೆಳಕು;
ತೊಳೆದು ಹೋಗಲಿ ಸಕಲ ಮೈ ಮನದ ಕೊಳಕುಗಳು|
ಒಳ – ಹೊರಗು ತಿಳಿನೀರ ಮಳೆ ಸುರಿಯಬೇಕು
ಪ್ರಾಣ ಪಣಕಿಟ್ಟಿಹೆವು – ಸಿಡಿಲ ಮರಿಗಳು ನಾವು
ಪ್ರಳಯ ರುದ್ರರೆ ಹೌದು – ಭಾರತಿಯ ಆಣೆ.
ಇನ್ನು ನಿನಗುಳಿಗಾಲವಿಲ್ಲ – ನೀ ತೊಲಗು
ಇನ್ನೆಲ್ಲ ನೀನೇಳು ಕಡಲುಗಳ ರಾಣಿ.
ಜಾತಿಮತ ಪಂಥಗಳ ಹುಟ್ಟುರುಹಿ ಮನುಜಮತ
ಮೆರೆಸುವೆವು ಮೂರು ಬಣ್ಣದ ಗುಡಿಯ ಹಿಡಿದು,
ಸರ್ವರಿಗು ಸಮನಾವು, ಮನದುಂಬಿ ದನಿಯೆತ್ತಿ
ಹಾಡುವೆವು ಬಿಡುಗಡೆಯ ಒಕ್ಕೊರಲ ಹಾಡು.
ಪದ್ಯದ ಮಾದರಿ ಗಾಯನ
ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಕೃತಿಕಾರರ ಪರಿಚಯ
ಮುದೇನೂರು ಸಂಗಣ್ಣ : ಸಂಗಣ್ಣನವರು ಬಳ್ಳಾರಿ ಜಿಲ್ಲೆಗೆ ಸೇರಿದ ಹರಪ್ಪನಹಳ್ಳಿ ತಾಲ್ಲೂಕಿನ ಚಿಗಟೇರಿಯಲ್ಲಿ ದೊಡ್ಡವ್ಯಾಪಾರಿ ಹಾಗೂ ಜಮೀನ್ದಾರಿ ಕುಟುಂಬದಲ್ಲಿ 17 ಮಾರ್ಚ್ 1927ರಲ್ಲಿ ಜನಿಸಿದರು. ಬಾಲ್ಯದಿಂದಲೂ ಇವರಿಗೆ ಸಂಗೀತ ನಾಟಕದಲ್ಲಿ ಬಹಳ ಆಸಕ್ತಿ. ಹೀಗಾಗಿ ಇವರಿಗೆ ಶಿವರಾಮಕಾರಂತ, ಕೆ.ವಿ. ಸುಬ್ಬಣ್ಣನವರ ಜೊತೆ ಗೆಳೆÀತನವಿತ್ತು. ವ್ಯವಸಾಯ ಕೃಷಿಕರಾಗಿದ್ದರೂ ಸಹ ಸಾಹಿತ್ಯ ಕೃಷಿಮಾಡಿದ್ದಾರೆ. ಇವರ ಪ್ರಮುಖ ಕೃತಿಗಳುನವಿಲು ಕುಣಿದಾವ, ಬಾಳಬಿಕ್ಷುಕ, ಚಿತ್ರಪಟ ರಾಮಾಯಣ ಮೊದಲಾದ ನಾಟಕಗಳು. ಜನಪದ ಮುಕ್ತಕಗಳು, ಆ ಅಜ್ಜ ಈ ಮೊಮ್ಮಗ, ಗೊಂದಲಿಗ ದೇವೇಂದ್ರಪ್ಪನ ಹಾಡುಗಳು, ಚಿಗಟೇರಿ ಪದಕೋಶ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರಕಿವೆ.
ಪದಗಳ ಅರ್ಥ
ಹಂಗು – ಋಣ, ಆಶ್ರಯ;
ಪಂಜರ – ಪಕ್ಷಿಗಳ ಬೋನು;
ಬಾನಾಡಿ – ಪಕ್ಷಿ;
ವಿಹರಿಸು – ಸಂಚರಿಸು;
ಹರ್ಷ – ಹಿಗ್ಗು, ಸಂತೋಷ;
ಸೊಕ್ಕಿ – ಗರ್ವ, ಜಂಭ;
ಕೊಳೆಗೊಂಡು – ಮಾಲಿನ್ಯಗೊಂಡು, ತೃಪ್ತಿಗೊಂಡು;
ತಣಿಸು – ತಂಪಾಗಿಸು, ತೃಪ್ತಿಗೊಳಿಸು;
ವಸನ – ವಸ್ತ್ರ, ಬಟ್ಟೆ;
ಹದ್ದು – ಎಲ್ಲೆ, ಗಡಿ;
ಕನಲು – ಕೋಪಗೊಳ್ಳು, ಸಿಟ್ಟಾಗು;
ಕೆಂಗಿಡಿ – ಉರಿಬೆಂಕಿ, ಕೆಂಪಾದ ಬೆಂಕಿ;
ಸದರೇರು – ಅಂಗಳ ಸೇರು, ಬಂಧಮುಕ್ತವಾಗು;
ಸೆರೆ – ಬಂಧನ;
ಅಡಗು – ಕಾಣದಂತಾಗು;
ಕಾರಿರುಳು– ದಟ್ಟವಾದ ಕತ್ತಲೆ ;
ಪಣ– ಒತ್ತೆಇಡು;
ತೊಲಗು– ಬಿಟ್ಟುಹೋಗು, ಹೊರಟುಹೋಗು;
ಗುಡಿ – ಬಾವುಟ, ಕೇತನ;
ಒಕ್ಕೊರಲು – ಒಗ್ಗಟ್ಟು, ಒಂದೇ ಧ್ವನಿಯಾಗು.
ಸಂವೇದ ವಿಡಿಯೋ ಪಾಠಗಳು
ಅಭ್ಯಾಸಗಳು
ಚೆನ್ನುಡಿ
‘ಬಂದ ಸುಖವ ಬಿಡಬೇಡ, ಬಾರದುದ ಬೇಕೆಂದು ಬಯಸಬೇಡ’ -ರತ್ನಾಕರವರ್ಣಿ (‘ಭರತೇಶ ವೈಭವ’ ಕೃತಿಯ ಕವಿಯ ಕಾಲ ಸುಮಾರು 1500)